ಸಹವಾಸ ಮಾಡಿ ಹಾಳಾಗುವುದು ತಪ್ಪು
ಈಗಿನ ಕಾಲದಲ್ಲಿ ಜನರಿಗೆ ಜನರೇಶನ್ ನಿಂದಲೇ ಬಂದ ಸ್ವತ್ತು ಬುದ್ಧಿಮತ್ತೆ. ವಿಜ್ಞಾನ, ತಂತ್ರಜ್ಞಾನಗಳಲ್ಲಿ ಬಹಳ ಮುಂದುವರೆದಿರುವ ನಮಗೆ ಯಾವುದು ಸರಿ, ಯಾವುದು ತಪ್ಪೆಂಬ ಸಣ್ಣ ಬುದ್ಧಿಮಾತನ್ನು ಹಿರಿಯರು, ತಿಳಿದವರು, ಗುರುಗಳೇ ಹೇಳಿಕೊಡಬೇಕೆಂದಿಲ್ಲ. ಸರ್ವ ಮನಗಳೂ ಅರಿತಿವೆ. ಹಾಗಾಗಿ ನಮ್ಮ ಬದುಕು ಹೇಗಿರಬೇಕೆಂದು ರೂಪಿಸಿಕೊಳ್ಳುವವರು ನಾವೇ.
ಕೂಡು ಕುಟುಂಬವಿದ್ದಾಗ ಮನೆಯ ಹಿರಿಯರು ಸಕಲ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ಆಗ ಕಿರಿಯರಿಗೆ ಅನುಭವ ಇಪರಲಿಲ್ಲ, ಹಿರಿಯರ ಮಾರ್ಗದರ್ಶನ ಬೇಕಿತ್ತು, ಅದರ ಅನಿವಾರ್ಯತೆಯೂ ಇತ್ತು. ಆದರೆ ಇಂದು ಬಹುತೇಕ ಹಳ್ಳಿ, ಪಟ್ಟಣ, ನಗರಗಳಲ್ಲಿ ಆಸ್ತಿಯ ಹಂಚಿಕೆಯಾಗಿ, ಕೂಡು ಕುಟುಂಬಗಳು ಕಾಣೆಯಾಗಿವೆ. ಈಗೇನಿದ್ದರೂ ನಾನೂ ನನ್ನ ಹೆಂಡತಿ, ಒಂದು ತಪ್ಪಿದರೆ ಎರಡು ಮಕ್ಕಳು. ಕುಟುಂಬದ ಪ್ರತಿಯೊಬ್ಬರಿಗೂ ಅವರದೇ ಜವಾಬ್ದಾರಿಗಳೇ. ನಿಭಾಯಿಸಲೇ ಬೇಕಿರುವ ಕಾರಣ ಯಾರಿಗೆ ಯಾರೂ ಹೇಳಲು ಸಮಯವೂ ಇಲ್ಲ, ತಾಳ್ಮೆಯೂ ಇಲ್ಲ.
ಹೀಗಿರುವಾಗ ತಿಳುವಳಿಕೆ ಪಡೆಯಲು ಇಂಟರ್ನೆಟ್, ಮೊಬೈಲ್, ಕಂಪ್ಯೂಟರ್ ನ ಬಳಕೆ ಮಕ್ಕಳಿಗೇ ತಿಳಿದಿದೆ. ಯಾವುದೇ ವಿಷಯದ ಬಗೆಗೂ ಪೂರ್ಣ ಜ್ಞಾನವನ್ನು ಪಡೆಯಬಹುದಾದ ಅವಕಾಶವಿದೆ. ಹಾಗಿರುವಾಗ "ಎಂಥವರ ಸ್ನೇಹ ಮಾಡಿದರೆ ನಮಗೆ ಒಳಿತು?" ಎಂಬ ಸಣ್ಣ ಆಲೋಚನೆ ಮಾಡಲಾಗದೇ?
"ಮೀನು ಮಾರುವವಳ ಜೊತೆ ಗೆಳೆತನ ಮಾಡುವುದಕ್ಕಿಂತ ಗಂಧ ಮಾರುವವಳ ಜೊತೆ ಜಗಳವಾಡುವುದು ಲೇಸು" ಎಂಬ ಗಾದೆ ನಮಗೆ ಬದುಕಿನ ದಾರಿಯಲ್ಲಿ ಎಂಥವರ ಜೊತೆ ಗೆಳೆತನ ಮಾಡಬೇಕೆಂಬುದನ್ನು ಸೂಚಿಸುತ್ತದೆ. "ಅಲ್ಪರ ಸಂಗ ಅಭಿಮಾನ ಭಂಗ" ಎಂಬ ಮಾತಿನಂತೆ ಸರಿಯಾದವರ ಸಂಗ ಮಾಡಬೇಕಾದುದು ಕರ್ತವ್ಯವಲ್ಲವೇ?ಹಾಗಾಗಿ ಕೆಟ್ಟವರ ಸಹವಾಸ ಮಾಡಿ ಹಾಳಾಗುವವರದ್ದೇ ತಪ್ಪು.
ತಾನು ಸಹವಾಸ ಮಾಡಿದವನು ಕೆಟ್ಟವನೆಂದು ತಿಳಿಯಲು ಬಹಳ ಕಾಲ ಬೇಕಾಗಿಲ್ಲ, ತಕ್ಷಣವೇ ತನ್ನ ಬುದ್ಧಿಯನ್ನು ಹರಿತಗೊಳಿಸಿ ಅವರಿಂದ ಪಾರಾಗುವವನೇ ಜಾಣ. ಸಿಕ್ಕಿಹಾಕಿಕೊಂಡವ ಜೀವನವಿಡೀ ಕಷ್ಟಪಡುತ್ತಾ ಕೊರಗಬೇಕಲ್ಲವೇ?
ಸಹವಾಸ ಮಾಡಿಸಿ ಹಾಳು ಮಾಡುವವರು ಅನೇಕರಿರಬಹುದು. ಆದರೆ ಹಾಳಾಗುವವರು ಬುದ್ಧಿಗೇಡಿಗಳಾಗಬಾರದು ತಾನೇ? ನನ್ನ ಬದುಕು ನನ್ನದು, ಅದನ್ನು ಬೇರೆಯವರ ಕೈಗೆ ನಾನೇಕೆ ಕೊಡಬೇಕು? ಹೆಣ್ಣಾಗಲಿ, ಗಂಡಾಗಲಿ ತನ್ನತನವನ್ನುಳಿಸಿಕೊಂಡೆ ಬಾಳಬೇಕು.ತನ್ನ ಬದುಕಿನ ಪರಿಕಲ್ಪನೆ ತನಗಿದ್ದ ಮೇಲೆ ಬೇರೆಯವರ ಕೆಟ್ಟ ಸಹವಾಸ ಮಾಡಬಾರದು ತಾನೇ?
ಒಟ್ಟಿನಲ್ಲಿ ಕೆಟ್ಟವರ ಸಹವಾಸ ಮಾಡುವುದೇ ತಪ್ಪು. ಅದರಲ್ಲಿ ಹಾಳಾಗುವುದು ಮತ್ತೂ ತಪ್ಪು. ಅವರವರ ಬದುಕಿಗೆ ಅವರವರೇ ಜವಾಬ್ದಾರಿ. ನೀವೇನಂತೀರಿ?
@ಪ್ರೇಮ್@
21.12.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ