ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -10
ಶ್ರಾವಣ ತಿಂಗಳು ಬಂತು. ಹಬ್ಬಗಳ ಸರಮಾಲೆಯೂ ಬಂತು. ಸಾಲು ಸಾಲು ಹಬ್ಬಗಳು! ನಾಗರ ಪಂಚಮಿಯಿಂದ ಪ್ರಾರಂಭವಾದರೆ ಚೌತಿ, ರಕ್ಷಾಬಂಧನ, ಋಗುಪಕರ್ಮ ಹೀಗೆ ಹಬ್ಬಗಳು ನಮಗಾಗಿಯೇ ಬರುತ್ತವೆ ಎಂದು ಸಂತಸವಾಗುತ್ತವೆ. ಇದು ಸಂಬಂಧಗಳನ್ನು ಒಂದಾಗಿಸುತ್ತದೆ. ಎಲ್ಲರೊಡನೆ ಬೆರೆಯುವಂತೆ ಮಾಡುತ್ತದೆ. ಭಕ್ತಿ ಹೆಚ್ಚಾಗುತ್ತದೆ. ಹೀಗೆ ಮನಗಳೂ ಒಂದಾಗಿ ಜೀವನ ಬೆಳಗುತ್ತದೆ. ಹೀಗೆ ಹಿರಿಯರು ಜೀವನವನ್ನು ಉತ್ತಮಗೊಳಿಸಲು ಹಲವಾರು ಹಬ್ಬಗಳನ್ನು ಆಚರಿಸಿಕೊಂಡು ಬಂದು ಇಂದಿನ ತಲೆಮಾರಿಗೆ ಇಟ್ಟಿದ್ದಾರೆ. ತುಳುನಾಡ ಮಣ್ಣನ್ನು ಸರ್ಪಗಳು ಫಲವತ್ತು ಮಾಡಿಸಿದ್ದಕ್ಕಾಗಿ, ಉಳಿದೆಡೆ ಮಹಿಳೆಯರು ಹುತ್ತಕ್ಕೆ ಹಾಲೆರೆದು ನಾಗರ ಪಂಚಮಿ ಆಚರಿಸುವರು. ಸಿರಿ ತರುವ ಲಕ್ಷ್ಮಿಯನ್ನು ಮನೆಯಲ್ಲಿ ಪೂಜಿಸಿ, ಸುಮಂಗಲಿಯರಿಗೆ ಅರಶಿನ-ಕುಂಕುಮ ಕೊಟ್ಟು ಆಚರಿಸುವ ಹಬ್ಬ. ರಕ್ಷಾಬಂಧನ ಅಣ್ಣ-ತಂಗಿಯರ ಸುಮಧುರ ಬಂಧನದ ಸಂಕೇತ.ನೋವು ನಲಿವಿನಲ್ಲಿ ಜೊತೆಯಲ್ಲಿದ್ದು ತನಗೆ ರಕ್ಷಣೆ ನೀಡಲು ಅಭಯ ಕೊಡುವಂತೆ ಅಣ್ಣನಲ್ಲಿ ಬೇಡಿ,ಸಂಬಂಧವನ್ನು ಗಟ್ಟಿಗೊಳಿಸುವ, ರಕ್ಷಾಬಂಧನದ ಮೂಲಕ ಅದನ್ನು ರಕ್ಷಿಸುವ ಹಬ್ಬ. ತದನಂತರ ಈ ವರ್ಷದ ತ್ಯಾಗ ಬಲಿದಾನದ ಸಾಂಕೇತಿಕ ಹಬ್ಬ ಬಕ್ರೀದ್ ಕೂಡಾ ಈ ಶ್ರಾವಣ ಮಾಸದಲ್ಲೇ ಬಂದಿದೆ!
ಗೌರಿ-ಗಣೇಶ ಹಬ್ಬ ಜಾತಿ ಬೇಧ ಮರೆತು ಊರಿಡೀ ಆಚರಿಸುವ ಹಬ್ಬ! ಗಂಗೆ-ಗೌರಿ-ಗಣೇಶನನ್ನು ಪೂಜಿಸುವ ಹಬ್ಬ. ಗೌರಿ ಹಬ್ಬವೂ ಮಹಿಳೆಯರಿಗೆ,ಮನೆಮಗಳಿಗೆ ಮೀಸಲು. ಮಗಳನ್ನು ತವರಿಗೆ ಕರೆದು ಉಡಿ ತುಂಬುವ ಕೆಲಸ ಈ ಹಬ್ಬದಲ್ಲಾಗುತ್ತದೆ!
ಆಷಾಡದಲ್ಲಿ ಹಾಗೇ ನಿಲ್ಲಿಸಿದ್ದ ಕಾರ್ಯಕ್ರಮಗಳೆಲ್ಲ ಶ್ರಾವಣದಲ್ಲಿ ಆರಂಭ. ಮದುವೆ,ಸೀಮಂತ, ಮಗುವಿನ ನಾಮಕರಣ, ನಿಶ್ಚಿತಾರ್ಥ ಹೀಗೆ ಕಾರ್ಯಕ್ರಮಗಳ ಸರಮಾಲೆ! ದೇಶಕ್ಕೂ ಸಡಗರ, ಸ್ವಾತಂತ್ರ್ಯ ದಿನಾಚರಣೆಯೂ ಶ್ರಾವಣದಲ್ಲೆ ಬರುತ್ತದೆ!
ಶ್ರಾವಣ ಸೋಮವಾರ, ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ ಹೀಗೆ ಪ್ರತಿದಿನವೂ ವಿಶೇಷವೇ.
ಈ ವರ್ಷ ಮಳೆ ಎಲ್ಲವನ್ನೂ ನುಂಗಿ ಹಾಕಿದೆ. ಕೇರಳ, ಕೊಡಗು ಮುಳುಗಿವೆ. ಆದರೂ ಕೇರಳದ ಜನ ತಾವಿರುವ ಕ್ಯಾಂಪ್ ಗಳಲ್ಲೆ ಓಣಂ ಆಚರಿಸಿದ್ದನ್ನು ಮೀಡಿಯಾಗಳಲ್ಲಿ ನೋಡಿದ್ದೇವಲ್ಲವೇ.. ಅದೇ ಶ್ರಾವಣದ ಮಹತ್ವ!
ಏನೇ ಇರಲಿ ತನ್ನ ಕೈಲಾದ ಸಹಾಯ ಮಾಡುತ್ತಾ ಯಾರಿಗೂ ಕೆಟ್ಟದು ಮಾಡದೆ, ಕೆಟ್ಟದನ್ನು ಬಯಸದೆ ಚೆನ್ನಾಗಿರಿ ಎಂಬುದೇ ಎಲ್ಲಾ ಜಾತಿ ಧರ್ಮಗಳ, ಎಲ್ಲಾ ಹಬ್ಬಗಳ ಸಂಕೇತ. ನಮ್ಮ ಹಬ್ಬಗಳ ಆಚರಣೆ ಇತರರಿಗೆ ಭಂಗ ತರದೆ ಚೆನ್ನಾಗಿರಲಿ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ