ನನ್ನ ಮಾತೃಭೂಮಿಗೊಂದು ಪತ್ರ
ಪ್ರೀತಿಯ ಅಮ್ಮಾ,
ಯಾರೆಂದೇ ಗೊತ್ತಿರದ ನನ್ನ ಭಾರತೀಯಳೆಂದು ಗುರುತಿಸುವಂತೆ ಮಾಡಿದ್ದು ನೀನು. ನಿನ್ನ ಮಡಿಲಲ್ಲಿ ನನ್ನ ಸುತ್ತಿ ಬೆಳೆಸಿ,ಹರಸಿ,ಪೋಷಿಸುತ್ತಿರುವುದು ನೀನು. ನಿನ್ನ ಹೊರತು ನಾ ಯಾರೊಡನೆ ಬಾಳಲಿ.. ಪ್ರಪಂಚದ ಯಾವ ಮೂಲೆಗೆ ನಾ ಹೋದರೂ ನನ್ನನ್ನು ನಿನ್ನ ಮಗುವೆಂದೇ ಗುರುತಿಸುವರು! ನನ್ನುಸಿರಿಗೆ, ನನ್ನ ಹೆಸರಿಗೆ ನೀನೇ ಮಾತೆ, ಅನ್ನದಾತೆ!
ನಿನ್ನ ನೆಲದ ಮೇಲೆ ಓಡಾಡಿದ ನನ್ನ ಪಾದಗಳೆ ಧನ್ಯ, ನಿನ್ನೊಡಲಲಿ ನಲಿದಾಡಿದ ನನ್ನ ಬದುಕೇ ಪಾವನ. ನನ್ನ ಲಾಲಿ ಹಾಡಿ, ತಿನ್ನಿಸಿ, ಪಾಲಿಸಿ, ಪೋಷಿಸಿದ ನಿನ್ನೊಲವೇ ಮಾನ್ಯ, ತಾಯಿ ಭಾರತಿ ನನ್ನುಸಿರ ಸಿರಿ ನೀನು, ನಿನ್ನೊಡಲ ಮರಿ ನಾನು, ರಕ್ಷಿಸೆನ್ನ ಅನವರತ ನಿನ್ನೊಡಲ ಬಳ್ಳಿ ನಾ, ನಿನ್ನೊಡಲಲಿಟ್ಟು ಪೊರೆವೆಯೋ, ದೂಡಿ ಘರ್ಜಿಸಿ ಬೆದರಿಸುವೆಯೋ ನಾನರಿಯೆ, ನಿನ್ನ ಮೇಲೆ ಕಸ ಮುಸುರೆ ಬಿಸುಟರೂ,ನೀನೆನ್ನ ಊಟ, ತಿಂಡಿ ಮನೆ,ಬಟ್ಟೆಯೊಂದಿಗೆ ಶಾಂತಿ, ಪ್ರೀತಿ,ನೀತಿ,ಭಕ್ತಿಯನ್ನು ನನಗೆ ನೀಡಿ ಬೆಳೆಸುತಿಹ ಮಾತೆ, ನಿನಗೆ ಹೇಗೆ ಧನ್ಯಳಾಗಿರಲಿ ನಾ?
ಅಮ್ಮಾ, ನಿನ್ನ ಮಕ್ಕಳು ನಿನ್ನ ಕರುಳನ್ನೆ ಬಗೆಯುತಿಹರು, ತಾವೂ ವಿಷವುಂಡು ವಿಷಮನಸ್ಕರಾಗಿ ಬೆಳೆಯುತ್ತಾ ನಿನಗೂ ವಿಷವುಣಿಸುತಿಹರು. ನಿನ್ನ ತಾಳ್ಮೆಗೂ ಮಿತಿಯಿಹುದಲ್ಲವೇ ಮಾತೇ? ಹೇಗೆ ತಾನೇ ಎಲ್ಲವನ್ನೂ, ಎಲ್ಲರನ್ನೂ ಸಹಿಸಬಲ್ಲೆ? ನಿನ್ನ ಹೊಟ್ಟೆಯನ್ನೇ ಬಗೆದು ಕರುಳನ್ನು ಕೀಳುತ್ತಿರುವಾಗಲೂ ಆ ನೋವನ್ನು ತಡೆದುಕೊಂಡು ನೀನು ಹೇಗೆ ತಾನೇ ಪ್ರೀತಿ, ಆಶ್ರಯ ಹಾಗೂ ವರವನೀಯಬಲ್ಲೆಯಮ್ಮ? ತೋರಿಬಿಟ್ಟೆ ನಿನ್ನ ನೋವ. ಮನುಜ ಮರೆತು ತನ್ನ ಹೀನ ಕೃತ್ಯವ ದೂಷಿಸ ಹೊರಟಿಹನು ನಿನ್ನ! ತನ್ನ ಮಕ್ಕಳಿಗೆ ನೀನೇ ಬುದ್ಧಿ ಕಲಿಸಬೇಕಲ್ಲದೆ ಇನ್ಯಾರಿಹರಮ್ಮ? ಭಾರತಿ ನಿನ್ನ ಮಕ್ಕಳಿಗೆ ಒಳ್ಳೆಯ ಬುದ್ಧಿಯಿತ್ತು ಸಾಕಿ ಸಲಹುವ ಜವಾಬ್ದಾರಿ ನಿನ್ನದೇ ಅಮ್ಮ. ಧನ್ಯವಾದಗಳು ನಿನಗೆ. ನಿನ್ನ ಪ್ರೀತಿಯ ಕಂದ,
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ