ಬುಧವಾರ, ಆಗಸ್ಟ್ 8, 2018

405. ಮಳೆಗಾಲ

ಆನಂದ ತರುವ ಮಳೆಗಾಲ

ವಾವ್!  ಕಚಪಿಚ ಕೆಸರಾದರೂ ಮಲೆನಾಡಿನಲ್ಲಿ ಮಳೆಯಾಟ ಚೆನ್ನ! ಅದನ್ನು ಅನುಭವಿಸಿದವರಿಗೇ ಗೊತ್ತು ಅದರ ಮಜಾ.. ಕೊಡೆ ಹಿಡಿದುಕೊಂಡು ಅರ್ಧಂಬರ್ಧ ಒದ್ದೆಯಾಗಿ ನಡೆದುಕೊಂಡು ಹೋಗುವ, ಬಸ್ಸಿಗೆ  ಹತ್ತುವಾಗ ತಲೆ ಇಡೀ ಒದ್ದೆಯಾಗಿ, ಕಾಲೂ, ಬಟ್ಟೆಯೂ ಒದ್ದೆಯಾಗಿ, ಚಳಿ ಹಿಡಿದು ಬೆಳಗ್ಗಿನಿಂದ ಸಂಜೆಯವರೆಗೂ ಆಗುವ ವಿಚಿತ್ರ ಅನುಭವವದು ಹೇಳಲಸಾಧ್ಯ! ಆದರೂ ಆ ತುಂತುರು ಮಳೆಯಲ್ಲಿ ನೆನೆಯುವಾಗ ಸಿಗುವ ಆನಂದ, ಹನಿಗಳು ಮೇಲಿಂದ ನನಗಾಗಿಯೇ ನೆಗೆದು ಬರುತ್ತವೆಯೇನೋ ಎಂಬ ಅಭಿಮಾನ, ಪುಟಿದು ಕುಣಿಯುತ್ತಾ ಬಂದ ವರ್ಷ ಧಾರೆಯ ಮುತ್ತಿನ ಹನಿಗಳು ತಣ್ಣಗೆ ಮುತ್ತೀವ ಸಡಗರ ವರ್ಣಿಸಲಸದಳ! ಮಳೆಯ ಮತ್ತೇ ಅಂಥದ್ದು! ಅದಕ್ಕೆಂದೇ ಬೆಂಗಳೂರು ಮೈಸೂರಿಗರು ಮಳೆ ಬಂದರೆ ಕೊಡೆ ಹಿಡಿದುಕೊಂಡು ಹೋಗುವುದಿಲ್ಲ, ಬದಲಾಗಿ ಸಾಧ್ಯವಾದಷ್ಟು ನೆನೆದು, ಮಳೆ ಜಾಸ್ತಿಯಾದರೆ ಅಲ್ಲೆ ನಿಂತು, ಮತ್ತೆ ಕಡಿಮೆಯಾದರೆ ಮುಂದುವರೆಯುತ್ತಾರೆ! ಮಳೆನಾಡಿನಲ್ಲಿ ಹಾಗಲ್ಲ! ಪ್ರತಿ ವರುಷದ ಮಳೆಗಾಲಕ್ಕೆ ಒಂದು ಹೊಸ ಛತ್ರಿ ಬೇಕೇ ಬೇಕು!
  ಶಾಲೆ ಪ್ರಾರಂಭವಾಗವ ಮೇ ತಿಂಗಳ ಕೊನೆಗೆ ಪುಸ್ತಕದ ಪಟ್ಟಿಯ ಜೊತೆಗೆ ಒಂದು ಬ್ಯಾಗ್ ಹಾಗೂ ಕೊಡೆಯನ್ನೂ ಕೊಳ್ಳ ಬೇಕಾಗುತ್ತದೆ! ಅದರಲ್ಲೂ ವೆರೈಟಿ! ಗಂಡಸರ ಕೊಡೆ, ಹೆಂಗಸರ ಕೊಡೆ, ಮಕ್ಕಳ ಕೊಡೆ, ಕೊಕ್ಕೆ ಕೊಡೆ, ಡಿಸೈನ್ ಕೊಡೆ, ಕಲರ್ ಕೊಡೆ, ಉದ್ದ ಕೊಡೆ ಹೀಗೆ... ಒಟ್ಟಾರೆ ಮಳೆಗಾಲದಲ್ಲಿ ಕೊಡೆಗೂ ಡಿಮ್ಯಾಂಡ್ ಹಾಗೇನೇ ಹಳೆ ಕೊಡೆ ರಿಪೇರಿಯವರಿಗೂ ಡಿಮ್ಯಾಂಡ್!!! ಕೊಡೆ ರಿಪೇರಿ ಅಂಗಡಿಗಳು ಮಳೆಗಾಲದಲ್ಲಿ ಮಾತ್ರ ತೆರೆದಿರುತ್ತವೆ!
    "ಬಾರೋ ಬಾರೋ ಮಳೆರಾಯ
   ಮಾವನ ತೋಟಕೆ ನೀರಿಲ್ಲ
    ಬತ್ತದ ಗದ್ದೆಗೆ ನೀರಿಲ್ಲ......"
ಎಂದು ಕನ್ನಡ ಮೀಡಿಯಂ ಮಕ್ಕಳು ಹಾಡಿದರೆ "ರೈನ್ ರೈನ್ ಗೋ ಅವೇ
ಕಮ್ ಅಗೈನ್ ಅನದರ್ ಡೇ..
ಲಿಟ್ಟ್ ಲ್ ಜಾನಿ ವಾಂಟ್ ಟೂ ಪ್ಲೇ..." ಅಂತಾ ಹಾಡ್ತಾರೆ ಇಂಗ್ಲೀಷ್ ಮೀಡಿಯಂ ನ ಮಕ್ಕಳು. ಮಳೆ ಬಂದರೆ ತಾನೇ ಹೀಗೆ ಹಾಡುತ್ತಾ ಕುಣಿಯಲು ಅವಕಾಶ ಸಿಗೋದು?
    ನೀವೇನೇ ಹೇಳಿ ಮಳೆ ಬಂದರೆ ತಾನೇ ಇಳೆಯಲಿ ಬೆಳೆ ಸೊಂಪಾಗಿ ಬೆಳೆಯೋದು? ಜನರೆದೆಯಲಿ ತಂಪಿನೊಲವು ಉಕ್ಕಿ ಹರಿಯೋದು? ನೀರಿಗಾಗಿ ಪರದಾಟ ತಪ್ಪೋದು? ಮಳೆಕೊಯ್ಲು ಸಾಧ್ಯವಾಗೋದು? ಇಂಗು ಗುಂಡಿ ಉಪಯೋಗವಾಗೋದು? ರೈನ್ ಕೋಟ್ ಬಳಕೆಯಾಗೋದು? ಕೊಡೆ ರಿಪೇರಿ ಅಂಗಡಿ ತಲೆ ಎತ್ತೋದು!!!
    ಮಳೆ ಬರಲಿ, ಆದರೆ ಅಗತ್ಯಕ್ಕೆ ತಕ್ಕಂತಿರಲಿ, ವರುಣನಾರ್ಭಟ ಬೇಡ. ನೀರಿನಲಿ ಮನೆ-ಮಠ-ದನ-ಕರುಗಳು ಕೊಚ್ಚಿ ಹೋದಾಗ ಸಂಕಟವಾಗುತ್ತದೆ! ಅತಿಯಾದರೆ ಅಮೃತವೂ ವಿಷವೆಂಬಂತೆ ಮಳೆಯೂ ಕೂಡಾ ತನಗಾಗಿ ಮೀಸಲಿರಿಸಿದ ಮಳೆಗಾಲದಲ್ಲಿ ಚೆನ್ನಾಗಿ ಸುರಿದು ಭೂತಾಯ ಕಾಪಾಡುವಂತೆ ದೇವರು ಕರುಣಿಸಲಿ ಎಂಬ ಶುಭಹಾರೈಕೆಗಳು. ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ