ಗುರುವಾರ, ಸೆಪ್ಟೆಂಬರ್ 12, 2019

1200. ಗಂಗಾ ದರ್ಶನ

ಗಂಗೆಯ ಜಳಕ ಮೈಮನ ಪುಳಕ

ಮನಸ್ಸು ತುಂಬಾ ಬೇಸರಗೊಂಡಿತ್ತು! ದೇಹ ಜಡವಾಗಿತ್ತು! ಏನೋ ಬದಲಾವಣೆಯನ್ನು ಬಯಸುವ ಮನಸ್ಸಿನ ಲಯ ತನ್ನ ಬಾಹ್ಯ ವರ್ತನೆ ಸೂಚಿಸುತ್ತಿತ್ತು. ಅದು ಹತ್ತನೇ ತರಗತಿ ಮಕ್ಕಳ ಪರೀಕ್ಷಾ ಮಾಹಿತಿಯ ಮುಖಾಮುಖಿ ಸಂವಹನ ಸಭೆಗೆ ಹಾಜರಾಗಿದ್ದ ದಿನ ನನ್ನ ಆಪ್ತ ಗೆಳೆಯ ಉದಯ್ ಮಾಸ್ಟರ್ ದುಗ್ಗಲಡ್ಕ ರವರಿಂದ ಸಿಸಿಆರ್ ಟಿ ಅಂತರ್ ರಾಜ್ಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಬಗ್ಗೆ ಮಾಹಿತಿ ಲಭ್ಯವಾಯಿತು. ತಕ್ಷಣ ಎಚ್ಚೆತ್ತ ಮನಸ್ಸು ಸುಳ್ಯ ಸಿಸಿಆರ್ ಟಿ ಘಟಕದ ಅಧ್ಯಕ್ಷರಾದ ಶ್ರೀಯುತ ಚಿನ್ನಪ್ಪ ಗೌಡರನ್ನು ದೂರವಾಣಿ ಮೂಲಕ ಸಂಪರ್ಕಿಸುವಂತೆ ಮಾಡಿತು.
    ಅಲ್ಲಿಂದ ಪ್ರಾರಂಭವಾಯಿತು ಉತ್ತರ ಭಾರತದ ಕೆಲ ರಾಜ್ಯಗಳನ್ನು ನೋಡಬೇಕೆಂಬ ಹಂಬಲ! ಯಾವುದೇ ಹೊಸ ವಿಷಯದ ಬಗ್ಗೆ ತಿಳಿದ ತಕ್ಷಣ ,ನನ್ನ ಮೊದಲ ಕೆಲಸ, ಸಾದ್ಯವಾದಷ್ಟು ಆ ವಿಷಯದ ಬಗ್ಗೆ ಪ್ರಶ್ನೆ ಹಾಕಿ ಇನ್ನಷ್ಟು ವಿಷಯಗಳನ್ನು ಕಂಡುಕೊಳ್ಳುವುದು. ಘಟಕದ ಅಧ್ಯಕ್ಷರನ್ನು ಹಾಗೂ ಈ ಹಿಂದೆ ಭಾಗವಹಿಸಿದ ನನ್ನ ಕೆಲ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿ,ನಾನೂ ಭಾಗವಹಿಸುವೆನಂದು ಗಟ್ಟಿ ನಿರ್ಧಾರದಲ್ಲಿ ಸಾಂಸ್ಕೃತಿಕ ತಂಡದಲ್ಲಿ ನನ್ನ ಹೆಸರನ್ನು ನೋಂದಾಯಿಸಿದೆ.
       *ಈ ಕಾರ್ಯಕ್ರಮದ ಉದ್ದೇಶವೇನು?
* ಸಾಂಸ್ಕೃತಿಕ ವಿನಿಮಯ ಹೇಗೆ ನಡೆಯಬೇಕು?
* ಪ್ರತಿಯೊಬ್ಬರ ಕರ್ತವ್ಯಗಳೇನು?
*ಹೊರಡುವ ಮುನ್ನ ಹೇಗೆ ತಯಾರಾಗಬೇಕು?
* ಹೋಗುವ ಸ್ಥಳಗಳಿಗೆ ನಾವು ಹೇಗೆ ದೈಹಿಕವಾಗಿ ಹೊಂದಿಕೊಳ್ಳಲು ಸಿದ್ಧರಾಗಬೇಕು?
*ಪ್ರಯಾಣದ ಹಾಗೂ ಭೇಟಿಯ ಸ್ಥಳಗಳ, ಪೂರ್ಣ ಕಾರ್ಯಕ್ರಮಗಳ,ಊಟ-ತಿಂಡಿ ವಿವರಗಳ ಮತ್ತು ಅಗತ್ಯವಾಗಿ ಬೇಕಾದ ಹಣಕಾಸಿನ ಬಗ್ಗೆ ವಿವರಗಳನ್ನು ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಚರ್ಚಿಸಿ ವಿವರ ಪಡೆಯಲಾಯಿತು.
   ಜೀವನದಲ್ಲಿ ಕಂಡ ಕನಸು ವಿಮಾನ ಪ್ರಯಾಣ! ಅದು ಈ ಸಾಂಸ್ಕೃತಿಕ ಪ್ರವಾಸದಲ್ಲಿ ದಕ್ಕಿತು. ಹೆಚ್ಚು ಸಂತಸಗೊಂಡು ಗಾಳಿಯಲ್ಲಿ ಹಾರುವ, ಮೇಲಿಂದ ಕೆಳಕ್ಕೆ ಹೋಗುವ ಮೊದಲಾದ ಕುತೂಹಲಕಾರಿ ಅಂಶಗಳಿಗೆ ಸ್ಪಷ್ಟ ಉತ್ತರ ಪಡೆದ ನಮಗೆ ಸಂಭ್ರಮದ, ಮನ:ಸಂತೋಷಗೊಳಿಸಿದ ಪ್ಯಾಣ ಇದಾಗಿತ್ತು ಎಂದು ಹೇಳುತ್ತಾ ಹೊರಡುವಾಗ ನೆನಪಾಗುವುದೇ ಗಂಗೆಯ ಜಳಕ!
     ವಾವ್!!! ಗಂಗೆಗೆ ಗೆಗೆಯೇ ಸಾಟಿ! ಗಂಗೆಯಂದಕೆ ಏನೇನೋ ಧಾರ್ಮಿಕ ಪ್ರಸಂಗಗಳ ಕಥೆ, ಆಧುನೀಕರಣದ ಕರುಣಾಜನಕ ಕಥೆ, ಜಾಗತಿಕ ತಾಪಮಾನ, ಮೂಢನಂಬಿಕೆ, ನಾವು ನಮ್ಮ ದಿನನಿತ್ಯ ಹಲವಾರು ವಿಧಾನಗಳಲ್ಲಿ ಕಾಣುವ ಗಂಗಾ ಶುದ್ಧೀಕಾರಕ ಸೆಸ್, ನೀರಿನ ಅಸಂಬದ್ಧ ವಿಕಸನ. ಗಂಗೆ ಸರ್ವ ಋತು ನದಿ, ಭಾರತದ ಉದ್ದವಾದ ನದಿ.ಜಲ ಪ್ರಳಯ, ಔಷಧೀಯ ಗುಣ, ಈ ಪಟ್ಟಿಯಲ್ಲಿ ಇನ್ನೂ ಅನೇಕ ಅಂಶಗಳನ್ನು ಸೇರಿಸಬಹುದು.ಹಾಗಾಗಿ ಗಂಗಾ ಜಳಕ ನನ್ನ ಹಲವು ಪಾಪಗಳನ್ನು ಕಳೆದು ಪುಣ್ಯ ಸಂಪಾದಿಸಿ ಎಂಬ ಹೇಳಿಕೆಯನ್ನು ಪರೀಕ್ಷಾರ್ಥವಾಗಿ ಅನುಭವಿಸಲು ಅವಕಾಶವಾಗಿದ್ದು ಈ ಕಾರ್ಯಕ್ರಮದಿಂದ ಎಂಬುದನ್ನು ಬಹಳ ನಿರಾಳವಾಗಿ ಹೇಳಬಲ್ಲೆ..
   ಆದರೆ ಹೇಳುತ್ತಿರುವುದು ಪ್ರವಾಸಿ ತಾಣಗಳ ಬಗ್ಗೆ! ಕಾರಣವೇನೆಂದರೆ ಈ ಒಟ್ಟು ಕಾರ್ಯಕ್ರಮದ ಆಯೋಜನೆ ಅತ್ಯದ್ಭುತವಾಗಿತ್ತು! ಸಾವಿರಾರು ಕಿಲೋಮೀಟರ್ಗಳ ಆಚೆಗೆ ನಮ್ಮ ಕಂಗೀಲು, ಸುಗ್ಗಿ ಕುಣಿತ, ದೈವ ನರ್ತನ,ಭರತ ನಾಟ್ಯ,ಯಕ್ಷಗಾನಗಳ ವಿನಿಮಯ ಹೊಸ ಪರಿಕಲ್ಪನೆಯ ಕನಸನ್ನು ಸಾಕಾರಗೊಳಿಸುವಂತೆ ಪ್ರದರ್ಶನ ಮಾಡಿ, ಕೈ ಚಪ್ಪಾಳೆಗಿಟ್ಟಿಸಿ, ಛಾಯಾಚಿತ್ರ ಕ್ಲಿಕ್ಕಿಸಿ,ಬಣ್ಣ ಬಣ್ಣದ ಸಾಂಸ್ಕೃತಿಕ ವೇಷದ ಅಂಬೆಗಾಲಿಡುವ ಮಗುವಿನಂತೆ ನೃತ್ಯದಲ್ಲಿ ಹಾಕಿದ ಹೊಸ ಹೆಜ್ಜೆಗಳಿಗೆ ಅವಕಾಶ ನೀಡುವಂಥ ಒಂದು ಅಭೂತಪೂರ್ವ ಪ್ರಯತ್ನವನ್ನು ಸಿಸಿಆರ್ ಟಿ ಘಟಕ ಸುಳ್ಯ ನಡೆಸಿದೆ ಎಂಬ ಹೆಮ್ಮೆ ನಮ್ಮದಾಗಿದೆ.
     ನಮಗೆ ಸಾಂಸ್ಕೃತಿಕ ವಿನಿಮಯ ಹೊಸತಾದರೂ ಸಾಂಸ್ಕೃತಿಕ ಕಾರ್ಯಕ್ರಮ ಹೊಸತಲ್ಲ. ಆದರೆ ಉತ್ತರಾಖಾಂಡ ರಾಜ್ಯದ ಜನ ನೋಡಿ ಖುಷಿಪಟ್ಟು ನಮ್ಮೂರಿನ ಕನ್ನಡ ಜಾನಪದ ಹಾಡಿಗೆ ಸಾಮೂಹಿಕ ನೃತ್ಯದಲ್ಲಿ ಭಾಗಿಯಾದದ್ದು ಸ್ವಾರಸ್ಯಕರ ಸ್ನೇಹದ, ಭಾರತ ಮಾತೆಯ ಅದಕ್ಕಿಂತಲೂ ಮಿಗಿಲಾಗಿ  C. C. R. T ಯ ಉದ್ದೇಶವನ್ನು ಈಡೇರಿಸುವ ಪ್ರಯತ್ನ ನಮ್ಮದೇ ಖರ್ಚಿನಲ್ಲಿ!!
   ನಾನು ಪ್ರಯಾಣಿಸಿದ ಪ್ರಯಾಣದ ಬಗ್ಗೆ, ನೀಡಿದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ, ಪಡೆದುಕೊಂಡ ಹೊಸ ಹೊಸ ಅನುಭವಗಳ ಬಗ್ಗೆ, ಹಂಚಿಕೊಂಡ ಸಂತೋಷದ ಕ್ಷಣಗಳ ಬಗ್ಗೆ, ಮುನಿಸಿಕೊಂಡ ಗಳಿಗೆಗಳ ಬಗ್ಗೆ, ಉದ್ಗರಿಸಿದ ಕುತೂಹಲಗಳ ಬಗ್ಗೆ, ಹಸಿರ ಕಾನನ, ಕೊಳದ ಸೌಂದರ್ಯ, ನವೀನ ಅನುಭವ, ಹಂಚಿಕೊಂಡು ತಿಂದ ಊಟ-ತಿಂಡಿ-ತಿನಿಸು, ಕಾಲಕ್ಷೇಪಕ್ಕಾಗಿ ನಡೆಸಿದ ಹರಟೆ,ಸಂಪೂರ್ಣವಾಗಿ ಸಿಕ್ಕ ಸ್ವತಂತ್ರ ಸಮಯದ ವರ್ತನೆಗಳು, ಬೇಕೆಂದಾಗ ಸಿಗದ ಊಟದ ಬಗ್ಗೆ, ದೆಹಲಿ, ಉತ್ತರಾಖಾಂಡ, ಆಗ್ರಾ, ಮಹಾರಾಷ್ಟ್ರ,ಆಂಧ್ರ ಹಾಗೂ ಉತ್ತರ ಕರ್ನಾಟಕಗಳ ಜನ ಜೀವನದ ಅತ್ಯುನ್ನತ ಮಟ್ಟದ ಜೀವನ ಶೈಲಿ, ಕೊಳೆಗೇರಿ-ಝೋಪಡಿಗಳ ಜನರ ಜೀವನದ ಕಷ್ಟಗಳ ಬಗ್ಗೆ, ನಮ್ಮ ತಂಡದ ಸಂಗಡಿಗರ ಸಂಚಲನಗಳ ಬಗ್ಗೆ, ತಂಡದಲ್ಲಿನ ಆತ್ಮೀಯ ವೃತ್ತಿ ಬಾಂಧವರ, ಗೆಳೆಯರ ಬಗ್ಗೆ,ಜೀವನದಲ್ಲಿ ಒಮ್ಮೆ ಮಾತ್ರ ಬಂದು ಹೋಗುವ ಅಪರಿಚಿತ ಸಹ ಪ್ರಯಾಣಿಕರ ಬಗ್ಗೆ, ಆನಂದ ಪಟ್ಟು ತಿಂದ ಲಿಚ್ಚಿ ಹಣ್ಣುಗಳ ಬಗ್ಗೆ, ಅವರವರ ಬಟ್ಟೆ ಬರೆ,ಮಾತು, ಬಣ್ಣ, ಆವೇಶ, ದುಃಖ-ದುಗುಡ, ಕಷ್ಟ-ಸುಖ, ಮೊಬೈಲ್ ಫೋನುಗಳ, ವಸ್ತು, ಹಣ, ಖರೀದಿಗಳ ಬಗ್ಗೆ, ಕೈ ಜಾರಿ ಹೋದ ಕ್ಷಣಗಳಿಗೆ ಅರೆಗಳಿಗೆ ಪೆಚ್ಚಾದ, ಮಂತ್ರಿ -ಮಹೋದಯರ ಬಳಿ ತೆಗೆದ ಫೋಟೋಗಳ ಬಗ್ಗೆ, ಪರ ಊರಿಗೆ ತೆರಳಿದಾದ ಅಲ್ಲಿ ಸಿಕ್ಕ ನಮ್ಮೂರಿನವರ ಪ್ರೀತಿಯ ಬಗ್ಗೆ, ನಮ್ಮೂರಿನ ಊಟ-ತಿಂಡಿಗಳು ಪರ ಊರಿನಲ್ಲಿ ಸಿಕ್ಕಾಗ ಆದ ಸಂತಸದ ಬಗ್ಗೆ,ನಮ್ಮನ್ನು ನಾವೇ ಪ್ರಶ್ನಿಸಿ ಪೆಚ್ಚು ಮೋರೆ ಹಾಕಿದ ಬಗ್ಗೆ, ಮರೆತು ಹೋದ ಮರೆವಿನ ಬಗ್ಗೆ, ಕೈ ಕೊಟ್ಟ ಸಾಮಾನ್ಯ ಜ್ಞಾನದ ಬಗ್ಗೆ, ಗಮನವೀಯದ ಸಣ್ಣ ಪುಟ್ಟ ಅಂಶಗಳಿಂದಾದ ನಷ್ಟದ ಬಗ್ಗೆ, ಮನೆಯಿಂದ ಹೊರಟ ಮೇಲೆ ನಮ್ಮ ಅನುಪಸ್ಥಿತಿಯಲ್ಲಿ ಮನೆಯವರಿಗಾದ ವ್ಯತ್ಯಾಸದ ಬಗ್ಗೆ, ಕೈಯಲ್ಲಿದ್ದ ಹಣ ಖಾಲಿಯಾಗಿ ಸಾಲ ಪಡೆದ ಬಗ್ಗೆ, ಪರರಿಗೆ, ತನ್ನವರಿಗೆ,ಕೈ ನೀಡಿ ಆಧಾರವಾದ ಬಗ್ಗೆ, ನಾವೆಲ್ಲರೂ ಒಂದೇ ಎಂಬ ಭಾವದ ಬಗ್ಗೆ, ಹಾರಿದ ವಿಮಾನದ ವೇಗದ ಬಗ್ಗೆ, ಅಷ್ಟೇ ನಿಧಾನವಾಗಿ ಓಡಿದ ರೈಲಿನ ಅದರ ಸಮಯದ ಬಗ್ಗೆ, ಸಂತೆಯಲ್ಲಿ ಚರ್ಚಿಸಿ ಕೊಂಡ ವಸ್ತುಗಳ ಬಗ್ಗೆ, ಗಾಳಿಯ ವೇಗಕ್ಕೆ ಹಾರಿ ಹೋದ ಧೂಳಿನ ಕಣಗಳ ಬಗ್ಗೆ, ಹೋದ ರೋಪ್ ವೇ  ಇವೆಲ್ಲವುಗಳ ಬಗ್ಗೆ ನನ್ನೆಲ್ಲಾ ಸಹ ಪ್ರಯಾಣಿಕ ತಂಡದವರು ತಮ್ಮ ಅನುಭವಗಳನ್ನು ಬರೆದಿರಬಹುದು. ಆದರೆ ನಾನು ಹೇಳಿರುವುದು ನನ್ನ ದೇಶದ ಸಂಸ್ಕೃತಿ, ಸ್ನೇಹ, ಮೈಮನ ಪುಳಕಗೊಂಡ ಗಂಗಾ ಸ್ನಾನದ ಬಗ್ಗೆ ಈ ಎಲ್ಲಾ ಅನುಭವಗಳ ಸರಮಾಲೆಯ ಹಿಂದಿರುವ ಚಿನ್ನಪ್ಪ ಗೌಡರಿಗೆ ಮತ್ತು ಹಿರಿಯರಾದ ಕೇಶವರಿಗೆ ನನ್ನೆಲ್ಲ ಸ್ನೇಹಿತ ಸಹ ಪ್ರಯಾಣಿಕರಿಗೆ ನಾನು ಮನದಾಳದಿಂದ ಚಿರಋಣಿ.
ಕೊನೆಯ ಮಾತು-ಗಂಗಾಸ್ನಾನ ನಿಜವಾಗಿಯೂ ಪುಣ್ಯ ಸ್ನಾನ.
ಜೈ ಹಿಂದ್, ಜೈ ಕರ್ನಾಟಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ