ಗುರುವಾರ, ಸೆಪ್ಟೆಂಬರ್ 12, 2019

1204. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-56

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-56

ಅಪಾರವಾಗಿ ನುಗ್ಗಿದ ನೆರೆಯುಂದಾಗಿ ಮನೆ ಮಠ ಕಳೆದುಕೊಂಡವರ ನೋವು ಒಂದೆಡೆ, ಗಂಜಿ ಕೇಂದ್ರದಲ್ಲಿ ಇದ್ದು, ಹೊತ್ತಿನ ಕೂಳಿಗಾಗಿಯೂ ಪರಿತಪಿಸುತ್ತಿರುವ ಆಕ್ರಂದನ ಮತ್ತೊಂದೆಡೆ. ಶಾಲೆಗಳೆಲ್ಲ ಗಂಜಿ ಕೇಂದ್ರಗಳಾದಾಗ ಅಲ್ಲಿ ಬಂದ ಜನರಿಗೆ ಸರಿಯಾದ ಊಟ ಸಿಕ್ಕಿದರೂ ಟಾಯ್ಲೆಟ್ ರೂಮ್ ವ್ಯವಸ್ಥೆ, ಬಟ್ಟೆ ಬರೆ, ಹೊದ್ದು ಮಲಗುವ ಬಟ್ಟೆಗಳು, ಟವೆಲ್ ಗಳು, ಒಳ ಉಡುಪುಗಳು, ಪ್ರತಿಯೊಬ್ಬರಿಗೂ ಸ್ನಾನಕ್ಕೆ ಬಿಸಿನೀರು(ದಕ್ಷಿಣ ಕನ್ನಡ ಜಿಲ್ಲೆಯಲ್ಲೇನೋ ತಣ್ಣೀರು ಸ್ನಾನ ಮಾಡಬಹುದು, ಮೂಡಿಗೆರೆ, ಕೊಡಗು, ಶಿವಮೊಗ್ಗಗಳಲ್ಲಿ ಸಾಧ್ಯವಿಲ್ಲ),
          ಸಣ್ಣ ಮಕ್ಕಳಿಗೆ ವಿಶೇಷ ಆಹಾರ ಇವೆಲ್ಲ ಸರಿಯಾಗಿ ಸಿಗದು. ಜನರ ಪಾಡು ನಾಯಿಪಾಡು. ನಮಗೆಲ್ಲ ಗೊತ್ತಿದೆ ಒಂದು ಹೊತ್ತಿನ ಊಟದ ಕಾರ್ಯಕ್ರಮ ಮನೆಯಲ್ಲೋ, ಹಾಲ್ ನಲ್ಲೋ ನಡೆದರೆ ಎಷ್ಟು ಪ್ಲಾಸ್ಟಿಕ್ , ಪೇಪರ್ ಕಸ ಹೊರಬರುವುದೆಂದು. ಹಾಗಿರುವಾಗ ಶಾಲೆಯಲ್ಲಿ ಒಂದಷ್ಟು ಜನರಿಂದ ಉಂಟಾಗುವ ಕಸದ ವಿಲೇವಾರಿಯೂ ಕಷ್ಟ. ಬಟ್ಟೆ ಒಗೆಯುವುದು ಕಷ್ಟ, ಒಗೆದ ಬಟ್ಟೆ ಒಣಗದು. ತಮ್ಮತಮ್ಮಲ್ಲೆ ಜನ ಒಬ್ಬರಿಗೊಬ್ಬರು ಸಾಂತ್ವನ ಹೇಳುವವರು ಒಂದೆಡೆಯಾದರೆ ಕಳ್ಳರು ಮತ್ತೊಂದೆಡೆ, ಕಾಮುಕರು ಇನ್ನೊಂದೆಡೆ! ಹೆಣ್ಣು ಮಕ್ಕಳೇನು, ಮುದುಕಿಯರನ್ನೂ ಬಿಡದವರು! ಕುಡುಕರು ಅಲ್ಲಿ! ಓಹೋ.. ಅಲ್ಲಿನ ಪರಿಸ್ಥಿತಿ ದೇವರೇ ಬಲ್ಲ!
        ಮಕ್ಕಳ ಅಳು, ಕೂಗು ಒಂದೆಡೆ ಮುಗಿಲು ಮುಟ್ಟಿದರೆ ಮತ್ತೊಂದೆಡೆ ಹಿರಿಯರ ಮಾತುಕತೆ, ಜಗಳ, ಹಾಹಾಕಾರಗಳು! ಇನ್ನು ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಕಷ್ಟಸಾಧ್ಯ! ಮತ್ತೆ ಎಲ್ಲಾ ಸರಿಯಾದ ಮೇಲೆ ಶಾಲೆಗಳನ್ನು ಯೋಗ್ಯ ರೀತಿಗೆ ತರುವ ಜವಾಬ್ದಾರಿ ಶಿಕ್ಷಕರು ಮತ್ತು ಮಕ್ಕಳದ್ದು!
      ಜನರ ನೋವು ಅವರಿಗೇ ಗೊತ್ತು! ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರೇ ಮಳೆಯಲ್ಲಿ ಕೊಚ್ಚಿ ಹೋದಾಗ, ಜೀವನವಿಡೀ ದುಡಿದು ಸಾಲಮಾಡಿ ಕಟ್ಟಿದ ಸೂರು ಕಣ್ಣಮುಂದೇ ನೆಲಕ್ಕಚ್ಚಿದಾಗ, ಗದ್ದೆಯೆಲ್ಲ ಕೆಸರ ಸಾಗರದಲ್ಲಿ ಮುಳುಗಿ ಹೋದಾಗ, ಪ್ರೀತಿಯಿಂದ ಬೆಳೆದ ಅಡಿಕೆ, ತೆಂಗಿನ ಮರಗಳು  ನೆಲಕ್ಕುರುಳಿ ಬಿದ್ದಾಗ, ಕಾಳು ಮೆಣಸು, ಕಾಫಿ, ಏಲಕ್ಕಿ ,ಹೂವಿನ ಗಿಡಗಳು ಸರ್ವನಾಶವಾಗಿ ಹೋದಾಗ ಆಗುವ ನೋವು ಅದು ಅನುಭವಿಸಿದವನಿಗೇ ಗೊತ್ತು!
    ದೇವರು ದೊಡ್ಡವರು ಎಂದು ಅವರನ್ನೇ ಪೂಜಿಸುತ್ತೇವೆ. ಏನೇ ಮಾಡಿದರೂ, ಸುಖ ಕೊಟ್ಟರೂ, ದುಃಖವಿತ್ತರೂ ಅವರನ್ನೇ ಬೇಡುವವರು ನಾವು! ದೇವರೆಲ್ಲಿದ್ದಾನೆಂದು ಘರ್ಜಿಸಿ ಬಾಳಿದವನೂ ಪರಿಸ್ಥಿತಿ ನೋಡಿ, "ದೇವಾ, ಹೀಗಾಗಬಾರದಿತ್ತು! "ಎನ್ನುತ್ತಾನೆ. ಪ್ರಕೃತಿ ಕೆಟ್ಟದಲ್ಲ, ಯಾವುದೂ ಕೆಡುಕನ್ನುಂಟು ಮಾಡುವುದೂ ಇಲ್ಲ, ಹೆಚ್ಚಾದ ಮಾನವನ ಪರಿಸರ ನಾಶ, ಜನಸಂಖ್ಯೆ, ಮಾಲಿನ್ಯಗಳಿಂದಾಗಿ ತನ್ನನ್ನು ತಾನು ಸಂಭಾಳಿಸಲಾಗದೆ ಅಸಮತೋಲನವಾಗಿ, ಸಮತೋಲನ ಮಾಡಿಕೊಳ್ಳಲಾಗದೆ ಅಲ್ಲಲ್ಲಿ ಕಟ್ಟೆಯೊಡೆದು ಹರಿದಿದೆ! ವೈಪ್ಯರೀತ್ಯಗಳು ನೆಲವನ್ನು ನಡುಗಿಸ ಬಹುದು, ತೋಟವನ್ನು, ಮನೆಗಳನ್ನು ಉರುಳಿಸಬಹುದು, ಮನೆಯೊಳಗೆ ನೀರು ನುಗ್ಗಬಹುದು ಅಥವಾ ಭೂಮಿಯನ್ನೆ ಒಡೆಯಬಹುದು! ಪ್ರಕೃತಿಗೆ ನಾವು ತಲೆಬಾಗಲೇ ಬೇಕು, ನೀವೇನಂತೀರಿ?
@ಪ್ರೇಮ್@
21.08.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ