ಗುರುವಾರ, ಜೂನ್ 18, 2020

1443. ಪ್ರೇಮಪತ್ರ

ಸ್ಪರ್ಧೆಗೆ

ಪ್ರೇಮಪತ್ರ

ನನ್ನ ಸಿಹಿಮನವೆ,

   ನೀನು ಹೇಗಿರುವೆ, ಎಲ್ಲಿರುವೆ ಎಂದು ನಾನು ಕೇಳಲಾರೆ, ಏಕೆಂದು ನಿನಗೆ ಮೊದಲೆ ತಿಳಿಯದೆ? ನನ್ನ ಎದೆಗುಡಿಯೊಳಗೆ ನಸುನಗುತ ನೀ ಹಾಯಾಗಿ ಸುಖದಿಂದಿರುವೆಯೆಂಬುದ ನಾನು ಬಲ್ಲೆ. ನನ್ನ ಬದುಕು, ಖುಷಿ, ನಗು, ಎಲ್ಲವೂ ನೀನಾಗಿರುವಾಗ ನಿನ್ನ ಸರ್ವ ಸಂತಸವೂ ನಾನೇ ಅಲ್ಲವೇ? ನಾನು ಸಂತಸವಾಗಿದ್ದರೆ ನೀನೂ ನಗುತಲೇ ಇರುವೆ. ಅಲ್ಲದೆ ನೀನಾಳುತಲಿರುವ ನನ್ನ ಹೃದಯ ಸಿಂಹಾಸನ ಪ್ರೀತಿಯಲಿ ತುಂಬಿ ಬೀಗದೇ? ಬಹಳ ಸಂತಸವಾಗಿ ನಾನು ನಿನ್ನ ಹೇಗೆ ಸಲಹುತಲಿರುವೆನೋ ಅಂತೆಯೇ ನೀನೂ ಕೂಡ ಎಂಬುದ ನಾನು ಬಲ್ಲೆ.

   ಪ್ರೀತಿಸದ, ದ್ವೇಷಿಸುವ ಹೃದಯಗಳು ನೋವು, ಕಣ್ಣೀರು ಕೊಡುವುದಂತೆ. ನಾ ನಿನಗೆ ಅವುಗಳನೆಂದೂ ಕೊಡಲಾರೆ. ನಿನ್ನ ಹಾಗೆಯೇ ನಾನು ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಲಿಂಬೆ ಉಪ್ಪನಕಾಯಿಯ ಉಪ್ಪಲ್ಲಿ ಕರಗಿ ಒಂದಾದಂತೆ ನಾವಿಬ್ಬರಿರಬೇಕು. ನಮ್ಮನ್ನು ಪ್ರಪಂಚದ ಯಾವ ಶಕ್ತಿಯೂ ಬೇರ್ಪಡಿಸಲಾಗದು ಮುದ್ದು.

   ಅಂಜೂರದ ಹಣ್ಣನ್ನು ಸಕ್ಕರೆ ದ್ರಾವಣದಲ್ಲಿ ಹಾಕಿಟ್ಟಂತೆ ನನ್ನಲ್ಲಿ ನೀನೈಕ್ಯವಾಗಿರುವೆ. ನೀ ನನ್ನ ನರ ನಾಡಿಗಳಲ್ಲೇ ಅಲ್ಲದೆ ಪ್ರತಿ ಜೀವಕೋಶಗಳಲ್ಲೂ ರಕ್ತದ ಹನಿಹನಿಗಳಾಗಿ ಹರಿಯುತ್ತಿರುವಾಗ ನೀನಿಲ್ಲದ ಬಾಳಿದೆಯೇ? ನನ್ನ ದೇಹ, ಅಂಗಾಂಗ, ಮಾಂಸ, ರಕ್ತವೇ ಅಲ್ಲದೆ ಪ್ರತಿ ಜೀವಕೋಶದ ಕೋಶ ಕೇಂದ್ರದಲ್ಲಿರುವ ಡಿ ಎನ್ ಎ, ಆರ್ ಎನ್ ಎಗಳಲ್ಲೂ, ಪ್ರತಿ ಕ್ರೋಮೋಜೋಮ್ ನಲ್ಲೂ ನಿನ್ನ ಪ್ರೀತಿಯೇ ಬೆರೆತು ನನ್ನ ರಕ್ತದ ಗುಂಪೇ ಪ್ರೀತಿ ಪಾಸಿಟಿವ್ ಆಗಿರುವಾಗ ಪ್ರತಿ ಮಿಲಿ ಸೆಕೆಂಡ್ ನಿನ್ನ ಅಗಲುವೆನೇ ನನ್ನ ಆತ್ಮವೇ?

ನೀನೆಲ್ಲೋ, ನಾನೂ ಅಲ್ಲೇ. ನಿನ್ನ ಮನದೊಳು ನಾನು, ನನ್ನ ತನುವೊಳು ನೀನು, ನೀನುಸಿರು ನಾ ಪ್ರಾಣ, ನೀ ದೇಹ ನಾನಾತ್ಮ. ಮತ್ತೆಲ್ಲಿ ನಿನ್ನ ವಿಚಾರಿಸಲಿ. ಪ್ರಪಂಚದಿ ನಾವಿಬ್ಬರೇ. ನಮ್ಮದೇ ಪ್ರಪಂಚ. ಒಂದೇ ಭಾವ. ಮತ್ತೆ ಸಿಗುವೆ, ಬೈ ಎಂಬ ಪದಗಳಿಲ್ಲ, ದೂರವೆಂಬ ಮಾತಿಲ್ಲ. 
   ಈ ಪತ್ರ ನನ್ನುಸಿರ ಗಾಳಿಯ ಬಿಂದುಗಳ ಧಾರೆ. 

        ಇಂತಿ ನಿನ್ನ ಉಸಿರು...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ