ಮರುಗದಿರು
ಮರುಗದಿರು ಮನವೆ ಮೆತ್ತಗಾಗಿ!
ಮೆರಗೆಲ್ಲಿ ಮರುಗಿದರೆ ಮನದೊಳಗೇ ಮೆತ್ತಗಾಗಿ?
ಮೆರುಗು ಬರಲು ಮರುಗ ಬಾರದು ಮನದಿ
ಮೆರುಗೇರಲು ಮನವು ಮರವಾಗು ಮುದದಿ!
ಮರೆಯದಿರು ಮನವೇ ಮೇಲೇಳುವ ಮೃದು ಮಧುರ ಮೌನವ!
ಮೊಳಗುತಿರು ಮುದದಿ ಮುಕುಟಪ್ರಾಯವಾದ ಮಂಜಿನ ಮಣಿಯಂತೆ!
ಮೋಜಿಗಾಗಿ ಮಜದಿ ಮರುಳಾಡದೆ ಮನವೇ!
ಮಹಲ ಹೊರಗಿನ ಮೈದಾನದಿ ಮಕ್ಕಳಂದದಿ ಮೈವೆತ್ತಿ ಮೆರೆ!
ಮಿತವ್ಯಯಿಯಾಗು, ಮಿತಭಾಷಿಯಾಗು, ಮದವೇರದಿರು!
ಮೋಹ ಮತ್ಸರವದು ಮನಕೆ ಮಂಗಳಕರವಲ್ಲ!
ಮೋಹಿನಿಯ ಮೋಹಕತೆ ಮೆರೆಯದಿರಲಿ ಮೋಹವೇ,
ಮೋಡದೊಳಗಿನ ಮೋಹಕ ಮಿನುಗುತಾರೆಯಂತಿರು ಮನವೇ..
ಮುದ್ದು ಮನವೇ, ಮೈಮರೆಯದಿರೆಂದಿಗೂ ಮೈಮರೆತು
ಮಾನವತೆಯ ಮಹಾ ಮಹತ್ತ ಮರೆಯದಿರು!
ಮಕರನಂತಿರದೆ ಮದಗಜನಂತೆ ಮದವ ಮರೆತುಬಿಡು!
ಮೊಗದೊಳು ಮುಗುಳ್ನಗೆಯಿಹ ಮುದ್ದು ಮಗಳಂತಿರು!
ಮಂಗನಂತಿರದೆ ಮಂಜುಹನಿಯ ಮುತ್ತು ಮಣಿಯಂತಾಗು!
ಮೆಲ್ಲನೆ ಮುಂಜಾಗ್ರತೆಯಿಂದ ಮುಂದಡಿಯಿಡು ಮರ್ಕಟ ಮನವೇ..
@ಪ್ರೇಮ್@
29.01.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ