ಶುಕ್ರವಾರ, ಡಿಸೆಂಬರ್ 7, 2018

632.ಆಂಗ್ಲ ಭಾಷಾ ಶಿಕ್ಷಕರು ಎದುರಿಸುವ ಸಮಸ್ಯೆಗಳು

 ಶಿಕ್ಷಕರ ಗುಣಮಟ್ಟವೇ ಸರಕಾರಿ ಶಾಲೆಗಳ ಅವನತಿಗೆ ಕಾರಣವೇ....ಉಮಾ ಮಹೇಶ್ವರ ವೈದ್ಯ ಅವರ ಲೇಖನ ಓದಿದ ಬಳಿಕ ಸರಕಾರಿ ಶಾಲೆಯಲ್ಲಿ ಆಂಗ್ಲ ಭಾಷೆಯನ್ನು ಬೋಧಿಸುತ್ತಿರುವ, ಹದಿನಾಲ್ಕು ವರುಷಗಳಿಂದ ಸರಕಾರಿ ಶಾಲಾ ಶಿಕ್ಷಕಿಯಾಗಿರುವ, ಅದಕ್ಕಿಂತ ಮೊದಲು ಒಂದೆರಡು ವರುಷಗಳ ಕಾಲ ಒಂದೆರಡು ಖಾಸಗಿ ಶಾಲೆಗಳಲ್ಲೂ ಬೋಧಿಸಿ ಅನುಭವ ಇರುವ ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ಈಗ ಇರುವ ನನ್ನ ಅಭಿಪ್ರಾಯ ಹಾಗೂ ಅನಿಸಿಕೆಗಳು. 

      ಶಿಕ್ಷಕರಿಗೆ ಜ್ಞಾನವಿಲ್ಲ, ಅಕ್ಷರ ಗೊತ್ತಿಲ್ಲ, ಕಾಗುಣಿತ ದೋಷಗಳಿವೆ, ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲಾರರು ಇವೆಲ್ಲ ಕೆಲವು ಬೆರಳೆಣಿಕೆಯ ಶಿಕ್ಷಕರಿಗೆ ಸಂಬಂಧಿಸಿದ ಪದಗಳಾಗಿವೆ. ಕನ್ನಡ ಮಾಧ್ಯಮದಲ್ಲಿಯೇ ಕಲಿತ, ಹಳ್ಳಿಯ ಪ್ರದೇಶದಿಂದ ಬಂದ ಅದೆಷ್ಟೋ ರೈತರ ಮಕ್ಕಳಾದ ಶಿಕ್ಷಕರು ಆಂಗ್ಲ ಭಾಷೆ ಕಲಿತು ಇಂಗ್ಲಿಷ್ ತರಬೇತಿಯನ್ನು ಜಿಲ್ಲಾ, ತಾಲೂಕು ಮಟ್ಟಗಳಲ್ಲಿ ನೀಡುತ್ತಿದ್ದಾರೆ ಎನ್ನುವ ಮಾತು ಸತ್ಯ ಏಕೆಂದರೆ ನಾನು ನೋಡಿ, ಅನುಭವಿಸಿದ್ದು ಇದು. 

   ಆದರೆ ತೀರಾ ಹಳ್ಳಿಗಾಡಲ್ಲಿ ಬೆಳೆದ ಇಂಗ್ಲಿಷ್ ಎಂಬ ಪದವನ್ನೂ , ಭಾಷೆಯನ್ನೂ ಶಿಕ್ಷಕರ ಬಾಯಲ್ಲೇ  ಕೇಳಿ ತಿಳಿದ ಮಕ್ಕಳು ದಡ್ಡರೇನೂ ಅಲ್ಲ, ಆದರೆ ಇಂಗ್ಲಿಷ್ ಅವರಿಗೆ ಕಬ್ಬಿಣದ ಕಡಲೆ. ಆದರೂ ಓದಿ, ಬರೆದು ಕಲಿತು ಪರೀಕ್ಷೆಯಲ್ಲಿ ಪಿಯುಸಿಯಲ್ಲಿ ಅಧಿಕ ಅಂಕ ಪಡೆದಿರುವರು ಎಂಬ ಕಾರಣಕ್ಕೆ ಅವರನ್ನು ಇಂಗ್ಲಿಷ್ ಭಾಷಾ ಶಿಕ್ಷಕರನ್ನಾಗಿ ನೇಮಿಸಿರುವುದು ಸರಕಾರದ ತಪ್ಪು! ಶಿಕ್ಷಕರ ಅಭಿರುಚಿ, ಆಸಕ್ತಿ ತಿಳಿಯದೆ ಕೊಟ್ಟ ವಿಷಯವನ್ನೇ ಬೋಧಿಸಬೇಕೆಂಬ ಹೇರಿಕೆ ಸಲ್ಲದು! ನಮ್ಮ ಕನ್ನಡವನ್ನು ಬೆಂಗಳೂರು ಸುಟಿಯಲ್ಲೇ ನೆಲೆಸಿರುವ ಒಬ್ಬ ಆಂಗ್ಲ ವ್ಯಕ್ತಿಗೆ ಕೊಟ್ಟರೆ ಬೋಧಿಸಲು ಸಾಧ್ಯವೇ..? ಯಾವ ಭಾರತೀಯ ಆಂಗ್ಲ ಭಾಷಾ ಶಿಕ್ಷಕನೂ ನೂರು ಶೇಕಡಾದಷ್ಟು ಸರಿಯಾಗಿ ಆಂಗ್ಲರ ಭಾಷೆಯನ್ನು ಆಂಗ್ಲರಂತೆ ಕಲಿಸಲು ಸಾಧ್ಯವಾಗದು.ಕಾರಣ ಅದು ನಮ್ಮ ಮಾತೃಭಾಷೆಯಲ್ಲ, ನಮಗೆ ಮಾತನಾಡಲು ಹಳ್ಳಿಗಳಲ್ಲಿ ಯಾರೂ ಸಿಗುವುದಿಲ್ಲ. ಹಾಗೆಂದು ಆಂಗ್ಲ ಭಾಷೆ ಮಾತನಾಡಲು ಬರುವುದೇ ಇಲ್ಲ ಎಂದೂ ಅಲ್ಲ! ಯಾರೂ ಯಾವುದರಲ್ಲಿ ಆಸಕ್ತಿದಾಯಕರೋ ಅದನ್ನು ಎಲ್ಲಾ ಶಿಕ್ಷಕರೂ ಖಂಡಿತಾ ಕಲಿಸುತ್ತಾರೆ! ನಮಗೆ ಗೊತ್ತಿದ್ದುದನ್ನು, ನಾವು ಕಲಿತಿರುವುದನ್ನು ಮಾತ್ರ ತಾನೇ ನಾವು ಇತರ ವಿದ್ಯಾರ್ಥಿಗಳಿಗೆ ಹಂಚಲು ಸಾಧ್ಸ! 

  ಇಂಗ್ಲಿಷ್ ಶಿಕ್ಷಕರೊಬ್ಬರು ಮತ್ತೊಬ್ಬ ಶಿಕ್ಷಕರ ಬಳಿ ಆಂಗ್ಲ ಭಾಷೆಯಲ್ಲಿ ಮಾತನಾಡಿದರೆ ಅವರನ್ನು ನೋಡಿ ಕತೆ ಕಟ್ಟಿ ನಗುವ ಶಿಕ್ಷಕರೆ ಇದ್ದಾರೆ ಹಳ್ಳಿಗಳಲ್ಲಿ! ಹಾಗೆಯೇ 80% ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಅಧ್ಯಾಪಕರಿಲ್ಲ! ಇರುವ ದೈಹಿಕ ಶಿಕ್ಷಣ ಶಿಕ್ಷಕರು, ಸಮಾಜ, ವಿಜ್ಞಾನ, ಕನ್ನಡ, ಗಣಿತ ಶಿಕ್ಷಕರೇ ಆಂಗ್ಲ ಭಾಷಾ ತರಬೇತಿ ಪಡೆದು ಬೋಧಿಸುವ ಶಿಕ್ಷಕರಿದ್ದಾರೆ..ಪ್ರತಿಯೊಬ್ಬ ಶಿಕ್ಷಕನೂ ತನ್ನ  ಯಾವ ವಿದ್ಯಾರ್ಥಿಗೂ ಮೋಸ ಮಾಡಲು ಬಯಸುವುದಿಲ್ಲ! ತನ್ನ ಅರಿವಿಗೆ ನಿಲುಕುವಷ್ಟು ದುಡಿದೇ ದುಡಿಯುವನು. ಕೆಲಸದ ಒತ್ತಡ, ಇಲಾಖೆಗಳ ಮೇಲಿಂದ ಮೇಲೆ ಬರುವ ಮೇಲ್ ಗಳಿಗೆ ಉತ್ತರ, ಊರಿನ ರಾಜಕೀಯವನ್ನು ಸಂಬಾಳಿಸಿ ಪೋಷಕರ ಸಹಾಯ, ಆಂಗ್ಲ ಮಾಧ್ಯಮ ಶಾಲೆಗಳೊಡನೆ ಪೈಪೋಟಿ, ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳುವ, ಬರಮಾಡಿಕೊಳ್ಳುವ ಪ್ರಯತ್ನ, ಶಾಲೆಗೇ ಕಳುಹಿಸದ ಪೋಷಕರ ಮನವೊಲಿಸುವ ಯತ್ನ, ಕೆಟ್ಟ ಅಭ್ಯಾಸಗಳಿಂದ ಮಕ್ಕಳನ್ನು ದೂರ ಮಾಡಿ, ತಾವೇ ಸ್ವತಃ ಮಕ್ಕಳ ಮನೆಗೆ ತೆರಳಿ ಅವರನ್ನು  ಶಾಲೆಗೆ ಕರೆತರುವ ಶಿಕ್ಷಕರೂ ಇದ್ದಾರೆ. ಇವೆಲ್ಲ ಒತ್ತಡಗಳ ನಡುವೆ ಹೊಸ ಹೊಸ ವಿಷಯಗಳನ್ನು ಓದಿ ತಿಳಿಯಲು ಕೆಲವು ಶಿಕ್ಷಕರಿಗೆ ಸಾಧ್ಯವಾಗದೆಯೂ ಇರಬಹುದು! 

ಕೆಲವು ಶಿಕ್ಷಕರು ನಲವತ್ತರಿಂದ ಎಂಬತ್ತು ಕಿಲೋ ಮೀಟರ್ ದಿನಂಪ್ರತಿ ಪ್ರಯಾಣಿಸಿ ಕಲಿಸುವವರೂ ಇಲ್ಲವೇ? ಅವರ ಮಕ್ಕಳನ್ನು ಅವರು ಹೇಗೆ ತಮ್ಮ ಶಾಲೆಗೆ ಕರೆ ತಂದಾರು? ಹಲವಾರು ಕಷ್ಟಗಳ ನಡುವೆ ಸಿಲುಕಿ ಒದ್ದಾಡಿ, ಏಳು ತರಗತಿಗಳಿದ್ದರೂ, ತರಬೇತಿ-ಲೆಕ್ಕಾಚಾರ ಕೊಡುವುದು-ಬ್ಯಾಂಕ್ -ಪುಸ್ತಕ ,ಬಟ್ಟೆ ತಂದು ಹಂಚುವುದು, ಬಿಸಿಯೂಟಕ್ಕೆ ತರಕಾರಿ, ಶಾಲಾ ಕೈ ತೋಟ ನಿರ್ವಹಣೆ ಕಾರ್ಯಗಳೊಂದಿಗೆ ಇರುವ ತರಗತಿಗಳನ್ನು ಮೂರು ನಾಲ್ಕು ಶಿಕ್ಷಕರೇ ನಿಭಾಯಿಸುವುದಿಲ್ಲವೇ?

   ಶಾಲೆಗೆ ಬರದ ಮಕ್ಕಳನ್ನು ಕರೆತರಲು ಹೋಗಿ ಕಲ್ಲಿನೇಟು ತಿಂದಿರುವುದು, ಅವರ ಕುಡುಕ ಪೋಷಕರಿಂದ ಕೆಟ್ಟ ಮಾತು ಕೇಳಿಸಿಕೊಂಡದ್ದು ನೈಜ ಅನುಭವ! ಶಿಕ್ಷಕರ ಮೇಲೇ ದೊಡ್ಡ ಹೆಡ್ ಲೈನ್ಗಳಲ್ಲಿ ಗೂಬೆ ಕೂರಿಸುವುದು ಸರಿಯೇ? ಎಲ್ಲಾ ಮನುಜರಂತೆ ಒಂದಿಬ್ಬರು ತಪ್ಪು ಮಾಡಿರಬಹುದು, ಇಲ್ಲ ಎಂದು ಹೇಳಲಾರೆ, ಅದನ್ನು ಆರಿಸಿ, ಫಿಲ್ಟರ್ ಮಾಡಿ ಮೂರು ನಾಲ್ಕು ಪರೀಕ್ಷೆಗಳನ್ನೂ ಮಾಡಿ, ನಂತರ ನೇಮಕಾತಿ ಮಾಡಿಕೊಳ್ಳುವ ಸರಕಾರವೇ ಹೇಳಬೇಕಷ್ಟೇ. ಇತರೆ ವರ್ಗದ ಮಕ್ಕಳಿಗೆ ಹೆಚ್ಚು ಪರೀಕ್ಷಾ ಶುಲ್ಕ ವಸೂಲು ಮಾಡಿ ಕೆಲವೊಂದು ವರ್ಗಕ್ಕೆ ಕಡಿಮೆ ಕೇಳಿದಾಗ ವಿದ್ಯಾರ್ಥಿಗಳೂ ಜಾತಿ ಪದ್ಧತಿ ವಿರುದ್ಧ ಸಿಡಿದೇಳುತ್ತಾರೆ! ಆದರೆ ವ್ಯವಸ್ಥೆಯೇ ಹಾಗಿದೆಯಲ್ಲ! ಅದಕ್ಕೆ ಸರಕಾರವೇ ಉತ್ತರಿಸಬೇಕಿದೆ! ಖಾಸಗಿ ಶಾಲೆಗಳಲ್ಲೂ ಓದಿರುವ, ಬೋಧಿಸಿರುವ ಅನುಭವದ ಪ್ರಕಾರ ಅಲ್ಲೂ ಈ ತರಹದ ಶಿಕ್ಷಕರು ಇಲ್ಲವೆಂದಲ್ಲ! ಈಶಾನ್ಯದ ಶಿಕ್ಷಕರು ಕಲಿಸುವ ಆಂಗ್ಲ ಭಾಷೆಯ ಪ್ರೊನನ್ಸಿಯೇಶನ್ ಅನ್ನು ಅರ್ಥೈಸಿಕೊಳ್ಳಲಾರರು ನಮ್ಮ ಮಕ್ಕಳು! ಕೇರಳದ ಆಂಗ್ಲ ಶಿಕ್ಷಕರ ತ ಕಾರ,ದ ಕಾರಗಳ ಪ್ರೊನನ್ಸಿಯೇಶನ್ ಗುರುತಿಸುವುದೂ ಕಷ್ಟ ಸಾಧ್ಯ!

    ಕಷ್ಟ, ತಪ್ಪುಗಳು ಎಲ್ಲಾ ಕ್ಷೇತ್ರಗಳಲ್ಲಿ, ಎಲ್ಲಾ ಕಡೆ ಆಗುತ್ತವೆ. ಖಾಸಗಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಕೌಟುಂಬಿಕ ಹಿನ್ನೆಲೆಗೂ, ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಕೌಟುಂಬಿಕ ಹಿನ್ನೆಲೆಗೂ, ಭಾಷೆಗೂ ವ್ಯತ್ಯಾಸವಿಲ್ಲವೇ? ವಿದ್ಯಾವಂತ ಪ್ರಜೆಯೊಬ್ಬ ನನ್ನ ಮಗುವು ಕುಡಿದು ಬಂದು ತನ್ನ ಮಗುವಿನೆದುರು ಬೇಡದ ಕೆಟ್ಟ ಶಬ್ದಗಳನ್ನಾಡುವ ಕೊಳಕು, ಸ್ವಚ್ಛತೆಯ ಕಡೆಗೆ ಗಮನ ಕೊಡದ, ಮಕ್ಕಳ ಜೊತೆ ಸೇರದೆ, ತಮ್ಮಂತೆಯೇ ವಿದ್ಯಾವಂತರ ಮಗುವಿನೊಂದಿಗೆ ಸೇರಿ ಸ್ವಚ್ಛತೆ, ಶಿಸ್ತು, ಉತ್ತಮ ಭಾಷೆ,ಗುಣ ಕಲಿಯಲೆಂದು ಪೋಷಕರು ಬಯಸುವುದಿಲ್ಲವೇ? ಸಮಾಜದಲ್ಲಿ ಜನರ ಬದುಕಿನ ಸ್ತರಗಳಿಲ್ಲವೇ? ಇವೆಲ್ಲವುಗಳ ಬಗ್ಗೆ ಮಾತನಾಡಬೇಕೇ ಹೊರತು ಕೇವಲ ಒಂದಿಬ್ಬರು ಮಾಡಿದ ತಪ್ಪಿಗೆ ಇಡೀ ಸರಕಾರಿ ಶಿಕ್ಷಕರ ಸಮುದಾಯವನ್ನು ದೂರುವುದು ತಪ್ಪಲ್ಲವೇ? ಎಂ.ಎಸ್ಸಿ, ಎಂ.ಎ, ಪಿ.ಹೆಚ್ ಡಿ ಮಾಡಿದ ಶಿಕ್ಷಕರೂ ಪ್ರಾಥಮಿಕ ಶಾಲೆಗಳಲ್ಲಿ ಕಲಿಸುತ್ತಿಲ್ಲವೇ?

@ಪ್ರೇಮ್@


ಪ್ರೇಮಾ ಉದಯ್ ಕುಮಾರ್

ಶಿಕ್ಷಕರು, ಕವಯತ್ರಿ, ಅಂಕಣಕಾರರು, ಬರಹಗಾರರು

ಸ.ಪ.ಪೂ.ಕಾಲೇಜು, ಐವರ್ನಾಡು

ಸುಳ್ಯ ತಾಲೂಕು

ದ.ಕ 574249

Premauday184@gmail.com 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ