ನೆನಪು
ದಟ್ಟ ಹಸಿರಿನ ಪಚ್ಚೆ ಸಿರಿ ಕಾನನದ
ನಡುವೆ ಕೊರೆದು ಜನರೇ ನಿರ್ಮಿಸಿದ
ರಸ್ತೆಯೊಳು ಬಸ್ಸಿನಲಿ ನಾನು ಕುಳಿತಿದ್ದೆ
ನಿನ್ನೊಡನೆ ಸವಿ ಕನಸ ಪೋಣಿಸುತಲಿ ಇದ್ದೆ//
ಒಂದಲ್ಲ ಒಂದು ಸಿಹಿದಿನವು ಬರಲಿ
ನಾವಿಬ್ಬರೇ ಕೈ ಹಿಡಿದು ಓಡಾಡುತಿರಲಿ
ತನುಮನವು ಹಿತವಾಗಿ ಸುಖದಿ ತೇಲುತಲಿರಲಿ
ನನ್ನ ದೇಹದ ಕಣ ಕಣವೂ ನವಿರೇಳುತಲಿರಲಿ//
ನಿನ್ನೊಲುಮೆ ಪಡೆವಂಥ ಕಾತರವು ಎನಗೆ
ಪ್ರೀತಿ ಮಾರ್ಗಕೆ ಮೈಮನದಾತುರದ ಎಡೆಗೆ
ನೀ ಬಾಳಿನಲಿ ಬರುವ ಕನಸದದು ನಿರಂತರ
ನಿನ್ನೊಡನೆ ಕಳೆದ ಕ್ಷಣ ಕ್ಷಣವು ಅಜರಾಮರ!//
ನೆನಪ ಮೂಟೆಯ ಬಿಚ್ಚಿ ಹರಟು ನನಗಿಷ್ಟ
ನೀ ಬರದಿರೆ ಬಾಳು ಆಗುವುದು ಸಂಕಷ್ಟ!
ನಮ್ಮಿಬ್ಬರನು ಕರೆದಿಹುದು ಆ ಸುಂದರ ಬೆಟ್ಟ,
ನೀ ಬಂದರೆ ಬಾಳಲಿ ನನಗಿಲ್ಲವು ಕಷ್ಟ!//
ಮನದಿ ಹೃದಯದಿ ಜಾಗವೆಲ್ಲಿದೆ ಹೇಳು?
ನೀನೆ ಆವರಿಸಿರುವೆ ನರನಾಡಿಗಳಲು
ದೂರ ಹೋಗುವೆ ಹೇಗೆ ಬಂಧಿಸಿರುವೆನು ನಿನ್ನ
ನನ್ನ ಪ್ರೀತಿಯ ಪಾಶ ಬಿಡಬಹುದೆ ನಿನ್ನ?//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ