ನನ್ನ ಜೀವ-ಭಾವಕ್ಕೆ
ಭಾವನೆಯ ಭರಪೂರದಿ ಭರಿಸಿಹ ಭಾವಸಿರಿಯೇ
ಭಾವೈಕ್ಯತೆಯಿಂದಲಿ ಬದುಕುವುದ ಬಿಡಬೇಡ..
ಭಾವಿಸದಿರು ನೀನು ಬಾಳಲಿ ಬವಣೆಯೇ ಭವನ,
ಬಗೆಬಗೆಯ ಜೀವನವಿದು ಭಾವಗಳ ಮಿಲನ..
ಭೋರ್ಗರೆಯುವ ಶರಧಿ ಭಯವುಕ್ಕಿ ಹರಿದಂತೆ
ಭಾವಗಳೆ ಮೈದುಂಬಿ ಭವ್ಯತೆಯ ಮೆರೆದಂತೆ..
ಭೈರವಿಯ ಸ್ತುತಿಸುತ್ತ ಭಜನೆಯನು ಮಾಡುತ್ತಾ
ಭಾರತದ ಕೀರ್ತಿಯನು ಭೀಮನಂತೆ ಸಾರುತ್ತಾ..
ಬೀಳಿಸದೆ ಜೀವನವ ಬಿಂಬಿಸುತ ಭಾವಗಳ
ಬಿರುಬಿಸಿಲಿನ ಬಿರುಸಿಗೂ ಬೆಂಡಾಗದೆ ಬಳಲಿ...
ಬರಸಿಡಿಲಿನಾರ್ಭಟಕೆ ಬಳಗವನು ತೊರೆಯದೇ
ಬಾರೆನುತ ಕಷ್ಟಗಳ ಭಯವ ತೊರೆದು ಹೆದರದೇ..
ಬೇಧ ಭಾವವ ಮಾಡಿ ಬೇತಾಳದಂತಾಗದೇ
ಬೆಂಬಿಡದ ಪ್ರಯತ್ನದಲಿ ಯಶದಿ ಹಿಂದುಳಿಯದೇ..
ಭುವನೇಶ್ವರಿಯ ನೆನೆದು ಭವ ಸಾಗರವ ದಾಟಿ
ಬಹಳ ಬಯಕೆಯ ಬರಗಾಲದೆಡೆ ಬಿಸುಟು...
ಬೋಧಿಸತ್ವನ ಹಾಗೆ ಸತ್ಯ ಮಾರ್ಗದಿ ನಡೆದು
ಬಕ ಪಕ್ಷಿಯ ತೆರದಿ ಬಡ ಜೀವದಲಿ ನಡೆದು..
ಭಾವನೆಯು ಬೆಂಬಿಡದ ಬಳಗವಾಗಿರಲು ..
ಭಯದ ಮಾತೇಕಿನ್ನು ಬೆಂಗಾವಲಾಗಿರಲು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ