ಗೆಳತಿ ಧರಣಿಯೇ..
ನಲ್ಲೆ ತಿರೆಯೆ ನಿನ್ನ ಮೇಲೆ ಹೊಂಗನಸ ಕಾಣುತಿಹೆ
ನಿಲ್ಲೆ ಅಲ್ಲೆ ನಿನ್ನ ಹಸಿರು ಸೀರೆಯುಟ್ಟು ಹಾಗೆಯೇ,
ಮನುಜ ಬಂದನೆಂದು ಹೆದರಿ ಬಿಚ್ಚಿ ಬಿಸುಟ ಬೇಡವೇ,
ನಾನು ಇರುವೆ ನಿನ್ನ ಶೀಲ ರಕ್ಷಣೆಗೆ ಗೆಳತಿಯೇ//೧//
ನರನು ಬಂದು ನಿನ್ನ ಮೈಯ ಪರಚುತಿಹನು ವೇಗದಿ,
ನೀರೆ ನೀನು ನೋವ ಸಹಿಸಿ ಬಿದ್ದಿರುವೆ ತಾಳದೆ ಬೇಗುದಿ,
ಮಾತೆಯಲ್ಲು ಸದರ ತೋರೊ ಮನುಜನಿಹನು ಬಾಳುತ!
ತನ್ನ ಕತ್ತು ತಾನೆ ಹಿಡಿವ ಪ್ಲಾಸ್ಟಿಕನ್ನು ಎಸೆಯುತ//೨//
ಮಮತೆಯೆಂಬ ಗುಣವು ಇರದು ಅವನ ಪದಕೋಶದಿ,
ಹಣದ ದಾಹ, ಹೆಣ್ಣ ಮೋಹ ಇದುವೆ ಜಗದ ಕಾರ್ಯದಿ!
ನಾಳೆಯೆಂಬ ಕನಸೆ ಇಲ್ಲ, ಇಂದೇ ಬೇಕು ಎಲ್ಲವೂ,
ತಾನು ಮಾತ್ರ ಬದುಕಬೇಕು, ಸರ್ವ ವಸ್ತು ತನ್ನವು//೩//
ಕತ್ತಿಗೆಲ್ಲ ನೇಣು ಬಿಗಿದ ಹಾಗೆ ತಾನು ಸಾಯುವ,
ಗಾಳಿ, ನೀರು, ಆಹಾರ ಸಿಗದೆ ತಾನು ಒದ್ದಾಡುವ!
ತಪ್ಪು ಎಂದು ಅರಿತು ಕೂಡ ತಿದ್ದಲಾರ ತನ್ನನು,
ಜೀವ ಭಯದ ಮಾತೇ ಇಲ್ಲ, ಕೊಲ್ಲುತಿಹ ನಿನ್ನನು//೪//
ನಾನೇ ಮೇಲು ಪರರು ಎಲ್ಲ ಕೀಳು ಅವನ ಪಾಲಿಗೆ
ಅರಿವ ತಾನು ಪ್ರಾಣಿಗಿಂತ ಕಡೆಯು, ಬಳಸಿ ತನ್ನ ನಾಲಿಗೆ!
ಮಾತಿನಲ್ಲು ,ಕೆಲಸದಲ್ಲು ಇರಲೆ ಬೇಕು ಸತ್ಯವು,
ಇರದೆ ಇರೆ ಇಂಚಿಂಚಿಗೂ ಸಾಯಬೇಕು ನಿತ್ಯವೂ//೫//
@ಪ್ರೇಮ್@
01.07.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ