ಮಂಗಳವಾರ, ಜುಲೈ 9, 2019

1097. ಗಝಲ್-86

ಗಝಲ್-86

ಮಾನಸಿಕ ಅಸೌಖ್ಯದಿಂದ ಸ್ವಲ್ಪ ಚೇತರಿಕೆ ಕಂಡಿರುವೆ ಹುಜೂರ್,
ಮನವೆಂಬ ಮರ್ಕಟಕೆ ಬುದ್ಧಿ ಹೇಳುತಿರುವೆ ಹುಜೂರ್!

ಸರಿ, ತಪ್ಪು ಗ್ರಹಿಸಲು ಬರದು ಮನಕೆ ಸರಿಯಾದ ಕೋನದಲಿ,
ಸರ್ವರನೂ ಕಣ್ಮುಚ್ಚಿ ಸತ್ಯವೆಂದು ನಂಬಿ ನಿರಾಸೆಗೊಂಡಿರುವೆ ಹುಜೂರ್!

ಕೆಸರ ಮೇಲಿನ ಕಮಲವ ಮಾತ್ರ ನಾ ಗ್ರಹಿಸಿ ಬೀಗುತಿರುವೆ,
ಅಂದದ ಕಮಲವ ಕೀಳಲು ಹೋಗುತ ಕೆಳಗಿನ ಕೆಸರ ಮರೆತಿರುವೆ ಹುಜೂರ್!

ಒಳಿತೆಂದು ನಂಬಿ ಜೀವನದಿ ಹಲವರ ಗೆಳೆತನಕೆ ಆಸರೆ ಕೊಟ್ಟಿರುವೆ,
ಹೊಂಡದ ಕೆಳಗೆ ಕಾಲು ಹಾಕಿ ಕೆಸರು ಮಣ್ಣಿನಲಿ ಹೂತು ಹೋಗಿರುವೆ ಹುಜೂರ್!

ನಗುಮೊಗವು ಸತ್ಯವೆಂದು ತಿಳಿದು ನಾನದನು ನಿಜ ನಂಬಿರುವೆ,
ನಗುಮೊಗದ ಹಿಂದಿರುವ ವಿಕೃತ ಅಟ್ಟಹಾಸವ ಗ್ರಹಿಸಲು ನಾ ಸೋತಿರುವೆ ಹುಜೂರ್!

ತಾನು ಪರರೆನುವ ಬೇಧವಿರದೆ ಸತತ ಸತ್ಯದ ಬಾಳು ನಡೆಸಿರುವೆ,
ಮಲ್ಲಿಗೆ ಮಲ್ಲಿಗೆಯೇ, ಮರಮಲ್ಲಿಗೆ ಪರಿಮಳ ಬೀರದೆಂದು  ತಡವಾಗಿ ತಿಳಿದಿರುವೆ ಹುಜೂರ್!

ಪ್ರೀತಿ ಪ್ರೇಮವೆಂಬುದು ಜಗದ ಬಹುದೊಡ್ಡ ಮಾಟಮಂತ್ರವಾಗಿಹುದು,
ಪ್ರೇಮದಿಂದಲೆ ಜನ ಸ್ನೇಹದ ನಾಟಕವಾಡಿ ಕುತ್ತಿಗೆ ಕೊಯ್ಯುವುದ ಅರಿತಿರುವೆ ಹುಜೂರ್!
@ಪ್ರೇಮ್@
06.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ