ಹೆದರಬೇಡ ಮಗಳೇ
ಯಾವುದಕೂ ಹೆದರದಿರು, ಕಂಗೆಡದಿರು ಮಗಳೇ
ದೂಡಿಯಾರು ನಿನ್ನ ಕಂದಕಗಳ ಕೂಪದಲಿ,
ತವರು ಮನೆಯಲಿ ನಿನಗೆ ತರಹೇವಾರಿ ಕಟ್ಟಳೆಗಳು!
ದೇವರ ಕೋಣೆಗೆ ಪ್ರವೇಶ ನಿಷಿದ್ಧ!
ದೈವದ ಕೋಣೆಯ ಹೊಕ್ಕಬಾರದು!
ಭೂತದ ಗುಡಿಯ ಹತ್ತಿರವೂ ತೆರಳ ಬಾರದು!
ಹುಡುಗರೊಂದಿಗೆ ಮಾತು, ಗೆಳೆತನ ಬೇಡವೇ ಬೇಡ!
ಮುಗಿಯಲಿಲ್ಲ ಕಟ್ಟಳೆಗಳು ಇನ್ನೂ!
ಮದುವೆಯಾದ ಬಳಿಕ ಮತ್ತಷ್ಟು!
ಆಷಾಢದಲಿ ಅತ್ತೆಯ ಮುಖವ ನೋಡಬಾರದು!
ಭಾವನಿಗೆ ಮುಖ ತೋರಬಾರದು!
ಸೆರಗಿನಿಂದ ನಿನ್ನ ಮುಖವನೂ ಮುಚ್ಚಿಕೊಂಡಿರು!
ಮತ್ತಷ್ಟು! ಮಗದೊಂದಿಷ್ಟು! ಪ್ರತಿಯೋರ್ವರ ಕಟ್ಟಳೆ!
ಹಲವು ಪತಿಯರ ತಾಕೀತು!
ಸೀರೆಯನೇ ಉಡಬೇಕು, ವಿವಿಧ ಧಿರಿಸು ಸಲ್ಲದು!
ಹಣೆಗೆ ಕುಂಕುಮವನೇ ಇರಿಸು, ಸ್ಟಿಕರ್ ಬೇಡವೇ ಬೇಡ!
ಅತ್ತೆಯೆದಿರು ಮಾತನಾಡಬಾರದು!
ತವರುಮನೆಯ ಹೊಗಳಬಾರದು!
ಮಾವನೊಡನೆ ಸಲಿಗೆ ಬೇಡ!
ನೀ ಕಂದಕದೊಳಗೆ ಜಾರಬೇಡ!
ಹಲವು ಕಟ್ಟಳೆಗಳು ನಿನ್ನ ರಕ್ಷಣೆಗಿರಬಹುದು,
ಎಲ್ಲವ ಕಣ್ಣುಮುಚ್ಚಿ ನಂಬದೆ,
ಸರಿತಪ್ಪುಗಳ ಅರ್ಥೈಸಿ ನಡೆ ಮಗಳೇ..
@ಪ್ರೇಮ್@
09.07.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ