ಸೋಮವಾರ, ಜುಲೈ 15, 2019

1121. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-51

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-51

ಹಾಯ್ ಫ್ರೆಂಡ್ಸ್, ಬರ್ತಾ ಇರುವ ಮಳೆಗೆ ಬೆಚ್ಚಗೆ ಒಲೆ ಬುಡದಲ್ಲಿ ಕೂತು ಬಿಸಿ ಕಾಯಿಸ್ತಾ ಅಮ್ಮ ಮಾಡಿಕೊಡುವ ಬಿಸಿ ಬಿಸಿ ರೊಟ್ಟಿಯೋ, ನೀರ್ ದೋಸೆಯೋ ಒಂದೊಂದೆ ಖಾಲಿ ಮಾಡೋ ಆ ಕ್ಷಣ ಈಗ ಇರಬೇಕಿತ್ತು ಅನ್ನಿಸಲ್ವಾ? ಈಗ ಒಲೆಯೂ ಇಲ್ಲ, ಅಷ್ಟು ಫ್ರೀ ಆಗಿರೋ, ಪೇಶೆನ್ಸ್ ಇರೋ ಅಮ್ಮಂದಿರೂ ಕಡಿಮೆ! ಆದರೂ ಮಿಕ್ಸೀಲಿ ರುಬ್ಬಿ, ಗಂಟೆ ಗಟ್ಟಲೆ ನಿಂತು, ಸ್ಟೌ ನಲ್ಲಿ ದೋಸೆ ಮಾಡಿ ರಮಿಸಿ, ಬೈದು, ಮುದ್ದಾಡಿ, ಮೊಬೈಲ್ ತೋರಿಸಿ ಮೆಲ್ಲನೆ ತಿನ್ನಿಸೋ ಅಮ್ಮನ ಪ್ರೀತಿ ಮಾತ್ರ ಎಳ್ಳಷ್ಟೂ ಕಡಿಮೆ ಆಗಿಲ್ಲ ಅಲ್ವಾ? ಹೌದು, "ಹೆತ್ತವರಿಗೆ ಹೆಗ್ಗಣ ಮುದ್ದು " ಅಂತ ಗಾದೇನೇ ಇಲ್ವ? ಹೆತ್ತ ತಾಯಿಗೆ ತನ್ನ ಮಗು ಅದೇನೇ ಆಗಿರಲಿ ಅದು ಪ್ರೀತಿಯ ಖನಿ!
    ಹೌದು, ಪ್ರಪಂಚದಲ್ಲಿ ಯಾರ ದೇಹದ ಆಕಾರವೂ ಒಂದೇ ಸಮನಾಗಿಲ್ಲ, ಮನುಷ್ಯ ರೂಪಿ ಮಾನವರ ಅಂಗಾಂಗ, ದೇಹ ತೂಕ, ಎತ್ತರ, ಮೈಕಟ್ಟು, ಕಣ್ಣು, ಮೂಗು, ಮುಖ, ಸ್ವರ, ತುಟಿ, ಹಣೆ,ಕೂದಲು, ಕೈ ಬೆರಳಿನ ಗೆರೆಯಲ್ಲೂ ವ್ಯತ್ಯಾಸ! ಅಬ್ಬಾ! ದೇವನದು ಅದೆಂತಹ ಸೃಷ್ಟಿ! ಆದರೂ ಪ್ರಪಂಚದಲ್ಲಿ ಒಂದೇ ತರಹ ಇರುವ ಏಳು ಜನರಿರುತ್ತಾರಂತೆ! ಆಶ್ಚರ್ಯ ಅನ್ನಿಸಲ್ವಾ?
    ಕೆಲವರ ಕಾಲು ಉದ್ದ, ಉದ್ದ ಕೈ, ಕಪ್ಪು ಮೈ ಬಣ್ಣ, ಹಾಗೇನೇ ಬೆಳ್ಳಗೆ ಹಾಲಲ್ಲೇ ತೊಳೆದಿಟ್ಟಂಥ ಮೈ ವರ್ಣ, ಕಪ್ಪಿದ್ದರೂ ಲಕ್ಷಣವಾದ ಮತ್ತೆ ಮತ್ತೆ ನೋಡುವ ಎಂದೆಣಿಸುವ ಮುಖ, ಅಟ್ರಾಕ್ಟಿವ್ ಕಣ್ಣುಗಳು, ಮತ್ತೆ ಕೆಲವರು ತುಂಬಾ ಎತ್ತರವಾದರೆ, ಹಲವರು ತೀರಾ ಗಿಡ್ಡ, ಕೆಲವರು ತೀರಾ ಕಡ್ಡಿಯಾದರೆ, ಹಲವರು ತೀರಾ ದಪ್ಪ, ಇನ್ನು ಕೆಲವರದು ಎಲ್ಲದರಲ್ಲೂ ಸಾಧಾರಣ ಎನ್ನುವ ಸ್ಟೀಲ್ ಬಾಡಿ! ಯಾವುದು ಅಂದ, ಯಾವುದು ಚಂದ, ಯಾವುದು ಸರಿ..ಡಿಸೈಡ್ ಮಾಡುವುದು ಜೊತೆಗಿರುವವರ, ಅಂತರಂಗ ಅರಿತವರ ಕಣ್ಣುಗಳು!
  ಸಪೂರ, ಕಡ್ಡಿ ಸ್ಲಿಮ್ ಅಂತಾರಲ್ಲಾ ಹಾಗಿರುವವರು ಮಾತ್ರ ಒಳ್ಳೆಯವರು, ದಪ್ಪಗಿರುವವರು ಕೆಟ್ಟವರು ಎಂದು ನಾವ್ಯಾವತ್ತೂ ಡಿಸೈಡ್ ಮಾಡುವ ಹಾಗಿಲ್ಲ ಅಲ್ಲವೇ? ಏಕೆಂದರೆ ನಮ್ಮ ಗುಣಗಳನ್ನು ನಿರ್ಧರಿಸುವುದು ನಮ್ಮ ದೇಹವಲ್ಲ, ಮನಸ್ಸು! ಡಾ. ಎ.ಪಿ.ಜೆ ಅಬ್ದುಲ್ ಕಲಾಮ್ ರವರು ಕುಳ್ಳರಾಗಿದ್ದರು, ಅಮಿತಾಬ್ ಬಚ್ಚನ್ ತುಂಬಾ ಎತ್ತರವಾಗಿದ್ದಾರೆ, ಕಿರಣ್ ಬೇಡಿ ಮೀಡಿಯಂ ಫಿಟ್ಟೆಸ್ಟ್, ಕ್ರಿಕೆಟ್ ಮಾಂತ್ರಿಕ ಸಚಿನ್ ಕೂಡಾ ಹೆಚ್ಚು ಎತ್ತರವಾಗಿಲ್ಲ ! ಅಟಲ್ ಬಿಹಾರಿ  ವಾಜಪೇಯಿಯವರಿಗೆ ತಾನು ದಪ್ಪ ಅನಿಸಲಿಲ್ಲ! ರೆಮೋರವರ ಕಂಠಕ್ಕೆ ಅವರ ದೇಹದ ಗಾತ್ರ ಅಡ್ಡಿ ಬರಲಿಲ್ಲ, ಪಿ.ಟಿ. ಉಷಾ, ಕರ್ಣಮ್ ಮಲ್ಲೇಶ್ವರಿಯವರ ಸಾಧನೆಗೆ ದೇಹದ ಬಣ್ಣ ಅಡ್ಡಿಯಾಗಲಿಲ್ಲ!
   ಇದು ಅಂಗಾಂಗ ಸರಿ ಇದ್ದು ಸಾಧಿಸಿದವರ ಮಾತಾಯಿತು! ದೇವರು ಹಲವರನ್ನು ದೈಹಿಕವಾಗಿ ಚಾಲೆಂಜ್ಡ್ ಆಗಿ ಸೃಷ್ಠಿಸಿರುವರು!ಅವರೂ ಯಾರೂ ಕಡಿಮೆಯಿಲ್ಲ ಸಾಧನೆಯಲ್ಲಿ! ಕಣ್ಣು ಕಾಣದ ಅಪ್ರತಿಮ ಗಾಯಕರು, ಕಾಲೇ ಇಲ್ಲದ ನೃತ್ಯಗಾರರು, ಕೈಗೆಳೇ ಇಲ್ಲದೆ ತನ್ನೆಲ್ಲಾ ಕೆಲಸಗಳ ಕಾಲಲ್ಲೇ ಪೂರೈಸುವ ಮಹಾನ್ ದೃಢಚಿತ್ತರು! ವಾವ್!ಮನಸ್ಸಿನಲ್ಲಿ ದೃಢ ಸಂಕಲ್ಪವಿದ್ದರೆ ದೈಹಿಕವಾಗಿ ಹೇಗಿದ್ದರೂ ಸಾಧಕನಾಗುವನು! ವೀಕ್ ಮೈಂಡ್ ಹೊಂದಿದ ಸೋಮಾರಿ ಚೆನ್ನಾಗಿ ತಿಂದು ದಷ್ಟಪುಷ್ಟನಾದರೂ ನಾಲಾಯಕ್ಕು!
       ಮಾನವನಿಗೆ ಅತಿ ಮುಖ್ಯವಾದದ್ದು ಅವನ ಮನಸ್ಸು ಮತ್ತು ಆಲೋಚನೆಗಳು! "ನೀವಂದುಕೊಂಡಂತೆ ನೀವು ಬದುಕುವಿರಿ, ಯಾರಿಗೆ ಯಾವುದೂ ಅಸಾಧ್ಯವಲ್ಲ" ಎಂದು ನೆಪೋಲಿಯನ್ ಹೇಳಿದಂತೆ ಯಾವ ವೈಕಲ್ಯವಿದ್ದರೂ ಸರಿ, ಮನಸ್ಸಿನ ವೈಕಲ್ಯವಿರಬಾರದು ಅಷ್ಟೆ!
    ಕಣ್ಣು ಕಾಣದವರೂ ಪ್ರಪಂಚದ ಅತಿ ಎತ್ತರ ಶಿಖರವಾದ ಹಿಮಾಲಯ ಏರಿಲ್ಲವೇ? ಕಾಲುಗಳಿಲ್ಲದವರೂ ಪ್ಯಾರಾ ಓಲಿಂಪಿಕ್ ನಲ್ಲಿ ಓಡಿ ಪದಕ ಗಳಿಸಲಿಲ್ಲವೇ? ಬೆನ್ನು ಮೂಳೆ ತುಂಡಾಗಿ, ವರ್ಷಗಟ್ಟಲೆ ಹಾಸಿಗೆಯಲ್ಲೆ ಕಳೆದು ತದನಂತರ ವೀಲ್ ಚೇರ್ ನಲ್ಲೆ ಮೋಟಿವೇಟರ್ ಆಗಿ ಕೆಲಸ ಮಾಡುತ್ತಿರುವ ಅದೆಷ್ಟು ಜನರನ್ನು ನಾವು ನಿತ್ಯ ಸಾಮಾಜಿಕ ಜಾಲ ತಾಣಗಳಲ್ಲಿ ನೋಡಿಲ್ಲ? ಕೈಗಳಿಲ್ಲದೆಯೇ ಕಾರ್ ಚಲಾಯಿಸುವ, ಅಷ್ಟೇಕೆ ವಿಮಾನವನ್ನೂ ಹಾರಿಸುವ ಜೆಸ್ಸಿಕಾ ಕಾಕ್ಸ್ ಬಗ್ಗೆ ನೀವು ಕೇಳಿಲ್ಲ, ನೋಡಿಲ್ಲವಾದರೆ ಇಂದೇ ಗೂಗಲ್ ನಲ್ಲಿ ಹುಡುಕಿ! ಇವರೆಲ್ಲರ ಮುಂದೆ ಎಲ್ಲಾ ಸರಿಯಿರುವ ನಾವುಗಳು ನಾನು ದಪ್ಪವೆಂದು ಊಟ ಬಿಟ್ಟರೆ, ನಾನು ಸಪೂರವೆಂದು ದಿನಕ್ಕೆ ಹತ್ತಾರು ಬಾರಿ ತಿಂದರೆ ಸರಿಯಾಗುವೆವೇ? ದೇವರು ತಾನೇ ನಿರ್ಧರಿಸಿ ಅಪ್ಪ ಅಮ್ಮನ ಸಹಾಯದಿಂದ ನಮಗೊಂದು ರೂಪುಕೊಟ್ಟು ಸೃಷ್ಟಿ ಮಾಡಿ ಏನನ್ನೋ ಸಾಧಿಸಲು ಭೂಮಿಗೆ ಕಳಿಸಿರುವನು. ತನ್ನ ವರವಾಗಿರುವ ದೇಹವನ್ನು ಪ್ರೀತಿಸಿ ಅದನ್ನು ದಂಡಿಸಿ ತನ್ನ ಗುರಿ ಸಾಧಿಸುವ ಬದಲು, ದೇಹದ ಆಕಾರವನ್ನು ಬದಲಾಯಿಸುವುದರಲ್ಲೆ ಸಮಯ ಕಳೆದರೆ ಹೇಗೆ? ಬಾಡಿ ಬಿಲ್ಡರ್ಸ್, ಸಿನೆಮಾ ನಟ ನಟಿಯರಿಗೆ ಅದು ಉಪಯೋಗವಾಗಬಹುದೇ ಹೊರತು ಇತರರಿಗೆ ಅವರವರ ಕೆಲಸ, ಸಾಧನೆಯ ಅವಶ್ಯಕತೆಯಿದೆಯೇ ಹೊರತು, ದೇಹವನ್ನು ಗಾತ್ರ, ಆಕಾರ ಮಾತ್ರ ನೋಡಿ ಪ್ರೀತಿಸುವವರು ಮೂರ್ಖರು! ನಾವು ಬದುಕಬೇಕಾಗಿರುವುದು ಒಳ್ಳೆಯ ಮನಸ್ಸುಗಳ ಜೊತೆಗೆ. ಒಳ್ಳೆಯ ಹೃದಯಗಳ ಜೊತೆಗೇ ಹೊರತು ವಕ್ರ ನಡಿಗೆ, ಮಣ ಭಾರದ ದೇಹ, ಮೆಳ್ಳಗಣ್ಣು ಇವುಗಳೆಲ್ಲ ನಾವ್ಯಾರೂ ನಾವೇ ಮಾಡಿಕೊಂಡದ್ದೂ ಅಲ್ಲ, ನಮ್ಮ ಸಾಧನೆಗದು ಅಡ್ಡಿ ಬರುವುದೂ ಇಲ್ಲ!
   ವಿಶಾಲ ಹೃದಯವಿರಲಿ, ನಮ್ಮ ಗುರಿಯ ಕಡೆಗೆ ದೃಷ್ಟಿಯಿರಲಿ, ದೈವಭಕ್ತಿಯಿರಲಿ, ಸಾಧನೆಯ ಛಲವಿರಲಿ ಬಾಳಿನಲಿ! ದೇಹದ ಆಕಾರದ ಬಗೆಗಿನ ತಾತ್ಸಾರವಲ್ಲ, ಒಂದಲ್ಲ ಒಂದು ದಿನ ಮಣ್ಣಾಗುವ ದೇಹ ನಮ್ಮದು, ಮನಸ್ಸಿಗೆ ಆಕಾರವಿಲ್ಲ, ಗುಣ ಮಾತ್ರ! ಸಾಧನೆಗೆ ದೇಹವೆಂದೂ ಅಡ್ಡಿಯಾಗದು! ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ