ಗುರುವಾರ, ಜೂನ್ 25, 2020

1482. ಪರಿವರ್ಧಿನಿ ಷಟ್ಪದಿ

ಪರಿವರ್ಧಿನಿಯ ಪ್ರಯತ್ನ

ಚಿ-ನ್ನಾರಿ

ಬಂದಳು ಸುಂದರಿ ಅಂಗಳದೆದುರಿಗೆ
ತಂದಳು ಕರದಲಿ ಹೂವಿನ ಬುಟ್ಟಿಯ
ಬೆಂದಳು ಒಡನೆಯೆ ಕಾಲಿಗೆ ಚುಚ್ಚಿದ ಮುಳ್ಳಿನ ನೋವಿನಲಿ

ನಿಂದಳು ಮರುಗುತ ನೋವಲಿ ಮುಲುಕುತ
ಬಂಧಿತ ಮುಳ್ಳದು ಬಾರದು ತೆಗೆಯಲು
ಗೊಂದಲ ಮನದೊಳ ಗೇನದು ಮಾಡಲಿ ಯಿಲ್ಲಿಹೆಯೊಬ್ಬಳೆ ನಾ...

ಕಾಲನು ಎತ್ತುತ ಕೈಯಲ್ಲಿ ಹಿಡಿಯುತ
ಹಾಲಿನ ಬಣ್ಣದ ಅಂಗಾಲ ಒತ್ತುತ
ಎಳೆಯುತ ಮುಳ್ಳಿನ ತುದಿಯನು ತಾನೂ ನೋವಲಿ ಅರಚಿದಳು...
@ಪ್ರೇಮ್@
26.06.2020

ಬುಧವಾರ, ಜೂನ್ 24, 2020

1480. ಮೀಸಲಾತಿ ಬೇಕೇ

ಮೀಸಲಾತಿ ಇನ್ನೂ ಬೇಕೇ?

   ಭಾರತವಿನ್ನೂ ಮುಂದುವರೆದಿಲ್ಲ, ಮುಂದುವರೆಯುತ್ತಿದೆ ಅಷ್ಟೆ. ಹಾಗಾಗಿ ಇಲ್ಲಿ ಬಹು ದೊಡ್ಡ ಕಂದಕ ಬಡವ ಸಿರಿವಂತರದ್ದು. ಅದರೊಡನೆ ಹಳ್ಳಿಗರು ಮತ್ತು ನಗರವಾಸಿಗಳದ್ದು. ನಗರವಾಸಿಗಳಿಗೆ ವಿದ್ಯೆಯ ಮಹತ್ವ ತಿಳಿದಿದೆ, ಹಲವಾರು ಕಲಿಕೆಗೆ ಅವಕಾಶವಿದೆ, ಇತರರಿಂದ ಸಹಾಯವೂ ಸಿಗುತ್ತದೆ. 
    ಆದರೆ  ಹಳ್ಳಿಯ ಬಡ ಕೂಲಿ ಕಾರ್ಮಿಕರ ಹಲವಾರು ಮಕ್ಕಳಿಗೆ ಉನ್ನತ ಶಿಕ್ಷಣದ ಬಗ್ಗೆ, ಅದರ ಉಪಯೋಗದ ಬಗ್ಗೆ ತಿಳುವಳಿಕೆ ಇಲ್ಲ. ಕೆಎಎಸ್,  ಐಎಎಸ್ ಪರೀಕ್ಷೆಗಳ ರ್ಯಾಂಕ್ ವಿಜೇತರ ಪಟ್ಟಿಯಲ್ಲಿ ಕಾಣ ಸಿಗುವುದು ಹಳ್ಳಿಯ ಒಂದೆರಡು ತುಂಬಾ ಕಷ್ಟ ಪಟ್ಟ ಪ್ರತಿಭೆಗಳು ಮಾತ್ರ. ಹಾಗೆಯೇ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು ನಾಯಿಕೊಡೆಯಂತೆ ತಲೆಯೆತ್ತಿ ನಿಂತಿದ್ದರೂ ಪ್ರತಿ ಹಳ್ಳಿಗಳಲ್ಲೂ ವೈದ್ಯರಿರುವರೇ? ಆ ಕಾಲೇಜುಗಳಲ್ಲೂ ಬೆರಳೆಣಿಕೆಯ ಹಳ್ಳಿಗರು ಮ ಾತ್ರ ಇರುತ್ತಾರೆ. 
  ಇವನ್ನೆಲ್ಲ ಗಮನಿಸಿದಾಗ ರೂರಲ್ ಕೋಟಾ ಅಥವಾ ಗ್ರಾಮೀಣ ಅಭ್ಯರ್ಥಿಗಳಿಗೆ ಮೀಸಲಾತಿ ಬೇಡವೇ? ತಂದೆ-ತಾಯಿ ಇಬ್ಬರೂ ಅನಕ್ಷರಸ್ಥರಾಗಿದ್ದು ಹಗಲಿಡೀ ದುಡಿದು ಸಂಜೆ ಕುಡಿದು ಜಗಳವಾಡುವ ಸಮಯದಲ್ಲೂ ಬಡತನವ ಮೆಟ್ಟಿ ತಾನೇ ಪರೀಕ್ಷೆಗೆ ಓದಿ ಬರೆದ ಮಗುವಿಗೂ, ಲಕ್ಷಗಟ್ಟಲೆ ಟ್ಯುಟೋರಿಯಲ್ ಕಾಲೇಜಿಗೂ,  ಖಾಸಗಿ ಶಾಲೆಗೂ ಸುರಿದು ಕಲಿತ ಮಗುವಿಗೂ ವ್ಯತ್ಯಾಸವಿಲ್ಲವೇ? ಆ ಕಷ್ಟಪಟ್ಟ ಕಂದನಿಗೂ ಅವಕಾಶ ಸಿಗಬಾರದೇ?

 ಹೇಳಿ ಕೇಳಿ ಭಾರತ ಜಾತ್ಯಾತೀತ ರಾಷ್ಟ್ರ. ಜನರು ಜಾತಿ ಮರೆತು ಅಂತರ್ಜಾತಿ ವಿವಾಹಗಳಾಗುತ್ತಿದ್ದರೂ ಆಡಳಿತದ ಚುಕ್ಕಾಣಿ ಹೊತ್ತವರೇ ಓಟಿಗಾಗಿ, ಕಛೇರಿ ಕಡತಗಳಿಗಾಗಿ, ಮಗುವೊಂದು ಶಾಲೆಗೆ ಸೇರುವಾಗಲೂ ಜಾತಿ ಆದಾಯ ಪ್ರಮಾಣ ಪತ್ರ ಸಲ್ಲಿಸಲೇ ಬೇಕು. ಹಾಗಿರುವಾಗ  ತೆಲವೊಂದು ಜಾತಿಗೆ ಇಂತಿಷ್ಟು  ವಿನಾಯಿತಿ ಕೊಡದೆ ಹೋದರೆ ತಪ್ಪಾದೀತು. ಆ ದಿಸೆಯಲ್ಲಾದರೂ  ಹಳ್ಳಿಯ ಬಡ ಮಗುವಿಗೆ ಅವಕಾಶ ಸಿಕ್ಕೀತಲ್ಲವೇ?

ಲಂಚವೇ ಮುಖ್ಯವಾದ ಕಸುಬಾದ ಭಾರತದಲ್ಲಿ ವಿನಾಯಿತಿಗಳಿರದಿದ್ದರೆ ಸಿರಿವಂತ ಜನ ದುಡ್ಡಿನಿಂದ ಅಂಕಗಳನ್ನು ಪಡೆದು ತಾವೇ ಮೆರೆಯುವುದಿಲ್ಲವೇ? ಆಗ ಬಡವರಿಗೆ ಅವಕಾಶ ಸಿಗುವುದೇ?
 
ಮಹಿಳೆಯರಿಗೆ ಮೀಸಲಾತಿ ಬೇಕೇ ಬೇಕು, ಕಾರಣ ಇಂದಿಗೂ ಇರುವುದು ಪುರುಷ ಪ್ರಧಾನ ಸಮಾಜ. ವರದಕ್ಷಿಣೆ, ವರೋಪಚಾರ, ವರದಕ್ಷಿಣೆಗಾಗಿ ಕೊಲೆ, ಮಾನಸಿಕ ಹಿಂಸೆ, ಪೀಡನೆಗಳಿಂದ ಮಹಿಳೆಯಿನ್ನೂ ಹೊರತಾಗಿಲ್ಲ. ಲಾಯರ್, ಜಡ್ಜ್, ಪೊಲೀಸ್, ಪ್ರೊಫೆಸರ್ ಎಂದು ಹೊರಗೆ ದುಡಿದರೂ ಮನೆಯಲ್ಲಿ ಗಂಡ, ಅತ್ತೆ, ನಾದಿನಿ, ಭಾವನವರ ಕಾಟ ತಡೆದು, ತುಟಿಕಚ್ಚಿ ಸಹಿಸಿ ಬದುಕುವ ಮಹಿಳೆಯರೆಷ್ಟಿಲ್ಲ? ಇನ್ನು ಭಾರತದ ಕಾನೂನಿನ ಬಗ್ಗೆ, ಅಲ್ಲಿನ ದುರ್ಗಂಧದ ಬಗ್ಗೆ ಗೊತ್ತಿರುವಾಗ ಒಂಟಿ ಹೆಣ್ಣೊಬ್ಬಲು ಕಾನೂನಿನ ಮೊರೆ ಹೊಕ್ಕಿ ಹೋದರೆ ಅಲ್ಲಿರುವ ಬೇಲಿಯೇ ಎದ್ದು ಹೊಲ ಮೇಯುತ್ತದೆ! ಮೀಡಿಯಾ ಇರುವ ವಿಚಾರವನ್ನು ತಿರುಚಿ ಪ್ರಸಾರ ಮಾಡುತ್ತದೆ! ಹೀಗಿರುವಾಗ ಹೆಣ್ಣಿಗೆ ಸದೃಢತೆಯಿಂದ ತನ್ನ ಜೀವನ ನಡೆಸಲು ಮಹಿಳಾ ಮೀಸಲಾತಿ ಅಡಿಯಲ್ಲಾದರೂ ಕೆಲಸ ದೊರೆತು, ತನ್ನ ಕಾಲ ಮೇಲೆ ತಾನು ನಿಂತು, ದಿಟ್ಟಳಾಗಿ, ಸ್ವತಂತ್ರ ಬದುಕು ಅನಿವಾರ್ಯವಲ್ಲವೇ?

ಇನ್ನು ಜಾತಿಗಳ ಬಗ್ಗೆ. ಆಯಾ ಜಾತಿಗಳಿಗೆ ಅದರದ್ದೇ ಆದ ಸಂಸ್ಕೃತಿಯಿದ್ದು ಸರಕಾರದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪಟ್ಟಿಯಿದೆ. ಬುಡಕಟ್ಟು ಜನಾಂಗಗಳು ಹಲವು ಇನ್ನೂ ಕಾಡಲ್ಲೇ ಇವೆ. ಹಾಡುಗಾರ ಹನುಮಂತನ ಜೀವನದ ಬಗ್ಗೆ ನಾವು ನೋಡಿ, ಕೇಳಿ ತಿಳಿದವರಾಗಿದ್ದೇವೆ. ಅಂತೆಯೇ ಅಂತಹ ಜನರಿಗೆ ಮೀಸಲಾತಿ ಸಿಕ್ಕಿದಾಗ ಆ ಜನರೂ ಪ್ರಪಂಚದ ಮುಖ್ಯ ವಾಹಿನಿಗೆ ಬರಲು ಅವಕಾಶ ಸಿಗುವುದಲ್ಲವೇ? ಹಾಗಾಗಿ ಮೀಸಲಾತಿ ತಪ್ಪೆನಿಸುವುದಿಲ್ಲ. ಇದನ್ನು ಇನ್ನೂ ಒಂದಷ್ಟು ವರುಷಗಳವರೆಗೆ ಮಾಡಬಹುದು ಎಂಬುದು ನನ್ನ ಅನಿಸಿಕೆ.

ನಿಜವಾಗಿ ಬುದ್ಧಿವಂತನಾದವನಿಗೆ, ಉತ್ತಮ ಅಂಕಗಳನ್ನು ಪಡೆದವನಿಗೆ ಕೆಲಸ ಸಿಗಲೇ ಬೇಕು. ಮೀಸಲಾತಿಗಳು ಇದನ್ನು ತಡೆಯುತ್ತವೆ ಎಂಬ ಮಾತೂ ನಿಜ. ಆದರೆ ಲಂಚ ತಾಂಡವವಾಡುತ್ತಿರುವ ಇಲ್ಲಿ ಅಂಕಗಳೂ, ತಿದ್ದುವಿಕೆಯೂ ದುಡ್ಡಿನ ಮೇಲೇ ನಡೆದರೇ? ಆಗ ಸಿರಿವಂತರಿಗೇ ಎಲ್ಲಾ ದೊರೆತು ಬಡವ ಮತ್ತೂ ಬಡವನಾಗುವುದಿಲ್ಲವೇ? ಅದರ ಬದಲು ಅರ್ಹರಿರುವ ಎಲ್ಲಾ ವರ್ಗದ ಈ ಮೀಸಲಾತಿಯಿಂದಲಾದರೂ ಜನರಿಗೂ ಸಿಗಲಿ ಕೆಲಸಗಳು! ಮತ್ತೆ ಓದಿ ಬರೆದು ಉನ್ನತ ಅಂಕಗಳ ಪಡೆದವ ಮಾತ್ರ ಒಂದು ಕೆಲಸವನ್ನು ಚೆನ್ನಾಗಿ ನಿಭಾಯಿಸಬಲ್ಲ ಎನ್ನುವುದು ತಪ್ಪು. ಕೆಲವೊಮ್ಮೆ ಕಾಮನ್ ಸೆನ್ಸ್, (ಸಾಮಾನ್ಯ ಜ್ಞಾನ).ಅನುಭವಗಳೂ ಬೇಕಾಗುತ್ತವೆ. 
  
ಹುಟ್ಟಿನಿಂದಲೇ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಡಾಕ್ಟರ್  ಒಬ್ಬರಿಗೆ ಹಳ್ಳಿಯಲ್ಲಿ ಬಂದು ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದರೆ ಅವರ ಹಣದ ಲೆಕ್ಕಾಚಾರ ಹಳ್ಳಿಗರಂತೆ ಹತ್ತಿಪ್ಪತ್ತು ರೂಪಾಯಿಗಳಲ್ಲಿ ಇರುವುದಿಲ್ಲ, ಬದಲಾಗಿ ಸಾವಿರಗಳಲ್ಲಿರುತ್ತದೆ. ಕಡುಬಡವರಾದವರಿಗೆ ತಮ್ಮ ಆರೋಗ್ಯ ಸುಧಾರಿಸಲು ಸಾಧ್ಯವೇ? ಅದೇ ಹಳ್ಳಿಯಲ್ಲೇ ಬೆಳೆದು ವೈದ್ಯನಾದವನಿಗೆ ಆ ಪರಿಸರದ ಜನರ ಕಷ್ಟಗಳ ಸಂಪೂರ್ಣ ಅರಿವಿರುತ್ತದೆ. ಶಾಲೆಯ ಶಿಕ್ಷಕ ಉತ್ತಮ ಅಂಕ ಪಡೆದು ತನ್ನ ವಿಷಯದಲ್ಲಿ  ನುರಿತವನಾದರೆ ಸಾಲದು. ಆಟೋಟ ಸ್ಪರ್ಧೆಗಳು, ಸಭಾ ಸಮಾರಂಭಗಳು, ಬಂದವರ ಸ್ವಾಗತ, ಕಟ್ಟಡ ರಿಪೇರಿ, ಟಾಯ್ಲೆಟ್ ನಿಂದ ತರಗತಿ ಕೋಣೆ, ಶಾಲಾ ವಾತಾವರಣ ಸ್ವಚ್ಛತೆ, ಪರಿಸರ ಜಾಗೃತಿ, ಸ್ಥಳೀಯ ಪರಿಸರದ ಮಹತ್ವ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ವಿದ್ಯಾರ್ಥಿಗಳನ್ನು ವಿವಿಧ ಕಲಾ ಸ್ಪರ್ಧೆಗಳಿಗೆ ತಯಾರುಗೊಳಿಸುವ ಕಲೆಯನ್ನೂ ಅರಿತಿರಬೇಕು. ಇದಕ್ಕೆ ಅವನು ಚಿಕ್ಕಂದಿನಿಂದ ಸರ್ವ ಜಾತಿಯ ಜನರೊಂದಿಗೂ ಕಲೆತು, ಬೆಳೆದು ಕಲಿತಿರಬೇಕು. ಕೇವಲ ನಗರದ ಶಾಲೆಗಳಲ್ಲಿ ಓದಿ ಅಂಕಗಳ ಪಡೆದ ಮಾತ್ರಕ್ಕೆ ಬರುವುದಿಲ್ಲ. ಅದಕ್ಕೆ ಭಾರತದಲ್ಲಿ ಪ್ರತಿ ಕೆಲಸಕ್ಕೂ ಬೇರೆ ಬೇರೆ ಜಾತಿ, ಧರ್ಮ, ಹಳ್ಳಿ, ಪಟ್ಟಣ, ಮಹಿಳೆ ಹೀಗೆ ಒಂದಾಗಿದ್ದಾಗ ಮಾತ್ರ ವಿವಿಧತೆಯಲ್ಲಿ ಏಕತೆ ಕಾಣಲು ಸಾಧ್ಯ. ನೀವೇನಂತೀರಿ?
@ಪ್ರೇಮ್@
19.06.2020

1481. ಹೇಳಿ ಹೋಗು ಕಾರಣ

ಹೇಳಿ ಹೋಗು ಕಾರಣ

ಮಾರು ದೂರ ಹೋದೆಯ
ಮರಳಿ ನೀನು ಬಾರೆಯ
ಹೇಳಿ ಹೋಗು ಕಾರಣ
ಒಂಟಿತನವ ಸಹಿಸೆ ನಾ..

ಮನದಿ ಆಸೆ ಮೂಟೆ ಹೊತ್ತು
ಹೃದಯ ಕಾಯುತಿಹುದು
ಭಾವಗಳೇ ಉಕ್ಕಿ ಹರಿದು
ನುಗ್ಗಿ ಬರುವುದೇನು ಗೊತ್ತು?

ಕನಸ ಮೂಟೆ ಇಹುದು ಇಲ್ಲಿ
ನೀನು ಇರದ ವ್ಯರ್ಥವದು
ತಿರುಗಿ ನೋಡಿ ನಗೆಯ ಚೆಲ್ಲಿ
ಜೊತೆಗೆ ಬರಲು ಸಂತಸವದು..

ಕೋಪ ಒಂದು ನಿಮಿಷ ಮಾತ್ರ
ಪ್ರೀತಿ ಬದುಕು ಇರುವವರೆಗೆ
ತಾಳ್ಮೆ ಇಂದು ಜಗದ ಸೂತ್ರ
ಕೂಡಿ ಬಾಳೊ ಜಗತ್ತಿಗೆ..
@ಪ್ರೇಮ್@
25.06.2020

ಶುಕ್ರವಾರ, ಜೂನ್ 19, 2020

1434. ನೀತಿಕಲಿ

ನೀತಿ ಕಲಿ

ಕಲಿತು ಜಾಣನಾದೊಡೆ ಪ್ರಾರಂಭ ಬದುಕ ಮುಂಜಾವು
ಬುದ್ಧಿ ತಿಳಿದೊಡೆ ಆರಂಭ ನಿಜದ ಸಜವು..

ಮೇಲೇರಿ ಕೆಳಗಿಳಿವ ಜೋಕಾಲಿ
ಜೀಕಿದಷ್ಟು ಸಾಗುವ ಖಯಾಲಿ
ದೂಷಿಸಿ ಮುನ್ನಡೆವ ವೈಯ್ಯಾರ
ಹಿಂದೆ ಹಾಕಿ ಮುಂದೋಡುವ ಹುನ್ನಾರ..

ತದ್ರೂಪಿ ಸೃಷ್ಟಿಸುವ ಕಾತರ
ಸಾವಿಲ್ಲದ ಜೀವನದ ಆತುರ
ಕೊನೆಯ ಕ್ಷಣದವರೆಗೂ ಅಹಂಕಾರ
ಬರದು ಮನುಜಗೆ ಮಮಕಾರ!

ಸತ್ಯಕ್ಕೆ ಟೋಪಿ ಹಾಕಿದವ ಜಾಣ!
ಸುಳ್ಳು ಪದವಾಡದವ ಕೋಣ!
ದುಡ್ಡಿದ್ದವ ದೇವರಿಗಿಂತಲೂ ಮೇಲು
ದೇವಲದ ಆಫೀಸು, ಹುಂಡಿಗವನೇ ಕಾವಲು..

ಸರಳ ಬದುಕಿನವಗೆ ಕ್ರಾಂತಿ,
ಐಶಾರಾಮ ನಡೆಸಿದವನಿಗೆ ಕೀರ್ತಿ!
ನಾದ, ಸಂಗೀತ ಸರ್ವಗೆ ಸ್ಪೂರ್ತಿ
ಕಲಿ ನೀ ಶುದ್ಧವಾದ ನೀತಿ, ಪ್ರೀತಿ!
@ಪ್ರೇಮ್@
28.01.2020

1471.ಶಿಶುಪ್ರಾಸಗಳು

ಶಿಶುಪ್ರಾಸ

ನಾಯಿ ಬಂದಿತು
ಊಟ ತಿಂದಿತು
ಆಚೆ ಈಚೆ ನೋಡಿತು
ಓಡಿ ಹೋಯಿತು

ಬೆಕ್ಕು ಬಂದಿತು
ತಟ್ಟೆ ನೋಡಿತು
ಹಾಲು ನೆಕ್ಕಿತು
ಮ್ಯಾವ್ ಎಂದಿತು

ಕೋಳಿ ಬಂದಿತು
ಕೊಕ್ಕೋ ಎಂದಿತು
ಕೆಸರ ಕೆದಕಿತು
ಹುಳವ ತಿಂದಿತು..

ಹಾವು ಬಂದಿತು
ಬುಸ್ ಎಂದಿತು
ಮೊಟ್ಟೆಯೆಲ್ಲಾ ನುಂಗಿತು
ಮೆಲ್ಲ ಜಾರಿ ಹೋಯಿತು..
@ಪ್ರೇಮ್@
19.06.2020

ಗುರುವಾರ, ಜೂನ್ 18, 2020

1479. 2 ಟಂಕಾಗಳು

ಟಂಕಾ-1

ಮನದೊಳಗೆ
ಏನ ಬಚ್ಚಿಟ್ಟಿರುವೆ
ಮೌನ ಪುತ್ರನೇ
ಹೊರಗೆಡಹು ಎಲ್ಲ
ಆಗಲಿ ಬೇವಿಬೆಲ್ಲ

ಟಂಕಾ-2

ನೃತ್ಯಶಾಲೆಯು
ಜಗದಿ ನಲಿಯೋಣ
ಮುದದಿ ಬಾಳು
ಹೋಗಲಿದೆ ಒಮ್ಮೆ
ಬಂದ ದಾರಿ ಹುಡುಕಿ..
@ಪ್ರೇಮ್@
24.05.2020

1477. ತಪ

ಸುಲಭವಿಲ್ಲ ..

ತಪವ ಮಾಡ ಹೊರಟು ತನು
ತಡೆಯಲಾರ ಇಹದ ದಾಹ
ತಡೆಯದಾದ ಸುಖದ ಭಾವ
ತಡವರಿಸಿದ ಮಂತ್ರೋಚ್ಛಾರ
ತಪ್ಪು ತಪ್ಪು ವಕ್ರ ವಕ್ರ  ಗಮನ

ತೋರ್ಪಡಿಸದೆ ಸುಮ್ನೆ ಕುಳಿತ
ತಳಮಳವು ಮೈ ಮನದೊಳು
ತಡೆಯದಾದ ತಾಕಲಾಟಗಳನು
ತೋಳ ಗಟ್ಟಿ ಹಿಡಿದು ತಮ್ಮ
ತಳ್ಳ ತೊಡಗಿದ ಕ್ಷಣಗಳನು

ತಪಸ್ಸು ನೇರ ಹೋಗದೆ ಓರೆಯಾಯಿತು
ತಮಸ್ಸು ಬರದೆ ಕುಳಿತದ್ದು ಸುಮ್ಮನಾಯಿತು
ತಿನ್ನುವಂಥ ಜೀವವದು ಉಪವಾಸ ಇರುವುದೇ?
ತಪವು ಕುಳಿತುಕೊಂಡ ಹಾಗೆ ಸುಲಭವಿರುವುದೇ?

ತಪವ ಬಿಟ್ಟು ಓಡಿಹೋಗಿ ಮನೆಯ ಸೇರಿದ
ತಪವು ಎನಗೆ ಬೇಡವೆನುತ ತಾನೇ ಹೇಳಿದ
ತಮಾಷೆ ಮಾಡಿ ನಕ್ಕ ಹಾಗೆ ಅಲ್ಲ ಜೀವನ.
ಪ್ರತಿ ಕಾರ್ಯಕೂ ಕಠಿಣ ನಿರ್ಧಾರ ಬೇಕಿದೆ
ತತ್ವವರಿತು ಪಾಲಿಸುತ ಬಾಳಬೇಕಿದೆ.
@ಪ್ರೇಮ್@
26.05.2020

1476. ಊರು

ಊರು

ಆ ಊರೇ ವಿಚಿತ್ರ. ನಾಲ್ಕು ಸುತ್ತಲೂ ಕಾಡು, ಎತ್ತರದ ಪರ್ವತ. ಯಾರೂ ಊಹಿಸಲಾರದ ಊರದು. ಬಹಳ ಹಿಂದಿನ ಕಾಲದಲ್ಲಿ ಕಾಡಿನ ಮಧ್ಯೆ ಸಮತಟ್ಟಾದ ಆ ಜಾಗದಲ್ಲಿ ಆನೆಗಳು, ಹುಲ್ಲು ತಿನ್ನುವ ಪ್ರಾಣಿಗಳೇ ವಾಸಿಸುತ್ತಿದ್ದವಂತೆ. ಅಲ್ಲಿಗೆ ಜನರು  ಯಾರೂ ಹೋಗದ ಕಾರಣ, ಊರಿಗೆ ಅಲ್ಲಿನ ಆನೆಗಳು ಕೆಲವೊಮ್ಮೆ ನುಗ್ಗುವ ಕಾರಣ ಜನ ಆ ಊರಿಗೆ "ಆನೆಕಾಡು" ಎಂದೇ ಹೆಸರಿಟ್ಟರು.

  ಆದರೆ ಕಾಲಾನಂತರ ಜನರು ವಾಸಿಸದ ಜಾಗವಾವುದು ಹೇಳಿ? ಒಂದು ಕುಟುಂಬ ಅಲ್ಲಿ ಹೋಗಿ ಬೇರು ಬಿಟ್ಟಿತು. ಅಣ್ಣ ತಮ್ಮಂದಿರಲ್ಲಿ ಜಗಳವಾಗಿ ಮೂರು-ನಾಲ್ಕು ಮನೆಗಳಾದವು. ಅವರ ಮುಂದಿನ ತಲೆಮಾರಿನಲ್ಲಿ ಹತ್ತು-ಹನ್ನೆರಡಾಗಿ ತದನಂತರ ನಲವತ್ತು ಮನೆಗಳಾದವು. ಆದರೆ ಇಂದಿಗೂ ಅಲ್ಲಿಗೆ ಸರಿಯಾದ ರಸ್ತೆಗಳಿಲ್ಲ, ಮೊಬೈಲ್ ನೆಟ್ವರ್ಕ್, ಟವರ್ ಗಳಿಲ್ಲ. ಕುಡಿಯಲು ಕಾಡ ನೀರು. ತಿನ್ನಲು ಮನೆ ಸುತ್ತ ಬೆಳೆದ ಹಣ್ಣು, ತರಕಾರಿ, ಗೆಡ್ಡೆ ಗೆಣಸುಗಳೇ. 

  ಜನರಾದರೂ ತುಂಬಾ ಸ್ವಾಭಿಮಾನಿಗಳು, ಕಷ್ಟ ಸಹಿಷ್ಣುಗಳು, ತೋಟ ಗದ್ದೆಯೆಂದು ತಮ್ಮಷ್ಟಕ್ಕೆ ತಾವು ತುಂಬಾ ಸಂತಸ ಸಹಕಾರದಿ ಬದುಕುವವರು. ತಮ್ಮ ಮಕ್ಕಳನ್ನು ದೂರದ ಒಳ್ಳೆಯ ಶಾಲಾ ಕಾಲೇಜುಗಳಲ್ಲಿ ಓದಿಸಿ ನಗರಗಳಿಗೆ ಕೆಲಸಕ್ಕೆ ಕಳುಹಿಸಿದವರು. ಪ್ರತಿ ಕೂಳಿಗೂ ಕಷ್ಟಪಟ್ಟವರು.
  ದೇವರು ನೊಂದುಕೊಂಡರೋ, ಹೊಟ್ಟೆಕಿಚ್ಚು ಪಟ್ಟರೋ ಗೊತ್ತಿಲ್ಲ, ವರುಣನ ಅಟ್ಟಹಾಸ ಮಲೆನಾಡಿಗೆ ತಟ್ಟಿ, ಅದರೊಡನೆ ಆನೆಕಾಡಿನ ಜನರಿಗೂ ತಟ್ಟಿತು. ಭೂಕಂಪದ ಅನುಭವವಾಗಿ, ಗುಡ್ಡ ಸೀಳಿ ಹಲವಾರು ಜನರ ಮನೆ,ಆಸ್ತಿ ಪಾಸ್ತಿಗೆ ತೊಂದರೆಯುಂಟಾಗಿ ಜನಗಳು ಗಂಜಿ ಕೇಂದ್ರಗಳ ಸೇರುವಂತಾಯ್ತು. ದನ ಕರುಗಳಿಗೂ ಕಷ್ಟವಾಯ್ತು. ಮಳೆ ಕಡಿಮೆಯಾಗಲು ಜನ ತಮ್ಮ ಮನೆಗಳಿಗೆ ತೆರಳಿ ಮತ್ತೆ ಜೀವನ ಪ್ರಾರಂಭಿಸಿರುವರು. ಕಾರಣ ಉತ್ತಮ ಮನ, ದುಡಿದು ಬದುಕುವೆವೆಂಬ ಛಲ..
@ಪ್ರೇಮ್@
27.05.2020

1475. ಮಾತೆ

ಭಾವಗೀತೆ

ಮಾತೆ

ಸನಿಹದಲು ದೂರದಲು ನೀನನ್ನ ಮನವೇ
ಬಾಚಿ ತಬ್ಬದಿದ್ದರೂ ಪ್ರಿಯ ನಿನ್ನ ಗುಣವೇ

ಅಕ್ಷರವ ಕಲಿತಿಲ್ಲ, ಪ್ರೇಮ ಪಾಠವ ತಿಳಿದಿಹೆ
ಬದುಕೆಂದರೇನೆಂಬ ಪಾಠ ನೀ ಕಲಿಸಿರುವೆ
ತೊದಲು ಮಾತನು ನನಗೆ ಸರಿಪಡಿಸಿ ಹೇಳಿರುವೆ.
ಬಿದ್ದು ಅತ್ತಾಗ ಎತ್ತಿ ಮುದ್ದಾಡಿರುವೆ

ಕಾಯಕವೇ ಕೈಲಾಸ ಎಂಬ ಮಾತನು ಉಳಿಸಿ
ಕೆಲಸ ಕಾರ್ಯದ ನಡುವೆ ಪೊರೆದೆನ್ನ ಸಾಕಿರುವೆ
ತನ್ನದೆನ್ನುವ ಸಕಲ ಆಸೆಗಳ ನೀ ಮರೆತು
ಮಗುವ ಜೀವನಕೆಂದು ಸರ್ವವನು ಮುಡುಪಿಡುವೆ..

ಬಾಳ ಬಾಂದಳದಲ್ಲಿ ಸೂರ್ಯ ಚಂದ್ರರ ಬೆಳೆಸಿ
ಹಲವು ತಾರೆಗಳಿಗೂ ನೀನಾಸರೆಯ ನೀಡಿರುವೆ
ಮೋಸ ವಂಚನೆಯೆಂಬ ಪದವ ಮರೆತಿರುವೆ
ಪ್ರೀತಿ ತುತ್ತನು ನೀಡಿ ಸಂಸಾರ ನಡೆಸಿರುವೆ..
@ಪ್ರೇಮ್@
28.05.2020

1474. ರುಬಾಯಿ

ರುಬಾಯಿ

ಮಾತೆಂದರೆ ಬೆಲೆ ಬಾಳುವ ಮುತ್ತು
ಹಲವರ ಮಾತು ಅವರಿಗೆ ತುತ್ತು!
ಮಾತು ಮೌನವಾದರೆ ಕಣ್ಣೀರ ನೋವು
ಮಾತು ಕತ್ತರಿಸದಿರಲಿ ಹಲವರ ಕತ್ತು!!
@ಪ್ರೇಮ್@
28.05.2020

1473. ಅಪ್ಪನೆಂಬ ಪಾತ್ರ

ಅಪ್ಪನೆಂಬ ಪಾತ್ರ

ಅಮ್ಮ ದುಡಿದು ಅಪ್ಪನಂತೆ
ನಮ್ಮ ಸಾಕಿದಾಗ ಸಪ್ಪಗಿದ್ದು
ತನ್ನ ಕೆಲಸ ತಾನು ಮಾಡುತ

ದನವ ಕಟ್ಟಿ ಹಾಲ ಕರೆದು
ಹುಲ್ಲು ಹಾಕಿ ನೋಡಿಕೊಳುತ
ಹಾಲು ಮಾರಿ ಬಂದ ಹಣದಿ
ಹಸುವ ಸಾಕಿ ಮೆರೆಸುತ

ಪಾಪದ ಮನುಜಗೇನು ತಿಳಿಯದು
ತನ್ನ ಸಂಸಾರ ಮಕ್ಕಳಿಗೆಲ್ಲ
ನಾನೇನಾದರೂ ಮಾಡಬೇಕೆಂಬುದ
ಕಷ್ಟಪಟ್ಟು ಜನರಿಗೆಲ್ಲ ಹಾಲಕುಡಿಸಿ
ಕಷ್ಟವೆಂದೊಡೆ ಹಣವ ಬಿಟ್ಟು
ಜಗವ ಸಾಕಿದಂಥ ಅಪ್ಪ!

ಏನೆನಲಿ? ಮಗಳ ಮದುವೆಯಾದ ಬಳಿಕ
ಮಗುವಿನಂತೆ ಅತ್ತು ಕರೆದು
ನಾನು ಏನೂ ಮಾಡಲಿಲ್ಲ
ಎನುವ ಕೊರಗು ಕೊನೆಗೆ ಹರಿದು
ಪ್ರಾಣ ಬಿಡುವ ಸಮಯದಲ್ಲಿ
ಮಗಳಿಗಾಗಿ ಕೊರಗಿ ಕೊರಗಿ
ನೋಡಲಾರದೇನೆ ಮರುಗಿ 
ಕೊನೆಯುಸಿರ ಎಳೆದರು..

ನೋಡಲಾರದಂಥ ಸ್ಥಿತಿಯು
ಹೆರಿಗೆಗಿನ್ನು ಹಲವು ದಿನವು
ಜೀವವಿರುವ ಅಪ್ಪನ ಮುಖ
ನೋಡುವ ಯೋಗ ಕಳೆದುಕೊಂಡೆನು
ಡೈರಿಯಲ್ಲಿ ಎಲ್ಲ ಬರೆದು
ಮನದ ನೋವ ಬಿಚ್ಚಿಟ್ಟೆನು
ಬಂದ ಗಂಡ ಏನೋ ಕೋಪದಿ
ಡೈರಿ ಸುಟ್ಟು ಬಿಟ್ಟರು
ಅಪ್ಪನ ನೆನಪ ಪದಗಳೂ 
ಅಪ್ಪನ ಹಿಂದೆ ಸುಟ್ಟು ಹೋದವು..
@ಪ್ರೇಮ್@
29.05.2020

1472. 4ಹಾಯ್ಕುಗಳು

ಹಾಯ್ಕುಗಳು

1
ಮನಸೆಂಬುದು
ಮದಗಜ, ಮರ್ಕಟ
ಮರೆಯಲಾರೆ!

2
ಮೋಸ ಹೋದರೂ
ಮೋಸ ಮಾಡದ ಬಾಳು
ಮಹಾನ್ ಚೇತನ!

3
ಮತಿಹೀನನೆ
ಮತಾಂಧನು ಜಗದಿ
ಧರ್ಮ ಮರೆತು..

4
ಮಿಥ್ಯವಿಲ್ಲದೆ
ಮೋಹ ಮರೆತು ನುಡಿ
ಮೇಘವಾಗುವೆ!
@ಪ್ರೇಮ್@
30.05.2020

1468. ಹೀಗೊಂದು ಪ್ರಪೋಝಲ್

ಹಾಸ್ಯ ಹನಿಗವನ

ಹೀಗೊಂದ್ ಪ್ರಪೋಝಲ್


ಇಂಗ್ಲಿಸ್ ಗಿಂಗ್ಲಿಸ್ ನಲಿ 
ಹೇಳೋಕಾಗಲ್ಲ ಕಣೇ..
ನಮ್ಮೂರ್ನಲೇ ಹುಟ್ಟಿ ಬೆಳ್ದ 
ಅಚ್ಚ  ಕನ್ನಡ್ದೋನ್ ಕಣೇ..
ತಾಯಾಣೆಗೂ ಕನ್ನಡ 
ನಾಡ್ ಬಿಟ್ ಎಲ್ಲೂ ಓಗಲ್ಲ ಕಣೇ..

ಅಚ್ಚ ಕನ್ಡಾನೇ ನನ್ ಉಸಿರಲ್ 
ಬೆರ್ತೋಗಿ ಕರ್ಗೋಗಿದೆ ಕಣೇ..
ನೀ ನನ್ ಜತೆಗಿದ್ರೆ ಲೋಕಕ್ಕೇ 
ನಾನ್ ರಾಜ್ನಾಗ್ ಮೆರಿತೀನಿ ಕಣೇ..
ಅದ್ಕೇ ಎಲ್ಲಾರ್ ಮುಂದೆ 
ಕನ್ನಡ್ದಾಗೇ ಹೇಳ್ತೀನಿ ಕೇಳ್ಕೋ
 ಐ ಲವ್ ಯೂ..
@ಪ್ರೇಮ್@
02.06.2020

1467. ಮಳೆಸುರಿಸು

ಮಳೆ ಸುರಿಸು

ಮಳೆಯ ಸುರಿಸು ಹರಿಯೆ
ಬದುಕ ಬಯಲಲಿ
ನಿನ್ನ ಬಾಂದಳದಿ ಉದುರಲಿ
ವರಗಳ ವರ್ಷಧಾರೆಯೂ..

ಕಷ್ಟಗಳು ಆಲಿಕಲ್ಲಿನಂತೆ ಕರಗಿ
ದು:ಖಗಳು ಮಿಂಚಂತೆ ಮಾಯವಾಗಿ
ಪ್ರೀತಿ ಸ್ನೇಹ ಹನಿಗಳುದುರಲಿ..
ನಂಬಿಕೆ ನೆಮ್ಮದಿ ಬೀಳುತಲಿರಲಿ..

ಆರೋಗ್ಯ ಭಾಗ್ಯ ಉದುರಲಿ
ಮೋಸ ವಂಚನೆ ತೊಲಗಲಿ
ಬಡವ ಬಲ್ಲಿದ ಭೇದವಳಿಯಲಿ
ಸಂತೋಷದ ಪುಷ್ಪ ಸಿಂಚನವಾಗಲಿ..

ದಯೆ ಕರುಣೆ ಮೊಳಗಲಿ
ಜ್ಞಾನ ವಿದ್ಯೆ ಹೆಚ್ಚಲಿ
ಅಜ್ಞಾನವದು ಹರಿದು ಹೋಗಲಿ
ಪ್ರೇಮ ವರ್ಷ ಸುರಿಯಲಿ..

ಸರ್ವ ಮನವು ತಣಿಯಲಿ
ದ್ವೇಷ ದೂರವಾಗಲಿ
ಒಳ್ಳೆ ಮಾತ ಹನಿಯು ಉದುರಲಿ..
ಸಕಲರೊಳಿತು ಬಯಸಲಿ..
@ಪ್ರೇಮ್@
03.06.2020

1466. 2 ಚುಟುಕುಗಳು

ಚುಟುಕು-1

ಪ್ರತಿ ಕ್ರೋಮೋಜೋಮುಗಳಲ್ಲೂ ಇಂದು
ಮೋಸ, ವಂಚನೆ, ದ್ವೇಷ, ಮತ್ಸರವ
ತುಂಬಿಕೊಂಡೆ ಬೆಳೆಯುತಿಹ ಆಸೆಬುರುಕ ಮಾನವ
ನಿನ್ನ ದೇಹವನ್ನೂ ನಿನ್ನೊಡನೆ ಒಯ್ಯಲಾರೆ!!!


ಚುಟುಕು-2

ಕಾಣಲು ನೀತಿ ನಂಬಿಕೆ ಮೃದು ಸ್ವಭಾವ!
ಕಳ್ಳತನ ಮೋಸ ಅನ್ಯಾಯ ಒಳಗೆ!
ಪರರ ಹೊಗಳುತ ತಾ ಒಳ್ಳೆಯವ!
ಒಳಗಿನ ರಟ್ಟಾಗದ ಗುಟ್ಟು ಶಿವನೇ ಬಲ್ಲವ!!!
@ಪ್ರೇಮ್@
04.06.2020

1465. ನ್ಯಾನೋ ಕತೆ- ಹೀಗೂ ಉಂಟು

ಹೀಗೂ ಉಂಟು

ಅವನು ಅವಳು ಹಿರಿಯರ ಆಶಯದಂತೆ  ಮದುವೆಯಾದರು. ಆದರೆ ಮನಸ್ಸು ಒಂದಾಗಲಿಲ್ಲ, ಅವರಷ್ಟಕ್ಕೆ ಅವರು. ಮಕ್ಕಳಾದರೂ ಮನಸ್ಸು ಮುರಿದೇ ಇತ್ತು. ಸಾಮಾಜಿಕವಾಗಿ ಮಾಡಬೇಕಾದ ಕಾರ್ಯವೆಂಬತೆ ಸಾಗಿತ್ತು ದಿನಗಳು. ಯಾವುದೇ ರಸ, ಸರಸ, ಸಾಮರಸ್ಯಗಳಿಲ್ಲದ ಬದುಕು. ಅವನು ಅವನೇ. ಅವಳು ಅವಳೇ. ಹಿರಿಯರು "ಸಂಸಾರ ಎಂದರೇ ಹೀಗಿರಬೇಕು" ಎಂದುಕೊಂಡು ಖುಷಿಪಟ್ಟರು.
@ಪ್ರೇಮ್@
05.06.2020

1464. ಮುರಳಿ

ಮುರಳಿ

ಮುರಳಿಯ ಹಿಡಿದಿಹ ರಮಣನೆ ಕೇಳೋ
ಮರೆಯದೆ ನೆನಪಿಸು ನಿತ್ಯವು ತಾಳೋ
ಸರಿಸಮ ಯಾರಿಹರು ನಿನಗೆ ಹೇಳೋ
ಮರೆಯದೆ ಸಂಜೆಗೆ ಹೂವನು ತಾರೋ..

ಪರಿಪರಿ ಬೇಡಿಕೆ ಮಾತನು ನೆನಪಿಡು
ಸರಿಸುತ ಪರದೆಯ ಬಂದೆನು ನೋಡೋ
ಪಿರಿಪಿರಿ ಮಾಡೆನು ಪ್ರೀತಿಯ ನೀಡೋ
ತರತರ ಒಲವಿನ ರಾಗವ ಹಾಡೋ..

ನಲಿವಿಗು ಗೆಲುವಿಗೂ ನೀನಿರೆ ಜೊತೆಯಲಿ
ಒಲವಿನ ಗೆಳೆಯನೆ ಮೈಮನವ ಮರೆಯುವೆ
ಗೆಳೆಯನೆ ಬಳಿಯಲಿ ನೀನೇ ಇರಲು
ಮಳೆಯಲು ಮರೆಯುವೆ ನನ್ನನೆ ನಾನೂ..

ಮುರಳಿಯೆ ನಿನ್ನಯ ಪ್ರೇಮದ ದಿಟ್ಟಿಗೆ
ಮರೆವೆನು ಜಗವನೆ ನಿತ್ಯವು ನಿನ್ನೊಡೆ
ಸರಿಸದೆ ಪ್ರೀತಿಯ ಸತತವು ಜತೆಗಿರು
ನರನಾಡಿಗಳಲಿ ನಿನ್ನದೆ ನೆನಪಿವೆ...
@ಪ್ರೇಮ್@
06.06.2020

1463. ಹನಿಗವಿತೆ-ಗೊಂದಲ

ಹನಿಗವಿತೆ

ಗೊಂದಲ

ಮಕ್ಕಳ ಕಾಳಜಿ ಬಗ್ಗೆ
ಪೋಷಕರಿಗೆ ಹಂಬಲ
ಪೋಷಕರ ಸಾಕುವ ಬಗ್ಗೆ
ಬೆಳೆದ ಮಕ್ಕಳಿಗೆ ಗೊಂದಲ!!
ಹಿರಿಯನಿಗೋ ಕಿರಿಯನಿಗೋ
ಆಸ್ತಿ ಯಾರಿಗೆ ಹೆಚ್ಚು?
ಅಮ್ಮ ಯಾರಿಗೆ, ಅಪ್ಪ ಯಾರಿಗೆ?
ಮನೆ ಯಾರಿಗೆ, ತೋಟ ಯಾರಿಗೆ?
ಕಟ್ಟಡ ಯಾರಿಗೆ, ಭೂಮಿ ಯಾರಿಗೆ?
@ಪ್ರೇಮ್@
08.06.2020

1462. 2ಚುಟುಕುಗಳು

ಚುಟುಕುಗಳು

1. ಖುಷಿ

ಮಳೆ ಹನಿ ಬಿದ್ದಾಗ ಮಣ್ಣಿಗೆ ಖುಷಿ
ಹನಿ ಬಿಂದು ತಾಕಿದೊಡೆ ಹಸಿರಿಗೂ ಖುಷಿ
ಗರಿಬಿಚ್ಚಿ ನಲಿದು ನಾಟ್ಯವಾಡೊ ನವಿಲಿಗೂ ಖುಷಿ
ಕೊಡೆಬಿಡಿಸಬೇಕಲ್ಲಾ ಎಂದು ಬೇಸರಿಸುವ ರಿಷಿ..

2.ನಗೆ

ನಗೆಯಲು ಹಲಬಗೆ ಕಿರುನಗೆ ಮೆಲುನಗೆ
ಕುಹಕನಗೆ ರಾಕ್ಷಸನಗೆ, ಸಿಹಿನಗೆ, ಕಹಿನಗೆ!
ಅಣಕಿಸುವ ನಗೆ, ,ಮಂದಹಾಸ, ಹೂನಗೆ
ಯಾವುದಾದರೇನು? ಮುಖದಲಿರಲಿ ಮುಗುಳ್ನಗೆ!
@ಪ್ರೇಮ್@
09.06.2020

1460. 2 ರುಬಾಯಿಗಳು

ರುಬಾಯಿ-1

ಮಡಿಲ ಆಸರೆಯ ನೀಡಿದೆನಲ್ಲ
ಕೈಯ ತುತ್ತನು ಉಣಬಡಿಸಿದೆನಲ್ಲ
ಗಾಳಿ ನೀರು ಆಸರೆಯನೂ ಕೊಟ್ಟೆ
ಮಾನವ ನನ್ನೊಡಲಿಗೆ ವಿಷ ಸುರಿದನಲ್ಲ!!!

ರುಬಾಯಿ-2

ಜನ ಸೇರಿದೆಡೆ ಹೋಗುವ ಖುಷಿಯಿತ್ತು
ಮದುವೆ ಮುಂಜಿ ಪಾರ್ಟಿಯಲಿ ಸಂತಸವಿತ್ತು!
ಗೆಳೆಯರು ಬಂಧುಗಳು ಒಟ್ಟಾಗಿ ಹರಟೆ
ಕೊರೋನ ಮಾರಿ ಎಲ್ಲ ಕಿತ್ಕೊಂಡು ಬಿಡ್ತು!!
@ಪ್ರೇಮ್@
10.06.2020

1459. ಗಝಲ್

ಗಝಲ್

ಸಾಸಿರ ಸಂಯಮ ಸಾಲದು ಸರಿಗಮಪದ ಸಾಗರಕೆ
ಸಾಸಿಯಂತಹ ಸಡಗರ ನಮ್ಮದು ಸರಸದ ಸಲ್ಲಾಪಕೆ..

ಸೋಲಲು ನಿಂತು ಬದುಕಲೆ ಬೇಕು ಸಾಲಲಿ
ಸಕ್ಕರೆಯಂಥ ಮಾತದು ಬರುತಲಿ ಮಧುರವಾದ ವಿನ್ಯಾಸಕೆ

ವಿರಸವು ಸರಸವು ಸನಿಹವು ವಿನಯವು ಸಮರಸಬಾಳಲಿ.
ಸಕಲದ ವಾಂಛೆಯ ಗೂಡಿನ ಹಂಬಲದ ಮನದಲಿ ..

ಹಿಮಾಲಯದಂತಹ ಆಸೆಯ ಹೊತ್ತಿಹ ಭಾವದ ಅಲೆಗಳಿವು.
ಸಲಿಗೆಯ ಬೆಳೆಸಿ ನರಳುತ ಎದೆಯೊಳಗಿಂದ ನೋವಿನಲಿ..

ಮುದುಕರು ಮಕ್ಕಳು ಮಹಿಳೆ ಮರಿಗಳು ಎಲ್ಲೆಲ್ಲೆಲ್ಲರೂ..
ಜಗಳವ ತೊರೆದು ಪ್ರೇಮದ ತಳದಲಿ ವಿಧಿಯಿಂದ ಹಸಿರಿನಲಿ..
@ಪ್ರೇಮ್@
11.06.2020

1458.ಒಡಪು

ಒಡಪು

ನಾನೂ ಬರಲೇನ್ರೀ
ಬಟ್ಟೆ ಬರೆ ತರಲೇನ್ರೀ
ಒಡವೆಗಳ ತೊಡಲೇನ್ರೀ
ರೇಷ್ಮೆ ಸೀರೆ ಉಡಲೇನ್ರೀ..
ತವರ್ಮನೆಗೆ ಅಲ್ಲಿಂದ್ಲೇ ಹೋಗ್ಲೇನ್ರೀ 
ಲಂಬೂಜೀ ಉದಯ್ ಕುಮಾರ್ ರವರೇ?
@ಪ್ರೇಮ್@
12.06.2020

1457. ತುಂತುರು

ತುಂತುರು

ತುಂತುರು ತುರುರುರು ತಂಪನೆ ಅನುಭವ
ಕುಂತರು ನಿಂತರು ಸುರಿವುದು ನೋಡಾ..
ಮಂಥರೆ ತಡೆಯಳು ಸುರಿಯುವ ಜಾಡನು
ಸಂತೆಯ ಕಂತೆಯೂ ಒದ್ದೆಯು ನೋಡಾ...

ಗುಂಪಲಿ ಚಲಿಸಲು ಆಗದು ತಾನೇ
ಮಂಪರು ಬರುವುದು ಒಳಗಡೆ ನೀನೇ
ಕುಂತಲ್ಲಿ ಕೂರುತ ಏನಾದ್ರೂ ಸವಿಯುತ
ಬೆಚ್ಚಗೆ ಮುಲುಗುತ ಇರುವುದ ಕಾಣೇ..

ಜಡಿ ಮಳೆ ಮುಂಗಾರು ಸೋನೆಯು ಇಹುದು
ಪುಷ್ಯ ಪುನರ್ವಸು ಎನುತ ಸುರಿವುದು
ಮಲೆನಾಡ ಜನರಿಗೆ ಮಳೆಗಾಲ ಬೇಕು
ಮಳೆಗೆಂದೆ ವಿಧವಿಧ ಖಾದ್ಯದ ಪಾಕ..

ಛತ್ರಿ ಗೊರಬು ಕಂಬಳಿಯನು ನೋಡಾ
ಎಲೆ ಅಡಿಕೆಯ ಜಗಿದು ಮೈ ಬೆಚ್ಚಗೆ ಮಾಡಾ
ಹುಲ್ಲೇಡಿ ಹಿಡಿಯಲು ಗದ್ದೆಗೆ ಓಡಾ
ರುಚಿಯನು ಸವಿಯುತ ಮಳೆ ಹಾಡನು ಹಾಡಾ..
@ಪ್ರೇಮ್@
13.06.2020

1456. ಹೀಗೊಂದು ರಾತ್ರಿ

ಹೀಗೊಂದು ರಾತ್ರಿ

ಅದೊಂದು ರಾತ್ರಿ. ಪ್ರತಿದಿನದಂತೆ ಗೆಳೆಯರೊಂದಿಗೆ ಮೂವತ್ತರ ಸವಿ ಸವೆದು ಮನೆ ಕಡೆ ಹೊರಟಿದ್ದೆ. ಮಳೆಗಾಲವಾದ ಕಾರಣ ರಸ್ತೆಯೆಲ್ಲಾ ಕೆಸರು.ಪದ್ಮಕ್ಕನ ಮನೆಯಲ್ಲಿ ಗಾಡಿಯಿಟ್ಟು ನಮ್ಮ ಮನೆಯ ಸಣ್ಣ ಓಣಿಯಲ್ಲಿ ಸಾಗುತ್ತಿದ್ದೆ. ಪಕ್ಕದ ರಾಜಣ್ಣನವರ ಮನೆಯಲ್ಲಿ ದೊಡ್ಡ ಗಲಾಟೆ ಸದ್ದು ಕೇಳಿ ಬರುತ್ತಿತ್ತು.ಮನೆಯೊಳಗಿನ ಜಗಳ ನಾನೇಕೆ ನಡುವೆ ಹೋಗಬೇಕೆಂದು ಕೊಂಡರೂ..ದೊಡ್ಡ ಧ್ವನಿಯಿಂದ ಅಳು.. ಚೀರಾಟ..ಲಬ್ಬೆ ಹೊಡೆದುಕೊಳ್ಳುವುದು ಜಾಸ್ತಿಯಾದ ಕೂಡಲೇ ಮನ ತಡೆಯದೆ ಅಲ್ಲಿಗೆ ಓಡಿದೆ. ಕೈ ಕಾಲು ನಡುಗುತ್ತಿದ್ದರೂ ಮನದೊಳಗೆ ಧೈರ್ಯವಿತ್ತು.

ನೋಡಿದರೆ ಅಲ್ಲೇನು...ಕಂಠ ಪೂರ್ತಿ ಕುಡಿದು ಬಂದಿದ್ದ ರಾಜಣ್ಣನನ್ನು ಹೆಂಡತಿ ರಂಜಿನಿ ಮನೆಯಿಂದ ಹೊರ ಹಾಕಿದ್ದಳು. ರಾಜಣ್ಣ ಅಳುತ್ತಾ ಗಲಾಟೆ ಮಾಡುತ್ತಿದ್ದರು. ಕಿಟಕಿಯಲ್ಲೆ ಗಲಾಟೆ ನಡೆಯುತ್ತಿತ್ತು. ರಾಜಣ್ಣನ ತಲೆಗೆ ಒಂದು ಕೊಡ ನೀರೂ ಸುರಿಯಲಾಗಿತ್ತು! ನಿತ್ಯ ಅವರ ಕಾಟ ತಡೆಯಲಾರದ ರಂಜಿನಿ ಸರಿಯಾಗೇ ಕ್ಲಾಸ್ ತಗೊಂಡಿದ್ದಳು. ಒಳ್ಳೆ ಕೆಲಸವೆಂದು ಮನೆ ಕಡೆ ದಾರಿ ಹಿಡಿದೆ....
@ಪ್ರೇಮ್@

1455. ನನ್ನಾಕೆ

ನನ್ನಾಕೆ

ನಿನ್ನ ಚೆಲುವು ಅದೆಷ್ಟು ಮೋಹಕವೋ
ವರ್ಣಿಸಲಾರೆನು ಸಖಿಯೇ ಆ ಚೆಲುವೋ

ಆ ತುಟಿಗಳೋ ಬಾಳೆ ದಿಂಡುಗಳು
ಹುಬ್ಬುಗಳಂತೂ ಕಲ್ಲಿನ ದಿಬ್ಬಗಳೂ
ಕಣ್ಣುಗಳು ಆಡುವ ಗೋಲಿಗಳು
ಕಣ್ರೆಪ್ಪೆಗಳೋ ಹಾರುವ ಕಪ್ಪೆಗಳು..

ನಿನ್ನಂದಕೆ ನೀನೇ ಸಾಟಿ ರಾಗರಂಜಿನಿ
ನಿನ್ನುದರವೋ ಬಿಸಿ ನೀರಿನ ಹಂಡೆ ವೈರಾಗಿಣಿ
ನಲಿಯುತ ಬರಲು ನೀ ರೈಲಂತಿಹುದು ನಡೆ
ನಡುವದು ಕಟ್ಟುಮಸ್ತಿನ ಆನೆಗಿಂತ ಕಡೆ!

ನುಡಿವ ರಾಗವದೋ ಮಳೆಹುಳದ ಹಾಡು
ಗಜಗಮನೆ ಬಾಳೆಹೂವಿನ ಮೂಗು
ಚಪಾತಿ ಕೆನ್ನೆ ಜಡೆಯೋ ಆಲದ ಬಳ್ಳಿ
ಬಣ್ಣವದು ತೊಳೆದಿಟ್ಟ ಕೆಂಡದುಂಡೆ

ಆದರೂ ನನಗೆ ನೀನಿಷ್ಟ ಜಾಣೆ
ಹೃದಯವದು ನಿನ್ನದು ಅಮೃತಬಳ್ಳಿ
ನಿನ್ನ ಮನ ಸಿಹಿಯಾದ ಕಲ್ಲುಸಕ್ಕರೆ
ಹಿತಮಿತ ಮಾತು ಉದುರುವ ಸವಿಯ ಮಾವಿನ ಹಣ್ಣಂತೆ!!
@ಪ್ರೇಮ್@
15.06.2020

1454. ಮೀನುಗಾರರ ಹಾಡು

ಮೀನುಗಾರರ ಹಾಡು

ಜಂಜನಿರೋ ಜಂಜನಿರೋ ಜೈ ಜೈ ಜೈ
ಜಂಜನಿರೋ ಜಂಜನಿರೋ ಜೈ ಜೈ ಜೈ
ಕಡಲ ಕಂದರಣ್ಣ ನಾವು ಕಡಲ ಮಕ್ಕಳಣ್ಣ
ಕಡಲ ಮೀನೇ ದೇವರಣ್ಣ ಕಡಲೆ ನಮ್ಮ ತಾಯಿಯಣ್ಣ...
ಸೂರ್ಯ ನಮ್ಮ ಸುಡುವನಮ್ಮ ಗಾಳಿ ಬೀಸಿ ಕರೆವುದಣ್ಣ.
ಕಡಲ ತಡಿಯೆ ತಾಣವಣ್ಣ ನೆಮ್ಮದಿಯ ತರುವುದಣ್ಣ..

ಮುಂಜಾನೆದ್ದು ತೆಪ್ಪ ಹಿಡಿದು 
ಬಲೆಯ ಬೀಸಿ  ಮೀನು ಹಿಡಿದು
ಬೆವರನೆಲ್ಲ ಒರೆಸಿ ತೆಗೆದು
ಮೀನನೆಲ್ಲ ದಡಕೆ ಎಸೆದು
ನಮ್ಮ ಕಾರ್ಯ ಮಾಡುವ
ತೆರೆಯ ಮೇಲೆ ಸಾಗುವಾ ಜೈಜೈಜೈ..

ಸಮುದ್ರದ ತೆರೆಗಳ ನೋಡೋಣಾ..
ಹಾಡುತ ಮುಂದೆ ಸಾಗೋಣ..
ಸಂಜೆಯವರೆಗೆ ದುಡಿಯೋಣ..
ಊರನು ತಲುಪುತ ನಲಿಯೋಣ ಜೈಜೈಜೈ..

ಸಾಗರ ಮಾತೆಗೆ ನಮಿಸುತಲಿ
ಚಂದಿರನೆಡೆಗೆ ನೋಡುತಲಿ
ಕಲ್ಪವೃಕ್ಷದ ನೀರನು ಕುಡಿಯುತಲಿ
ದಡದಲಿ ನಲಿದು ಕುಣಿಯುತಲಿ
ಸರ್ವ ಸುಸ್ತನು ಮರೆಯೋಣ ಜೈಜೈಜೈ..
@ಪ್ರೇಮ್@
17.06.2020

1453.ರಾಧಾಮಾಧವ

ಭಾವಗೀತೆ

ರಾಧಾಮಾಧವ

ಕೆಮ್ಮುಗಿಲು ಬರಸೆಳೆದು ಆಗಸವ ಅಪ್ಪುತ್ತಿರೆ
ಧರೆ ಮೇಲೆ ಸಂತಸದ ತೆರೆಯುದುರಿ 
ಸಂತಸವು ಮನೆಮಾಡಿದೆ ಕೇಳೆ ನೀ ಕಿನ್ನರಿ..
ಬಾ ಬಾರೆ ಸೇರೇ ನೀ ನನ್ನ ಬಂಗಾರಿ..

ಹೋಗೋ ಮೋಹನ ಬರೆನು ನಾನು
ಮುಗಿಲು ಹೊಡೆದು 
ಗುಡುಗ ತಾಳೆನು
ಭಯವು ನನಗದು ಕಳ್ಳ ನೀನು
ಮನದ ವಾಂಛೆಯ ಬಿಡುವೆಯೇನು?

ಬಾರೆ ಮುದ್ದಿನ ಪ್ರಾಣದರಸಿಯೆ
ಕೊಳಲ ನಾದಕೆ ಒಲಿದು ಬಾರೆಯೇ
ಅಮಿತ ಆಸೆಯ ದೂರ ನೂಕುವೆ
ಏಕೆ ಸುಳ್ಳನು ಮೇಲೆ ತೋರುವೆ..

ದೂರ ಹೋಗೋ ಗೋಪಾಲ ನೀನು
ನಿನ್ನ ಜಾಲವ ಬಲ್ಲೆ ನಾನು
ಮನದ ಬಯಕೆಯು ಅರಿಯದೇನು
ಮುಗಿಲ ಕರೆಯದು ಕೇಳದೇನು?

ವರ್ಷಧಾರೆಯು ನಮಗೆ ತಾನೇ
ಆಡಲದುವೇ ಖುಷಿ ಇಲ್ಲವೇನೇ
ಬಾರೆ ಬಾರೇ ನನ್ನ ಜಾಣೇ
ಸ್ವರ್ಗ ಕಾಣುವ ಜೊತೆ ಜೊತೆಯಲೇನೇ..
@ಪ್ರೇಮ್@
17.06.2020

1452. ಭಾರತಿಗೆ ಬಾಗುತ್ತಾ

ಭಾರತಿಗೆ ಬಾಗುತ್ತ..

ನಮಿಪೆನಮ್ಮ ಭಾರತಿ ಆಹಾ...ಹ
ಬರಲಿ ನಿನಗೆ ಕೀರುತಿ ಓಹೋ..ಹೋ
ಸರ್ವ ಜನರ ಆರತಿ
ನೀನೇ ಮನದ ಮೂರುತಿ.. ಆಹಾ..ಹಾ..ಹಾ...

ಜಾತಿ ಬೇಧ ಮರೆಯುವ ಆಹಾ..ಹ
ಎಲ್ಲರೊಂದೇ ಎನ್ನುವ ಓಹೋ..ಹೊ
ಒಮ್ಮನದಿ ಬಾಳಿ ನಾವು
ಮಾತೆಯನು ಭಜಿಸುವ...ಆಹಾ..ಹಾ..ಹಾ..

ಜನನಿ ನಿತ್ಯ ಪಾವನ ಆಹಾ..ಹಾ
ಹಿಮಾಲಯವು ಭೂಷಣ ಓಹೋ..ಹೋ
ವೀರ ಮರಣ ಅಪ್ಪಿ ನಿಂತ
ಯೋಧರಿಗೆ ನಮ್ಮ ನಮನ..ಆಹಾ..ಹಾ..ಹಾ.

ಗಂಗೆ ಪಾದ ತೊಳೆವಳು ಆಹಾ.. ಹಾ
ಸಿರಿಗೆ ನೀರನೆರೆವಳು ಓಹೋ..ಹೋ
ಮನದ ಕೊಳೆಯ ತೊಳೆವಳು
ಎಲ್ಲರೊಂದೆ ಎನುವಳು.. ಆಹಾ..ಹಾ..ಹಾ

ನೆಲವಿದೆಮ್ಮ ಪಾವನ ಆಹಾ..ಹಾ
ಧನ್ಯ ನಮ್ಮ ಜೀವನ.. ಓಹೋ..ಹೋ
ದೇಶ ದ್ರೋಹ ಮಾಡದೆ
ದೇಶಕ್ಕಾಗಿ ಬದುಕುವ..ಆಹಾ..ಹಾ..ಹಾ
@ಪ್ರೇಮ್@
19.06.2020

1451. ಛಲಬೇಕು

ಛಲ ಬೇಕು

ಬದುಕು ಸಂತಸದ ಹಾದಿಯಲ್ಲ
ಉಸಿರು ನಿಲ್ಲಲು ಕೊನೆಯು ಎಲ್ಲ
ಬೇಕು ಛಲ ನಮಗೆ ಬೆಳೆಯೆ ಹಸಿರೆಲ್ಲ
ಧೀರನಾಗಿ ತಲೆಯೆತ್ತಿದೊಡೆ ಬಾಳು ಬೆಲ್ಲ..

ನೀರು ಬೆಳಕನು ದೇವ ಕೊಡುವನು
ಸ್ವಂತ ಕಾರ್ಯವ ಮಾಡೆ ಕಾಯ್ವನು
ತಾನು ತನ್ನದು ಎಂಬುದೇನಿದೆ
ಉಸಿರ ಹಿಡಿದು ತಾ ಬದುಕ ಬೇಕಿದೆ..

ಬೆರಗುಗೊಳ್ಳುವ ಬಾಳ್ವೆ ನಮ್ಮದು
ಪ್ರತಿ ಕ್ಷಣದಲು ಕವಲು ತಪ್ಪದು
ಒಬ್ಬರಂತೆ ಮತ್ತೊಬ್ಬರ ಸಮಯವಿರದು
ಪರರೊಂದಿಗೆ ನಮ್ಮ ಬಾಳ ಹೋಲಿಸಲಾಗದು..

ನಾನೆ ಮೇಲು ನಾನೆ ಕೀಳು
ಎಂಬ ಮಾತು ಬರಿಯ ಸುಳ್ಳು
ಪ್ರತಿ ಜೀವ ತಾನು ಬೇರೆಯೇ
ಕೈಯ ಹಿಡಿಯುವ ಒಂದೇ ಶಕ್ತಿಯೇ..
@ಪ್ರೇಮ್@
18.05.2020

1450. ಒಲವಿಗೆ...

ಒಲವಿಗೆ

ಸಾಗರದ ಪ್ರತಿ ನೀರಬಿಂದು
ನಲ್ಲ ನಮ್ಮ ಒಲವು
ಹನಿಹನಿಯಲು ಪ್ರೇಮ ಸಿಂಧು
ಬಹಳವಿಹುದು ಬಲವು..

ಮುತ್ತಿಗಿಂತ ಬಹಳ ದುಬಾರಿ
ನಮ್ಮ ಪ್ರೀತಿ ಮುತ್ತು..
ರಮಿಸಿ ನಲಿಸಿ ಸಂತಸವು
ತಿನುವ ಎಲ್ಲಾ ತುತ್ತು...

ತೋಳಬಂದಿ ಸೊಂಟಪಟ್ಟಿ 
ತೊಡಿಸೆ ಕೈಗಳಿಹವು
ಕೋಳದಂತೆ ಒಳಗೆ ಬಂಧಿಸಿರುವೆ
ಹೃದಯವೆಂಬ ಬೀಗವು..

ದೂರವಿರಲಿ, ಬಳಿಯೆ ಇರಲಿ
ಪ್ರೀತಿ ಸದಾ ಒಂದೇ..
ದೂದ್ -ಪಾನಿಯಂತೆ ಒಟ್ಟು ಸೇರೆ
ನೀನು  ಬಳಿಗೆ ಬಂದೆ..
@ಪ್ರೇಮ್@
19.05.2020

1449. ಹುಟ್ಟು ಸಾವುಗಳ ನಡುವೆ

ಹುಟ್ಟು ಸಾವುಗಳ ನಡುವೆ

ಹುಟ್ಟು-ಸಾವುಗಳ ನಡುವಿನ ಮೂರು ದಿನದ ಬಾಳನ್ನು ನಾವು ಕ್ಷಣಿಕವೆಂಬುದ ಮರೆತು ನಮ್ಮ ಲೋಕವನ್ನೆ ಸೃಷ್ಟಿಸಿ ಅದರಲ್ಲೆ ಬದುಕುತ್ತಾ ಇರುವ ನಮನ್ನೆಚ್ಚರಿಸಲು ಬರಹಗಾರರೂ, ಚಿತ್ರಕಾರರೂ, ಭವಿಷ್ಯ ಚಿಂತಕರೂ ಸದಾ ಎಚ್ಚರಿಸುತ್ತಲೇ ಇರುತ್ತಾರೆ. ಇಲ್ಲೊಂದು ಚಿತ್ರವಿದೆ. ಜೀವನದ ಹಲವು ಹಂತಗಳನ್ನಿಲ್ಲಿ ತೋರಿಸಲಾಗಿದೆ. 

ಬಾಲ್ಯದಲ್ಲಿ ಅಮ್ಮನ ಆಸರೆಯಿಂದ ಬದುಕಕುವ ನಾವು ಮುಪ್ಪಿನಲ್ಲಿ ನಮ್ಮ ಮಕ್ಕಳನ್ನೇ ಆಶ್ರಯಿಸಿಕೊಳ್ಳುತ್ತೇವೆ. ಅದಕ್ಕೇ ಹಿರಿಯರು 'ಮಕ್ಕಳಿರಲವ್ವ ಮನೆತುಂಬ' , 'ಮಗನ ಪಡೆದರೆ ಮಾತ್ರ ಸ್ವರ್ಗ'  ಮೊದಲಾದ ಗಾದೆಗಳು ಅದನ್ನು ನೋಡಿಯೇ ಹುಟ್ಟಿರಬೇಕೇನೋ.
   
    ಜೀವನದಿ ನಾವು ನಟರು. ಜಗವೇ ನಾಟಕರಂಗ. ದೇವನೇ ಸೂತ್ರದಾರ. ಅವನು ಕುಣಿಸಿದಂತೆ ನಾವು ಕುಣಿಯಬೇಕು. ಇಂತಹ ಜಗದಿ ತಲೆಗೆ ಹಾಕಿದ ನೀರು ಕಾಲಿಗಿಳಿಯುತ್ತದೆ, ಅತ್ತೆಗೊಂದು ಕಾಲವಾದರೆ ಸೊಸೆ ಅತ್ತೆಯಾದಾಗ ಅವಳಿಗೂ ಅದೇ ಕಾಲ ಬರುತ್ತದೆ. ನಮ್ಮ ಕಾರ್ಯವನ್ನು ನಾವು ಸರಿಯಾಗಿ ಮಾಡಿದರೆ ಮಾತ್ರ ನಾವು ಅವಲಂಬಿಸುವಾಗ ಇತರರು ಅವರ ಕಾರ್ಯವನ್ನವರು ಸರಿಯಾಗಿ ಮಾಡುವರು. ಇಂದು ಅಹಂಕಾರದಿ ಮೆರೆದವ ಮುಂದೆ ಅಹಂ ತಗ್ಗಲೇ ಬೇಕು. ಸಾಗರಕೂ ಉಬ್ಬರವಿಳಿತವಿದೆಯಂತೆ.
    
    ಬದುಕು ಚಿಕ್ಕದು. ನಾವೂ ಸಂತಸದಿ ಬದುಕಿ, ಪರರ ಸಂತಸದಿ ಬಾಳ ಬಿಡೋಣ. ನೀವೇನಂತೀರಿ?
@ಪ್ರೇಮ್@
23.05.2020

1448.ಆರಂಭ-ಅಂತ್ಯ

ಆರಂಭ- ಅಂತ್ಯ

ಅಳುವಿನಿಂದ ಆರಂಭವು 
ಅಳುತ ನಗುತ ಜೀವನವು
ಅವಸರಕೆ ಮೂರೆ ದಿನ
ಅನವರತ ನಗು ಅಳುವು...

ಅಗಣಿತ ಕ್ಷಣಗಳ ನಡುವೆ
ಅನವರತ ದುಡಿತ ಕುಣಿತ
ಅರಳಿ ನಗುವ ಪುಷ್ಪದಂತೆ
ಅಮರ ಬದುಕು ಅಲ್ಲವಲ್ಲ

ಅನತಿ ದೂರದಲ್ಲೆ ಕೊನೆಯು
ಆನೆಯಂತೆ ಬೆಳೆದರೂನೂ
ಆಸೆ ಮುಗಿಯದೆಂದು ಮನಕೆ
ಆವಿಯಾಗೆ ದಿನ ಕ್ಷಣವು ಒಂದು

ಆತ ಆನು ತಾನು ನೀನು
ಆಗು ಮನಕೆ ಸಹಾಯ ತಾನು
ಆದರದಿ ನಗುತ ಇರುತ
ಆಗ ಈಗ ಎಲ್ಲ ಒಂದೆ..

ಆಕೆ ಈಕೆ ಎಲ್ಲ ಹೃದಯ
ಆಸೆ ಪಡುವುದೊಂದೆ ನೆಮ್ಮದಿ
ಆಟ ಮುಗಿಯಲುಂಟು ಜಗದಿ
ಆಸೆ ಪಟ್ಟು ಉಣ್ಣೋದೆಷ್ಟು?

ಅವನು ಇವನು ನಾನು ಎಲ್ಲ
ಬದುಕಲಿಹೆವು ಪಡೆದು ಬೇವು ಬೆಲ್ಲ
ಆಟ ಮುಗಿಸಿ ಆಸೆ ಮರೆಸಿ
ಸಾಗಲಿಹೆವು ಕೊನೆಗೆ ಎಲ್ಲ.
@ಪ್ರೇಮ್@
25.05.2020

1447. ಆಸೆ ನಿರಾಸೆಗಳ ನಡುವೆ

ಆಸೆ ನಿರಾಸೆಗಳ ನಡುವೆ

ಬದುಕಲು ಬೇಕು ಮನುಜಗೆ ಆಸೆ
ಬರಲೇ ಬಾರದು ಹೆಮ್ಮೆಯ ದುರಾಸೆ
ಗುರಿಯನು ಮುಟ್ಟಲು ಬೇಕೊಂದು ಹಿರಿಯಾಸೆ
ಎತ್ತರಕೇರಲು ಹಿಡಿಬೇಕು ಛಲದಾಸೆ..

ಮೋಸವ ಮಾಡದೆ ಬದುಕಲು ಕಲಿವಾಸೆ
ನಗುನಗುತಲಿ ಪ್ರತಿ ಕ್ಷಣಗಳ ಕಳೆವಾಸೆ
ಪರರಿಗೆ ಬಡವಗೆ ದಾನವ ಕೊಡುವಾಸೆ
ಪ್ರತಿ ಮನದಲು ನೆಮ್ಮದಿಯ ಕಾಣುವಾಸೆ..

ಆಸೆಗೆ ಅಂಕುಶ ಹಿಡಿದವ ಯಾರು?
ದು:ಖವ ಪರಿಹರಿಸುವ ಮದ್ದನು ಹಿಡಿದವನಾರು?
ಆಸೆಯೇ ದು:ಖಕ್ಕೆ ಮೂಲವೆಂದನು ಬುದ್ಧ!
ಆಸೆಯಿಲ್ಲದೆ ಬದುಕಿಲ್ಲವೆಂದು ತಿಳಿದವನೆದ್ದ!!
@ಪ್ರೇಮ್@
26.05.2020

1446. ನಮಗಲ್ಲ

ನಮಗಲ್ಲ

ಉಳ್ಳವರು ತಮಗಾಗಿ ಕಟ್ಟಿಹರು ಮಹಲಿನಂಥರಮನೆ,
ಬರುವರು ಹೋಗುವರು ಜನರನೇಕರು ಸುಮ್ಮನೆ!
ಮೋಜಿಗಾಗಿ, ಆಸೆಗಾಗಿ, ಪ್ರೀತಿಗಾಗಿ! ಅವರಿಗೆಲ್ಲ!
ಈ ಅರಮನೆ ಏನಿರದ ನಮಗಲ್ಲ!

ತುತ್ತು ಕೂಳಿಗೂ ಮುತ್ತಿನಂಥರಸುವೆವು!
ಕತ್ತು ಕೊಯ್ದರೂ ಕೋಟಿ ಸಿಗಲಾರದು!
ಸುತ್ತಿ ಬಳಸಿ ಕೆಲಸ ಹುಡುಕುವುದೇ ಕೆಲಸ!
ಈ ಅರಮನೆ ಏನಿರದ ನಮಗಲ್ಲ!

ಇಂದಿನದು ಇಂದು ನಾಳೆ ನಾಳೆಗೆ!
ಯಾರಲೇನಿದ್ದರೇನು? ನಮ್ಮ ದುಡಿತ ನಮಗೆ!
ಮಳೆ ಚಳಿಯ ಲೆಕ್ಕಿಸದೆ ಬದುತಿಹೆವಲ್ಲ,
ಈ ಅರಮನೆ ಏನಿರದ ನಮಗಲ್ಲ!

ಮೋಸ ವಂಚನೆ ತಿಳಿಯದು ನಮಗೆ
ಕಷ್ಟಪಟ್ಟು ದುಡಿಯುವೆವು ಕೊನೆಯವರೆಗೆ
ಬಾಳಿ ಬದುಕಲು ಭೂಮಿಯಿಹುದು ವಿಶಾಲ
ಈ ಅರಮನೆ ಏನಿರದ ನಮಗಲ್ಲ!

ದುರಾಸೆಯ ಬಿಸಿಲು ಕುದುರೆಯೇರಿ ಹೋಗಲಿಲ್ಲ ನಾವು,
ಬಂದರೆ ಬರಲಿ ಇಂದೇ ನಮಗೆ ಸಾವು!
ಬದುಕುವಷ್ಟು ದಿನ ಪ್ರೀತಿಯಿಂದ ಬದುಕಬೇಕಲ್ಲ,
ಈ ಅರಮನೆ ಏನಿರದ ನಮಗಲ್ಲ!
@ಪ್ರೇಮ್@
30.05.2020

1445. ನಲಿಯೋಣ

ನಲಿಯೋಣ

ನಯನದಿ ನಲಿವನು ನೋಡುತ ನಾವು
ನಗೆಯನು ನಡೆಸುತ ನಗುತಲಿರೋಣ
ನರಕವ ಮರೆತು ನಾಕವ ನೆನೆದು
ನೋಡುವ ನರರಿಗೆ ನೋವನು ನೀಡದೆ

ನೀರನು ನಾಡಿಯು ನರದಲು ನಲಿಸುತ
ನೀರಿನಂದದಿ ನಶೆಯಲಿ ನಲಿಯದೆ
ನೂರಾರು ವರುಷ ನಿಜವನು ನುಡಿಯುತ 
ನಂದಾದೀಪದಂತೆ ನಲುಗದೆ ನೂಲಿನಂತೆ ನೂಲುತ

ನಡುವಲು ನಿಶೆಯಲು ನಭದಲು ನೃಪನಲು
ನಾನೂ ನೀನೂ ನಾವೂ ನಮ್ಮವರೂ
ನೀವೂ ನಮ್ಮವರೆನುತಲಿ ನಲಿಯುತ ನಗುತಲಿರೋಣ
ನೂರಾರು ನಲಿವಿಗೆ ನಾವೇ ನಲಿಯುತ 
ನೀಲಿಯ ನಡುವಲಿ ನೀಚರಾಗದೆ, ನವೀನರಾಗಿ

ನಿಧಾನದಿ ನಡೆಯುತ ನೂಕದೆ ನೆಗೆಯದೆ
ನೋವಲು ನಗುವನು ಕಲಿಸುತ ನಡೆಯುತ
ನರನಾರಿಯರೆಲ್ಲ  ನರರಂತೆ ನಸುನಗುತಲಿ ನಟನೆಯಲಿ
ನಟಿಸುತ ನಾರಾಯಣನಾದೇಶದಂತೆ ನಲಿವಿನ ನಾದವ ನಿಲಿಸೋಣ...
@ಪ್ರೇಮ್@
01.06.2020

1444. ಹನಿ

ಹನಿ

ನೋಡುತ್ತಾ ಕುಳಿತಿದ್ದೆ
ಅವಳ ಟೈಟಾನ್ ವಾಚನ್ನ..
ಅರಿತೇ ಇಲ್ಲ ನನ್ನ
ಹಿಂದೆ ಕಳವಾದ ಪರ್ಸನ್ನ...
@ಪ್ರೇಮ್@
02.06.2020

1443. ಪ್ರೇಮಪತ್ರ

ಸ್ಪರ್ಧೆಗೆ

ಪ್ರೇಮಪತ್ರ

ನನ್ನ ಸಿಹಿಮನವೆ,

   ನೀನು ಹೇಗಿರುವೆ, ಎಲ್ಲಿರುವೆ ಎಂದು ನಾನು ಕೇಳಲಾರೆ, ಏಕೆಂದು ನಿನಗೆ ಮೊದಲೆ ತಿಳಿಯದೆ? ನನ್ನ ಎದೆಗುಡಿಯೊಳಗೆ ನಸುನಗುತ ನೀ ಹಾಯಾಗಿ ಸುಖದಿಂದಿರುವೆಯೆಂಬುದ ನಾನು ಬಲ್ಲೆ. ನನ್ನ ಬದುಕು, ಖುಷಿ, ನಗು, ಎಲ್ಲವೂ ನೀನಾಗಿರುವಾಗ ನಿನ್ನ ಸರ್ವ ಸಂತಸವೂ ನಾನೇ ಅಲ್ಲವೇ? ನಾನು ಸಂತಸವಾಗಿದ್ದರೆ ನೀನೂ ನಗುತಲೇ ಇರುವೆ. ಅಲ್ಲದೆ ನೀನಾಳುತಲಿರುವ ನನ್ನ ಹೃದಯ ಸಿಂಹಾಸನ ಪ್ರೀತಿಯಲಿ ತುಂಬಿ ಬೀಗದೇ? ಬಹಳ ಸಂತಸವಾಗಿ ನಾನು ನಿನ್ನ ಹೇಗೆ ಸಲಹುತಲಿರುವೆನೋ ಅಂತೆಯೇ ನೀನೂ ಕೂಡ ಎಂಬುದ ನಾನು ಬಲ್ಲೆ.

   ಪ್ರೀತಿಸದ, ದ್ವೇಷಿಸುವ ಹೃದಯಗಳು ನೋವು, ಕಣ್ಣೀರು ಕೊಡುವುದಂತೆ. ನಾ ನಿನಗೆ ಅವುಗಳನೆಂದೂ ಕೊಡಲಾರೆ. ನಿನ್ನ ಹಾಗೆಯೇ ನಾನು ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಲಿಂಬೆ ಉಪ್ಪನಕಾಯಿಯ ಉಪ್ಪಲ್ಲಿ ಕರಗಿ ಒಂದಾದಂತೆ ನಾವಿಬ್ಬರಿರಬೇಕು. ನಮ್ಮನ್ನು ಪ್ರಪಂಚದ ಯಾವ ಶಕ್ತಿಯೂ ಬೇರ್ಪಡಿಸಲಾಗದು ಮುದ್ದು.

   ಅಂಜೂರದ ಹಣ್ಣನ್ನು ಸಕ್ಕರೆ ದ್ರಾವಣದಲ್ಲಿ ಹಾಕಿಟ್ಟಂತೆ ನನ್ನಲ್ಲಿ ನೀನೈಕ್ಯವಾಗಿರುವೆ. ನೀ ನನ್ನ ನರ ನಾಡಿಗಳಲ್ಲೇ ಅಲ್ಲದೆ ಪ್ರತಿ ಜೀವಕೋಶಗಳಲ್ಲೂ ರಕ್ತದ ಹನಿಹನಿಗಳಾಗಿ ಹರಿಯುತ್ತಿರುವಾಗ ನೀನಿಲ್ಲದ ಬಾಳಿದೆಯೇ? ನನ್ನ ದೇಹ, ಅಂಗಾಂಗ, ಮಾಂಸ, ರಕ್ತವೇ ಅಲ್ಲದೆ ಪ್ರತಿ ಜೀವಕೋಶದ ಕೋಶ ಕೇಂದ್ರದಲ್ಲಿರುವ ಡಿ ಎನ್ ಎ, ಆರ್ ಎನ್ ಎಗಳಲ್ಲೂ, ಪ್ರತಿ ಕ್ರೋಮೋಜೋಮ್ ನಲ್ಲೂ ನಿನ್ನ ಪ್ರೀತಿಯೇ ಬೆರೆತು ನನ್ನ ರಕ್ತದ ಗುಂಪೇ ಪ್ರೀತಿ ಪಾಸಿಟಿವ್ ಆಗಿರುವಾಗ ಪ್ರತಿ ಮಿಲಿ ಸೆಕೆಂಡ್ ನಿನ್ನ ಅಗಲುವೆನೇ ನನ್ನ ಆತ್ಮವೇ?

ನೀನೆಲ್ಲೋ, ನಾನೂ ಅಲ್ಲೇ. ನಿನ್ನ ಮನದೊಳು ನಾನು, ನನ್ನ ತನುವೊಳು ನೀನು, ನೀನುಸಿರು ನಾ ಪ್ರಾಣ, ನೀ ದೇಹ ನಾನಾತ್ಮ. ಮತ್ತೆಲ್ಲಿ ನಿನ್ನ ವಿಚಾರಿಸಲಿ. ಪ್ರಪಂಚದಿ ನಾವಿಬ್ಬರೇ. ನಮ್ಮದೇ ಪ್ರಪಂಚ. ಒಂದೇ ಭಾವ. ಮತ್ತೆ ಸಿಗುವೆ, ಬೈ ಎಂಬ ಪದಗಳಿಲ್ಲ, ದೂರವೆಂಬ ಮಾತಿಲ್ಲ. 
   ಈ ಪತ್ರ ನನ್ನುಸಿರ ಗಾಳಿಯ ಬಿಂದುಗಳ ಧಾರೆ. 

        ಇಂತಿ ನಿನ್ನ ಉಸಿರು...

1442. ಮರೆಯಲುಂಟೆ ಜಗದಲಿ

ಮರೆಯಲುಂಟೆ ಜಗದಲಿ

ಅಮ್ಮ ನಿನ್ನ ಮೊದಲ ಮುತ್ತು
ಮೊದಲ ತುತ್ತು ಮೊದಲ ಪಾಠ
ಮೊದಲ ನೋಟ ನನ್ನ ಹಠ
ಮರೆಯಲುಂಟೆ ಜಗದಲಿ?

ನಿನ್ನ ನಗು ನನ್ನ ಅಳು
ನಿನ್ನ ಸಹನೆ ನನ್ನ ಬವಣೆ
ನಿನ್ನ ತಾಳ್ಮೆ ನನ್ನ ರೋಷ
ನಿನ್ನ ಪ್ರೀತಿ ನನ್ನ ನೀತಿ 
ಮರೆಯಲುಂಟೆ ಜಗದಲಿ..

ನಿನ್ನ ಮುದ್ದು ಮುಖದ ಚೆಲುವು
ನನ್ನ ಬೆಳೆಸಿದಂದ ಗೆಲುವು
ಮಗುವ ಸಾಕೊ ಸ್ನೇಹ ಪರಿ
ಕ್ಷಮಾ ಗುಣದ ನೋಟ ಸಿರಿ..
ಮರೆಯಲುಂಟೆ ಜಗದಲಿ..

ನೀನು ಮರ ನಾನು ಕಾಯಿ
ನೀನು ಅಂಬರ ನಾನು ಧರೆ
ನೀನು ಜಲ ನಾನು ನೆಲ
ನೀನು ಬಲ ನಾನು ಕೇವಲ!
ಮರೆಯಲುಂಟೆ ಜಗದಲಿ?
@ಪ್ರೇಮ್@
05.06.2020

1441. ನಾ ಬಾಗಿರುವೆ ಪ್ರಕೃತಿಗೆ



ನಾ ಬಾಗಿರುವೆ

ಪ್ರಕೃತಿ ನಿನ್ನೊಲವಿಗೆ ನಾ ಧನ್ಯ
ಅಂದದಿ ಕಾದವ ಸದಾ ಮಾನ್ಯ
ನೀನಿದ್ದರೆ ನನ್ನ ಜತೆ ಜಗಮರೆವೆ
ನಿನ್ನ ಕಾಲ್ಕೆಳಗೆ ನನ್ನ ತಲೆಯಿಡುವೆ...

ಹೆಣ್ಣಾಗಿಹೆ ನೀನು ಜಗಕೆ ಮಡಿಲು
ಸರ್ವರ ಹೊತ್ತಿಹುದು ನಿನ್ನೊಡಲು
ಸೂರ್ಯ ಚಂದ್ರ ನಿನ್ನ ಅಕ್ಷಿಗಳು
ಗಿಡಮರದ ಹಸಿರೇ ನಿನ್ನುಡುಗೆಗಳು..

ಆರಾಧಿಸುವೆ ಮನಮಂದಿರವನು
ತೊರೆದು ಅದೇನನೂ ನಾ ಕಾಣೆನು
ಬುದ್ಧಿ ಬಂದಿಹುದೆನಗೀಗ ಸ್ವಲ್ಪ
ನಿನ್ನನುಳಿಸದೆ ನಾನುಳಿಯೆ , ಅಲ್ಪ!

ಕೈಹಿಡಿದು ನಡೆಸೆನ್ನ ನೀ ಮಾಯೆ
ನನ್ನ ನಾ ಅರ್ಪಿಸಿಹೆ ನೀ ಕಾಯೆ!
ಸೂರ್ಯ ಚಂದ್ರರೆ ಸಾಕ್ಷಿ ಒಲವಿಗೆ
ಕೆಂಬಣ್ಣದ ಗುಲಾಬಿ ನಮ್ಮ  ಪ್ರೀತಿಗೆ!
@ಪ್ರೇಮ್@
11.06.2020

1440. ಅಪ್ಪನ ನೆರಳಲ್ಲಿ...



ಅಪ್ಪನ ನೆರಳಲ್ಲಿ

    ಹೌದಲ್ಲವೇ? ಅಪ್ಪನೆಂದರೆ ಅಕಾಶ! ಧರ್ತೀ ಪೇ ಜೋ ರಬ್ ಹೋತಾ ಹೇ,ವೋ ಹೇ ಪಿತಾ... ತನ್ನ ಮಗುವಿನ ಕನಸುಗಳೆಲ್ಲ ರೂಪುಗೊಂಡಿರುವುದು ಪ್ರಜ್ಞಾವಂತ, ಜವಾಬ್ದಾರಿಯುತ, ದುಡಿಯುವ ಅಪ್ಪನ ಮೇಲೆ. ಒಬ್ಬ ಅಪ್ಪ ಪಣ ತೊಟ್ಟರೆ ಮಕ್ಕಳನ್ನು ಏನು ಬೇಕಾದರೂ ಮಾಡಬಲ್ಲ. ಅಪ್ಪನ ಮೆದುಳಿನಲಿ ಅಗಾಧ ಪರಿಶ್ರಮದೊಂದಿಗೆ ದೂರದೃಷ್ಟಿ, ಶಕ್ತಿ, ಆಲೋಚನೆ, ಆಯೋಜನೆಗಳೂ ಇವೆಯಲ್ಲವೇ?

     ಇದೇ ಅಪ್ಪ ತಿರುಗಿ ಬಿದ್ದರೆ ಸಂಸಾರವನ್ನು ಮೂರಾಬಟ್ಟೆ ಮಾಡಬಲ್ಲ, ಕಂಠಪೂರ್ತಿ ದುಡಿದುದನೆಲ್ಲ ಕುಡಿದು, ಹೆಂಡತಿಗೆ ಹೊಡೆದು, ಮಕ್ಕಳನ್ನೂ ಜರಿದು ಬೀದಿಪಾಲು ಮಾಡಬಲ್ಲ! ಹಸಿರು ತೋರಬೇಕಾದ ಜಗವ ಬರಡು ಮಾಡುವ ಶಕ್ತಿಯೂ ಅಪ್ಪನೆನುವ ಜೀವಿಗಿದೆ! ಅಣುವೊಂದು ಹಲವಾರು ಊರಿಗೆ ವಿದ್ಯುತ್ ಒದಗಿಸಿದಂತೆ ಬಾಂಬಾಗಿ ಹಲವಾರು ಊರುಗಳ ಸುಡಬಲ್ಲಂತೆಯೇ  ಅಪ್ಪನೆಂಬ ಪಾತ್ರ. 

  ಅಪ್ಪ ಒಂದು ಕಾಲದಲ್ಲಿ ಗಂಡು ಮಗು! ಗಂಡು ಮಗು ಜನಿಸಿತೆಂದರೇನೇ ಖುಷಿಪಡುವ ನಮ್ಮಲ್ಲಿ ತಂದೆ, ತಾಯಿ, ಅಕ್ಕ, ತಂಗಿ, ತಮ್ಮನಲ್ಲದೇ ಅತ್ತೆಯರಿಗೂ, ಚಿಕ್ಕಮ್ಮ, ದೊಡ್ಡಮ್ಮನವರಿಗೂ ಅವನು ಏನೋ ಸಾಧಿಸಬೇಕೆಂಬ ಹಂಬಲ, ತಮ್ಮ ಸಹಾಯಕ್ಕೆ ಬರಬಹುದೆಂಬ ಆಲೋಚನೆ ಇರುತ್ತದೆ. ಈ ಎಲ್ಲ ಜವಾಬ್ದಾರಿಗಳು ಅವನ ಮೇಲಿರುವಂತೆಯೇ ಜೀವನ ಸಂಗಾತಿಯ ತದನಂತರ ಮಕ್ಕಳ ಆಗಮನವಾಗುತ್ತದೆ. ಅಲ್ಲೂ ಸಂಬಂಧಗಳ, ಆಲೋಚನೆಗಳ, ಜವಾಬ್ದಾರಿಗಳ ಹೆಚ್ಚಳವಾಗುತ್ತದೆ. ಹಲವು ಸಲ ತನ್ನ, ತಂದೆ ತಾಯಿಯ, ಅಕ್ಕ ತಂಗಿಯರ, ಅತ್ತೆಯ ಹೀಗೆ ಎರಡು ಮೂರು ಕುಟುಂಬಗಳ ಜವಾಬ್ದಾರಿ ಬೇರೆ! ಅಪ್ಪ ಹೈರಾಣಾಗುವ ಸಮಯಕ್ಕೆ ಅವನಿಗೆ ಅರ್ಧಾಂಗಿಯಾಗಿ ಜೊತೆಯಾಗಿ ನಿಲ್ಲುವವಳು ಅಮ್ಮ. ಅಪ್ಪ ಸರಿಯಿದ್ದರೆ ಅಮ್ಮನೂ ಸರಿ. ಸಂಸಾರ ಸುಖ ಸಾಗರ. ಅಪ್ಪನೇನಾದರೂ ಎಡವಿದರೆ ಮಡದಿ ಮಕ್ಕಳು ಎಲ್ಲರೂ ಎಡವುವವರೇ. ಅಮ್ಮ ಎಡವಿದರೆ ಅಪ್ಪ ಸರಿಮಾಡಬಲ್ಲ, ಅಪ್ಪನೇ ಎಡವಿದರೆ ಬೇಲಿಯೇ ಎದ್ದು ಹೊಲ ಮೇಯುವಂತೆ! ಇಂದು ಹಲವಾರು ಮಕ್ಕಳು 'ಅಪ್ಪ' ಎಂಬ ಪದಕ್ಕೇ ಹೆದರುವರು, ಅಳುವರು, ನೋಯುವರು, ತವಕಿಸುವರು, ಆಸೆಪಡುವರು ಹಾಗೂ ಗುರಾಯಿಸುವರು. ಕಾರಣ ಅಪ್ಪನ ಗುಣ! ಅಪ್ಪನ ಪ್ರೀತಿ ಯಾರಿಗೆ ತಾನೇ ಬೇಡ ಹೇಳಿ? ಆದರೆ ಹಲವಾರು ಮನೆಗಳ, ಕುಟುಂಬಗಳ ಅಪ್ಪ ಜವಾಬ್ದಾರಿಗೆ ತಲೆಬಾಗಿ ಪ್ರೀತಿಯೆಂಬ ಪದವನ್ನೇ ಮರೆತಿರುವನು. 
     ಬೆಳಗ್ಗೆ ಮಕ್ಕಳು ಏಳುವ ಮೊದಲೇ ಮನೆ ಬಿಟ್ಟರೆ ಮನೆ ಸೇರುವಾಗ ಮಕ್ಕಳೆಲ್ಲಾ ಮಲಗಿರುತ್ತಾರೆ. ನಮಗೂ ಒಬ್ಬ ಅಪ್ಪ ಇದ್ದಾನೆ ಎಂದು ಅರಿವಾಗಲು ವೀಕೆಂಡ್ ಇಲ್ಲವೇ ಮಂತೆಂಡ್ ಬರಬೇಕಿತ್ತು.
  
   ಕೊರೋನಾ ಎಂಬ ಕಣ್ಣಿಗೆ ಕಾಣದ ಜೀವಿ ಹಲವಾರು ಜೀವಗಳ ಬಲಿ ತೆಗೆದುಕೊಂಡರೂ ಹಲವಾರು ಕುಟುಂಬಗಳ ಒಂದುಗೂಡಿಸಿತು. ಅಪ್ಪನ ನಿಜ ಗುಣದ ಪರಿಚಯ ಹಲವಾರು ಕುಟುಂಬಗಳಿಗೆ ಆಯಿತು. ಸದಾ   ದುಡಿಮೆಯೆಂದು ಓಡಾಡುತ್ತಿದ್ದ ಜೀವಕ್ಕೂ ಸ್ವಲ್ಪ ಆರಾಮ ದೊರೆಯಿತು.

     ತನಗೆ ಬಟ್ಟೆಯಿಲ್ಲದಿದ್ದರೂ ಮಕ್ಕಳಿಗೆ ಹೊಸ ಬಟ್ಟೆ ತರುವ, ತಾನು ಚಪ್ಪಲಿಯ ಧರಿಸದಿದ್ದರೂ ಮಕ್ಕಳಿಗೆ ಶೂ ತರುವ,ತಾನು ಉಣ್ಣದಿದ್ದರೂ ಮಡದಿ ಮಕ್ಕಳ ಹೊಟ್ಟೆ ತಣಿಸುವ, ತಾನು ನಡೆದೇ ಹೋದರೂ ಮಕ್ಕಳಿಗೆ ಗಾಡಿ ತರುವ ಅಪ್ಪನ ಹೃದಯದ ಆಳ ಅರಿತವರುಂಟೇ? ಹಾಗೆಯೇ ತಾನು ದುಡಿದುದ ತನ್ನೊಬ್ಬನಿಗೇ ಖರ್ಚು ಮಾಡಿ ಮಡದಿ ಮಕ್ಕಳಿಗೆ ನಿತ್ಯ ನರಕ ದರ್ಶನ ಮಾಡಿಸುವ ಅಪ್ಪನೆಂಬ ಪ್ರಾಣಿಯನು ತಿದ್ದುವವರುಂಟೇ?

 ನಮ್ಮ ಅಪ್ಪ ಹೇಗೇ ಇರಲಿ, ಇದ್ದಿರಲಿ,ನಾವು ಉತ್ತಮ ಜವಾಬ್ದಾರಿಯುತ ಅಪ್ಪನಾಗೋಣ. ನಮ್ಮ ಕುಟುಂಬವ ರಸ್ತೆಯಲಿ ಹಾಕದಿರೋಣ. ಕಾರಣ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ ಇಂದು. ನಮ್ಮ ಬಾಳಿಗೆ ಸಿಕ್ಕ ಭಾಗ್ಯದ ಲಕ್ಷ್ಮಿಯನ್ನು, ಮಕ್ಕಳನ್ನು ಸಂತಸವಾಗಿರುವಂತೆ ನೋಡಿಕೊಳ್ಳುವ ಅಪ್ಪ ನಾವಾಗೋಣ, ಅದಕ್ಕಾಗಿ ಜವಾಬ್ದಾರಿಯರಿತು  ಶ್ರಮಿಸೋಣ. ನೀವೇನಂತೀರಿ?
@ಪ್ರೇಮ್@
13.06.2020

1439. ರಾಜನಾಗಿ

ಸ್ಪರ್ಧೆಗೆ

ರಾಜನಾಗಿ...

ಕನಸಿನಲ್ಲಿ ರಾಣಿ ಬಂದು ಒಂದು ಹೂವ ಮುತ್ತನಿತ್ತಳು
ನೀನೆ ಜಗದ ದೊರೆಯು ಎಂದು ದೂರ ಓಡಿ ಹೋದಳು
ಅಂದಿನಿಂದ ನಾನೆ ದೊರೆಯು ಆಕೆ ನನ್ನ ಪತ್ನಿಯು
ಆಳು ಕಾಳು ಇಹರು ನಿತ್ಯ ಊಟ ತಿಂಡಿ ನಿದ್ದೆಯು

ಪ್ರಜೆಗಳೆಲ್ಲ ಬಂದು ತಮ್ಮ ಕಷ್ಟ ಹೇಳಿಕೊಳುವರು
ಪ್ರಾಣಿಗಳಿಗೂ ದಯೆಯು ಇಹುದು ಸ್ವತಂತ್ರರಾಗಿ ಇರುವವು
ನಾನು ತಾನು ನೀನು ಇಲ್ಲ ಸರ್ವರೊಂದೆ ಎನುವರು
ಬಡವ ಬಲ್ಲಿದ ಮೇಲು ಕೀಳು ಜಾತಿಯೆಲ್ಲ ಅಳಿದವು..

ಎಲ್ಲರೊಂದೆ ನ್ಯಾಯ ನೀತಿ ಕಷ್ಟ ಸುಖದ ಹಂಚಿಕೆ
ಮೋಸ ಗೀಸ ಅನ್ಯಾಯವಿಲ್ಲ ಸರ್ವ ಜನರ ಗುಂಪಿಗೆ
ಜಂಗಮವು ಟಿವಿ ಎಸಿ ತಂಪು ಬಿಸಿಯ ಬಳಸಿ ಬದುಕುತ
ಪ್ರವಾಸ ವಾಸ ವನವ ಬೆಳೆಸಿ ಸಂತಸದಿ ಬಾಳು ಬೆಳಗುತ

ರಾಜ ನಾನು ಕಿರೀಟವಿಲ್ಲ ತಾರೆ ಎನುತ ಎದ್ದೆನು
ಚಾಪೆ ಜಾರಿ ಕಾಲು ಉಳುಕಿ ಮತ್ತೆ ಕೆಳಗೆ ಬಿದ್ದೆನು
ರಾಣಿಯಿಲ್ಲ ಜನರೂ ಇಲ್ಲ ನನ್ನ ಮನೆಯೆ ಅರಮನೆ
ಅಮ್ಮ ಗದರಿ ಏಳ ಹೇಳಿ ಕೇಳಿ ನಕ್ಕಳು ಸುಮ್ಮನೆ!!
@ಪ್ರೇಮ್@
15.06.2020

1438. ಕಾತರ

ಸ್ಪರ್ಧೆಗೆ

ಬಂದನೊ ಇನಿಯನು!

ಬಾಗಿಲ ಬಳಿಯಲೆ ಬಾಗುತ ಬಂದಿಹೆನು
ವೇಗದಿ ನಲ್ಲನ ಕಾಯುತ ನಿಂದಿಹೆನು
ಬರುವನೊ ಬಾರನೋ ಬದುಕಿನ ರಾಜನು
ಬರುವನು ಕಾಯುತ ಬಂದಿಲ್ಲಿ ನಿಂತೆನು..

ಭೋಜನಕಾಗಿ ಬಾಗಿತು ಸಮಯವು
ಬಹುಮನ ಭಯದಿ ಕಾಯುತ ಕುಳಿತೆವು
ಒಡೆಯನು ಬರದಿರೆ ಏಕದು ಈ ತರ
ಒಡನೆಯೆ ಬರುವೆನು ಎನುತಲಿ ಹೋದವ..

ಬಾಳಿನ ಬಳ್ಳಿಗೆ ಆಸರೆಯಾದವ
ಬಂದನೋ ಈಗಲೇ ಭರದಲಿ ಭಾವ
ಬರದಲಿ ಬರದು ಬಿರುಸಿನ ವರ್ಷವು
ಭಯವಿದೆ ಭುಜದಲಿ,ಬೇಸರ ಮನದಲಿ..

ಭೃಂಗದ ರೆಕ್ಕೆಯ ಹೊದ್ದು ತಾ ಬರುವನು
ಬಯಲಲಿ ಓಡುತ ಬದುಕಲಿ ಬರುವನು
ಬೆಡಗಿನ ಕುವರನು ಬಂದೇ ಬರುವನು
ಬರಲದು ಬಂಧವ ಬಿಡಿಸುತ ಬೆರೆವನು..
@ಪ್ರೇಮ್@
18.06.2020

1437. ನನ್ನ ನಗುವಿಗೆ

ನನ್ನ ನಗುವಿಗೆ...

ನಾನಿನ್ನನೇನನ್ನಲೂ ನೀನನ್ನನೇನನ್ನದಿರು ನನ್ನ ಮನವೇ. ....
ನೀನೆಂದಿಗೂ ನೀನಾಗಿರು ಜಗದಲಿ. ...
ನಲಿವ ಮರೆಯದ ನಗುತ ಬಾಳುವ ನಗೆಯುಕ್ಕಿಸುವ ನಗ ಮಲ್ಲಿಗೆಯೇ ನಗುತಲಿರೆಂದಿಗೂ. ...
ನಗುವ ಚೆಲ್ಲುತ ನಗಿಸಿ ನಗುತಲಿ
 ನಗುವ ಹೂವನು ನಳನಳಿಸಿ ಬಾಳುತ
 ನಲಿ ನಲಿಯುತ ನವೀನ ತೆರದಲಿ
 ನೋವ ಮರೆಯುತ ನಗೆಯ ಮೋಡದಿ
 ನಗುವ ಹನಿಯ ಧರೆಗೆ ಸುರಿಸುತ 
ನುಂಗಲಾರದ ತುತ್ತನೆಲ್ಲವ ನೂರು ಗಜಕೆಸೆಯುತ 
ನೋಟ ಸೇರಿಸಿ ನೃತ್ಯವಾಗಿಸಿ 
ನಲ್ಮೆಯಿಂದಲಿ  ನಕಲಾಗಿಸದೆ ನಾದದಿಂದಲಿ
ನೇತ್ರದಂತೆಯೆ ನಲಿವ ನೋಡುತ
ನಾಯಿಯಂತೆಯೆ ನಿಷ್ಠೆಯಿಂದಲಿ
ನೊಗವ ಹೊತ್ತ ಎತ್ತಿನಂದದಿ ದುಡಿಯುತ
ನೂರ್ಕಾಲ ದಣಿಯದೆ ನಲಿ ಮನವೆ..
@ಪ್ರೇಮ್@
17.06.2020

1436. ಬರೆದಿಡಿ

ಬರೆದಿಡಿ

ಓದುತಿಹೆ ಹಲ ಕವನಗಳ ಚುಟುಕು ಹಾಯ್ಕುಗಳನೆಲ್ಲ
ಒಂದಕ್ಕಿಂತ ಮತ್ತೊಂದು ಅದ್ಭುತ ಭಾವಗಳಿಗೆ ಕೊರತೆಯಿಲ್ಲ
ತುಳು ಕನ್ನಡ ಮಲಯಾಳಂ ಆಂಗ್ಲದಲೂ ಬರೆಯಬಲ್ಲೆವಲ್ಲ
ಗೀಚುವ ಮನದಂತೆ ಓದುವ ಮನಗಳನೂ ಸಂತಸ ಪಡಿಸುವೆವಲ್ಲ...

ಒಂದೊಂದು ವಿಶೇಷವೇ ಪ್ರತಿ ಕವನ ಸಾಲುಗಳಲಿ
ಒಂದು ಕಷ್ಟ ವಿವರಿಸಿದರೆ ಮತ್ತೊಂದು ಸಫಲ ನಗೆಯುಕ್ಕಿಸುವುದರಲಿ
ಮಗದೊಂದು ಹೊರಬಂದಿಹುದು ಷಟ್ಪದಿಯ ರೂಪದಲಿ
ಬದುಕ ತಿರುಳ ಉಸುರಿಹುದು ಹಾಯ್ಕು  ಹದಿನೇಳು ಅಕ್ಷರಗಳಲಿ..

ಮೇಲಿಂದ ಮೇಲೆ ಉಪಯೋಗಿಸುವಾಗ ಕೈಲಿದ್ದ ಮೊಬೈಲ
ಗಮನ ತುಂಬಾ ಇರಲಿ ನಿಮ್ಮ ಪುಟ್ಟ ಕಣ್ಗಳ ಮೇಲೆ
ಬೆಳಕು ಹೊಡೆಯುವುದು ನೇರವಾಗಿ ದೃಷ್ಟಿಗೆ
ಮಂಜು ಮಂಜಾಗುವುದು ನೋಡ ನೋಡುತ್ತ ಕಣ್ಣಿಗೆ

ಸಾಮಾಜಿಕ ಜಾಲ ತಾಣಗಳೆಂದೂ ಸುರಕ್ಷತೆಯಲ್ಲ
ಬರೆದಿಟ್ಟಿರಿ ನಿಮ್ಮ ಸಾಹಿತ್ಯವನೆಲ್ಲ
ಒಂದು ದಿನ ಡಿಲೀಟ್ ಆಗಬಹುದು ಎಲ್ಲವೂ
ಕಾಗದ ಲೇಖನಿಯೇ ಕವಿ ಮನದ ಸ್ವತ್ತಲ್ವಾ?
@ಪ್ರೇಮ್@
18.06.2020

1435. 5 ಹನಿಗಳು

ಹನಿ-1

ನೋಡುತ್ತಾ ಕುಳಿತಿದ್ದೆ
ಅವಳ ಅಂದದ ಅಂಗಿ!
ಅರಿತೇ ಇಲ್ಲ ನಾನು
ಜಾರಿದ ನನ್ನ ಲುಂಗಿ!!!

2. 

ನೋಡಲು ಚೆಲುವೆ
ಬಟ್ಟೆ ಬರೆ ಮ್ಯಾಚಿಂಗ್!
ಹುಡುಗರಿಗೆಲ್ಲ ಮಾಡ್ತಿದ್ದಳು
ಬರೀ ಚೀಟಿಂಗ್!!

3. 

ಇಂದಿನ ಹುಡುಗಿಯರ
ಬಟ್ಟೆಯೆಲ್ಲ ತುಂಡು ತುಂಡು
ಮುಂದೆ ಬರಬಹುದೆ
ಉಡಲು ಮರದ ಬೆಂಡು?

4. 

ಹನಿಹನಿದು ಬಂದು
ಸಾಗರವಾಗುವುದೇ
ಹನಿ ಹನಿಯ ಉದುರಿಸುವ
ಪುಟ್ಟ ಹನಿಗವಿತೆ?

5. 

ಮಹಾನ್ ವ್ಯಕ್ತಿ
ಸಭೆಯ ಮುಂದಿನ
ಆಸನದಲ್ಲಿ ಕುಳಿತು
ಮೂಗೊಳಗೆ ಕೈ ಹಾಕ್ತಿದ್ದರು!!!

6. 

ನಾನು ಕನ್ನಡದ
ಉಟ್ಟು ಓರಾಟಗಾರ!!!
ಸ್ಪಷ್ಟ ಕನ್ನಡ ಬಿಟ್ಟು
ಹಿನ್ಯಾವ ಭಾಷೆ ಮಾತಾಡಲಾರೆ!!
@ಪ್ರೇಮ್@
04.06.2020

1500. ನ್ಯಾನೋ-ಪವಿತ್ರ ಪ್ರೇಮ

ನ್ಯಾನೋ ಕತೆ

ಪವಿತ್ರ ಪ್ರೇಮ

ಸಾಮಾಜಿಕ ಜಾಲ ತಾಣದಲ್ಲಿ ದಿನಾಲೂ ಮನಸ್ವ್ವಿಯ ಫೋಟೋ ನೋಡುತ್ತಿದ್ದ ಆ ಯುವಕ ವಂದನ್ ತನಗೆ ಗೊತ್ತಿಲ್ಲದೆ ಆಕೆಯನ್ನು ಪ್ರೇಮಿಸತೊಡಗಿದ. ಅಮಾಯಕಳಾದ ಮನಸ್ವಿಗದನ್ನು ತಿಳಿಸಲೇ ಇಲ್ಲ. ಒಂದು ದಿನ ಗೆಳೆತನದ ಮಾತನಾಡಿ ಅಧಿಕಾರಯುತವಾಗಿ ಅವಳ ಮನೆಗೆ ನುಗ್ಗಿ ತನ್ನ ಮನದಲಿರುವುದು ಪ್ರೇಮವಲ್ಲ, ಕಾಮ ಎಂಬುದನು ಸಾಬೀತುಪಡಿಸಿ ಬಿಟ್ಟ. ಅಬಲೆ ಮನಸ್ವಿ ಸಹಕರಿಸುವುದ ಬಿಟ್ಟು ಮತ್ತೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅಳುತ್ತಾ ತನ್ನ  ಬಾಳಿಗಾಗಿ ಶಪಿಸಿದಳು. ದೇವರು ಅವಳ ಬಾಳಿಗೆ ಕತ್ತಲಾಗದೆ ಪ್ರೀತಿಯ ಗುಚ್ಛವಾಗಿ ದರ್ಶನ್ ನನ್ನು ನೀಡಿದ. ನಿಜ ತಿಳಿದರೂ ದರ್ಶನ್ ಮಾನಸಿಕ ಪ್ರೀತಿಯೆದುರು ಅದು ಶೂನ್ಯವೆನುತ ಬಾಳಿಗಡಿಯಿಟ್ಟು ಜೈಸಿದ.
@ಪ್ರೇಮ್@
19.06.2020

ಬುಧವಾರ, ಜೂನ್ 3, 2020

1434. ನೀತಿಕಲಿ

ನೀತಿ ಕಲಿ

ಕಲಿತು ಜಾಣನಾದೊಡೆ ಪ್ರಾರಂಭ ಬದುಕ ಮುಂಜಾವು
ಬುದ್ಧಿ ತಿಳಿದೊಡೆ ಆರಂಭ ನಿಜದ ಸಜವು..

ಮೇಲೇರಿ ಕೆಳಗಿಳಿವ ಜೋಕಾಲಿ
ಜೀಕಿದಷ್ಟು ಸಾಗುವ ಖಯಾಲಿ
ದೂಷಿಸಿ ಮುನ್ನಡೆವ ವೈಯ್ಯಾರ
ಹಿಂದೆ ಹಾಕಿ ಮುಂದೋಡುವ ಹುನ್ನಾರ..

ತದ್ರೂಪಿ ಸೃಷ್ಟಿಸುವ ಕಾತರ
ಸಾವಿಲ್ಲದ ಜೀವನದ ಆತುರ
ಕೊನೆಯ ಕ್ಷಣದವರೆಗೂ ಅಹಂಕಾರ
ಬರದು ಮನುಜಗೆ ಮಮಕಾರ!

ಸತ್ಯಕ್ಕೆ ಟೋಪಿ ಹಾಕಿದವ ಜಾಣ!
ಸುಳ್ಳು ಪದವಾಡದವ ಕೋಣ!
ದುಡ್ಡಿದ್ದವ ದೇವರಿಗಿಂತಲೂ ಮೇಲು
ದೇವಲದ ಆಫೀಸು, ಹುಂಡಿಗವನೇ ಕಾವಲು..

ಸರಳ ಬದುಕಿನವಗೆ ಕ್ರಾಂತಿ,
ಐಶಾರಾಮ ನಡೆಸಿದವನಿಗೆ ಕೀರ್ತಿ!
ನಾದ, ಸಂಗೀತ ಸರ್ವಗೆ ಸ್ಪೂರ್ತಿ
ಕಲಿ ನೀ ಶುದ್ಧವಾದ ನೀತಿ, ಪ್ರೀತಿ!
@ಪ್ರೇಮ್@
28.01.2020

1433. ಮರುಗದಿರು

ಮರುಗದಿರು

ಮರುಗದಿರು ಮನವೆ ಮೆತ್ತಗಾಗಿ!
ಮೆರಗೆಲ್ಲಿ ಮರುಗಿದರೆ ಮನದೊಳಗೇ ಮೆತ್ತಗಾಗಿ?

ಮೆರುಗು ಬರಲು ಮರುಗ ಬಾರದು ಮನದಿ
ಮೆರುಗೇರಲು ಮನವು ಮರವಾಗು ಮುದದಿ!

ಮರೆಯದಿರು ಮನವೇ ಮೇಲೇಳುವ ಮೃದು ಮಧುರ ಮೌನವ!
ಮೊಳಗುತಿರು ಮುದದಿ ಮುಕುಟಪ್ರಾಯವಾದ ಮಂಜಿನ ಮಣಿಯಂತೆ!

ಮೋಜಿಗಾಗಿ ಮಜದಿ ಮರುಳಾಡದೆ ಮನವೇ!
ಮಹಲ ಹೊರಗಿನ ಮೈದಾನದಿ ಮಕ್ಕಳಂದದಿ ಮೈವೆತ್ತಿ ಮೆರೆ!

ಮಿತವ್ಯಯಿಯಾಗು, ಮಿತಭಾಷಿಯಾಗು, ಮದವೇರದಿರು!
ಮೋಹ ಮತ್ಸರವದು ಮನಕೆ ಮಂಗಳಕರವಲ್ಲ!

ಮೋಹಿನಿಯ ಮೋಹಕತೆ ಮೆರೆಯದಿರಲಿ ಮೋಹವೇ,
ಮೋಡದೊಳಗಿನ ಮೋಹಕ ಮಿನುಗುತಾರೆಯಂತಿರು ಮನವೇ..

ಮುದ್ದು ಮನವೇ, ಮೈಮರೆಯದಿರೆಂದಿಗೂ ಮೈಮರೆತು
ಮಾನವತೆಯ ಮಹಾ ಮಹತ್ತ ಮರೆಯದಿರು!

ಮಕರನಂತಿರದೆ ಮದಗಜನಂತೆ ಮದವ ಮರೆತುಬಿಡು!
ಮೊಗದೊಳು ಮುಗುಳ್ನಗೆಯಿಹ ಮುದ್ದು ಮಗಳಂತಿರು!

ಮಂಗನಂತಿರದೆ ಮಂಜುಹನಿಯ ಮುತ್ತು ಮಣಿಯಂತಾಗು!
ಮೆಲ್ಲನೆ ಮುಂಜಾಗ್ರತೆಯಿಂದ ಮುಂದಡಿಯಿಡು ಮರ್ಕಟ ಮನವೇ..
@ಪ್ರೇಮ್@
29.01.2020

1432. 4 ಹಾಯ್ಕುಗಳು

ಹಾಯ್ -ಕು -ಗಳು..

ನೀ ನನ್ನನೇನು
ನಾ ನಿನ್ನನೇನೆನ್ನೆನೆ
ನೀ ನನ್ನವಳೇ..!

ನಾನಿರಲಾರೆ
ನಿನ್ನ ಬಿಟ್ಟು ಎಂದಿಗೂ
ನನ್ನ ಮೊಬೈಲೇ..

ನೀನಿರದಿರೆ
ನಾನೆಲ್ಲಿ ಬೆಳೆಯುವೆ
ನನ್ನರಗಿಣಿ?

ನಿನ್ನ ಇರವು
ಬದುಕಿಗಾಸರೆಯು
ಜಂಗಮವಾಣಿ!
@ಪ್ರೇಮ್@
26.02.2020

1431. ಹಾಡು ಕೋಗಿಲೆಗೆ

ಭಾವಗೀತೆ
ಕೋಗಿಲೆಗೆ

ಮುಂದೆ ಮುಂದೆ ಸಾಗುತಲಿ
ಹಾಡು ಕೋಗಿಲೆ ನೀ..ಹಾಡು ಕೋಗಿಲೆ
ಹಿಂದೆ ತಿರುಗಿ ನೋಡದೇನೆ
ಹಾಡು ಕೋಗಿಲೆ ನೀ...

ಮನದ ದುಗುಡವೆಲ್ಲ ದೂಡಿ
ನಲಿವಿನ ತರಂಗಗಳ ತೀಡಿಪ
ಬಾಳ ಬಯಲ ತಂಪು ಮಾಡಿ
ಖುಷಿಯ ರಾಗಗಳ ಹುಡುಕಾಡಿ
ಹಾಡು ಕೋಗಿಲೆ ನೀ..

ಶೃತಿಯ ಹಿಡಿದು ನಡೆಯುತ
ಕೃತಿಗೆ ರಾಗ ಹಾಕುತ
ಸ್ಮೃತಿಯ ಕೇಂದ್ರೀಕರಿಸುತ
ಭಾವದೊಡನೆ ಬೆರೆಸುತ
ಹಾಡು ಕೋಗಿಲೆ ನೀ..

ಮೌನವನ್ನು ಮುರಿಯುತ
ಎದೆಯ ವೀಣೆ ಮೀಟುತ
ಸಂತಸವ ಹಂಚುತ
ರಾಗ ಲಹರಿ ಕಲಿಯುತ
ಹಾಡು ಕೋಗಿಲೆ ನೀ
ನಲಿದಾಡು ಕೋಗಿಲೆ.
@ಪ್ರೇಮ್@
03.04.2020

1430. ವಿದ್ವತ್ಪೂರ್ಣ

ವಿದ್ವತ್ಪೂರ್ಣ 


ವಂದನೆ ನಿನಗೆಂದು ಬಿನ್ನಹಗೈದೊಡೆ
ಕಂದನೆ ಆದರೂ ವರಕೊಡುವೆ.
ಚಂದದ ಭಕ್ತಿಗೆ ಮೆಚ್ಚುಗೆಯಾಗಿ
ಅಂದದ ಜೀವನ ಪಾಲಿಸುವೆ.

ದ್ವಂದದ ಮನದಲಿ ಬಕುತಿಯು ಬಾರದು
ಗಂಧವ ಹಣೆಯಲಿ ಧರಿಸಿದರೂ
ಮಂದದ ಬುದ್ಧಿಗೆ ಸಾಣೆಯ ಹಚ್ಚಲು
ಇಂಧನ ತಯಾರು ಮೆದುಳಿನಲಿ..

ಬಂಧನ ಯಾರಿಗೂ ಬೇಡವು ಜಗದಲಿ
ಒಂದನೆ ತರಗತಿ ಮಕ್ಕಳಿಗೂ
ಪಂದ್ಯವ ಕಟ್ಟುತ ಓಡಲುಬೇಕು
ವಂದ್ಯದ ಬದುಕಿನ ನಾವೆಯಲಿ..

ವೈದ್ಯರ ಪಾತ್ರವು ಬಹಳವೇ ಹಿರಿದು
ವಿದ್ಯೆಯ ಕಲಿತವ ಮೇಲವನು
ಸುದ್ದಿಯ ಹಂಚುತ ಬಾಳುವ ಮನುಜನು
ಗೆದ್ದಲಿನಂತೆಯೆ  ಇರುವವನು
@ಪ್ರೇಮ್@
17.04.2020

1429. ಹೀಗ್ಮಾಡ್ಬೇಕಿದೆ



ಹೀಗ್ಮಾಡ್ಬೇಕಿದೆ

ಶುಚಿಯಾದ ಗಾಳಿಯನು ಬಳಸೋಣ ನಾವೆಲ್ಲ
ಸುಂದರವು ನಮ್ಮಯ ಪರಿಸರವು
ನೆಲ ನೀರು ಮಣ್ಣನ್ನು ಉಳಿಸೋಣ ಜಗಕೆಲ್ಲ
ಬೆಳೆಸುವ ಗಿಡಮರವ ಪ್ರತಿನಿತ್ಯವು..

ಮನೆಯೊಳಗೆ ಸ್ವಚ್ಛತೆಯು ಬೇಕಾಗಿದೆ
ಮನದೊಳಗೆ ಸೌಂದರ್ಯ ಬರಬೇಕಿದೆ
ರಾಸಾಯನಿಕವ ಸುರಿಯುತ್ತ ಇಂದು
ನೆಲಜಲವು ಹಾಳಾಗಿ ಬಾಯ್ಬಿಟ್ಟಿದೆ..

ಮನೆಗೊಂದು ಮರವನ್ನು ನೆಡಬೇಕಿದೆ
ಮಕ್ಕಳಿಗೂ ಪಾಠವನು ಕಲಿಸ್ಬೇಕಿದೆ
ನೀರನ್ನು ಉಳಿಸೋ ಊಟವನು ಬಳಸೋ
ಕೆಲಸವನು ನಾವೆಲ್ಲ ಮಾಡ್ಬೇಕಿದೆ..

ತಿಮ್ಮಕ್ಕನ್ ನೋಡಿ ನಾವ್ ಕಲಿಬೇಕಿದೆ
ಗಿಡಗಳಿಗೆ ಸ್ವಾತಂತ್ರ್ಯ ಕೊಡ್ಬೇಕಿದೆ
ಮನುಜನೇ ಮೆರೆದು ಮರವೆಲ್ಲ ಕಡಿದು
ತಾನೇ  ಮೇಲೆಂಬುದ ಬಿಡ್ಬೇಕಿದೆ..
@ಪ್ರೇಮ್@
22.04.2020

1428. ವಚನ

ವಚನ
ಕಲ್ಲು ಕಲ್ಲಿಗೂ ಆರಾಧನೆ ಮಾಡುವರು
ಜಾಗ ಭೋಗಕೆ ಹೊಡೆದಾಡುವರು
ಮೂರು ದಿನದ ಬಾಳಿನ ಮಹತ್ವ ಅರಿಯರು
ತಾನೂ ಸಾಯಲಿಕ್ಕಿದೆಯೆಂಬುದ ಮರೆತು
ಅಣ್ಣ ತಮ್ಮಂದಿರೇ ಸಾಯಿಸಿಕೊಳ್ಳುವರು ಈಶಾ..
@ಪ್ರೇಮ್@

1427. ಧನ್ಯವಾದ ಕವನ

ಧನ್ಯವಾದಗಳ ಧರೆಗಿಳಿಸಿವೆ

ವಾಹಿನಿ ಕಲಾ ಸಂಘದ ಕವಿಗಳ
ಕವಿಗಳೆ ನಡೆಸುವ ಕ್ಷಿಪ್ರ ಕವಿಗೋಷ್ಟಿಯು
ಸರಳ ಸುಂದರವಾಗಿ ಇಂದು
ಮೂಡಿಬಂದಿಹುದು ಮಹೇಶಣ್ಣನ ಸಾರಥ್ಯದಿ..
ಅಪ್ಪಯ್ಯನವರ ಸಹಕಾರದಿ
ಮಧುರಕಾನನರ ಮಾರ್ಗದರ್ಶನದಿ
ಶ್ರೀದೇವಿ ಅಕ್ಕನ ಮಧುರ ಗಾನದಲಿ
ಕವಿಗಳ ಕವನದ ಸರಮಾಲೆಯಲಿ
ಹಿರಿಯುರ ಆಶಯ ಮಾತುಗಳೊಂದಿಗೆ
ಕವಿಗಳೆ ಆದ ಅಧ್ಯಕ್ಷರ ವಿಮರ್ಶೆ
ಕವಿಮನಗಳ ಕೂಡುವಿಕೆಯದು ಅಂದ
ಸರ್ವರ ಕವನದ ಸಾಲುಗಳಂದ
ಗುಂಪಲಿ ಸರ್ವರ ಜೊತೆ ಸುಖದಾನಂದ
ಸರ್ವರಿಗೂ ಧನ್ಯವಾದದ ಸರಮಾಲೆ
ಇಳಿದಿದೆ ಧರೆಗೆ ಅಕ್ಷರಮಾಲೆ..
@ಪ್ರೇಮ್@

1426. ಶಿಕ್ಷಕರ ಕಕ್ಷೆಯೊಳಗೆ-1

ಶಿಕ್ಷಕರ ಕಕ್ಷೆಯೊಳಗೆ-1

ಮಾತಿನ ತಿದ್ದುಪಡಿ..

ಅದಿನ್ನೂ ನನ್ನ ವೃತ್ತಿಯ ಮೊದಲ ದಿನಗಳು. ಆಗಷ್ಟೆ ಟಿ ಸಿ ಹೆಚ್ ಮಾಡಿ ಬಹಳ ಉತ್ಸಾಹದಿಂದ ನನ್ನ ರಾಜ್ಯಕ್ಕೇ ಹೆಚ್ಚಿನ ಅಂಕಗಳ ಕಂಡು ನಮ್ಮ ಪ್ರಶಿಕ್ಷಕರೇ ತಮ್ಮ ಪರಿಚಯದ ಶಾಲೆಗೆ ಕರೆದಿದ್ದರು. ಸಂತಸದಿಂದ ಹೋಗಿದ್ದೆ ಕೂಡಾ. ಹಾಗೆಯೇ ಶಾಲೆಗೆ ಸೇರಿಸಿಕೊಂಡರು ಕೂಡಾ. ನನಗೆ ಆಗ ಇಪ್ಪತ್ತೊಂದು ವರ್ಷ ವಯಸ್ಸು. ಮಕ್ಕಳನ್ನು ಕಂಟ್ರೋಲ್ ಮಾಡೋದು ಅಂದ್ರೆ ಕಷ್ಟ ಸಾಧ್ಯ. ಟ್ರೈನಿಂಗ್ ಆಗಷ್ಟೆ ಮುಗಿದಿತ್ತು. ಹೊಸ ರೂಮ್. ಅಲ್ಲಿ ಅಡಿಗೆ ಗೊತ್ತಿಲ್ಲದ ನಾನು ಮತ್ತು ಹತ್ತನೇ ತರಗತಿ ಪಾಸಾಗಿ ಆಗಷ್ಟೆ ಕಾಲೇಜು ಸೇರಿದ ನನ್ನ ತಮ್ಮ. ಅನುಭವಗಳ ಪೆಟ್ಟಿಗೆಯ ಕೀಯನ್ನು ನಿಮಗಾಗಿ ಓಪನ್ ಮಾಡುತ್ತಿರುವೆ.

2003ನೇ ಇಸವಿ. ಮೈಸೂರಿನ ದೀಪಾನಗರದ ದೀಪಾಶಾಲೆಯಲ್ಲಿ  ನಾನಾಗ ಶಿಕ್ಷಕಿಯಾಗಿದ್ದೆ. ಅದು ನನ್ನ ಮೊದಲ ಶಾಲೆ. ಹಳ್ಳಿಯ ಮಕ್ಕಳು ಕಡಿಮೆ ಫೀಸು, ಉತ್ತಮ ಆಂಗ್ಲ ಮಾಧ್ಯಮದ ಶಿಕ್ಷಣ ಸಿಗುತ್ತಿದ್ದ ಕಾರಣ ಅಲ್ಲಿಗೆ ಹೆಚ್ಚು ಬರುತ್ತಿದ್ದರು. ನನ್ನ ದಕ್ಷಿಣ ಕನ್ನಡದ ತುಳು ದಾಟಿಯ ಶುದ್ಧ ಕನ್ನಡ ಅಲ್ಲಿನ ಮಕ್ಕಳಿಗೆ ಅರ್ಥ ಆಗ್ತಿರ್ಲಿಲ್ಲ. ಅಲ್ಲಿನ ಮಕ್ಕಳ ಈ ಶೈಲಿಯ ಮಾತು ನನಗೆ ಹೊಸದು. ತುಂಬಾ ಫಾಸ್ಟ್, ಒರಟು ಮಾತು ಅಂತ ನಾನಂದು ಕೊಳ್ತಾ ಇದ್ದೆ. ನನ್ನ ಭಾಷಾ ಶೈಲಿ ನೋಡಿ ಅವರು ನನಗೆ 'ಕನ್ನಡ ಮಾತಾಡಿ ಮಿಸ್" ಅಂತಿದ್ರು! ಏಕೆಂದರೆ ಅಲ್ಲಿನ ಮಕ್ಕಳಿಗೆ ನನ್ನ ಕನ್ನಡ ಅರ್ಥವೇ ಆಗುತ್ತಿರಲಿಲ್ಲ! ಹೋಗ್ಲಾ, ಬಾರ್ಲಾ, ತಿನ್ಲಾ ಭಾಷೆ ಅವರದು!

  ಮಾತೆತ್ತಿದರೆ ಗೆಳೆಯರಿಗೆ ಮನೆಯ ಭಾಷೆಯಲ್ಲೆ ಬೈತಾ ಇದ್ರು. ನಿನ್ ಮುಖಕ್ಕೆ ಮಂಗ್ ಳಾರ್ತಿ ಎತ್ತ, ನಿನ್ ಬಾಯಿಗ್ ಮಣ್ಣಾಕ, ನಿನ್ ಹೊಟ್ಟೆಗ್ ಬೆಂಕಿ ಹಾಕ... ಹೀಗೆ. ನನಗೆ ಅದನ್ನು ಕೇಳಿ ಬೇಸರವಾಗುತ್ತಿತ್ತು. ಒಬ್ಬರಿಂದ ಮತ್ತೊಬ್ಬರಿಗೆ ಇವು ರವಾನೆಯಾಗುತ್ತಿದ್ದವು. ಪೋಷಕರು ಮನೆಯಲ್ಲಿ ಹೇಳಿದ ವಾಕ್ಯಗಳು ಶಾಲೆಯಲ್ಲಿ ಮಕ್ಕಳ ಬಾಯಿಯಿಂದ ಇತರ ಮಕ್ಕಳಿಗೆ ಪ್ರಯೋಗವಾಗುತ್ತಿದ್ದವು. ಮೈ ಉರಿಯುತ್ತಿದ್ದವು.  ಹೇಗಾದರೂ ಈ ಕೆಟ್ಟ ಭಾಷೆಯನ್ನು ಮರೆಸ ಬೇಕೆಂದು ಪಣ ತೊಟ್ಟೆ. ಅವರ ಭಾಷೆ, ಬೈಗುಳಗಳನ್ನು ಬದಲಾಯಿಸತೊಡಗಿದೆ.

ನಾನದನ್ನು ಬದಲಾಯಿಸಿ ಹೀಗೆ ಹೇಳಿ ಅಂತ ಹೇಳಿಕೊಟ್ಟ ವಾಕ್ಯಗಳು..
1. ನಿನ್ ಮುಖಕ್ ಪೌಡರ್ ಹಾಕ.
2. ನಿನ್ ಹೊಟ್ಟೆಗ್ ಪಾಯ್ಸ ಹಾಕ.
3. ನಿನ್ ಮುಖಕೆ ಫೇರ್ ಆಂಡ್ ಲವ್ಲಿ ಹಾಕ.
4. ನಿನ್ ಬಾಯಿಗ್ ಸಕ್ರೆ ಹಾಕ.
5. ನಿನ್ ಹೊಟ್ಟೆಗ್ ಒಬ್ಬಟ್ ಹಾಕ..
ಈ ಘಟನೆ ನನ್ನ ವೃತ್ತಿಯ ಮೊದಲ ಅನುಭವ.ನೆನೆಸಿಕೊಂಡರೆ ಈಗ ನಗು ಬರುತ್ತದೆ.ಆದರೆ ಮಕ್ಕಳ ಕೆಟ್ಟ ಮಾತನ್ನು ಬದಲಾಯಿಸಿದ ಸಂತಸ ಹಾಗೂ ಹೆಮ್ಮೆ ಇಣುಕುತ್ತದೆ. ನಿಮಗೇನನಿಸಿತು?
ಧನ್ಯವಾದಗಳೊಂದಿಗೆ...
@ಪ್ರೇಮ್@
04.11.2019

1425. ೪ಹಾಯ್ಕುಗಳು

ಹಾಯ್ಕುಗಳು

1. ಮಾತು ಮೃತ್ಯುವೇ?
     ಮೌನವೆಲ್ಲ ಸತ್ಯವೇ?
       ಮನಕೆ ಗೊತ್ತು!!!

2. ಕಾಣ ದೇವರು
        ವರವ ಕೊಡುವನು
             ಹುಟ್ಟು ಸಾವಲಿ!

3. ಗಿರಗಿರನೆ
      ತಿರುಗುವ ಬುಗರಿ
        ಬದುಕಿನಂತೆ!!!

4. ಪ್ರೀತಿದಿಂದಲಿ
         ಪ್ರೀತಿಯ ಗೆಲ್ಲಬೇಕು
              ಪ್ರೀತಿ ಹೃದಯ!!!
@ಪ್ರೇಮ್@
16.05.2020