ಗಝಲ್
ಮೂರು ದಿನದ ಬಾಳಿಗೆ ಸಣ್ಣ ನಗುವಿನಲೆಯೇ ಗಝಲ್
ನೂರು ಕನಸ ಬದುಕಿನೊಳಗೆ ತುಸು ಪ್ರೀತಿಯೇ ಗಝಲ್!
ಮಹಡಿ ಮನೆಯೊಳಗೆ, ಅರಮನೆಯ ಕೊನೆಯೊಳಗು ಬೇಕಿದೆ
ಸವಿ ಮಾತಿನ ನಗೆಯುಸಿರಿಗೆ ಮೌನ ಮಾಯೆಯೇ ಗಝಲ್
ನೋಟ ಪಾಠ ಕೂಟ ಕಾರ್ಯಕೆ ಸೇರಿಕೆ ಬೇಕಲ್ಲವೇ?
ಸೋತ ಜೀವಕೆ ಸಾಂತ್ವನ ಕೊಡುವ ಗೆಳತಿಯೇ ಗಝಲ್..
ರಾಗಿ ಅಕ್ಕಿಯ ಗೋಧಿ ಎಣ್ಣೆಯ ಶಕ್ತಿ ಇಹುದಲ್ಲವೇ?
ಸಾಗಿ ದುಡಿಯಲು ದೇಹದೊಳಗೆ ಶಕ್ತಿಯೇ ಗಝಲ್..
ಮೋಸ ವಂಚನೆ ದೂರು ದೂಷಣೆ ಬೀಳು ಸಹಜವು
ದ್ವೇಷವಿಲ್ಲದ ಸ್ವಚ್ಚ ಬಾಳ್ವೆಯ ಯುಕ್ತಿಯೇ ಗಝಲ್..
ರೋಷದಗ್ನಿಯ ದೂರ ಮಾಡುತ ಬಾಳುವವನೇ ಮನುಜನು
ಕೋಶ ಓದುತ ದೇಶ ಸುತ್ತುವ ಕಲಿಕೆಯೇ ಗಝಲ್..
ವಿರಹದುರಿಯಲಿ ಬೇಯುತಿರುವ ಕ್ಷಣವು ಬರುತಲಿರುವುದು
ಬರಹ, ಪ್ರೇಮವ ಗೆದ್ದು ಬಿಡುವ ಸತ್ಯಶಾಂತಿಯೇ ಗಝಲ್..
@ಪ್ರೇಮ್@
17.05.2021