ಗುರುವಾರ, ಫೆಬ್ರವರಿ 28, 2019

819.ನಾವೇನು ಕಡಿಮೆ

ನಾವೇನು ಕಡಿಮೆ

ಭಾರತಿಯು ನಮ್ಮ ಹೆತ್ತು ಹೊತ್ತ  ತಾಯಿಯಲ್ಲವೇ
ಭಾರತ ಮಾತೆಯ ಹೆಮ್ಮೆಯ ಯೋಧರು ನಾವೆಂದಿಗಿಲ್ಲವೇ?

ಸತ್ಯ ಶಾಂತಿಗಾಗಿ ತಲೆಯ ಕೊಡಲು ಹಿಂಜರಿಯೆವು
ವೈರಿ ನಮ್ಮ ಕೆಣಕಿದರೆ ಸುಡದೆ ಎಂದು ಬಿಡೆವು..

ನಮ್ಮ ತಾಯಿ ಋಣವ ತೀರಿಸಲು ಒಂದಾಗುವೆವು
ಶತ್ರುಗಳ ಮೆಟ್ಟಿ  ನಿಂತು ರಕ್ತ ಚಿಮ್ಮಿ ಬಿಡುವೆವು..

ನಾದ ವೇದ ಗಾನ ವೈದ್ಯ ಯಾವುದರಲಿ ಕಡಿಮೆ?
ಗುಣದ ಜತೆ ಧೈರ್ಯವಿರಲು ಏಕೆ ನಮಗೆ ಅಂಜಿಕೆ?

ವೈರಿಯನ್ನು ಮೆಟ್ಟಿ ನಿಲ್ಲಲು ಜೀವದ ಹಂಗು ತೊರೆದು ಹೋರಾಡುವೆವು!
ಮನದ ಬಲದ ಮಾತು ಕೇಳಿ ಹೆದರಿ ಎಂದೂ ಓಡೆವು..

ದೇಶ ಕಾಯೋ ಸೈನಿಕರು ಎಂಬ ಹೆಮ್ಮೆ ನಮಗೆ!
ನಾವಿರಲು ಬದುಕಲೆಂದು ಆತಂಕ ಬೇಡ ನಿಮಗೆ!

ಮನೆ ಕುಟುಂಬ ಶಾಲೆ ಎಲ್ಲ ನಮಗೆ ನಮ್ಮ ಭಾರತಿ
ತಿಂದು ಕಲಿತು ಬೆಳೆದ ನೀನು ರಾಷ್ಟರವನ್ನೆ ಬೆಳಗುತಿ.

ಪ್ರೀತಿಯಿರಲಿ ಜನರ ಜೊತೆ ಭೇದವೆಂದೂ ತೋರದೆ
ನಮ್ಮೆಡೆಗೆ ಗೌರವ ಇರಲಿ ತಾತ್ಸಾರವನ್ನು ಬೀರದೆ..
@ಪ್ರೇಮ್@

818. ವಿಮರ್ಶೆ

ಶಶಿರೇಖಾ ಅವರ ಹರಸಿಬಿಡು...

ಆ ಕಾಲವೇ ಚಂದವಿತ್ತಾ
ಅಂತನಿಸುತ್ತಿದೆ ನನಗೆ
ಈಗೀಗ ಕಾಲ ಮಿತಿಗಳ
ಪರಿವಿಲ್ಲದೇ ಇದ್ದರಲ್ಲ....
💐💐💐💐💐💐

ಹಲವು ಹಿರಿಯರ ನುಡಿಯಿದು. ನಮ್ಮ ಬಾಲ್ಯದ ದಿನಗಳ ನೆನೆದರೆ ನಮಗನ್ನಿಸುವುದೂ ಅದೇ.
ಇದ್ದಾರಲ್ಲಾ.. ಆಗಬೇಕೇನೋ..
💐💐💐💐💐💐

ಗಡಿಯಿಲ್ಲ ಊರಿಲ್ಲ
ಕೇರಿಯಿಲ್ಲ ಜಾತಿಯ
ಗೊಡವೆಯಂತೂ ಅಲ್ಲಿ
ನುಸುಳಲೇ ಇಲ್ಲ....
💐💐💐💐💐💐💐
ಸುಭದ್ರ ಕುಮಾರಿ ಚೌಹಾನರ ಬಾರ್ ಬಾರ್ ಆತೀ ಹೇ ಮುಝ್ಕೋ ಮಧುರ್ ಯಾದ್ ಬಚ್ಪನ್ ತೇರಿ.. ಗಯಾ ಲೇ ಗಯಾ ಜೀವನ್ ಕಾ ಸಬ್ ಸೇ ಮಸ್ತ್ ಖುಷಿ ಮೇರಿ...
ಊಂಚ್ ನೀಛ್ ಕಾ ಜ್ಞಾನ್ ನಹ್ಙೀ ಥಾ.. ಚುವಾ ಅಚೂತ್ ಕಿಸ್ ನೇ ಜಾನಿ... ಈ ಸಾಲುಗಳು ನೆನಪಾದವು.. ನಿಮ್ಮ ಕವನದ ಸಾಲುಗಳನ್ನೋದುತ್ತಿರಲು..
💐💐💐💐💐💐

ಬಟ್ಟೆ ಬಂಗಾರಕಾಗಿ
ಕಾದಾಡುವ ಸ್ಥಿತಿಯು
ನಾನು ನನ್ನದು ಎಂಬ
ಸ್ವಾರ್ಥತೆ ಅವರಲಿರಲಿಲ್ಲ....
💐💐💐💐💐💐💐
ಅಜ್ಜಿ ನೆನಪಾದರು ಒಮ್ಮೆಗೆ.. ಭಾವುಕಳಾದೆ! ಅಜ್ಜಿಯ ದೊಡ್ಡಮ್ಮನ ಬಳಿ ಒಂದು ಬುಟ್ಟಿ ಚಿನ್ನದ ಒಡವೆಗಳಿದ್ದವಂತೆ. ಅವರು ಹೋದಲ್ಲೆಲ್ಲಾ ಧರಿಸಿ, ಉಳಿದ ಚಿನ್ನವನ್ನು ಬುಟ್ಟಿಯಲ್ಲಿಟ್ಟು ಹೋಗುತ್ತಿದ್ದರಂತೆ! ಆದರೆ ಅಜ್ಜಿಗೆ ಉಡಲು ಸೀರೆಯಿಲ್ಲದೆ ಒಂದೇ ಸೀರೆಯನ್ನು ಹರಿದು ಒಂದು ತುಂಡನ್ನುಟ್ಟು ಮತ್ತೊಂದು ತುಂಡನ್ನು ಒಗೆದು ಒಣಗಿಸಿ ರಾತ್ರಿ ಹೊದ್ದುಕೊಳ್ಳಲು ಬಳಸುತ್ತಿದ್ದರಂತೆ! ಆದರೂ ಸರಕಾರ ಕೊಡಲೆಂದು ಕೇಳುತ್ತಿರಲಿಲ್ಲ, ಯಾರದೂ ಕದಿಯುತ್ತಿರಲಿಲ್ಲ. ನಿಮ್ಮ ಮಾತು ನಿಜ!
💐💐💐💐💐💐💐

ಅಸಲು ಅವರಿಗೆಲ್ಲ
ದೇಶಗಳ ರಚನೆಯ
ಅರಿವೇ ಇರಲಿಲ್ಲವಲ್ಲ
ಆ ಕಾಲ ಎಷ್ಟು ಚಂದಿತ್ತಲ್ಲ....
💐💐💐💐💐💐
ಖಂಡಿತಾ.. ಅರಿವೇ ಗುರು ಎಂಬ ಗಾದೆಯಿದ್ದರೂ ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಉಡುಪಿ-ದ.ಕ ಜಿಲ್ಲೆಗಳಲ್ಲೇ ಅತಿ ಹೆಚ್ಚು ಮತಾಂಧರಿದ್ದು ಗಲಾಟೆಗಳಾಗುವಾಗ ಅರಿವಿಲ್ಲದಿರುವ ಜೀವನವೇ ಪ್ರಶಾಂತ ಎಂದೆನಿಸುತ್ತದೆ. ಸಮುದ್ರದ ಕಪ್ಪೆಗಿಂತ ಬಾವಿಯ ಕಪ್ಪೆಯೇ ನನ್ನ ಬಾವಿ ದೊಡ್ಡದು ಎಂಬ ಸಣ್ಣ ಭ್ರಮೆಯಲ್ಲಿ ಬೀಗುತ್ತಾ ಬದುಕುತ್ತದೆ!
💐💐💐💐💐💐

ಅವರದೊಂದೇ ಜಾತಿ
ಮಾನವನೆಂಬುವದದು
ಅವರಿಗ್ಯಾವ ಜ್ಞಾನ ವಿಜ್ಞಾನಗಳ
ಪರಿವೆಯಂತೂ ಇರಲಿಲ್ಲ....
💐💐💐💐💐💐
ಜಾತಿ ಮತ ಪಂಥಗಳ ರಾಜಕೀಯ, ಗಲಾಟೆ,ದೊಂಬಿ ಪ್ರಾರಂಭವಾದುದು ಇತ್ತೀಚಿನ ವರುಷಗಳಲಿ. ರಾಜಕೀಯದ ಪರಮಾವಧಿಯಲಿ. ಸ್ವಾತಂತ್ರ್ಯ ಹೋರಾಟದ ದಿನಗಳಲಿ ಭಾರತವೆಲ್ಲಾ ಒಂದಾಗಿತ್ತು. ನಿಮ್ಮ ಮಾತು ಅಕ್ಷರಷಃ ನಿಜ.
💐💐💐💐💐💐

ಬುದ್ಧಿಯಾದರೂ ಯಾಕೆ
ವಿಕಸನವಾಯಿತೋ ಭಗವಂತಾ
ಶುರುವಾಯಿತಲ್ಲ ನಂದು ನಿಂದಂತ
ಯುದ್ಧ ಸಾರಿದರು ಸಾವು ಬರಲಂತ....
💐💐💐💐💐💐
ಜಗತ್ತು ಚಿಕ್ಕದಾಯಿತು, ಮನವೂ ಚಿಕ್ಕದಾಯಿತು. ಮನಸುಗಳು ಮುದುಡಿದವು. ಅದುವೇ ತಮ್ಮ ಸ್ವಾರ್ಥತೆಗೆ ಕಾರಣವಾಯ್ತೇನೋ.
💐💐💐💐💐💐💐
ಧರ್ಮ ಸಂಸ್ಥಾಪನಾರ್ಥಾಯ
ಅಂತ ನೀನು ಮತ್ತೆ ಅವತಾರ
ತಾಳದಿದ್ದರೂ ನಡೆದೀತು ದೇವ
ಅಲ್ಲಿಂದಲೇ ಹರಸಿಬಿಡು ಮತ್ತೆ
ಆದಿಮಾನವನ ಕಾಲ ಶುರುವಾಗಲಂತ.....
💐💐💐💐💐💐💐
ಮನದಿಂಗಿತ ಉತ್ತಮ. ಈಗ ದೇವ ಯಾವುದಾದರೂ ಅವತಾರವೆತ್ತಿ ಬಂದು ನಾನು ದೇವರೆಂದರೂ ಯಾರೂ ನಂಬಲಿಕ್ಕಿಲ್ಲ, ಬದಲಾಗಿ ರಾಜಕೀಯಕ್ಕಾಗಿ ವೇಷ ಮರೆಸಿಕೊಂಡು ಬಂದನೆಂದು ಕಲ್ಲು ಹೊಡೆದು ಕಳಿಸಿಯಾರು..

ಉತ್ತಮ ಕವನಕ್ಕೆ ಅಭಿನಂದನೆಗಳು..
@ಪ್ರೇಮ್@

ಬುಧವಾರ, ಫೆಬ್ರವರಿ 27, 2019

817. ಮಾನವನ ಜೀವನ

*ಜನ-ಮನುಜ*

ಜನವೆಂಬ ಮನುಜನೇ ನಿನಗೆಲ್ಲಿಯ ನಿಯೋಜನೆ
ಬದುಕೆಂಬ ಜಾತ್ರೆಯಲಿ ನಿನ್ನದೇನು ಯೋಜನೆ?
ಭಜನೆ ಚಲನೆ ವಿಜ್ಞಾನ ಖಜಾನೆಯಲಿ...
ವರ್ಜಿಸದೆ ಸದಾ ಹಾಳು ಚಾಲಿಯಲಿ..

ಜನಗಳನೆ ಜೈಸುತಲಿ, ಜನರೊಡನೆ ಜೀವಿಸುತಲಿ
ಮಾನವರ ಗೆಳೆತನದಲಿ, ಸಿರಿಗಾಗಿ ಜಗಳದಲಿ
ಹೆಣ್ಣು-ಹೊನ್ನು-ಮಣ್ಣಿನಾಸೆಯಲಿ ಬೀಗುತಲಿ..
ಇತರರ ಕೀಳಾಗಿ ತಾ ಮೇಲೆಂದು ಕೂಗುತಲಿ..

ಮದವೇರಿದ ವದನವ ಹೊತ್ತು
ಮದಿರೆಯ ಏರಿಸಿ ಮನವನು ಮರೆತು,
ಮೋಹಕತೆಯಲಿ ಕ್ಷಣಗಳ ಮೈಮರೆತು
ಮುದದಿ ಜತನದಿ ದಿನಗಳ ಕಾಯಲು ಸೋತು...

ಮನಸಿನ ಮುನಿಸಿಗೆ ಮಾನವ ಕಾರಣ
ಕನಸಿನ ಮಾತದು ಜೀವನ ವಾಹನ
ಜನಮನ ಗೆದ್ದೊಡೆ ಜೀವನ ಪಾವನ
ಉನ್ನತ ಮನವದು ಬಾಳಿನ  ಕವನ....

@ಪ್ರೇಮ್@
28.02.2019

816. ಸೀ 'ರಿಯಲ್'

ಬದುಕು ಹೀಗೆ

ಬದುಕದು ಸಾಗಿದೆ ಟಿವಿಯ ಜೊತೆಗೆ
ಕಂಡು ಹಿಡಿದವ ಸಂಶೋಧನೆಯಲಿ ಕುಳಿತ
ಕೆಲಸವಿಲ್ಲದವ ನೋಡುತ ಕುಳಿತ
ಚಾನಲ್ ಮಾಲೀಕ ದುಡ್ಡಲಿ ಕುಳಿತ...

ಮಗುವಿಗೆ ಚಿಂಟು ಅಪ್ಪಗೆ ಕ್ರಿಕೆಟು
ಚಾಮುಂಡಿಯಂಥ ಅಮ್ಮನ ಕೈಲಿದೆ ರಿಮೋಟು
ನೋಡಲು ಬೇಕು ಬಗೆಬಗೆ ಧಾರಾವಾಹಿ...
ನೋಡದೆ ಇದ್ದರೆ ಬದುಕೆನಿಸುವುದು ಕಹಿ...

ಕುಳಿತರೆ ಆರಕೆ ಮುಗಿವುದು ಹನ್ನೊಂದಕೆ
ಆಕಡೆ ಈಕಡೆ ಮನೆ ವಿಚಾರ ಯಾತಕೆ
ಸತ್ತವ ಸಾಯಲಿ ಬಿದ್ದವ ಬೀಳಲಿ
ಪುಟ್ ಗೌರಿಗೆ ಮಗುವಾಗಲಿ..

ವಿದ್ಯುತ್ ತೆಗೆದವ ಹಾಳಾಗಿ ಹೋಗಲಿ
ಪಕ್ಕದ ಮನೆ ಉರಿದರೂ ಅಗ್ನಿ ಸಾಕ್ಷಿ ನೋಡುವಂತಾಗಲಿ
ಸುಬ್ಬಕ್ಕನ ಸಂಸಾರ ಒಳ್ಳೆಯದಾಗಲಿ
ಗುಂಡಮ್ಮನ ಗಂಡ ಚೆನ್ನಾಗಿ ನೋಡಲಿ..

ಮಗಳು ಜಾನಕಿಗೆ ಹುಡುಗನು ಸಿಗಲಿ
ಮಂಗ್ಲೂರ್ ಹುಡುಗಿಯ ಹುಬ್ಳಿ ಹುಡುಗ ಬರಲಿ
ಅಜ್ಜಿಯು ನಿನ್ನೆಯ ಅನ್ನವ ತಿನ್ನಲಿ
ಮಗುವಿನ ಕೆಲಸವ ಮಗುವೇ ಮಾಡಲಿ

ಗಂಡನು ಊಟಕೆ ಪಾರ್ಸೆಲ್ ತರಲಿ
ಕೆಲಸವ ಮುಗಿಸಿ ತಡವಾಗಿ ಬರಲಿ
ದೇವಸ್ಥಾನ ಪೂಜೆ ವಾರದ ಕೊನೆಯಲಿ ಇರಲಿ
ನೆಂಟರು ಇಷ್ಟರು ಭಾನುವಾರವೆ ಬಂದ್ಹೋಗಲಿ...

ಪ್ರಪಂಚ ಬೀಳಲಿ, ಬಡವ ಬಾಡಲಿ
ನಮ್ಮನೆ ಟಿವಿ ಹಾಳಾಗದೆ ಇರಲಿ
ಮಾವನ ಮನೆ ಪೂಜೆಗೆ ಸಮಯವು ಎಲ್ಲಿ
ಗೆಳೆಯರ ಬಳಗವೂ ಬಂದರೆ ಮಾತುಕತೆಯೆಲ್ಲಿ?

ಸಾಗಿದೆ ಜೀವನ ಧಾರಾವಾಹಿಯ ಜೊತೆಗೆ
ಬದುಕು ಸಾಗೋದ್ಹೇಗೆ ಟಿವಿಯೇ ಇಲ್ಲದೆ?!!!
@ಪ್ರೇಮ್@
27.02.2019

815. ಮುಕುಟ

ಮುಕುಟ

ಭಾರತಕ್ಕೆಂದೂ ಕಾಶ್ಮೀರ ಮುಕುಟ
ರಕ್ಷಣೆಗೆಮ್ಮಯ ಯೋಧರೆ ಮುಕುಟ..
ರಕುತದ ಕೋಡಿಯ ಹರಿಸಾದರು ಸಾವು
ಬಿಡಲೊಲ್ಲೆವು ಕಳ್ಳ ಭಯೋತ್ಪಾದಕರ ನಾವು..

ಭಾರತ ಮಾತೆಯ ಕಿರೀಟವ ಉಳಿಸಲು
ಹುತಾತ್ಮ ಯೋಧರ ಆತ್ಮಕೆ ಶಾಂತಿಯ ತರಲು
ಹಗಲು ಇರುಳು ಶತೃವಿನೊಡೆ ಹೋರಾಡಿ
ಗಡಿಯಲಿ ಶಾಂತಿಯ ಮಂತ್ರವ ಕಾಪಾಡಿ...

ಜೀವವ ಕೊಡುವೆವು ಕಾಶ್ಮೀರವ ಬಿಡೆವು
ಸತ್ಯ ಶಾಂತಿಯಲಿ ಸದಾ ಬದುಕುವೆವು
ಬಲಿಯನು ಪಡೆವವಗೆ ಬುದ್ಧಿಯ ಕಲಿಸುವೆವು
ತಂಟೆಗೆ ಬಂದರೆ ಎಂಟೆದೆ ತೋರುವೆವು...

ದೇಶದ ಸೇವೆಗೆ ಬದುಕನು ನೀಡುತ
ತಮ್ಮಯ ಮಕ್ಕಳ ಸೇನೆಗೆ ಕಳಿಸುತ
ಆಗಿರುವಿರಿ ನೀವು ತ್ಯಾಗದ ಸಂಕೇತ
ನಮಿಪೆವು ನಾವು ಯೋಧಗೆ ಸತತ..
@ಪ್ರೇಮ್@
27.02.2019

ಮಂಗಳವಾರ, ಫೆಬ್ರವರಿ 26, 2019

814.ಕವನ-ವಿಚಿತ್ರ

ವಿಚಿತ್ರ

ಭಗವಂತನ ಸೃಷ್ಟಿಯದು ತುಂಬಾ ವಿಚಿತ್ರ!!
ನಿಮ್ಮನ್ನೇ ಸರಿಯಾಗಿ ಗಮನಿಸಿಕೊಳ್ಳಿ!!
ಇತರರಂತೆ ನೀವಿಲ್ಲ, ಇತರರ ಬದುಕಂತೆ ನಿಮ್ಮ ಬದುಕಲ್ಲ!!

ನಿಮ್ಮ ಬದುಕ ಮೇಲೊಂದು
ಚಲನಚಿತ್ರವನೆ ಮಾಡಬಹುದು!
ಕಷ್ಟ ಸುಖಗಳ ಕೂಡುವಿಕೆಯೇ ಆದರೂ
ಜಗದಲಿ ಅದು ವಿಭಿನ್ನ, ಬೇರೆಯೇ!!
ನೀವದನ್ನು ಕನಸಿನಲ್ಲೂ ಕಂಡಿರಲಿಲ್ಲ!!
ಯಾವ ಕತೆಯಲ್ಲೂ ಓದದ, ಯಾವ ಚಲನ ಚಿತ್ರದಲ್ಲೂ ಕಾಣದ,
ವಿಭಿನ್ನ ಕಲಾಕೃತಿ ನಿಮ್ಮ ಬಾಳುವೆ!!!

ಬದುಕೆಂದರೆ ಬವಣೆಯಂತೆ, ಬಡಾಯಿಯಂತೆ
ಕಲಿಕೆಯಂತೆ, ಕಾರ್ಯವಂತೆ!!
ಬದುಕೆಂದರೆ ವಿಧಿ ಲೀಲೆಯ
ಭಗವಂತನ ಸೃಷ್ಟಿಯ ಮಹಾಕಾವ್ಯ!!!
ಬಾಳದುವೆ ನೀರ ಮೇಲಿನ ಗುಳ್ಳೆಯ ಮಹಾ ಧೈರ್ಯ!

ವೇಷ ಭೂಷಣ ಏನಿದ್ದರೂ ಸಮಾಜದಿ ಎಲ್ಲರು ಒಂದೇ..
ಪ್ರೀತಿಯ ಸವಿಯಲಿ ಕರಗುವ ಜನರೊಂದೇ...
ನಾ ಎಲ್ಲೇ ಇರೆ ಹುಡುಕುತ ಬರುವ ಜನರೊಂದೇ...

813. ಎನ್ನ ಕವಿತೆದ ಕತೆ

ಎನ್ನ ಬರವು

ಮನಸ್ ದ ಉಲಯಿಡ್ ದ್ ಉದಿತಿನ
ಬರ್ ಸದ ಲೆಕ್ಕನೆ ಬೂರಿನ
ವರ್ ಸಲ ಪಿರವುಡೆ ಬರ್ಪಿನ
ಕರ್ ಚಿ ಇಜ್ಜಾಂದೆ ಬರೊಂದಿಪ್ಪುನ..

ಯಾನ್ ಮರತ್ಂಡಲಾ ಎನನ್ ಮರಪಂದಿನ
ಯಾನ್ ಬುಡುಂಡಲಾ ಎನನ್ ಬುಡಂದಿನ
ಉರ್ಕುರ್ಕುದು ಉಡಲ್ ಡ್ದ್ ಬರೊಂದಿಪ್ಪುನ
ಸೊರ್ಕುಡು ಬರೆಯರೆ ಪನೊಂದಿಪ್ಪುನ...

ಎದ್ ರ್ ಪಿರವುಡೆ ಬತ್ತ್ ಎನನ್ ಒಯಿತೊಂದಿಪ್ಪುನ
ಕಲೆತ್, ಕಲೆಪಾದ್ ಬರೆಯೆರೆ ತಾರೊಂದಿಪ್ಪುನ
ನಲ್ಮೆದ ನಲಿಕೆ ನಲಿತ್ ತೆಲಿಕೆ ಉರ್ಕಾವುನ
ಯಾನುಲ್ಲೆ ನಿನ್ನುಲಯಿಡ್ ಪಂದ್ ಬದ್ ಕ್ ಗ್ ಖುಷಿ ಕೊರ್ಪಿನ..

ಉಂದು ಎನ್ನ ಪೊರ್ಲ ಕಂಟ್ ದ ಕವಿತೆದ ಕತೆ
ಉಂದೆನ್ನ ಮನಸ್ ಡ್ದ್ ಪಿದಾಯಿ ನಿಲ್ಕುನ ಪದದ ಕತೆ..
@ಪ್ರೇಮ್@

ಸೋಮವಾರ, ಫೆಬ್ರವರಿ 25, 2019

812. ಆಗಬೇಕು

ಆಗಬೇಕಲ್ಲವೇ?

ನಾನಾಗಬೇಕು ಸುಧಾರಿತ ತಳಿ
ನನ್ನಲ್ಲಾಗಬೇಕು ನಿರಂತರ ಸುಧಾರಣೆ!!
ವಿಜ್ಞಾನ ತಂತ್ರಜ್ಞಾನಕ್ಕೆ ತಕ್ಕವನಾಗಿ!
ಮನುಜ ಮತ, ವಿಶ್ವ ಪಥಕ್ಕೆ ಸರಿಯಾಗಿ!!

ನನ್ನ ಹೃದಯ ಬಾಯ್ತೆರೆಯಬೇಕು
ಮನವು ಅಗಲವಾಗಬೇಕು
ಕಲ್ಮಶವ ಹೊರಹಾಕಿ ಶುದ್ಧೀಕರಿಸಬೇಕು!!
ಮೆದುಳು ಸ್ಮಾರ್ಟಾಗಬೇಕು!!

ಸಹಾಯ, ಕರುಣೆಯೆಂಬ ಗಿಡಗಳನು ಮನದಲಿ ನೆಡಬೇಕು..
ಪರೋಪಕಾರದ ಬೇರು ಆಳಕ್ಕಿಳಿಯಬೇಕು..
ಸ್ವಾರ್ಥದ ಕಳೆಯ ಕಿತ್ತೊಗೆಯಬೇಕು!!
ಸಂತಸದ ಹೂಗಳು ಅರಳಬೇಕು!!!

ಮನಃಶಾಂತಿಯ ಟೊಂಗೆಗಳು ಹರಡುತ್ತಿರಲಿ
ಕ್ಷಮೆಯ ಮೊಗ್ಗುಗಳು ಹೊರಬರುತ್ತಿರಲಿ..
ದ್ವೇಷದ ಇಂಗಾಲದ ಡೈ ಆಕ್ಸೈಡ್ ಪೂರ್ತಿ ಹೊರಹೋಗಲಿ
ದಯೆಯ ಆಮ್ಲಜನಕ ಒಳಬರಲಿ...

ನೆನಪ ಮೂಟೆಗಳು ಹಂಚುವಂತಾಗಲಿ
ಕಹಿ ಘಟನೆಗಳ ದೂರ ಒಗೆಯುವಂತಾಗಲಿ
ಸಿಟ್ಟಿನ ಜ್ವರವು ದೂರಾಗಲಿ
ಕಲ್ಪನೆಯ ಕಾವು ಗರಿಗೆದರಲಿ..
ನವ ಕವನ ನೈಜವಾಗಿ ಬಾಳಲಿ ಸಾಗಲಿ..
@ಪ್ರೇಮ್@
26.02.2019

811. ಒಂಟಿಯಲ್ಲ...

ಒಂಟಿಯಲ್ಲ!

ಕಳೆದು ಹೋಗಿತ್ತು ಮನದ ಕೀಲಿಕೈ
ತನ್ನವಳೆಂದು ನಿನ್ನೆಯವರೆಗಿದ್ದವಳು
ಇಂದು ಪರರವಳಾಗಿದ್ದಳು..!
ಒಂದು ಜವಾಬ್ದಾರಿ ಕಳಕೊಂಡ ಸಂತಸ!
ಮಗಳ ಹೊಸಿಲು ದಾಟಿಸಿದ ದುಃಖ!!

ಮನದ ಬಾಗಿಲು ತೆರೆಯಬೇಕಿತ್ತು!
ಮನೆಯ ಬಾಗಿಲೂ ಮುಚ್ಚಿತ್ತು!!
ಕೀಲಿಕೈ ಹುಡುಕ ಬೇಕಿತ್ತು!!

ಗಡಿಬಿಡಿ, ಒತ್ತಡ, ಕೆಲಸದ ಹೊರೆ
ಜತೆಗೆ ದೇಹ, ಮನಸಿಗಾದ ವಯಸ್ಸು!
ಹೆಣ್ಣು ಹೆತ್ತ ತಂದೆಯ ಪರಿತಾಪ!

ಒಂಟಿತನದ ಛಾಯೆ ಒಂದೆಡೆಗೆ,
ಜತೆಗಿದ್ದ ಮಗಳು ಪರರ ಸೊಸೆಯಾದಳು!
ತಾನಿರಬೇಕು ಹೇಗೆ ಏಕಾಂಗಿಯಾಗಿ!
ಆಲೋಚನೆಯಲೆ ಕೀಲಿಕೈ ಕಳೆದ್ಹೋಗಿತ್ತು!
ಮನದ ಕೀಲಿಕೈ ಮಗಳೊಡನೆ ಜಾರಿತ್ತು!!

ಹುಡುಕಿದರು, ಕೆದಕಿದರು, ತದಕಿದರು!
ಮನೆ ಮನದ ಹೊರಗೆಲ್ಲಾ!
ಸಿಗಲಾರದ ಕೀಲಿಕೈಯಲ್ಲಾ!
ಮನವು ತನ್ನೊಳಿಲ್ಲ,ಮೂಕ ಮನೆಮಾತ್ರ!
ಕುಳಿತರು ಸುಮ್ಮನೆ ಯೋಚಿಸುತ್ತ, ಒಂಟಿಯಾಗಿ!
ಬೀಗ ಒಡೆಯೋಣವೆಂದು
ಅಂದುಕೊಂಡು
ಅಂಗಡಿಯಿಂದ ಗರಗಸ ಕೇಳಿ
ಹಣಕಾಗಿ ಜೇಬಿಗೆ ಹಾಕಲು ಕೈ
ಒಳಗಿಂದ ಇಣುಕಿತು ಕೀಲಿಕೈ!
ಹೇಳಿದಂತಾಯ್ತು 'ನೀ ಒಂಟಿಯಲ್ಲ, ನಾನಿರುವೆ ಜತೆಯಾಗಿ!'
@ಪ್ರೇಮ್@
25.02.2019

810. ವಿಮರ್ಶೆ-14

14. ಲತಾ ಮೇಡಂ
🌾ಸೋಜಿಗ🌾

ಎಲ್ಲದಕೊ  ಅವಸರ.
  ತುಂಬಿ ತುಳುಕುವ ಒತ್ತಡ. ಕಸಿವಿಸಿಗೊಂಡ  ಮನವು .
ಮನೆಯ ,ಕೀ ಯ  ಕಳೆದು 
ಎಲ್ಲ ಕಡೆ ಹುಡುಕಿಸಿದೆ .
ಕೇಳಿದವರೆಲ್ಲ ತಿಳಿಯದೆ ,ಎಮಗೆ  .
ಹೊರಗಿಟ್ಟ ನೆನಪಿಲ್ಲ. ಉಳಿದಿರುವುದೇ ಒಳಗೆ . ಹುಡುಕಿದರೂ ಸಿಗುತ್ತಿಲ್ಲ .
ಕಳೆದು ಹೋಯ್ತುನ್ನ ಕೀ. ಹೆಂಡತಿಯ ಆವೇಶ.
ಮನೆಯೊಳಗೆ ಪ್ರವೇಶ .
ನನಗೀಗ ಸೋಜಿಗವೇ  .
ಯಾವುದೋ ಆರದಾ ಬಿಸಿಯಲಿ ,
ಸೇರಿಸಿದೆನೋ ,
ಬೀಳಿಸಿದೆನೋ ಕಾಣೆ.
ತಿಳಿಯದೆ ಏನೂ,,,,,,,, ಕುಳಿತುಬಿಟ್ಟೆ .
ಕಾಯಬೇಕು ಎಲ್ಲಿಯವರೆಗೆ?  ಮೆಲ್ಲನೆ  ಜೇಬಿಗೆ  ಕೈಯನು ಹಾಕಿದೆ.
ಕಿಸೆಯಲ್ಲಿ  ಚಾವಿ ನಗುತ್ತಿತ್ತು .
ಬೆಟ್ಟದಂತ ಚಿಂತೆಯು  ಮಂಜಿನಂತೆ ಕರಗಿ ,
ನಗುತ್ತಿತ್ತು.
ನನ್ನನು  ನಗೀಸಿತ್ತು ........

🥦🥦🥦🥦🥦🥦🥦
ಕವನವು ಮಾಡರ್ನ್ ಶೈಲಿಯಲಿ ಮೂಡಿ ಬಂದಿದೆ. ತುಂಬಾ ಗಡಿಬಿಡಿಯಲಿ ಟೈಪಿಸಿ ಹಾಕಿದಂತಿದೆ.
🥦🥦🥦🥦🥦🥦

ಒತ್ತಡದ ಜೀವನದಲಿ ಕವನದ ಬರವಣಿಗೆಗೂ ಒತ್ತಡದ ಬಿಸಿ ತಟ್ಟಿರುವಾಗ ಕೀ ಮರೆವುದೇನೂ ದೊಡ್ಡದಲ್ಲ ಬಿಡಿ😆😆😆😆
🥦🥦🥦🥦🥦🥦🥦
ಮತ್ತೊಮ್ಮೆ ಕವನವನು ಓದಿ, ಒಪ್ಪಣವಾಗಿ ಮಾಡಿ. ಮೇಕಪ್ಪಾಗಲಿ. ಅಂದದ ಕವನ ಅವಸರದಿ ನಲುಗದಿರಲಿ.
@ಪ್ರೇಮ್@

809. ವಿಮರ್ಶೆ-13

13. ಜಯಲಕ್ಷ್ಮಿ ಅವರ
ಭಾರ....

ಭಾವನೆಗಳ ಭಾರದಿ ನಲುಗಿದೆ ಮನ
ಮೂಕ ಮನದ ಮರ್ಮರ ದಿನ ದಿನ
ಅಂತರಂಗದಿ ಅಚ್ಚೊತ್ತಿದ ಚಿತ್ತಾರ
ಕಾಣೆಯಾಗುತಿದೆ ಕ್ಷಣ ಕ್ಷಣ.....
🌽🌽🌽🌽🌽🌽
ಉತ್ತಮ ಕವಿಭಾವ. ಭಾವನೆಗಳು ಜೀವನದಿ ಭಾರವಾಗಬಾರದು ಗೆಳತಿ.ಖುಷಿ ತರಬೇಕು.ಜೀವನವೂ ಅಂತರಂಗದಿ ನಲುಗಬಾರದು. ನಮ್ಮ ಬದುಕಿಗೆ ನಾವೇ ಹೊಣೆಯಲ್ಲವೇ..
🌽🌽🌽🌽🌽🌽
ಹೃದಯದ ಬಾಗಿಲು ಶಿಥಿಲವಾಗಿದೆ
ಹಾಕಿದ ನೆನಪ ಬೀಗ ತುಕ್ಕು ಹಿಡಿದಿದೆ
ಕೊಂಡಿ ಕಳಚಿ ಬೀಳಲು ಸನ್ನಧ್ಧವಿದೆ
ಭಯದ ಭೂತ ಘೀಳಿಡುತ್ತಿದೆ.....
🌽🌽🌽🌽🌽🌽🌽
ನೆಗೆಟಿವ್ ಶೇಡ್ ನ ಕವನವಿದು. ಓದುವಾಗ ಶೇಕ್ಸ್ ಪಿಯರ್ನ ನೆನಪಾಗುತ್ತದೆ. ಭಯದ ಗೂಡಲಿ ಬೆಳೆವ ಮನಗಳೆಡೆಗೆ ಮರುಕ ಹುಟ್ಟುತ್ತದೆ.
🌽🌽🌽🌽🌽🌽

ಬೀಗವಿಲ್ಲದೆ ತೆರೆದ ಮನೆ ಬರಿದಾಗಿದೆ
ಆಸರೆಯ 'ಕೈ'ಗಾಗಿ ಕಾತರಿಸಿ ಕಾದಿದೆ
ಸಿಗಬಹುದೇ ಕಳೆದುಹೋದ ಕೈ
ಸಿಕ್ಕರೂ ಭದ್ರವಾಗಿ ನಿಲ್ಲಬಹುದೇ.??
🌽🌽🌽🌽🌽🌽🌽
ಮುಗ್ದ ಅನಾಥ ಮಕ್ಕಳ ನೋವು ಮನ ಕಲಕುತ್ತದೆ. ಭಾವನೆಗಲ್ಲಿ ಬೆಲೆಯೇ ಇಲ್ಲ. ಚಾರ್ಲ್ಸ್ ಡಿಕೆನ್ಸ್ ನ ಒಲಿವರ್ ಟ್ವಿಸ್ಟ್ ನೆನಪಾಯಿತು.
🌽🌽🌽🌽🌽🌽🌽

ಎದೆಯ ಬಂಗಲೆಗೆ ಅರಿವಿನ ಮೊಳೆ ಹೊಡೆಯಬೇಕಿದೆ,ಜ್ಞಾನದ ದೀಪ
ಆರದಂತೆ ಬೆಳಗಿಸಬೇಕಿದೆ,ಬದುಕಿಗೆ
ಸತ್ಪಾತ್ರದ ಅಷ್ಠದಿಗ್ಬಂಧನ ಬೇಕಾಗಿದೆ.
🌽🌽🌽🌽🌽🌽
ಕೊನೆಯಲ್ಲಿ ಅಷ್ಟ  ದಿಗ್ಬಂಧನದ ಕೀಲಿಕೈ ಸಿಕ್ಕಿದೆ ಎಂದಿದ್ದರೆ ಅಡ್ಮಿನ್ ರವರು ಕೊಟ್ಟ ವಿಚಾರ ಸಂಪೂರ್ಣ ವಾಗುತ್ತಿತ್ತೇನೋ... ಮಗದೊಂದು ಚರಣ ಸೇರಿಸಿ ಧನಾತ್ಮಕ ಕೊನೆಯಿರಲಿ.
@ಪ್ರೇಮ್@

808. ವಿಮರ್ಶೆ-12

12. ಸುಧಾ ಅಮ್ಮನವರ

*ಭದ್ರತೆ*

ಇತ್ತೀಚೆಗೇಕೋ
ತುಂಬಾ ಮರೆವು
ವಯಸಿಗೋ
ಒತ್ತಡಕ್ಕೋ...!!
🥕🥕🥕🥕🥕🥕🥕🥕
ಎಲ್ಲರಿಗೂ ಒತ್ತಡ ತಾಂತ್ರಿಕ ಯುಗದ ಯಾಂತ್ರಿಕ ಜೀವನದಲಿ. ತರಂಗಗಳ ಉಪಯೋಗ ಮರೆವಿಗೆ ಕಾರಣ. ಸತ್ಯದ ಸಾಲುಗಳು.
🥕🥕🥕🥕🥕🥕🥕

ಊರಿಗೆ ಹೋಗುವ
ಮುನ್ನ
ಎಲ್ಲ ವಸ್ತುಗಳನ್ನೂ
ಭದ್ರವಾಗಿಟ್ಟು
ಬೀಗ ಹಾಕಿ
ಬೀಗದ ಕೈ
ಇಡುವ ಜಾಗ
ಬದಲಾಯಿಸುವ
ಅಭ್ಯಾಸ...
ಕಳ್ಳಕಾಕರಿಗೆ
ಸಿಗಬಾರದಲ್ಲ...!!
🥕🥕🥕🥕🥕🥕🥕🥕
ಪ್ರತಿಯೊಬ್ಬರ  ಕತೆಯೂ ಇಷ್ಟೆ. ಕಳ್ಳರೂ ಇದನ್ನೆ ಮಾಡುವರೇನೋ. ತಾನು ಕದ್ದದ್ದು ಇತರರಿಗೆ ಸಿಗಬಾರದಲ್ಲಾ..😆😆😁
🥕🥕🥕🥕🥕🥕🥕
ಈ ಸಲ
ಹೋಗುವಾಗ
ಹಾಗೆಯೇ
ಬದಲಾಯಿಸುವ
ಪ್ಲಾನಿತ್ತು...
ಒಂದೊಳ್ಳೆ
ರಹಸ್ಯ ತಾಣದಲ್ಲಿ ...
🥕🥕🥕🥕🥕🥕🥕
ನಮ್ಮ ಮನದ ಮಾತಿನಂತೆ ನಡೆವವರು ನಾವು . ಮನ ಆಗಾಗ ಬದಲಿಸುವಂತೆ ಕರೆಯಿತ್ತರೆ ನಾವು ಮಾಡುವವರಲ್ಲವೆ...
🥕🥕🥕🥕🥕🥕🥕

ಎಲ್ಲವನ್ನೂ
ಭದ್ರಪಡಿಸಿ
ಬೀಗ ಹಾಕಲು
ಹೋದರೆ
ಬೀಗದ ಕೈಯ್ಯೇ
ಸಿಗಲಿಲ್ಲ...
🥕🥕🥕🥕🥕🥕🥕
ಅಗಾ....ಈಗ ಬಂತು ಮರೆವು. ಅರ್ಧ ಜೀವನವ ಹುಡುಕಾಟ, ಕಾಯುವಿಕೆಯಲ್ಲೆ ಕಳೆಯುತ್ತೇವೆ ನಾವು.ನೈಜತೆಯ ಬರಹ.
🥕🥕🥕🥕🥕🥕🥕🥕

ಊರಿಗೆ
ಹೊರಡಲು
ಸಮಯವಾಗಿತ್ತು ...
ಎಲ್ಲರೂ ಅವಸರ
ಮಾಡುವವರೇ ...
ಬೀಗದ ಕೈ
ಸಿಗಲೇ ಇಲ್ಲ...
ಯಾರೂ ಬಂದು
ನಿನ್ನ ಗಂಟು ಕದಿಯಲ್ಲ
ಹೊರಡು ಎಂದ
ಮಗರಾಯ...
ನನಗೋ ಒದ್ದಾಟ...
ಗತ್ಯಂತರವಿಲ್ಲದೆ
ಹೊರಟೆ ...
🥕🥕🥕🥕🥕🥕
ಕೆಲವೊಮ್ಮೆ ಅನಿವಾರ್ಯವಾದರೂ ನಮಗೆ ನಮ್ಮ ಮನಸು ಕೈಲೇ ಇರಲ್ಲ. ಒತ್ತಡ ಅತಿರೇಖಕ್ಕೇರಿ ಬಿಡುತ್ತದೆ.
🥕🥕🥕🥕🥕🥕

ಮನಸಲ್ಲೇ ಬೀಗದ ಕೈ
ಹುಡುಕಿದ್ದೇ ಹುಡುಕಿದ್ದು
ಆದರೂ ಸಿಗಲಿಲ್ಲ...
ಟೋಲ್ ಗೇಟ್ ಗೆ
ಮಗ ಚಿಲ್ಲರೆ ಕೇಳಿದ..
ಜಾಕೀಟಿನಲ್ಲಿದ್ದ
ಪಸ್೯ನಲ್ಲಿ
ದುಡ್ಡಿನ  ಜೊತೆಗೆ
ಬೀಗದ ಕೈ
ನಗುತ್ತಿತ್ತು ...!!

🥕🥕🥕🥕🥕🥕🥕
ಸುಂದರ ಎಂಡಿಂಗ್. ಸರಳ ಸುಂದರ ಭಾವಕ್ಕೆ ಸಹೃದಯದ ಧನ್ಯವಾದಗಳು.
@ಪ್ರೇಮ್@

807. ವಿಮರ್ಶೆ-11

11. *ತಗ್ಗೀಹಳ್ಳಿ ರವಿಕುಮಾರ* ರ

*"ಬುದ್ಧಿಮತ್ತೆಯ ಕೀಲಿಕೈ"*

*"ದೇವರೇ, ನನಗೆಂದು ನೀನಿತ್ತ  ಎನ್ನ ಮನೆಯ ಕೀಲಿ ಕೈ*
*ಕೈಯಾರೆ ಕಳೆದುಕೊಂಡಿಹೆ ಹುಡುಕಿಕೊಡು ಕರುಣದೇ"*
🍅🍅🍅🍅🍅🍅🍅

ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಗಾದೆಯಂತೆ ತಾನೇ ಕಳೆದುಕೊಂಡ ಕತೆಯಿದು. ತನ್ನ ಜೀವನವ ತನಗೇ ಸರಿಪಡಿಸಿಕೊಳ್ಳಲಾರದವನ ವ್ಯಥೆಯಿದು.
🍅🍅🍅🍅🍅🍅

*"ಒಳಹೋಗಲಾರೆ ಸ್ಥಿತಿ ಕೆಟ್ಟಿದೆ ವಿಷಾನಿಲ ಜೀವಹಾರಿಯಾಗಿ*
*ಧಗೆಯಿಂದ ಭವ ಉರಿದಿದೇ ಭಯದಿಂದ ಭವಿತವಳಿದಿದೆ"*
🍅🍅🍅🍅🍅🍅🍅
ಮನುಜನ ಆಸೆಗೆ ಕೊನೆಯಿಲ್ಲದೆ ತಾನಿರುವ ಪರಿಸರಕ್ಕೇ ಬೆಂಕಿ ಹಚ್ಚುವ ಕಾರ್ಯವದು.
🍅🍅🍅🍅🍅🍅🍅🍅

*"ನೀರ್ಗಲ್ಲು ಕರಗಿ ನೀರೋಘ ಮಣ್ಣ ಕೊರೆದು ಹರಿದರಿದು*
*ಆವಾಸಗಳೆಲ್ಲಾ ನಿರ್ಜನವಾಗಿ ಕುಳಿರ್ಗಾಳಿಗೆ ಕಲ್ಲು ಚಿಲುಮೆ"*
🍅🍅🍅🍅🍅🍅🍅
ಪರಿಸರ ನಾಶದ ಪರಿಣಾಮಗಳ ಕವಿ ನಾಲ್ಕೇ ಸಾಲುಗಳಲಿ ಕಟ್ಟಿ ಕೊಟ್ಟಿರುವರು. ಸೂಪರ್.
🍅🍅🍅🍅🍅🍅

*"ವನಬನ ಖಗಮೃಗ ನಂದನಾ ಬಣಬಣ ನಗರೀಕೃತ ಚರಣ*
*ಮೋಜು ಚೆಲ್ಲಾಟದಿ ನಡೆದು ತೇಜಕಳೆದ ಬಾಳಿನ ಚಾರಣ"*
🍅🍅🍅🍅🍅🍅
ವಾವ್..ಪದ ಪುಂಜಗಳ ಪ್ರಯೋಗ ನಿರರ್ಗಳ. ನಿರ್ಮಲ, ನವನವೀನ. ತನ್ಮಯ ಓದುಗ ಹೃದಯ.
🍅🍅🍅🍅🍅🍅🍅🍅

*"ಕಾಪಾಡು ದೇವಾ,*
*ಕಲುಷಿತವಾಗಿರುವೆ ಭಯಭೀತಗೊಂಡಿರುವೆ ಓ ಗುರುವೇ*
*ಬೇಗೆಯಿಂದ ಬಲುಬಳಲಿರುವೆ, ಬೀಗದ ಕೈ ದಯಪಾಲಿಸು*
*ಬೀಗದೇ ಮರಳಾದ ಭುವಿಯ, ಹಸಿರಾಗಿಸುವೆ ಉಸಿರಾಡುವೆ*
*ಮರುಳನಾಗದೇ ಮನುವಾಗುವೆ"*
🍅🍅🍅🍅🍅🍅🍅
ಎಲ್ಲಾ ತಾನೇ ಮಾಡಿಕೊಂಡು ಕೊನೆಯಲ್ಲಿ ದೇವನಿಗೆ ಮೊರೆ ಹೋಗುವ ಭಕ್ತನ ನೈಜ ಬಿಂಬ.
🍅🍅🍅🍅🍅🍅🍅

*"ಭಕ್ತಾ, ಮರುಳಾ ನೀನು,*
*ಮುಕ್ತ ಸರಳನಾಗಿ ಚಿಂತಿಸು*
*ಕುತರ್ಕಿಯಾಗದೇ ತರ್ಕಿಸು*
*ಭುವನದ ಪಂಚತತ್ವ ಶುದ್ಧೀಕರಿಸು*
*ಛಲಬಿಡದೇ ಸಾಧಿಸು ಆರಾಧಿಸು*
*ಸಮತೋಲವರಿತು ಆನಂದಿಸು*
*ಸಚ್ಚಿದಾನಂದ ಅನುಭವಿಸು*
*ನಿನ್ನ ಕಪೋಲದ ಚೀಲದಲ್ಲೇ*
*ಬುದ್ಧಿಮತ್ತೆಯ ಕೀಲಿಯಿಹುದು*
*ಹುಡುಕದಿರು ಇನ್ನೆಲ್ಲೂ ಹುಚ್ಚನಂತೆ*
*ವಸುಂಧರೆಯ ಕಾಪಿಡು*
*ಜನಾಂಗಗಳೇ ಮೆಚ್ಚುವಂತೇ"*
🍅🍅🍅🍅🍅🍅🍅
ದೇವನ ಉತ್ತರ ಸಕಾಲಿಕ. ಉನ್ನತ ಆದರ್ಶದ ಕವಿತೆ. ಆದರೆ ಮಾನವನಿಗೆ ಬುದ್ಧಿ ಬರಬೇಕೇ!
@@ಪ್ರೇಮ್@

806. ವಿಮರ್ಶೆ-10

10. ಶ್ರೀಮತಿ ಜೋಶಿ ನಿಸರಾಣಿಯವರ
*ಭಾವ ತರಂಗ*

ಅಂದು ಹೃದಯದ
ಕವಾಟದ ಒಳಗೆ ಚಿಮ್ಮುತ್ತಿತ್ತು ಪ್ರೀತಿಯ ವಸಗೆ !!
ದುಮ್ಮಿಕ್ಕಿ ಹೊರ ಹೋಗದಂತೆ ಹಾಕಬೇಕಿತ್ತು ಬೀಗ ಭದ್ರಪಡಿ ಸುವಂತೆ.!!೧!
🍍🍍🍍🍍🍍🍍
ಸುಂದರ ಆಲೋಚನೆಗಳು. ಬರುವಾಗ ತಡವಾಯ್ತು. ಸಾಲುಗಳ ಸೂಕ್ಷ್ಮ ಕಟ್ಟುವಿಕೆ, ಉತ್ತಮ ಕವಿಭಾವಕ್ಕೆ ನಮನಗಳು.
🍍🍍🍍🍍🍍🍍

ಮನಸ್ಸೆಂಬ ಕೀಲಿ ಕೈ ನ ಜೋಪಾನ ಮಾಡಬೇಕಿತ್ತು  !!
ಸಂಶಯದ ಮೇಜಿನ ಮೇಲೆ ದಪ್ಪಂತ ಎಸೆದು ಆಗಿತ್ತು. !!೨!!
🍍🍍🍍🍍🍍🍍
ವಾವ್ ....ಉಪಮೆ ಸೂಪರ್.ಎಂಥ ಕಂಪಾರಿಸನ್..ಇಷ್ಟ ಆಯ್ತು ಸಾಲುಗಳು.
🍍🍍🍍🍍🍍

ಒಡೆದ ಕನ್ನಡಿಯೊಳಗೆ ಕಾಣುತಿದೆ ಹಲವು ಪ್ರತಿಬಿಂಬ !!
ಹರಿ ಹಾಯುತಿದೆ ಚಿತ್ತದಲ್ಲಿ ಏರಿಳಿತದ ದ್ವಂದ್ವ.  !!೩!!
🍍🍍🍍🍍🍍🍍🍍
ಇಲ್ಲಿನ ಕವಿಭಾವ ಸೂಪರ್. ಮನುಜನ ಮೆದುಳನ್ನು ಇದುವರೆಗೂ ಯಾರೂ ಅಳೆದವರಿಲ್ಲ. ಹಲವಾರು ಆಲೋಚನೆಗಳ ಗೂಡದು. ರೂಪಕ ಉತ್ತಮ.
🍍🍍🍍🍍🍍🍍

ಕ್ಷಣದ ವಿವೇಕ ಶೂನ್ಯದ ವೇಗ  ಚೂರಾಗಿಸಿದೆ ಕೋಣೆಗಳ ಜಾಗ!!
ಬುದ್ದಿ ತಾ ಎಚ್ಚರಿಸುತ್ತದೆ ಈಗ ನಂಬಿಕೆಯೇ ಜೀವನದ   ಭಾಗ!!೪!!
🍍🍍🍍🍍🍍🍍
ಖಂಡಿತಾ. ನಂಬಿಕೆ ಇಲ್ಲದ ಮೇಲೆ ಏನಿಲ್ಲ. ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ... ಎಂಬ ಮೇರುಕವಿಯ ಸಾಲುಗಳು ನೆನಪಾಗುತ್ತಿವೆ.
🍍🍍🍍🍍🍍🍍
ವಿಲಕ್ಷಣ ಸಂದಿಗ್ದ ಸ್ಥಿತಿ ಯಲ್ಲಿ ಹೋರಾಟಕ್ಕಿಳಿದು ಆಗಿತ್ತು !!
ರೋಷ ತಿಳಿಯಾಗಿ ಎಸೆದ ಕೀ ಹುಡುಕಿ ಮರಳಿ ತರುವ ಬಯಕೆಯಾಯ್ತು
🍍🍍🍍🍍🍍
ಕವನದ ಕೊನೆ ಸೂಪರ್. ರೋಷ ತಿಳಿಯಾದಾಗ ಕಣ್ಣಾರೆ ನೋಡಿದರೂ ಪರಾಂಬರಿಸಿ ನೋಡು, ಹೇಳಿದ್ದು ಸುಳ್ಳಾಗಬಹುದು....ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು....
ಕೊನೆಯಲ್ಲಿ ಭಾಷಾ ಚಿಹ್ನೆ ಉಪಯೋಗಿಸಿ ಕವಿಗಳೇ. ಅದು ಮತ್ತಷ್ಟು ಇಫೆಕ್ಟಿವ್.
🍍🍍🍍🍍🍍
@ಪ್ರೇಮ್@

805. ವಿಮರ್ಶೆ-9

9. ಯತೀಶಣ್ಣನ
*ಮಾಡರ್ನ್ ಕವನ*

*ಕೀ ಸಿಗಬಹದೇ*

ವಾಕಿಂಗ್ ಹೋಗಿ
ಬಂದಾಗ ಮನೆ ಕೀ ಇಲ್ಲ
ಹುಡುಕಾಡಿ ಸುಸ್ತಾಗಿ
ಮತ್ತೆ ವಾಕಿಂಗ್
ಹೋಗಿ ಬಂದ ದಾರಿಗೆ
ಕಣ್ಹಾಯಿಸುತ್ತ ಸಾಗಿದೆ..

🥭🥭🥭🥭🥭🥭🥭🥭
ನೇರಾನೇರ ಮಾಡರ್ನ್ ಕವನ ಬರೆದು ಹೆಸರಾಗಿರುವ ನಿಮ್ಮ ಕವನ ಅರ್ಥ ಬರಿತ ಶ್ರೀ ಸಾಮಾನ್ಯನೂ ಓದಿ ತಿಳಿದುಕೊಳ್ಳಬಹುದಾದ ಸರಳ ಭಾಷೆಯ ಸುಂದರ ಕವನ.
🥭🥭🥭🥭🥭🥭🥭

ಕಣ್ಣುಗಳಿಗೆ ಕಾಣ ಸಿಕ್ಕಿದ್ದು
ಚಾಕಲೇಟ್ ಪ್ಲಾಸ್ಟಿಕ್ ಗಳು
ಅಂದು ಹತ್ತು ಪೈಸೆಯ ಚಾಕಲೇಟ್ ನಿಂದ
ಹಿಡಿದು
ಇಂದಿನ ನೂರು ಇನ್ನೂರು
ಬೆಲೆಯ ಚಾಕಲೇಟ್ ಪ್ಲಾಸ್ಟಿಕ್ ಇತ್ತು
ಕೆಲವು
ಅರ್ಧ ಮಣ್ಣಲ್ಲಿ ಕರಗಿತ್ತು
ಇನ್ನೂ ಕೆಲವು ಹಾಗೆ ಇತ್ತು
ಆ ಸಿಲ್ವರ್ ಬಣ್ಣ
ನನ್ನ ಕೀಯೇನೋ ಅನ್ನುವಂತಾಗಿ
ಬಗ್ಗಿ ಪರೀಕ್ಷಿಸುವಂತೆ ಮಾಡುತ್ತಿತ್ತು..
🥭🥭🥭🥭🥭🥭
ಇಂದಿನ ಜನರಿಗೂ, ವಿದ್ಯಾರ್ಥಿಗಳಿಗೂ ಎಷ್ಟು ಹೇಳಿದರೂ ಒಂದೇ ನಿಮಿಷ ಮತ್ತವರು ತಮ್ಮ ಕಾರ್ಯದಲ್ಲೇ ನಿರತರು. ಪರಿಸರಕ್ಕೆ ಪ್ಲಾಸ್ಟಿಕ್ ಎಸೆಯುವುದರಲ್ಲೂ ಸಿದ್ಧಹಸ್ತರು. ಶಿಕ್ಷಕರೇ ತಮ್ಮ ಮನೆಯ ಕಸ, ಅಳಿದುಳಿದ ಊಟ, ತರಕಾರಿಯನ್ನೆಲ್ಲ ಪ್ಲಾಸ್ಟಿಕ್ ಒಳಗೆ ತುಂಬಿ ರಸ್ತೆ ಬದಿಯ ಕಸದ ತೊಟ್ಟಿಗೆ ಹಾಕಿ, ದನಗಳು ಅದನ್ನು ತಿನ್ನುವುದನ್ನು ನೋಡಿ ಬೇಸರಗೊಂಡಿರುವೆ. ನಿಜಾಂಶವಿದು.
🥭🥭🥭🥭🥭🥭

ಅಲ್ಲೋಂದು ಇಲ್ಲೊಂದು
ಮಿನರಲ್ ವಾಟರ್ ಡಬ್ಬ
ಅದೇನೋ ಫ್ಯಾಂಟಾ,ಮಾಜಾ
ಪೆಪ್ಸಿ ,ಕೋಕೊ ಕೋಲ
ಹೀಗೆ ಕೆಲವು ಹೆಸರಿನ ಬಾಟಲಿಗಳು
ಲೇಸ್, ಕುರ್ಕುರೆ,
ಬಿಸ್ಕತ್ತ್ ಪ್ಯಾಕೆಟ್ಗಳು..
ಕೆಲವು ಮಣ್ಣು ಮೆತ್ತಿಕೊಂಡಿದ್ದವು
ಇನ್ನೂ ಕೆಲವು ಹೊಸತಂತಿತ್ತು..
🥭🥭🥭🥭🥭🥭
ಈಗ ಬಿಡಿ, ಬಾಟಲಿ ಯುಗ. ಹುಟ್ಟುವಾಗಲೆ ಲ್ಯಾಕ್ಟೋಜನ್, ತದನಂತರ ನೀರು, ಹಾಲು, ಪಾನೀಯ, ಆಹಾರ, ಹಾಟ್, ಕೂಲ್ ಡ್ರಿಂಕ್ಸ್ ಎಲ್ಲ ಬಾಟಲಿಗಳಲ್ಲೆ ಲಭ್ಯ. ಇನ್ನು ಎಸೆಯದೆ ಇರುವರೇ..
🥭🥭🥭🥭🥭🥭

ಈ ಗುಟ್ಕಾ ಕವರ್ಗಳಂತು
ಅಲ್ಲಲ್ಲಿ ಬಿದ್ದಿದ್ದವು
ಅವುಗಳ ಹೆಸರು ತಿಳಿದದ್ದೇ ಆಗ
ಸಿದ್ದು,ಮಾರುತಿ,ವಿಮಲ್
ಕೂಲ್ ಲಿಪ್,ಮಧು
ಏನೆಲ್ಲಾ ಹೆಸರು..
ಅವುಗಳು ಅಷ್ಟೇ
ಹಳೇ ಚಂದ ಚಿತ್ರಗಳಿಂದ ಹಿಡಿದು
ಇಂದಿನ ಕ್ಯಾನ್ಸರ್ ಬಾಯಿ ತನಕದ
ಚಿತ್ರಗಳ ಪ್ಲಾಸ್ಟಿಕ್ ಗಳು
ಹಾಗೆ ಇದ್ದುವು..!
🥭🥭🥭🥭🥭🥭
ಹೆಚ್ಚಿನ ಮಹಿಳೆಯರು ಪುರುಷರು ಈ  ಕೆಟ್ಟ ಅಭ್ಯಾಸಕ್ಕೆ
ಹೊಂದಿಕೊಂಡು ದಾಸರಾಗಿರುವರು. ಡಾಕ್ಟರ್, ಡ್ರೈವರ್  ಗಳನ್ನೂ ಇದು ಬಿಟ್ಟಿಲ್ಲ.
🥭🥭🥭🥭🥭🥭🥭
ಹೋದ ದಾರಿಗೆ ಸುಂಕ ಇಲ್ಲ
ಎಂಬಂತೆ ಸುಸ್ತಾಗಿ
ಕೂತಾಗ ಕುಂಡೆಗೆ ಚುಚ್ಚಿದಂತಾಗ
ನೆನಪಾದದ್ದು
ಹಿಂದಿನ ಕಿಸೆಯಲ್ಲಿ ಇಟ್ಟದ್ದು
ಆ ಕಿಸೆ ಬಿಟ್ಟು
ಬೇರೆ ಎಲ್ಲಾ ಕಡೆ ಹುಡುಕಿದ್ದು..
🥭🥭🥭🥭🥭🥭🥭
ಕೊನೆಗೂ ಸಿಕ್ಕಿತಲ್ಲ. ಮೊಬೈಲ್ ಬಂದ ಮೇಲೆ ಅದರ ಅವಾಂತರಗಳಲ್ಲಿ ಮರೆಗುಳಿಯೂ ಒಂದು.
🥭🥭🥭🥭🥭🥭🥭

ಸಿಕ್ಕಿತು
ಮನೆಯ ಕೀ..
ಸಿಗಬಹುದೇ
ಪ್ಲಾಸ್ಟಿಕ್ ಬಂದ್ ಮಾಡುವ ಕೀ..!?
🥭🥭🥭🥭🥭🥭🥭
ಉತ್ತಮ ಆಶಯ. ಉತ್ತರ ಸಿಗದು. ಉತ್ತಮ ಕವಿತೆ. ಕವಿಭಾವ ಅವರ್ಣನೀಯ.
@ಪ್ರೇಮ್@

804. ವಿಮರ್ಶೆ-8

8. 🌹ನಾಗಮ್ಮನವರ

ಹೃದಯ ಮಂದಿರದಿ

ಹೃದಯ ಮಂದಿರದಲ್ಲಿರುವೆ
ಬೀಗವೇತಕೋ ಗೆಳೆಯಾ...
ಬಿಡದಿರು ಪ್ರೀತಿಯಾ
ಕೀಲಿ‌ ಕೈಯಾ..||

🍑🍑🍑🍑🍑🍑🍑
ವಾವ್.. ಗೆಳೆಯನಿಗೆ ಮೀಸಲಿಟ್ಟ ಕವನ. ಹೌದು ಪ್ರೀತಿಯ ಕೊಂಡಿಯೊಂದು ಕೈಲಿದ್ದರೆ ಪ್ರಪಂಚದಿ ಯಾವ ಕಾರ್ಯವನ್ನಾದರೂ ಮಾಡಬಲ್ಲೆವು. ನಂಬಿಕೆಯಿರುವ ಹೋಪ್ಫುಲ್ ಮನುಜರಾಗಿರಬೇಕು ಅಷ್ಟೆ.
🍑🍑🍑🍑🍑🍑🍑
ಅಮಿತ ಪ್ರೇಮದಾದರವೂ
ಹೆಮ್ಮ ನಿನ್ನ ಸ್ವಾರ್ಥವು‌‌..
ಅಂತರಂಗವು ಪ್ರೀತಿ ರಾಗದಲಿ
ತುಂಬಿ ಹರಿಯಲಿ ಒಲವು..||

🍑🍑🍑🍑🍑🍑🍑🍑

ಹೆಮ್ಮ ಎಂದರೇನು? ತಿಳಿದಿಲ್ಲ ಅಮ್ಮಾ. ಒಲವು ತುಂಬಿ ಹರಿದಾಲೇ ಗೆಲುವು ನಮ್ಮದಾಗುವುದು. ನೈಜತೆ ಪಡಿಮೂಡಿದೆ ಕವಿಗಳೇ.
🍑🍑🍑🍑🍑🍑🍑

ರುಧಿರ ಕಣ ಕಣದಲೂ
ನೆನಪ ಹರಿಸುವೆ ನಿತ್ಯಾ...
ಅನವರತ ಮಿಡಿಯಲಿ ನಾಡಿ
ನನ್ನಿರುವು ನಿನ್ನೊಳಗೆ ಸತ್ಯಾ...||

🍑🍑🍑🍑🍑🍑🍑🍑

ಯಾವುದೇ ವ್ಯಕ್ತಿ ಪ್ರಪಂಚದಲಿ ಆಶಿಸುವುದು ಇದನ್ನೇ ಅಮ್ಮ. ಅದು ನಿಮ್ಮ ಕವನದುದ್ದಕೂ ಅನುರಣಿಸಿದೆ. ಇದೇ ಕವನದ ಸಾರ್ಥಕತೆಯ ಬಿಂಬ. ಅಲ್ಲಿ ನೈಜ ಭಾವಾಭಿವ್ಯಕ್ತಿಗೆ ಮಾತ್ರ ಜಾಗ.

🍑🍑🍑🍑🍑🍑🍑🍑

ಹೊರ ಬಾರೆನೋ ಗೆಳೆಯಾ
ಕೊನೆಯ ಗಳಿಗೆಯ ತನಕ
ಕ್ಷಣ ಕ್ಷಣ ವೂ ನೀನೆ ಜಪವೂ
ಕಳೆವೆ ಹೀಗೆ ಬದುಕ||
🍑🍑🍑🍑🍑🍑🍑
ಕೊನೆಯಲಿ ಕೀಲಿಕೈ ಸಿಗಬೇಕಿತ್ತಲ್ಲಾ.. ಇನ್ನೊಂದು ಚರಣ ಸೇರಿಸಿ ಮೇಡಂ. ಬದುಕನ್ನು ಸಾರ್ಥಕಗೊಳಿಸಿ.
ಧನ್ಯವಾದಗಳು.
@ಪ್ರೇಮ್@

803. ವಿಮರ್ಶೆ-7

7. ಸಿರಾಜ್ ಸರ್

***ತೋಟ***

ನಡೆದಾಡುವ ತೋಟದಲ್ಲಿ
ಮಾತನಾಡುವ ಮಹಾಮನೆ
ಮನೆಯು ಮಾತು ನಿಲ್ಲಿಸಿದರೆ
ತೋಟ ವಾಗುವುದು ಕೊನೆ ೧

🥑🥑🥑🥑🥑🥑🥑

ವಾವ್..ಕವಿಭಾವ ಸೂಪರ್. ಹೋಲಿಕೆ ಅನೂಹ್ಯ! ಬಸವಣ್ಣನವರ ಕಾಲೇ ಕಂಬ, ದೇಹವೇ ದೇಗುಲ ಎಂಬ ವಚನದ ನೆನಪಾಯ್ತು ನಿಮ್ಮ ಸಾಲುಗಳನ್ನು ಓದುವಾಗ.
🥑🥑🥑🥑🥑🥑🥑🥑

ವಿದ್ಯುತ್ತಿನ ದೀಪಗಳೆರಡು
ಧ್ವನಿವರ್ಧಕದ ಜೊತೆಗೆ
ಶಬ್ದಕೋಶಗಳೂ ಎರಡು
ಮರ ರೆಂಬೆ ಕೊಂಬೆ ಬೇಲಿ
ಒಡೆಯನ ಆರೈಕೆಯಲ್ಲರಳುವ
ಉನ್ಮಾದದ ಹೂವುಗಳು ೨

🥑🥑🥑🥑🥑🥑🥑

ವಾವ್.. ನಿಮ್ಮ ರೂಪಕ ಶೈಲಿಗೆ ನೀವೇ ಸಾಟಿ ಗುರುಗಳೆ. ಅದೆಲ್ಲಿಂದ ಹುಡುಕಿ ಕಟ್ಟಿಕೊಂಡು ತಂದಿರೋ ಸಾಲು ರೂಪಕಗಳ! ಕಣ್ಣು ಬಾಯಿ ಕಿವಿಗಳನ್ನೂ ಹೀಗೆ ವರ್ಣಿಸಬಹುದೆಂಬುದ ನಿಮ್ಮಿಂದ ಕಲಿತೆ.

🥑🥑🥑🥑🥑🥑🥑🥑

ಕೊಂಚ ಹ್ಯಾಮಾರಿದರೂ
ಅಹಂಕಾರದ ಕಳ್ಳರು ನುಗ್ಗಿ
ಲೂಟಿ ಮಾಡಲೂ ಸೈ
ಅದಕ್ಕಾಗಿ ಕಾಯ್ದಿರಿಸುತ್ತಾನೆ
ಮನೆಯ ಬೀಗದ ಕೈ ೩

🥑🥑🥑🥑🥑🥑🥑
ಹ್ಯಾಮಾರು-ಏಮಾರು ಇರಬಹುದೇನೋ. ಪದ ಸಂಪತ್ತು ಕಡಿಮೆಯಿದೆ ನನ್ನಲಿ. ಖಂಡಿತ ಗುರುಗಳೇ. ಕನ್ನಡ ಸಿನೆಮಾದ "ಯೌವನದ ಹೊಳೆಯಲ್ಲಿ ಈಜಾಟವಾಡಿದರೆ ಓ ಹೆಣ್ಣೇ ಸೋಲು ನಿನಗೆ..." ಈ ಸಾಲುಗಳು ನೆನಪಿಗೆ ಬಂದವು.

🥑🥑🥑🥑🥑🥑🥑🥑

ತೋಟದ ಸೌಂದರ್ಯದ
ಮೈಮರೆಯುವುದು ಖರೆ
ಬೀಗದ ಕೈ ಕಳೆದುಕೊಂಡು
ಅನುಭವಿಸಿದ್ದಾನೆ ತೊಂದರೆ ೪

🥑🥑🥑🥑🥑🥑🥑

ಸರಳ ಪ್ರಾಸಬದ್ಧ ನುಡಿಗಳಲಿ ಹಿರಿಯಾರ್ಥ. ನಮ್ಮ ಮಂಕುಬುದ್ಧಿಯಿಂದಾಗಿ ನಾಳಿನ ಬಗ್ಗೆ ಗೊತ್ತಿದ್ದರೂ ಮರೆತು ನಾವೇ ಎಂಬಂತೆ ಕುಣಿಯುವ ಮನುಜನ ಪರಿ...
🥑🥑🥑🥑🥑🥑🥑🥑

ಬೀಗದ ಕೈ ಭದ್ರವಾಗಿಡಲು
ಮಾಡಿಕೊಂಡಿದ್ದಾನೆ ವಿಚಾರದಿ
ಹೊಲಿದು ಅರಿವಿನ ಚೀಲ
ಒಡೆಯ ಎಚ್ಚರದಿಂದಿರಬೇಕು
ಇರುವತನಕ ತೋಟದ ಕಾಲ

🥑🥑🥑🥑🥑🥑🥑
ಅಂದದ ಕೊನೆ, ಚಂದದ ಪದಗಳಿಗೆ ಭಾಷಾ ಚಿಹ್ನೆಗಳಿಲ್ಲದೆ ಕೊರತೆಯಾಯ್ತೇನೋ ಅನಿಸಿತು.!! ಹೀಗೆರಡು ಚಿಹ್ನೆಗಳು ಮದುವಣಗಿತ್ತಿಯ ಕುಂಕುಮದಂತೆ ಹೊಳೆಯುತ್ತಿದ್ದುವೇನೋ. ಅಂದದ ಕವನಕ್ಕೆ ಸಧನ್ಯವಾದಗಳು..
@ಪ್ರೇಮ್@