ಪ್ರೀತಿ
ನನ್ನ ನಿನ್ನ ನಡುವೆ ಬಂಧ
ಕಣ್ಣ ಸಂಚು ಮಾಡಿತು
ಸಣ್ಣ ಸಣ್ಣ ನೋಟವಿಂದು
ಬಣ್ಣದರ್ಥ ಕೊಟ್ಟಿತು
ನಿನ್ನೆ ಯಾರೋ ಇದ್ದವರು
ಮುನ್ನ ಒಟ್ಟು ಸೇರಲು
ಸುಣ್ಣದಂಥ ಬಿಳಿಯ ಪ್ರೀತಿ
ಮಣ್ಣ ಮೇಲೆ ಮೂಡಲು
ಭಿನ್ನ ಭಾವ ಬದಿಗೆ ಸರಿಸಿ
ತನ್ನ ನೋವ ಬೆರೆಸಿ
ಜ್ಞಾನ ಧಾರೆ ಹೆಚ್ಚಿಸುತ್ತಾ
ಹೃಣ್ಮನಗಳ ಸೇರಿಸಿ
ರನ್ನ ಮುದ್ದು ಆತ್ಮೀಯತೆ
ಪುಣ್ಯ ಕಾರ್ಯ ಮಾಡುತ
ಹೆಣ್ಣ ಜನ್ಮ ಸಾರ್ಥಕ್ಯದ
ಹೊನ್ನ ಭಾವ ಮೂಡುತ
@ಹನಿಬಿಂದು@
06.12.2025
Literature of Honey Bindu
ಶನಿವಾರ, ಡಿಸೆಂಬರ್ 6, 2025
ಭಾವಗೀತೆ
ಅಮ್ಮ
ಶುಕ್ರವಾರ, ಡಿಸೆಂಬರ್ 5, 2025
ತುಳು
ಸೋಮವಾರ, ಡಿಸೆಂಬರ್ 1, 2025
ಚಳಿಯ ಕಚಗುಳಿ
ಭಾನುವಾರ, ನವೆಂಬರ್ 30, 2025
ಡಿಸೆಂಬರ್ 22: ರಾಷ್ಟ್ರೀಯ ಗಣಿತ ದಿನ
ಜಗತ್ತಿನ ಹಬ್ಬ
ಒಮ್ಮೆ ಒಂದು ಶಾಲೆಯಲ್ಲಿ ಮಕ್ಕಳು ಆಟವಾಡುತ್ತಿದ್ದರು. ಹಠಾತ್ತಾಗಿ ಶಿಕ್ಷಕಿ ಎಲ್ಲರನ್ನು ಕರೆದರು.
“ಮಕ್ಕಳೇ, ನಾಳೆ ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನ ಆಚರಣೆ ಇದೆ,” ಎಂದರು.
ಎಲ್ಲ ಮಕ್ಕಳು ಆಶ್ಚರ್ಯದಿಂದ ಒಬ್ಬರನ್ನೊಬ್ಬರು ನೋಡಿಕೊಂಡರು.
“ಗಣಿತ ದಿನವೂ ಇದೆಯಾ, ಮ್ಯಾಡಂ?” ಎಂದು ರವಿ ಕೇಳಿದ.
“ಹೌದು ರವಿ,” ಅಂದರವರು ನಗುತ್ತಾ. “ಇದು ಸಾಮಾನ್ಯ ದಿನ ಅಲ್ಲ. ಭಾರತೀಯ ಗಣಿತ ಲೋಕಕ್ಕೆ ಕೀರ್ತಿ ತಂದುಕೊಟ್ಟ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ.”
ಎಲ್ಲರೂ ಕುತೂಹಲದಿಂದ ಅವರ ಮಾತನ್ನು ಕೇಳತೊಡಗಿದರು.
ಗಣಿತ ಎಂದರೆ ಏನು?
ಮ್ಯಾಡಂ ಹೇಳಿದರು:
“ನಿಮ್ಮಾರಿಗಂತೂ ಗಣಿತ ಅಂದರೆ ಪಾಠಪುಸ್ತಕ, ಲೆಕ್ಕ, ಪರೀಕ್ಷೆ… ಆದರೆ ಗಣಿತ ಪ್ರಕೃತಿಯ ಭಾಷೆ.
ಹೂವುಗಳು ಹೇಗೆ ಅರಳುತ್ತವೋ, ನಕ್ಷತ್ರಗಳು ಹೇಗೆ ಚಲಿಸುತ್ತವೋ—ಅದರ ಎಲ್ಲಲ್ಲಿ ಗಣಿತ ಅಡಗಿದೆ.”
ಮಕ್ಕಳು ಕಿಟಕಿಯ ಹೊರಗೆ ಹೂವುಗಳ ಮೇಲೆ ತಿರುಗುತ್ತಿದ್ದ ಚಿಟ್ಟೆಗಳನ್ನು ನೋಡಿ, “ಇದರಲ್ಲಿ ಗಣಿತ ಇದೆಯಾ?” ಎಂದು ಆಸಕ್ತಿಯಿಂದ ಕೇಳಿದರು.
“ಹೌದು,” ಮ್ಯಾಡಂ ಹೇಳಿದರು, “ಚಿಟ್ಟೆಗಳ ರೆಕ್ಕೆಗಳ ವಿನ್ಯಾಸಕ್ಕೂ ಗಣಿತದ ಒಪ್ಪಂದವಿದೆ!”
ಹಳೆಯ ಕಾಲದ ಗಣಿತಜ್ಞರು
ಶಿಕ್ಷಕಿ ಕಥೆಯಂತೆ ಹೇಳತೊಡಗಿದರು:
“ಬಹಳ ವರ್ಷಗಳ ಹಿಂದೆಯೇ ಭಾರತದಲ್ಲಿ ಆರ್ಯಭಟ, ಭಾಸ್ಕರಾಚಾರ್ಯ, ಮಹಾವೀರಾಂತಹ ಮಹಾನ ಗಣಿತಜ್ಞರು ಬದುಕಿದ್ದರು.
ಆರ್ಯಭಟರು ಪೈ ಎಂಬ ಸಂಖ್ಯೆಯ ಮೌಲ್ಯವನ್ನು ತಿಳಿಸಿದರು. ಭಾಸ್ಕರಾಚಾರ್ಯರ ‘ಲೀಲಾವತಿ’ ಎಂಬ ಪುಸ್ತಕದಲ್ಲಿ ತುಂಬಾ ಸುಲಭವಾಗಿ ಗಣಿತದ ಪ್ರಶ್ನೆಗಳು ಇವೆ.
ಅವರು ಮಾಡಿದ ಕೆಲಸಗಳು ಇಂದಿಗೂ ನಾವು ಬಳಸುವ ವಿಜ್ಞಾನಕ್ಕೆ ಬೇಸು.”
ಮಕ್ಕಳ ಕಣ್ಣುಗಳು ಇನ್ನಷ್ಟು ಚುರುಕಾಗಿದವು.
“ಏನು ಮ್ಯಾಡಂ! ಇಷ್ಟು ವರ್ಷಗಳ ಹಿಂದೆ ಅವರು ಇದನ್ನೆಲ್ಲಾ ಕಂಡುಹಿಡಿದಿದ್ರಾ?” ಎಂದು ಆಶ್ಚರ್ಯಪಟ್ಟರು.
ರಾಮಾನುಜನ್ – ಸಂಖ್ಯೆಗಳ ಮಂತ್ರಿಕ
ಮ್ಯಾಡಂ ಮುಂದುವರಿಸಿದರು:
“ಇವೆಲ್ಲರಿಗೂ ಮೇಲೆ, ಕೇವಲ 32 ವರ್ಷ ಬದುಕಿದರೂ ಗಣಿತ ಲೋಕದಲ್ಲಿ ಅಚ್ಚರಿ ಮೂಡಿಸಿದ ಒಬ್ಬ ವಿಸ್ಮಯ ಪ್ರತಿಭೆ ಇದ್ದ.
ಅವರ ಹೆಸರು–ಶ್ರೀನಿವಾಸ ರಾಮಾನುಜನ್.”
ಮಕ್ಕಳು ಆ ಹೆಸರನ್ನು ಮರುಮರು ಉಚ್ಛರಿಸಿದರು.
“ರಾಮಾನುಜನ್ ಬಡ ಕುಟುಂಬದವರು. ಆದರೆ ಅವರಿಗೆ ಸಂಖ್ಯೆಗಳು ಸ್ನೇಹಿತರಂತೆ.
ಬೀದಿ ದೀಪದ ಬೆಳಕಿನಲ್ಲೂ ಕುಳಿತು ಅವರು ಪ್ರಶ್ನೆಗಳನ್ನೇ ಪರಿಹರಿಸುತ್ತಿದ್ದರು.
ಗಣಿತ ಪುಸ್ತಕಗಳು ಕಡಿಮೆ ಇದ್ದರೂ ತಮ್ಮದೇ ಯೋಚನೆಯಿಂದ ಸಾವಿರಾರು ಹೊಸ ಸೂತ್ರಗಳನ್ನು ರಚಿಸಿದರು.”
ರವಿ ಕುತೂಹಲದಿಂದ ಕೇಳಿದ:
“ಮ್ಯಾಡಂ, 1729 ಅನ್ನೋ ಸಂಖ್ಯೆ ವಿಶೇಷ ಅಂತ ಹೇಳ್ತಾರೆ. ಯಾಕೆ?”
ಮ್ಯಾಡಂ ನಗು ತಡೆದುಕೊಳ್ಳಲಾಗದೆ ಹೇಳಿದರು:
“ಹಾರ್ಡಿ ಎಂಬ ಗಣಿತಜ್ಞರು ಆಸ್ಪತ್ರೆಯಲ್ಲಿ ತುಂಬಾ ಅಸ್ವಸ್ಥರಾಗಿದ್ದ ರಾಮಾನುಜನ್ ಅವರನ್ನು ಭೇಟಿ ಮಾಡಲು ಬಂದರು.
‘ನಾನು ಬಂದ ಟ್ಯಾಕ್ಸಿಯ ಸಂಖ್ಯೆ 1729; ಅದರಲ್ಲಿ ಯಾವುದೇ ವಿಶೇಷತೆ ಇಲ್ಲ’ ಎಂದು ಹೇಳಿದರು.
ಅಷ್ಟರಲ್ಲಿ ರಾಮಾನುಜನ್ ತಕ್ಷಣ ಉತ್ತರಿಸಿದರು:
‘ಅದು ವಿಶೇಷ ಸಂಖ್ಯೆ ಸಾರ್! ಅದು ಎರಡು ವಿಭಿನ್ನ ರೀತಿಯಲ್ಲಿ ಎರಡು ಘನಗಳ ಮೊತ್ತವಾಗಿ ಬರಬಹುದಾದ ಅತಿ ಚಿಕ್ಕ ಸಂಖ್ಯೆ!’
ಅವರು ಅಸ್ವಸ್ಥರಾಗಿದ್ದರೂ ಸಂಖ್ಯೆಗಳ್ಳಿಗೆ ಇಷ್ಟು ಸ್ಪಷ್ಟವಾಗಿ ಯೋಚಿಸಿದ್ದರು.”
ಮಕ್ಕಳು ಆಶ್ಚರ್ಯದಿಂದ ಬಾಯ್ಬಿಟ್ಟೇ ಕುಳಿತುಬಿಟ್ಟರು.
ಗಣಿತ ಎಲ್ಲೆಲ್ಲಿ ಇದೆ?
ಮೇಡಂ ಹೇಳಿದರು:
“ಮಕ್ಕಳೇ, ಗಣಿತ ಕೇವಲ ಲೆಕ್ಕವಲ್ಲ.
ನಿಮ್ಮ ಆಟದ ಚೆಂಡಿನ ಗೋಳಾಕೃತಿ,
ನಿನ್ನ ಮನೆಗೆ ಹೋಗುವ ರಸ್ತೆಯ ನೇರತೆ,
ನೀವು ದಿನವೂ ತಿನ್ನುವ ಹಣ್ಣಿನ ಬೀಜಗಳ ವಿನ್ಯಾಸ—ಎಲ್ಲವೂ ಗಣಿತವನ್ನು ಮಾತನಾಡುತ್ತವೆ.
ಮೊಬೈಲ್, ಕಂಪ್ಯೂಟರ್, ಜಿಪಿಎಸ್… ಇವೆಲ್ಲವೂ ಗಣಿತದಿಂದಲೇ ಸಾಧ್ಯ.”
ಈ ದಿನದ ಉದ್ದೇಶ
“ನಮ್ಮ ದೇಶದಲ್ಲಿ 2012ರಿಂದ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ,” ಮ್ಯಾಡಂ ಹೇಳಿದರು.
“ಈ ದಿನದ ಉದ್ದೇಶ:
– ಗಣಿತದ ಭಯವನ್ನು ಕಡಿಮೆ ಮಾಡುವುದು
– ಗಣಿತವನ್ನು ಆನಂದದಿಂದ ಕಲಿಸುವುದು
– ರಾಮಾನುಜನ್ ಅವರ ಸಾಧನೆಯನ್ನು ನೆನಪಿಸುವುದು
– ಹೊಸ ಪ್ರತಿಭೆಗಳನ್ನು ಬೆಳೆಸುವುದು”
ಮಕ್ಕಳು ತಕ್ಷಣ ಚಪ್ಪಾಳೆ ಹೊಡೆದು, “ನಾವು ಕೂಡಾ ಗಣಿತವನ್ನು ಹೊಸದಾಗಿ ಕಲ್ತೀನಿ ಮ್ಯಾಡಂ!” ಎಂದು ಹೇಳಿದರು.
ಶಿಕ್ಷಕಿ ಹೇಳಿದ ಕಥೆ ಎಲ್ಲ ಮಕ್ಕಳ ಮನಸ್ಸಿಗೂ ತಾಕಿತು.
ಗಣಿತ ಅಂದರೆ ಕಷ್ಟವಲ್ಲ, ಕುತೂಹಲ.
ಗಣಿತ ಅಂದರೆ ಒಣ ಅಂಕೆಗಳು ಅಲ್ಲ; ಪ್ರಕೃತಿ, ಕಲ್ಪನೆ, ಮತ್ತು ಸಮಸ್ಯೆ ಪರಿಹರಿಸುವ ಕಲೆ.
ಡಿಸೆಂಬರ್ 22 ಅವರುಗಳಿಗೆ ಕೇವಲ ಒಂದು ದಿನವಲ್ಲ;
ಸಂಖ್ಯೆಗಳ ಲೋಕವನ್ನು ಹೊಸ ಕಣ್ಣಿನಿಂದ ನೋಡಲು ಶುಭಾರಂಭವಾಗಿದೆ.
ಶುಕ್ರವಾರ, ನವೆಂಬರ್ 28, 2025
ಇಂದು
ಇಂದು
ಒಂದು ಎರಡು ಸಾಲದು
ಬಂದು ಬರಡು ಆಗದು
ಸಿಂಧುವಿನ ಚಿಲುಮೆಯಿದು
ಮುಂದೆ ದಾರಿ ತಿಳಿಯದು
ನಂದು ನಿಂದು ಬಗೆಯದು
ಸಂದು ಗೊಂದು ತುಂಬದು
ಕಂದು ಬಣ್ಣ ಕಾಫಿಯದ್ದು
ಮಿಂದು ಆರೋಗ್ಯವೆಂದೂ ಕೆಡದು
ಗೊಂದು ಅಂಟಿ ಬಿಡುವುದು
ನೊಂದು ಸಾವು ಸಲ್ಲದು
ತಂದು ಸುರಿದು ಮುಗಿಯದು
ದುಂದು ವೆಚ್ಚ ಮಾಡಬಾರದು
ಬಂದು ನೋಡು ತಿಳಿವುದು
ಬಿಂದು ಇಲ್ಲದೆ ಏನಿಹುದು
ಮಂದ ಬುದ್ಧಿ ಇರಬಾರದು
ಅಂದು ಬದುಕು ನಿರಾಳವಿಹುದು
ಅಂದುಕೊಂಡೆ ಬಾಳುತಿಹುದು
ಇಂದು ಜನರ ಜ್ಞಾನ ಬೆಳೆದು
ಹಿಂದು ಮುಂದು ಗಮನಿಪುದು
ಎಂದೂ ಬುದ್ದಿ ಬಳಸುವುದು
@ಹನಿಬಿಂದು@
29.11.2025
ಬುಧವಾರ, ನವೆಂಬರ್ 26, 2025
ಭಾವಗೀತೆ
ಭಾವಗೀತೆ
ಕೃಷಿಯನು ಮೆರೆಸೋಣ
ಕತ್ತಿಯ ಹಿಡಿದು ರುಮಾಲು ಸುತ್ತಿ
ಗದ್ದೆಗೆ ಹೋಗೋಣ ನಾವು...
ಗದ್ದೆಗೆ ಹೋಗೋಣ...
ಹಾಡನು ಹಾಡುತ ಹಸಿರಿಗೆ ನಮಿಸುತ
ಪೈರನು ಕೊಯ್ಯೋಣ..ನಾವು
ಕಟಾವು ಮಾಡೋಣ//ಪ//
ಆಹಾರ ಬೆಳೆಸಿ ಆರೋಗ್ಯ ಉಳಿಸುವ
ಕಾರ್ಯಕೆ ಸಾಗೋಣ ಕೃಷಿಯ..
ಕಾರ್ಯಕೆ ಸಾಗೋಣ
ಅಣ್ಣ ಅಕ್ಕ ಬನ್ನಿರಿ ಎಲ್ಲರೂ
ಕೃಷಿಯನು ಉಳಿಸೋಣ
ರೈತನೆ ದೇಶದ ಬೆನ್ನೆಲುಬೆಂದು
ಸಹಾಯ ಮಾಡೋಣ... ರೈತಗೆ
ಸಹಾಯ ಮಾಡೋಣ...//೧//
ಪೈರನು ಬಡಿಯುತ ಭತ್ತವು ಬೀಳಲು
ರಾಶಿಯ ಮಾಡೋಣ ನಾವು...
ರಾಶಿಯ ಮಾಡೋಣ
ಕೈಗಳು ಸೇರಲು ಕೆಲಸವು ಹಗುರ
ಒಂದಾಗಿ ದುಡಿಯೋಣ
ನಾಡಿಗೆ ಅನ್ನವನೀಯುವ ಕಾರ್ಯವ
ಸರ್ವರೂ ಮಾಡೋಣ..ನಾವೆಲ್ಲಾ
ಸರ್ವರೂ ಮಾಡೋಣ..//೨//
ಜೈ ಜೈ ಘೋಷವ ಹಾಡುತ ನಾವು
ಒಟ್ಟಾಗಿ ಬಾಳೋಣ ನಾವು...
ಒಟ್ಟಾಗಿ ಬಾಳೋಣ
ಭಾರತ ಮಾತೆಯ ಮಕ್ಕಳು ಎನುವ
ಭಾವವ ಹೊಂದೋಣ
ಜಾತಿ ಮತ್ಸರ ದೂರವೇ ಇರಿಸಿ
ಕೃಷಿಯನು ಮೆರೆಸೋಣ...ನಾಡಿನ
ರೈತಗೆ ನಮಿಸೋಣ..//೩//
@ಹನಿಬಿಂದು@
03.11.2025