ಸೋಮವಾರ, ಆಗಸ್ಟ್ 30, 2021

ಮುದ್ದು ಮಾಧವ

ಮುದ್ದು ಮಾಧವ

ಮುದ್ದು ಮಾಧವ
ಕದ್ದು ನುಂಗಿದ
ಪೆದ್ದನಂತೆ ಅಮ್ಮನೊಡನೆ
ಸದ್ದಿಲ್ಲದೆ ಓಡಿದ

ಬೆಣ್ಣೆ ಕದಿಯುತ
ಸನ್ನೆ ಮಾಡಿ
ಕನ್ಯೆಯರ ಕೂಡಿ
ಕೆನ್ನೆ ಕೆಂಪಾಗಿಸಿ..

ಕಳ್ಳ ನೋಡಿ
ಸುಳ್ಳ ಹೇಳುತ
ಗಲ್ಲ ಹಿಡಿದು
ಮೆಲ್ಲ ನಡೆಯುತ

ವಿಶ್ವ ಬಾಯಲಿ
ಪರ್ವ ಕಾಲದಿ
ಗರ್ವವಿಲ್ಲದೆ
ಸರ್ವರೊಡನೆಯೂ

ಜ್ಞಾನ ವಿದ್ಯೆಯ
ಮಾನ ಪ್ರಾಣವ
ಕೋಣನಂತಿಹ ಎನಗೆ
ಜಾಣ ಪಾಲಿಸೋ ನಿತ್ಯವೂ..

ಭಜಿಪೆ ನಿನ್ನನೇ
ಸುಗಿಪೆ ನಿತ್ಯವೂ
ಮನದಿ ಭಕ್ತಿಯ
 ಬೇಳೆಸೋ ಮಾಧವ..
@ಪ್ರೇಮ್@
30.08.2021

ಗುರುವಾರ, ಆಗಸ್ಟ್ 12, 2021

ವಿಮರ್ಶೆ

ಹಸಿರೇ ಉಸಿರು ಎಂಬ ನಿತ್ಯ ಓದುವ ಸಾಲಿನ ಅನಾವರಣ...

ಶ್ರೀಮತಿ ಲತಾಮಣಿ  ಎಂ.ಕೆ ಅವರ ಕವನ ಸಂಕಲನ ವಸಂತ ಗಾನ ದ ಎಲ್ಲಾ ಕವನಗಳೂ ಅನುಭವಿಸಿಕೊಂಡು  ಓದುವುದಕ್ಕೆ ತುಂಬಾ ಸುಂದರವಾಗಿವೆ. ನಾನು ಪರಿಸರದ ಮೇಲೆ ಅತೀವ ಕಾಳಜಿ ಇರುವವಳಾದ ಕಾರಣ ನನ್ನ ಇತಿಮಿತಿಯಲ್ಲಿ ಓದುಗಳಾಗಿ '... ಉಸಿರು' ಎಂಬ ಕವನದ ಬಗ್ಗೆ ಒಂದೆರಡು ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳ ಬಯಸುವೆ. 

ಎಲ್ಲಾ ಜೀವಿಗಳಿಗೆ ಹಸಿರೇ ಉಸಿರಾಗಿರುವ ನಮ್ಮ ಜಗದಲಿ ಇಂದು ಮನುಜರಾದ ನಾವು ಹಸಿರ ನಾಶಗೊಳಿಸಿ ನಮ್ಮ ಸ್ವಾರ್ಥಕ್ಕೆ ಬಳಸಿ, ಎಲ್ಲಾ ಜೀವಿಗಳ ನಾಶಕ್ಕೆ ಕಾರಣ ಮಾನವ. ಅವನಿಗೆ ಪ್ರಶ್ನಿಸುವ ಬದಲು ಹಸಿರಿಗೇ ಪ್ರಶ್ನಿಸುವ ಕವನವಿದು. ವ್ಯಕ್ತೀಕರಣ ಅಥವಾ ವ್ಯಕ್ತಿಚಿತ್ರ ಬಿಂಬಿತ ಕಾವ್ಯ ಪ್ರಕಾರವೂ ಆದ ಈ ಕವನ ಮನುಜನ ಇಂದಿನ ಜೀವನ ಶೈಲಿಯ ಮೇಲೆ ಬೆಳಕು ಚೆಲ್ಲುವ ಹಾಗಿದೆ. 

ಹಸಿರಿನೊಡನೆಯೇ ಕವಯತ್ರಿ ನೀನೇಕೆ ಕಳೆದು ಹೋದೆ ಎಂಬುದಾಗಿ ಪ್ರಶ್ನಿಸುವ ಸನ್ನಿವೇಶ ಕರುಳು ಹಿಂಡುತ್ತದೆ. ಹಿರಿಯರು ಸಾವನ್ನಪ್ಪಿದ್ದಾಗ ಮಕ್ಕಳು "ನೀ ನನ್ನ ಬಿಟ್ಟು ಏಕೆ ಹೋದೆ?" ಎಂದು ಕೇಳುವ ಹಾಗಿದೆ ಈ ಸಾಲು.

ಪಲ್ಲವಿ ಪ್ರಶ್ನೆಯಾದರೆ ಚರಣ ಹೊಗಳುವಿಕೆ. ಅಲ್ಲಿ ಪರಿಸರದ ಸಾರವನ್ನು ಎತ್ತಿ ಹಿಡಿಯಲಾಗಿದೆ. ವ್ಯಕ್ತಿಚಿತ್ರ ಇಲ್ಲೂ ಬಿಂಬಿತವಾಗಿದೆ . 

ಮೂರನೇ ಚರಣದ  ಸಾಲುಗಳು ತನ್ನ ತಪ್ಪನ್ನು ಮಾನವ ಒಪ್ಪಿಕೊಳ್ಳುವಂತೆ ಆಗಿದೆ. 

ತನ್ನ ನಾಲ್ಕನೇ ಚರಣದಲ್ಲಿ ಕವಿ ತನಗೂ ತನ್ನಂತಿರುವ ಮಾನವರಿಗೂ ನಮ್ಮ ಹೇಯ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ.

ಅಂತರ್ಜಲ ಬರಿದಾಗಿರುವ ಬಗ್ಗೆ ಬೇಸರ ಪರಿಸರದ ಹಸಿರಿನ ಕಾಳಜಿಯನ್ನು ತೋರಿಸುತ್ತದೆ. ಬರಿದಾಗಿ ಅನ್ನಲು ಹೋಗಿ ಬರಡಾದ ಅಂದಿರ ಬಹುದೇ ಅನ್ನಿಸಿತು ಒಮ್ಮೆ. 

ಹಸಿರೇ ಉಸಿರು, ಉಸಿರೇ ಹಸಿರು ಎಂಬ ಚಿತ್ರ ಕಾವ್ಯ ಕಣ್ಣಿಗೆ ಕಟ್ಟುವಂತೆ ಸೊಗಸಾಗಿ ಎಲ್ಲಾ ಚರಣಗಳಲ್ಲಿ ಪುನರಾವರ್ತಿತವಾಗಿ ಕವನದ ಅಂದವನ್ನು ಹೆಚ್ಚಿಸಿದರೆ, ಅಂತ್ಯಪ್ರಾಸ ಖುಷಿ ಕೊಡುತ್ತದೆ. ನೈಜ ಸನ್ನಿವೇಶದ ಪ್ರತೀಕ ಈ ಕವನ. 

ಒಟ್ಟಿನಲ್ಲಿ ಕವಯತ್ರಿಯವರ ಪರಿಸರವನ್ನು ಪ್ರೀತಿಸುವ ಕವನ ಅಂದವಾಗಿದ್ದು, ಚೊಕ್ಕವಾಗಿ ಮೂಡಿ ಬಂದು ಜನರ ಕಣ್ ತೆರೆಸುವಂತಿದೆ, ನಾವೂ ಪರಿಸರ ಹಸಿರು ಉಳಿಸೋಣ ಎನ್ನುವಂತಿದೆ. 
@ಪ್ರೇಮ್@
11.08.2021