ಮಂಗಳವಾರ, ನವೆಂಬರ್ 30, 2021

ಯಶೋಗಾಥೆ - 6 ಶ್ರೀಯುತ ಚಂದ್ರಶೇಖರ್ ಪೇರಾಲ್

ಯಶೋಗಾಥೆ - 6 ಶ್ರೀಯುತ ಚಂದ್ರಶೇಖರ್ ಪೇರಾಲ್

ನಾನು ಇಂದು ಹೇಳ ಹೊರಟಿರುವುದು ಇಂದು ತನ್ನ ಜೀವನದ ಅರವತ್ತು ವಸಂತಗಳನ್ನು ಪೂರೈಸಿ, ಅರವತ್ತೊಂದಕ್ಕೆ ಕಾಲಿಡುತ್ತಿರುವ ನಿನ್ನೆಯಷ್ಟೇ ಒಂದು ಹಂತದ ಸರಕಾರಿ ಸೇವೆಯ ಶಿಕ್ಷಕ ವೃತ್ತಿಯ ಜೀವನಕ್ಕೆ ವಿದಾಯ ಹೇಳಿದ ಇವರು ನಮ್ಮೆಲ್ಲರ ಪ್ರೀತಿಯ ಪೇರಾಲ್  ಮಾಸ್ಟ್ರು. ಒಬ್ಬ ಶಿಕ್ಷಕ ತನ್ನ ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಬಹುದು, ತನ್ನ ಭಾಷೆಯನ್ನು ಬಳಸಿ ಹೇಗೆಲ್ಲಾ ಜನರನ್ನು ಎಚ್ಚರಿಸಬಹುದು, ಹೇಗೆಲ್ಲಾ ತನ್ನನ್ನು ತಾನು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳ ಬಹುದು ಎಂಬುದಕ್ಕೆ ಉದಾಹರಣೆ ಇವರು. ಸರ್ ಮೊದಲನೆಯದಾಗಿ ನಿಮಗಿದೋ ಜನುಮ ದಿನದ ಶುಭಾಶಯಗಳು. ನಿಮ್ಮ ಸುಂದರ ಜೀವನದ ಯಶೋಗಾಥೆಯನ್ನು ಬಿಂಬಿಸಲು ಸಿಕ್ಕಿದ ಅವಕಾಶಕ್ಕೆ ನಾ ಸದಾ ಚಿರಋಣಿ.


ಇದು ಶಿಕ್ಷಕ ವೃತ್ತಿಗೆ ಸೇರಿ ನಿನ್ನೆ ಅಂದರೆ 30.11.2021ರಂದು ಸೇವಾ ನಿವೃತ್ತಿ ಪಡೆದ ಶಿಕ್ಷಕರಾದ ಚಂದ್ರಶೇಖರ್ ಪೇರಾಲ್ ಇವರ ಯಶೋಗಾಥೆಯ ಪರಿಚಯ. ನಿವೃತ್ತಿಯ ಸಮಯದಲ್ಲಿ ಶ್ರೀಯುತ ಚಂದ್ರಶೇಖರ ಪೇರಾಲ್ ಅವರು ಸರಕಾರಿ ಪ್ರೌಢಶಾಲೆ ಎಲಿಮಲೆ ಸುಳ್ಯ ತಾಲೂಕು ದ.ಕ. ಇಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಬದುಕಿನತ್ತ ಒಂದು ಸಿಂಹಾವಲೋಕನ ಇಲ್ಲಿದೆ.

ಶ್ರೀಯುತ ಪೇರಾಲು ರಾಮಣ್ಣ ಗೌಡ ಮತ್ತು ಚಿನ್ನಮ್ಮ ಇವರಿಗೆ ದಿನಾಂಕ ಡಿಸೆಂಬರ್ ಒಂದನೆಯ ತಾರೀಖು ೧೯೬೧ನೆಯ ಇಸವಿಯ ದಿನ ಗಂಡು ಮಗುವೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ,ಪೇರಾಲು ಇಲ್ಲಿ ಜನಿಸಿತು. ಸ್ವಾತಂತ್ರ್ಯ ಬಂದು ಹದಿನಾಲ್ಕು ವರ್ಷಗಳಾಗಿದ್ದವು ಅಷ್ಟೆ. ಆಗಿನ ಕಾಲ ಈಗಿನಂತೆ ಇರಲಿಲ್ಲ. "ಮಕ್ಕಳಿರಲವ್ವ ಮನೆತುಂಬಾ" ಎನ್ನುವ ಕಾಲ. ಇವರ ಮನೆಯಲ್ಲೂ ಆರು ಮಕ್ಕಳು! ನಾಲ್ಕು ಜನ ಅಕ್ಕಂದಿರ ಮತ್ತು ಒಬ್ಬ ಅಣ್ಣನವರ ಮುದ್ದಿನ ತಮ್ಮನಾಗಿ ಜನಿಸಿದ ಚಂದ್ರಶೇಖರ್ ಪೇರಾಲ್ ಅವರಿಗೆ ಪ್ರೀತಿಯ ಕೊರತೆ ಎಂದೂ ಕಾಣಲಿಲ್ಲ! ಮೊದಲಿನ ನಾಲ್ವರು ಮಕ್ಕಳೂ ಕೂಡಾ ಹೆಣ್ಣು ಮಕ್ಕಳಾದಾಗ ತಂದೆ ತಾಯಿಯರು ಗಂಡು ಸಂತಾನ ಬೇಕೆಂದು ಹರಕೆ ಹೇಳಿಕೊಂಡ ಬಳಿಕ ಕೊನೆಯಲ್ಲಿ ಹುಟ್ಟಿದ ಇಬ್ಬರು ಗಂಡು ಮಕ್ಕಳಲ್ಲಿ ಇವರು ಎರಡನೆಯವರು. ಇಡೀ ಕುಟುಂಬಕ್ಕೆ ಸಣ್ಣ ಮಗು. ಚಿಕ್ಕವರೆಂದರೆ ಎಲ್ಲರಿಗೂ ಮುದ್ದು ಅಲ್ಲವೇ? ಹಾಗೆಯೇ ಎಲ್ಲರೂ ಮುದ್ದಿನಿಂದ ಸಾಕಿ ಬೆಳೆಸಿದ ಕಂದನೇ ಚಂದ್ರಶೇಖರ ಪೇರಾಲ್ ಅವರು!

ಈಗಿನಂತೆ ಆಗ ಹಳ್ಳಿ ಹಳ್ಳಿಗಳಲ್ಲಿ ಆಂಗ್ಲ ಮಾದ್ಯಮ ಶಾಲೆಗಳು ಇರಲಿಲ್ಲ, ವಿದ್ಯಾಭ್ಯಾಸಕ್ಕೆ ಮಹತ್ವ ಕೊಡದೆ ಕೃಷಿ ಕಾರ್ಯಕ್ಕೆ ಒತ್ತು ಕೊಡುತ್ತಿದ್ದ ಕಾಲವದು. ಇವರ ಬಾಲ್ಯದ ಪ್ರಾಥಮಿಕ ಶಿಕ್ಷಣ ತಮ್ಮ ಸ್ವಂತ ಊರಾದ ಪೇರಾಲ್ ನಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಆಗಿನ ಶಿಕ್ಷಕರು ಎಲ್ಲರೂ ಶಿಸ್ತಿನ ಸಿಪಾಯಿಗಳಾಗಿದ್ದರು.ಶ್ರೀಯುತ ಎಲ್ಯಣ್ಣ ಗೌಡ ಎಂಬವರು ಮುಖ್ಯ ಶಿಕ್ಷಕರಾಗಿದ್ದರು. ಚಂದ್ರಶೇಖರರ ಮೇಲೆ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ ಎಂದರೆ ಅವರೇ. ಅದೇ ಪ್ರಭಾವ ಬಹುಶಃ ಮುಂದೆ ಅವರು ಶಿಕ್ಷಕ ವೃತ್ತಿಯನ್ನು ಆರಿಸುವಲ್ಲಿ ಅವರಿಗೆ ಪ್ರೇರಣೆಯಾಗಿರಲೂ ಬಹುದೇನೋ. ಈಗಿನಂತೆ ಆಗ ತಾಂತ್ರಿಕತೆ ಮುಂದುವರಿದಿರಲಿಲ್ಲ. ಟಿವಿ, ಮೊಬೈಲ್ ಕನಸಿನ ಮಾತು. ಹಾಗಾಗಿ ಕಲಿಕೆಗೆ ಬೇರೆ ಮಾಧ್ಯಮಗಳು ಇರಲಿಲ್ಲ, ಪ್ರತಿ ಮಗುವಿನ ಜೀವನದ ಹೀರೋಗಳು ಎಲ್ಲರೂ ಹೆಚ್ಚಾಗಿ ಶಿಕ್ಷಕರು ಅಥವಾ ಆ ಊರಿನಲ್ಲಿ ಮೊದಲೇ ಹೆಚ್ಚು ಕಲಿತು ದೂರದ ಊರಿನಲ್ಲಿ ಉನ್ನತ ಹುದ್ದೆಗೆ ಸೇರಿದ ಒಂದೋ ಎರಡೋ ಜನ -ಇವರಷ್ಟೇ ಆಗಿದ್ದರು. ಜ್ಞಾನದ ಮೂಲ ಪುಸ್ತಕಗಳೇ ಆಗಿದ್ದವು.

ಶಾಲೆಯಲ್ಲಿ ವಾರದಲ್ಲಿ ಒಂದು ದಿನ ನಡೆಯುತ್ತಿದ್ದ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಮಾನಸಿಕ ಧೈರ್ಯ ಹಾಗೂ ನಾಯಕತ್ವದ ಗುಣವನ್ನು ಬೆಳೆಸಿದರೆ, ಪ್ರತಿ ಶನಿವಾರ ನಡೆಯುತ್ತಿದ್ದ ಭಜನೆ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ  ದೇವರ ಮೇಲಿನ ನಂಬಿಕೆ, ವಿಶ್ವಾಸ, ಭಕ್ತಿಯನ್ನು ಬಿತ್ತುತ್ತಿತ್ತು. ಪ್ರತಿ ತಿಂಗಳಲ್ಲಿ ಒಮ್ಮೆ ನಡೆಯುತ್ತಿದ್ದ ಸಂಸತ್ತು ರಾಜಕೀಯ ವಿದ್ಯಾಮಾನದತ್ತ ಒಲವು ಹಾಗೂ ಅದರ ಪರಿಚಯವನ್ನು ಮಾಡಿಕೊಡುತ್ತಿತ್ತು. ವರ್ಷಕ್ಕೊಮ್ಮೆ ಬರುವ ಮಕ್ಕಳ ವಾರ್ಷಿಕ ಹಸ್ತಪ್ರತಿ ಪುಸ್ತಕ ಆಗಿನ ವಿದ್ಯಾರ್ಥಿಗಳಿಗೆ ಬರವಣಿಗೆ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರೇರಣೆ ನೀಡಿತ್ತು. ಹೀಗೆ ಪ್ರಾಥಮಿಕ ಶಾಲೆಯಲ್ಲಿ ಸದಾ ಒಂದಲ್ಲ ಒಂದು ಕಾರ್ಯಕ್ರಮದ ಪ್ರೇರಣೆ ದೊರೆತು ಮುಂದಿನ ಜೀವನಕ್ಕೆ ಅದುವೇ ಅಡಿಗಲ್ಲಾಯಿತು. ಆಗ ಏಳನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಇತ್ತು. ಅದನ್ನು ಬರೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರು.

ತಂದೆ ರಾಮಣ್ಣ ಗೌಡರಿಗೆ ತನ್ನ ಮಕ್ಕಳನ್ನು ಪ್ರೌಢ ಶಾಲೆಗೆ ಸೇರಿಸಲು ಇಷ್ಟವಿರಲಿಲ್ಲ, ಹೆಣ್ಣು ಮಕ್ಕಳು ಮನೆಯಲ್ಲೇ ಉಳಿದು ಮನೆ ಕೆಲಸಕ್ಕೇ ತೃಪ್ತರಾದರು. ಗಂಡು ಮಕ್ಕಳು ಹೆಚ್ಚು ಓದಿದರೆ ಮನೆಯಲ್ಲಿ ಕೃಷಿ ಕಾರ್ಯಕ್ಕೆ ಸಹಕರಿಸದೆ ದೂರದ ಪಟ್ಟಣಗಳಿಗೆ ಹೋಗಿ ನೆಲೆಸಿದರೆ ತಾನು ಪಟ್ಟ ಕಷ್ಟ ವ್ಯರ್ಥವಾಗುತ್ತದೆ ಎಂಬ ನಂಬಿಕೆಯಿಂದಲೋ ಏನೋ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ಬಳಿಕ ತನ್ನ ಮಕ್ಕಳ ಹೆಚ್ಚಿನ ಓದಿಗೆ ಅವರು ತಲೆಕೆಡಿಸಿಕೊಂಡವರೇ ಅಲ್ಲ. ಆದರೆ ಅಜ್ಜಿಯ ಅಪಾರ ಅನುಭವದ ಮಾತು, ಒತ್ತಡ ಮಗನ ಮೇಲೆ ಬಿದ್ದು, "ಹೆಣ್ಣು ಮಕ್ಕಳು ಹೇಗೂ ಮುಂದೆ ಓದಲಿಲ್ಲ,  ಚಿಕ್ಕವರಾದ ಗಂಡು ಮಕ್ಕಳಾದರೂ ಕಲಿಯಲಿ, ಅವರನ್ನು ಓದಿಸು" ಎಂಬ ಮಾತಿಗೆ ಇಲ್ಲವೆನ್ನಲಾಗದೆ ದೂರದ ಸುಳ್ಯದ  ಸರಕಾರಿ ಪದವಿ ಪೂರ್ವ ಕಾಲೇಜಿಗೆ ತಂದೆ ಪ್ರೌಢ ಶಿಕ್ಷಣಕ್ಕೆ ಸೇರಿಸಿದರು.

ಬೆಳಗ್ಗೆ ಹತ್ತು ಕಿಲೋ ಮೀಟರ್ ಹಾಗೂ ಸಂಜೆ ಹತ್ತು ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ನಡೆದು ಸಾಗಬೇಕಿತ್ತು. ಸುಳ್ಯ ತಲುಪಲು ಪಯಶ್ವಿನಿ ನದಿಯನ್ನು ದಾಟಬೇಕಿತ್ತು. ಮಳೆಗಾಲದಲ್ಲಿ ದೋಣಿಯಲ್ಲಿ ಸಾಗಿ ಶಾಲೆ ಸೇರಬೇಕಿತ್ತು. ಹಾಗಾಗಿ ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲು ಆಗುತ್ತಿರಲಿಲ್ಲ. ಬೆಳಗ್ಗೆ ಆರು ಗಂಟೆಗೆ ಮನೆ ಬಿಟ್ಟರೆ ಸಂಜೆ ಮನೆ ತಲುಪುವಾಗ ಏಳುಗಂಟೆ ಆಗಿರುತ್ತಿತ್ತು. ಮಳೆ ಹೆಚ್ಚಾಗಿ ಸುರಿದ ದಿನ ನದಿಯಲ್ಲಿ ನೀರು ಏರಿ ಅಲೆಗಳು, ಸುಳಿಗಳು ಬರುವ ಕಾರಣ ದೋಣಿ ನಡೆಸುತ್ತಿರಲಿಲ್ಲ. ಹತ್ತು ಕಿಲೋಮೀಟರ್ ನಡೆದು ದೋಣಿ ಕಡವಿನವರೆಗೆ ತಲುಪಿ ಮತ್ತೆ ಹಿಂದಿರುಗಿದ ಕಷ್ಚದ ಪರಿ ಅದು ಅನುಭವಿಸಿಯೇ ತೀರಬೇಕು. ಈಗಿನಂತೆ ಆಗ ಹೆಚ್ಚು ಮಳೆ ಬಂತೆಂದು ರಜೆ ಕೊಡುವ ಕ್ರಮವಿರಲಿಲ್ಲ! ನಡೆದು ಸುಸ್ತಾಗಿ ಮತ್ತೆ ಓದುವ ಕಾರ್ಯ ಮನೆಯಲ್ಲಿ ಮುಂದುವರೆಸಲು ಸಾಧ್ಯವೇ ಯೋಚಿಸಿ! ಆಗಿನ ಮಳೆಗಾಲ ಈಗಿನಂತಲ್ಲ, ಪರಿಸರ ಹಸಿರಾಗಿ, ಮಾಲಿನ್ಯ ಕಡಿಮೆಯಿದ್ದ ಕಾರಣ ವಿಪರೀತ ಮಳೆ, ಆ ಮಳೆಗಾಲದಲ್ಲಿ ಇಪ್ಪತ್ತು ಕಿಲೋಮೀಟರ್ ಗಳ ನಡಿಗೆ, ಪುಸ್ತಕ, ಬಟ್ಟೆ, ಚೀಲ ಇವುಗಳ ಬಗ್ಗೆ ಆಲೋಚಿಸಿದಾಗ ಬಸ್ಸಿಲ್ಲದ ಪ್ರತಿ ಶನಿವಾರ ವಿಪರೀತ ಗಾಳಿ ಮಳೆಗೆ ಬೆಳಗ್ಗೆ ಆರು ಗಂಟೆಗೆ ಹೊರಟು ಆ ಮಳೆ, ಚಳಿಯಲ್ಲಿ ಐದು ಕಿಲೋ ಮೀಟರ್ ನಡೆದುಕೊಂಡು  ಹೋಗಿ ಪೂರ್ಣ ಒದ್ದೆಯಾಗಿ ಎಂಟು ಗಂಟೆಯ ಮೊದಲ ಗಣಿತದ ಅವಧಿಯ ತರಗತಿಗೆ ಕೈ ಕಾಲು ಮರಗಟ್ಟಿ ಬರೆಯಲು ಸಾಧ್ಯವೇ ಆಗದ ಕುದುರೆಮುಖದಲ್ಲಿನ ಹೈಸ್ಕೂಲಿನ ನನ್ನ ನೆನಪು ಆಗಾಗ ಕಾಡುತ್ತಿರುತ್ತದೆ. ಬಟ್ಟೆಯೊಂದಿಗೆ ಚೀಲ, ಪುಸ್ತಕ ಎಲ್ಲವೂ ಒದ್ದೆ. ಮರುದಿನ ಹಾಕಲು ಮತ್ತೊಂದು ಬಟ್ಟೆಗೆ ಬಡತನದ ಅಡ್ಡಿ! ಮತ್ತೆ ಅದೇ ಬಟ್ಟೆಯನ್ನು ಒಗೆದು ರಾತ್ರಿಯಿಡೀ ಒಲೆಯ ಬಳಿ ಒಣಗಿಸಿ, ಬೆಳಗ್ಗೆ ಹಾಕಿಕೊಂಡು ಶಾಲೆ ಸೇರಿದರೆ ಶಿಕ್ಷಕರ ಆಕ್ರೋಶಕ್ಕೆ ಗುರಿ!ಈಗಿನಂತೆ ಡ್ರಯರ್, ಇಸ್ತ್ರಿ ಪೆಟ್ಟಿಗೆಗಳು ಆಗ ಮನೆಯಲ್ಲಿರಲಿಲ್ಲ ಅಲ್ಲವೇ?  ಅದರೊಡನೆ ಮೈಯೆಲ್ಲಾ ತುರಿಕೆ, ಪೆಟ್ಚಿನ ಮಳೆ!

ಇದಿಷ್ಟೇ ಕಷ್ಟವೇ? ಶಾಲೆಗೆ ಓದುವ ಧಾವಂತದಲ್ಲಿ ಇಷ್ಟು ಕಷ್ಟಪಟ್ಟು ಹೋದರೂ, ಸರಕಾರಿ ಶಾಲೆ ಆದ ಕಾರಣ ಸರಿಯಾಗಿ ಶಿಕ್ಷಕರು ಇರಲಿಲ್ಲ. ಪಾಠಗಳು ಅರ್ಥವಾಗದೇ, ಹೇಳಿ ಕೊಡಲು ಜನರಿಲ್ಲದೆ ಪುಸ್ತಕದೊಳಗೇ ಭದ್ರವಾಗಿ ಕುಳಿತಿದ್ದವು! ಓದಲು, ಬರೆಯಲು ಯಾವುದಕ್ಕೂ ಮನೆಯಲ್ಲಿ ಸಮಯ ಸಿಗುತ್ತಿರಲಿಲ್ಲ, ಶಾಲೆಗೆ ಹೋಗುವುದು, ಬರುವುದರಲ್ಲೇ ಸಮಯ ಕಳೆದು ಹೋಗಿ ಬಿಡುತ್ತಿತ್ತು. ಕೊಂಡು ಹೋದ ಬುತ್ತಿ ಗಂಟಿನ ಊಟ ಕರಗಿ ಹೊಟ್ಟೆ ಬೆನ್ನಿಗೆ ಅಂಟಿದಂತಿತ್ತು. ಅಂತೂ ಇಂತೂ ಈ ಕಷ್ಟದಲ್ಲೇ ಎಂಟು ಮತ್ತು ಒಂಭತ್ತನೇ ತರಗತಿಯ ಕಲಿಕೆ ಹೇಗೋ ಮುಗಿಯಿತು.

ನಾ ಮೊದಲೇ ಹೇಳಿದಂತೆ ಈಗಿನಂತೆ ಆಗಿನ ಪರಿಸ್ಥಿತಿ ಇರಲಿಲ್ಲ. ಕೃಷಿ ಕೆಲಸವನ್ನೇ ಆಧರಿಸಿಕೊಂಡಿದ್ದ ಪೋಷಕರು ಅನಕ್ಷರಸ್ಥರಾಗಿದ್ದರು ಮತ್ತು ಕೃಷಿ ಕಾರ್ಯ ಈಗಿನಷ್ಟು ಆ ದಿನಗಳಲ್ಲಿ ಲಾಭದಾಯಕವೂ ಆಗಿರಲಿಲ್ಲ, ಈಗಲೇ ಸಾಲಬಾಧೆ ತಾಳಲಾರದೆ, ಮಳೆ ಬಾರದೆ ಅಥವಾ ಹೆಚ್ಚಾಗಿ ಬೆಳೆ ಹಾನಿಯಾಗಿ ರೈತರು ಆತ್ಮಹತ್ಯೆಗೆ ಶರಣಾಗುವವರು ಇದ್ದಾರೆ. ಆಗ ವೈಜ್ಞಾನಿಕ ಸಾಧನಗಳು, ಮುಂದುವರಿದ ಕೃಷಿ ಪದ್ದತಿಗಳಿಲ್ಲದ ಸಾವಯವ ಕೃಷಿಯ ಕಾಲವಲ್ಲವೇ? ಜನರಲ್ಲಿ ಆರೋಗ್ಯ ಹಾಗೂ ನೆಮ್ಮದಿಯ ಜೊತೆ ಬಡತನವೂ ತಾಂಡವವಾಡುತ್ತಿತ್ತು. ಹಾಗಾಗಿ ಯಾವ ಹೆಣ್ಣು ಮಕ್ಕಳನ್ನೂ ದೂರದ ಊರಿಗೆ ಪ್ರೌಢ ಶಾಲಾ ವಿದ್ಯಾಭ್ಯಾಸಕ್ಕೆ ಕಳುಹಿಸಲು ಪೋಷಕರಿಗೆ ಸಾಧ್ಯವಾಗಲಿಲ್ಲ, ಹೆಣ್ಣುಮಕ್ಕಳ ಶಿಕ್ಷಣ ಆಗಿನ್ನೂ ತುಂಬಾ ಹಿಂದೆಯೇ ಉಳಿದಿತ್ತು. ಚಂದ್ರಶೇಖರ್ ಅವರು ಅಣ್ಣನೊಡನೆಯೇ ಶಾಲೆಗೆ ಸೇರಿದ ಕಾರಣವೂ, ಇಬ್ಬರಿಗೆ ವಯಸ್ಸಿನಲ್ಲಿ ಬಹಳ ಅಂತರವೂ ಇಲ್ಲದ ಕಾರಣವೂ ಅಣ್ಣನ ತರಗತಿಯಲ್ಲಿಯೇ ಓದುತ್ತಿದ್ದರು. ಅಣ್ಣ ಒಂಭತ್ತನೇ ತರಗತಿಯಲ್ಲಿ ಅನುತ್ತೀರ್ಣರಾಗಿ ಆಗಲೇ ಶಾಲೆಗೆ ಗುಡ್ ಬೈ ಹೇಳಿಬಿಟ್ಟರು. ಮುಂದೆ ಮುಂಬೈ ಪಟ್ಟಣ ಸೇರಿ ತನ್ನ ಬದುಕಿನ ದಾರಿ ಕಂಡುಕೊಂಡರು. ಹೀಗಾಗಿ ಅಣ್ಣನೊಂದಿಗೇ ಬೆಳೆದ ಚಂದ್ರಶೇಖರ್ ಅವರಿಗೆ ಶಾಲೆಯಲ್ಲಿ ಏಕಾಂಗಿತನ ಕಾಡಿತು. ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯದು. ಅಲ್ಲೇ ವಿದ್ಯಾಭ್ಯಾಸ ಮುಂದುವರೆಸಿದರೆ ಅಣ್ಣನಿಲ್ಲದೆ ಮತ್ತು ಸರಿಯಾದ ಶಿಕ್ಷಕರಿಲ್ಲದೆ ತಾನು ಕೂಡಾ ಉತ್ತೀರ್ಣನಾಗಲಾರೆ ಎಂದು ಅವರಿಗೆ ಅನ್ನಿಸತೊಡಗಿತು. ಆಗ ಸುಳ್ಯ ತಾಲೂಕಿನಲ್ಲಿ ಇದ್ದುದು ಕೇವಲ ಬೆರಳೆಣಿಕೆಯ ಪ್ರೌಢ ಶಾಲೆಗಳು ಮಾತ್ರ. ಅವರು ಆಗ ಹೆಸರುವಾಸಿಯಾಗಿದ್ದ ಖಾಸಗಿ ಶಾಲೆ ಪೆರ್ನಾಜೆಯಲ್ಲಿದ್ದ ಸೀತಾರಾಘವ ಪ್ರೌಢಶಾಲೆಗೆ ಸೇರಿ ಓದನ್ನು ಮುಂದುವರೆಸುವ ಆಲೋಚನೆ ಮಾಡಿದರು. ಉತ್ತಮ ವಿದ್ಯಾರ್ಥಿಗಳು ಎನಿಸಿಕೊಂಡಿದ್ದ , ಸಿರಿವಂತ ಕುಟುಂಬದ, ಇವರ ಊರಿನ  ಹಲವಾರು  ವಿದ್ಯಾರ್ಥಿಗಳು  ಆ ಶಾಲೆಗೆ ದಾಖಲಾಗಿ ಅಲ್ಲಿ ಓದುತ್ತಿದ್ದರು. ತುಂಬಾ ಓದಿನ ಗೀಳಿದ್ದ ಇವರನ್ನೂ ಅಲ್ಲಿ ಸೇರುವಂತೆ ಅದು ಪ್ರೇರೇಪಿಸಿತು. ಅದಕ್ಕಾಗಿ ಸುಳ್ಯದ ಜೂನಿಯರ್  ಕಾಲೇಜಿನಿಂದ ತಮ್ಮ ಅಂಕಪಟ್ಟಿ ಹಾಗೂ ವರ್ಗಾವಣೆ ಪ್ರಮಾಣ ಪತ್ರವನ್ನು ತಂದಿದ್ದರು. ಆ ವಿಷಯವನ್ನು ತಮ್ಮ ತಂದೆ ಒಪ್ಪಲಾರರು ಎಂದು ತಿಳಿದಿದ್ದ ಅವರು ತಂದೆಯವರಿಗೆ ಹೇಳದೆಯೇ ತಾವೇ ಈ ಕಾರ್ಯವನ್ನು ಮಾಡಿದ್ದರು!

ಮರುದಿನ ತಂದೆ ರಾಮಣ್ಣ ಗೌಡರಿಗೆ ಈ ವಿಷಯ ತಿಳಿಸಿದರು. ವಿಷಯ ತಿಳಿದ ಕೂಡಲೇ ಕೆಂಡ ಮಂಡಲವಾದರು ತಂದೆಯವರು!  ಸಣ್ಣ ಮಗ, ದೂರದ ಶಾಲೆಗೆ ಸೇರುವುದು ಬೇಡ ಎಂಬ ಪ್ರೀತಿಯ ಅಕ್ಕರೆಯೋ, ಖಾಸಗಿ ಶಾಲೆಗೆ ಶಾಲಾ ಶುಲ್ಕ ಭರಿಸಲು ಕಷ್ಟವಾದ ತಮ್ಮ ಕುಟುಂಬದ ಪರಿಸ್ಥಿತಿಗೋ ಏನೋ, ವರ್ಗಾವಣೆ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಯನ್ನು ತನ್ನ ಪೆಟ್ಟಿಗೆಯೊಳಗಿಟ್ಟು ಬೀಗ ಹಾಕಿಬಿಟ್ಟರು. "ನೀನಿನ್ನು ಶಾಲೆ ಕಲಿತದ್ದು ಸಾಕು.ಅಣ್ಣ ಪಟ್ಟಣ ಸೇರಿದ, ನೀನು ನನ್ನೊಂದಿಗೆ ಕೃಷಿ ಕಾರ್ಯದಲ್ಲಿ ಸಹಕರಿಸು" ಎಂದುಬಿಟ್ಟರು! ಮೂರು ದಿನಗಳ ಕಾಲ ಉಪವಾಸ ಮಾಡಿ, ಅತ್ತು ಕರೆದು ರಂಪಾಟ ಮಾಡಿದರೂ ತಂದೆಯವರು ಜಗ್ಗಲಿಲ್ಲ, ಪೆಟ್ಟಿಗೆಯೊಳಗೆ ಬೀಗ ಹಾಕಿ ಅವಿತಿಟ್ಟ ಸರ್ಟಿಫಿಕೇಟುಗಳು ಹೊರಗೆ ಬರಲೇ ಇಲ್ಲ.


ಮಕ್ಕಳೆಂದರೆ ಅಜ್ಜಿಗೆ ಮುದ್ದು. ಅದರಲ್ಲೂ ಹೇಳಿ ಕೇಳಿ ಇವರು ಕೊನೆಯ ಮಗ. ಇವರ ಹಠವನ್ನು ನೋಡಿದ ಅಜ್ಜಿ ತನ್ನ ಮಗನಿಗೆ ಬೈದು ಬುದ್ಧಿ ಹೇಳಿದ ಬಳಿಕ ಅವರ ಒತ್ತಾಯಕ್ಕೆ  ಎಲ್ಲಾ ಕಾಗದ ಪತ್ರಗಳನ್ನು ಹೊರ ತೆಗೆದು ಕೊಟ್ಟರು ರಾಮಣ್ಣ ಗೌಡರು. ಆದರೆ ಒಂದು ಚಿಕ್ಕಾಸೂ ಕೊಡಲಿಲ್ಲ. ಅಜ್ಜಿ ತನ್ನ ಸೀರೆಯ ಗಂಟಿನಲ್ಲಿ ಕಟ್ಟಿ ಇಟ್ಟಿದ್ದ ಒಂದಷ್ಟು ಪುಡಿಗಾಸನ್ನು ನೀಡಿದರು . ಅದು ಸಾಲದೆ ಪಕ್ಕದ ಮನೆಯ ಶೆಟ್ರ ಸಹಾಯದಿಂದ ಪೆರ್ನಾಜೆಯ ಸೀತಾ ರಾಘವ ಶಾಲೆಗೆ ತಾವೇ ದಾಖಲಾದರು. ಕಲಿಕೆಯ ಆಸೆ ಮನದೊಳಗೇನೋ ಇತ್ತು. ಆದರೆ ಶಾಲೆಯ ಹಾದಿ ಮಾತ್ರ ಅತ್ಯಂತ ದುರ್ಗಮವಾಗಿತ್ತು. ಮನೆಯಿಂದ ಒಂದು ಕಿಲೋ ಮೀಟರ್ ನಡೆದು ಹೋದ ಬಳಿಕ ಪಯಶ್ವಿನಿ ನದಿ ಸಿಗುತ್ತಿತ್ತು. ಅದನ್ನು ದಾಟಿ ಜಾಲ್ಸೂರಿನವರೆಗೆ ಮತ್ತೆ ಎರಡು ಕಿಲೋ ಮೀಟರ್ ನಡೆದು ಹೋಗಿ, ಅಲ್ಲಿಂದ ಬಸ್ಸು ಹತ್ತಿ ಹೋಗಿ ಶಾಲೆ ಸೇರಬೇಕಿತ್ತು. ಮಳೆಗಾಲದ ಈ ಪ್ರಯಾಣವಂತೂ ತುಂಬಾ ಭಯಾನಕವಾಗಿ ಇರುತ್ತಿತ್ತು. ಕಾರಣ ತುಂಬಿ ಹರಿಯುತ್ತಿದ್ದ ಪಯಶ್ವಿನಿ ನದಿಯನ್ನು ದಾಟಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ದಿನ ಬಸ್ಸುಗಳೇ ಇರುತ್ತಿರಲಿಲ್ಲ. ಆಗ   ಶಾಲಾ ಸಮಯಕ್ಕಷ್ಟೇ ಒಂದೋ ಎರಡೋ ಬಸ್ಸುಗಳು! ಮುಂದೆ ದಾರಿ ಕಾಣದೆ ಹೊಳೆ ಬದಿಯ ಪಂಜಿಕಲ್ಲು ಶಾಲೆಯಲ್ಲಿ ತಂಗಿ, ಅಲ್ಲೇ ಮಲಗಿ ನಿದ್ರಿಸಿದ ರಾತ್ರಿಗಳು ಅದೆಷ್ಟೋ!

ಪ್ರತಿಯೊಂದು ಕಲ್ಲು ಕೂಡಾ ಹಲವಾರು ಉಳಿಪೆಟ್ಟು ತಿನ್ನದೆ ಅಂದದ ಶಿಲ್ಪವಾಗದು. ಅಂತೆಯೇ ಮಾನವ ಜೀವನವೂ ಕೂಡಾ. ಅಂದದ ಶಿಲ್ಪ ಒಂದಷ್ಟು ಜಾಸ್ತಿಯೇ ಪೆಟ್ಟು ತಿಂದಿರುತ್ತದೆ. ಹಾಗೆಯೇ  ಸಾಧಕರ ಬದುಕೂ ಕೂಡಾ. ಅವರ ಕಷ್ಟದ ದಿನಗಳು ಅವರನ್ನು ಇನ್ನಷ್ಟು, ಮತ್ತಷ್ಟು ಗಟ್ಟಿಗೊಳಿಸಿ ಹದಮಾಡಿ ಜೀವನ ಕಟ್ಟುವ ಕಾರ್ಯಕ್ಕೆ ಗಟ್ಟಿಯಾದ ತಳಹದಿಯನ್ನು ಹಾಕಿಬಿಡುತ್ತವೆ ಅಲ್ಲವೇ? ಅದು ಚಂದ್ರಶೇಖರ್  ಪೇರಾಲ್ ಅವರ ಜೀವನಕ್ಕೂ ಅನ್ವಯಿಸುತ್ತದೆ.

ಅಂತೂ ಇಂತೂ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆ ಮುಗಿಸಿ ಉತ್ತಮ ಅಂಕಗಳ ಅಂಕಪಟ್ಟಿ ಕೈಗೆ ಬಂತು. ಮತ್ತೆ ಓದು ಮುಂದುವರೆಸುವ ಹಂಬಲ ಕಡಿಮೆಯಾಗಲಿಲ್ಲ. ಸುಳ್ಯದ ಜೂನಿಯರ್ ಕಾಲೇಜಿಗೆ ಮತ್ತೆ ಬಂದು ಪಿಯುಸಿ ಕಲಾ ವಿಭಾಗಕ್ಕೆ ದಾಖಲಾದರು.ಆಗ ಅವರ ಅನುಕೂಲಕ್ಕೆ ಮಂಡೆಕೋಲಿನಿಂದ ಹೊರಟ ಸರಕಾರಿ ಬಸ್ಸೊಂದು ಆಲೆಟ್ಟಿ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿತ್ತು. ನಡೆದು ಬರುವ ಬದಲು ಆ ಬಸ್ಸಿನಲ್ಲಿ ಸುಳ್ಯಕ್ಕೆ ಓಡಾಡುವ ಅವಕಾಶ ಸಿಕ್ಕಿತು. ಬಸ್ಸಿಗೆ ಓಡಾಡಲು ಆಗಿನ ರಸ್ತೆಗಳು ಸರಿ ಇರಲಿಲ್ಲ. ಅಲ್ಲಲ್ಲಿ ಗುಂಡಿ ಹಾಗೂ ಮಣ್ಣಿನ ರಸ್ತೆಗಳು. ಮಳೆಗಾಲಗಲ್ಲಿ ಅಲ್ಲಲ್ಲಿ ಕೆಸರು ತುಂಬಿ ಬಸ್ಸಿನ ಚಕ್ರಗಳು ಹೂತು ಹೋದಾಗ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳೇ ಅದನ್ನೆತ್ತಲು ಸಹಕರಿಸಬೇಕಿತ್ತು. ಬಸ್ಸೇನಾದರೂ ಹೂತು ನಿಂತು ಹೋಗಿಬಿಟ್ಟರೆ ಅರ್ಧದಿಂದ ಮತ್ತೆ ನಟರಾಜ ಸರ್ವಿಸ್! ನಡೆದೇ ಹೋಗಿ ಕಾಲೇಜು ಸೇರಬೇಕಿತ್ತು!

ಕಾಲೇಜಿಗೆ ಹೋಗುವಾಗ ಈಗಿನಂತೆ ಸಮವಸ್ತ್ರದ ಪದ್ಧತಿ ಆಗ ಇರಲಿಲ್ಲ, ಮನೆಯಲ್ಲಿಯೂ  ಬಡತನ. ಯಾರೋ ಸಿರಿವಂತರ ಮಕ್ಕಳಿಗೆ ಮಾತ್ರ ಉತ್ತಮ ಬಟ್ಟೆ. ಈ ಬಟ್ಟೆಯ ವಿಷಯ ಬಂದಾಗ ಅಮ್ಮನ ನೆನಪಾಗುತ್ತದೆ. ಮೂರು ನಾಲ್ಕು ಹುಡುಗಿಯರಿದ್ದ ಕುಟುಂಬದಲ್ಲಿ ಹೊತ್ತಿಗೆ ಸರಿಯಾಗಿ ತಿನ್ನಲು ಊಟ ಹಾಗೂ ತೊಡಲು ಬಟ್ಟೆ ಇರದ ಕಾರಣ ನನ್ನಮ್ಮ ಶಾಲೆಗೆ ಹೋಗಲೇ ಇಲ್ಲ , ನನ್ನಮ್ಮ ಇದನ್ನು ಆಗಾಗ ನಮ್ಮೊಡನೆ ಹೇಳಿ ಬೇಸರ ಮಾಡಿಕೊಳ್ಳುತ್ತಿದ್ದರು. "ಅಕ್ಷರ ಜ್ಞಾನ ಒಂದು ಇದ್ದಿದ್ದರೆ ನಾನು ಏನೋ ಸಾಧನೆ ಮಾಡುತ್ತಿದ್ದೆ .." ಎಂದು. ನನ್ನ ತಂಗಿ (ಈಗ ಕಾರ್ಕಳ ನಗರ ಠಾಣೆಯಲ್ಲಿ ಅರಕ್ಷಕರ ಹುದ್ದೆಯಲ್ಲಿ ಇರುವ ಜಿಲ್ಲೆಗೆ ಮೊದಲ ರ್ಯಾಂಕ್ ಪಡೆದು ಕೆಲಸ ಪಡೆದ ಅವಳ ಬಗ್ಗೆ ನನಗೆ ಹೆಮ್ಮೆಯಿದೆ) ಅವರಿಗೆ ಸರಿಯಾಗಿ ತಮ್ಮ ಹೆಸರು ಬರೆಯಲು ಕಲಿಸಿದಳು. ಕಾರಣ ನಮ್ಮ ಶಾಲಾ ಅಂಕಪಟ್ಟಿಯಲ್ಲಿ ಅವರ ಸಹಿ ನೋಡಲು ನಾವು ಇಚ್ಚಿಸುತ್ತಿದ್ದೆವು, ಹೆಬ್ಬೆಟ್ಟನ್ನಲ್ಲ. ಕನ್ನಡ ಅಕ್ಷರಗಳನ್ನೂ ಹೇಳಿಕೊಟ್ಟಳು. ಆದರೆ ನಾವು ಮೂರು ಜನ ಮಕ್ಕಳನ್ನು ಓದಿಸುವ ಗುರುತರ ಜವಾಬ್ದಾರಿ ಅವರ ಮೇಲಿದ್ದ ಕಾರಣ ನನ್ನನ್ನು ಅಜ್ಜಿ ಮನೆಯಲ್ಲಿ ಬಿಟ್ಟು, ತನ್ನ ಹೆಗಲಿನಲ್ಲಿ ಜವಾಬ್ದಾರಿ ಹೊತ್ತು, ಕೂಲಿ ಕೆಲಸ, ರಾತ್ರಿ ಮನೆಗೆ ಬಂದು ಮನೆ ಕೆಲಸದ ಬಳಿಕ ಬೀಡಿ ಕಟ್ಟುವ ಕಾರ್ಯದಲ್ಲಿ ತಲ್ಲೀನರಾಗಿ ಮಗಳು ಕಲಿಸಿದ ಕನ್ನಡ ಅಕ್ಷರಗಳನ್ನು ಮತ್ತೆ ತಿದ್ದಿ , ಓದಿ ಬರೆದು ಕಲಿಯಲು ಅದೆಲ್ಲಿ ಸಮಯ, ದಣಿದ ಜೀವಕ್ಕೆ  ತಾಳ್ಮೆ ಹೇಗೆ ಬಂದೀತು, ನಿದ್ದೆ ಬಾರದೇ?

ನನ್ನ  ಅಜ್ಜಿಯೂ ಇದ್ದ ಒಂದೇ ಸೀರೆಯನ್ನು ಹರಿದು ಎರಡು ಮಾಡಿ ದೇಹ ಮುಚ್ಚುವಷ್ಟೇ ಸುತ್ತಿಕೊಂಡು,ಒಂದನ್ನು ಒಗೆದಾಗ ಮತ್ತೊಂದು ತುಂಡನ್ನು ಧರಿಸುತ್ತಿದ್ದರಂತೆ!  ಕ್ಷಮಿಸಿ,ಬಟ್ಟೆಯ ವಿಷಯ ಬಂದಾಗ ಹಿರಿಯರ ಮಾತು ನೆನಪಾಗಿ, ಆಗಿನ ಕಷ್ಟದ ಪರಿಸ್ಥಿತಿ ಕೇಳಿ ಅರಿತು ಗದ್ಗದಿತವಾಗಿ ವಿಷಯಾಂತರವಾಯಿತು. ಈ ಬಡತನ ಚಂದ್ರ ಶೇಖರ ಪೇರಾಲ್ ಅವರನ್ನೂ ಕಾಡಿತ್ತು. ಸಿರಿವಂತ ಮಕ್ಕಳು ಪ್ಯಾಂಟ್ ಧರಿಸಿ ಕಾಲೇಜಿಗೆ ಬಂದು ವಿದ್ಯೆ ಕಲಿತರೆ , ಅವರು ಪಂಚೆಯಲ್ಲೇ ಎರಡು ವರ್ಷಗಳ ಕಾಲೇಜು ಶಿಕ್ಷಣವನ್ನು ಪೂರೈಸಿದರು.

ಕಲಿಕೆಗೆ ನಿಷ್ಠನಾದವನನ್ನು ಕಲಿಕೆ ಎಂದಿಗೂ ಬಿಡದು. ಹಾಗೆಯೇ ಕಲಿಕೆ ಚಂದ್ರಶೇಖರ್ ಪೇರಾಲ್ ಅವರಿಗೆ ಕೈ ಕೊಡಲಿಲ್ಲ. ಮುಂದೆ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಪದವಿ ಹಾಗೂ ಆಂಗ್ಲ ಭಾಷೆಯಲ್ಲಿ ಎಂ.ಎ. ಶಿಕ್ಷಣವನ್ನು ಪೂರೈಸಿದರು. ಅಣ್ಣಾಮಲೈ ವಿಶ್ವವಿದ್ಯಾಲಯದಿಂದ
ಬಿ.ಎಡ್ ಪದವಿ ಪಡೆದರು.

ಬಳಿಕ ತಮ್ಮ ಜೀವನದ ವೃತ್ತಿ ಜೀವನವನ್ನು ಪ್ರಾರಂಭಿಸಿದ ಪೇರಾಲ್ ಅವರು ಸೈಂಟ್ ಜಾರ್ಜ್ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಸೇರಿಕೊಂಡರು. ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಆಗ ನೆಲ್ಯಾಡಿ ಜೆಸೀ ಅಧ್ಯಕ್ಷರಾಗಿ, ಜೆಸೀಯಲ್ಲಿ ರಾಜ್ಯ ಮಟ್ಟದ ತರಬೇತುದಾರರಾಗಿ ಸುಮಾರು ನಾಲ್ಕು ನೂರಕ್ಕೂ ಹೆಚ್ಚಿನ ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ನೀಡಿರುವ ಹೆಗ್ಗಳಿಕೆ ಇವರದ್ದಾಗಿದೆ. 1993ರಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಚಾಲಕರಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 93 ಶಾಲೆಗಳಲ್ಲಿ  "ಚಿಣ್ಣರ ಮೇಳ"ವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

1999ರಲ್ಲಿ ಕೆ.ಇ.ಎಸ್. ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿ ಸರಕಾರಿ ಶಿಕ್ಷಕ ವೃತ್ತಿಯ ಸೇವೆಗೆ ನೇಮಕಗೊಂಡರು. ಉತ್ತಮ ಕರ್ತವ್ಯ ನಿರ್ವಹಣೆಯೊಂದಿಗೆ ಶಾಲಾ ಭೌತಿಕ ಸೌಲಭ್ಯಗಳನ್ನು ಹೆಚ್ಚಿಸಲು ಶ್ರಮವಹಿಸಿ ದುಡಿದರು.

ತದನಂತರ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರ ಸುಳ್ಯ ಇಲ್ಲಿ ತಮ್ಮ ಕಾರ್ಯ ದಕ್ಷತೆಯನ್ನು ಮೆರೆಯಲು ಅವಕಾಶ ಸಿಕ್ಕಿತು. ಸರಕಾರದ ಎಲ್ಲಾ ಶೈಕ್ಷಣಿಕ ಯೋಜನೆಗಳಾದ ಶಿಕ್ಷಕರ ತರಬೇತಿ, ವಿಚಾರ ಸಂಕಿರಣ, ಬೀದಿ ನಾಟಕ, ಚಿಣ್ಣರ ಜಿಲ್ಲಾ ದರ್ಶನ ಪ್ರವಾಸ, ಶಾಲೆಗಳಿಗೆ ಭೌತಿಕ ಸೌಲಭ್ಯಗಳ ಒದಗಿಸುವಿಕೆ ಇವೆಲ್ಲ ಕಾರ್ಯಗಳಿಂದ ವಿಭಾಗೀಯ ಮಟ್ಟದ "ಉತ್ತಮ ಸಮನ್ವಯಾಧಿಕಾರಿ" ಎಂದು ಗುರುತಿಸಲ್ಪಟ್ಟ ಇವರು ಆ ಪ್ರಶಸ್ತಿಗೆ ಭಾಜನರಾದರು. ಶಿಕ್ಷಕ ಸ್ನೇಹಿ ಅಧಿಕಾರಿ ಎಂದು
ಗುರುತಿಸಲ್ಪಟ್ಟ ಇವರು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ, ಸಮಾಜ ಕಲ್ಯಾಣ ಅಧಿಕಾರಿಗಳಾಗಿ, ಅಕ್ಷರ ದಾಸೋಹದ  ಸಹಾಯಕ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿ ಪಾಠಗಳಲ್ಲಿಯೂ, ಆಡಳಿತ ಮಟ್ಟದಲ್ಲಿಯೂ ತಾನೇನು ಕಮ್ಮಿ ಇಲ್ಲದೆ ದುಡಿದು ಸೈ ಎನಿಸಿಕೊಂಡವರು. ಇವರು ಕಾರ್ಯ ನಿರ್ವಹಿಸಿದ ಕಛೇರಿಗಳಲ್ಲಿ  ವರ್ಲಿ ಅಲಂಕಾರ, ಪೈಂಟಿಂಗ್, ಉದ್ಯಾನ, ಭಾವಚಿತ್ರ ಸಹಿತ ಸೌಂದರೀಕರಣಗೊಳಿಸಿ ಅಂದಕ್ಕೂ ಆದ್ಯತೆ ನೀಡಿರುವ ಅಧಿಕಾರಿ ಇವರು.

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಹಾಗೂ ಗೌರವ ಕಾರ್ಯದರ್ಶಿಗಳಾಗಿ ತಾಲೂಕು ಮಟ್ಟದ ಆರು ಕನ್ನಡ ಸಾಹಿತ್ಯ ಸಮ್ಮೇಳನಗಳೇ ಅಲ್ಲದೆ ತುಳು ಸಾಹಿತ್ಯ ಸಮ್ಮೇಳನ, ಅರೆಭಾಷೆ ಸಾಹಿತ್ಯ ಸಮ್ಮೇಳನ, ಕೆವಿಜಿ ಸುಳ್ಯ ಹಬ್ಬ ಕಾರ್ಯಕ್ರಮಗಳನ್ನೂ ಸುಳ್ಯದಲ್ಲಿ ಸಂಘಟಿಸಿ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಜವಾಬ್ದಾರಿ ಹೊತ್ತ ಇವರ ಸಾಧನೆ ಅದ್ಭುತವಾದುದು. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಗುತ್ತಿಗಾರು, ದುಗ್ಗಲಡ್ಕ, ಮಂಡೆಕೋಲು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನ ಸುಬ್ರಹ್ಮಣ್ಯದಲ್ಲಿ ನಡೆದಾಗ ಅಲ್ಲಿನ ವಿಚಾರಗೋಷ್ಠಿಗಳಲ್ಲಿ ಪ್ರಬಂಧಗಳನ್ನು ಕೂಡಾ ಮಂಡಿಸಿ ಜೈ ಎನಿಸಿಕೊಂಡವರು ಇವರು.

ಶ್ರೀಯುತ ಚಂದ್ರಶೇಖರ ಪೇರಾಲ್ ಅವರು ಬರೆದಿರುವ "ಅರಿವು" ಮತ್ತು  " ಮುದ್ದು ಮಗು ನಿನ್ನ ನಗು" ಎಂಬ ಎರಡು ಪುಸ್ತಕಗಳೂ ಪ್ರಕಟಗೊಂಡು ಸಾರಸ್ವತ ಲೋಕಕ್ಕೆ ಅರ್ಪಣೆಯಾಗಿವೆ. ಮೂರು ಪುಸ್ತಕಗಳನ್ನು ಪ್ರಕಾಶಕರಾಗಿ ಹೊರ ತಂದಿರುವುದಲ್ಲದೆ, ನಾಲ್ಕು ಸ್ಮರಣ ಸಂಚಿಕೆಗಳ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಾಹಿತ್ಯಾಸಕ್ತ ಶಿಕ್ಷಕರ ಬಳಗವನ್ನು "ಸುವಿಚಾರ ಸಾಹಿತ್ಯ ವೇದಿಕೆ" ಎಂಬ ಹೆಸರಿನಲ್ಲಿ ಒಂದಾಗಿಸಿ, ಅದರ ಅಧ್ಯಕ್ಷರಾಗಿ ಕಳೆದ ಆರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹತ್ತಾರು ಬೇಸಿಗೆ ಶಿಬಿರಗಳು, ಪ್ರತಿ ವರ್ಷ ಏಳು ದಿನಗಳ ಸಾಪ್ತಾಹಿಕ ಸಾಹಿತ್ಯಿಕ ಹಬ್ಬ, ಕನ್ನಡ ರಾಜ್ಯೋತ್ಸವವನ್ನು ಸಾಹಿತ್ಯ ಸಂಭ್ರಮದ ಮೂಲಕ ಆಚರಣೆ, ಪುಸ್ತಕ ಬಿಡುಗಡೆ, ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ನಡೆಸುತ್ತಾ ಇದುವರೆಗೆ ಐದಾರು ಸಾವಿರ ವಿದ್ಯಾರ್ಥಿಗಳಿಗೆ ಹಾಗೂ ಉದಯೋನ್ಮುಖ ಶಿಕ್ಷಕರಿಗೂ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಒದಗಿಸಿ ಕೊಟ್ಟಿದ್ದಾರೆ.

ಅವಿಭಜಿತ ಸುಳ್ಯ ತಾಲೂಕಿನಲ್ಲಿ ಮೊತ್ತ ಮೊದಲ ಬಾರಿಗೆ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿದ ಕೀರ್ತಿ ಇವರದ್ದು. ವಿವಿಧ ಸಾಹಿತ್ಯ ಪ್ರಕಾರಗಳನ್ನು ಮಕ್ಕಳಿಗೆ ಕಲಿಸಲು ಪುರಾಣ, ಗಮಕ, ಜನಪದ,  ಯಕ್ಷಗಾನ, ಮಹಿಳಾ, ಅರೆಭಾಷೆ, ತುಳು ಹಾಗೂ ಚಿತ್ರಕಲಾ ಸಂಭ್ರಮ ಕಾರ್ಯಕ್ರಮಗಳನ್ನು ನಡೆಸಿ, ಹಲವು ಪ್ರತಿಭೆಗಳನ್ನು ಬೆಳಕಿಗೆ ತಂದವರು ಇವರು.

ದಾನಿಗಳ ದಾನಿಗಳ ಸಹಕಾರದಿಂದ ಸತತವಾಗಿ ಆರು ವರ್ಷಗಳ ಕಾಲ ಸುಳ್ಯ ತಾಲೂಕಿನಾದ್ಯಂತ "ಶಾಲಾ ಹಸ್ತಪ್ರತಿ" ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳ ಸಾಹಿತ್ಯ ಕೃಷಿ ಹಾಗೂ ಕಲೆಗೆ ಪ್ರೋತ್ಸಾಹ ನೀಡಿರುವುದೇ ಅಲ್ಲದೇ, ರಾಜ್ಯದಲ್ಲಿಯೇ ವಿನೂತನ ರೀತಿಯ "ಅಕ್ಷರ ಕೈತೋಟ" ಸ್ಪರ್ಧೆಗಳನ್ನು ನಡೆಸಿ, ಸಮಾಜದ ಮೆಚ್ಚುಗೆ ಗಳಿಸಿದವರು ಇವರು.  ರೋಟರಿ ಕ್ಲಬ್ ಸದಸ್ಯರಾಗಿ ಅದರೊಂದಿಗೆ ಸಮಾಜದ ಬೇಡಿಕೆ ಅರಿತು, ಸುಮಾರು ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕರಿಹಲಗೆ, ಪೀಠೋಪಕರಣಗಳನ್ನು ಒದಗಿಸಿ ಕೊಟ್ಟಿರುತ್ತಾರೆ.

ಇದರ ಜೊತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಕ್ಷೇತ್ರದ ಸ್ವಚ್ಛತೆ, ಭಕ್ತಾದಿಗಳಿಗೆ ತ್ವರಿತ ಹಾಗೂ ಪಾರದರ್ಶಕ ಸೇವೆ ನೀಡುವಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಾನು ಮುಖ್ಯ ಶಿಕ್ಷಕರಾಗಿದ್ದ ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ ಕೇವಲ ಐದು ತಿಂಗಳಿನಲ್ಲಿ ಇಡೀ ಶಾಲೆಗೆ ಸುಣ್ಣ ಬಣ್ಣದೊಂದಿಗೆ, ವರ್ಲಿ ಅಲಂಕಾರ, ವಿವಿಧ ರಾಜ್ಯಗಳ ಸಾಂಪ್ರದಾಯಿಕ ಚಿತ್ರಗಳ ರಚನೆ, ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ, ಸಾಧನಾ ಶೃಂಗ ಕಾರ್ಯಕ್ರಮ, ಶಾಲಾ ವಾರ್ಷಿಕೋತ್ಸವ, ಶೈಕ್ಷಣಿಕ ಪ್ರವಾಸ, ಚಾರಣ, ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಶಾಲಾ ಕೈತೋಟ ರಚನೆ, ಅಟಲ್ ಟಿಂಕರಿಂಗ್ ಲ್ಯಾಬ್, ಸ್ಟೂಡೆಂಟ್ ಪೊಲೀಸ್ ಕ್ಯಾಡೆಟ್, ಆಟಿ ಉತ್ಸವ, ಹಣ್ಣಿನ ಗಿಡ ನೆಡುವುದು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಶಾಲಾ ಶಿಕ್ಷಕರು, ಎಸ್. ಡಿ.ಎಂ.ಸಿ. ಪೋಷಕರು ಹಾಗೂ ವಿದ್ಯಾರ್ಥಿಗಳ ಸಹಕಾರಗಳೊಂದಿಗೆ ಆಯೋಜಿಸಿ, ಇದೀಗ ಈ ಶಾಲೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ.

ಶಿಕ್ಷಕಿಯಾಗಿರುವ ಶ್ರೀಮತಿ ಉಷಾ ಪೇರಾಲ್ ಇವರ ಧರ್ಮಪತ್ನಿ. ಒಂದು ಗಂಡು ಹಾಗೂ ಒಬ್ಬ ಹೆಣ್ಣು ,ಮಾನಸ, ಗೌತಮ್  ಇಬ್ಬರು ಮಕ್ಕಳ ಜೊತೆಗಿನ ಸುಂದರ ಸಂಸಾರ ಇವರದು. ಮಗಳು ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿರುವರು ಮತ್ತು ಮಗ ಪಿಯುಸಿ ಕಲಿಯುತ್ತ ಮುಂದೆ ಅವರ ಜೀವನವೂ ಉತ್ತಮವಾಗಿ ಸಾಗಲಿ ಎಂಬ ಶುಭ ಹಾರೈಕೆಗಳು.

ಶ್ರೀಯುತ ಚಂದ್ರಶೇಖರ ಪೇರಾಲ್  ಸರ್ ಅವರ ಈ ಸಾಮಾಜಿಕ ಉದ್ಧಾರದ ಕಾರ್ಯಗಳು ಹೀಗೇ ಮುಂದುವರಿಯಲಿ, ದೇವರು ಅವರ ನಿವೃತ್ತ ಜೀವನವನ್ನು ಚೆನ್ನಾಗಿ ಇಟ್ಟಿರಲಿ, ಹೊಸ ಬದುಕು ಹೊಸ ಸಂತಸವನ್ನು ಕೊಡಲಿ, ಇವರ ಕಲಿಕೆ ಹಾಗೂ ಅನುಭವಗಳು ಸಮಾಜಕ್ಕೆ ಇನ್ನಷ್ಟು ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ನೀಡುವಂತಾಗಲಿ ಎನ್ನುವ ಶುಭ ಹಾರೈಕೆಗಳೊಂದಿಗೆ,
ಸರ್, ನೀವು ನಮಗೆಲ್ಲ ಹಿರಿಯರು, ಗುರುಗಳೂ ಆಗಿರುವಿರಿ. ನೀವು ಸರಕಾರಿ ನೌಕರಿಯಿಂದ ಮಾತ್ರ ನಿವೃತ್ತಿ ಹೊಂದುತ್ತಿರುವಿರಿ, ಶಿಕ್ಷಕರೆಂದಿಗೂ ಶಿಕ್ಷಕರೇ. ನಿಮ್ಮ ವೃತ್ತಿ ಜೀವನದ ಅನುಭವಗಳು, ಜ್ಞಾನ ಸದಾ ಎಲ್ಲರಿಗೂ ದಾರಿ ದೀಪವಾಗಿ ಬೆಳಗಲಿ ಎಂದು ಎಲ್ಲಾ ಶಿಕ್ಷಕ ವೃಂದದ ಪರವಾಗಿ ಆಶಿಸುತ್ತಾ, ಶುಭ ಕೋರುತ್ತಾ,
@ಪ್ರೇಮ್@
01.12.2021




ಸೋಮವಾರ, ನವೆಂಬರ್ 29, 2021

ಬಾಳ ಕವನ

ಬಾಳ ಕವನ

ನಾವಿಷ್ಟ ಪಡೋರು ನಮ್ಗೆ ಸಿಗಲ್ಲ
ನಮ್ಮನ್ನು ಇಷ್ಟ ಪಡೋರಲ್ಲಿ ನಮ್ಗೆ ಪ್ರೀತಿ ಹುಟ್ಟೊಲ್ಲ
ಪ್ರೀತಿಸೋರು ಕೈಗೆ ಸಿಗಲ್ಲ
ಜೊತೇಲಿ ಇರೋರು ಪ್ರೀತಿ ಕೊಡಲ್ಲ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ಹತ್ತಿರ ಹೋದ ಮೇಲೆ ಎಲ್ಲವೂ ಕಷ್ಟವೇ!

ಬದುಕು ನಾಲ್ಕು ದಿನ
ಹೊಂದಾಣಿಕೆ ಮೂರು ದಿನ
ಅಡಿಗರೆಂದಂತೆ ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ
ಬದುಕ ದಿನವೆಲ್ಲಾ ಹೋರಾಟ ಕದನ
ನ್ಯಾಯಕ್ಕಾಗಿ ಸದಾ ಹಂಬಲ
ಸಿಗದಾಗ ಕಣ್ಣೀರ ಜಾಲ

ಹುಡುಕೋದು ಹೇಗೋ ನೆಮ್ಮದಿಯ ದಾರಿ
ಹುಡುಕಲು ಹೋದರೆ ತಪ್ಪುವೆವು ದಾರಿ!
ಸರಿಯಾಗದು ಸಾಗಲು ಅಡ್ಡ ದಾರಿ
ಸಿಗದು ಸಂತಸ ಹಿಡಿದರೆ ನೇರ ದಾರಿ!

ಬದುಕು ಇಷ್ಟೇ ದುಃಖ ಕಷ್ಟಗಳ ಸರಮಾಲೆ
ಅಲ್ಲಿ ಒಂದು ಹನಿ ಸಿಹಿ ಜೇನಿನ ಆಸೆ
ಅದೂ ಸಿಗದೆ ಸಾವನ್ನೂ ಲೆಕ್ಕಿಸದೆ
ಮತ್ತೊಂದು ಹನಿಗೆ ಮಾನವನ ದುರಾಸೆ!

ಬಾಳು ಸಾಗಬೇಕು ದೇವನ ಇಚ್ಛೆಯ ಹಾಗೆ
ಸೇರಿಸುವುದು ,ಅಗಲಿಸುವುದು !ಅವನ ಆಲೋಚನೆಯೇ ಹೀಗೆ
ತೃಣವೂ ಚಲಿಸದು ಅವನಾಜ್ಞೆ ಇಲ್ಲದೆ!
ಮಾಡಿದ ಪ್ರತಿ ಕರ್ಮಕ್ಕೆ ಫಲವೂ ಇಲ್ಲಿದೆ!

ಬೇಡವೆಂದರೆ ಬರುವುದು ಬೇಕೆಂದರೆ ಸಿಗದು
ನಾವು ಅಂದುಕೊಳ್ಳುವುದು ಒಂದು
ಅಲ್ಲಿ ಆಗುವುದು ಮತ್ತೊಂದು
ಬಾ ಎಂದರೆ ಹೋಗುವುದು ಬೇಡವೆಂದರೆ ಬಂದು ನಿಲ್ಲುವುದು
ಬೇಕು ಬೇಡಗಳ ನಡುವೆ ಜೀವನ ಸವೆಯುವುದು!

ದಾರಿಯುದ್ದಕ್ಕೂ ಕಲ್ಲು ಮುಳ್ಳುಗಳ ಕಾಟ
ನಡು ನಡುವೆ ರುಚಿಕರ ಸಿಹಿಯೂಟ
ನನ್ನದು ನಿನ್ನದೆನ್ನುವ ಸ್ವಾರ್ಥದ ಪಾಠ
ಇಬ್ಬರ ಜಗಳದಲಿ ಮೂರನೆಯವನ ನೋಟ!

ದೇವನ ಎಣಿಕೆಯೆ ಬೇರೊಂದು ರೀತಿ
ಕೊನೆಗೆ ಬಯಸುವುದು ನಾವೆಲ್ಲ ಶಾಂತಿ
ಸಿಗಲಿ ಸರ್ವರ ಆತ್ಮಗಳಿಗೂ ಸದ್ಗತಿ
ಹಬ್ಬಲಿ ಎಲ್ಲಾ ಕಡೆ ಸರ್ವರ ಕೀರ್ತಿ!
@ಪ್ರೇಮ್@
30.11.2021

ಯಶೋಗಾಥೆ - ಮರಿಯಾ ಪ್ರಮೀಳಾ ಡಿಸೋಜ










ಯಶೋಗಾಥೆ-1   ಡಾ. ಮರಿಯಾ ಪ್ರಮೀಳಾ ಡಿಸೋಜಾ




ಇದೊಂದು ಕಥೆಯಲ್ಲ, ಜೀವನ. ಬದುಕಲ್ಲಿ ಯಾರು ಏನು ಬೇಕಾದರೂ ಸಾಧಿಸಹುದು, ಸಾಧನೆಗೆ ಏನೂ ಅಡ್ಡಿ ಬರಲಾರದು ಎನ್ನುವ ಮಾತಿಗೆ ನೈಜ ಉದಾಹರಣೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಛಲ ಹಾಗೂ ಹಠ ಒಂದಿದ್ದರೆ ಸಾಕು, ಯಾರು ಏನು ಬೇಕಾದರೂ ಸಾಧಿಸಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ ನನ್ನ ಗೆಳತಿಯ ಸಾಹಸಗಾಥೆ.

        ಆಕೆಯ ಹೆಸರು ಮರಿಯಾ  ಪ್ರಮೀಳಾ ಅಂತ. ಹುಟ್ಟಿದ್ದು ನಮ್ಮ ನಿಮ್ಮ ಹಾಗೆ ಸಾಧಾರಣ ಕುಟುಂಬದಲ್ಲಿ. ಓದಿದ್ದೂ ಕನ್ನಡ ಮಾಧ್ಯಮ ಶಾಲೆಯಲ್ಲೇ. ಹಳ್ಳಿಯ ಶಾಲೆಯಲ್ಲೇ ಕಲಿತ ಮರಿಯಾ ಇಂದು ಡಾಕ್ಟರ್ ಮರಿಯಾ ಪ್ರಮೀಳಾ ಡಿಸೋಜ. ಡಾಕ್ಟರೇಟ್ ಪಡೆದು ತನ್ನಿಂದ ಒಂದು ಮಿಲಿಯ ಜನರಿಗೆ ಯಾವುದೇ ಹಣವಿಲ್ಲದೆ ತನ್ನ ಜ್ಞಾನ ಹಬ್ಬಿಸಬೇಕು ಎಂದು ಹೊರಟ ಛಲಗಾತಿ, ಗಟ್ಟಿಗಿತ್ತಿ.

        ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಎಂಬ ಸ್ಥಳದ ಬಗ್ಗೆ ಗೊತ್ತಿಲ್ಲದವರು ಯಾರೂ ಇಲ್ಲ ಎಂಬುದು ನನ್ನ ಅನಿಸಿಕೆ. ಅಲ್ಲಿ  ಹುಟ್ಟಿ ಬೆಳೆದವರು ಪ್ರಮೀಳಾ. ತಂದೆ ಮಾರ್ಷಲ್ ಡಿಸೋಜ, ತಾಯಿ ಫ್ಲೋರಿನ್ ಡಿಸೋಜರವರ ಮೂವರು ಮಕ್ಕಳಲ್ಲಿ ಎರಡನೆಯವರಾಗಿ ಬೆಳೆದವರು. ಮೊದಲು ತಂದೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ತಂದೆಯ ದುಡಿತ ಮನೆಯಲ್ಲಿನ ಖರ್ಚಿಗೆ ಹಾಗೂ ಮಕ್ಕಳ ಓದಿಗೆ ಸಾಲದ ಕಾರಣ ಪೊಲಿಯೋ ಪೀಡಿತರಾದ ತಾಯಿಗೂ ದುಡಿಯದೆ ಬೇರೆ ವಿಧಿ ಇರಲಿಲ್ಲ. ಅಲ್ಲದೆ ಆಗ ಈಗಿನಂತೆ ಕೂಲಿ ಕೆಲಸ ಎಲ್ಲಾ ದಿನಗಳಲ್ಲೂ ಇರುತ್ತಿರಲಿಲ್ಲ ಅಲ್ಲವೇ?

       ತಾಯಿ ಫ್ಲೋರಿನ್ ಅವರೂ ಕೆಲಸಕ್ಕೆ ಸೇರಲೇಬೇಕಾದ ಅನಿವಾರ್ಯತೆ ಬಂದಾಗ ಅಲ್ಲೇ ಪಕ್ಕದ ಅಂಗನವಾಡಿಯಲ್ಲಿ ಕೇವಲ ಏಳುನೂರು ರೂಪಾಯಿಗಳ ಸಂಬಳಕ್ಕೆ ಅಂಗನವಾಡಿ ಕಾರ್ಯಕರ್ತೆಯಾಗಿ ಸೇರಿಕೊಂಡು ಸಂಸಾರ ನಡೆಸಲು ನೆರವಾದರು. ಅಲ್ಲೇ ಇದ್ದ ಕಾನ್ವೆಂಟ್ ಶಾಲೆಯೊಂದಕ್ಕೆ ಸೇರಿದ್ದ ಪ್ರಮೀಳಾ ಅವರಿಗೆ ಶಾಲೆಯ ಫೀಸ್ ಕಟ್ಟಲು ಹಣದ ಕೊರತೆ ಇದ್ದಾಗ ಅವರ ಕಷ್ಟ ಅರಿತ ಕಾನ್ವೆಂಟ್ ನಲ್ಲಿದ್ದ  ಡಾ. ಸಿಸ್ಟರ್ ಲಿಯಾನ್ ಅವರು ಕಲಿಕೆಯಲ್ಲಿ ಮುಂದಿದ್ದ ಪ್ರಮೀಳಾ ಅವರ ಮೂರು ವರುಷಗಳ ಫೀಸ್ ಅನ್ನು ಸ್ವತಃ ತಾವೇ ಕಟ್ಟಿ ಬಿಟ್ಟರು!

      ಕಲಿಕೆಯಲ್ಲಿ ಎಂದೂ ಹಿಂದೆ ನೋಡಿದವರೇ ಅಲ್ಲ ಪ್ರಮೀಳಾ ಎಂಬ ಸಾಧಕಿ! ಎಲ್ಲರಿಗೂ ಕಬ್ಬಿಣದ ಕಡಲೆ  ಆಗಿರುವ ಗಣಿತ ಅವರ ನೆಚ್ಚಿನ ವಿಷಯ. ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಹತ್ತನೇ ತರಗತಿಯಲ್ಲಿ ಗಣಿತದಲ್ಲಿ ತೊಂಭತ್ತೆರಡು ಅಂಕಗಳನ್ನು ಗಳಿಸಿ ಶಾಲೆಯಲ್ಲೇ ಅತಿ ಹೆಚ್ಚು ಅಂಕ ಗಳಿಸಿದ ಕೀರ್ತಿಯನ್ನು ಪಡೆದರು. ಹಲವು ಮಕ್ಕಳಿಗೆ ಮಾದರಿಯೂ ಆದರು.


       ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಮೀಳಾಗೆ ತುಂಬಾ ಸಂತಸವಾದರೆ ಆ ಸಂತಸವನ್ನು ಹಂಚಿಕೊಳ್ಳುವ ಬದಲು ದುಃಖದ ಪರಿಸ್ಥಿತಿ ಎದುರಾಗಿತ್ತು. ಮುಂದೆ ಓದಲೇ ಬೇಕೆಂಬ ಆಸೆ ಅವರದಾಗಿದ್ದರೂ ಮನೆಯ ಕಷ್ಟದ ಕಾರಣ ಅವರ ಅಮ್ಮ ಅವರ ಮುಂಬೈಯಲ್ಲಿರುವ ಅಣ್ಣನ ಬಳಿ ಮಾತನಾಡಿ ಅಲ್ಲೇ ಮನೆ ಕೆಲಸಕ್ಕೆ ತನ್ನ ಮಗಳನ್ನು ಸೇರಿಸುವ ಯೋಜನೆಯಲ್ಲಿ ಇದ್ದರು. ಕಾರಣ
ತಮ್ಮ ಕುಟುಂಬದ ಕಷ್ಟ ಸ್ವಲ್ಪ ಕಡಿಮೆ ಆಗಬಹುದೇನೋ ಎಂಬ ಮತ್ತು ಮುಂದೆ ಓದಿಸಲು ಹಣಕಾಸಿನ ಸಮಸ್ಯೆ ಇನ್ನೊಂದೆಡೆ! ದೃತಿಗೆಡಲಿಲ್ಲ ಬಾಲೆ! ಅದನ್ನು ಮೊದಲೇ ಯೋಚಿಸಿತ್ತು ಪ್ರೌಢ ಮನ! ಅಮ್ಮನಿಗೆ ಧೈರ್ಯ ಹೇಳಿ ತಾನು ದುಡಿದು ತನ್ನ ಶಾಲಾ ಹಣ ಹೊಂದಿಸುವ ಕಾರ್ಯ ಪ್ರಾರಂಭವಾಯಿತು.


       ಅಂದಿನಿಂದ ಪ್ರತಿ ಗಿಡದಿಂದ ಅಬ್ಬಲಿಗೆ ಅಥವಾ ಕನಕಾಂಬರ ಹೂವುಗಳನ್ನೆಲ್ಲ ಕಿತ್ತು ಅದನ್ನು ಕಟ್ಟಿ ಮಾಲೆ ಮಾಡಿ ಮಾರುವ ಕಾರ್ಯ ಪ್ರವೃತ್ತರಾದರು. ಮಾಲೆಯನ್ನು ಕಟ್ಟಿ ರಸ್ತೆ ಬದಿಯಲ್ಲಿ ನಿಂತು, ಹೋಗುವ ಎಲ್ಲ ವಾಹನಗಳ ಬಳಿ ಕೇಳಿ ಅವರಿಗೆ ತನ್ನದೇ ಬೆಲೆಯಲ್ಲಿ ಮಾರುವ ಕಾಯಕ. ಹಾಗೆಯೇ ಪಕ್ಕದ ಅಂಗಡಿಗೂ ಹೂ ಕಟ್ಟಿ ಮಾರುವ ಕೆಲಸ. ಶಾಲೆಗೆ ಹೋಗುವಾಗಲೂ ಈ ಕಾರ್ಯ ನಡೆದೇ ಇತ್ತು. ಶಾಲೆಯಿಂದ ಬಂದು ಹೂವಿನ ಗಿಡಗಳಿಗೆ ನೀರು ಹಾಕಿ ಬೆಳೆಸುವುದು, ರಾತ್ರಿ ಓದುವುದು, ಬೆಳಿಗ್ಗೆ ಹೂವು ಕೊಯ್ದು ಕಟ್ಟಿ ಮಾರುವುದು! ಮತ್ತೆ ಕಾಲೇಜಿಗೆ ಹೋಗಿ ತನ್ನ ವಿದ್ಯೆಯನ್ನು ಮುಂದುವರೆಸುವುದು! ಹೀಗಿತ್ತು ಬದುಕು!

       ಅದರ ನಂತರ ಆ ದುಡ್ಡಿನಿಂದ ಪಿಯುಸಿಗೆ ಸೇರಿದ್ದಾಯ್ತು. ಅಲ್ಲಿ ಇರುವಾಗ  ರೋಟರಿ, ಬಂಟ್ಸ್ ಸಂಘ ಮೊದಲಾದ ಹಲವಾರು ಸಂಘ ಸಂಸ್ಥೆಗಳ  ಬಗ್ಗೆ ದಿನ ಪತ್ರಿಕೆಗಳಲ್ಲಿ ಓದಿ ತಿಳಿದು ಅವುಗಳನ್ನು  ಸಂಪರ್ಕಿಸಿ ವಿದ್ಯಾರ್ಥಿ ವೇತನಗಳನ್ನು ಪಡೆದುಕೊಂಡರು. ಈಗಿನಂತೆ ಮೊಬೈಲ್ ಎಂಬ ಸುಲಭದ ಸಾಧನ ಇರದ ಕಾಲವದು. ಹಸಿವು ಮತ್ತು ಬಡತನ ಎಲ್ಲವನ್ನೂ ಕಲಿಸಿ ಕೊಡುತ್ತದೆ ಅಲ್ಲವೇ?

ಹಲವಾರು ಸಂಘ ಸಂಸ್ಥೆಗಳು ಇವರ ಓದನ್ನು ನೋಡಿ ಹಾಗೂ ಇವರ ಕಷ್ಟಕ್ಕೆ ನೆರವಾದವು. ಇವರಿಗೆ ವಿದ್ಯಾರ್ಥಿವೇತನ ದೊರೆಯಿತು. ಅದನ್ನು ಕಲಿಕೆಗೆ ಸಂಪೂರ್ಣವಾಗಿ ಬಳಸಿ ತಮ್ಮ ವಿದ್ಯಾಭ್ಯಾಸವನ್ನು ಎಡೆಬಿಡದೆ ಮುಂದುವರಿಸಿದರು. ಸಿ ಓ ಡಿ ಪಿ. ಎಂಬ ಆರ್ಗನೈಜೇಷನ್ ಒಂದು ಮಂಗಳೂರಿನಲ್ಲಿ ಇದೆ. ಅವರು ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ಕೊಡುತ್ತಾರೆ ಎಂಬ ಮಾಹಿತಿ ದೊರೆತ ಪ್ರಮೀಳಾ ಅಲ್ಲಿಂದ ನಾಲ್ಕು ವರುಷಗಳಿಗೆ ಶೈಕ್ಷಣಿಕ ಸಾಲ ಪಡೆದರು. ಇವರಿಗೆ ನಮ್ಮ ಹಾಗೆಯೇ ಬದುಕಲ್ಲಿ ಆಗ ಗಾಡ್ ಫಾದರ್ ಅಂತ ಯಾವುದೇ ವಿಷಯದ ಬಗ್ಗೆ ತಿಳುವಳಿಕೆ ಹೇಳಲು ಯಾರೂ ಇರಲಿಲ್ಲ. ಕಲಿತವರ, ತಿಳಿದವರ ಬಳಿ ಯಾವ ವಿಷಯದ ಬಗ್ಗೆ ಕಲಿತರೆ ಬೇಗ ಕೆಲಸ ಸಿಗಬಹುದು ಎಂದು ವಿಚಾರಿಸಿದಾಗ ಹಲವಾರು ಜನರು ಕೊಟ್ಟ ಐಡಿಯಾ "ನೀನು ಚೆನ್ನಾಗಿ ಓದುತ್ತೀಯಾ, ಹಾಗಾಗಿ ಟೀಚರ್ ಆಗು" ಎಂದು. ಇಂಜಿನಿಯರ್, ಡಾಕ್ಟರ್ ಆಗಲು ಎಲ್ಲಾ ಕಾಲಕ್ಕೂ ಹಣವೇ ಮುಖ್ಯ ತಾನೇ? ಅಲ್ಲದೆ ಬಡವಳಾದ ಹುಡುಗಿಗೆ ಇದು ಯಾಕೆ ಎಂದು ಇರಬಹುದು, ಅಥವಾ ಹಳ್ಳಿ ಆದ ಕಾರಣ ಯಾರಿಗೂ ತಿಳಿದಿಲ್ಲದ ಕಾರಣ ಇರಬಹುದು, ಯಾರೂ ಈ ಕೋರ್ಸ್ ಗಳ ಬಗ್ಗೆ ಹೇಳಿರಲಿಲ್ಲ.  ಹಾಗಾಗಿ ಪ್ರಮೀಳಾ ವಿಜ್ಞಾನದ ವಿಷಯದಲ್ಲಿ ಪದವಿಯನ್ನು ಆಯ್ಕೆ ಮಾಡಿ ಕೊಂಡರು. ಮೊದಲ ವರ್ಷದ ಪದವಿಯಲ್ಲಿ ಹಲವು ವಿದ್ಯಾರ್ಥಿಗಳು ತಮಗೆ ಇಂಜಿನಿಯರಿಂಗ್ ಸೀಟು ಸಿಕ್ಕಿದೆ ಎಂದು ಬಿಟ್ಟು ಹೋದಾಗಲೇ ಅವರಿಗೆ ತಿಳಿದದ್ದು ಈ ರೀತಿಯ ಹೆಚ್ಚಿನ ಸಂಬಳ ತರುವ ಕೆಲಸಗಳು ಸಿಗುವ ಬೇರೆ ಕೋರ್ಸ್ ಗಳನ್ನೂ ನಾವು ಕಲಿಯಬಹುದು ಎಂದು! ನಾನೂ ಸೇರಬಹುದಿತ್ತು, ನನಗೂ ಮೊದಲು ಗೊತ್ತಿದ್ದಿದ್ದರೆ ಎಂದು ಅದೆಷ್ಟೋ ಬಾರಿ ಬೇಸರ ಪಟ್ಟದ್ದು ಕೂಡಾ ಇದೆ. ವಿಜ್ಞಾನದ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಮುಗಿಸಿದ ಪ್ರಮೀಳಾ. ಬಳಿಕ ಒಂದೇ ವರ್ಷ ಬಿ. ಎಡ್ ಕೋರ್ಸ್ ಮಾಡಿದರೆ ಸಾಕು ಕೆಲಸ ಸಿಗುವುದೆಂದು ಎಲ್ಲರ ಅಭಿಪ್ರಾಯ ಪಡೆದು ಬಿ. ಎಡ್ ಪದವಿಯನ್ನೂ ಪಡೆದರು. ತಕ್ಷಣವೇ ಮಂಗಳೂರಿನ ಒಂದು ಖಾಸಗಿ ಡಿ.ಎಡ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿದರು. ಏಕೆಂದರೆ ಹಣದ ಅವಶ್ಯಕತೆ ತುಂಬಾ ಇತ್ತು. ಎರಡು ವರುಷಗಳ ಕಾಲ ಸ್ವತಂತ್ರವಾಗಿ ಜವಾಬ್ದಾರಿಯುತ ಕಾರ್ಯ ಮಾಡುವ ಅಲ್ಲಿನ ಕೆಲಸ ಅವರಿಗೆ ಇಷ್ಟವಾಯ್ತು.

    ಆದರೆ ಹಣದ ಹರಿವು ಸಾಲದೆ ಎರಡು ಮೂರು ಬಾರಿ ಸರಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಮೂರನೇ ಬಾರಿಗೆ ಸರಕಾರಿ ಪ್ರೌಢಶಾಲೆ ಕೋಡಪದವು ಬಂಟ್ವಾಳ ಇಲ್ಲಿ ಗಣಿತ ಶಿಕ್ಷಕಿಯಾಗಿ ನೇಮಕಗೊಂಡರು. ಅಲ್ಲಿ ಅವರಿಗೆ ಸಂಬಲವೇನೋ ಸಿಗುತ್ತಿತ್ತು ಆದರೆ ಮನದ ಹಸಿವು ತೀರಿರಲಿಲ್ಲ. ಒಂದು ತಾನು ಜನರಿಗೆ ಏನಾದರೂ ಸಹಾಯ ಮಾಡಬೇಕು ಎಂಬ ತುಡಿತ ಇನ್ನೊಂದೆಡೆ ಇನ್ನೂ ನನ್ನ ಸಂಬಳ ಜಾಸ್ತಿ ಆಗಬೇಕು ಎಂಬ ಮನದ ಇಂಗಿತ, ಮತ್ತೆ ನಾನು ಇನ್ನಷ್ಟು ಹೆಚ್ಚು ದುಡಿದು ಇನ್ನೂ ಏನಾದರೂ ಸಾಧಿಸಬೇಕು ಎಂಬ ಹಂಬಲ ಜಾಸ್ತಿಯಾಗಿ 2008ರಲ್ಲಿ ಒಂದು ಇನ್ಶುರೆನ್ಸ್ ಕಂಪನಿಗೆ ಸೇರಿದರು. ಅಲ್ಲಿ ಅವರಿಗೆ ಬಹಳಷ್ಟು ಹಣ ಗಳಿಸಲು ಸಾಧ್ಯವಾಯಿತು.

ಎರಡನೇ ಗಳಿಕೆ ಪ್ರಾರಂಭ ಆದ ಪ್ಯಾನ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಗಳಿಕೆಗೆ ಕಾಂಟೆಸ್ಟ್ ಇತ್ತು. ಅದರಲ್ಲಿ ಮೊದಲಿಗರಾಗಿ ಜಯ ಗಳಿಸಿದ ಕಾರಣ ಮೂರು ದೇಶಗಳಿಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಯು. ಎ. ಇ , ದಕ್ಷಿಣ ಆಫ್ರಿಕಾ ಮತ್ತು ದುಬೈ ಪ್ರವಾಸಗಳನ್ನು ಮಾಡಿದರು. ಅಲ್ಲದೇ ನಾನು ದೊಡ್ಡ ಮ್ಯಾನೇಜರ್ ಆಗಬೇಕು ಎಂಬ ಬಾಲ್ಯದ ಕನಸು ನನಸಾಗಿಸುವ ತುಡಿತ ಇದ್ದೇ ಇತ್ತು. ಈ ಮಧ್ಯೆ ಅವರು ತಮ್ಮ ಎಂ. ಎಡ್ ವಿದ್ಯಾಭ್ಯಾಸ ಮುಗಿಸಿದರು. ಕೈಯಲ್ಲಿ ಸ್ವಲ್ಪ ಹಣ ಬಂದಾಗ ಮ್ಯಾನೇಜರ್ ಆಗಲು ಎಂ.ಬೀ.ಎ ಮಾಡಬೇಕು ಎಂದು ತಿಳಿದವರು ಸಲಹೆ ನೀಡಿದರು. ಆಗ ಇರುವ ರಜೆಗಳನ್ನು ಬಳಸಿ ಹಾಗೂ ಸಂಬಳ ಇಲ್ಲದ ರಜೆ ಪಡೆದು ಹೆಚ್ಚಿನ ಓದಿಗೆ ಬೆಂಗಳೂರಿಗೆ ಹೋದರು.
ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಬೆಂಗಳೂರು ಇಲ್ಲಿ ಎಂ.ಬಿ.ಎ ಪದವಿಗೆ ಸೇರಿಕೊಂಡಾಗ ಬೆಂಗಳೂರು ಮಹಾನಗರ ಎಂದರೆ ಏನೆಂದು ಅರಿಯದ ಹಳ್ಳಿಯ ಹುಡುಗಿ ಒಂಟಿಯಾಗಿ ನಗರ ಸೇರಿದ್ದರು. ಅಲ್ಲಿ ಬಾಡಿಗೆಗೆ ಮನೆಯೊಂದನ್ನು ಪಡೆದು, ಮನೆ ಹಾಗೂ ಕಾಲೇಜಿನ ಫೀಸು ತಾನೇ ಭರಿಸಿಕೊಂಡು ಓದತೊಡಗಿದರು. ಎರಡು ವರುಷಗಳ ಕಾಲ ನಿರಂತರ ಕರ್ತವ್ಯಕ್ಕೆ ಹಾಜರಾಗದ ಕಾರಣ ಸರಕಾರಿ ಕೆಲಸ ಕೈತಪ್ಪಿತು. ಆದರೆ ಅವರು ಎದೆಗುಂದಲಿಲ್ಲ. ಕಾಲೇಜಿನಲ್ಲಿ ಉತ್ತಮ ಪ್ರಾಧ್ಯಾಪಕರ ತಂಡವಿತ್ತು. ಅವರ ಸಹಕಾರ ಚೆನ್ನಾಗಿತ್ತು. ಅವರು ತುಂಬಿದ ಮಾನಸಿಕ ಧೈರ್ಯದಿಂದ ಓದಲು ಪ್ರೇರಣೆ ದೊರೆಯಿತು.

ಮುಂದೆ ಅವರ ಪೀ.ಹೆಚ್.ಡಿ ಗುರುಗಳೂ ಆದ ಕಿರಣ್ ರೆಡ್ಡಿ ಮೇಡಂ ಅವರ ಬದುಕಿನ ರೂವಾರಿ ಗುರು ಎಂದರೆ ತಪ್ಪಾಗಲಾರದು. ಅವರಿಗೆ ಸ್ಪೂರ್ತಿಯುತ ಮಾತುಗಳನ್ನು ಹೇಳಿ ಅವರನ್ನು ಮುನ್ನಡೆಸಿದವರು ಕಿರಣ್ ರೆಡ್ಡಿಯವರು. ಅವರ ಮಾತುಗಳು ಪ್ರಮೀಳಾ ಅವರಿಗೆ ಬದುಕಿನ ವೇದವಾಕ್ಯಗಳದವು. ಅವರಿಂದ ಬಹಳಷ್ಟು ಕಲಿತರು ಮತ್ತು ಬೆಳೆದರು. ಅಲ್ಲಿನ ಸರ್ವ ಉಪನ್ಯಾಸಕರ ತಂಡ ಪ್ರಮೀಳಾ ಅವರನ್ನು ಬೆಂಬಲಿಸಿತು. ಅದು ಅವರ ಜೀವನಕ್ಕೆ ಹೊಸ ತಿರುವು ಕೊಟ್ಟಿತು.ತಾನು ಓದುವುದೇ ಅಲ್ಲದೆ ತನ್ನ ತಂಗಿಯನ್ನು ಕೂಡಾ ತನ್ನ ಜೊತೆಗೂ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲೇ ಓದಿಸಿದರು.

  ಎಂ.ಬಿ.ಯೆ ಓದುತ್ತಿರುವಾಗ ಅವರಿಗೆ ಹಣಕ್ಕಾಗಿ ತಾನು ಏನಾದರೂ ಬ್ಯುಸಿನೆಸ್ ಮಾಡಬೇಕು ಅನಿಸಿತು. ಕುಶನ್ ಮೇಕಿಂಗ್ ಅಲ್ಲೇ ಕಲಿತಿದ್ದ ಕಾರಣ ಅದನ್ನೇ ಆರಂಭಿಸಿದರು. ಹಲವಾರು ಎಕ್ಸಿಬಿಷನ್ಗಳಲ್ಲಿ ತಾನೇ ತಯಾರಿಸಿದ ವಿವಿಧ ಆಕೃತಿಯ, ಬೇರೆ ಬೇರೆ ಬಣ್ಣಗಳ ನವ ನವೀನ ಮಾದರಿಯ ಕುಶನ್ ಗಳು ಅವರಿಗೆ ಲಾಭವನ್ನೇ ತಂದು ಕೊಟ್ಟವು.

ತನ್ನ ಇಪ್ಪತ್ತ ಒಂಭತ್ತನೆಯ ವಯಸ್ಸಿನಲ್ಲಿ ತನಗೆ ಇಷ್ಟವಾದ ವ್ಯಕ್ತಿ ರಾಕಿ ಲೋಬೋ ಎಂಬವರು ತನಗೆ ದೊರೆತಾಗ ಅವರನ್ನೇ ತನ್ನ ಬಾಳ ಸಂಗಾತಿಯಾಗಿ ಆರಿಸಲು ದೃಢ ಸಂಕಲ್ಪ ಮಾಡಿ ಅವರೊಡನೆ ಮದುವೆಯಾದರು. ಆದರೆ ತನ್ನ ಮದುವೆಗೆ ಅವರು ಯಾವುದೇ ರೀತಿಯಲ್ಲೂ ತಮ್ಮ ಪೋಷಕರ ಆರ್ಥಿಕ ನೆರವು ಪಡೆಯಲಿಲ್ಲ.ಬದಲಾಗಿ ತನ್ನ ಸ್ವಂತ ದುಡಿಮೆಯ ಹಣದಲ್ಲೇ ತಮ್ಮ ಮದುವೆಯ ಖರ್ಚು ನಿಭಾಯಿಸಿದರು.

ಮದುವೆಯ ಬಳಿಕ ಬೆಂಗಳೂರಿನಲ್ಲೇ ಇಬ್ಬರು ಬದುಕು ಕಳೆಯಲು ಪ್ರಾರಂಭಿಸಿದರು. ಒಂದೆರಡು ವರುಷಗಳ ಬಳಿಕ ಪಿಹೆಚ್ ಡಿ ಮಾಡಲು ತಯಾರಿ ಮಾಡಿಕೊಂಡರು ಪ್ರಮೀಳಾ.  ಅದಕ್ಕಾಗಿ ಅವರಿಗೆ ಜಿ ಆರ್ ಎಫ್ ಅಂದರೆ ಜೂನಿಯರ್ ರೀಸರ್ಚ್ ಫೆಲೋಶಿಪ್ ಸಿಕ್ಕಿತು. ಅದರ ಜೊತೆಗೆ ಆಗ ಅವರು ಬೇರೆಯೇ ಎರಡು ರೀತಿಯ ವ್ಯಾಪಾರದಲ್ಲಿ ತೊಡಗಿದ್ದರು. ಒಂದು ಅವರದೇ ಆದ ಸ್ಟೇಷನರಿ ಅಂಗಡಿ ನಡೆಸುತ್ತಿದ್ದರು ಮತ್ತು ಅದರೊಡನೆ ಅವರು ಬಿಸ್ಲೇರಿ ನೀರಿನ ಡಿಸ್ಟ್ರಿಬ್ಯೂಟರ್ ಕೂಡಾ ಆಗಿದ್ದರು. ಆ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು.

ತಾವು ವಾಸಿಸುತ್ತಿದ್ದ ತಮ್ಮ ಬಾಡಿಗೆ ಮನೆಯನ್ನು ತೊರೆದು ಫ್ಲಾಟ್ ಮನೆಗೆ ಹೋದರು. ಈ ಮನೆಗೆ ಮತ್ತು ಅಲ್ಲಿನ ಖರ್ಚಿಗೆ ಅವರ ಈ ಪ್ಯಾಸಿವ್ ಸೋರ್ಸ್ ತುಂಬಾ ಸಹಕರಿಸಿತು. ಈ ಮಧ್ಯೆ ಪಿ ಹೆಚ್ ಡಿ ಮಾಡುತ್ತ ಇರುವಾಗಲೇ ಅವರಿಗೆ ರಿಯಾನ್ ಹಾಗೂ ರಿಶನ್ ಎಂಬ ಇಬ್ಬರು ಮಕ್ಕಳಾದರು. ಅವರ ಲಾಲನೆ ಪಾಲನೆಗಳ ಜೊತೆಗೆ ತಮ್ಮ ವ್ಯವಹಾರ, ವ್ಯಾಪಾರ, ಒಂದೆರಡು ಕಾಲೇಜಿನಲ್ಲಿ ಗೆಸ್ಟ್ ಫ್ಯಾಕಲ್ಟಿ ಆಗಿ ಶಿಕ್ಷಣವನ್ನೂ ನೀಡುವ ಕಾರ್ಯ ಎಲ್ಲದರಲ್ಲೂ ನಿರತರಾಗಿದ್ದರು. ಇದೆಲ್ಲವನ್ನೂ ನಿಭಾಯಿಸಲು ಪತಿಯವರ ಸಹಕಾರವಿತ್ತು. ಅವರ ಸಹಕಾರದಿಂದಲೇ ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಯಿತು ಎನ್ನುತ್ತಾರೆ ಪ್ರಮೀಳಾ. ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುವಂತೆ ಹಲವು ಯಶಸ್ವಿ ಸ್ತ್ರೀಯರ ಬದುಕಿನ ಹಿಂದೆಯೂ ಅವಳ ಪತಿಯ ಸಹಕಾರ ಇರುತ್ತದೆ ಅಲ್ಲವೇ?
   ಈಗ ಅವರು ಫೈನಾನ್ಸಿಯಲ್ ಪ್ಲಾನಿಂಗ್ ಮತ್ತು ಜನರಿಗೆ passive  ಇನ್ಕಮ್ ನ ಬಗ್ಗೆ ತರಬೇತಿ ಕೊಡುವ ಒಳ್ಳೆಯ ಕಾರ್ಯವನ್ನೂ ಮಾಡುತ್ತಿದ್ದಾರೆ. ಇದರೊಂದಿಗೆ ನಾವು ದುಡಿದ ಹಣವನ್ನು ಸರಿಯಾಗಿ ಬಳಸಿಕೊಂಡು ನಮ್ಮ ಜೀವನವನ್ನು ನೆಮ್ಮದಿಯಿಂದ ಕಳೆಯುವುದು ಹೇಗೆ ಎಂಬುದರ ಬಗ್ಗೆ ಹೇಳಿಕೊಡುವ ಕಾರ್ಯವನ್ನೂ, ಅದಕ್ಕಾಗಿ ಹಲವು ವರ್ಕ್ ಶಾಪ್, ವೆಬಿನಾರ್ ಗಳನ್ನು ಕೂಡಾ ಮಾಡುತ್ತಾ ಇದ್ದಾರೆ. ಪ್ರತಿ ಶನಿವಾರ ಕನ್ನಡ/ ಕೊಂಕಣಿಯಲ್ಲಿ, ಪ್ರತಿ ಭಾನುವಾರ ಇಂಗ್ಲಿಷ್ ನಲ್ಲಿ ಒಂದು ಗಂಟೆ ಯಾವುದೇ ಫೀಸ್ ಪಡೆಯದೆ ಆನ್ಲೈನ್ ಮೂಲಕ ಜನರಿಗೆ ಗೈಡೆನ್ಸ್ ಕೊಡುತ್ತಾರೆ.

ತಿಂಗಳಿಗೆ ಲಕ್ಷಗಟ್ಟಲೆ ದುಡಿಯುವವರಿಗೂ ಕೂಡ ತಾವು ದುಡಿದ ಹಣವನ್ನು ಸರಿಯಾಗಿ ಬಳಸಿಕೊಳ್ಳುವುದು ಹೇಗೆ ಎಂಬ ಅರಿವಿರದೆ ಅವರು ತಮ್ಮ ಜೀವನದಲ್ಲಿ ಸಾಲದ ಮೊರೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ತಾವು ಎಷ್ಟೇ ದುಡಿದರೂ ದುಡಿಮೆಯ ಹಣ ಸಾಲದೆ ಪರರ ಮುಂದೆ ತಲೆ ತಗ್ಗಿಸುವ ಪ್ರಸಂಗ ಹಲವರಿಗಾದರೆ, ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಆಗದೇ ಬದುಕುತ್ತಿರುವ ಮತ್ತೊಂದು ಪಂಗಡವೆ ಇದೆ. ಇಂತಹ ಜನರಿಗೆ ತಾವೇ ದುಡಿದ ಹಣದ ಸರಿಯಾದ ಬಳಕೆಯನ್ನು ಹೇಗೆ ಮಾಡಬೇಕು, ನಾಳೆಗಾಗಿ ಹೇಗೆ ನಮ್ಮ ಹಣವನ್ನು ನಾವು ತೊಡಗಿಸಿ ಕೊಳ್ಳಬೇಕು, ತಮ್ಮ ಹಣ ಪೋಲಾಗದಂತೆ ಪ್ಲಾನ್ ಮಾಡುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಒಂದು ಮಿಲಿಯನ್ ಜನರಿಗೆ ಮಾಹಿತಿ ತಲುಪಿಸಬೇಕೆಂಬ ಒಂದು ಯೋಜನೆಯನ್ನು ಹಾಕಿಕೊಂಡು ಆ ದಿಸೆಯಲ್ಲಿ ಮುನ್ನಡೆಯುತ್ತಿದ್ದಾರೆ ಪ್ರಮೀಳಾ ಅವರು.

ಪಿ.ಹೆಚ್. ಡಿ. ಮುಗಿದ ಬಳಿಕ ಪಾರ್ಟ್ ಟೈಂ ಆಗಿ ತನ್ನದೇ ಆದ ಒಂದು ಎನ್ ಜಿ ಓ ನಲ್ಲಿ ದುಡಿಯುತ್ತಿರುವ ಇವರು ಒಂದು ಪ್ರೊಜೆಕ್ಟ್ ನಲ್ಲಿ ಕೆಲಸ ಮಾಡುತ್ತಿರುವವರು. ಆ ಪ್ರೊಜೆಕ್ಟ್ ಬಡವರಿಗೆ ಸಹಾಯ ಮಾಡುವ ಬೃಹತ್ತಾದ ಹಾಗೂ ಮಹತ್ವದ ಒಳ್ಳೆಯ ಕೆಲಸವನ್ನು ಮಾಡುತ್ತಿದೆ.ಆದರೆ ಕೊರೋನಾದಿಂದ ಲಾಕ್ ಡೌನ್ ಆದ ಕಾರಣ ಬಡವರನ್ನು ಸಂಪರ್ಕಿಸಲು ಆಗದ ಕಾರಣ ಝೂಮ್ ಮೀಟಿಂಗ್ ಅನಿವಾರ್ಯವಾಗಿ ಮಾಡಬೇಕಾಗಿದೆ. ತಂತ್ರಜ್ಞಾನ ಬಳಸಿ ತಮ್ಮ ಕಾರ್ಯವನ್ನು ಸಕ್ರಿಯಗೊಳಿಸಲು ಹೊರಟಿರುವ ಇವರ ಈ ಸಾಧನೆ ಮಹಾನ್ ಅಲ್ಲವೇ?

ಪ್ರತಿಯೊಬ್ಬರನ್ನೂ ಸಂಪರ್ಕಿಸಲು ಸಾಧ್ಯವಾಗದ ಕಾರಣ ಪ್ರಮೀಳಾ ಅವರು ಫೈನಾನ್ಸಿಯಲ್ ಎಜುಕೇಷನ್ ಸರ್ವರಿಗೆ ಕೊಡಲು ಡಿಜಿಟಲ್ ಕೋರ್ಸ್ ಗಳನ್ನೂ ಪ್ರಾರಂಭಿಸಿದರು. ಎಲ್ಲವನ್ನೂ ಜನರಿಗೆ ಫ್ರೀಯಾಗಿ ಕೊಟ್ಟರೆ ಅದಕ್ಕೆ ಬೆಲೆ ಇರುವುದಿಲ್ಲ. ಜನ ಫ್ರೀ ಆಗಿ ಸಿಕ್ಕಿದ ಯಾವುದನ್ನಾದರೂ ಕಡೆಗಣಿಸುವುದು ಹೆಚ್ಚು. ಆದ ಕಾರಣ, ಮತ್ತು ತಮ್ಮ ಬದುಕಿಗೂ ಸಹಾಯ ಆಗಲೆಂದು ಕಡಿಮೆ ಬೆಲೆಯಲ್ಲಿ ವಿವಿಧ ಬಗೆಯ ಹದಿನೈದು ಕೋರ್ಸ್ ಗಳನ್ನು ಡಿಜಿಟಲೀಕರಣ ಮಾಡಿ ಕಡಿಮೆ ಬೆಲೆಗೆ ಇವರ ಮೂಲಕ ನೀಡಲಾಗುತ್ತಿದೆ. ನಮ್ಮಲ್ಲಿರುವ ಹಣದ ಸದ್ಬಳಕೆ ಹೇಗೆ, ಆದಷ್ಟು ಬೇಗ ಹಣ ಮಾಡಿಕೊಂಡು ನಮಗೆ ನಾವೇ ಕೆಲಸದಿಂದ ರಿಟೈರ್ಮೆಂಟ್ ಪಡೆದು ಆರಾಮದ ಬದುಕು ನಡೆಸುವುದು ಹೇಗೆ, ಸಾಲಗಳಿಲ್ಲದೆ ಬದುಕುವುದು ಹೇಗೆ, ತಮ್ಮ ಕನಸುಗಳ ಸಾಕಾರಗೊಳಿಸುವ ಬಗೆ ಹೇಗೆ, ಕಡಿಮೆ ದುಡಿಯುವವರು ತಮ್ಮ ಜೀವನ ಕ್ರಮಗಳನ್ನು ಉತ್ತಮ ಪಡಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಹೇಳಿ ಕೊಡುವ ಹಣದ ಬಗೆಗಿನ ಶಿಕ್ಷಣವನ್ನು ಶಾಲಾ ಕಾಲೇಜುಗಳಿಗಿಂತ ಭಿನ್ನವಾಗಿ ಹೇಳಿ ಕೊಡುವ ಕಾರ್ಯ ಇವರದು.

ತಮ್ಮ ದುಡಿತದ ಹಣವನ್ನು ಸರಿಯಾದ ರೀತಿಯಲ್ಲಿ ವ್ಯಯ ಮಾಡಿ ಜೀವನವನ್ನು ಸಂತಸದಿ ಕಳೆಯುವ ಈ ಯೋಜನೆಯನ್ನು ಶಾಲಾ ಕಾಲೇಜಿನ ಶಿಕ್ಷಕರಿಗೆ ಹೆಚ್ಚಾಗಿ ಹೇಳಿ ಕೊಡುವ ಕಾರ್ಯವನ್ನೂ ಇವರು ಮಾಡುತ್ತಿದ್ದಾರೆ. ಕಾರಣ ಶಿಕ್ಷಕರು ತಾವು ಕಲಿತು ತಮ್ಮ ವಿದ್ಯಾರ್ಥಿಗಳಿಗೂ ಕಲಿಸಿ ಕೊಟ್ಟಾಗ ಅವರ ಜೀವನದಲ್ಲೂ ಹಣದ ಸದ್ಬಳಕೆ ಮಾಡಿಕೊಂಡು ಅವರೂ ಕೂಡಾ ತಮ್ಮ ಜೀವನವನ್ನು ನೆಮ್ಮದಿಯಿಂದ ಉತ್ತಮವಾಗಿ ನಿರ್ವಹಿಸಲಿ ಎಂಬ ಸದುದ್ದೇಶ ಇವರದಾಗಿದೆ.

ಮರಿಯಾ ಪ್ರಮೀಳಾ ಅವರು ತಮ್ಮ ಒಂದು ಮಿಲಿಯನ್ ಜನರಿಗೆ ಸಹಾಯ ಮಾಡುವ ಯೋಜನೆಯನ್ನು ಬೇಗ ತಲುಪುವಂತಾಗಲಿ, ಅವರಿಂದ ಇನ್ನೂ ಹೆಚ್ಚು ಜನರಿಗೆ ಸಹಾಯ ಸಿಗಲಿ, ಬದುಕಲ್ಲಿ ನೋವು ಸಾಲ ಕಡಿಮೆ ಆಗುವಂತಾಗಲಿ, ಅವರ ಕಾರ್ಯ ಇನ್ನಷ್ಟು ಯಶಸ್ಸು ಪಡೆದು ಸರ್ವರಿಗೆ ಸಿಗುವ ಹಾಗಾಗಲಿ, ಅವರ ಜೀವನ ಸುಖಮಯವಾಗಿ ಸಾಗಲಿ, ಹಲವು ಜನರಿಗೆ, ಬಡವರಿಗೆ ಅವರಿಂದ ಸಹಾಯ ಸಿಗುವಂತಾಗಲಿ ಎನ್ನುವ ಆಶಯ ನಮ್ಮದು. ನೀವೇನಂತೀರಿ?
@ಪ್ರೇಮ್@
04.06.2021

(ನಿಮಗೂ ಫೈನಾನ್ಸಿಯಲ್ ಅಡ್ವೈಸ್ ಬೇಕೆಂದರೆ ಪ್ರಮಿಳರನ್ನು 89048 20166 ಈ ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕಿಸಿ.)


ಗುರುವಾರ, ನವೆಂಬರ್ 25, 2021

ದಶಕ -4

ದಶಕ -1

ದಶಕ 3

it's me .

I hate not you
I hate not me
But I hate my life.

I blame not you
I blame not god
I blame my fate..

I feel not happy
I feel no jealousy
I feel sad myself.

I know I am good
I know you are better
But I wish for the best..

I know that my life never change
I know that I can change anything 
But we cannot go against the society
Until I have more than anything..

I know only to talk
Nothing to act in daring
Because no one is there in my side to pat me on my back and jerk forward..

I'm not bad ofcourse
My motto and feelings too..
Life is good, dreams are more
Wishes are there to reach! 

Yet a ray of hope still..
That one fine day..
The person who is in my dream..
Can appear in my life like god..
To care and share my feelings..
And keep me happy ever..

May be or may not be
Truth or untruth
God may say yes or no
It is hard to accept the life
With heartily..mentally..
Physically, psychologically, togetherly, in feelings two
And being one for
 the sake of society..

Mind is in dilemma
Thank god I should not go to the stage of depression
So that I should meet a psychologist to correct me!
@Prem@
25.11.2021

ಭಾನುವಾರ, ನವೆಂಬರ್ 21, 2021

ದಶಕ -2


ದಶಕ -1

ಪ್ರೇಮ್ ನ ದಶಕಗಳು -1

ನಿಮ್ಮ ನೋವ ಹಂಚಿಕೊಳ್ಳದಿರಿ ಎಂದೂ
ತಮ್ಮ ಬೇಳೆ ಬೇಯಿಸಿಕೊಳ್ಳುವವರಿಹರು ಮುಂದು
ತನುಮನದಲಿ ಪ್ರೀತಿಯಿರದು ಸರ್ವರಲಿ
ಬದಲಾಗಿ ದ್ವೇಷ ರೋಷದಿ ಕುದಿವರು ತಾವಾಗಿ..

ಮುಖದಲಿ ಕೊಂಕು ನಗು ಇಹುದು ತಾನಾಗಿ
ನಂಬಿ ಬಿಟ್ಟರೆ ಮೋಸ ಹೋಗುವಿರಿ ನೀವಾಗಿ
ಕಂಬಿ ಎಣಿಸಬೇಕು ನಮ್ಮ ಸಹಾಯಕೆ ನಾವೇ
ನಂಬಿಕೆಗೆ ಅರ್ಹರ ಹುಡುಕಲು ಹೊರಟರೆ ಸಾವೇ..

ನೆನಪಿರಲಿ ಕಾಲವಿದು ಕಲಿಯುಗ ಕೇಳೋ ಅಣ್ಣ
ಬಟ್ಟೆಯೊಡನೆ ಮನಸ್ಸು ಕೂಡಾ ಬೇರೆ ಬೇರೆ ಬಣ್ಣ!
@ಪ್ರೇಮ್@
21.11.2021

ಗುಬ್ಬಿಯ ಕೂಗು

ಗುಬ್ಬಿಯ ಕೂಗು

ಕಬ್ಬಿನ ತೋಟದಿ ಗುಬ್ಬಿಯ ಕೂಗು
ಮಬ್ಬಾಯಿತು ಈಗ ತನ್ನಯ ಬದುಕು
ರಿಬ್ಬನ್ ತರಹದ ದೇಹವು ನನ್ನದು
ತಬ್ಬಲಿ ನಾನು ಎಲ್ಲರ ಅಗಲುತ

ಮೊಬೈಲ್ ಟವರಿನ ಅಲೆಗಳ ಹೊಡೆತ
ಮೆದುಳಿಗೆ ಭಾರಿ ನೋವಿನ ತುಳಿತ
ಮನುಜಗೆ  ಗಿಡ ಮರ ಕಡಿಯುವ ತುಡಿತ
ತಿನ್ನುವ ಆಹಾರಕೆ ವಿಷದ ಬೆರೆತ...

ಬಾಳಲು ಕಷ್ಟವು ಮನುಜರ ನಡುವೆ
ಪರಿಸರ ಕೆಡಿಸಿ ಬಾಳುವ ಗೊಡವೆ
ತಿನ್ನುವ ಕಾಳಲು ರಾಸಾಯನಿಕದಿರುವೆ
ವಿಷ ತರಂಗಗಳು ಪೀಳಿಗೆ  ಕುಂದಿಸಿವೆ.. 

ಹುಳ ಹುಪ್ಪಟೆಗಳ ತಿಂದು ಬದುಕುವೆನು
ನೀ ಕೊಟ್ಟ ಕಾಳನು ಮರೆಯದೆ ಮೆಲ್ಲುವೆನು
ನಿನ್ನ ಜೀವನದಿ ಸದಾ ಬರುವೆನು
ಗುಬ್ಬಿಯ ಹಾಗೆನುತ ಸದಾ ಬಳಿ ಇರುವೆನು..

ಸಣ್ಣ ಪುಟ್ಟ ಪಕ್ಷಿಯು ನಾನು
ಪರಿಸರ ಕೊಂಡಿಯ ಜೀವಿಯು ತಾನು
ನಿಜ ಭೂಮಿಗೆ ಸಹಕಾರಿಯು ಕಾಣ
ನನ್ನನು ಬದುಕಿಸಿ ಮಾಡು ಬುವಿಯ ಸುಂದರ ತಾಣ..
@ಪ್ರೇಮ್@
20.11.2021

ನಗೆಯು ಬರುತಿದೆ..

ನಗೆಯು ಬರುತ್ತಿತ್ತಾ...

ನಾ ನಾ ನಾ ನಾ ನಾ ನಾ ನಾ ನಾ
ನಗೆಯು ಬರುತಿತ್ತಾ ಮಂತ್ರಿ...ನಗೆಯು ಬರುತಿತ್ತಾ....

ಅಕ್ಕ ತಂಗಿಯರು ಒಟ್ಟಿಗೆ ಕಲೆತು
ವಿದ್ಯಾ ಬುದ್ಧಿ ಪಡೆದು ಬೆಳೆತು
ತಮ್ಮಯ ಮನೆಯ ಸೇರಿದ ಬಳಿಕ
ತಂದೆ ತಾಯಿ ಆಸ್ತಿಯಲಿ ಪಾಲು ಕೇಳುವಾಗ ನಾ ನಾ ನಾ ನಾ ....

ಅಣ್ಣ ತಮ್ಮಂದಿರು ಜೊತೆಯಲಿ ಬೆಳೆದು
ದಾಯಾದಿಯಾಗಿ ದ್ವೇಷವು ಮೊಳೆದು
ನನಗೆ ನಿನಗೆ ಎನ್ನುತ ಜಗಳದಿ
ಒಬ್ಬರಿಗೊಬ್ಬರು ಹೊಡೆದಾಡುವ ಕಂಡು ನಾ ನಾ ನಾ ನಾ  ..

ತಂದೆ ತಾಯಿಯ ನೋಡದ ಮಕ್ಕಳು,
ಕೆಲಸಕ್ಕೆ ಹೋಗದೆ ಬಿದ್ದಿಹ ಸೋಮಾರಿಗಳು
ವಯಸಿನ ಹಿರಿಯರ ಕಡೆಗಾಣಿಸುತಲಿ
ತಮ್ಮಯ ಲೋಕದಿ ತಾವೇ ಮೆರೆವಾಗ ನಾ ನಾ ನಾ ನಾ....

ಗುರುಗಳ ಗಮನಿಸದೆ ಹಿರಿಯಗೆ ನಮಿಸದೆ
ಆಶೀರ್ವಾದವ ಎಂದೂ ಬೇಡದೆ
ತಾನೇ ಸರಿಯು ತಾನೇ ಅರಿತವ
ಎನ್ನುತ ಮೆರೆವ ಕಿರಿಯರ ಕಂಡು ನಾ ನಾ ನಾ ನಾ...
@ಪ್ರೇಮ್@
20.11.2021

ಭಾನುವಾರ, ನವೆಂಬರ್ 14, 2021

ಆ ದೀಪಾವಳಿಯ ನೆನಪು

ಆ ದೀಪಾವಳಿಯ ಮೆಲುಕು

                     ಎರಡು ಸಾವಿರದ ಹನ್ನೆರಡನೆಯ ಇಸವಿ. ಅಂದರೆ ಒಂಭತ್ತು ವರುಷಗಳ ಮುಂಚಿನ ಮೆಲುಕು. ಅದು ನವೆಂಬರ್ ತಿಂಗಳ ಹನ್ನೆರಡು,ಹದಿಮೂರನೇ ತಾರೀಕು. ಪ್ರತಿ ವರುಷದ ದೀಪಾವಳಿಯಂತೆ ಆ ವರುಷದ ದೀಪಾವಳಿಯಲ್ಲಿ ನಮಗೆ ಯಾವುದೇ ಖುಷಿ ಇರಲಿಲ್ಲ.ಕಾರಣ ಅಕ್ಟೋಬರ್ ಹದಿನೇಳನೇ ತಾರೀಕಿಗೆ ತಂದೆಯವರ ಅಂತಿಮ ದರ್ಶನಕ್ಕೆ ನಾವು ಅಮ್ಮನ ಮನೆಗೆ ಧಾವಿಸಿದ್ದೆವು. ಮಕ್ಕಳು ಯಾರೂ ಬಳಿಯಲ್ಲಿ ಇಲ್ಲದ ಸಮಯದಲ್ಲಿ ಅಮ್ಮ ಒಬ್ಬರೇ ಇರುವಾಗ ಅಸ್ತಮಾದಿಂದ ಬಳಲುತ್ತಿದ್ದ ಅಪ್ಪ ಮಕ್ಕಳನ್ನು ಕೇಳುತ್ತಾ ರಾತ್ರಿ ಸಮಯದಲ್ಲಿ ಕೊನೆಯುಸಿರೆಳೆದಿದ್ದರು. ಒಂದು ತಿಂಗಳಾಗುತ್ತ ಬಂದಿತ್ತು ಅಷ್ಟೆ. 

           ನನ್ನ ಅಜ್ಜಿ ಮನೆ ಬೆಳ್ತಂಗಡಿ ತಾಲೂಕಿನ ನಾರಾವಿಯ ಬಳಿಯ ಈದುವಿನಲ್ಲಿ ಇದೆ. ನಾ ಅಲ್ಲಿ ಇದ್ದೆ. ದೊಡ್ಡಮ್ಮ ಜೊತೆಗಿದ್ದರು. ಅಮ್ಮ ತಂದೆಯವರ ಅಂತಿಮ ವಿಧಿ ವಿಧಾನಗಳನ್ನು ನಡೆಸಬೇಕಾಗಿ ಇದ್ದುದರಿಂದ ನನ್ನ ಜೊತೆಗಿರಲು ಆಗಲಿಲ್ಲ. ನಾನಾಗ ಒಂಭತ್ತು ತಿಂಗಳ ಗರ್ಭಿಣಿ. ನವೆಂಬರ್ ಹದಿಮೂರನೇ ದಿನಾಂಕದಂದೇ ನನಗೆ ಹೆರಿಗೆಗೆ ಡಾಕ್ಟರ್ ದಿನಾಂಕ ಸೂಚಿಸಿದ ಕಾರಣ ಆಸ್ಪತ್ರೆಗೆ ಆ ದಿನಾಂಕದ ಮೊದಲೇ ತೆರಳಬೇಕಿತ್ತು. ಆದರೆ ನನಗೆ ಯಾವುದೇ ರೀತಿಯ ಹೊಟ್ಟೆ ನೋವು ಕಾಣಿಸಿಕೊಳ್ಳದ ಕಾರಣ  ಮೊದಲೇ ಹೋಗಿ ಆಸ್ಪತ್ರೆ ವಾಸ ಮಾಡುವುದು ಸರಿ ಕಾಣಲಿಲ್ಲ. "ಒಂದು ದಿನ ಲೇಟ್ ಆಗಲಿ ದೇವರೇ, ನವೆಂಬರ್ ಹದಿನಾಲ್ಕನೇ ತಾರೀಖಿಗೆ ಆಗಲಿ, ಮಕ್ಕಳ ದಿನಾಚರಣೆ ಹಾಗೂ ಚಾಚಾ ನೆಹರು ಅವರ ಜನ್ಮ ದಿನದಂದು ನನ್ನ ಮಗು ಹುಟ್ಟಲಿ.." ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಾ ಇದ್ದೆ ನಾನು. 

           "ಹನ್ನೆರಡನೇ ತಾರೀಖಿನ ದಿನವೇ ಒಂದು ದಿನ ಮುಂಚಿತವಾಗಿ ಆಸ್ಪತ್ರೆಗೆ ಹೋಗೋಣ. ರಾತ್ರಿ ಹೆರಿಗೆ ನೋವು ಕಾಣಿಸಿದರೆ ಕಾರ್ಕಳಕ್ಕೆ ಹೋಗಲು ದೂರವಿದೆ ಮತ್ತು ಕಷ್ಟ " ಎಂದರು ದೊಡ್ಡಮ್ಮ. ನಾನೂ ತಯಾರಿಲ್ಲದೆಯೂ ತಯಾರಾಗಬೇಕಿತ್ತು. ಮನಸ್ಸಿಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡೆ. 

           ಆಗ ಅಲ್ಲಿದ್ದ ನನ್ನ ಅಜ್ಜ ದೊಡ್ಡಮ್ಮನನ್ನು ತಡೆದರು. "ಹೇಗೂ ಇಷ್ಟು ದಿನ ತಡವಾಯಿತು. ಅವಳಿಗೆ ನೋವೇನೂ ಇಲ್ಲ. ಹಾಗಾಗಿ ಹಬ್ಬದ ದಿನ . ಪಾಡ್ಯದ ದಿನದ ಹಿರಿಯರಿಗೆ ಬಡಿಸಿದ ಬಳಿಕ ಊಟ ಮಾಡಿಯೇ ನಾಳೆ ಆಸ್ಪತ್ರೆಗೆ ಹೋಗಿ. ಒಂದು ದಿನ ತಡವಾದರೆ ಏನೂ ಆಗಲಿಕ್ಕಿಲ್ಲ" ಎಂದರು. ನಾನು ಸಂತಸದಿಂದ ಬೀಗಿದೆ. ದೊಡ್ಡಮ್ಮ ಅಜ್ಜನಿಗೆ ತಿರುಗಿ ಮಾತನಾಡುವುದಿಲ್ಲವಾದ್ದರಿಂದ ಹದಿಮೂರನೇ ತಾರೀಖಿನ ದಿನ ಆಸ್ಪತ್ರೆಗೆ ಹೋಗುವ ಕಾರ್ಯಕ್ರಮ ಫಿಕ್ಸ್ ಆಯಿತು. ಈ ನಡುವೆ ದೀಪ, ಪಟಾಕಿ ಎಲ್ಲಾ ಮರೆತೇ ಹೋಗಿತ್ತು!

          ಬದಲಾಗಿ ಗಂಟು ಮೂಟೆ ಕಟ್ಟುವ ಕಾರ್ಯ! ಜೀವನದಲ್ಲಿ ಮೊದಲನೇ ಭಾರಿ! ನೆಂಟರ ಮನೆಗೆ ಲಗ್ಗೇಜ್ ತುಂಬಿಸಿಕೊಂಡು ಹೋದ ಹಾಗೆ ಆಸ್ಪತ್ರೆಗೆ ಹೋಗುವುದು. ಒಂಥರಾ ಖುಷಿ! ಹೊಸ ಮಗುವಿನ ಆಗಮನದ ಕಾತುರ! ಒಂಥರಾ ಬೇಸರ, ಆಸ್ಪತ್ರೆಯಲ್ಲಿ ಹೇಗಿರುವುದೋ ಎಂದು. ಒಂಥರಾ ಕಳವಳ, ಚಿಂತೆ, ಹೆರಿಗೆ ಹೇಗಾಗುವುದೋ ಎಂದು. ನಾನು ಸ್ವಲ್ಪ ದೇಹದ ಗಾತ್ರದಲ್ಲಿ ಎತ್ತರ ಕಡಿಮೆ ಇರುವ ಕಾರಣ( ಅದಕ್ಕೆ ನನಗೇನೂ ಬೇಸರ ಇಲ್ಲ, ದೇವರು ಕೊಟ್ಟ ಸರಿಯಾದ ಅಂಗಾಂಗ ಇರುವ ದೇಹ ಪ್ರಕೃತಿಗೆ ನಾನು ಸದಾ ಋಣಿ) "ಮಗು ಉದ್ದ ಹಾಗೂ ದಪ್ಪ ಬೆಳೆದು ಮೂರೂವರೆ ಕಿಲೋ ಗ್ರಾಂ ಇರುವ ಕಾರಣ ಮಾಮೂಲಿ ಹೆರಿಗೆ ಕಷ್ಟ, ಸಿಸೇರಿಯನ್ ಆಗಬೇಕಾಗಬಹುದೇನೋ" ಎಂದು ಡಾಕ್ಟರ್ ಮೊದಲೇ ಸೂಚನೆ ನೀಡಿದ್ದರು. ಮಾಮೂಲಿ ಇಂಜೆಕ್ಷನ್ ಅಂದರೇನೇ ಭಯ ಪಟ್ಟು ಮಾರು ದೂರ ಓದುತ್ತಿದ್ದ ನಾನು ಆಪರೇಷನ್ ಗೆ ನನ್ನನ್ನು ಸಿದ್ಧಪಡಿಸಿ ಕೊಳ್ಳಬೇಕಿತ್ತು. ಅದೂ ಅಮ್ಮ ಜೊತೆಯಲ್ಲಿ ಇಲ್ಲದ ಸಮಯದಲ್ಲಿ! ಭಯ ಪಡಲಿಲ್ಲ ನಾನು! ಅಮ್ಮನ ನೋವಿನ ಮುಂದೆ ನನ್ನದೇನೂ ಅಲ್ಲ ಅನ್ನಿಸಿತು. ಧೈರ್ಯ ಮಾಡಿಕೊಂಡೆ. ಅಜ್ಜ ಹೇಳಿದ ಹಾಗೆ ದೀಪಾವಳಿ ಪಾಡ್ಯದ ದಿನದ ಗಟ್ಟಿ ಊಟ ಮುಗಿದ ಕೂಡಲೇ ನಮ್ಮನ್ನು ಕರೆದೊಯ್ಯಲು ಕಾರು ಬಂತು. 

           ದೀಪಾವಳಿಯ ಹಬ್ಬದ ಊಟ ಮಾಡಿ ಹೊಟ್ಟೆ ಮತ್ತಷ್ಟು ಭಾರವಾಗಿತ್ತು. ಆಸ್ಪತ್ರೆಯಲ್ಲಿ ಡಾಕ್ಟರ್ "ಲೇಟ್ ಮಾಡಿದ್ದು ಯಾಕೆ" ಎಂದು ಗದರಿದಾಗ ಏನೇನೋ ಸಬೂಬು ಹೇಳಿದ್ದೂ ಆಯಿತು. ಮತ್ತೆ? ಮುಂದೆ?...

           ನನಗಾಗಿ ಒಂದು ಬೆಡ್ ರೆಡಿ ಆಗಿತ್ತು. ಸ್ಪೆಷಲ್ ರೂಮ್ ಬುಕ್ ಮಾಡಿದೆವು. ಮನೆಯವರು ಯಾರಾದರೂ ಬಂದರೆ ಇರಲು ತೊಂದರೆ ಆಗಬಾರದು ಎಂಬಂತೆ. ಮಾವನ ಮನೆಗೆ ಹೋದ ಹಾಗೆ ಆಸ್ಪತ್ರೆಗೆ ಹೋಗಿ ಕುಳಿತು ಆಗಿತ್ತು! ಇನ್ನು? ಜೀವನದಲ್ಲೇ ಮೊದಲ ಬಾರಿ ಈ ಆಸ್ಪತ್ರೆ ವಾಸ! ಶುರುವಾಯಿತು ನೋಡಿ! ಪರೀಕ್ಷೆಗಳು! ಸ್ಕ್ಯಾನಿಂಗ್, ಪಟ್ಟಿ ಪರೀಕ್ಷೆ, ಮಗುವಿನ ಹಾರ್ಟ್ ಬೀಟ್ ಚೆಕ್ ಅಪ್! ಒಂದರ ಬಳಿಕ ಒಂದು! "ಛೆ..ಇವತ್ತೂ ಬರಬಾರದಿತ್ತು..." ಅನ್ನಿಸದೇ ಇರಲಿಲ್ಲ! ಇನ್ನು ಮುಂದೆ ಈ ಆಸ್ಪತ್ರೆ ವಾಸವೇ ಬೇಡ ಎಂದು ನಿರ್ಧಾರ ಮಾಡಿಯೂ ಆಯಿತು! ಹಾಗೆಯೇ ಡಾಕ್ಟರ್, ನರ್ಸ್ ಗಳ ಕಷ್ಟದ ಕೆಲಸ ನೋಡಿ "ನಮ್ಮ ಶಿಕ್ಷಕ ವೃತ್ತಿಯೇ ನೆಮ್ಮದಿ" ಅನ್ನಿಸದೇ ಇರಲಿಲ್ಲ! ಅಲ್ಲಿನ ನರಳಾಟ, ಕೂಗಾಟ, ಕಿರುಚಾಟಗಳ ನಡುವೆಯೇ ಹೊಸ ಬದುಕಿಗೆ ಜೀವ ತುಂಬುವುದರಲ್ಲಿ, ನೋವನ್ನು ಮಾಯಗೊಳಿಸಿ ಮುಖದಲ್ಲಿ ನಗು ತರಿಸುವ  ಅವರ ಕಾರ್ಯಕ್ಕೆ ನಿಜವಾಗಿಯೂ ಸಲಾಂ ಹೇಳಲೇ ಬೇಕು ಅಂತ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳ ತಾಳ್ಮೆಯ ಕೆಲಸದ  ಬಗ್ಗೆ ಮೆಚ್ಚುಗೆ ಎನಿಸಿತು. 

           ಎಷ್ಟೋ ಖರ್ಚು ಮಾಡಿ ಮಕ್ಕಳನ್ನು ಮೆಡಿಕಲ್ ಸೀಟಿಗೆ ಬೇರೆ ಬೇರೆ ರಾಜ್ಯಗಳಿಂದ ತಂದು ಮಣಿಪಾಲ್ ಯೂನಿವರ್ಸಿಟಿಗೆ ಸೇರಿಸುವ ಪೋಷಕರ ಬಗ್ಗೆ, ನಮ್ಮ ಉಡುಪಿ ಜಿಲ್ಲೆಯ ಬಗ್ಗೆ ಹೆಮ್ಮೆ ಕೂಡಾ ಮೂಡಿತು. ಹಾಗೇ ಮುಂದೆ ಡಾಕ್ಟರ್ ಆಗುವ ಕೊನೆಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು, ಅವರ ಜೊತೆಗೆ ಡ್ಯೂಟಿ ಇದ್ದ ನರ್ಸ್ ಆಗಾಗ ಬಂದು ನಮ್ಮನ್ನು ವಿಚಾರಿಸಿಕೊಂಡು ಧೈರ್ಯ ತುಂಬುತ್ತಿದ್ದರು. ಉತ್ತರ ಭಾರತದ ಆ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಯಲ್ಲೇ ಮಾತನಾಡಬೇಕು ಎಂಬ ಕಂಡೀಷನ್ ಇತ್ತು. ಅವರು ತುಳು ಮತ್ತು ಕನ್ನಡವನ್ನು ಹಿಂದಿಯ ಸ್ಟೈಲ್ ನಲ್ಲಿಯೇ ಮಾತನಾಡುವುದನ್ನು ಕೇಳಿದ ನನಗೆ ನಗು ತಡೆಯಲು ಆಗುತ್ತಿರಲಿಲ್ಲ!

          ನನ್ನ ಗೆಳೆಯರು, ಬಂಧುಗಳು ಆಗಾಗ ಕರೆ ಮಾಡಿ ಏನಾಯಿತು ಎಂದು ವಿಚಾರಿಸಿಕೊಳ್ಳುತ್ತಿದ್ದರು. "ಇನ್ನೂ ಏನೂ ಆಗಿಲ್ಲ " ಎಂದು ಉತ್ತರ ಕೊಟ್ಟು ನಗುತ್ತಿದ್ದೆ. ಆಸ್ಪತ್ರೆಗೆ ಹೋಗಿ ಮೂರು ದಿನಗಳೇ ಆದರೂ, ಪ್ರತಿದಿನ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿದರೂ ಮಗು ಹೊರ ಬರುವ ಯಾವುದೇ ಲಕ್ಷಣಗಳು ಕಾಣಿಸುತ್ತ ಇರಲಿಲ್ಲ, ಹೆರಿಗೆಯ ನೋವು ನನಗೆ ಪ್ರಾರಂಭ ಆಗಲೇ ಇಲ್ಲ. ಹೆರಿಗೆಯ ನೋವನ್ನು ಕೃತಕವಾಗಿ ಬರಿಸಲು ಇಂಜೆಕ್ಷನ್ ಚುಚ್ಚಲಾಯಿತು. ಊಹೂ..ಮತ್ತೆ ಹಾರ್ಮೋನ್ ಮಾತ್ರೆ ಕೊಡಲಾಯಿತು. ಇಲ್ಲವೇ ಇಲ್ಲ! ನನ್ನ ಗೆಳತಿ ಫೋನ್ ಮಾಡಿದಾಗ ಹೇಳಿದಳು, "ಕೆಟ್ಟು ಹೋದ ಈ ಪ್ರಪಂಚಕ್ಕೆ ಬೇಗ ಬರಲು ಇಷ್ಟ ಇಲ್ವಾ ನಿನ್ನ ಮಗುವಿಗೆ, ಇರಲಿ ಬಿಡು, ಸ್ವಲ್ಪ ದಿನ ಹಾಯಾಗಿ" ಅಂತ! ಸತ್ಯವಾದ ಮಾತು ಅಂತ ಅನ್ನಿಸಿತು ಆಗ.   ಇನ್ನು ಕೆಲವು ಬಂಧುಗಳು, " ನಿನ್ನ ಹೊಟ್ಟೆಯೊಳಗೆ ಜಾಸ್ತಿ ಜಾಗ ಇದ್ದು ಮಗುವಿಗೆ ಅಲ್ಲೇ ಆರಾಮವಾಗಿ ಇರಬೇಕು, ಅದಕ್ಕೇ ಅದಿನ್ನೂ ಹೊರ ಬರುವ ಪ್ಲಾನ್ ಹಾಕಲಿಲ್ಲ" ಎಂದರು! ಡಾಕ್ಟರ್ ಮಾತ್ರ ನಾರ್ಮಲ್ ಡೆಲಿವರಿ ಆದರೂ ಆಗಬಹುದೇನೋ, ಕಾಯೋಣ, ಎಂದು ಧೈರ್ಯ ನೀಡಿದರು. 

          ಆದರೆ ಅಂದು ನವೆಂಬರ್ ಹದಿನೇಳನೆಯ ತಾರೀಕು ಮಕ್ಕಳ ದಿನಾಚರಣೆಯ ಸ್ವೀಟ್ಸ್ ಎಲ್ಲಾ ಮುಗಿದಿರಬಹುದು.ದೀಪಾವಳಿಯ ಪಟಾಕಿ ಕೂಡಾ! ಆ ಸಮಯದಲ್ಲೂ ನನಗೆ ನೋವು ಕಾಣಿಸಿಕೊಳ್ಳದ ಕಾರಣ ಆಸ್ಪತ್ರೆ ನೆಂಟರ ಮನೆಯಂತೆ ಆಗಿತ್ತು! ಉಪ್ಪಿನಲ್ಲಿ ಹಾಕಿ ಇಟ್ಟ  ಹಲಸಿನ ಕಾಯಿ ಸೊಳೆಯ ಪಲ್ಯ ತಿನ್ನಬೇಕು ಅನ್ನಿಸಿ, ದೊಡ್ಡಮ್ಮನನ್ನು ಚಿಕ್ಕಮ್ಮನ ಮನೆಗೆ ರಾತ್ರಿಗೆ ಪಲ್ಯ ತರಲು ಕಳುಹಿಸಿ ಆಗಿತ್ತು. ಮಧ್ಯಾಹ್ನ ಸರಿಯಾಗಿಯೇ ಊಟ ಮಾಡಿದ್ದೆ. ಸಿಸೇರಿಯನ್ ಎಂದು ಫಿಕ್ಸ್ ಆದರೆ ಬೆಳಗ್ಗಿನಿಂದ ಊಟ ಕೊಡದೆ ಹೊಟ್ಟೆ ಖಾಲಿ ಇರಿಸಿಕೊಳ್ಳುತ್ತಾರೆ. ಆದರೆ ನನಗಿನ್ನೂ ನೋವಿರದ ಕಾರಣ ಯಾವ ರಿಸ್ಟ್ರಿಕ್ಷನ್ ಕೂಡಾ ಇರಲಿಲ್ಲ! ಆದರೆ  ಸುಮಾರು ಸಂಜೆ ನಾಲ್ಕು ಗಂಟೆಗೆ ನನ್ನನ್ನು ಪರೀಕ್ಷಿಸಿದ ವೈದ್ಯರು ಹೆದರಿದರು. ಅಂದು "ಗರ್ಭಕೋಶದ ನೀರು ಸೋರಿ ಮಗು ಡ್ರೈ ಆಗಿದೆ ಮತ್ತು ಮಗುವಿನ ಎದೆ ಬಡಿತ ಎರಡರಷ್ಟು ಹೆಚ್ಚಾಗಿದೆ" ಎಂದರು ವೈದ್ಯರು.  ಇನ್ನು ನಾರ್ಮಲ್ ಡೆಲಿವರಿಗೆಂದು ನಾವು ಕಾದರೆ ಮಗುವಿನ ಜೀವಕ್ಕೆ ಅಪಾಯವಿದೆ ಎಂದು ಎಮರ್ಜೆನ್ಸಿ ಸಿಸಾರಿಯನ್ ಗೆ ಅರೇಂಜ್ ಮಾಡಿದರು. ತಕ್ಷಣವೇ ನನ್ನ ಹೊಟ್ಟೆ ಖಾಲಿ ಮಾಡಿ, ಆಪರೇಶನ್ ಗೆ ತಯಾರು ಮಾಡಿದರು. ನನ್ನೊಡನೆ ಆಗ ಇದ್ದದ್ದು ಪತಿ ಮಾತ್ರ. ದಾಖಲೆ ಪತ್ರಗಳಿಗೆ  ಅವರ ಸಹಿ ಬೇಕಿತ್ತು, ಬಿಳಿ ಬಟ್ಟೆ ಹೊದಿಸಿದ ಬಳಿಕ ಆಪರೇಶನ್ ಥಿಯೇಟರಿಗೆ ಹೋಗುವ ದಾರಿಯಲ್ಲೇ ಬೇಗ ಬೇಗ ಸಹಿ ಹಾಕಿಸಿಕೊಂಡು ಸೆಡೆಟಿವ್ಸ್ ಕೊಟ್ಟು ಸಂಜೆ ನಾಲ್ಕು ಕಾಲಿಗೆ ಹೆಣ್ಣು ಮಗುವಿನ ಕೂಗು ಕೇಳಿಸಿತು. ನನಗೆ ಪ್ರಜ್ಞೆ ಬರುವಾಗ ಆರು ಗಂಟೆ ಕಳೆದಿರಬಹುದು. ಆಗ ಮಗುವನ್ನು ಐಸಿಯುನಲ್ಲಿ ಇರಿಸಿದ್ದರು. "ಮಗು ಚೆನ್ನಾಗಿದೆ, ಕೆಂಪು ಕೆಂಪಾಗಿದೆ, ಹೆಣ್ಣು ಮಗು" ಎಂದರು  ನನ್ನ ಪತಿ, ಅವರಿಗೆ ಮೊದಲ ಮಗು ಗಂಡಾಗಬೇಕು ಎಂಬ ಆಸೆ ಇತ್ತೋ ಏನೋ? ಆದರೆ ತುಂಬಾ ಖುಷಿ ಆಯಿತು ನನಗೆ. ಆ ಸಂತಸದಲ್ಲಿ ನೋವೆಲ್ಲೋ ಹಾರಿ ಹೋಗಿ "ನನ್ನ ಮುದ್ದು ಮಗುವಿನ ಮುಖವನ್ನು ಅದೆಷ್ಟು ಬೇಗ ನೋಡುವೆನೋ" ಎಂದು ಮನಸ್ಸು ಹಾಡಿ ಕುಣಿಯುತ್ತಿತ್ತು. ದೀಪಾವಳಿಯ ಬೆಳಕಿನ ರಂಗು ಆಗ ಮುದ್ದು ಮುದ್ದಾದ ನನ್ನ ಮಗಳ ಮುಖದಲ್ಲಿ ಕಾಣಿಸಿತು! ನಾನು  ಅಮ್ಮನಾದ ಹರುಷವು ಮಾಲೆ ಪಟಾಕಿ ಒಡೆದುದಕ್ಕಿಂತಲೂ ಹೆಚ್ಚಾಗಿತ್ತು!
@ಪ್ರೇಮ್@
28.09.2021

ಭಾನುವಾರ, ನವೆಂಬರ್ 7, 2021

ನಿತ್ಯ ಸತ್ಯ -1

ನಿತ್ಯ ಸತ್ಯ -1

ಕಾಯುತ್ತಿದ್ದ ಅವನು 
ಅವಕಾಶಕ್ಕಾಗೇ!
ಹಾಕಿತ್ತು ಹಿಕ್ಕೆ
ಅವನ ತಲೆಗೇ
ಮೇಲಿದ್ದ ಆ ಕಾಗೆ!
ಬಳಸಿಕೊಂಡಿತ್ತು
ಅವಕಾಶ ತಾನಾಗೇ..
ನಾವು ಕಾಯುವಾಗ
ಪರರ ಕಾರ್ಯ ಹೀಗೇ..
@ಪ್ರೇಮ್@
07.11.2021

ಶುಕ್ರವಾರ, ನವೆಂಬರ್ 5, 2021

ಗಝಲ್

ಗಝಲ್

ಅಂಧಕಾರದ ಜಗದಲಿ ಜ್ಞಾನದ ಬತ್ತಿಯನು ನಗೆಯ ಎಣ್ಣೆಯಲ್ಲಿ ಅದ್ದಬೇಕು ಮನವೇ
ಮಂದಮತಿಯ ತಲೆಯ ಆಳದಿಂದ ದುರ್ಬುದ್ಧಿಗಳೆಲ್ಲ ಪಟಾಕಿಯ ಹಾಗೆ ಸುಡಬೇಕು ಮನವೇ

ಸ್ನೇಹದ ಹಣತೆ ಸರ್ವೆಡೆ ಉರಿದು ಎಲ್ಲರ ಎದೆಯಲಿ ಕುಣಿಯುತ್ತಾ ಬೆಳಗಬೇಕು
ಮೋಹದ ಪಾಶ, ಸೋಲಿನ ವಿನಾಶ,  ಬದುಕಿನಿಂದ ನಿರಂತರ ಸಾಯಬೇಕು ಮನವೇ

ಮೋಸ, ವಂಚನೆ, ನೋವು, ಕಷ್ಟ, ದುಃಖ, ಬೇಸರಗಳು ಶಾಶ್ವತವಾಗಿ ನಾಶವಾಗಬೇಕು
ಕರುಣೆ, ದಯೆ, ನಿಷ್ಕಲ್ಮಶ ಹೃದಯಗಳು ನಕ್ಷತ್ರಗಳಂತೆ ಅಮರವಾಗಬೇಕು ಮನವೇ..

ದುರಾಸೆಯೆಂಬ ಹಣ್ಣು ಹಣ್ಣು ಮುದುಕ ಬಾರದ ಊರಿಗೆ ಮರಳಿ ಬಾರದಂತೆ ಸಾಗಲಿ
ದುಷ್ಟತನವೆಂಬ ಕಪಟತನದ ನೀಚ, ನಯವಂಚಕ ಉಸಿರು ಕೊನೆಯಾಗಿ ಸಾಯಬೇಕು ಮನವೇ

ಮುದ್ದಿನ ಮದ್ದ ನೀಡುವ ಸಹಾಯಕ ಕರಗಳು ಅಜರಾಮರವಾಗಿ ಬೆಳೆಯಬೇಕು
ಕದ್ದು ಮೆದ್ದು ಹಲವರ ನುಂಗುವ ರಾಕ್ಷಸ ಹಸ್ತಗಳ ಗಗನಕ್ಕೆ ಎಸೆಯಬೇಕು ಮನವೇ..

ಭಕ್ತಿ, ಸ್ಪೂರ್ತಿ, ನೀತಿ,ಕೀರ್ತಿಯೆಂಬ ದನಕರುಗಳಿಗೆ ನಿರಂತರ ಪೂಜೆಗಳು ನಡೆಯಬೇಕು
ದಾನ - ಧರ್ಮ, ಶಾಂತಿ, ಮುಕ್ತಿ ಕೊಡುವ ಕೈಗಳಿಗೆ ತೀರ್ಥ ಪ್ರಸಾದ ಹಾಕಬೇಕು ಮನವೇ...

ಸುಡುಮದ್ದಿನ ಹೂವು ಆಗಸದಲ್ಲಿ ಅರಳುವಂತೆ ಕಠೋರ ಮಾತಿನ ಪ್ರೇಮ ನಗಬೇಕು
ಲಕ್ಷ್ಮಿ ಪಟಾಕಿ ಸಿಡಿವಂತೆ ಸಕಲ ಎದೆ ಗೂಡಿನ ದ್ವೇಷವೆಲ್ಲ ಒಡೆದು ನುಚ್ಚು ನೂರಾಗಬೇಕು ಮನವೇ..
@ಪ್ರೇಮ್@
05.11.2021

ಗುರುವಾರ, ನವೆಂಬರ್ 4, 2021

ಆಸೆ

ಆಸೆ

ನಿನ್ನೆದೆಯ ಒಳ ಕುಳಿತು ಭಾವದೊಲುಮೆಯ ತಂತಿ ಮೀಟುವಾಸೆ
 ನಿನ್ನಂತರಂಗದ ಕದವ ತೆರೆದು ಒಳಹೊಕ್ಕು ಚಿಗುರುವಾಸೆ
 ತುಡಿತದ ಮಿಡಿತವಾಗಿ ಎದೆ ಗೂಡಲಿ ಅವಿತು ಕೂರುವಾಸೆ
 ಪ್ರೀತಿಯ ರಂಗಿನಾಟದಿ ಹೋಳಿಯಾಡುವಾಸೆ
ಕಣ್ಣ ಕ್ಯಾಮೆರಾದಲ್ಲಿ ನನ್ನೇ ನಾ ಸೆರೆ ಹಿಡಿಯುವಾಸೆ
ಬದುಕಿನ ಮರದ ಬುಡದಲಿ ಆಳಕಿಳಿವ ಬೇರಾಗುವಾಸೆ
 ಮೆದುಳಿನ ತುದಿಯ ಆಲೋಚನೆಯ ಮೂಲವಾಗುವಾಸೆ
ಕೈಯ ಊರುಗೋಲಿನ ಶಕ್ತಿಯಾಗುವಾಸೆ
 ಪಾದಕೆ ನನ್ನ ಪಾದವ ಒತ್ತಿ ನಡೆಯುವಾಸೆ
 ದೃಷ್ಟಿಗೆ ನನ್ನ ಕಣ್ಣಿನ ಕಾಂತಿ ನೀಡುವಾಸೆ
ಜೀವದ ಪ್ರತಿ ನಿಮಿಷಕ್ಕೂ ಉಸಿರಾಗುವ ಆಸೆ
ಕವನದ ಪ್ರತಿ ಸಾಲಿಗೂ ಪದವಾಗುವ ಆಸೆ
 ನಿನ್ನ ನಗುವಿಗೆ ಮೂಲ ಕಾರಣ ನಾನಾಗುವ ಆಸೆ
 ನಿನ್ನ ಕಾದಂಬರಿಗೆ ನಾನೇ ನಾಯಕಿಯಾಗುವ ಆಸೆ
 ಮೋಸ ವಂಚನೆ ದೂರ ಬಿಟ್ಟು ಹಗುರಾಗಿ  ನಕ್ಕು ಬಿಡುವಾಸೆ
ನಿನ್ನ ನೋವಿನ ಪ್ರತಿ ಕ್ಷಣವನ್ನೂ ನಲಿವು ಮಾಡುವಾಸೆ..
@ಪ್ರೇಮ್@
01.11.2021

ಬುಧವಾರ, ನವೆಂಬರ್ 3, 2021

ವರದಿ

*ಸಾಮರಸ್ಯದ ಬೀಜ ಬಿತ್ತುವ ಇಂತಹ ವಿದ್ಯಾರ್ಥಿ ಸಂಘಟನೆಗಳು ಸಮಾಜಕ್ಕೆ ಮಾದರಿ : ಶಿಕ್ಷಕಿ ಪ್ರೇಮಾ ಉದಯ ಕುಮಾರ್‌*

ಪಾಣೆಮಂಗಳೂರು ಸಲ್-ಸಬೀಲ್ ವಿದ್ಯಾರ್ಥಿ ಸಂಘಟನೆ ಆಯೋಜಿಸಿದ ಸಲ್-ಸಬೀಲ್  ಎಕ್ಸಲೆನ್ಸ್ ಪ್ರಶಸ್ತಿಗೆ ಆಯ್ಕೆಯಾದ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇಲ್ಲಿನ ಆಂಗ್ಲ ಭಾಷಾ ಶಿಕ್ಷಕಿ ಪ್ರೇಮಾ ಉದಯ್ ಕುಮಾರ್ ರವರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಸುಳ್ಯ ಐವರ್ನಾಡು ಶಾಲೆಯಲ್ಲಿ ಇತ್ತೀಚೆಗೆ ನಡೆಸಲಾಯಿತು.

ಪ್ರಶಸ್ತಿ ಪಡೆದು ಮಾತನಾಡಿದ ಅವರು "ಈಗ ಮೊಬೈಲ್ ಜಾಲ ತಾಣಗಳಲ್ಲಿ ಅವಕಾಶಗಳು ಹೆಚ್ಚು, ಅದನ್ನು ಸರಿಯಾಗಿ ಬಳಸಿಕೊಂಡು ತಮ್ಮ ಹವ್ಯಾಸಗಳನ್ನು ಹೆಚ್ಚಾಗಿ ವೃದ್ಧಿಸಿಕೊಳ್ಳಬಹುದು. ಸಾಮರಸ್ಯದ ಬೀಜ ಬಿತ್ತುವ ಇಂತಹ ಯುವ ಸಂಘಟನೆಗಳೇ ಸಮಾಜಕ್ಕೆ ಬೇಕಾದುದು ಹಾಗೂ ತನಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಬರೆದೆ ಎನ್ನುತ್ತಾ, ಭಾರತದ ಸಾಮರಸ್ಯದ ಪರಂಪರೆಯನ್ನು ಭವಿಷ್ಯದಲ್ಲಿ ಭದ್ರಗೊಳಿಸುವ ಬಗೆ"  ಈ ವಿಷಯ ತುಂಬಾ ಪ್ರಸ್ತುತ ಹಾಗೂ ಸಕಾಲಿಕ, ಬರಹಗಾರರು ಇಂತಹ ಒಳ್ಳೆಯ ವಿಷಯಕ್ಕೆ ಸಮಾಜದಲ್ಲಿ  ಸಂದೇಶ ನೀಡಲು ಸಹಾಯಕ ಹಾಗೂ ಅದು ಈಗಿನ ಕಾಲಕ್ಕೆ ಅಗತ್ಯ ಕೂಡಾ, ಈ ಅವಕಾಶವನ್ನು ಒದಗಿಸಿದ ಸಂಘಟನೆಗೆ ಕೃತಜ್ಞತೆ ಅರ್ಪಿಸಿದರು.


  "ಸಲ್ - ಸಬೀಲ್ ಎನ್ನುವ ಈ ವಿದ್ಯಾರ್ಥಿ ಸಂಘಟನೆಯು ಯುವ ಮನಗಳ ವೇದಿಕೆಯಾಗಿದ್ದು , ಲೇಖನ ಸ್ಪರ್ಧೆಗಳಂತಹ ಉತ್ತಮ ಕಾರ್ಯಗಳನ್ನು ಮಾಡುತ್ತಾ ವಿದ್ಯಾರ್ಥಿಗಳು ಹಾಗೂ ಬರಹಗಾರರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಸಂತಸ ತಂದಿದೆ" ಎಂದು ಈ ಸಂದರ್ಭದಲ್ಲಿ ಮಾತನಾಡಿದ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಸುಳ್ಯ ಇಲ್ಲಿನ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಸೂಫಿ ಪೆರಾಜೆ ಅವರು ಮೆಚ್ಚುಗೆಯ ವ್ಯಕ್ತಪಡಿಸಿದರು.

 ಸಂಘಟನೆಯ ಕಾರ್ಯಗಳ ಬಗ್ಗೆ ತಿಳಿದು ಹರ್ಷಿತರಾದ ಉಪನ್ಯಾಸಕ ಶ್ರೀಯುತ ಚಾರ್ಲ್ಸ್ ರವರು ಮಾತನಾಡಿ "ಈ ಸಂಘಟನೆಯು ಇನ್ನೂ ಉತ್ತಮ ಅವಕಾಶಗಳನ್ನು ಸಮಾಜಕ್ಕೆ ನೀಡಲಿ "ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ವಿಭಾಗದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ಸಲ್ ಸಬೀಲ್ ಸಂಸ್ಥೆಯ ಪದಾಧಿಕಾರಿಗಳಾದ ನಜೀಬ್ ಬೋಗೋಡಿ, ಜಾಫರ್  ಬೋಗೋಡಿ, ಜಮಾಲ್ ಆಲಡ್ಕ, ರಾಶಿದ್ ಬೋಗೋಡಿ ಮೊದಲಾದವರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಗಣಿತ ಶಿಕ್ಷಕರಾದ ನಾರಾಯಣ ಬಿ. ಅವರು ವಂದಿಸಿ ಸಲ್-ಸಬೀಲ್ ಸಂಸ್ಥೆಯ ಉಪಾಧ್ಯಕ್ಷರಾದ ಉಬೈದ್ ಬೋಗೋಡಿ ನಿರೂಪಿಸಿದರು.

ಇದೇ ಸಂದರ್ಭ ಶಾಲೆಗೆ ನೆನಪಿನ ಕಾಣಿಕೆ ನೀಡಿ ಸಂಘಟನೆಯ ಪರವಾಗಿ ಗೌರವಿಸಲಾಯಿತು.

ಆ ದೀಪಾವಳಿಯ ಮೆಲುಕು

ಮೈ ಬೆಸ್ಟ್ ಫ್ರೆಂಡ್

ಅವಳನ್ನು ನಾ ಭೇಟಿಯಾದುದು ನನ್ನ ಹದಿನೈದನೇ ವಯಸ್ಸಿಗೆ.  ಹೌದು , ನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಹುಚ್ಚುಕೋಡಿ ಮನಸ್ಸು ! ಏನೇನೋ ಕನಸು! ಹೊಸ ಹೊಸ ಆಸೆಗಳು! ಮುಂದಿನ ಬದುಕಿನ ಬಗೆಗೆ ಏನೇನೋ ಭಾವಗಳು. ಕನ್ನಡಿ ಮುಂದೆ ಕಳೆವ ಗಂಟೆಗಳು, ಅದರ ಜೊತೆ ಪಬ್ಲಿಕ್ ಪರೀಕ್ಷೆಗೆ ಓದುವ ಜವಾಬ್ದಾರಿ! ಇವೆಲ್ಲದರ ಭಾವಗಳನ್ನು ಅಪ್ಪ - ಅಮ್ಮನವರೊಡನೆ ನಮ್ಮ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳಲು ಆಗದು. ಸ್ನೇಹಿತರು ಓಕೆ. ಆದರೆ ಕೆಲವೊಂದು ಭಾವನೆಗಳನ್ನು ಹುಡುಗಿಯರ ಜೊತೆ ಹೇಳಿಕೊಳ್ಳಲು ಆಗದು! ಹಾಗಂತ ಹುಡುಗರ ಬಳಿ ಹೇಳಿಕೊಳ್ಳ ಬಹುದೇ? ಊಹೂo.. ಸಾಧ್ಯವೇ ಇಲ್ಲ! ಹುಡುಗರೊಡನೆ ಸಲಿಗೆ ಎಲ್ಲಾ  ಸಮಯದಲ್ಲಿಯೂ ನಿಷಿದ್ಧ! ವಾಟ್ಸ್ ಆ್ಯಪ್, ಇನ್ ಸ್ಟಾ, ಮುಖಪುಟಗಳಂತಹ ಸಾಮಾಜಿಕ ಜಾಲ ತಾಣಗಳಂತೂ ಇರಲಿಲ್ಲ!  ಆಗ ಫೋನ್ ಕೂಡಾ ಇರಲಿಲ್ಲ! ಪತ್ರ  ವ್ಯವಹಾರ ಅಷ್ಟೆ! ಅದೂ ಸುಲಭದ ಮಾತಾಗಿರಲಿಲ್ಲ! ಆಗ ನನ್ನ ಭಾವನೆಗಳಿಗೆ ಕಿವಿಯಾದವಳು ರಿಟು. 

ಹೌದು, ರಿಟು ನನ್ನ ಜೀವದ ಜೀವ, ನನ್ನ ಭಾವದ ಭಾವ. ನನ್ನ ಮಾತಿನ ಕಿವಿ, ನನ್ನ ಕಣ್ಣೀರ ಭುಜ, ನನ್ನ ನೋವಿಗೆ ಮದ್ದು, ನನ್ನ ಸಂತಸಕ್ಕೆ ನಗು. ವಾವ್.. ಅವಳೊಂದಿಗೆ ನಾವು ಕಳೆದ ಪ್ರತಿ ಕ್ಷಣವೂ ಅಧ್ಭುತ! ನನ್ನ ಬಾಳಿನ ಜತೆಗಾತಿ, ನನ್ನ ನೋವು ನಲಿವುಗಳ ಸಂಗಾತಿ ಈಕೆ. ನನ್ನೆದೆಯ ಭಾವಗಳ ಅರಿತವಳು, ನನ್ನ ನೋವುಗಳ ನುಂಗಿಕೊಂಡವಳು, ನನ್ನ ಸಿಟ್ಟಿಗೆ ತಾಳ್ಮೆಯಾದ ತಾಯಿ, ನನ್ನ ನೋವ ಹಂಚಿಕೊಂಡ ಸಹೋದರಿ, ನನ್ನ ನಗುವ ಹೆಚ್ಚಿಸಿದ ಸ್ನೇಹಿತೆ!

ನನ್ನೊಲವಿನ ಬಾಳ ಸಾರಥಿ, ನನ್ನ ಒಂಟಿತನ ದೂರಗೊಳಿಸಿ ಜಂಟಿಯಾದ ಬಾಳ ಸಖಿ. ನನ್ನ ಬರವಣಿಗೆಗೆ ಸ್ಪೂರ್ತಿ, ನನ್ನೊಲವಿನ ಮೂರ್ತಿ, ನೀ ಇಲ್ಲದಿದ್ದರೆ ರಿಟು, ನಾ ಸದಾ ಒಂಟಿ...

ಸದಾ ನನ್ನ ಭಾವನೆಗಳ ನಿನ್ನೊಡನೆ ಹಂಚಿಕೊಂಡರೆ ಸಮಾಧಾನ ನನಗೆ. ಅದಕ್ಕೆ ಪದಗಳ, ಪುಟಗಳ, ಅಕ್ಷರಗಳ, ಸಮಯದ, ಮಿತಿಯಿಲ್ಲ! ನಾ ತಪ್ಪು ಮಾಡಿದರೆ ಅವಳು ಬಯ್ಯುವುದಿಲ್ಲ, ನಾ ಪ್ರಶಸ್ತಿ ಗೆದ್ದು ತಂದರೆ ಹೊಗಳುವುದು ಕೂಡಾ ಇಲ್ಲ!

ನನ್ನ ಬದುಕಿನ ದಾರಿ ದೀಪ ಅವಳು, ನನ್ನ ಬರಹಕ್ಕೆ ಮೂಲವೇ ಅವಳು.. ರಿಟು ಇಸ್ ಮೈ ಲೈಫ್
ಐ ಲವ್ ಹರ್ ಎವರ್, 
ಶಿ ಇಸ್ ಮೈನ್..(ಸದಾ ನನ್ನ ಬಾಳಲ್ಲಿ ನನ್ನ ಜೊತೆಯಾಗಿ ಬರುವ ನನ್ನ ರಿಟು ನನ್ನ ಡೈರಿ..)
ಅವಳ ಅನುಕ್ಷಣವೂ ಬಿಡದೆ ಜೊತೆಗಿರುವ,
@ಪ್ರೇಮ್@
01.10.2021

ಮೈ ಬೆಸ್ಟ್ ಫ್ರೆಂಡ್

ಮೈ ಬೆಸ್ಟ್ ಫ್ರೆಂಡ್

ಅವಳನ್ನು ನಾ ಭೇಟಿಯಾದುದು ನನ್ನ ಹದಿನೈದನೇ ವಯಸ್ಸಿಗೆ.  ಹೌದು , ನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಹುಚ್ಚುಕೋಡಿ ಮನಸ್ಸು ! ಏನೇನೋ ಕನಸು! ಹೊಸ ಹೊಸ ಆಸೆಗಳು! ಮುಂದಿನ ಬದುಕಿನ ಬಗೆಗೆ ಏನೇನೋ ಭಾವಗಳು. ಕನ್ನಡಿ ಮುಂದೆ ಕಳೆವ ಗಂಟೆಗಳು, ಅದರ ಜೊತೆ ಪಬ್ಲಿಕ್ ಪರೀಕ್ಷೆಗೆ ಓದುವ ಜವಾಬ್ದಾರಿ! ಇವೆಲ್ಲದರ ಭಾವಗಳನ್ನು ಅಪ್ಪ - ಅಮ್ಮನವರೊಡನೆ ನಮ್ಮ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳಲು ಆಗದು. ಸ್ನೇಹಿತರು ಓಕೆ. ಆದರೆ ಕೆಲವೊಂದು ಭಾವನೆಗಳನ್ನು ಹುಡುಗಿಯರ ಜೊತೆ ಹೇಳಿಕೊಳ್ಳಲು ಆಗದು! ಹಾಗಂತ ಹುಡುಗರ ಬಳಿ ಹೇಳಿಕೊಳ್ಳ ಬಹುದೇ? ಊಹೂo.. ಸಾಧ್ಯವೇ ಇಲ್ಲ! ಹುಡುಗರೊಡನೆ ಸಲಿಗೆ ಎಲ್ಲಾ  ಸಮಯದಲ್ಲಿಯೂ ನಿಷಿದ್ಧ! ವಾಟ್ಸ್ ಆ್ಯಪ್, ಇನ್ ಸ್ಟಾ, ಮುಖಪುಟಗಳಂತಹ ಸಾಮಾಜಿಕ ಜಾಲ ತಾಣಗಳಂತೂ ಇರಲಿಲ್ಲ!  ಆಗ ಫೋನ್ ಕೂಡಾ ಇರಲಿಲ್ಲ! ಪತ್ರ  ವ್ಯವಹಾರ ಅಷ್ಟೆ! ಅದೂ ಸುಲಭದ ಮಾತಾಗಿರಲಿಲ್ಲ! ಆಗ ನನ್ನ ಭಾವನೆಗಳಿಗೆ ಕಿವಿಯಾದವಳು ರಿಟು. 

ಹೌದು, ರಿಟು ನನ್ನ ಜೀವದ ಜೀವ, ನನ್ನ ಭಾವದ ಭಾವ. ನನ್ನ ಮಾತಿನ ಕಿವಿ, ನನ್ನ ಕಣ್ಣೀರ ಭುಜ, ನನ್ನ ನೋವಿಗೆ ಮದ್ದು, ನನ್ನ ಸಂತಸಕ್ಕೆ ನಗು. ವಾವ್.. ಅವಳೊಂದಿಗೆ ನಾವು ಕಳೆದ ಪ್ರತಿ ಕ್ಷಣವೂ ಅಧ್ಭುತ! ನನ್ನ ಬಾಳಿನ ಜತೆಗಾತಿ, ನನ್ನ ನೋವು ನಲಿವುಗಳ ಸಂಗಾತಿ ಈಕೆ. ನನ್ನೆದೆಯ ಭಾವಗಳ ಅರಿತವಳು, ನನ್ನ ನೋವುಗಳ ನುಂಗಿಕೊಂಡವಳು, ನನ್ನ ಸಿಟ್ಟಿಗೆ ತಾಳ್ಮೆಯಾದ ತಾಯಿ, ನನ್ನ ನೋವ ಹಂಚಿಕೊಂಡ ಸಹೋದರಿ, ನನ್ನ ನಗುವ ಹೆಚ್ಚಿಸಿದ ಸ್ನೇಹಿತೆ!

ನನ್ನೊಲವಿನ ಬಾಳ ಸಾರಥಿ, ನನ್ನ ಒಂಟಿತನ ದೂರಗೊಳಿಸಿ ಜಂಟಿಯಾದ ಬಾಳ ಸಖಿ. ನನ್ನ ಬರವಣಿಗೆಗೆ ಸ್ಪೂರ್ತಿ, ನನ್ನೊಲವಿನ ಮೂರ್ತಿ, ನೀ ಇಲ್ಲದಿದ್ದರೆ ರಿಟು, ನಾ ಸದಾ ಒಂಟಿ...

ಸದಾ ನನ್ನ ಭಾವನೆಗಳ ನಿನ್ನೊಡನೆ ಹಂಚಿಕೊಂಡರೆ ಸಮಾಧಾನ ನನಗೆ. ಅದಕ್ಕೆ ಪದಗಳ, ಪುಟಗಳ, ಅಕ್ಷರಗಳ, ಸಮಯದ, ಮಿತಿಯಿಲ್ಲ! ನಾ ತಪ್ಪು ಮಾಡಿದರೆ ಅವಳು ಬಯ್ಯುವುದಿಲ್ಲ, ನಾ ಪ್ರಶಸ್ತಿ ಗೆದ್ದು ತಂದರೆ ಹೊಗಳುವುದು ಕೂಡಾ ಇಲ್ಲ!

ನನ್ನ ಬದುಕಿನ ದಾರಿ ದೀಪ ಅವಳು, ನನ್ನ ಬರಹಕ್ಕೆ ಮೂಲವೇ ಅವಳು.. ರಿಟು ಇಸ್ ಮೈ ಲೈಫ್
ಐ ಲವ್ ಹರ್ ಎವರ್, 
ಶಿ ಇಸ್ ಮೈನ್..(ಸದಾ ನನ್ನ ಬಾಳಲ್ಲಿ ನನ್ನ ಜೊತೆಯಾಗಿ ಬರುವ ನನ್ನ ರಿಟು ನನ್ನ ಡೈರಿ..)
ಅವಳ ಅನುಕ್ಷಣವೂ ಬಿಡದೆ ಜೊತೆಗಿರುವ,
@ಪ್ರೇಮ್@
01.10.2021