ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -156
ಇಂದು ಕನ್ನಡ ಸಾಹಿತ್ಯವೇನೂ ಮೂಲೆಗುಂಪಾಗಿ ಉಳಿದಿಲ್ಲ. ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ ಆದರೂ ಕನ್ನಡದಲ್ಲಿ ಬರೆಯುವವರ ಸಂಖ್ಯೆ ಖಂಡಿತಾ ಹೆಚ್ಚಿದೆ. ಸಾಮಾಜಿಕ ಜಾಲ ತಾಣಗಳು, ಪ್ರತಿಲಿಪಿ, ಬ್ಲಾಗರ್, ಕೂ, ವಾಟ್ಸ್ ಆ್ಯಪ್, ಮುಖ ಪುಟ, ಇನ್ ಸ್ಟಾ ಎಲ್ಲಾ ಆ್ಯಪ್ ಗಳಲ್ಲಿಯೂ ಗೂಗಲ್ ನಲ್ಲಿಯೂ ನಾವು ಕನ್ನಡ ಬರಹ, ಕವನ ಕೋಟ್ ಗಳನ್ನು, ಸಂದೇಶಗಳನ್ನು ಕಾಣಬಹುದು. ಹಾಗೆಯೇ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಕವನ, ಕಾದಂಬರಿ, ನೀಳ್ಗತೆ, ಕಥನ ಕವನ, ಅಲಂಕಾರಗಳು, ಛಂದಸ್ಸಿನ ಬಳಕೆ, ಹನಿಗವನ, ಮಿನಿ ಕತೆ, ಹಾಯ್ಕು, ಚುಟುಕು, ಷಟ್ಪದಿ, ಟಂಕಾ , ಗಝಲ್, ಮುಕ್ತಕ.. ಹೀಗೆ ಎಲ್ಲವೂ ಬಳಕೆಯಲ್ಲಿವೆ. ಹಾಗಾಗಿ ಪ್ರತಿ ದಿನ ಲಕ್ಷಕ್ಕಿಂತಲೂ ಹೆಚ್ಚಿನ ಬರವಣಿಗೆಗಳು ಕನ್ನಡದಲ್ಲಿ ಬಿತ್ತರವಾಗುತ್ತಿವೆ.
ಭಿನ್ನತೆ ಏನೆಂದರೆ ಹಿಂದಿನ ಕಾಲದಲ್ಲಿ ಬರವಣಿಗೆ ಓದನ್ನು ಅವಲಂಬಿಸಿ ಇತ್ತು. ಕಿರಿಯ ಸಾಹಿತಿಗಳು ಹಿರಿಯ ಸಾಹಿತಿಗಳನ್ನು ಓದುತ್ತಿದ್ದರು, ಅವರ ಕವನಗಳನ್ನು ಕೇಳುತ್ತಿದ್ದರು. ಇಂದು ಓದುಗರು ಇಲ್ಲ ಎಂದಲ್ಲ. ನಮಗೆ ಬೇಕಾದುದನ್ನು ಕೈಯಲ್ಲಿ ಇರುವ ಮೊಬೈಲ್ ನಿಂದ ಸುಲಭವಾಗಿ ಪಡೆಯಬಹುದು ಎಂದಾಗುವಾಗ ಐದಾರು ಕಿಲೋ ಮೀಟರ್ ದೂರ ಇರುವ ವಾಚನಾಲಯ ಹುಡುಕಿಕೊಂಡು ಯಾರು ಹೋಗ್ತಾರೆ? ಮೊಬೈಲ್ ಆನ್ಲೈನ್ ಓದುಗರು ಹೆಚ್ಚಾಗಿದ್ದಾರೆ. ಆನ್ಲೈನ್ ಲೈಬ್ರರಿ ಇದೆ, ಗೂಗಲ್ ಇದೆ, ಬೇರೆ ಬೇರೆ ಭಾಷೆಯ ಸಾಹಿತ್ಯವನ್ನು ಕನ್ನಡಕ್ಕೆ ಬದಲಾಯಿಸಿ ಕೊಡುತ್ತದೆ. ಹೊಸ ಹೊಸ ಶಬ್ದ ಪ್ರಯೋಗ, ಶೈಲಿ ಪ್ರಯೋಗ ಮಾಡಬಹುದಾಗಿದೆ. ಹಾಗಾಗಿ ಇಂದು ಯುವ ಜನತೆಯಲ್ಲಿ ಪುಸ್ತಕ ಓದುವ ಹವ್ಯಾಸ ಮೊದಲಿನವರಿಗಿಂತ ಭಾರತದಲ್ಲಿ ಕಡಿಮೆ ಆಗಿದೆ.
ಹಾಗಾಗಿ ಬಂದ ಸಾಹಿತ್ಯದಲ್ಲಿ ಅನುಭವಗಳು ಹೆಚ್ಚಾಗಿವೆ, ಪದ ಸಂಪತ್ತು ಕಡಿಮೆಯಾಗಿವೆ, ಗಟ್ಟಿತನ ಕಡಿಮೆಯಾಗಿ, ಟೊಳ್ಳುತನ ಹೆಚ್ಚಾಗಿದೆ. ಹಿಂದಿನ ಸಾಹಿತಿಗಳೂ ಬರೆದ ಎಲ್ಲವನ್ನೂ ನಾವು ನೆನಪಿಡಲಾರೆವು. ಆದರೆ ಗಟ್ಟಿತನ ಇತ್ತು. ಕವಿಗಳ ಸoಖ್ಯೆ ಕಡಿಮೆ ಇತ್ತು. ಇಂದು ಕವಿಗಳು ಎನ್ನುವ ಪದಕ್ಕೆ ಬೆಲೆ ಇಲ್ಲದಂತೆ ಆಗಿದೆ. ಕಾರಣ ಸಾಮಾಜಿಕ ಜಾಲ ತಾಣದಲ್ಲಿ ಸಿಗುವ ಹತ್ತಾರು ಕವಿಗಳ ಎರಡೆರಡು ಸಾಲನ್ನು ಕದ್ದು ತಾನು ಕವಿ ಅಂದುಕೊಂಡು ಮೆರೆಯುತ್ತಿರುವ ಅದೆಷ್ಟೋ ಜನರಿದ್ದಾರೆ. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು, ಒಂದು ಕವನ ಬರೆದು ಅದನ್ನೇ ಹಲವಾರು ಕವಿ ಗೋಷ್ಠಿಗಳಲ್ಲಿ ಓದಿ ಕವಿಗೋಷ್ಠಿಯ ಅಧ್ಯಕ್ಷರಾದವರೂ ಇದ್ದಾರೆ. ಹಾಗೆಯೇ ಕುವೆಂಪು, ಬೇಂದ್ರೆ, ಗೋಕಾಕ ಹೀಗೆ ಹಿರಿಯ ಕವಿಗಳ ಪುಸ್ತಕಗಳನ್ನು ಅರೆದು ಕುಡಿದವರು ಕೂಡಾ ಇದ್ದಾರೆ. ಎಲ್ಲಾ ಷಟ್ಪದಿಗಳಲ್ಲಿ ಕವನ, ಕಾವ್ಯ ಬರೆದು ಎಲ್ಲೂ ಗುರುತಿಸಿಕೊಳ್ಳದ ಮಹಾನುಭಾವರು ಇದ್ದಾರೆ, ಹಾಗೆಯೇ ಯಾರೋ ಬರೆದು ಕೊಟ್ಟ ಒಂದು ಕವನವನ್ನು ಹಿಡಿದುಕೊಂಡು ಇಡೀ ರಾಜ್ಯದಲ್ಲಿ ಐವತ್ತು ಕವಿಗೋಷ್ಠಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಯುವ ಕವಿಗಳೂ ಇದ್ದಾರೆ.
ಕನ್ನಡ ಉಳಿಯಲು, ಬೆಳೆಯಲು ಯುವ ಕವಿ ಮನಸ್ಸುಗಳು ಅಗತ್ಯ, ಆದರೆ ತಮ್ಮ ಕವನ ಮಾತ್ರ ಓದಿ ಕಾಲು ಕೀಳುವುದು ತಪ್ಪು, ಇತರರ ಕವನಗಳಿಗೂ ಕಿವಿಯಾಗಬೇಕು. ಹಲವು ಕಡೆ, ಅದರಲ್ಲೂ ಹೆಚ್ಚಾಗಿ ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಉತ್ತಮ ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಿವೆ. ಕನ್ನಡ ಕೃಷಿ ಅಲ್ಲಿ ತುಂಬಾ ಚೆನ್ನಾಗಿ ಸಾಗಿದೆ. ಎಲ್ಲಾ ಕವಿ ಮನಸುಗಳೂ ಪರಸ್ಪರ ಗೌರವಿಸಿ, ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾರೆ. ಆದರೆ ಕೆಲವು ಕಡೆ ತಾನೇ ಮೇಲಿರಬೇಕು ಎಂಬ ಅಹಂ ಕಾಣ ಸಿಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಕ್ಕೆ ಎಲ್ಲರೂ ಇಂದು ಕಾದು ಕುಳಿತಿಲ್ಲ. ಕಾರಣ ಅಲ್ಲಿ ಸಿಗುವ ಅವಕಾಶ ಕಡಿಮೆ. ಹಾಗಾಗಿ ತಮ್ಮ ತಮ್ಮ ಪುಸ್ತಕ ಬಿಡುಗಡೆ ಮಾಡುವಾಗ ವಿವಿಧ ಕವಿಗಳು ತಾವೇ ಕವಿಗೋಷ್ಠಿ, ಪ್ರಶಸ್ತಿ ಪ್ರಧಾನ, ಸಂಘಟನೆ ಮಾಡಿ ಅಲ್ಲಿ ಹಲವಾರು ಯುವ ಕವಿಗಳನ್ನು ಪ್ರೋತ್ಸಾಹಿಸುತ್ತಾರೆ. ಹಣ ಇರುವವರಿಗೆ ಅದು ಒಂದು ಪ್ರಶಸ್ತಿಯ ವೇದಿಕೆ ಕೂಡಾ ಆಗುತ್ತದೆ. ಇನ್ನೂ ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಕವಿಗಳ ಸಾವಿರಾರು ಗುಂಪುಗಳಿವೆ. ಅದರಲ್ಲಿ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರು ಎಲ್ಲಾ ಸೇರಿ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತಾರೆ. ಕೆಲವು ಗುಂಪುಗಳ ಮನೆ ಮನೆ ಕವಿಗೋಷ್ಠಿ (ಹಾಸನ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿದೆ) , ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕಿನ ತಿಂಗಳ ಕಾರ್ಯಕ್ರಮ, ಪುತ್ತೂರಿನಲ್ಲಿ ನಡೆಯುವ ಹಳ್ಳಿ ಹಳ್ಳಿ, ಗ್ರಾಮ ಗ್ರಾಮಗಳಲ್ಲಿ ಕಾರ್ಯಕ್ರಮ, ಸುಳ್ಯದಲ್ಲಿ ನಡೆಯುವ ಶಿಕ್ಷಕರ ಕವಿಗೋಷ್ಠಿ, ಉತ್ತರ ಕರ್ನಾಟಕದಲ್ಲಿನ ಗಝಲ್ ಗೋಷ್ಠಿಗಳು, ಚುಟುಕು ಗೋಷ್ಠಿಗಳು, ಇಂದು ಸಾಹಿತಿ ಹಾಗೂ ಕವಿಗಳಿಗೆ ಉತ್ತೇಜನ ನೀಡುತ್ತಿವೆ.
ಮುಕ್ತವಾಗಿ ಬರೆಯುವ ಮುಕ್ತ ಛಂದಸ್ಸು ಒಂದೆಡೆ, ಮಾಡರ್ನ್ ಕವನಗಳು, ಅಲ್ಟ್ರಾ ಮಾಡರ್ನ್ ಕವನಗಳು, ಭಕ್ತಿ ಸಾಹಿತ್ಯ, ವಿಮರ್ಶೆಗಳು, ದಶಕಗಳು, ಹನಿಗವನ, ನ್ಯಾನೋ ಕತೆ ಯಾವ ವಿಷಯದಲ್ಲಿ ಯುವ ಜನತೆ ಹಿಂದೆ ಬಿದ್ದಿದೆ ಹೇಳಿ? ಕಟ್ಟೆ ಒಡೆದು ಹರಿಯುವ ನದಿಗೆ ದಾರಿ ಬೇಕಾಗಿದೆ ಅಷ್ಟೇ.ಆ ದಾರಿಯನ್ನು ಹಿರಿಯ ಕವಿಗಳು ತೋರಿಸಿ ಕೊಟ್ಟಿದ್ದಾರೆ. ಅವಕಾಶ ಸಿಕ್ಕಿದಾಗ ಬಳಸಿಕೊಳ್ಳುವ ತಾಳ್ಮೆ, ಸಹನೆ, ಇತರರನ್ನು ಬೆಳೆಸುವ ಗುಣ ಯುವ ಕವಿಗಳಲ್ಲೂ ಬೇಕು, ಕೆಲವರಲ್ಲಿ ಇದೆ ಕೂಡಾ. ಒಟ್ಟಿನಲ್ಲಿ ಯುವ ಜನತೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿದಿರುವಾಗ ಕನ್ನಡವನ್ನು ಮರೆಯುವರೇ?
ಯುವ ಜನತೆ ಸಾಮಾಜಿಕ ಜಾಲ ತಾಣಗಳಿಗೆ ತಮ್ಮ ಸಮಯ ಮೀಸಲಿಟ್ಟು ಕೆಲಸ ಮರೆತಿರುವುದು ಒಂದು ಕಡೆ ಆದರೆ ಹಲವಾರು ಯುವ ಕವಿಗಳು ಕನ್ನಡದ ಸೇವೆಗೆ ಕಾಲಿಟ್ಟಿರುವುದು ಸಂತಸದ ಸಂಗತಿ. ಪ್ರತಿನಿತ್ಯ ಹಲವಾರು ಹೊಸ ಕವಿಗಳಿಗೆ ಪ್ರೋತ್ಸಾಹ ನೀಡಿ, ಅವರ ಕವನಗಳ ವಿಮರ್ಶೆ ಮಾಡಿ, ಬೇರೆ ಬೇರೆ ಪ್ರಕಾರಗಳಲ್ಲಿ ಅವರಿಗೆ ಬರೆಯಲು ಉತ್ತೇಜನ ನೀಡಿ, ಯುವ ಕವಿಗಳನ್ನು ಬೆಳೆಸುವ ಗುಂಪುಗಳು ಹಾಗೂ ಕವಿ ಮನಗಳು ಹಲವಾರು ಇವೆ. ಕನ್ನಡ ಸಾಯದು. ಕನ್ನಡಕ್ಕೆ ಅಗಾಧತೆ ಖಂಡಿತಾ ಇದೆ.
ಯುವ ಮನಸ್ಸುಗಳು ಮತ್ತು ಕನ್ನಡ ಸಾಹಿತ್ಯದ ಬಗ್ಗೆ ನಾನು ಬರೆಯುವಾಗ ಕ್ಲಬ್ ಹೌಸ್ ಆಪ್ ನ ಬಗ್ಗೆ ಹೇಳಲೇ ಬೇಕು. ಅಲ್ಲಿ ಪ್ರತಿ ನಿತ್ಯ ಹಲವಾರು ಗುಂಪುಗಳಲ್ಲಿ ಕವಿ ಗೋಷ್ಠಿ, ವಿವಿಧ ಕವಿಗಳ ನಾಟಕ, ಕಾದಂಬರಿ, ಕವನ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳ ಓದು, ವಿಮರ್ಶೆ ನಡೆಯುತ್ತಲೇ ಇದೆ. ಯುವ ಜನತೆ ದಡ್ಡರಲ್ಲ, ಆದರೆ ಸಮಯದ ಜೊತೆ ಓಡುವವರು ಹಾಗೆ ಓಡುವಾಗ ಓದುವುದ ಮರೆಯದವರು.
ಇಂದು ಒಬ್ಬ ವ್ಯಕ್ತಿ ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವ ಕಾರಣ ಒಂದೇ ಕ್ಷೇತ್ರದಲ್ಲಿ ಹೆಚ್ಚು ನೈಪುಣ್ಯತೆ ಪಡೆಯುವುದು ಕಷ್ಟ. ಹೆಚ್ಚಿನ ಕವಿಗಳು ಪ್ರವೃತ್ತಿಯಲ್ಲಿ ಕವಿಗಳು. ವೃತ್ತಿಯಲ್ಲಿ ಕವಿಗಳಾಗಿ ಬದುಕುವುದು ಕಷ್ಟ. ಹಾಗಿದ್ದರೆ ಅವನು ಸಂಘಟಕನಾಗ ಬೇಕಾಗುತ್ತದೆ. ಅದನ್ನೂ ಮಾಡುತ್ತಿದ್ದಾರೆ. ದೂರದರ್ಶನ, ರೇಡಿಯೋಗಳಲ್ಲಿಯೂ ಯುವಜನತೆ ಹಿಂದೆ ಬಿದ್ದಿಲ್ಲ. ಪ್ರತಿ ದಿನ ಹೊಸ ಹೊಸ ಸಾಹಿತ್ಯ ಪ್ರಕಾರಗಳ ನವ ನವೀನ ಪುಸ್ತಕಗಳು ಪ್ರಕಟಣೆಗೊಂಡು ಬಿಡುಗಡೆ ಆಗುತ್ತಲೇ ಇವೆ.
ಯುವ ಜನತೆ ಸಾಹಿತ್ಯದ ಮಜಲು, ವಿಸ್ತಾರ, ಆಳ ಅರಿವನ್ನು ಅರಿತವರು ಕೂಡಾ ಇದ್ದಾರೆ. ಯಾವ ಕ್ಷೇತ್ರದಲ್ಲಿ ಕಡಿಮೆ ಹೇಳಿ ಇಂದಿನ ಓಟ? ಕರ್ನಾಟಕ ಯಾವ ವಿಭಾಗದಲ್ಲೂ ಹಿಂದೆ ಬಿದ್ದಿಲ್ಲ. ಸಾಹಿತ್ಯ ಕ್ಷೇತ್ರದಲ್ಲೂ ಅಷ್ಟೇ. ತುಳು ಸಾಹಿತ್ಯವನ್ನೂ ಯುವ ಜನತೆ ಬಿಟ್ಟು ಕೊಟ್ಟಿಲ್ಲ. ಪುಸ್ತಕಗಳು ತುಳುವಿನ ವಿವಿಧ ಪ್ರಕಾರಗಳಲ್ಲೂ ಬಿಡುಗಡೆ ಆಗುತ್ತಲೇ ಇವೆ. ಕೊಂಕಣಿ, ಬ್ಯಾರಿ ಭಾಷಾ ಸಾಹಿತ್ಯ, ಹವಿಗನ್ನಡ, ಅರೆ ಭಾಷೆ, ಗಡಿ ನಾಡುಗಳಲ್ಲಿ ಮರಾಠಿ, ತಮಿಳು, ಮಲಯಾಳಂ, ತೆಲುಗು ಸಾಹಿತ್ಯ ಕೂಡಾ ಕನ್ನಡಿಗ ಯುವ ಸಾಹಿತಿಗಳಿಂದ ಬೆಳೆಯುತ್ತಿದೆ ಎಂದ ಮೇಲೆ ಕನ್ನಡ ಸಾಹಿತ್ಯವನ್ನು ಯುವ ಮನಸ್ಸುಗಳು ಮರೆಯುವವೇ?
ಯುವ ಕವಿಗಳ ಮಾಡರ್ನ್, ಅಲ್ಟ್ರಾ ಮಾಡರ್ನ್ ಕವನಗಳು, ದಶಕಗಳು, ಚುಟುಕುಗಳು, ಮುಕ್ತ ಛಂದಸ್ಸಿನ ವಿವಿಧ ಸಾಹಿತ್ಯ ಪ್ರಕಾರಗಳು, ಉರ್ದುವಿನಿಂದ ಬಂದ ಗಝಲ್, ಶಾಯರಿಗಳು, ಮುಕ್ತಕಗಳ ಸಾಲುಗಳು, ಹೊಸ ಹೊಸ ಪ್ರಯೋಗಗಳು ಎಷ್ಟು ಚೆನ್ನಾಗಿ ಮೂಡಿ ಬರುತ್ತಿವೆಯೋ, ಹಿರಿಯರಿಂದಲೂ ಕೇಳಿ ಯುವ ಮನಸ್ಸುಗಳು ಜ್ಞಾನ ಪಡೆದುಕೊಳ್ಳುತ್ತಿವೆ. ಪ್ರತಿ ಕವಿಗೋಷ್ಠಿಯಲ್ಲಿಯೂ ಹಿರಿಯ, ಕಿರಿಯ ಸಾಹಿತಿಗಳಿಗೆ, ಯುವ ಮನಸ್ಸುಗಳಿಗೆ ಕೂಡಾ ಅವಕಾಶ ಕೊಡಲಾಗುತ್ತದೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ವಯಸ್ಸು ಅದಕ್ಕೆ ಅಡ್ಡಿ ಆಗದು. ಕಲಿಕೆ ಬೇಕು, ಕೇಳುವ ಕಿವಿ ತೆರೆದಿರಬೇಕು, ನೋಡುವ ನೋಟ ಚೆನ್ನಾಗಿ ಇರಬೇಕು. ಬರವಣಿಗೆ ಪಕ್ವವಾಗಿ ಇರಬೇಕು. ಆರಂಭಿಸಿದರೆ ಅನುಭವ ತಾನೇ ತಾನಾಗಿ ಬರುತ್ತದೆ. ಹುಟ್ಟುತ್ತಲೇ ಯಾರೂ ಎಲ್ಲವನ್ನೂ ಪಡೆದುಕೊಂಡು ಬಂದವರಲ್ಲ, ಕಲಿಕೆ, ವಿದ್ಯಾರ್ಥಿಯ ಮನಸ್ಸು, ಗೌರವದ ನಡತೆ ಯಾವ ಯುವ ಜನತೆಯನ್ನು ಸಾಹಿತ್ಯದಲ್ಲಿ ಎಷ್ಟು ಎತ್ತರಕ್ಕೆ ಬೇಕಾದರೂ ಕೊಂಡೊಯ್ಯಬಹುದು. ಕಲಿಕೆಯ ತೀವ್ರತೆ, ಬರೆಯುವ ಹಂಬಲ , ಸಾಮರ್ಥ್ಯ ಇರಬೇಕು ಅಷ್ಟೇ.ಪದ ಲಾಲಿತ್ಯ, ಭಾವನೆ, ವ್ಯಕ್ತಪಡಿಸುವ ರೀತಿ ಉತ್ತಮ ಮಟ್ಟದ್ದಾಗಿದ್ದರೆ ಯಾವ ಯುವ ಸಾಹಿತಿಯೂ ಗುರುತಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾನೆ ಅಲ್ಲವೇ?
ನಮ್ಮ ಭಾಷೆ ನಮ್ಮ ಹೆಮ್ಮೆ. ಅವಕಾಶ ಸಿಗಬೇಕು ಅಷ್ಟೇ. ಚಿಗುರುವ ಚಿಗುರನ್ನು ಹಿರಿಯರು ಚಿವುಟಿ ಹಾಕದಿದ್ದರೆ ಸಾಕು, ಬೆಳೆಯುವ ಕುಡಿಗಳು ಮುಂದೆ ಸಾಗಿಯೇ ಸಾಗುವುವು. ಸ್ವಲ್ಪ ನೀರು ಗೊಬ್ಬರ ಹಾಕುವ ಕಾರ್ಯ ಹಿರಿಯ ಸಾಹಿತಿಗಳಿಂದ ಯುವ ಜನತೆಗೆ ಆಗಬೇಕಿದೆ ಅಷ್ಟೇ. ಕನ್ನಡ ಸಾಹಿತ್ಯವನ್ನು ಅಗಾಧ ಶಕ್ತಿಯ ಯುವಕರು ಮೇಲ್ತುದಿಗೆ ತಂದು ನಿಲ್ಲಿಸುವಲ್ಲಿ ಎರಡು ಮಾತಿಲ್ಲ. ನೀವೇನಂತೀರಿ?
@ಹನಿಬಿಂದು@
26.10.2022