ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-5
ಒಂದು ಕಾಲವಿತ್ತು. ಶಿಕ್ಷಕರೆಂದರೆ ಮಹಾನ್ ಪಂಡಿತರು, ಅವರು ತಿಳಿಯದ ಜ್ಞಾನವಿಲ್ಲ, ಊರಿನಲ್ಲಿ ಯಾರಿಗೆ ಏನೇ ಕಾಗದ ಪತ್ರಗಳು ಬಂದರೂ ಓದಿ ಅರ್ಥೈಸಿ ಹೇಳಿ, ಅದಕ್ಕೆ ಉತ್ತರಿಸುವವರೂ ಅವರೆ! ಊರಲ್ಲೆಲ್ಲ ಆ ಊರಿನ ಗುರುಗಳಿಗೆ ರಾಜ ಮರ್ಯಾದೆ. ಅವರು ಊರಿನ ಕಾರ್ಯಕ್ರಮಕ್ಕೆ ಬಂದರೆಂದರೆ ಕಾರ್ಯಕ್ರಮಕ್ಕೆ ವಿಶೇಷ ಕಳೆ!
ಕಾಲಕ್ರಮೇಣ ಶಿಕ್ಷಕರ ಸಂಖ್ಯೆ ಏರುತ್ತಾ ಹೋಯಿತು, ಪರ ಊರಿನ ಶಿಕ್ಷಕರು ನಮ್ಮೂರಿಗೆ ಬರತೊಡಗಿದರು. ನಮ್ಮೂರಿಗೆ ಬಂದ ಶಿಕ್ಷಕರು ಕೆಳ ಜಾತಿಯವರೆಂದು ಗೊತ್ತುಪಡಿಸಿಕೊಂಡ ಮತಾಂಧ ಜನರಿಂದ ಶಿಕ್ಷಕರು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳತೊಡಗಿದರು. ಹೆಚ್ಚೇಕೆ, ದೂರದಿಂದ ಬಂದ ಶಿಕ್ಷಕರಿಗೆ ಕನಿಷ್ಠ ಪಕ್ಷ ಆ ಊರಿನಲ್ಲಿ ನೆಲೆಯೂರಲು ಜಾಗವನ್ನೂ ಕಲ್ಪಿಸಿ ಕೊಡಲಿಲ್ಲ! ಎಷ್ಟೋ ದೂರದ ಸಿಟಿಗಳಲ್ಲಿ ಬಾಡಿಗೆ ಮನೆ ಪಡೆದು ಓಡಾಡುವ ಪರಿಸ್ಥಿತಿ ಶಿಕ್ಷಕರದ್ದಾಯಿತು. ಹಿಂದೆ ಶಿಕ್ಷಕರ ಬಳಿ ಯಾರೂ ಬಾಡಿಗೆ ಪಡೆಯದ ಕಾಲವೂ ಇತ್ತು!
ತದನಂತರ ಎಲ್ಲೋ ಪಕ್ಕದಲ್ಲಿದ್ದ ಕೋಣೆಯೊಂದನ್ನು ಬಾಡಿಗೆಗೆ ಪಡೆದು ಗೂಡಿನಲ್ಲಿ ವಾಸಿಸುವಂತೆ ಅದರಲ್ಲಿದ್ದರೆ ಊಟಕ್ಕೊಂದು ಹೋಟೆಲ್ ಕೂಡಾ ಆ ಹಳ್ಳಿಯಲ್ಲಿ ಇರುತ್ತಿರಲಿಲ್ಲ! ಈ ಎಲ್ಲಾ ಕಷ್ಟಗಳಿಂದ ಪಾರಾಗಲು ಅವರು ನಗರ ಜೀವನವನ್ನೆ ಅವಲಂಬಿಸ ಬೇಕಾಯ್ತು!
ಇದೀಗ ಪರಿಸ್ಥಿತಿ ಬದಲಾಗಿದೆ. ತಂತ್ರಜ್ಞಾನ ಮುಂದುವರಿದಂತೆ ಏನು ಕಲಿತರೂ, ಎಷ್ಟು ಕಲಿತರೂ ಕಡಿಮೆಯೇ! ಈಗ ವಿದ್ಯಾರ್ಥಿಗಳೇ ಶಿಕ್ಷಕರಿಗೆ ಜೀವನ ಪಾಠ ಕಲಿಸುವಷ್ಟು ಬೆಳೆದು ಬಿಟ್ಟಿದ್ದಾರೆ! ಭಯ- ಭಕ್ತಿ ಹೋಗಿ ಗೆಳೆತನ ಬಂದಿದೆ! ಹಲವೆಡೆ ತುಳಿತ, ಥಳಿತಕ್ಕೊಳಗಾದವರೂ ಇದ್ದಾರೆ!
ನವೀನ ಯುಗದಲ್ಲಿ ಕಾಲ ಬದಲಾಗಿದೆಯೋ, ಜನರು ಬದಲಾಗಿಹರೋ ನಾನರಿಯೆ! ಒಂದು ಕಾಲದಲ್ಲಿ ಗೌರವಿಸಲ್ಪಡುತ್ತಿದ್ದ ಶಿಕ್ಷಕ ವೃಂದ ಇದೀಗ ಭಯದ ನೆರಳಲ್ಲೆ ಬದುಕ ಬೇಕಾಗಿದೆ! ಒಂದು ಕಾಲದಲ್ಲಿ 'ಬೆತ್ತ' ಎನ್ನುವುದು ಶಿಕ್ಷಕರ ಆಸ್ತಿಯಾಗಿತ್ತು, ದ್ಯೋತಕವಾಗಿತ್ತು! ಅದಕ್ಕೆ ಹೆದರಿ ಕಲಿತವರೆಷ್ಟೋ? ಆದರೆ ಇಂದು ಶಿಕ್ಷಕರಿಗೆ ಕೋಲು ಹಿಡಿಯುವುದಿರಲಿ, ಮುಟ್ಟಲಿಕ್ಕೂ ಅಧಿಕಾರವಿಲ್ಲ! ಅಷ್ಟೇ ಏಕೆ, ಇಂದಿನ ಶಿಕ್ಷಕ ಎಷ್ಟು ಅಸಹಾಯಕನೆಂದರೆ ತಪ್ಪು ಮಾಡಿದ ವಿದ್ಯಾರ್ಥಿಗೆ ಗದರಲೂ ಇಲ್ಲ, ಬೈಯಲೂ ಇಲ್ಲ, ಕಣ್ಣೂ ದೊಡ್ಡದು ಮಾಡಿ ನೋಡುವಂತಿಲ್ಲ!!! ಅದರ ಜೊತೆ ಕಡ್ಡಾಯ ಪ್ರಾಥಮಿಕ ಶಿಕ್ಷಣ, ಯಾವ ವಿದ್ಯಾರ್ಥಿ ಕಲಿಯದಿದ್ದರೂ ಶಿಕ್ಷಕರೇ ಹೊಣೆ! ವಿದ್ಯಾರ್ಥಿಯನ್ನು ನಪಾಸು ಮಾಡುವಂತಿಲ್ಲ. ಪಾಸಾಗುವವರೆಗೆ ಕಲಿಸಿ ಬರೆಸಿ, ದಾಖಲೆಗಳನ್ನಿಟ್ಟು ಮುಂದಿನ ವರ್ಗಕ್ಕೆ ಕಳುಹಿಸಲೇ ಬೇಕು! ಹೀಗೆ ಮುಂದೆ ದಾಟುತ್ತಾ ಬಂದವರಿಗೆ ಹಲವು ಸಲ ಕೆಲ ಶಿಕ್ಷಕರು ತಾನೇ ಪರೀಕ್ಷೆ ಬರೆದಿದ್ದರೂ ಅಚ್ಚರಿಯಿಲ್ಲ!!!
ಹಾಗೆ ಏನೂ ಬರೆಯದೆ ಓದದೆ ಹತ್ತನೇ ತರಗತಿಯವರೆಗೆ ಬಂದ ಮಕ್ಕಳು ಇದ್ದರೆ ಎಲ್ಲರೊಡನೆ ಅವರಿಗೂ ಪಬ್ಲಿಕ್ ಪರೀಕ್ಷೆ! ಅಲ್ಲೂ ಎಲ್ಲರೂ ಪಾಸಾಗಬೇಕು! ಇಲ್ಲಿ ಪಾಸಾದ ಪರ್ಸೆಂಟೇಜ್ ನೋಡೋದೇ ಜನರ ಕೆಲಸ!
ಇಷ್ಟೇ ಅಲ್ಲ! ಶಾಲೆಗೆ ಬರದ ಮಗುವಿನ ಮನೆಗೆ (ಉಳಿದೆಲ್ಲ ಬಂದ ಲ ಮಕ್ಕಳನ್ನು ಬಿಟ್ಟು) ತೆರಳಿ, ಅವರ ಪೋಷಕರ ಮನವೊಲಿಸಿ, ಶಾಲೆಗೆ ಕರೆತರಬೇಕು! ಇನ್ನು ಅವನೇನಾದರೂ ಶಾಲೆಗೆ ಹೋಗಲಿಚ್ಚಿಸದೆ, ಅನಾಹುತ ಮಾಡಿಕೊಂಡರೂ ಶಿಕ್ಷಕರೇ ಜವಾಬ್ದಾರಿ!
ಮನೆಗೆ ಕರೆತರಲು ಹೋದಾಗ ಆ ವಿದ್ಯಾರ್ಥಿ ಕಲ್ಲು ಬಿಸಾಡಿದರೂ ಅವನಿಂದ ತಪ್ಪಿಸಿ, ಮನೆಯವರು ಗದರಿದರೂ ಗದರಿಸಿಕೊಂಡು ಬರಬೇಕು!
ಪುಸ್ತಕ, ತರಕಾರಿ, ಸಾಮಾನು ಹೊತ್ತೊಯ್ದು ಹಾಕಿ, ಊಟ ಕೊಟ್ಟು ಸಲಹ ಬೇಕು! ಪ್ರತಿ ವಿದ್ಯಾರ್ಥಿಯ ಜವಾಬ್ದಾರಿ ಶಿಕ್ಷಕರ ಮೇಲಿದೆ! ಆದರೂ ಊರಿನವರ್ಯಾರೂ ಆ ಶಿಕ್ಷಕನನ್ನು ಗುರುತಿಸಲಾರರು! ಕಾರಣ ಆ ಊರಿನ ಹೆಚ್ಚಿನ ಜನ ತಮ್ಮ ಮಕ್ಕಳನ್ನು ಬೇರೆ ಊರಿನ ಶಾಲೆಗಳಿಗೆ ಕಳುಹಿಸುವವರೇ! ಕಾರಣ 'ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ' ,ತಮ್ಮ ಅನುಕೂಲ, ಬಸ್ಸಿನ ವ್ಯವಸ್ಥೆ, ಮುಂದಾಲೋಚನೆ, ಆಂಗ್ಲ ವ್ಯಾಮೋಹ ಇತ್ಯಾದಿ!
ಒಟ್ಟಿನಲ್ಲಿ ಶಿಕ್ಷಕರಿಂದು ತುಳಿತಕ್ಕೊಳಗಾದವರಾಗಿದ್ದಾರೆ. ಮನೆಗೆ ಯಾವುದಾದರೂ ಕೆಲಸಕ್ಕೆ ಬರುವವರೂ ಶಿಕ್ಷಕರು,ಅದರಲ್ಲೂ ಪರ ಊರಿನ ಶಿಕ್ಷಕರೆಂದರೆ ಹೆಚ್ಚೇ ಕೇಳುತ್ತಾರೆ! ಅಂಗಡಿಯವರೂ ಅಷ್ಟೆ, ತಮ್ಮ ಊರಿನ ಪರಿಚಯದ ಜನರಿಗೂ, ಪರ ಊರಿನ ಶಿಕ್ಷಕರಿಗೂ ಅಜಗಜಾಂತರ ವ್ಯತ್ಯಾಸ!!!
ಒಟ್ಟಿನಲ್ಲಿ ನೋವು ನುಂಗಿಕೊಂಡು, ಕಷ್ಟದ, ನೋವಿನ ಮಣಿಗಳನ್ನೇ ಪೋಣಿಸಿ ಸರಮಾಡಿ,ಅದನ್ನೇ ತೊಟ್ಟು ಬದುಕುವ ನರಕದ ಬಾಳು ಇಂದಿನ ಶಿಕ್ಷಕರದಾಗಿದೆ ಎಂದರೆ ತಪ್ಪಿಲ್ಲ. ನೀವೇನಂತೀರಿ?
@ಪ್ರೇಮ್@