ಗುರುವಾರ, ಸೆಪ್ಟೆಂಬರ್ 30, 2021

ಗರ್ವಿಯಾಗಲೇ ನಾನು?

ಗರ್ವಿಯಾಗಲೆ ನಾನು?

ಹೊತ್ತು, ಹೆತ್ತು, ತಿಪ್ಪೆ ಬಾಚಿ ಕಪ್ಪೆಯಂತಿದ್ದ ನನ್ನನೆತ್ತಿ ಮುದ್ದಾಡಿ
ನೀ ನನ್ನ ಚಿನ್ನ, ರನ್ನ ಎಂದು ಲಲ್ಲೆಗರೆದ ತಾಯಿಯೆದಿರು
ಗರ್ವಿಯಾಗಲೇ ನಾನು?

ಕ್ಷಣ ಕ್ಷಣಕೂ ಊಟ, ಬಟ್ಟೆ, ತಿಂಡಿ, ಬೇಕು ಬೇಡಗಳ ಅರಿತು
ತನಗೆ ಬೇಕೆಂದುದನೆಲ್ಲಾ ತಂದು ಸುರುವಿ ಹೆಣ್ಣೆಂದು ಹೀಗಳೆಯದೆ ಬೆಳೆಸಿದ
ಅಪ್ಪನೆದುರು ಗರ್ವಿಯಾಗಲೇ ನಾನು?

ಮಣ್ಣಿನ ಮುದ್ದೆಯಂತಿದ್ದ ಏನೂ ಅರಿಯದ ನನಗೆ ತಾಳ್ಮೆಯಿಂದ
ಪ್ರತಿಯೊಂದು ಅಕ್ಷರವನ್ನೂ ತಿದ್ದಿ, ತೀಡಿಸಿ ಕಲಿಸಿ, ಬುದ್ಧಿಯನ್ನೂ ಧಾರೆಯೆರೆದ
ಮೇರು ಪರ್ವತ ಗುರುವಿನೆದುರು ಗರ್ವಿಯಾಗಲೇ ನಾನು?

ಅಮ್ಮನಂತೆ ಬೆಳೆಸಿ, ಅಪ್ಪನಂತೆ ಸಲಹಿ, ಮುದ್ದಲ್ಲಿ ಬೆಳೆಸಿ,
 ಪ್ರೀತಿಯ ಮಳೆಯನ್ನೇ ಧಾರೆಯೆರೆದ ಅನುಭವಿ ಅಜ್ಜಿಯ ಪಾದಕಮಲಗಳ
ಮುಂದೆ ಗರ್ವಿಯಾಗಲೇ ನಾನು?

ನಿತ್ಯ ಕಡಿದು ಬರಿದು ಮಾಡಿತಲಿದ್ದರೂ ಒಡಲಾಳದ ಹಸಿರನು
ಸಹನೆಯಿಂದ ಕಾಲ ಕಾಲಕೆ ಮಳೆ ಸುರಿಸಿ ಬೆಳೆ ಕೊಡುವ
ಪ್ರಕೃತಿ ಮಾತೆಯ ಎದುರು ತೃಣ ಸಮಾನದಂತಾಗುವುದಲ್ಲದೆ, ಗರ್ವಿಯಾಗಲೇ ನಾನು?

ಮತ ಧರ್ಮ ಬೇಧ ಭಾವಗಳೇ ಮುಚ್ಚಿ ಹೋದ ಹೃದಯ ಹೊತ್ತು, 
ನಾನು, ನನ್ನದು, ನನ್ನವರೆಂಬ ಆಸೆ ಹೊದ್ದು
ಸಂಕುಚಿತ ಭಾವವೇ ಮೈವೆತ್ತಂತೆ ನಿಂತು ಗರ್ವಿಯಾಗಲೇ ನಾನು?

ಬೆಳಕು ಕೊಡುವ ಸೂರ್ಯ, ತಂಪೀಯುವ ಸೋಮ
ಮಳೆ ಸುರಿಸುವ ಮೋಡ, ಬೆಳೆ ಬೆಳೆಯುವ ಭೂಮಿಯೆದುರು
ಮನುಜ ನಾನೇ ಮೇಲೆನುತಲಿ ಗರ್ವಿಯಾಗಲೇ ನಾನು?
@ಪ್ರೇಮ್@
30.09.2021

ಶನಿವಾರ, ಸೆಪ್ಟೆಂಬರ್ 25, 2021

ಸಿದ್ಧಲಿಂಗಯ್ಯ ಅವರ ನೆನಪಿನಲ್ಲಿ

ಕವಿ ನಮನ
ಸಿದ್ದಲಿಂಗಯ್ಯ ಅವರ ನೆನಪಿನಲ್ಲಿ...

ಕವನ

ನೀನಾದೆ ಪ್ರೇರಣೆ

ಇಕ್ರಲಾ ಒದಿರ್ಲ ಎಂದ ಮೇಧಾವಿಯೇ
ಇದ್ದುದ ಇದ್ದುದನು ಸಾರಿ ಗಂಡೆದೆ ಮೆರೆದ ಕವಿಯೇ
ತನ್ನವರ ಮೇಲೆತ್ತಿ ಊರು ಕೇರಿಯಲಿ ಬರೆದ ಗುರುವೇ
ಜನಗಳ ಕಷ್ಟವನು ಹಿಡಿದೆತ್ತಿ ನಿಲ್ಲಿಸಿದ ವರವೇ..

ಹಲವು ಕವಿಗಳಿಗೆ ನೀನಾದೆ ಪ್ರೇರಕ
ಕೆಲವು ಮನಗಳಿಗೆ ನೀನಾದೆ ನಾಯಕ
ದಲಿತ ಬಂಡಾಯ ಸಾಹಿತ್ಯದ ಪ್ರೇರಕ
ಪದ- ನುಡಿಗಳು ಬದುಕಿಗೆ ಪೂರಕ..

ಸಾಹಿತ್ಯಕ್ಕೆ ಬರೆದೆ ನೀ ಹೊಸದಾದ ಭಾಷ್ಯ
ಜನರ ಕಷ್ಟಗಳಿಗೆ ಪೂರಕವಾದ ವಿಷಯ!
ದುಡಿತದ ಕೈಗಳಿಗೆ ಇದೆ ಅಲ್ಲಿ ಪದಗಳ ಕಷಾಯ!
ದು:ಖಿತರಿಗೆ ದಲಿತರಿಗೆ ನೊಂದವರಿಗೆ   ಬರಲಿ ಜಯ!

 ಹಪಹಪಸುತ್ತಿರುವ ನೋವಿನ ಕರುಳಿಗೆ ಸ್ಪಂದನೆ
ನೀನೇ ಹಲವು ಬರಹಗಳಿಗೆ ನಿಜ ಪ್ರೇರಣೆ
ನಿನಗಿತ್ತು ಕಲ್ಲು ಮುಳ್ಳು ದಾರಿಯಲಿ ನಡೆವ ಸಹನೆ.
ಎಲೆ ಕರುನಾಡ ಕಂದನೆ ನಿನಗೆ ವಂದನೆ.
@ಪ್ರೇಮ್@
02.07.2021

ಮನಕೆ ಮಾತ ಮುತ್ತು

ಮನಕೆ ಮಾತ ಮುತ್ತು

ನುಗ್ಗಿ ಹರಿವ ತೊರೆ ಈ ಜೀವನ
ಬಾಗದಿರು ಮನವೇ
ಸುಗ್ಗಿ ಕಾಲದ ಹಾಗೆ ನಗುತ
ಪಾವನವಾಗು ಮನವೇ ..

ಬಗ್ಗಿದವನಿಗೆ ಗುದ್ದು ಹೆಚ್ಚಂತೆ
ಹಿಗ್ಗಿ ನಡೆ ಮುಂದೆ ನೀನು
ಕುಗ್ಗಲದುವೆ ನರಕದಂತೆ ತಿಳಿ
ಎಗ್ಗಿಲ್ಲದೆ ಸಾಗುವೆ ತಾನು!

ರಗ್ಗಿನಡಿಯಲಿ ಸಾಯದಿರಲಿ ಕನಸ
ಒಗ್ಗಿ ಹೋಗದಿರು ಅಪ್ಪನ ಆಲಕೆ
ಜಗ್ಗದಿರು ಪರರ ತಾಳ ಮೇಳಕೆ
ಮಗ್ಗದಂದದಲಿ ನಡೆ ಮುಂದಕೆ!

ಗಗ್ಗರವಿಡುವ ಸದ್ದುಗಳು ಅನೇಕ
ಕುಗ್ಗದಿರು ನಾಯಿ ಬೋಗಳುವಿಕೆಗೆ
ದಿಗ್ಗನೆದ್ದು ನಡೆ ಮುಂದೆ ಈಜುತ
ಮೊಗ್ಗಿನಂತ ಪರಿಮಳವ ಬೀರುತ..

ಲಗ್ಗಿ ಹೋಗದಿರು ಗುರಿಯ ತಲುಪದೆ
ನುಗ್ಗಿ ಸಾಗುತಿರು ಎಂದೂ ನಿಲ್ಲದೆ
ತಗ್ಗಿ ಬಗ್ಗಿ ನಡೆ ಹಿರಿಯರ ಮಾತಿಗೆ
ಕುಗ್ಗಿ ಹಿಗ್ಗದಿರು ಮನದ ನೋವಿಗೆ!
@ಪ್ರೇಮ್@
24.09.2021

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-97

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-97

             ಇದೀಗ ಪಿತೃ ಪಕ್ಷವಂತೆ. ಗತಿಸಿ ಹೋದ ನಮ್ಮ ಪಿತೃಗಳಿಗೆ ಅವರ ಋಣ ತೀರಿಸುವ ಸಲುವಾಗಿ ಊಟ ಕೊಡುವ ಕಾರ್ಯಕ್ರಮ. ನಮ್ಮ ಸುತ್ತಮುತ್ತ ನಾವು ನೋಡಿದ್ದೇವೆ. ಅದೇನೆಂದರೆ ತಾಯಿ ತಂದೆ ಬದುಕಿದ್ದಾಗ ಅವರಿಗೆ ಸರಿ ಊಟ ತಿಂಡಿ ಕೊಡದೆ ಅವರನ್ನು ಹಸಿವೆಯಿಂದಲೇ ಸಾಯಿಸಿ ಬಳಿಕ ಹದಿಮೂರನೇ ದಿನ ಅವರ ಹೆಸರಿನಲ್ಲಿ ಇವರೇ ತಿಂದವರು, ಪ್ರತಿ ತಿಂಗಳು ತಿಂಗಳಿಗೂ ಸತ್ತವರ ಹೆಸರಿನಲ್ಲಿ ತಾವೇ ಮಾಡಿ, ಸ್ವಲ್ಪ ಬಡಿಸಿ, ಹಿರಿಯರ ಹೆಸರು ಹೇಳಿ, ಕಾಗೆಗೊಂಡಿಷ್ಟು ಇಟ್ಟು ಬಳಿಕ ಎಲ್ಲವನ್ನೂ ತಾವೇ ತಿನ್ನುವುದು ವಾಡಿಕೆ. ಅದರ ಜೊತೆ ಹಿರಿಯರ ಹೆಸರಲ್ಲಿ ಮಾಂಸದ ಜೊತೆ ಮದ್ಯವನ್ನು ಕೂಡಾ ತಂದು ತಾವೇ ಅದನ್ನು ಮಕ್ಕಳ ಎದುರಿಗೇ ಮಹಿಳೆಯರೂ ಸೇರಿ ಕುಡಿದು ಮಕ್ಕಳ ಎದುರಲ್ಲಿ ತಮ್ಮ ಮರ್ಯಾದೆ ತಾವೇ ಕಳೆದುಕೊಳ್ಳುವವರ ನಾವು ನೋಡಿರುತ್ತೇವೆ.

      ನಿಜವಾಗಿಯೂ ಹಿರಿಯರಿಗೆ ಬಡಿಸುವ ವಾಡಿಕೆ ಓಕೆ. ಹಿರಿಯರು ಸಾಯುವ ಮೊದಲು ಕುಡಿದು ಗಲಾಟೆ ಮಾಡಿ ನಮಗೆ ಕಾಟ ಕೊಟ್ಟದ್ದು ಸಾಲದೇ? ಸತ್ತ ಮೇಲೂ ಅವರಿಗೆ ನಾವು ಕುಡಿಸಬೇಕೇ? ಅವರು ಯಾರಾದರೂ ನಿಮ್ಮ ಮೈ ಮೇಲೆ ಬಂದು "ನನಗೆ ಊಟ ಮಾತ್ರವಲ್ಲ, ಕುಡಿಯಲೂ ಬಿಯರ್, ಹಾಟ್ ಡ್ರಿಂಕ್ಸ್ ಕೊಡಿ, ಇಲ್ಲಾಂದ್ರೆ ನಾನು ನಿಮ್ಗೆ ಕಾಟ ಕೊಡ್ತೇನೆ .." ಅಂತ ಹೇಳಿದ್ದಾರೆಯೇ? ಅದು ಯಾಕೆ? ಕಲಿತ ಜನರ ಮೆದುಳು ಬೇರೆ ಬೇರೆ ಕೋನಗಳಲ್ಲಿ ಕೆಲಸ ಮಾಡುತ್ತದೆ. ಈ ಬಗ್ಗೆ ಯಾರೂ ಯೋಚಿಸಲೇ ಇಲ್ಲವೇ?

       ಈಗ ಸುಮ್ಮನೆ ಇರುವ ನಿಮ್ಮ ಮಕ್ಕಳು ಏನೆಂದು ತಿಳಿದು ಕೊಳ್ಳುತ್ತಾರೆ ಎಂದರೆ ಮಕ್ಕಳನ್ನು ಹೊರಗೆ ಕೂರಿಸಿ ಒಳಗೆ ನಾವು ಹಿರಿಯರು ಕುಡಿಯಬೇಕು ಎಂಬ ಬುದ್ಧಿ ಎಳೆಯ ವಯಸ್ಸಿನಲ್ಲೇ ಅವರಿಗೆ ಬರುತ್ತದೆ ಅಲ್ಲವೇ? ಇನ್ನು ಕೆಲವರು ತಾವು ಕುಡಿಯುವಾಗ ಮಕ್ಕಳಿಗೆ ಕೂಲ್ ಡ್ರಿಂಕ್ಸ್ ತಂದು ಕೊಟ್ಟು ಆ ರೀತಿ ಕುಡಿಯುವ ಅಭ್ಯಾಸ ತಾವೇ ಮಾಡಿ ಬಿಡುತ್ತಾರೆ. ಆಗ 
ಮಕ್ಕಳ ಮನಸ್ಸಿನಲ್ಲಿ ಈ ರೀತಿಯ ಭಾವನೆ ಬರುತ್ತದೆ. "ನಾವು ದೊಡ್ಡವರಾದ ಬಳಿಕ ನಾವು ಬಾರ್ನಿಂದ ತಂದು ಕುಡಿಯಬೇಕು. ಮನೆಯಲ್ಲಿ ಇರುವ ಮಕ್ಕಳಿಗೆ ಮಿರಿಂಡ, ಸ್ಪ್ರೈಟ್ ಮೊದಲಾದ ಕೂಲ್ ಡ್ರಿಂಕ್ಸ್ ಕುಡಿಸಬೇಕು!". 

       ಇನ್ನು ಕೆಲವರು ಇನ್ನೂ ಭಯಾನಕರೇನಿಸಿದವರು! "ಇದು ಬಿಯರ್ ಏನೂ ಆಗಲ್ಲ ಕುಡಿ.ಇದು ವೈನ್ ಹಣ್ಣಿನಿಂದ ಮಾಡಿದ್ದು, ಆರೋಗ್ಯಕ್ಕೆ ಹಾನಿ ಇಲ್ಲ...." ಎಂದು ತಾವು ಕುಡಿಯುವಾಗ ತಮ್ಮ ಮಕ್ಕಳಿಗೆ ತಾವೇ ಸ್ವಲ್ಪ ಸ್ವಲ್ಪ ಕುಡಿಸಿ ಅಭ್ಯಾಸ ಮಾಡಿಸುವವರು! ಮುಂದೆ ತಮ್ಮ ಮಕ್ಕಳು ಕೆಟ್ಟ ದಾರಿ ಹಿಡಿಯಲು ತಾವೇ ಕಾರಣೀಭೂತರಾದ ಜನ! ಆಲ್ಕೋಹಾಲ್ ದೇಹಕ್ಕೆ ಕೆಟ್ಟದು, ನರ ದೌರ್ಬಲ್ಯ ಉಂಟಾಗುತ್ತದೆ, ಮೆದುಳಿಗೆ ಹಾನಿ ಮಾಡುತ್ತದೆ ಎಂದರೆ ಅವರಿಗೆ ಅರ್ಥ ಆಗೋದೇ ಇಲ್ಲ. ಚಟ ಒಮ್ಮೆ ಹಿಡಿದರೆ ಸಾಕು. ಮತ್ತೆ ನಾವು ಬೇಡ ಎಂದರೂ ಅದು ನಮ್ಮನ್ನು ಬಿಡಲ್ಲ. ಆ ಚಟಕ್ಕೆ ದಾಸರಾದ ಜನ ಏನು ಮಾಡಿದರೂ ಬಿಡಲು ಕೇಳರು.

ನಮ್ಮ ಮಕ್ಕಳ ಭವಿಷ್ಯವನ್ನು ನಾವೇ ಕೊಲ್ಲದಿರೋಣ, ಮೊಬೈಲ್ ಕೊಟ್ಟು ಸುಳ್ಳು ಹೇಳಿಸುವುದು, ಅಲ್ಲೇ ಇದ್ದರೂ "ಅಪ್ಪ ದೂರ ಎಲ್ಲೋ ಹೋಗಿದ್ದಾರೆ" ಎಂದು ಹೇಳು ಎಂದು ಹೇಳಿಸುವ ಕೆಟ್ಟ ಅಪ್ಪ ಇಲ್ಲವೇ? ಸಾಲ ಮಾಡಿದವನ ಬಳಿ ಸುಳ್ಳು ಹೇಳುವಾಗ ತನ್ನ ಗುಂಡಿಗೆ ತಾನೇ ಬೀಳುವುದು ಎಂದರೆ ಇದೇ ಅಲ್ಲವೇ? 
ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು. ಮೂರು ವರುಷದ ಮಗುವು ಕಲಿತದ್ದು ನೂರು ವರುಷದವರೆಗೆ! ನೂರು ವರುಷದ ವರೆಗಿನ ವಿದ್ಯೆ ಕಲಿಸುವ ಹಿರಿಯರು ನಾವೇ! ನಿರ್ಧರಿಸಬೇಕಾದವರು ಕೂಡಾ ನಾವೇ ಅಲ್ಲವೇ? ನೀವೇನಂತೀರಿ?
@ಪ್ರೇಮ್@
24.07.2021