ಭಾನುವಾರ, ಫೆಬ್ರವರಿ 12, 2023

ಗಣರಾಜ್ಯೋತ್ಸವದ ಮಹತ್ವ

ಗಣರಾಜ್ಯೋತ್ಸವದ ಮಹತ್ವ

   ಎಲ್ಲರಿಗೂ ಈ ಹೊಸ ಕ್ಯಾಲೆಂಡರ್ ವರ್ಷದ ಹಾಗೂ ಈ ವರ್ಷದ ಉತ್ತರಾಯಣ ಪುಣ್ಯ ಕಾಲದ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ  ವಿವಿಧ ಭಾಷೆ, ಜಾತಿ, ಮತ, ವರ್ಗ, ಪಂಗಡ, ಧರ್ಮ, ಸಂಸ್ಕೃತಿ, ವೇಷ ಭೂಷಣ, ಕಲೆ, ಸಾಶಿತ್ಯಗಳಿಂದ ಮಿಳಿತವಾಗಿ ವಿವಿಧತೆಯಲ್ಲಿ ಏಕತೆ ಸಾರುವ ದೇಶ ನಮ್ಮದು. ನಮ್ಮ ದೇಶದಲ್ಲಿ ಮಾತ್ರ ನಾವು ಕ್ರೈಸ್ತ ಕೃಪಾ ಕಟ್ಟಡದಲ್ಲಿ ಹೋಟೆಲ್ ದುರ್ಗಾ ಕೃಪ ಮತ್ತು ಭಾರತ್ ಕನ್ಸಲ್ಟೆನ್ಸಿ ಯಂತಹ ಫಲಕಗಳನ್ನು ಒಟ್ಟಿಗೆ ಕಾಣಲು ಸಾಧ್ಯ. ಇಂತಹ ಮಹಾನ್ ಕಲೆ ಸಂಸ್ಕೃತಿಯ ದೇಶ ಬ್ರಿಟಿಷರ ಕಪಿ ಮುಷ್ಟಿಯಿಂದ 1947 ಆಗಸ್ಟ್ 1947ನೆಯ ಮಧ್ಯ ರಾತ್ರಿ ಸ್ವಾತಂತ್ರ್ಯ ಪಡೆಯಿತು. ಗಾಂಧೀಜಿಯವರ ಶಾಂತಿ ಮಂತ್ರ, ಅಸಹಕಾರ ಚಳುವಳಿ ಪ್ರಪಂಚಕ್ಕೆ ಮಾದರಿಯಾಗಿ ಇಂದಿಗೂ ಭಾರತದ ಸ್ವಾತಂತ್ರ್ಯ ಸಮರದ ಕಥೆ ವಿಭಿನ್ನವಾಗಿ ನಿಂತಿದೆ. ಸ್ವಾತಂತ್ರ್ಯ ದೊರೆತ ಮೇಲೆ ಭಾರತ ದೇಶಕ್ಕೆ ತನ್ನದೇ ಆದ ಕಾನೂನು ಕಟ್ಟಳೆ, ತನ್ನದೇ ಒಂದು ನೀತಿ ಬೇಕಾಯಿತು. ರಾಜರ ಆಡಳಿತ ನಿಂತು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ನಡೆಸುವ ಆಡಳಿತ ಬಂದಾಗ ಅದಕ್ಕೆ ಹೊಸ ಸಂವಿಧಾನ ಬೇಕಾಯಿತು. 1950ರ ಜನವರಿ 26 ರಂದು ಭಾರತ ತನ್ನದೇ ಆದ ಸಂವಿಧಾನವನ್ನು ಜಾರಿಗೊಳಿಸಿದ ದಿನ. ಅದಕ್ಕಿಂತ ಮೊದಲೇ 1949 ನವೆಂಬರ್ ಇಪ್ಪತ್ತಾರಕ್ಕೆ ಅದನ್ನು ಅಂಗೀಕರಿಸಿತು. 2023 ಈ ವರ್ಷ ನಾವು 74ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಿದ್ದೇವೆ. ಮುಂದಿನ ವರ್ಷ ಭಾರತವು ಗಣರಾಜ್ಯೋತ್ಸವದ ಅಮೃತ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ ಎನ್ನಲು ಖುಷಿ. ಆದರೆ ಜಾರಿಗೆ ತರಲು ಜನವರಿ 26 ನ್ನೇ ಏಕೆ ಇಟ್ಟರು ಬೇರೆ ದಿನಾಂಕ ಇರಲಿಲ್ಲವೇ? ಈ ಪ್ರಶ್ನೆಗೆ ನಾವು ಉತ್ತರ ಹುಡುಕುತ್ತಾ ಹೋದರೆ ನಮಗೆ ಕೆಲವೊಂದು ಅಂಶಗಳು ತಿಳಿಯುತ್ತವೆ. 

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ನಡೆದಾಗಲೇ ಜನವರಿ 26ರಂದು ಭಾರತದ ತಿರಂಗಾ ಹಾರಿಸಿ, ಧೈರ್ಯವಂತರೆಲ್ಲಾ ಒಟ್ಟಾಗಿ ಇಂದೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಆಚರಿಸೋಣ ಎಂದು ಅವರವರೇ ಅಂದುಕೊಂಡು ಆ ಮೂಲಕ ತಮಗೆ ಅಂದೇ ಸ್ವಾತಂತ್ರ್ಯ ಸಿಕ್ಕಿತು ಎಂದು ಸ್ವಯಂ ಘೋಷಿಸಿಕೊಂಡು ಸ್ವಾತಂತ್ರ್ಯ ದಿನಾಚರಣೆ ಅಂದು ಆಚರಿಸಿದ ದಿನ. ಅದರ ನೆನಪಿಗಾಗಿ ಅದೇ ಕಾರಣ ಇಟ್ಟು ಜನವರಿ ಇಪ್ಪತ್ತಾರಕ್ಕೇ ಏನಾದರೂ ಹೊಸದನ್ನು ಕೊಡಬೇಕು ಎಂದು  ಅದೇ ದಿನವನ್ನು ನಮ್ಮ ಸಂವಿಧಾನವನ್ನು ಜಾರಿಗೊಳಿಸಲು ಇಟ್ಟುಕೊಂಡರು ಎಂಬುದು ತಿಳಿದು ಬರುತ್ತದೆ. 

ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳು ನವದೆಹಲಿಯ ರಾಜಪಥದಲ್ಲಿ ಧ್ವಜಾವರೋಹಣ ಮಾಡುತ್ತಾರೆ. ಅಲ್ಲಿ ನಡೆಯುವ ಮಾರ್ಚ್ ಫಾಸ್ಟ್ ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಗೌರವ ವಂದನೆ ಸ್ವೀಕರಿಸುತ್ತಾರೆ. ಅವರೇ ಅದರ ಕಮಾಂಡರ್ ಇನ್ ಚೀಫ್ ಆಗಿರುತ್ತಾರೆ. ಅವರಿಗೆ ಗೌರವದ ನಂತರ ಮೆರವಣಿಗೆ ನಡೆಯುತ್ತದೆ. ಇದರಲ್ಲಿ ಭಾರತದ ಸಂಸ್ಕೃತಿ, ಪರಂಪರೆ, ಸಾಮರ್ಥ್ಯ, ಸಾಮಾಜಿಕ ಅಂಶಗಳನ್ನು ಪ್ರತಿನಿಧಿಸುವ ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳು ಅನಾವರಣಗೊಳ್ಳುತ್ತವೆ. ಇದನ್ನು ನೋಡುವುದೇ ಚಂದ. ಇದರ ಜೊತೆ ಜೊತೆಗೆ ದೇಶದ ಪ್ರತಿಯೊಂದು ರಾಜ್ಯದ, ಜಿಲ್ಲಾ, ತಾಲೂಕು, ಗ್ರಾಮದ ಕೇಂದ್ರಗಳಲ್ಲಿ, ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಲ್ಲಿಯೂ ಧ್ವಜಾರೋಹಣ ಮಾಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡು ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿ ಭಾರತೀಯರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ತಮ್ಮ ದೇಶ ಪ್ರೇಮ ಮರೆಯುತ್ತಾ ಹೆಮ್ಮೆ ಪಡುವ ದಿನವಿದು. 

         ನಾವು ಪಠ್ಯ ಪುಸ್ತಕದಲ್ಲಿ ಓದಿ, ಕೇಳಿ ತಿಳಿದವರಾಗಿದ್ದೇವೆ ಏನೆಂದರೆ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಸಣ್ಣ ವಿದ್ಯಾರ್ಥಿಗಳಿಂದ ಹಿಡಿದು, ನಾಯಕರು, ಹಿರಿಯರು, ಮಹಿಳೆಯರು, ತಾಯಂದಿರೂ, ಬಡವರು, ಸಿರಿವಂತರು ಕೂಡಾ ಹೇಗೆ ಜಾತಿ, ಮತ, ಧರ್ಮದ ಬೇಧವಿಲ್ಲದೆ ಹೇಗೆ "ನಾವು ಭಾರತೀಯರು, ನಮ್ಮ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಬೇಕು" ಎಂಬ ಒಕ್ಕೊರಳ ಭಾವದಿಂದ ಒಂದಾಗಿ " ಒಗ್ಗಟ್ಟಿನಲ್ಲಿ ಬಲವಿದೆ" ಎಂದು ತೋರಿಸಿ ಭಾರತೀಯರು ಸ್ವಾತಂತ್ರ್ಯ ಗಳಿಸಿಕೊಂಡರು. ಗಲ್ಲಿನ ನೇಣಿಗೂ ಕೊರಳೊಡ್ಡಿ ಭಾರತ ಮಾತೆಗಾಗಿ ಹಲವಾರು ವರುಷ ಜೈಲಿನೊಳಗೆ ಕೊಳೆತು ಊಟ ತಿಂಡಿ ನಿದ್ದೆ ಇಲ್ಲದೆ ತಮ್ಮ ಜೀವ ತ್ಯಾಗ ಮಾಡಿ ಪಡೆದುಕೊಂಡ ಈ ಸ್ವತಂತ್ರ ಭಾರತವನ್ನು ನಾವು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಆಗಿದೆ. ಆದರೆ ಸಮಾಜ ಹಾಗೂ ಹಲವಾರು ಮಾಧ್ಯಮಗಳು ಇಂದು ದೇಶ ಪ್ರೇಮವನ್ನು ಬೆಳೆಸುವ ಬದಲಾಗಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ  ಜಾತಿ, ಮತ, ಧರ್ಮಗಳ ಬೀಜ ಬಿತ್ತಿ, ಒಂದು ಮೇಲು ಇನ್ನೊಂದು ಕೀಳು ಎಂಬ ಭಾವವನ್ನು ರಾಜಕೀಯಕ್ಕಾಗಿ ಬಳಸಿ ಜನರ ಒಗ್ಗಟ್ಟನ್ನು ಒಡೆಯುವ ಕಾರ್ಯ ಮಾಡುತ್ತಿದ್ದಾರೆ. ಇದು ಬಹಳ ತಪ್ಪು. ಒಬ್ಬ ಮಂತ್ರಿ, ಒಬ್ಬ ಎಮ್ಮೆಲೆ ಅಥವಾ ಎಂಪಿಗೆ ಸಿಗುವ ಸ್ಥಾನಮಾನ, ವ್ಯವಸ್ಥೆಗಳು ಒಬ್ಬ ಭಾರತೀಯ ಯೋಧನಿಗೆ ಸಿಗುತ್ತಿಲ್ಲ. 
ಸ್ವತಂತ್ರ ಭಾರತಕ್ಕೆ ಬೇಕಾದ  ಅದರಲ್ಲೂ ಜಾತ್ಯಾತೀತ ರಾಷ್ಟ್ರವೂ ಆದ ಭಾರತ ದೇಶವನ್ನು ಒಂದೇ ಕಾನೂನಿನ ಕೆಳಗೆ ತರುವ ಕಾರ್ಯ ಸುಲಭದ ಮಾತಲ್ಲ. ಅದಕ್ಕೆ ಭಾರತೀಯರು ಸಜ್ಜಾದರು. ಅದು ಭಾರತೀಯ ಸಂವಿಧಾನದ ಉಗಮಕ್ಕೆ ಕಾರಣ ಆಯಿತು. ವಿವಿಧ ಭಾಷೆ, ಹಲವಾರು ಜಾತಿ, ಮತ, ಧರ್ಮದ ಜನ, ವಿವಿಧ ವೇಷ ಭೂಷಣ ಕಲೆ ಸಂಸ್ಕೃತಿಗಳ ದೇಶ. ಶ್ರೀಯುತ ಜವಾಹರಲಾಲ ನೆಹರೂ ಅವರು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ  ಶ್ರೀ ಭೀಮರಾವ್ ಅಂಬೇಡ್ಕರ್ ಅವರನ್ನು ಅವರ ಜ್ಞಾನದ ಮಹತ್ವ ಅರಿತು ನೇಮಿಸಿದರು. ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ ಎಂ ಮುನ್ಶಿ, ಎನ್. ಗೋಪಾಲ ಸ್ವಾಮಿ ಅಯ್ಯಂಗಾರ್, ಅಡ್ವೈಸರ್ ಬಿ ಎನ್ ರಾವ್ ಮೊದಲಾದವರ ತಂಡ ಡಾಕ್ಟರ್ ಬಿ  ಆರ್ ಅಂಬೇಡ್ಕರ್ ಅವರ ನೇತೃತ್ವ ಮತ್ತು ಜ್ಞಾನದ ಸಹಾಯದಿಂದ ಭಾರತಕ್ಕೆ ಬೇಕಾದ ಉತ್ತಮವಾದ ಒಂದು ಸಂವಿಧಾನವನ್ನು ಜಾರಿಗೆ ತಂದರು. ಇದಕ್ಕೆ ಮೊದಲು ಅಂಬೇಡ್ಕರ್ ಅವರು ಅಮೇರಿಕಾದಂತಹ ಹಲವಾರು ದೇಶಗಳ ಸಂವಿಧಾನವನ್ನು ಓದಿ, ಮನನ ಮಾಡಿದ್ದರು. 

 ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕಾದ ರಾಷ್ಟ್ರೀಯ ಹಬ್ಬವಿದು. ಇಡೀ ದೇಶಕ್ಕೆ ಬೇಕಾದ ಏಕ ರೀತಿಯ ಸಂವಿಧಾನವನ್ನು ಡಾಕ್ಟರ್ ಬಿ   ಆ ಅಂಬೇಡ್ಕರ್ ಅವರ ಮಾರ್ಗದರ್ಶನ ಹಾಗೂ ಅಧ್ಯಕ್ಷತೆಯಲ್ಲಿ ಭಾರತ ಸಂವಿಧಾನದ ಕರಡು ಸಮಿತಿ ಹಲವಾರು ದೇಶಗಳ ಸಂವಿಧಾನವನ್ನು ಅಭ್ಯಸಿಸಿ ತನ್ನದೇ ಆದ ಮಹಾನ್ ದೇಶಕ್ಕೆ ಸರಿ ಹೊಂದುವಂತಹ ಅಚ್ಚುಕಟ್ಟಾದ ಒಂದು ಸಂವಿಧಾನವನ್ನು ತಯಾರಿಸಿ ಅದನ್ನು ನವೆಂಬರ್ 26 1949ರಂದು ಅದನ್ನು ಜಾರಿಗೊಳಿಸಿ ತದ ನಂತರ ಅದು ಸಾಧ್ಯ ಎಂದು ಅರಿತು 1950 ಜನವರಿ 26ರಂದು ಅದನ್ನು ಇಡೀ ದೇಶ ಅಂಗೀಕರಿಸಿದ ಶುಭದಿನವಿದು. ಭಾರತ್ ಮಾತಾ ಕೀ ಜೈ ಎನ್ನುವ ಭಾರತೀಯ ಕಂದರಿಗೆಲ್ಲ ಸಂತಸ ಸಂಭ್ರಮದ ದಿನ. ಈ ದಿನದ ರಾಷ್ಟ್ರದ ಹಬ್ಬಕ್ಕೆ ಜಾತಿ, ಮತ, ಧರ್ಮ, ವಿವಿಧ ಆಚರಣೆ, ಸಂಸ್ಕೃತಿ, ವೇಷ - ಭೂಷಣಗಳ ಹಂಗಿಲ್ಲ. ಆಚರಣೆ, ದೇಶಾಭಿಮಾನ, ಸಂತಸ ಅಷ್ಟೇ. ಜಗತ್ತಿನ ಮಗಳೆ ಜೈ ಭಾರತಿ ಎನ್ನಬೇಕು ನಾವೆಲ್ಲಾ. ಭಗತ್ ಸಿಂಗ್, ನೇತಾಜಿ, ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ವೀರ ರಾಣಿ ಅಬ್ಬಕ್ಕ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ತಾಂತ್ಯ ಟೋಪೆ, ಕಿತ್ತೂರು ಚನ್ನಮ್ಮ, ಅರುಣಾ ಅಸಫ್ ಅಲಿ, ಬಾಲ ಗಂಗಾಧರ ತಿಲಕ್, ಲಾಲಾ ಲಜಪತ ರಾಯ್ ಮೊದಲಾದ ಅನೇಕ ನಾಯಕರ ಮುಂದಾಳತ್ವದಲ್ಲಿ ಜೀವವನ್ನೇ ತೊರೆದು ಹೋರಾಡಿ ಕೊನೆಯ ಕ್ಷಣದವರೆಗೂ ತಮ್ಮ ದೇಶಕ್ಕಾಗಿ ಹೋರಾಡಿ ಮಡಿದ, ದುಡಿದ ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರ ವರೆಗೆ ಎಲ್ಲರನ್ನೂ ನೆನೆಯೋಣ, ಗೌರವಿಸೋಣ. ಅನೇಕ ಮಹನೀಯರು , ಮಹಿಳೆಯರು ವೀರ ಮರಣಕ್ಕೆ ಬಲಿಯಾದರೆ, ಸ್ವಾತಂತ್ರ್ಯಕ್ಕೆ ಹೋರಾಡಿದ ತಪ್ಪಿಗೆ ಜೈಲಲ್ಲೇ ಊಟ ತಿಂಡಿ ಇಲ್ಲದೆ ಸತ್ತ ಭಾರತೀಯರು ಅದೆಷ್ಟೋ, ಗುಂಡಿನ ದಾಳಿಗೆ ಸಿಕ್ಕಿ ಸತ್ತವರ ಲೆಕ್ಕವೇ ಇಲ್ಲ. ಅಂತೆಯೇ ಮಕ್ಕಳನ್ನು ದೇಶಕ್ಕಾಗಿ ಕಳೆದುಕೊಂಡ ಮಾತೆಯರ ಆಕ್ರಂದನ ಅದೇನೋ. ಎಲ್ಲವೂ ದೇಶದ ಒಳಿತಿಗಾಗಿ, ಸ್ವತಂತ್ರ ಭಾರತಕ್ಕಾಗಿ. ಈ ದೇಶಭಕ್ತಿ ನಮ್ಮಲ್ಲಿ ಮತ್ತೆ ಉದಿಸಬೇಕಾಗಿದೆ. ನಾನು ಹಿಂದೂ, ನಾನು ಮುಸ್ಲಿಂ, ನಾನು ಕ್ರೈಸ್ತ,ನಾನು ಸಿಖ್, ನಾನು ಪಾರ್ಸಿ, ನಾನು ಬೌದ್ಧ ಎಂಬ ಹೆಮ್ಮೆ ಮನೆಯಲ್ಲೂ ಮನದಲ್ಲೂ ಖಂಡಿತಾ ಇರಲಿ, ಪ್ರತಿಯೊಬ್ಬರಲ್ಲೂ ತಮ್ಮ ಜಾತಿ, ಮತ, ಧರ್ಮದ ಬಗ್ಗೆ ಗೌರವವೂ ಇರಲಿ, ಆದರೆ ಭಾರತ ಮಾತೆಯ ಹೆಸರು ಬಂದಾಗ ಮೇಲಿನ ಎಲ್ಲವನ್ನೂ ಬದಿಗೊತ್ತಿ ನಾವೆಲ್ಲಾ ಭಾರತೀಯರಾಗಿ ಒಂದಾಗೋಣ. "ಸಾವಿರ ಮೈಲುಗಳ ಪ್ರಯಾಣವು ಕೂಡಾ ಒಂದೇ ಒಂದು ಮೊದಲ ಹೆಜ್ಜೆಯಿಂದ ಪ್ರಾರಂಭಗೊಳ್ಳುತ್ತದೆ" ಎಂದು  ಸ್ವಾಮಿ ವಿವೇಕಾನಂದರು ಹೇಳಿರುವಂತೆ ದೇಶಭಕ್ತಿಯ ಈ ಸಂದೇಶ ಹಾಗೂ ಪಾಲನೆ ನಮ್ಮಿಂದಲೇ ಪ್ರಾರಂಭವಾಗಲಿ ಅಲ್ಲವೇ?ಇದೇ ಇಂದು ನಾವು ಕಲಿಯಬೇಕಾದ, ಮಕ್ಕಳಿಗೆ, ಮುಂದಿನ ಜನಾಂಗಕ್ಕೆ ನಾವು ಕಲಿಸಬೇಕಾದ ದೊಡ್ಡ ಗುಣ. ತನ್ನನ್ನೂ ತನ್ನ ಧರ್ಮವನ್ನು  ಆಚರಿಸಿಕೊಂಡು ಇತರ ಧರ್ಮದ ಜನರನ್ನು ಗೌರವಿಸುವ ಉದಾರ ಮನಸ್ಸಿoದು ಪ್ರತಿಯೊಬ್ಬ ಭಾರತೀಯ ಕಂದನಲ್ಲಿ ಮೊಳೆತು ಹೆಮ್ಮರವಾಗಿ ಬೆಳೆಯಬೇಕಿದೆ. ಸೈನಿಕರಿಗೆ ಗೌರವ, ಹೆಚ್ಚಿನ ಸ್ಥಾನಮಾನ ಸಿಗಬೇಕಿದೆ. ಕಷ್ಟ ಎಂದವನಿಗೆ ಸಹಾಯ ಒದಗಬೇಕಿದೆ. ಆಗಲೇ ಭಾರತದ ಉದ್ಧಾರ. ಅಂತೆಯೇ ರಾಷ್ಟ್ರ ಲಾಂಛನ, ರಾಷ್ಟ್ರ ಗೀತೆ, ದೇಶದ ಬಗ್ಗೆ ಪ್ರೀತಿ ಉಕ್ಕಿ ಹರಿಯಬೇಕಿದೆ. ದೇಶದ ಬಡತನ ದೂರವಾಗಿ ಪ್ರತಿ ಭಾರತೀಯ ನೆಮ್ಮದಿಯಿಂದ ಬದುಕಬೇಕು. ಅದರ ಜೊತೆ ಜೊತೆಗೆ ಭಾರತೀಯ ಸಂವಿಧಾನ, ರಾಷ್ಟ್ರೀಯ ಹಬ್ಬಗಳು, ಮತದಾನ, ದೇಶದ ಗೌರವ ಎಲ್ಲರ ಹಕ್ಕು. ಪ್ರತಿ ಕೆಲಸವನ್ನು ಬದಿಗೊತ್ತಿ ಇದನ್ನು ಗೌರವಿಸ ಬೇಕಿದೆ. ಪ್ರತಿಯೊಬ್ಬ ದೇಶದ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ. ತಾಯ್ನಾಡು, ತವರುಮನೆಯ ನೆಮ್ಮದಿ ಬೇರೆಲ್ಲೂ ಸಿಗಲು ಸಾಧ್ಯ ಇಲ್ಲ. ಇದು ಪರದೇಶದಲ್ಲಿ ದುಡಿದು ಕಷ್ಟ ಪಡುತ್ತಾ ಇರುವವರಿಗೆ ಗೊತ್ತು. ಆದಕಾರಣ ದೇಶ ಭಕ್ತಿಯನ್ನು, ಮಾತಾ ಪಿತೃಗಳಲ್ಲೂ ಶ್ರದ್ಧಾ ಭಕ್ತಿ, ಪ್ರೀತಿಯನ್ನು ಇರಿಸಿಕೊಳ್ಳೋಣ. ಎಲ್ಲರೊಂದಿಗೆ ಬೆರೆತು ಬಾಳುವ ವಿವಿಧತೆಯಲ್ಲಿ ಏಕತೆ ಪಾಲಿಸುವ ಮಂತ್ರ ಕಲಿಯೋಣ. ನಮೆಲ್ಲರ ಬೇರೆ ಬೇರೆ ಹೆಸರುಳ್ಳ ದೇವರಲ್ಲಿ ನಮಗೆ ಜನ್ಮ ಕೊಟ್ಟು,  ಅನ್ನ ಕೊಟ್ಟು, ಜಾಗ ಕೊಟ್ಟು, ಸಾಕಿ ಸಲಹುತ್ತಿರುವ ದೇಶಕ್ಕೂ, ಪ್ರಕೃತಿಗೂ ಒಳಿತಾಗಲಿ ಎಂದು ಬೇಡಿಕೊಳ್ಳೋಣ ಅಲ್ಲವೇ? ದೇವರು ಒಬ್ಬನೇ, ನಾಮ ಹಲವು ಎನ್ನುತ್ತಾರೆ. ಯಾವ ದೇವರಾದರೂ ಸರಿ, ದೇಶಕ್ಕೂ, ಜನಕ್ಕೂ ಒಳಿತಾಗಲಿ ಎಂಬ ಹಾರೈಕೆ ನಮ್ಮ ಎಲ್ಲರ ಅಲ್ಲವೇ?

ಹೀಗೆ ಬಹಳ ಕಷ್ಟದಿಂದ ಹಾಗೂ ಧನ್ಯತೆಯಿಂದ ತಯಾರಾದ ಭಾರತದ ಸಂವಿಧಾನವನ್ನು , ಅದಕ್ಕೆ ಕಾರಣಕರ್ತರಾದರನ್ನೂ, ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ನೆನೆದು ಅವರಿಗೆ ಗೌರವವನ್ನು ಕೊಡುವ ಜೊತೆಗೆ ನಮ್ಮ ದೇಶದ ಸಂವಿಧಾನವನ್ನು ಗೌರವಿಸಿ ಅದನ್ನು ಪರಿಪಾಲಿಸುವ ಕರ್ತವ್ಯವನ್ನು ಕೂಡಾ ಮಾಡಬೇಕಾಗುತ್ತದೆ. ಅದರ ಜೊತೆ ಜೊತೆಗೆ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಗಣರಾಜ್ಯ ದಿನವನ್ನು ಕೂಡಾ ಭಾರತೀಯರಾಗಿ, ಜಾತಿ ಮತ ಧರ್ಮ ಮರೆತು ಆಚರಿಸಿ ಗೌರವಿಸಬೇಕಿದೆ ಎಂದು ಎಲ್ಲರಿಗೂ ಅನ್ನಿಸುವುದಿಲ್ಲವೇ? ನೀವೇನಂತೀರಿ?
@ಹನಿಬಿಂದು@
13.01.2023

ದಶಕ 101

ದಶಕ -101

ಯುವಕರ ಎದೆಯನು ತಟ್ಟಿದ ಯುವಕನ
ಯುವಕರ ದಿನದಿ ನೆನೆಯುತ ಸಾಗುವ
ವಿವೇಕ ಜ್ಞಾನವ ಪಡೆದ ಯೋಗಿಯನು
ಆನಂದ ಮಾರ್ಗದಿ ಓದುತ ಓಡುವ..

ಭರತ ಖಂಡದ ಕೀರ್ತಿಯ ಮೆರೆದ
ಅಮೆರಿಕ ನೆಲದಲಿ ಕರತಾಡನ  ಗಳಿಸಿದ
ಸಣ್ಣ ವಯಸ್ಸಿನಲಿ ದೊಡ್ಡ ಸಾಧನೆ
ಬಿಟ್ಟು ಸಂಸಾರದ ಎಲ್ಲಾ ಕಾಮನೆ!

ಮಾವು ಬಿತ್ತಿ ಬೇವು ಬೆಳೆಯಲಾರೆವು
ಕಷ್ಟ ಪಡದೆ ಸುಖವ ಗಳಿಸಲಾರೆವು..
@ಹನಿಬಿಂದು@
17.01.2023

ಒಂದಿಷ್ಟು....171

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -171

ಚಳಿಗಾಲ ಹೋಗಿ ಬೇಸಿಗೆ ಕಾಲ ಬರುತ್ತಿದೆ. ವಿಪರೀತ ಸೆಕೆ ನಮ್ಮ ದೇಹವನ್ನು ನಿರ್ಜಲೀಕರಣ ಮಾಡಿ ಬಿಡುತ್ತದೆ. ತಾಜಾ ಹಣ್ಣು, ತರಕಾರಿಗಳನ್ನು ನಾವು ಬಳಸಬೇಕಿದೆ. ಸಾಧ್ಯವಾದಷ್ಟು ಮನೆಯ ಸುತ್ತಮುತ್ತ ಬೆಳೆಯುವ ಹಣ್ಣು, ತರಕಾರಿ, ಸೊಪ್ಪು ಇವುಗಳನ್ನು ಬಳಸಿದರೆ ಆರೋಗ್ಯ ಹಿತವಾಗಿ ಇಟ್ಟುಕೊಳ್ಳಲು ಸಾಧ್ಯ. ಇತ್ತೀಚೆಗಂತೂ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಹೆಚ್ಚಿನ ಜನರು ಹೃದಯಾಘಾತದಿಂದ ಸಾವನ್ನಪ್ಪುವ ದುರಂತವನ್ನು ದಿನನಿತ್ಯ ಪತ್ರಿಕೆಯಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ, ವಾರ್ತೆಗಳಲ್ಲಿ ನೋಡುತ್ತಿದ್ದೇವೆ. ಇದನ್ನು ಕರೋನ ಲಸಿಕೆ ಪಡೆದು ಹೀಗಾಗಿದೆ ಎಂದು ಕೆಲವು ಜನ ಗೊತ್ತಿಲ್ಲದೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕರೋನಾ ಲಸಿಕೆ ಹಲವಾರು ನುರಿತ ವೈದ್ಯರು, ವೈದ್ಯ ವಿಜ್ಞಾನಿಗಳು ಹಲವಾರು ತಿಂಗಳುಗಳ ಕಾಲ ರಾತ್ರಿ ಹಗಲೆನ್ನದೆ, ಊಟ - ನಿದ್ರೆ ಬಿಟ್ಟು ಜನರನ್ನು ಆ ವೈರಸ್ ನಿಂದ ರಕ್ಷಿಸಲು ಕಂಡು ಹಿಡಿದುದೇ ಹೊರತು ಜನರ ಜೀವವನ್ನು ಬಲಿ ಪಡೆಯಲಿಕ್ಕೆ ಅಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಲಸಿಕೆಯನ್ನು ಎಲ್ಲರೂ ಪಡೆಡಿರುವರು. ಸುಳ್ಳು ಸುದ್ದಿ ಹಬ್ಬಿಸುವ ಕಾರ್ಯ ಸುಲಭ. ಅದರ ಸಮರ್ಥನೆ ಕಷ್ಟ. ಸರಿಯಾದ ಮಾಹಿತಿ  ಇಲ್ಲದೆ ಸಾಮಾಜಿಕ ಕಾಲ ತಾಣಗಳು ಕೊಟ್ಟ ಸುಳ್ಳು ಸುದ್ದಿಗಳನ್ನು ಕೇಳದೆ ನಮ್ಮ ನಿತ್ಯದ ಆರೋಗ್ಯದ ಕಡೆ ಗಮನ ಹರಿಸಬೇಕು. 

ಎಲ್ಲಾ ಹಣ್ಣು ತರಕಾರಿಗಳನ್ನು ನಾವು ಅಂಗಡಿ ಹಾಗೂ ಸಂತೆಗಳಲ್ಲಿ ಕೊಳ್ಳುವಾಗ ಎಚ್ಚರ ವಹಿಸಬೇಕು. ಹಲವಾರು ದಿನ ಕೆಡದಂತೆ ಇಡಲು ಅವುಗಳ ಮೇಲೆ ರಾಸಾಯನಿಕಗಳನ್ನು ಸುರಿದಿರುತ್ತಾರೆ. ಅಷ್ಟೇ ಅಲ್ಲದೆ ಅವು ಬೆಳೆಯುವಾಗ ಹುಳ ಬೀಳ ಬಾರದು ಎಂದು ಕೂಡಾ ಹಲವಾರು ಕೀಯ ನಾಶಕಗಳನ್ನು ರೈತರು ಸಿಂಪಡಿಸುತ್ತಾರೆ. ಎಲ್ಲವೂ ವಿಷಮಯವಾಗಿ ಮಾರ್ಪಟ್ಟ ಕಾರಣ ನಮ್ಮ ಹೊಟ್ಟೆಯೊಳಗೆ ನಿತ್ಯ ವಿಷದ ಶೇಖರಣೆ ಆಗುತ್ತಿದೆ. ಒಂದು ಕಡೆಯಿಂದ ದೇಹ ತನ್ನ ನೈಸರ್ಗಿಕ ಕಾರ್ಯ ಸರಿಯಾಗಿ ಮಾಡಲು ಆಗದೆ ವಿಷಕ್ಕೆ ಹೊಂದಿಕೊಂಡು ಬದುಕುತ್ತಿರುತ್ತದೆ. ಒಂದು ಸರಿಯಾದ ಕ್ಷಣದಲ್ಲಿ ನಮ್ಮ ದೇಹದಲ್ಲಿ  ಬೇಡವಾದ ಬೇರೆಯೇ ಕೋಶಗಳ ಬೆಳವಣಿಗೆ ಆಗಿ ಅದುವೇ ಕ್ಯಾನ್ಸರ್ ಗಡ್ಡೆ ಆಗಿ ಬದಲಾಗಿರುತ್ತದೆ. ನಮ್ಮ ದೇಹ ಅದನ್ನು ತಾಳಿಕೊಳ್ಳುವವರೆಗೆ ನಮಗೆ ಅದರ ಇರುವು ಗೊತ್ತೇ ಇರುವುದಿಲ್ಲ. ಗೊತ್ತಾಗುವಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ಇದು ಇಂದಿನ ಹಲವಾರು ಜನರ ಪರಿಸ್ಥಿತಿ. ಯಾವುದೇ ದುಶ್ಚಟಗಳು ಇಲ್ಲದೆ ಇರುವವರಿಗೂ ಅದು ಹೇಗೆ ಹೀಗಾಯ್ತು ಎಂದು ಜನ ಬೇಸರಿಸುತ್ತಾರೆ. ಅವರು ತಿನ್ನುವ ಆಹಾರದ ಬಗ್ಗೆ ಅವರಿಗೆ ಗೊತ್ತೇ ಇರುವುದಿಲ್ಲ. 

ಈಗಿನ ಆಹಾರಗಳ ಬಣ್ಣ ಗಾಢವಾಗಿ ಎದ್ದು ಕಾಣುತ್ತಿರುತ್ತದೆ. ಗೋಬಿ ಮಂಚೂರಿ, ಚಿಕನ್ ಕಬಾಬ್, ಚಿಕನ್ ಟಿಕ್ಕಾ, ಬಟಾಟೆಯ ರೋಲ್ಸ್, ಮೀನು ಫ್ರೈ ಇದರ ಎಲ್ಲದರ ಬಣ್ಣ ಅಚ್ಚ ಕೆಂಪಾಗುತ್ತದೆ. ಬ್ಯಾಡಗಿ ಮೆಣಸಿನ ಕಾಯಿಯನ್ನು ಬಿಸಿನೀರಿಗೆ ಹಾಕಿ ತಕ್ಷಣ ರುಬ್ಬಿ ಹಾಕಿದರೂ ಆ ಬಣ್ಣ ಬರಲಾರದು. ಎಲ್ಲವೂ ಆರ್ಟಿಫಿಷಿಯಲ್ ಬಣ್ಣಗಳು. ಒಳ್ಳೆಯ ಆಹಾರದ ಬಣ್ಣದ ಬೆಲೆ ದುಬಾರಿ. ರಸ್ತೆ ಬದಿಯ ವ್ಯಾಪಾರಿಗಳು, ಹೋಟೆಲ್ ನವರು ಕಡಿಮೆ ಬೆಲೆಯ ವಸ್ತುಗಳನ್ನು ಖರೀದಿಸುವ ಕಾರಣ ಅದು ದೇಹಕ್ಕೆ ಒಳ್ಳೆಯದಲ್ಲ. ಆದ ಕಾರಣ ತಿನ್ನುವ ಮೊದಲು ಅದಕ್ಕೆ ಬಳಸಿದ ಬಣ್ಣದ ಬಗ್ಗೆ ತಿಳಿದುಕೊಳ್ಳಬೇಕು, ಅಷ್ಟೇ ಅಲ್ಲ ಅದರ ರುಚಿಗಾಗಿ ಬಳಸುವ ಟೇಸ್ಟ್ ಪೌಡರ್ ಅಜಿನಮೋಟೋ ಕೂಡಾ ಆರೋಗ್ಯಕ್ಕೆ ಕೆಟ್ಟದು. ಮನೆಗಿಂತ ಹೊರಗಿನ ಆಹಾರ ರುಚಿ ಕೊಡುವುದು ಈ ಟೇಸ್ಟಿಂಗ್ ಪುಡಿಯಲ್ಲೆ. ಅದರ ಜೊತೆ ಆಹಾರ ಮೆದುವಾಗಲು ಬಳಸುವ ಸೋಡಾ ಕೂಡಾ ಆರೋಗ್ಯಕ್ಕೆ ತುಂಬಾ ಕೆಟ್ಟದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಿಂದಿನ ಕಾಲದಲ್ಲಿ ಜನ ಇಡ್ಲಿ, ದೋಸೆಯ ಹಿಟ್ಟು ಹುಳಿ ಬರಲು ನೈಸರ್ಗಿಕ ವಿಧಾನ ಅನುಸರಿಸುತ್ತಿದ್ದರು. ತೆಂಗಿನ ಕಾಯಿ ನೀರು, ತೆಂಗಿನ ಕಳ್ಳು, ಅಥವಾ ನೀರಾ ಇವುಗಳನ್ನು ದೋಸೆ, ಆಪ, ಇಡ್ಲಿ ಹಿಟ್ಟು ಹದವಾಗಿ ಬರಲು ಉಪಯೋಗಿಸುತ್ತಿದ್ದರು. 

ಈಗಂತೂ ಪಟಾಪಟ್ ಜೀವನ. ಯಾರಿಗೂ ಯಾವುದಕ್ಕೂ ಕಾಯಲು ಸಮಯ ತಾಳ್ಮೆ ಎರಡೂ ಇಲ್ಲ! ಮಕ್ಕಳೂ ಬೇಗನೆ ದೊಡ್ಡವರಾಗಬೇಕು ಎಂದು ಜನ ಬಯಸುವ ಕಾಲ.ಫಾಸ್ಟ್ ಮೂವಿಂಗ್, ಫಾಸ್ಟ್ ಕೆಲಸ, ಫಾಸ್ಟ್ ಬೆಳವಣಿಗೆ, ಫಾಸ್ಟ್ ಫುಡ್..ಸಾಯುವುದೂ ಕೂಡಾ ಫಾಸ್ಟ್ ಅದಾಗಿ ಅದೇ ಆಗಿದೆ. ಇದನ್ನು ತಪ್ಪಿಸಲು ಹಿಂದಿನ ಜನರ ಪದ್ಧತಿಯಲ್ಲಿ ಬದುಕುವುದು ಕಷ್ಟ. ಮತ್ತೆ ಜೀವನವನ್ನು ಹಿಂದೆ ತಳ್ಳಲು ಅಸಾಧ್ಯ. ಆದರೆ ಆರೋಗ್ಯ ಕಾಳಜಿ ಮಾಡಿಕೊಳ್ಳ ಬಹುದು. ಕಿಚನ್ ಗಾರ್ಡನ್ ನಲ್ಲಿ ಬೆಳೆದ ಸೊಪ್ಪು ತರಕಾರಿಗಳ ಸೇವನೆ. ಮನೆಯ ಟೆರೆಸ್ ಮೇಲೆ ಹಣ್ಣು ತರಕಾರಿಗಳನ್ನು ಸಾವಯವ ಗೊಬ್ಬರ ಹಾಕಿ ಬೆಳೆಸುವುದು, ಎಲ್ಲಾ ರೀತಿಯ ಸೊಪ್ಪು ಗಳನ್ನೂ ನಾವೇ ಬೆಳೆಯಲು ಪ್ರಯತ್ನಿಸುವುದು ಮತ್ತು ನಮ್ಮ ಆಹಾರದಲ್ಲಿ ಅವುಗಳನ್ನೇ ಬಳಸುವುದು ಇವು ನಮ್ಮ ಆರೋಗ್ಯ ನಮ್ಮ ಕೈಯಲ್ಲಿ, ಪ್ರಿವೆನ್ಶನ್ ಇಸ್ ಬೆಟರ್ ದೆನ್ ಕ್ಯೂರ್ ಅಂತಾರಲ್ಲ, ರೋಗ ಬಂದ ಮೇಲೆ ಮದ್ದು ಮಾಡುವುದಕ್ಕಿಂತ ರೋಗ ಬರದ ಹಾಗೆ ತಡೆಯುವುದು ಒಳ್ಳೆಯದು. ಫ್ರಿಜ್ ನಿಂದ ಹೊರ ತೆಗೆದ ನೀರು ಮತ್ತು ಆಹಾರವನ್ನು ಆಗಲೇ ತಿನ್ನುವುದು ಅಥವಾ ಕುಡಿಯುವುದು ಕೂಡಾ ನಮ್ಮ ದೇಹಕ್ಕೆ ದುಷ್ಪರಿಣಾಮ ಉಂಟು ಮಾಡುತ್ತದೆ. ಹಾಗೆಯೇ ನಿತ್ಯ ನಾವು ಸೇವಿಸುವ ಹೊರಗಿನ ಆಹಾರ, ಬೇಕರಿ ತಿನಿಸುಗಳು ಕೂಡಾ ದೇಹಕ್ಕೆ ಕೆಟ್ಟ ಪರಿಣಾಮ ಬೀರುತ್ತವೆ. 

ತಿಂಡಿ ಕರಿಯುವಾಗ   ಒಗ್ಗರಣೆಯಲ್ಲಿ ಬಳಸುವ ಎಣ್ಣೆಯ ಬಗ್ಗೆಯೂ ನಾವು ಕಾಳಜಿ ವಹಿಸದೆ ಹೋದರೆ ಹೃದಯದ ಆರೋಗ್ಯ ಕೆಡುತ್ತದೆ. ಪ್ಯಾರಾಫಿನ್ ಎಂಬ ಬಣ್ಣ, ರುಚಿ ಇಲ್ಲದ ರಾಸಾಯನಿಕವನ್ನು ಹೆಚ್ಚುತ್ತಿರುವ ದೈನಂದಿನ ಬೇಡಿಕೆಗೆ ಸಾಕಷ್ಟು ಉತ್ತಮ ಎಣ್ಣೆ ಕೊಡಲು ಸಾಧ್ಯ ಆಗದೆ ಇರುವ ಕಾರಣ ಹೆಚ್ಚಿನ ಎಲ್ಲಾ ಎಣ್ಣೆ ತಯಾರಿಕಾ ಕಂಪೆನಿಗಳು ಉಪಯೋಗಿಸುವುದು ನಮ್ಮ ಹೃದಯದ ಸ್ತಂಭನ, ಖಾಯಿಲೆಗಳಿಗೆ ಕಾರಣ. ಕಡಿಮೆ ಹಣಕ್ಕೆ ಸಿಗುವ ಹೊರಗಿನ ಆಹಾರವನ್ನು ಈ ಎಣ್ಣೆಗಳನ್ನು ಬಳಸಿ ಕರಿದಿರುತ್ತಾರೆ, ನಾವು ತಿನ್ನುವ ಆಹಾರದಲ್ಲಿ ಈ ರೀತಿಯ ಕಡಿಮೆ ಗುಣಮಟ್ಟದ ಎಣ್ಣೆ ಬಳಸಿದರೆ ಅಮ್ಮನ ಕೈರುಚಿಯ ಅಡುಗೆಯೂ ನಮ್ಮ ದೇಹಕ್ಕೆ ಒಳ್ಳೆಯದಲ್ಲ! ಆದ ಕಾರಣ ಎಲ್ಲರಿಗೂ ಗೊತ್ತಿದ್ದೂ ಮಾಡುವ ನಿತ್ಯ ಸೇವನೆಯ ಯಾವುದೋ ಚರಂಡಿಯ, ಕೊಳಕು ನೀರು ಬಳಸಿ ತಯಾರಿಸಿದ ಪಾನಿ ಪೂರಿ, ಮಸಾಲ ಪೂರಿ, ಟೇಸ್ಟ್ ಪೌಡರ್ ಹಾಗೂ ರಾಸಾಯನಿಕ  ಬಣ್ಣಗಳನ್ನು ಹಾಕಿ ತಯಾರಿಸಿದ ಫ್ರೈ, ನೂಡಲ್ಸ್ ಇವನ್ನೆಲ್ಲ ತಿನ್ನದೆ ಇರುವುದು ಉತ್ತಮ. ಜಂಕ್ ಫುಡ್ ಅಂತ ಇವುಗಳನ್ನೇ ಹೇಳುವುದು. ನಮ್ಮ ನಾಲಗೆ ಇದನ್ನೇ ಕೇಳುತ್ತದೆ. ಕಾರಣ ಟೇಸ್ಟ್ ಪೌಡರ್. 

ಹಲವಾರು ವೈದ್ಯರ, ಆಹಾರ ತಜ್ಞರ ಸಲಹೆಯ ಅಂಕಣಗಳನ್ನು ಓದಿ, ಟಿಪ್ಸ್ ಕೇಳಿ , ಪರರ ಬದುಕನ್ನು ನಾನು ನಿಮಗೆ ಇದನ್ನು ಹೇಳುತ್ತಿರುವೆ. ನಿಮಗೂ ನಮಗೂ ಒಂದು ಕಿವಿಮಾತು ಎಲ್ಲಾ ಸೊಪ್ಪು, ಹಣ್ಣು,ತರಕಾರಿಗಳನ್ನು ಬಳಸುವ ಮೊದಲು ಉಪ್ಪು ಹಾಗೂ ಅರಶಿಣ ಪುಡಿ ಬಳಸಿದ ಬಿಸಿ ನೀರಿನಲ್ಲಿ ತೊಳೆಯುವುದು ಉತ್ತಮ. ಆರೋಗ್ಯವೇ ಭಾಗ್ಯ ಅಲ್ಲವೇ? ಹೆಚ್ಚು ನೀರು ಕುಡಿಯಬೇಕು. ದೇಹದ ಹೊರಗೆ ಸ್ನಾನ ಆದ ಹಾಗೆ ದೇಹದ ಒಳಗಿನ ಮಲಿನವನ್ನೂ ಕೂಡಾ ಸ್ವಲ್ಪ ಮಟ್ಟಿಗೆ ತೊಳೆದು ಹಾಕಬಹುದು. ಕುಡಿಯುವ ನೀರು ಕೂಡಾ ಶುದ್ಧ ಹಾಗೂ ಬಿಸಿ ಮಾಡಿ ಆರಿಸಿದ ನೀರಾದರೆ ಉತ್ತಮ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
11.02.2023

ಒಂದಿಷ್ಟು....170

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -170

ವೇದನೆಯನ್ನು ಮರೆಯಿರಿ. ನೋವಿನ ಬಗ್ಗೆ ಕಷ್ಟಗಳ ಬಗ್ಗೆ ತಲೆ ಕೆಡಿಸಿಕೊಳ್ಳ ಬೇಡಿರಿ. ಕಷ್ಟ ಮನುಷ್ಯನಿಗೆ ಅಲ್ಲದೆ ಮರಕ್ಕೆ ಬರುತ್ತದೆಯೇ? ಕಷ್ಟದ ಹಿಂದೆ ಸುಖ ಇದೆ. ಪ್ರತಿ ಕಷ್ಟದ ಮುಂದೆಯೂ ಸುಖದ ಸರಮಾಲೆ ಇದೆ, ಕೈ ಕೆಸರಾದರೆ ಬಾಯಿ ಮೊಸರು. ಆಳಾಗಿ ದುಡಿದವ ಅರಸಾಗಿ ಬಾಳುವ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಇದೆಲ್ಲ ಹಳೆಯ ಗಾದೆಗಳು. ಈಗ ಕಾಲ ಬದಲಾಗಿದೆ ಅಲ್ಲವೇ? ಕಾಲ ಬದಲಾಗಿದೆಯೇ, ನಾವು ಬದಲಾಗಿದ್ದೇವೆಯೇ ಅಥವಾ ನಾವೇ ಕಾಲವನ್ನು ಬದಲಾಯಿಸಿ ಬಿಟ್ಟಿದ್ದೇವೆಯೇ ಅದು ನಮಗೂ ಆ ದೇವರಿಗೂ ಗೊತ್ತು. ಆದರೆ ಮನುಷ್ಯರ ಸಂಖ್ಯೆ ಪ್ರಪಂಚದ ಎಲ್ಲಾ ಪ್ರಾಣಿಗಳ ಸಂಖ್ಯೆಗಿಂತ ಹೆಚ್ಚಾಗಿ, ತಿನ್ನಲು ಏನೂ ಇಲ್ಲದೆ ಬರ ಬಂದು, ಇದೀಗ ಹೆಚ್ಚಿನ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಅಷ್ಟೇ ಅಲ್ಲದೆ ಕೋಳಿ, ಕುರಿ, ಆಡು, ಹಂದಿ, ದಾನ, ಬಾತುಕೋಳಿ, ಉಡ, ನವಿಲು ಹೀಗೆ ಅನೇಕ ಪ್ರಾಣಿಗಳನ್ನು ತಿನ್ನುವ ಮಾನವ ಸಸ್ಯಗಳನ್ನು ಕೂಡಾ ಕಬಳಿಸುತ್ತಾ ಮಿಶ್ರಹಾರಿಯಾಗಿ ಮೆರೆದು ಉಳಿದ ಪ್ರಾಣಿಗಳ ಜೀವಕ್ಕೆ ಧಕ್ಕೆ ತರುವ ವಿಷಕಾರಿ ವಸ್ತುಗಳನ್ನು ಬಳಸುವುದು ಮಾತ್ರ ಅಲ್ಲ ಬದಲಾಗಿ ಇಡೀ ಜೈವಿಕ ವ್ಯವಸ್ಥೆಯ ಕೊಂಡಿಯನ್ನೆ ಕಳಚಿ ಬಿಟ್ಟಿದ್ದಾನೆ. ಇದರಿಂದ ಹಲವಾರು ಪ್ರಾಣಿ, ಪಕ್ಷಿ ಕೀಟಗಳ ಪ್ರಬೇಧಗಳು ಅಳಿವಿನ ಅಂಚಿನಲ್ಲಿವೆ. ಅಷ್ಟೇ ಯಾಕೆ? ಮಾನವರ ಮಕ್ಕಳೇ ಇಂದು ಹುಟ್ಟುವಾಗಲೇ ರೋಗ ಪೀಡಿತರಾಗಿ ಹುಟ್ಟುತ್ತಿದ್ದಾರೆ. ಕಾರಣ ವಿಷಕಾರಿ ವಸ್ತುಗಳ ಬಳಕೆ. 

ಮನುಜ ಬೇರೆ ಪ್ರಾಣಿ, ಪಕ್ಷಿ ಜೀವಿಗಳನ್ನು ಮಾತ್ರವಲ್ಲ, ತನ್ನನ್ನೇ ತಾನು ನಿತ್ಯ ವ್ಯಾವಹಾರಿಕ ಬುದ್ಧಿಯಿಂದಾಗಿ ತನ್ನನ್ನು ತಾನು ಸಾಯಿಸಿಕೊಳ್ಳುತ್ತಾ, ತನ್ನ ವಂಶವನ್ನು ಕೂಡಾ ರೋಗಿಷ್ಟರಾಗಿ ಮಾಡುತ್ತಾ, ಮುಂದೊಂದು ದಿನ ತಾನೂ ವಿಷಪೂರಿತನಾಗಿ ನೀರಿಲ್ಲದೆ ಸಾಯುವ ಪರಿಸ್ಥಿತಿ ಬಂದೀತು. ಕಾರಣ ಭೂಮಿಗೆ ಬೆರೆಸಿದ ವಿಷ ಸೇರುವುದು ನೀರು ಮತ್ತು ಆಹಾರದ ಮೂಲಕ ತನ್ನದೇ ಹೊಟ್ಟೆಗೆ. ನೀರಿಗೆ ಬೆರೆಸಿದ ವಿಷ ಸಾಗರ ಸೇರಿ ಮತ್ತೆ ಅಲ್ಲಿನ ಮೀನುಗಳ ಮೂಲಕ ನಮ್ಮ ಹೊಟ್ಟೆಯ ಒಳಗೆಯೇ ಸೇರುತ್ತದೆ ಅಲ್ಲವೇ? ಮಾಡಿದ್ದುಣ್ಣೋ ಮಹರಾಯ! ಮನುಜರಿಗೆ ಅದೇ ಮದ್ದು! ಪಾಕಿಸ್ತಾನ, ಲಿಬಿಯಾ, ಶ್ರೀಲಂಕಾದ ಜನರ ಪಾಡನ್ನು ನೋಡಿ ನಾವು ಕಲಿಯ ಬೇಕಾದುದು ಬಹಳಷ್ಟು ಇದೆ. 

ಈಗಂತೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಯುಗ. ತಾಂತ್ರಿಕ, ವೈಜ್ಞಾನಿಕ ಯುಗ. ಹಾಸಿಗೆ ಇದ್ದಷ್ಟು ಕಾಲು ಚಾಚುವ ಯುಗವಲ್ಲ ಇದು, ಸಾಲ ಮಾಡಿ ಹೊಸ ದೊಡ್ಡ ಹಾಸಿಗೆ ತರುವ ಯುಗ. ಅಲ್ಲದೆ ಬಜಾಜ್ ಫೈನಾನ್ಸ್, ಕ್ರೆಡಿಟ್ ಬೀ, ಮಹೀಂದ್ರ ಫೈನಾನ್ಸ್ ನಂತಹ ಸಾವಿರಾರು ಫೈನಾನ್ಸ್ ಕಂಪನಿಯವರು ತಾವೇ ಕಾಲ್ ಮಾಡಿ ನಿಮ್ಮ ಕಷ್ಟಕ್ಕೆ ನಾವು ಸಹಾಯ ಮಾಡುತ್ತೇವೆ, ಹೇಳಿ ನಿಮಗೆ ಎಷ್ಟು ಲೋನ್ ಬೇಕು ನಾವು ಕೊಡುತ್ತೇವೆ. ಇಪ್ಪತ್ತೈದು ಶೇಕಡಾ ಬಡ್ಡಿ ಕೊಟ್ಟರೆ ಸಾಕೆಂದು ದಿನ ದಿನ ಅವರೇ ಫೋನ್ ಮಾಡಿ ನಿಮ್ಮ ನಮ್ಮೆಲ್ಲರನ್ನೂ ವಿಚಾರಿಸಿ ಕೊಳ್ಳುತ್ತಾ ಇರುವಾಗ, ಮಲ್ಯ, ಅಂಬಾನಿ, ಅದಾನಿ ಎಲ್ಲರೂ ಕೋಟ್ಯಾಧಿಪತಿಗಳು ಕೋಟಿ ಕೋಟಿ ಲೋನ್ ಗಳಲ್ಲೆ ಬದುಕುತ್ತಿರುವಾಗ ಇನ್ನು ನಾವು ಸಾವಿರಗಳಲ್ಲಿ ತಿಂಗಳಿಗೆ ಒಂದು ದಿನ ಸಂಬಳ ಪಡೆಯುವವರು ಯಾವ ಲೆಕ್ಕ ಬಿಡಿ! 

ಇನ್ನು ಸಾಲ ಮಾಡಿ ಆದ್ರೂ ತುಪ್ಪ ತಿನ್ನು, ಸುಳ್ಳು ಹೇಳಿ ಆದ್ರೂ ಮದುವೆ ಮಾಡು ಎಂಬ ಈ ಕಾಲ, ಒಂದೆರಡು ಅಷ್ಟೇ ಅಲ್ಲ, ಸುಳ್ಳು ಹೇಳಿ ಹತ್ತಾರು ಮದುವೆ ಆದವರೂ ಇದ್ದಾರೆ. ಅಷ್ಟೇ ಅಲ್ಲ, ಸುಳ್ಳು ಹೇಳಿಯೇ ಬದುಕುವ, ಆ ಮೂಲಕ ಹಣ ಮಾಡುವ ಅದೆಷ್ಟೋ ಫೇಕ್ ಎನ್ನುವ ಸಂಘ ಸಂಸ್ಥೆಗಳು, ಜನರು, ಆಪ್ ಗಳು, ವೆಬ್ ಸೈಟ್ ಗಳು ನಿಮಗೆ ಚಂದ್ರನಲ್ಲಿ ಬೇಕಾದರೂ ಸೈಟ್ ತೆಗೆದು ರಿಜಿಸ್ಟರ್ ಮಾಡಿ ಕೊಡುತ್ತಾರೆ. ಹಣ ಕೊಟ್ಟರೆ ಸಾಕು ಜೊಮ್ಯಾಟೋದವ ಊಟದ ಜೊತೆ ನಿಮ್ಮ ಮನೆ ಮುಂದೆ ನೀವು ಇಷ್ಟ ಪಟ್ಟ ಶವರ್ಮಾದ ಡಬ್ಬಿ ಹಿಡಿದು ನಿಮ್ಮ ಮನೆ ಬಾಗಿಲು ಬಡಿಯುವ ಕಾಲದಲ್ಲಿ, ಜೇನು ತುಪ್ಪ ಎಲ್ಲಾ ಜನರಿಗೆ ಬೇಕಾದಷ್ಟು ಸಿಗಲು ಸಾಧ್ಯ ಇಲ್ಲ, ಕಾರಣ ಜೇನು ನೊಣಗಳ ಸಂಖ್ಯೆ ಕಡಿಮೆ ಆಗಿರುವುದು ಮತ್ತು ಹೂವುಗಳ ಸಂಖ್ಯೆ ಕಡಿಮೆ ಆದ ಕಾರಣ ಹಲವಾರು ಕಿಣ್ವಗಳನ್ನು ಬಳಸಿ ಲ್ಯಾಬ್ ನಲ್ಲಿ ಜೇನುತುಪ್ಪ ತಯಾರಿಸುವ ಕಾರ್ಯ ಮಾಡುವ ವಿಜ್ಞಾನಿಗಳು ಇರುವ ಈ ಕಾಲದಲ್ಲಿ, ಶಿಕ್ಷಕರೇ ಇಲ್ಲದೆ ಆನ್ ಲೈನ್ ನಲ್ಲಿ ಮೊಬೈಲ್ ನೋಡಿಯೇ ತಮ್ಮಷ್ಟಕ್ಕೆ ತಾವೇ ಕಲಿತು ಹಣ ಮಾಡುವ, ಹೆಸರು ಮಾಡುವ ಈ ಕಾಲದಲ್ಲಿ ಇನ್ನೂ ನಾವು ಮನೆ ಗೆದ್ದು ಮಾರು ಗೆಲ್ಲು, ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಎಂಬ ಗಾದೆಗಳನ್ನು ಹಿಡಿದು ಕುಳಿತರೆ ಆದೀತೆ? 

ಇದೀಗ ಆ ದೇವರೇ ನಮ್ಮ ಮನೆಗೆ ಬರ ಬೇಕಾದರೂ ಮೊದಲು ಫೋನ್ ಮಾಡಿ, ನೀವು ಗೇಟಿನ ಬೀಗ ತೆಗೆದು ನಂತರ ಬಾಗಿಲಿನ ಶಟ್ಟರ್ ಬಾಗಿಲಿನ ಬೀಗ ತೆಗೆದು, ನಂತರ ಬಾಗಿಲು ತೆರೆದು " ಒಳಗೆ ಬನ್ನಿ" ಎಂದು ಅನುಮತಿ ಇತ್ತರೆ ಮಾತ್ರ ಒಳಗೆ ಬರಲು ಸಾಧ್ಯ ಆಗುವ ಈಗಿನ ಕಾಲದಲ್ಲಿ ನಮ್ಮ ಮನೆಯಲ್ಲಿ ಮಾಡಿದ ಎಲ್ಲಾ ವಸ್ತುಗಳನ್ನು ತಿನ್ನಲು ಮನೆಗೆ ಬಂದವರಿಗೆ ಸಾಧ್ಯ ಇಲ್ಲ, ಕಾರಣ ಅವರು ಬಿಪಿ , ಶುಗರ್ ಪೇಷೆಂಟ್ ಗಳು! ಯಾವ ಬಡಪಾಯಿ ಮಕ್ಕಳು ಆಸೆಯಿಂದ ಎಲ್ಲವನ್ನೂ ತಿನ್ನಲು ಕಾಯುತ್ತಿರುವರೋ ಅವರನ್ನು ನೆಂಟರ, ಬಂಧುಗಳ ಹಾಗೆ ಮನೆಗೆ ಕರೆಯುವರು ಯಾರೂ ಇಲ್ಲ! ಹಲ್ಲಿದ್ದವನಿಗೆ ತಿನ್ನಲು ಕಡ್ಲೆ ಇಲ್ಲ! ಮನೆಯಲ್ಲಿ ಕಡ್ಲೆ ಇದ್ದವನ ಬಾಯಲ್ಲಿ ಹಲ್ಲುಗಳೆ ಇಲ್ಲ! ಇದುವೇ ಜೀವನ!ನೀವೇನಂತೀರಿ? 

ಮಕ್ಕಳಿಗೆ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಮೊಬೈಲ್ ಗಳು ರಾತ್ರಿ ಬೆಳಗಾಗುವವರೆಗೆ ಮತ್ತೆ ಬೆಳಗ್ಗೆ ರಾತ್ರಿ ಆಗುವವರೆಗೆ ಎಲ್ಲಾ ಮಕ್ಕಳ ಕೈಯಲ್ಲೂ ರಾರಾಜಿಸುತ್ತಿವೆ. ಇನ್ನು ಓದು ಎಲ್ಲಿಂದ ಬರಬೇಕು? ಬೇಸಿಗೆ ಬಂತು, ಮನುಷ್ಯ, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ಬರ. ಮನೆಯ ಮುಂದೆಯೋ ಟೆರೇಸ್ ಮೇಲೆಯೋ ಪಕ್ಷಿಗಳಿಗಾಗಿ ಸ್ವಲ್ಪ ನೀರು ಇಡೋಣ. ಮನೆಯ ನಾಯಿ ಹೆಣ್ಣಾಗಿದ್ದರೆ ಅದಕ್ಕೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ. ಅದರ ಬದಲು ಎಳೆಯ ಹಾಲು ಕುಡಿಯುವ ನಾಯಿ ಮರಿಗಳನ್ನು ನಿರ್ದಾಕ್ಷಿಣ್ಯವಾಗಿ ತಂದು ರಸ್ತೆಯಲ್ಲಿ ಬಿಟ್ಟರೆ, ಮುಂದಿನ ಜನ್ಮದಲ್ಲಿ ಆ ಮರಿಗಳು ನಿಮ್ಮ ಮಕ್ಕಳಾಗಿ ಹುಟ್ಟಿ ವೃದ್ಯಾಪ್ಯದಲ್ಲಿ ನಿಮ್ಮನ್ನು ರಸ್ತೆಯಲ್ಲಿ ಬಿಟ್ಟು ಬರುವರು ಇಲ್ಲವೇ  ವೃದ್ಧಾಶ್ರಮದಲ್ಲಿ ನೂಕಿ ಬರುವರು. ನೆನಪಿರಲಿ , ನಿಂತು ತಲೆಗೆ ಹಾಕಿದ ನೀರು ಕಾಲಿಗೇ ಸುರಿದು ಬರುವುದು ಮತ್ತು ನಾಳಿನ ನಮ್ಮ ಬೆನ್ನು ನಮಗೆ ಕಾಣದು. ಜಾಗ್ರತೆ. ನೀವೇನಂತೀರಿ?
@ಹನಿಬಿಂದು@
04.02.2023

ಒಂದಿಷ್ಟು....169

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -169

ನೆಮ್ಮದಿ. ಪ್ರತಿಯೊಬ್ಬ ಮಾನವನ ಬದುಕಿನ ಆಯ್ಕೆ ಮತ್ತು ಜೀವನದ ನಿತ್ಯದ ಹುಡುಕಾಟ ಇದೇ ಅಲ್ಲವೇ? ಕೌಟುಂಬಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ವೈಚಾರಿಕ, ಮಾನಸಿಕ ಎಲ್ಲಾ ವಿಷಯಗಳಲ್ಲೂ ಮಾನವನ ಗುರಿ ನೆಮ್ಮದಿ ಒಂದೇ. ಅದಕ್ಕಾಗಿ ನಿತ್ಯ ಹೋರಾಟ, ಬಡಿದಾಟ, ಹುಡುಕಾಟ, ಗುದ್ದಾಟ. ಮಾನವ ಜೀವನ ಕೇವಲ ಪ್ರಾಣಿ, ಪಕ್ಷಿಗಳ ಹಾಗೆ ಹುಟ್ಟು, ಬೆಳವಣಿಗೆ, ಆಹಾರ ಸೇವನೆ, ಸಾವು, ಇದಿಷ್ಟೇ ಅಲ್ಲ. ಬದಲಾಗಿ ಸಾಧನೆ, ಹುಡುಕಾಟ, ಗುರಿಯ ತಲುಪಲು ಸೆಣಸಾಟ. ಇದರಲ್ಲಿ ನೆಮ್ಮದಿಯ ಹುಡುಕಾಟ. 

ಹುಟ್ಟಿದ ಮಾನವನಿಗೆ ನಿಂದನೆ, ಹಗೆತನದ ನೋವು, ಸಂಕಟ, ದೈಹಿಕ ತೊಂದರೆಗಳು, ಮಾನಸಿಕ ನೋವು, ಕಣ್ಣೀರು, ತುಳಿತ, ಕೀಳಾಗಿ ಕಂಡವರಿಂದ ಬೇಸರ, ಇತರರ ಹೊಟ್ಟೆಕಿಚ್ಚಿನಿಂದ ಮಾನಸಿಕವಾಗಿ ಬಳಲುವಿಕೆ, ಕಷ್ಟ ಕೊಡುವ ಬಂಧುಗಳು, ನೆರೆಹೊರೆ, ಗೆಳೆಯರು, ಕರುಬುವ ಪರಿಚಯಸ್ಥರ ಚುಚ್ಚು ಮಾತುಗಳ ನೋವು ಇದೆಲ್ಲಾ ಸಹಜ. ಆದರೆ ಇದನ್ನೆಲ್ಲ ಮನದಲ್ಲಿ ಹಾಕಿಕೊಳ್ಳದೆ ಏನೇ ಕಷ್ಟ ಬಂದರೂ ಮೆಟ್ಟಿ ನಿಂತು ಬಾಳುವೆ ಎಂಬ ಮಾನಸಿಕ ಸ್ಥಿತಿ ತಲುಪಿ ಅಲ್ಲಿ ನೆಮ್ಮದಿ ಕಾಣಬೇಕಿದೆ. 

ಬದುಕು ನಿಂತ ನೀರಲ್ಲ. ಸದಾ ಪ್ರವಹಿಸುತ್ತಿರುವ ನದಿಯಂತೆ. ನಿಂತಲ್ಲಿ ನಿಲ್ಲದೆ ಓಡುತ್ತಾ ಇರಬೇಕು. ತರಗೆಲೆಗಳು, ಒಣ ಮರಗಳು, ಬೇಕಾದ ಬೇಡದ ಹಲವಾರು ವಸ್ತುಗಳು ಬಿದ್ದೋ, ಯಾರೋ ಬಿಸಾಕಿಯೋ ನಮ್ಮ ಜೊತೆ ಸೇರಿಕೊಳ್ಳುತ್ತವೆ. ನಮಗೆ ಬೇಡದಿದ್ದರೂ ನಮ್ಮೊಡನೆ ಬರುತ್ತವೆ. ಅದನ್ನೆಲ್ಲ ಬದಿಗಿರಿಸಲು ಸಾಧ್ಯ ಇಲ್ಲ. ಎಲ್ಲದರ ಜೊತೆಯೇ ಸಾಗುತ್ತಾ, ಬೇಡದ್ದನ್ನು ದಡಕ್ಕೆ ಸೇರಿಸಲು ಪ್ರಯತ್ನಿಸುತ್ತಾ ತನ್ನ ಪಯಣವನ್ನು ನಿಲ್ಲಿಸದೆ, ನೋವು - ನಲಿವುಗಳಲ್ಲಿ ಹಿಗ್ಗದೆ ಕುಗ್ಗದೆ ಕಳೆದ ಕ್ಷಣಗಳ  ಹಿಂದೆ ಬಿಟ್ಟು ಒಂಟಿಯಾಗಿ ಮುನ್ನಡೆಯುವ ಸಾಹಸ ಮಾಡಬೇಕು. ನೆಮ್ಮದಿ ಸಮುದ್ರದ ಹಾಗೆ. ಎಲ್ಲಾ ನದಿಗಳೂ ಅದೇ ಸಮುದ್ರವನ್ನು ಸೇರಲು ಹಂಬಲಿಸುತ್ತಾ ಓಡುತ್ತಿರುತ್ತವೆ. ಆ ನೆಮ್ಮದಿಯ ಸಾಗರ ಸೇರುವುದು ಅಷ್ಟು ಸುಲಭ ಅಲ್ಲ. ಅಲ್ಲಿ ನಡು ನಡುವೆ ದಾರಿ ಇಲ್ಲದೆ ನಾವೇ ಕಲ್ಲು ಮುಳ್ಳುಗಳ ನಡುವೆ ದಾರಿ ಮಾಡಿಕೊಂಡು ನುಗ್ಗಬೇಕಾಗುತ್ತದೆ. ಅಲ್ಲಿ ಸಿಗುವ ಕಲ್ಲು, ಮರ, ಬೆಟ್ಟಗಳು ಮುಂದೆ ಸಾಗಲು ತಡೆ ಒಡ್ಡುತ್ತವೆ. ಅವುಗಳನ್ನು ಮೆಟ್ಟಿ ಮುಂದೆ ಸಾಗ ಬೇಕಿದೆ. ನೆಮ್ಮದಿಯ ಸಾಗರ ಸೇರಬೇಕಿದೆ. 

ನೆಮ್ಮದಿ ಎಂಬ ಒಂದು ಪದಕ್ಕಾಗಿ ಹಿಂದಿನ ಕಾಲದಲ್ಲಿ ರಾಜರ ನಡುವೆ, ದೇಶಗಳ ನಡುವೆ ಯುದ್ಧ ಆಗುತ್ತಿತ್ತು. ಈಗಲೂ ದೇಶ, ರಾಜ್ಯ, ಜಿಲ್ಲೆ,. ಜನಾಂಗದ, ಧರ್ಮ, ಜಾತಿ, ಮನೆ, ಮನಗಳ ನಡುವೆ ಯುದ್ಧ ದೈಹಿಕವಾಗಿ ಹಾಗೂ ಅದಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ನಡೆಯುತ್ತಲೇ ಇದೆ. ಇದನ್ನು ಸರಿ ಮಾಡಿ ಎಲ್ಲರಿಗೂ ನೆಮ್ಮದಿ ಕೊಡುವ ದೇವರನ್ನು ಯಾರೂ ಇದುವರೆಗೂ ನೋಡಿಲ್ಲ. ಮೇಲೆ ಇದ್ದಾನೆ ಎಂದು ನಂಬಿ ಬದುಕುತ್ತಿದ್ದೇವೆ ಅಷ್ಟೇ. ದೇವರೇ ಇಲ್ಲ ಎನ್ನುವ ನಾಸ್ತಿಕನೂ ಬದುಕಿದ್ದಾನೆ. ನಮ್ಮ ಪ್ರಾರ್ಥನೆಯನ್ನು ದೇವರು ಆಲಿಸುತ್ತಾನೆ ಮತ್ತು ನಮಗೆ ಒಳ್ಳೆಯದನ್ನು ಮಾಡುತ್ತಾನೆ ಎಂದು ನಂಬುವ ನಾವು ನಮ್ಮ ಕೆಟ್ಟ ಕೆಲಸಗಳನ್ನು ದೇವರು ನೋಡುತ್ತಾನೆ ಮತ್ತು ಶಿಕ್ಷೆ ಕೊಡುತ್ತಾನೆ ಎಂಬ ಕಹಿ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ ಇದು ವಿಪರ್ಯಾಸ ಎಂದು ತಿಳಿದವರು ಹೇಳಿದ್ದಾರೆ. ಇಂದು ಬುದ್ಧಿ ಹೇಳುವವರು ಹೆಚ್ಚಾಗಿದ್ದಾರೆ, ಬರೆಯುವವರು ಹೆಚ್ಚಾಗಿದ್ದಾರೆ. ಆದರೆ ಓದುವವರು, ಹೇಳಿದಂತೆ ನಡೆಯುವವರು ಕಡಿಮೆ ಆಗಿದ್ದಾರೆ. ತಾವು ಹೇಳಿದ ಹಾಗೆ ಎಲ್ಲರೂ ನಡೆದುಕೊಂಡಿದ್ದರೆ ಇಂದು ಭಾರತ ಪ್ರಪಂಚದಲ್ಲೇ ಗ್ರೇಟ್ ಅನ್ನುವ ಸರ್ವ ಬಲಿಷ್ಠ ರಾಷ್ಟ್ರ ಆಗಿರುತ್ತಿತ್ತು. ಆದರೆ ನಾವಿನ್ನೂ ಮುಂದುವರಿಯುತ್ತಾ ಇರುವ ದೇಶದಲ್ಲಿ ಇದ್ದೇವೆ. ಇಲ್ಲಿ ಲಕ್ಷ ಲಕ್ಷ ಜನ ಇನ್ನೂ ಬಡತನ ರೇಖೆಗಿಂತ ಕೆಳಗೆ ಇದ್ದಾರೆ. ಪ್ರಪಂಚದ ಸಿರಿವಂತರು ಕೂಡಾ ಇಲ್ಲಿ ಇದ್ದಾರೆ. ಆದರೆ ಬಡವ ಶ್ರೀಮಂತ ಯಾರಿಗೂ ನೆಮ್ಮದಿ ಇಲ್ಲ. ಕಾರಣ ವಿದ್ಯೆ ಇದ್ದವನಿಗೆ ಬುದ್ಧಿ ಇಲ್ಲ, ಬುದ್ಧಿ ಇದ್ದವನಿಗೆ ವಿದ್ಯೆ ಇಲ್ಲ, ಎರಡೂ ಇರುವವರ ಬಳಿ ಹಣ ಇಲ್ಲ, ಹಣ ಇರುವವರಲ್ಲಿ ಗುಣ ಇಲ್ಲ. ಅವೆರಡೂ ಇರುವವರಲ್ಲಿ ಆರೋಗ್ಯ ಇಲ್ಲ. ಅದೂ ಇರುವ ಕಡೆ ನ್ಯಾಯ ಇಲ್ಲ! ಎಲ್ಲಾ ಇದ್ದರೂ ಯಾವುದಾದರೂ ಒಂದು ಕೊರತೆ ಇದ್ದು ಒಟ್ಟಾರೆ ಮಾನವ ಬದುಕಿಗೆ ನೆಮ್ಮದಿ ಇಲ್ಲ. ಅದೇ ನೆಮ್ಮದಿಗಾಗಿ ಮಾನವನ ಹುಡುಕಾಟ. 

ಮನೆ ಇದೆ ಸ್ವಂತ, ವ್ಯಾಪಾರವೂ ಇದೆ. ಬೇಕಾದಷ್ಟು ಹಣವೂ ಇದೆ. ಮಕ್ಕಳಿದ್ದಾರೆ, ಮನೆಯಲ್ಲಿ ವಿದ್ಯೆ ಕಲಿತ ಹೆಣ್ಣು ಮಕ್ಕಳಿದ್ದಾರೆ. ಆದರೆ ಆರೋಗ್ಯ ಇಲ್ಲ. ಹೀಗೆ ಒಂದಲ್ಲಾ ಒಂದು ಸಮಸ್ಯೆ ನೆಮ್ಮದಿಯನ್ನು ಕೆಡಿಸಿ ಬದುಕನ್ನು ನೋವಿನ ಕಡೆ ತಳ್ಳಿ ಬಿಡುತ್ತದೆ. ಆಗ ಮನಸ್ಸು ದೇವರು, ದೈವಗಳನ್ನು ನೆನೆಯುತ್ತದೆ. ತನಗೆ ಬರದ ನೆಮ್ಮದಿ ಅವರಿಂದಲಾದರೂ ಬರುವ ಸಾಧ್ಯತೆ ಇದೆಯೇ ಎಂದು ನಂಬುವ ಮನಗಳು ಧ್ಯಾನ, ಪೂಜೆ, ಪುನಸ್ಕಾರದತ್ತ ವಾಲುತ್ತವೆ. ಇನ್ನು ಕೆಲವರು ಕರ್ತವ್ಯದಲ್ಲಿ ನಂಬಿಕೆ ಇಟ್ಟು ಅದರ ಹಿಂದೆಯೇ ಹೋಗುತ್ತವೆ. ನಂಬಿಕೆಯಿಂದ ಸ್ವಲ್ಪ ಮಟ್ಟಿನ ನೆಮ್ಮದಿ ಸಿಗುವ ಕಾರಣ ಮಾನವ ನಾಳಿನ ನಂಬಿಕೆಯ ಮೇಲೆ ಬದುಕುತ್ತಾನೆ. 

ಸ್ವಲ್ಪ ಜನ ಪರರಲ್ಲಿ ನಂಬಿಕೆ ಇಟ್ಟು ಬದುಕಬೇಕು. ವ್ಯಾಪಾರೀ ಹಾಗೂ ಕೌಟುಂಬಿಕ ಬದುಕಲ್ಲಿ ಅದು ಬೇಕು. ಮಕ್ಕಳು ಪೋಷಕರನ್ನು, ಪೋಷಕರೂ ತಮ್ಮ ಮಕ್ಕಳನ್ನು ನಂಬಲೇ ಬೇಕಲ್ಲವೇ? ಆದರೂ ನಂಬಿಕೆಗೆ ದ್ರೋಹ ಎಸಗುವ ಸಮಯಗಳಲ್ಲಿ ನೆಮ್ಮದಿ ಕೆಡುತ್ತದೆ. ಆ ನಂಬಿಕೆ ಸತ್ತು ಹೋದಲ್ಲಿ ಬದುಕು ಶೂನ್ಯವಾಗುತ್ತದೆ. ಅಲ್ಲಿ ನೆಮ್ಮದಿಯೂ ಇರುವುದಿಲ್ಲ. ಮನಸ್ಸು ಭವಿಷ್ಯ ಹಾಗೂ ಭೂತದ ಬಗ್ಗೆ ಹೆಚ್ಚು ಆಲೋಚಿಸಿ ನೋವು ಪಡೆಯುತ್ತದೆ. ಕೈಯಲ್ಲಿ ಇರುವ ವರ್ತಮಾನವನ್ನು ನೆನೆಯದೆ ಅಲ್ಲಿನ ಸಂತಸವನ್ನು ಮರೆತು ಬಿಡುವವರೆ ಹೆಚ್ಚು. ಭವಿಷ್ಯ ಭೂತದ ಆಲೋಚನೆಯಲ್ಲಿ ವರ್ತಮಾನವನ್ನು ಕಳೆದುಕೊಳ್ಳಬಾರದು. ನಮ್ಮ ಕೈಯ್ಯಲ್ಲಿ ಇರುವುದು ಅದೊಂದೇ. ನಿನ್ನೆ ಜಾರಿ ಹೋಗಿದೆ, ನಾಳೆ ಬರಬೇಕಷ್ಟೇ. ಯಾವುದೇ ಕಾರಣಕ್ಕೂ ಇಂದಿನ ನೆಮ್ಮದಿಯನ್ನು ಕಳೆದುಕೊಳ್ಳ ಬಾರದು. ನಮ್ಮ ನೆಮ್ಮದಿಯನ್ನು ಬೇರೆಯವರಲ್ಲಿ ಹುಡುಕುವುದು ಕೂಡಾ ಆಗದ ಮಾತು. ನಮ್ಮ ನೆಮ್ಮದಿಯ ರೂವಾರಿಗಳು ನಾವೇ. 

ನೆಮ್ಮದಿಯನ್ನು ಹಣ ಕೊಟ್ಟು ಕೊಳ್ಳಲು ಸಾಧ್ಯ ಇಲ್ಲ. ಧನಿಕನಿಗೂ ಬಡವನಿಗೂ ಒಂದಲ್ಲಾ ಒಂದು ವಿಚಾರದಲ್ಲಿ ನೆಮ್ಮದಿ ಇಲ್ಲದೆ ನಿದ್ದೆ ಬಾರದು. ಮನೆಯಲ್ಲಿ ಇದ್ದ ಚಿನ್ನ ಹಣವನ್ನು ರಕ್ಷಿಸುವ ಚಿಂತೆ, ತಿಂದ ಊಟ ಅರಗಿಸಿಕೊಳ್ಳುವ , ಹೊಟ್ಟೆ ಕರಗಿಸಿ ಕೊಳ್ಳುವ ಚಿಂತೆ ಹಲವರದಾದರೆ ಹೊಟ್ಟೆ ತುಂಬಿಸುವ ಚಿಂತೆ, ಆರೋಗ್ಯದ ಚಿಂತೆ, ಓದಿನ ಚಿಂತೆ , ಹಣದ ಕೊರತೆಯ ಚಿಂತೆ ಇನ್ನು ಕೆಲವರದು. ಒಟ್ಟಿನಲ್ಲಿ ಕಾಣದ ದೇವರು ಚಿತೆಗೆ ಸೇರುವ ಮೊದಲು ಅನುಭವಿಸಲು ಹಲವಾರು ಚಿಂತೆ ಕೊಟ್ಟೇ ಕೊಡುತ್ತಾನೆ. ಅದನ್ನು ಮೆಟ್ಟಿ ನಾವು ನಿಲ್ಲಬೇಕು ಅಷ್ಟೇ. 

ಚಿಂತೆಗಳು ಸರ್ವೇ ಸಾಮಾನ್ಯ. ಗುರಿ ಸೇರುವ ತವಕವೂ ಅಂತೆಯೇ. ಎಷ್ಟು ಸಿಕ್ಕಿದರೂ ಸಾಲದು ನಮಗೆ. Aim should be High ಅಲ್ವಾ? ಅಲ್ಲೂ ಒಂದು ನೆಮ್ಮದಿ ಕಾಣೋಣ ಅಷ್ಟೇ. ನಾಲ್ಕು ದಿನದ ಬದುಕು. ನೆಮ್ಮದಿಯಾಗಿ ಸ್ಸಾಯುವ ಮೊದಲು ನೆಮ್ಮದಿಯಿಂದ ಬದುಕೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
27.01.2023

ಕಲಿಕಾ ಹಬ್ಬ

ರಾಗ - ಚೆನ್ನಪ್ಪ ಚನ್ನೆ ಗೌಡ


ಕಲಿಕಾ ಹಬ್ಬ

ಬಂತಪ್ಪ ಬಂತು ಇಲ್ಲಿ
ಕಲಿಕಾ ಹಬ್ಬವು ನಮಗೆಲ್ಲಾ..
ಹಾಡನು ಹಾಡುವೆವೂ ನಾವು
ಆಟವ ಆಡುವೆವು...

ಊರನು ತಿಳಿಯೋಣ
ನಾವು ಬಣ್ಣವ ಹಚ್ಚೋಣ
ಮರವನು ಅರಿಯೋಣ ನಾವು
ನಕ್ಷೆಯ ರಚಿಸೋಣ..//ಬಂತಪ್ಪ//

ಹಾಡು-ಕಥೆ ಕಟ್ಟುವೆವು
ನಾವು ಗೊಂಬೆಯ ಮಾಡುವೆವು
ನೋಡಿ ಕಲಿಯುವೆವು ಚಿತ್ರವ
ಮಾಡಿ ಆಡುವೆವು ...//ಬಂತಪ್ಪ//

ಕಸದಲಿ ರಸವುಂಟು..
ನಾವು ಉಪಯೋಗ ಮಾಡುವೆವು
ಮರದ  ಎತ್ತರವ ನಾವು
ಇಲ್ಲಿಂದ ಅಳೆಯುವೆವು...

ಕತ್ತರಿ ಅಂಟಲ್ಲಿ
ನಮಗೆ ಮುಖವಾಡ ಮಾಡುವೆವು
ಟೋಪಿಯ ಮಾಡುತಲಿ ನಾವು
ಕುಣಿಯುತ ಕಲಿಯುವೆವು//ಬಂತಪ್ಪ//
@ಹನಿಬಿಂದು@


ನನ್ನ ಕಿರು ಪರಿಚಯ

ಹೆಸರು- ಪ್ರೇಮಾ ಆರ್ ಶೆಟ್ಟಿ 
ಕಾವ್ಯನಾಮ- ಹನಿ ಬಿಂದು
ನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.
ವಿದ್ಯಾರ್ಹತೆ - ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.
ವೃತ್ತಿ - ಪದವೀಧರ ಆಂಗ್ಲ ಭಾಷಾ ಶಿಕ್ಷಕರು 
ಸೇವಾ ಅನುಭವ -20ವರ್ಷಗಳು
ಪ್ರವೃತ್ತಿ - ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ ಮೊದಲು 3 ವರ್ಷಗಳ ಕಾಲ ನಮ್ಮ ಬಂಟ್ವಾಳ ವಾರಪತ್ರಿಕೆಯಲ್ಲಿ, 169 ವಾರಗಳಿಂದ ಹಾಸನವಾಣಿ ದಿನ ಪತ್ರಿಕೆಯಲ್ಲಿ, 12 ವಾರಗಳಿಂದ ಸಂಗಾತಿ ಆನ್ ಲೈನ್ ಪತ್ರಿಕೆಯಲ್ಲಿ) , ಚಿಂತಕಿ, ಇಂಗ್ಲಿಷ್  ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ  ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.
ಪ್ರಕಟಿತ ಕೃತಿ - ಭಾವ ಜೀವದ ಯಾನ (ಕವನ ಸಂಕಲನ)
ಪ್ರತಿಲಿಪಿಯಲ್ಲಿ ಬರಹಗಾರ್ತಿ - ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.
ವಿಳಾಸ - ಸ ಪ ಪೂರ್ವ ಕಾಲೇಜು ಮೂಲ್ಕಿ 574154
94819 76147

ದಶಕ 102

ದಶಕ -102

ಬಾಗು ಮನವೇ ಬಾಗು
ದೂರ ತೀರಕೆ ಸಾಗು
ನೀರ ದಾಟುತ ನೀಗು
ಬೇಗೆ ಕಳೆಯುತ ಬೀಗು

ಮನಕೆ ಶಕ್ತಿಯ ತುಂಬು
ದಿನದಿ ಯುಕ್ತಿಯ ನಂಬು
ನಯದ ಮಾತಲಿ ಬಿದ್ದು
ಬಲವ ಕಳೆಯದೆ ಇದ್ದು

ಬದುಕ ದಾರಿಯ ಸವೆಸು
ಸತ್ಯ ಮಾರ್ಗದಿ ಗಳಿಸು..
@ಹನಿಬಿಂದು@
31.01.2023