ಶನಿವಾರ, ಡಿಸೆಂಬರ್ 25, 2021

ಸಂತಸದ ಸಮಯ

ಸಂತಸದ  ಸಮಯ

ಹೆರಿಗೆ ಬೇನೆಯ ಕಳೆದು ಮಗುವ ಮುಖ ನೋಡಿ ನಕ್ಕಿಹೆನು
ಬಳಿಗೆ ಸಾರುತ ಬಂದ ನನ್ನೊಡಲ ಹೊತ್ತಿಗೆಯ ಹೊತ್ತಿಹೆನು

ಅವಿತ್ತಿದ್ದ ಭಾವಗಳ ಮುತ್ತಂಥ ಪದಗಳಲಿ ಪೋಣಿಸಿಹೆನು
ಕದ್ದು ಕುಳಿತಿದ್ದ ಯೋಚನೆಗಳ ಡೋಲು ಬಾರಿಸಿ ಎಬ್ಬಿಸಿಹೆನು

ಮದಗಜದಂತೆ ಹೆಮ್ಮರವಾಗಿ ಬೆಳೆದರೂ ಸಾಲುಗಳಲಿ ಕಟ್ಟಿ ಹಾಕಿಹೆನು
ಷಟ್ಪದಿ ವ್ಯಾಕರಣ ಕಂದ ರಗಳೆಗಳ ಹಂಗಿಲ್ಲದೆ ನೇರವಾಗಿ ಗೀಚಿಹೆನು

ಸ್ಪುರಿಸಿದ ಆನಂದ ದುಃಖ ನೋವು ನಲಿವುಗಳ ತುಂಬಿ ಕಳುಹಿಹೆನು
ಬತ್ತಿ ಹೋದ ಎಣ್ಣೆ ಮುಗಿದ ಬತ್ತಿಗೂ ಜೀವ ಕೊಟ್ಟು ಉರಿಸಿಹೆನು

ಮಲಗಿ ನಿದ್ರಿಸುತ್ತಿದ್ದ ಒಣ ಹಸಿ ನೆನಪುಗಳ ಕದ ತಟ್ಟಿಹೆನು
ಬೆಳಗಿ ಬರುವ ಸೂರ್ಯನ ಹಾಗೆ ಬೆಳಗುವಂತೆ ಪ್ರೇರೇಪಿಸಿಹೆನು

ಹೆತ್ತು, ಮುತ್ತು ತುತ್ತು ಕೊಟ್ಟು ಕಾವ್ಯ ಕಂದನ ಬೆಳೆಸಿಹೆನು
ಹತ್ತಿರ ಹತ್ತಿರ ಹತ್ತೂರ ಸದಾ ಸುತ್ತಿ ಬರಲು ಕಳಿಸಿಹೆನು

ಹೆತ್ತೊಡಲ ನೋಯಿಸದು ಕತ್ತ ಹಿಚುಕಿ ಸಾಯಿಸದು
ಮೆತ್ತಿ ಬಹುಮಾನದ ಮಳೆಯ ಹೆಸರ ಬೆಳೆಸಿ ಸಾಕುವುದು .
@ಪ್ರೇಮ್@
25.12.2021

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ