ಶನಿವಾರ, ಜನವರಿ 14, 2023

ಒಂದಿಷ್ಟು ರಿಲಾಕ್ಸ್ ತಗೊಳ್ಳಿ -153

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -153

   ಪೂಜೆ ನಮ್ಮ ಮನದ ಭಾವಗಳನ್ನು ದೇವರ ಬಳಿ ಸಾಗಿಸುವ ಸಾಧನ. ಅದಕ್ಕೆ ಪೂಜಾರಿ ಅಥವಾ ಪೂಜೆ ಭಟ್ಟರು ಮೀಡಿಯೇಟರ್ ಅಥವಾ ಮಧ್ಯವರ್ತಿ. ಎಲ್ಲಾ ಮಂತ್ರಗಳನ್ನೂ ನಮಗೆ ಉಚ್ಚರಿಸಲು ಬಾರದ ಕಾರಣ ಮತ್ತು ಮಂತ್ರೊಚ್ಚಾರಣೆ ತಪ್ಪಾಗಬಾರದು ಎಂಬ ತತ್ವದ ಅಡಿಯಲ್ಲಿ ನಮ್ಮ ಮನಸ್ಸಿನ ಕೋರಿಕೆಗಳನ್ನು ಈಡೇರಿಸಲು ದೈವ ಭಾಷೆ ಸಂಸ್ಕೃತದಲ್ಲಿ ಸ್ಪಷ್ಟ ಮಂತ್ರಗಳನ್ನು ಹೇಳಿ ನಮ್ಮ ಸಂಕಷ್ಟಗಳ ಪರಿಹಾರಕ್ಕಾಗಿ ಪೂಜಾರಿಯ ಮೂಲಕ ಅಥವಾ ಪೂಜೆ ಭಟ್ಟರ ಮೂಲಕ ನಾವು ಪೂಜೆ ಮಾಡಿಸುತ್ತೇವೆ. ಅದು ದೇವಾಲಯದಲ್ಲಿ ಆಗಿರಬಹುದು ಅಥವಾ ಮನೆಯಲ್ಲಿ. ನಾವು ಸರಿಯಾದ ಪೂಜಾ ವಿಧಿ ವಿಧಾನ ತಿಳಿದ ಅರ್ಚಕರನ್ನೇ ಕರೆಯುತ್ತೇವೆ. ಒಂದು ಕಾಲದಲ್ಲಿ ಅದು ಬ್ರಾಹ್ಮಣರಿಂದ ಮಾತ್ರ ನಡೆಯುತ್ತಿತ್ತು. ಆದರೆ ಈಗ ಇತರ ಜಾತಿಯ ಬೇರೆ ಜಾತಿಯ ಜನರೂ, ಮಹಿಳೆಯರೂ ಅದನ್ನು ಕಲಿತು ಪೂಜಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವರು. ಕಾಲಾನುಘಟ್ಟದಲ್ಲಿ ಅದು ಕೂಡ ವ್ಯಾಪಾರೀ ವ್ಯವಹಾರ ಆಗಿದೆ. ಎಲ್ಲಾ ದೇವಾಲಯಗಳ ಮುಂದೆ ಹೋಟೆಲ್ ನ ಮೆನು ತರಹ ಪೂಜೆಯ ಹೆಸರು ಮತ್ತು ಅದರ ಚಾರ್ಜಿನ ಬೋರ್ಡು ಹಾಕಲಾಗಿದೆ, ಹೋಟೆಲ್ ಗಳಲ್ಲೂ ಅಷ್ಟೇ! ತಿಂಡಿಗಳ,  ಐಸ್ ಕ್ರೀಮ್ ಗಳ ಹೆಸರು, ಜ್ಯೂಸ್ ಗಳ ಹೆಸರು ಮತ್ತು ದರ ಪಟ್ಟಿ ತೂಗು ಹಾಕಲಾಗಿರುತ್ತದೆ. ಹಣವಿದ್ದರೆ ದೊಡ್ಡ ಪೂಜೆ ಮಾಡಿಸ ಬಹುದು, ಇಲ್ಲದೆ ಹೋದರೆ ಚಿಕ್ಕದು. ನಮ್ಮ ಬಜೆಟನ್ನು ಅವಲಂಬಿಸಿದೆ ನಮಗೆ ಸಿಗುವ ಪುಣ್ಯ ಹಾಗೂ ವರ! 

ಕಲಿಯುಗ ನೋಡಿ. ದುಡ್ಡಿಲ್ಲದಿದ್ದರೆ ದೇವಸ್ಥಾನಕ್ಕೆ ಹೋಗುವುದು ಹೇಗೆ? ಅವರಿಗೆ ಮನೆಯೇ ಮಂತ್ರಾಲಯ, ಮನಸೇ ದೇವಾಲಯ! ಕೂಲಿ ಕಾರ್ಮಿಕರಿಗೆ ರಜೆಯ ದಿನ ದೇವರು, ದೇವಾಲಯ , ಸಣ್ಣ ಪೂಜೆ. ಅವರು ತೃಪ್ತರು! ಇನ್ನು ವ್ಯಾಪಾರಿಗಳಿಗೆ ಪ್ರತಿನಿತ್ಯ ಬೆಳಿಗ್ಗೆ ದೇವರ ದರ್ಶನ. ನಿತ್ಯ ಪೂಜೆ. ಸಿರಿವಂತರಿಗೆ ತಮ್ಮ ಕಾರಲ್ಲಿ ಸಮಯ ಸಿಕ್ಕಿದಾಗ ದರ್ಶನ, ಪೂಜೆ. ದೊಡ್ಡ ದೊಡ್ಡ ಪೂಜೆ ಮಾಡಿಸುವವರು ಅವರ ಮಡದಿಯರು! ಪತಿಯ ಆರೋಗ್ಯ, ಮಕ್ಕಳ ಓದು, ಮಗಳ ಮದುವೆ, ಮಗನ ಒಳ್ಳೆಯ ಬುದ್ಧಿ, ಕೆಲಸ, ತನ್ನ ನೆಮ್ಮದಿ ಇದೆಲ್ಲಕ್ಕೂ ಪೂಜೆ. ತಾನು ಮನೆಯಲ್ಲೇ ಇರುವ ಕಾರಣ ಸಮಯ ಹೇಗೂ ಇದೆ. ತಿಳಿದವರ ಬಳಿ, ಸ್ವಾಮೀಜಿಯವರ ಬಳಿ ಕೇಳಿ ಅವರು ಯಾವ ಪೂಜೆ ಮಾಡಿಸಬೇಕು ಎಂದು ತಿಳಿದು ಅದನ್ನೇ ಮಾಡಿಸುತ್ತಾರೆ. ದುಡ್ಡಿಗೆ ಏನೂ ಬರ ಇಲ್ಲ ತಾನೆ? 

ಇನ್ನು ದೆಸೆ, ನಕ್ಸತ್ರ, ಜಾತಕ, ಗ್ರಹಗಳಿಗೂ ಆಯಾ ಸಮಯಕ್ಕೆ ಜ್ಯೋತಿಷ್ಯರ ಮಾರ್ಗದರ್ಶನ ಪಡೆದು,  ಅವರಿಂದ ಅವರು ತಿಳಿದು ಪೂಜೆ ಆಗುತ್ತದೆ. ಮಗಳಿಗೆ ಮದುವೆ ಆಗಲಿಲ್ಲ, ಸರಿಯಾದ ವರ ಸಿಗುತ್ತಿಲ್ಲ ಎಂದು ಆಂಟಿ ಒಬ್ಬರು ಅಮೇರಿಕಾದಲ್ಲಿ ದುಡಿಯುತ್ತಿರುವ ತನ್ನ ಮಗಳನ್ನು ಎರಡು ವಾರಕ್ಕೆ ಊರಿಗೆ ಕರೆಯಿಸಿ, ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಪೂಜೆ ಮಾಡಿಸಿ, ಮತ್ತೆ ಹಿಂದೆ ಕಳಿಸಿದರು.  ನೋಡಿ ಪೂಜೆಗೆ ಅದೆಷ್ಟು ಒತ್ತಡ ಇದೆ! ಲಕ್ಷಗಟ್ಟಲೆ ಖರ್ಚು ಮಾಡಿ ಬರುವಷ್ಟು! 

ನಾವು ಯಾವುದೇ ರೀತಿಯಲ್ಲಿ ಪೂಜೆ ಮಾಡಿದರೂ ದೇವರಿಗೆ ಅದು ಸಲ್ಲುತ್ತದೆ. ಆದರೆ ನಮ್ಮ ಪೂಜೆ ಭಕ್ತಿ ಪ್ರಧಾನ ಮತ್ತು ಶುದ್ಧ ಹೃದಯದಿಂದ ಕೂಡಿರಬೇಕು. ಬೇಡರ ಕಣ್ಣಪ್ಪನ ಭಕ್ತಿಯನ್ನೂ, ಕನಕದಾಸರ ಭಕ್ತಿಯನ್ನೂ ದೇವರು ಮೆಚ್ಚಿ ಒಲಿದಿಲ್ಲವೇ ಆ ದೇವರು? ದೇವರಿಗೆ ಮನುಷ್ಯ, ಅವನ ಜಾತಿ ಮುಖ್ಯ ಅಲ್ಲ, ಪರಿಶುದ್ಧ ಭಕ್ತಿ ಹಾಗೂ ಹೃದಯ ಮುಖ್ಯ ಎಂದು ಎಲ್ಲರಿಗೂ ಅರಿವಾಗುತ್ತದೆ. ದೇವರ ಲೇಖಖಾಚಾರವೇ ಬೇರೆ! ನೀವೇನೇ ಪೂಜೆ ಮಾಡಿ ಪಡೆದುಕೊಂಡು ಬಂದದ್ದನ್ನು ಅನುಭವಿಸಲೇ ಬೇಕು. ಕಷ್ಟ ಸ್ವಲ್ಪ ಮಟ್ಟಿಗೆ ತಗ್ಗಬಹುದು ಅಷ್ಟೇ! ಕಳೆದುಕೊಂಡದ್ದನ್ನು ಮತ್ತೆ ಪಡೆಯಲು ಆಗದು. ಮಾನಸಿಕ ನೆಮ್ಮದಿ ಕೆಲವರಿಗೆ ಇದರಿಂದ ದೊರೆಯಬಹುದು.

ಇನ್ನು ಕೆಲವರು ದೇವರನ್ನು ನಂಬುವುದಿಲ್ಲ, ಅಥವಾ ನಂಬಿದರೂ ದೇವಾಲಯ, ಪ್ರಾರ್ಥನಾಲಯಗಳಿಗೆ ತೆರಳುವುದಿಲ್ಲ. ಬದಲಾಗಿ ಬಡವರು,, ನಿರ್ಗತಿಕರು, ಅಂಧರು, ಅನಾಥರ ಸೇವೆ ಮಾಡುತ್ತಾ, ಹಿರಿಯರನ್ನು ನೋಡಿಕೊಳ್ಳುತ್ತಾ, ಮಕ್ಕಳ ಖುಷಿಯಲ್ಲಿ ತಾವೂ ಸಂತಸ ಕಾಣುತ್ತ, ತನ್ನ ಪಾಲಿನ ದಾನವನ್ನು ನಿರ್ಗತಿಕರಿಗೆ ನೀಡುತ್ತಾ ಕಾಲ ಕಳೆಯುತ್ತಾರೆ. ಅಲ್ಲಿ ಯಾವುದೇ ಬೇಧ ಭಾವವಿಲ್ಲ. ಅವರ ಭಕ್ತಿ ಒಂದೇ. ಅದು ತಪ್ಪೆಂದು ಹೇಳಲಾಗುವುದೇ?ಪರೋಪಕಾರವೇ ಅವರ ಪೂಜೆ. ಪರಹಿತವೇ ಅವರ ಮಂತ್ರ. ಜನ ಅವರನ್ನು ದೇವರಂತೆ ಕಾಣುತ್ತಾರೆ. ಅದೂ ಒಂದು ಪೂಜೆಯೇ ಅಲ್ಲವೇ?

ಇನ್ನು ಕೆಲವರು ಕಾರ್ಯ ಮೂಲಕ ಪರರಿಗೆ ಸಹಾಯ ಮಾಡುವವರಿದ್ದಾರೆ. ತಾವು ದುಡಿದ ಹಣದಲ್ಲಿ ಇವರಿಗೆ ದಾನ ಮಾಡಲು ಸಿಗದು. ಅದಕ್ಕವರು ಕಾಯಾ, ವಾಚಾ, ಮನಸಾ ಸಹಕಾರಿಗಳು. ಅಂದರೆ ಅವರು ಇತರರ ಒಳ್ಳೆಯದಕ್ಕೆ ಅವರು ಏನು ಮಾಡಬಹುದು ಎಂಬ ಸಲಹೆ ಸೂಚನೆಗಳನ್ನು ಕೊಡುತ್ತಾರೆ. ಅವರೇ ಬಂದು ಕೆಲಸ ಮಾಡಿಸಿ ಕೊಡುತ್ತಾರೆ, ಇತರರನ್ನು ಕಳುಹಿಸಿ ಸಹಾಯ ಮಾಡಿಸುತ್ತಾರೆ. ಹೀಗೆ. ಅಥವಾ ಫೋನ್ ಮಾಡಿ ಸಂಬಂಧಿಸಿದವರಿಗೆ ಹೇಳುತ್ತಾರೆ. ಅನೇಕ ಜನ ಶಿಕ್ಷಕರು ತಮ್ಮ ಶಾಲಾ ಮಕ್ಕಳಿಗೆ ತುಂಬಾ ಖರ್ಚು ಮಾಡುವುದನ್ನು ನೋಡಿದ್ದೇನೆ. ಬೆಳಗ್ಗಿನ ತಿಂಡಿಗೆ, ಬಟ್ಟೆಗೆ, ಪುಸ್ತಕಕ್ಕೆ, ಮಕ್ಕಳ ನೃತ್ಯ ಸ್ಪರ್ಧೆಗೆ, ಮಕ್ಕಳನ್ನು ಆಟೋಟ ಹಾಗೂ ವಿವಿಧ ಸ್ಪರ್ಧೆಗಳಿಗೆ ಕರೆದುಕೊಂಡು ಹೋಗುವುದು, ರಜಾ ದಿನಗಳಲ್ಲಿ ಪಾಠ ಮಾಡಿ ತಾವೇ ಊಟ, ತಿಂಡಿ ಒದಗಿಸುವುದು, ಆಟಕ್ಕೆ ಪ್ರಾಕ್ಟೀಸ್ ಮಾಡಿಸಿ ಅದಕ್ಕೆ ಸಹಾಯ ಮಾಡುವುದು ಇತ್ಯಾದಿ. ಅಲ್ಲದೆ ತನ್ನ ಕೈಯಿಂದಲೇ ಹಣ ಹಾಕಿ ಶಾಲೆಯಲ್ಲಿ ತೋಟ ನಿರ್ಮಾಣ, ಶಾಲೆಯ ಕಾಂಪೌಂಡ್, ಮಕ್ಕಳಿಗೆ ತಮ್ಮ ಮನೆಯಲ್ಲೇ ಬೆಳೆದ ತರಕಾರಿ ತರುವುದು ಹೀಗೂ ಸಹಾಯ ಮಾಡುತ್ತಾರೆ. ವರ್ಷಕ್ಕೆ ಐವತ್ತು ಸಾವಿರದ ವರೆಗೆ ವಿದ್ಯಾರ್ಥಿಗಳಿಗೆ ಸ್ವಂತ ಹಣ ಖರ್ಚು ಮಾಡುವ ಶಿಕ್ಷಕರೂ ಇದ್ದಾರೆ. ಅವರೆಲ್ಲ ಎಲೆ ಮರೆಯ ಕಾಯಿಗಳು. ಯಾವುದೇ ಪ್ರಶಸ್ತಿ ಅವರಿಗೆ ಬೇಡ. ಸಾಮಾಜಿಕ ಜಾಲ ತಾಣಗಳಲ್ಲಿ ಅವರು ಫೋಟೋ ಹಾಕುವುದಿಲ್ಲ. ಬದಲಾಗಿ ಮನಸ್ಸಿನ ತೃಪ್ತಿಗಾಗಿ ಮಕ್ಕಳು ಎಂದರೆ ದೇವರು, ಅವರಿಗೆ ಮಾಡಿದ ಸಹಾಯ ಅದು ದೇವರ ಕಾರ್ಯ ಮಾಡಿದಂತೆ ಎಂದು ತಿಳಿದು ಸಂತಸ ಪಡುತ್ತಾರೆ. ಇದೂ ಪೂಜೆಯೇ ಅಲ್ಲವೇ? 

ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ನಿತ್ಯ ಊಟ, ಮನೆಯಲ್ಲಿ ಏಳೆಂಟು ಐಷಾರಾಮಿ ಕಾರುಗಳು, ಅಲ್ಲಲ್ಲಿ ದೊಡ್ಡ ಬಿಸಿನೆಸ್ ಮಾಲ್ ಗಳನ್ನು ಕಟ್ಟಿ ದಿನಕ್ಕೆ ಕೋಟಿ ಹಣ ಬಂದರೂ ಯಾರಿಗೂ ಸಹಾಯ ಮಾಡದ ಮಂತ್ರಿ ಮಹೋದಯರು, ಚಲನ ಚಿತ್ರ ನಟರೂ ಇದ್ದಾರೆ.  ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಅನ್ಯ ದೇಶದ ಮಾರುಕಟ್ಟೆಗೆ ಧಾಳಿ ಇಡುವ ತಾರೆಯರೂ ಇದ್ದಾರೆ. ಇವರು ಬೇರೆ ಬೇಡ ತಾನು ಹುಟ್ಟಿದ ಊರಿನ ಶಾಲೆ, ಬಡವರು, ಕಾಲೋನಿ ಜನರಿಗೆ ಸಹಾಯ ಮಾಡಿದರೆ ಅವರ ಬದುಕು ಹಿತವಾಗದೆ? ಆ ದೇವರ ಆಶೀರ್ವಾದ ಸಿಗದೇ?

ಸಹಾಯವನ್ನು ಯಾರೂ ಹಣದ ರೂಪದಲ್ಲಿ ಕೊಡಬಾರದು, ಸ್ಕಾಲರ್ ಶಿಪ್ ಗೆ ನೀಡಿದ ಹಣ ಮಕ್ಕಳಿಗೆ ಸೇರಿದರೂ ಅವರ ತಂದೆಯ ಕುಡಿತಕ್ಕೋ, ತಾಯಿಯ ಸೀರೆಗೊ ವ್ಯಯ ಆಗುವ ಸಂಧರ್ಭಗಳೇ ಹೆಚ್ಚು. ಬದಲಾಗಿ ನೇರವಾಗಿ ಕಾಲೇಜಿನ ಫೀಸಿಗೋ, ಪುಸ್ತಕದ ಅಂಗಡಿಗೋ, ಬಟ್ಟೆ ಅಂಗಡಿಗೋ ಕೊಡಬಹುದು. ಬಸ್ಸಿನ ಖರ್ಚಿಗೆ ಬೇಕಾದುದು ಸಣ್ಣ ಮೊತ್ತ. ಕೆಲವು ಸರ್ಟಿಫಿಕೇಟು ಗಳನ್ನು ಮಾಡಿಸಲು ಪೋಷಕರು ವಿದ್ಯಾರ್ಥಿಗಳ ಜೊತೆ ಸುತ್ತಬೇಕಾಗುತ್ತದೆ. ಆಗ ಕೆಲಸ ನಷ್ಟ, ಹಣ ಬೇಕು. ಅಂತ ಸಮಯಕ್ಕೆಂದು ಸಣ್ಣ ಮೊತ್ತವನ್ನು ಅರ್ಹರಿಗೆ ನೀಡಬಹುದು. ಇನ್ನೂ ಒಂದು ತರಹ ಯೋಚಿಸುವುದಾದರೆ ಬಡವರಿಗೆ ದಾನ ಮಾಡುವಾಗ ರೇಷನ್ ಅಥವಾ ರೇಷನ್ ಅಂಗಡಿಗೆ ಬಿಲ್ ಕೊಡುವುದು ಸೂಕ್ತ. ಆಸ್ಪತ್ರೆ ಖರ್ಚಿಗೆ ಕೊಡುವುದಾದರೆ ಅಲ್ಲಿನ ಬಿಲ್ ನೋಡಿ ನೇರವಾಗಿ ಆಸ್ಪತ್ರೆಯ ಅಕೌಂಟ್ ಗೆ ಸಂದಾಯ ಮಾಡುವುದು ಒಳಿತು. ಈಗೆಲ್ಲಾ ಡಾಕ್ಟರ್ ಗಳು ಅವರೇ ಮೆಸ್ಸೇಜ್ ಟೈಪ್ ಮಾಡಿ ಹೀಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡಿ, ನಮ್ಮ ಬಿಲ್ ನಿಮ್ಮ ಖಾಯಿಲೆಗೆ ಹದಿನಾರು ಲಕ್ಷ ಆಗುತ್ತದೆ ಎಂದು ಮೊದಲೇ ಹೇಳಿ ಬಿಡುತ್ತಾರೆ. ಅದಕ್ಕೆ ಜನರೂ ಸ್ಪಂದಿಸುತ್ತಾರೆ ಬಿಡಿ, ಭಾರತೀಯರು ಮಾನವತೆ ಮೆರೆವವರು. ಆದರೆ ಜೀವ ಬರುವ ಬದಲು ಮನೆಗೆ ದೇಹ ಬಂದರೆ ಏನು ಮಾಡಿ ಏನು ಪ್ರಯೋಜನ? ದಾನ ಒಳ್ಳೆಯದು, ಆದರೆ ಅದು ಅರ್ಹ ವ್ಯಕ್ತಿಗೆ, ಸರಿಯಾದ ಸಮಯದಲ್ಲಿ ಸುಲಭವಾಗಿ ಸಿಗಬೇಕು. ರೋಗಿಯ ಕಡೆಯಲ್ಲಿ, ಮಗು ಹೆತ್ತ ತಾಯಿಯ ಜೊತೆ ಯಾರೂ ಇಲ್ಲದೆ ಹೋದಾಗ ಸಹಾಯಕ್ಕಾಗಿ ಅಲೆಯುವವರು, ಅರ್ಜಿ ಸಲ್ಲಿಸುವವರು ಯಾರು? ಅದಕ್ಕೆ ಸಹಾಯ ಮಾಡುವ ಮನಸ್ಸಿದ್ದರೆ ಆಸ್ಪತ್ರೆಗಳಿಗೆ ನೇರವಾಗಿ ಹೋಗಿ ರೋಗಿಗಳನ್ನು ಭೇಟಿ ಮಾಡಿ, ಅಲ್ಲಿಯೇ ಅವರ ಬಿಲ್ ಕೊಟ್ಟು ಅಥವಾ ಅವರ ಊಟಕ್ಕೆ ಸಹಾಯ ಮಾಡಿ ಬರುವುದು ಒಳಿತಲ್ಲವೇ? ಅದೂ ಕೂಡ ಪೂಜೆಯೇ ಅಲ್ಲವೇ?

ಮನಃ ಶಾಂತಿಗಾಗಿ ಮಾಡುವ ಯಾವುದೇ ಉತ್ತಮ ಕಾರ್ಯವೂ ಪೂಜೆಯೇ. ಎಲ್ಲಾ ಧರ್ಮಗಳಲ್ಲೂ ದೇವರು ಇದ್ದಾನೆ ಮತ್ತು ಅವನು ಒಳ್ಳೆಯ ಕಾರ್ಯಗಳನ್ನು ಮೆಚ್ಚುತ್ತಾನೆ. ಇತರರಿಗೆ ಕೆಡುಕನ್ನು ಮಾಡಿದವರನ್ನು ಶಿಕ್ಷಿಸುತ್ತಾನೆ. ನೀವು ಯಾರೂ ನೋಡದ ಹಾಗೆ, ಇತರರಿಗೆ ತಿಳಿಯದ ಹಾಗೆ ಕೆಟ್ಟ ಕೆಲಸ ಮಾಡಿದರೂ ನಿಮ್ಮ ಜೀವಾತ್ಮ, ಪರಮಾತ್ಮನಿಗೆ ಅದು ತಿಳಿದೇ ತಿಳಿಯುತ್ತದೆ. ಒಳ್ಳೆಯತನಕ್ಕೆ ಒಳ್ಳೆಯದೇ ಆಗುತ್ತದೆ. ಈ ಒಳ್ಳೆಯ ಕಾರ್ಯಗಳೆಲ್ಲಾ ಭಗವಂತನಿಗೆ ಪ್ರಿಯವಾದ ಕಾರಣ ಎಲ್ಲವೂ ಪೂಜೆ ಅನ್ನಿಸಿಕೊಳ್ಳುತ್ತವೆ. ನಾಲ್ಕು ಜನ ದೇವರ ಮುಂದೆ ನಿಂತು ನಮ್ಮ ಒಳ್ಳೆಯದಕ್ಕಾಗಿ ಪ್ರಾರ್ಥಿಸುವ ಕೆಲಸ ನಾವು ಮಾಡಿದರೆ ಅದಕ್ಕಿಂತ ಒಳ್ಳೆಯ ಪೂಜೆ ಯಾವುದು ಅಲ್ಲವೇ? ನಮ್ಮ ಆತ್ಮ ಸಾಕ್ಷಿಗೆ, ನಾವು ನಂಬಿದ ದೇವರಿಗೆ ಒಳ್ಳೆಯವರಾಗಿ ಬದುಕೋಣ. ತೋರಿಕೆಗಾಗಿ ಅಲ್ಲ. ನೀವೇನಂತೀರಿ? 
@ಹನಿಬಿಂದು@
07.10.2022

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ