ಶುಕ್ರವಾರ, ಅಕ್ಟೋಬರ್ 18, 2019

1249. ಕತೆ ಅವಳು

"ಹೆಂಡತಿ ದುಡಿಯಲಿ, ಹೊರಗೆ ಹೋಗಿ ದುಡಿಯದೆ ಇರಲಿ, ಅವಳ ಕನಸು ನನ್ನ ಮನೆ, ನನ್ನ ಕುಟುಂಬ ತಾನೇ, ಗಂಡ ಅವಳಿಗೆ ಬೇಕಾದ ಪ್ರೀತಿ, ವಾತ್ಸಲ್ಯ, ಮಾತು,ಅವಳಿಗಾಗಿ ಒಂದಿಷ್ಟು ಸಮಯ ಮೀಸಲಿಟ್ಟರೆ ತಾನೇ ಬದುಕು ಸುಂದರವಾಗುವುದು?" ಯೋಚಿಸುತ್ತಾ ಕುಳಿತ ಮಾನ್ವಿತಾ ಅಖಿಲೇಶ್ ಗೆ ಕಣ್ಣೀರು ಧಾರಾಕಾರವಾಗಿ ಸುರಿದು ಹೋಗುತ್ತಲೇ ಇತ್ತು. ಕಷ್ಟಗಳನ್ನೇ ಉಂಡ ಮಾನ್ವಿತಾಳ ಕಣ್ಣೀರೇಕೋ ಬತ್ತಿರಲಿಲ್ಲ, "ಜೀವನದಲ್ಲಿಮನುಜರ,ಹಿರಿಯರ,ಬಂಧುಗಳ ಸಹಾಯ ಸಿಗದಿದ್ದರೇನಂತೆ? ಭೂಮಿಗೆ ತಂದ ಆ ದೇವನಿಲ್ಲವೇ ಸಲಹಿ ಕಾಪಾಡಲು?" ಹೀಗೊಂದು ಮೊಂಡು ವಾದವ ಹಿಡಿದು ನಗುನಗುತ್ತಲೇ ಒಂಟಿ ಜೀವನ ನಡೆಸುತ್ತಿದ್ದಳು.
    ಪತಿರಾಯ ಅಖಿಲೇಶ್ ಮಿಶ್ರ. ಸಾಮಾಜಿಕ ಹೋರಾಟಗಾರ. ಸಮಾಜ ಸೇವಾ ಧುರೀಣ.  ನೆರೆಹೊರೆ,ಬಂಧು ಬಳಗವೆನ್ನದೆ ರಾತ್ರಿ ಹಗಲು ಸೇವೆಗೆ ಸದಾ ಸಿದ್ಧನಾಗುವವ. ಇಂಥ ಒಳ್ಳೆಯ ಹುಡುಗನನ್ನು ಪಡೆಯಲು ಪುಣ್ಯ ಮಾಡಿರಬೇಕೆಂದು ಮದುವೆಯ ಸಂಧರ್ಭದಲ್ಲಿ ಯಾರೋ ಹೇಳಿದ ಮಾತು ಈಗಲೂ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು ಮಾನ್ವಿತಾಳಿಗೆ. ದೇಶ ಸೇವೆ ಮಾಡುವೆನೆಂದು ಹೋದ ಅಖಿಲೇಶ್ ಟ್ರೈನಿಂಗ್ ಕಷ್ಟವಾಯ್ತೆಂದು ಹೇಳದೆ ಕೇಳದೆ ಆಫೀಸರ್ ಗಳ ಕಣ್ಣು ತಪ್ಪಿಸಿ ಓಡಿಬಂದಿದ್ದ. ತನ್ನ ಮಗ ಸೋಮಾರಿಯೆಂದು ತಾಯಿಗೂ ಗೊತ್ತಿತ್ತು. ಆದರೂ ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೇ? ಮಾನ್ವಿತಾಳ ಕೊರಳಿಗದು ಉರುಳಾಗಿತ್ತು!
     ತನಗೆ ಬೇಕಾದದ್ದೇನಾದರೂ ಕೊಡುವುದಿರಲಿ, ತನಗೆ ಆರೋಗ್ಯ ಸರಿ ಇರದಿದ್ದರೂ ತಿರುಗಿ ನೋಡುತ್ತಿರಲಿಲ್ಲ ಅಖಿಲೇಶ. ಮನೆಯಲ್ಲೇನೂ ಮಾಡಲು ಕೆಲಸವಿರದಿದ್ದಾಗ ತಾನು ಕಲಿತ ವಿದ್ಯೆ ನಾಲ್ಕಾರು ಮಕ್ಕಳಿಗೆ ದಾರಿದೀಪವಾಗಲಿ, ತಾನೂ ಪೈಸೆ ಪೈಸೆಗೂ ಗಂಡನನ್ನು ಬೇಡುವುದು ತಪ್ಪುತ್ತದೆಯೆಂದರಿತ ಮಾನ್ವಿತಾ ದ್ವಿತೀಯ ಪಿಯುಸಿ ಮುಗಿದ ಬಳಿಕ ನರ್ಸರಿ ಟ್ರೈನಿಂಗ್ ಮಾಡಿದ ಕಾರಣ ಸ್ಟಾಂಡರ್ಡ್ ಖಾಸಗಿ ಶಾಲೆಯೊಂದರಲ್ಲಿ ನರ್ಸರಿ ಶಿಕ್ಷಕಿಯಾಗಿ ಸೇರಿದಳು. ಮನೆಯಿಂದ ಬಹಳವೇ ದೂರವಿತ್ತು ಆ ಶಾಲೆ. ಆದರೆ ಜಿಲ್ಲೆಯಲ್ಲೇ ದೊಡ್ಡ ಹೆಸರಿದ್ದ ಶಾಲೆಯಲ್ಲಿ ಕೆಲಸ ಮಾಡುವುದರಲ್ಲಿ ತೃಪ್ತಿಯೂ ಇತ್ತು, ಉತ್ತಮ ಸಂಬಳವೂ ದೊರೆಯುತ್ತಿತ್ತು. ಪುಟ್ಟ ಪುಟ್ಟ ಮುದ್ದು ಮಕ್ಕಳ ಒಡನಾಟವಂತೂ ತನಗೆ ಮಕ್ಕಳಿಲ್ಲವೆಂಬ ನೋವನ್ನೆಲ್ಲ ಮರೆಸಿತ್ತು. ಮಕ್ಕಳ ಪೋಷಕರೂ ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸದಲ್ಲಿದುದರಿಂದ ಹೋದ ಕಡೆಯೆಲ್ಲಾ ಗೌರವದ ಜೊತೆಗೆ ಕೆಲಸ ಕಾರ್ಯಗಳು ಹೂವೆತ್ತಿಟ್ಟಂತೆ ಬೇಗಬೇಗ ಮುಗಿಯುತ್ತಿದ್ದವು. ಇದು ಮಾನ್ವಿತಾಗೆ ಸಂತಸ ನೀಡುತ್ತಿತ್ತು. ಆದರೆ ಕೆಲಸ ಬಿಡಬೇಕೆಂಬ ಸೂಚನೆ ಆಗಾಗ ಗಂಡ ಹಾಗೂ ಅತ್ತೆಯಿಂದ ಬರುತ್ತಿತ್ತು. ಅದರಲ್ಲಿ ಮೈದುನ, ನಾದಿನಿಯರ, ಓರಗಿತ್ತಿಯರ ಕುಮ್ಮಕ್ಕೂ ಇರುತ್ತಿತ್ತು.
   ಅತ್ತೆಯೋ ರಣಚಂಡಿ!ಇನ್ನು ನಾದಿನಿ ಕಿಲಾಡಿ ಮಿಟುಕಲಾಡಿ! ಮೈದುನ ಕನ್ನಡ ಮಿಡಿಯಂನಲ್ಲೆ ಮೇಡ್ ಇನ್ ಅಮೇರಿಕಾ ತರಹ ಆಡ್ತಿದ್ದ! ಓರಗಿತ್ತಿ ತಾನು ಮನೆಕೆಲಸ ಮಾಡಿಕೊಂಡಿಲ್ವಾ, ಇವಳ್ಯಾಕೆ ಹೊರಗೆ ಹೋಗೋದು,ಮನೇಲಿ ನನ್ನಂತೆ ದುಡೀಲಿ ಅನ್ನೋ ವಯ್ಯಾರ! ಎಲ್ಲರ ದೃಷ್ಟಿ ಮಾನ್ವಿತಾ ಮೇಲೆಯೇ! 
      "ಜೀವನವೇ ಹಾಗೆ! ಗಣಿತಕ್ಕಿಂತಲೂ ಕಠಿಣ.ಕೆಲವೊಂದು ಸಮಸ್ಯೆಗಳಿಗೆ ಪರಿಹಾರವೇ ಇಲ್ಲ!ತಾನೂ ಮಾಡಲಾಗದು, ಇತರರೂ ಕೊಡಲಾರರು. ಅವು ತಾವೇ ತಾವಾಗಿ ಸರಿ ಮಾಡುವಂಥದ್ದೂ ಅಲ್ಲ! ಕಾಲ, ದೇವರೇ ನಿರ್ಧರಿಸಬೇಕಷ್ಟೇ ಅವುಗಳನ್ನೆಲ್ಲ! ತನ್ನ ಜೀವನದ ಏಳು ಬೀಳಿನ ಹಂತಗಳೂ ಹೀಗೆಯೇ…" ಯೋಚಿಸುತ್ತಾ ಕುಳಿತವಳಿಗೆ ಪಕ್ಕದಲ್ಲೇ ಬಿದ್ದಿದ್ದ ಪತ್ರಿಕೆಯ ತುಣುಕೊಂದು ಕಂಡಿತು. ಎತ್ತಿಕೊಂಡು ಓದಿದವಳ ಬದುಕು ಬದಲಾಗುವ ವಿಷಯ ಅದರಲ್ಲಿದೆಯೆಂದು ಮಾನ್ವಿತಾ ಅಂದುಕೊಳ್ಳಲೇ ಇಲ್ಲ.
     ಹೌದು, ಅದೊಂದು ಜಾಹೀರಾತು. ಸಂಗೀತ ಬಲ್ಲವರಿಗೆ ಪಾರ್ಟ್ಟೈಮ್ ಕೆಲಸ. ಓದುವಾಗಿನ ಪ್ರತಿ ಭಾನುವಾರ ಸಂಗೀತದ ವಿಶೇಷ ತರಗತಿಗಳನ್ನು ತೆಗೆದುಕೊಂಡು ಸೀನಿಯರ್ ಗ್ರೇಡ್ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣಳಾಗಿದ್ದಳು ಮಾನ್ವಿತಾ. ಅದನ್ನು ಬಳಸಿ ತನ್ನ ಪೂರ್ಣ ವ್ಯಕ್ತಿತ್ವ ತೊರಿಸುವ ಅವಕಾಶ ಅವಳಿಗೆ ಬೇಕಿತ್ತು. ಅಂತಹ ಒಂದು ಅವಕಾಶ ಅವಳ ಕಾಲ ಬಳಿಗೇ ಪುಟ್ಟ ಪೇಪರಿನ ಮೂಲಕ ಬಂದಿತ್ತು! ಅವಕಾಶ ಬಿಡಲಿಲ್ಲ. ತಕ್ಷಣವೇ ಆ "ರಾಗರಂಜಿನಿ" ಸಂಗೀತ ಶಾಲೆಯ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸಂಬಂಧಪಟ್ಟವರಿಗೆ ಫೋನಾಯಿಸಿದಳು. ಆ ಕಡೆಯಿಂದ ಕರೆ ರಿಸೀವ್ ಆದಾಗ ಅರಿವಿಲ್ಲದೆ ನಡುಗಿದಳು. ಆ ನಡುಕ ಜೀವನ ಬದಲಾದ ಕುರುಹೇನೋ! ಮತ್ತೆ ಒಂದೇ ವಾರದಲ್ಲಿ ಸೆಲೆಕ್ಟಾಗಿ ತನ್ನ ಪೂರ್ಣ ವ್ಯಕ್ತಿತ್ವ ಬದಲಾಗುವ ಕಾಲ ಬಂದೇ ಬಿಟ್ಟಿತು. ಮತ್ತೆಂದೂ ಮನೆ, ಸಂಬಂಧಿಕರು, ಒಂಟಿತನ, ಮಾತು ಇವುಗಳ ಕಡೆ ಗಮನ ಹರಿಸಲಿಲ್ಲ ಮಾನ್ವಿತ. ರಾಜ್ಯ , ರಾಷ್ಟ್ರ ಮಟ್ಟದ ಸಂಗೀತ  ಕಲಾವಿದೆಯಾಗಿ, ಪ್ರತಿನಿಧಿಯಾಗಿ, ಉತ್ತಮ ಶಿಕ್ಷಕಿಯಾಗಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಬೆಳೆದಳು, ಬೆಳೆಯುತ್ತಲೇ ಹೋದಳು.
    ಮಾತನಾಡುತ್ತ ಕುಳಿತ ಸಂಬಂಧಿಗಳೂ ಬೆಳೆಯುತ್ತಾ ಹೋದರು,ತಮ್ಮ ವಯಸ್ಸಿನಲ್ಲಿ ಮಾತ್ರ!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ