ಬುಧವಾರ, ಅಕ್ಟೋಬರ್ 2, 2019

1242.ಗಝಲ್-18

ಗಝಲ್

ಮೋಡದೊಳಗಿಂದ ನೀ ಬರುವೆಯೆಂದು ಆತುರ..
ನೋಡ ನೋಡುತ ಸಂಜೆ ನೀ ಮುಳುಗುವೆಯೆಂದು ಆತುರ..

ಹಣೆಗೆ ತಿಲಕವಿಟ್ಟಂತೆ ಧರಣಿಗೆ ದೃಷ್ಠಿಬೊಟ್ಟು ನೀನು,
ಸಂಜೆ ಕವಿಯುತ ಸಂಧ್ಯಾಳ ಸೇರುವೆಯೆಂದು ಆತುರ!

ಶಶಿಯು ಕಾಯುತಲಿಹನು ತಂಪು ಬೆಳಕನು ತುಂಬಲು,
ಮತ್ತೆ ಮರು ಮುಂಜಾನೆ ಯಾವಾಗ ಬರುವುದೆಂದು ಆತುರ!

ಮಹಿ ಕಾಯುತಿಹಳು ನಿತ್ಯ ಸೂರ್ಯ ನಮಸ್ಕಾರ ಮಾಡಲು,
ಮಹೀಪತಿಯ ಆಗಮನಕೆ ಕಾಯುತಲಿ ಮಿಂದು ಆತುರ!

ಹಾಲುಗಲ್ಲದ ಹಸುಳೆಯಂದದಿ ಧರೆ ಕಾದಿಹಳು,
ಹಾಡ ಹಾಡುತ ಪಕ್ಷಿಕೊರಳಲಿ ಆಗಮಿಸುವೆಯೆಂದು ಆತುರ!

ಹಸಿರ ಸೀರೆಯುಟ್ಟು, ಕೆಂಪು ಕುಪ್ಪಸ ಮೂಡಣದಿ!
ರವಿ ನೀನು ಕಣ್ಣು ಬಿಟ್ಟೊಡನೆ ನನ್ನೇ ನೋಡುವೆಯೆಂದು ಆತುರ!

ಬಿಡುವಿಲ್ಲದೆ ಹಗಲಿರುಳು ಸುತ್ತುವ ಕಾರ್ಯ ನಮ್ಮದು,
ಪ್ರೇಮದಿ ಕಾವ ಜೀವಿಗಳಿಗೆ ಕಷ್ಟವಾಗದಿರಲೆಂದು ಆತುರ!
@ಪ್ರೇಮ್@
22.08.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ