ಬುಧವಾರ, ಅಕ್ಟೋಬರ್ 2, 2019

1247. ಮನದೊಳಗಿನ ಕಿಡಿ

ಮನದೊಳಗಿನ ಕಿಡಿ..

ಬೇಲಿಯೇ ಎದ್ದು ಹೊಲವ ಮೇದಂತೆ
ಭಾವಗಳ ತಾಕಲಾಟದಿ ಹೃದಯವೊಡೆದಂತೆ!
ಶೈತಾನ ಒಳಹೊಕ್ಕಿ ಯುದ್ಧ ಹೂಡಿದಂತೆ,
ಮನದೊಳಗಿನ ಸಂಘರ್ಷವು ಎಲ್ಲೆ ಮೀರಿದಂತೆ!

ರಾಗ ಪದ ಲಯಗಳೆಲ್ಲ ಸತ್ತು ಹೋದಂತೆ,
ಶಾಂತಿಯ ಬೀಜ ಸರ್ವನಾಶವಾದಂತೆ,
ಕ್ರಾಂತಿಯ ಕಿಡಿ ಮೊಳಕೆಯೊಡೆದಂತೆ,
ಬೆವರೊಳಗಿನ ಘರ್ಷಣೆಯು ತಾಕಲಾಟದಂತೆ!

ಜೀವಕೋಶದ ಕಣಕಣವೂ ಕುದಿದಂತೆ,
ಕರುಳು, ಮಾಂಸ,ರಕ್ತ ಹೆಪ್ಪುಗಟ್ಟಿದಂತೆ!
ನರಮಂಡಲದೊಳಗೆ ಭೂಕಂಪವಾದಂತೆ,
ರಕ್ತನಾಳ, ದಮನಿಗಳು ಉಕ್ಕಿ ಹರಿದಂತೆ!

ಸಾವು ನೋವಿನ ಭೀಕರವ ಮರೆತಂತೆ
ನಾನೊಬ್ಬನೇ ಎನುವಷ್ಟು ಶಕ್ತಿ ಬಂದಂತೆ!
ಪ್ರಪಂಚವನೇ ಕೈಲಿ ಹಿಡಿದು ನಡುಗಿಸುವಂತೆ
ಮೌನ ಸೋತು ಶರಣಾಗಿ ಬಾಯ್ಬಿಟ್ಟಂತೆ
ಕೊನೆಯಲಿ ತಾನೇ ತಾನಾಗಿ ಜಗಕೆ ಸೋತಂತೆ!
@ಪ್ರೇಮ್@
03.10.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ