ಗುಂಡಿನ ಗುಂಡಿಗೆ
ಹೌದು, ನಾನೇಕೆ ಕೋವಿಯೊಳಗೆ ತೂರಿ
ಯಾರನ್ನಾದರೂ ಸಾಯಿಸುವ ಕಾರ್ಯಕ್ಕೆ
ಆ ನರಹಂತಕನಿಗೆ ಸಹಕಾರ ನೀಡಲಿ..?
ಬೇಕಾದರೆ ಕೋವಿಯನ್ನೆ ಎಸೆದು ಸಾಯಿಸಲಿ ಅವನು
ಮತ್ತೆ ನನ್ನನ್ನು ತನ್ನೊಳಗೆ ಸೇರಿಸಿಕೊಂಡು
ಕೆಟ್ಟ ಕಾರ್ಯಕೆ ನನ್ನ ಹೆಸರು ಕಟ್ಟಿ
ನನ್ನನ್ನೇ ಪಾಪಿಯನ್ನಾಗಿ ಮಾಡದೇ ಇರಲಿ
ನಾನೊಬ್ಬನೇ ಹೋಗಿ ಯಾರಿಗೆ ಡಿಕ್ಕಿ ಹೊಡೆದರೂ
ನನ್ನ ವೇಗಕ್ಕೆ, ಭಾರಕ್ಕೆ ಯಾರೂ ಸಾಯಲಾರರು
ಯಾರಾದರೂ ನನ್ನ ತಿಂದು ನುಂಗಿ ಬಿಟ್ಟರೂ
ವೈದ್ಯರು ಬಂದು ಹೊರಗೆ ತೆಗೆದಾರು
ಸಾಯಿಸುವುದು ಯಾರೋ
ಹೆಸರು ಮತ್ಯಾರಿಗೋ..ಶಕ್ತಿ ಇಲ್ಲದವರಿಗೆ
ಹೌದು, ನನಗೆಲ್ಲಿಂದ ಬಂತು ಶಕ್ತಿ..
ಆ ಕೋವಿಯ ದುಷ್ಟ ಸಹವಾಸದಿಂದಲೇ
ಗಂಧ ಮಾರುವವಳ ಗೆಳೆತನ ಮಾಡಿದರೆ ಪರಿಮಳ
ಅದೇ ಮೀನು ಮಾರುವವಳ ಜೊತೆ...?
ನಾನೂ ಕೂಡ ಆ ಕೋವಿಯ ಸಹವಾಸ ಬಿಡಬೇಕು
ಹಾಗಾದರೆ ನಾ ಒಂಟಿ ಅಲ್ಲವೇ?
ನನ್ನನ್ನೇಕೆ ತಯಾರಿಸಿದ್ದಾರೆ?
ಪರರ ಸಾಯಿಸಲೆಂದೇ ನಾ ಹುಟ್ಟಿರುವೆನೇ?
ಪರರ ಜೀವ ತೆಗೆಯಲು ನಾ ಬಂದಿರುವೆನೇ..
ಅಯ್ಯೋ ..ದೇವಾ..ವಿಧಿಯೇ..
ಆದರೆ ಕೋವಿಯ ಜೊತೆಗಾರ ನಾ ಗುಂಡು
ಗುಂಡಾದ ನನಗೆ ಗಂಡೆದೆ ಇರಬೇಕಲ್ಲ
ಸಾಯಿಸಲು ನಾ ಏಕೆ ಹೆದರುತ್ತಿರುವೆ?
ನನ್ನ ಜನನ ಕೋವಿಯೊಂದಿಗೆ ಜೀವ ಕಳೆಯಲು
ಹುಟ್ಟಿದ ಜೀವಿ ಸಾಯಲೇ ಬೇಕಲ್ಲವೇ?
ಶಿವನ ಕಾರ್ಯವೇ ನನ್ನದು?
ನಾನಷ್ಟು ದೊಡ್ಡವನೇ ?
ಅರೆರೆ ...ಹಾಗಾದರೆ ನಾ ಶ್ರೇಷ್ಠನೇ ?
ಜೀವ ತೆಗೆಯುವುದುಶ್ರೇಷ್ಠ ಕಾರ್ಯವೇ!
ಅದೇ ನನ್ನ ಜೀವಮಾನದ ಕೆಲಸವೇ?
ಕೋವಿ ಇಲ್ಲದೆ ನನಗೆ ಜೊತೆ, ಬಾಳು ಇಲ್ಲವೇ?
ನಾನೇಕೆ ಹೀಗೆ ಸಾಯಿಸಲು ಹುಟ್ಟಿರುವೆ
ನನಗೆ ಕೊಡಲು ದೇವರಿಗೆ ಬೇರೆ ಕೆಲಸ ಇರಲಿಲ್ಲವೇ?
ವಿಧಿಯ ಲೇಲೆಯೇ?
ನಾ ಹುಟ್ಟಿರುವೆ, ಒಂದು ದಿನ ಸಾಯುವೆ
ಸಾಯುವ ಮೊದಲು ಒಂದು ಜೀವದ ಒಳ ಹೋಗುವೆ
ಸತ್ತರೂ ಸರಿ, ಬದುಕಿದರೂ ಸರಿ
ನನಗೆ ವಹಿಸಿದ ಕಾರ್ಯ ನಾ ಮಾಡಲೇ ಬೇಕು
ನಾನು ಗುಂಡಲ್ಲವೇ ..
ಗಂಡೆದೆ ಬೇಕಲ್ಲವೇ ನನಗೆ?
@ಹನಿಬಿಂದು@
28.11.2023
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ