ಅದೇಕೋ ನನ್ನ ಹುಡುಗ ಮೌನಿಯಾಗಿದ್ದಾನೆ
ಅವನು ಮಾತನಾಡಲಿ ಎಂದು ನಾನು
ನಾನು ಮಾತನಾಡಲಿ ಎಂದು ಅವನು
ಇಬ್ಬರೂ ಒಬ್ಬರನ್ನು ಒಬ್ಬರು ಕಾಡುತ್ತಲೇ ಇದ್ದೇವೆ
ಮನದಾಳದಲ್ಲಿ ಏಕಮುಖ ಸಂಭಾಷಣೆ ನಡೆಯುತ್ತಲೇ ಇದೆ
ಅಹಂ ಅಡ್ಡ ಬರುತ್ತದೆ ನಾನೇ ಏಕೆ ಮಾತನಾಡಿಸಲಿ
ಅವನ ಧೋರಣೆ ಹಾಗಲ್ಲ ಅನಿಸುತ್ತೆ
ಕೆಲಸದ ನಡುವೆ ಸಮಯ ಇಲ್ಲ
ತಲೆಯಲ್ಲಿ ನನಗೊಬ್ಬಳು ಕಾಯುತ್ತಾ ಇದ್ದಾಳೆ ಎಂದು ನೆನಪಿದ್ದರೆ ತಾನೇ
ಎಲ್ಲೋ ಹೇಗೋ ಇರುತ್ತಾಳೆ ಬಿಡು
ನನ್ನ ಬಿಟ್ಟು ಅದೆಲ್ಲಿ ಹೋಗ್ತಾಳೆ
ನನ್ನ ಹುಚ್ಚಿ ತರಹ ಪ್ರೀತಿಸುತ್ತಾಳೆ
ನಾನೇ ಅಲ್ಲವೇ ಅವಳಿಗೆ ಬದುಕು ಕೊಟ್ಟವನು
ಬೇಕು ಬೇಕೆಂದಾಗ ಬೇಕಾದುದೆಲ್ಲವನ್ನೂ ಅವಳ ಮುಂದೆ ಸುರಿದು ಅವಳ ಮನಸ್ಸನ್ನು ತಣಿಸಿದವನು
ಅವಳ ಪ್ರೀತಿ ಗೆದ್ದವನು
ಇಂತಹ ನನ್ನ ಬಿಟ್ಟು ಅವಳೆಲ್ಲಿ ತಾನೇ ಹೋಗಲು ಸಾಧ್ಯ ಅಲ್ಲವೇ!
ನನಗೋ ಆತಂಕ... ಇವನಿಗೆ ಬೇರೆ ಯಾರಾದರೂ ಸಿಕ್ಕಿರಬಹುದೇ?
ನನಗಿಂತ ಅಂದಗಾರ್ತಿ !
ಹಣ ನೋಡಿ, ಅಂದ ನೋಡಿ, ಗುಣ ನೋಡಿ!
ಇವನ ಒಳ್ಳೆಯತನವನ್ನು ನೋಡಿ!
ನನ್ನ ಇವನು ಮರೆತು ಹೋಗಿರಬಹುದೇ!
ಮತ್ತೆ ಹೃದಯಕ್ಕೆ ನಾನೇ ಸಾಂತ್ವನ ಹೇಳುವ ಕಾರ್ಯ ನನ್ನದು
"ಇಲ್ಲ ಆತ ನನ್ನವನು. ಮಾತನಾಡದ ಮಾತ್ರಕ್ಕೆ ಆತ ನನ್ನ ಬಿಟ್ಟು ಬೇರೆಲ್ಲಿ ಹೋಗಲು ಸಾಧ್ಯ?
ನನ್ನ ಬಿಟ್ಟು ಈ ಲೋಕದಲ್ಲಿ ಅವನಿಗೆ ನನ್ನಷ್ಟು ಪ್ರೀತಿ ಕೊಡುವವರು ಯಾರು!
ನನ್ನೊಳಗೆ ಅವನು, ಅವನೊಳಗೆ ನಾನು!
ನಾನು ಅವನು ಹಗಲು ಇರುಳಲ್ಲ!
ನಾನು ಅವನು ರೈಲು ಪಟ್ಟೆಗಳೂ ಅಲ್ಲ
ನಾನು ಅವನೆಂದರೆ ಹೃದಯ - ಬಡಿತ!
ಹೃದಯ ಬಡಿಯದೆ ಇದ್ದೀತೆ! ಬಡಿತ ಇರದೆ ಹೃದಯಕ್ಕೆ ಬೆಲೆಯೇ
ಅವನು ಅವನೇ
ನಾನು ನಾನೇ
ನಾನೆಂದರೆ ಅವನೇ.. ಅವನೆಂದರೆ ನಾನೇ
ನನಗೆ ಅವನು ಅವನಿಗೆ ನಾನು
ಮಾತನಾಡಲಿ, ಮೌನವಾಗಿರಲಿ
ಕೋಪಗೊಳ್ಳಲಿ, ರಾಜಿಯಾಗಲಿ
ಪ್ರೀತಿಯಲ್ಲಿ ಕೋಪ, ತ್ಯಾಗ ,ನೋವು ,ಅಪ್ಪುಗೆ ,ಸಾಂತ್ವನ ,ಒಂಟಿತನ, ಗಟ್ಟಿತನ , ಹಿರಿತನ, ಗೆಳೆತನ, ನಂಬಿಕೆ, ಸತ್ಯ, ಜಗಳ, ಮುದ್ದು, ಮುನಿಸು ಎಲ್ಲವೂ ಇದ್ದರೇನೇ ಚಂದ!
ಪ್ರಪಂಚದಲ್ಲಿ ಒಂದು ಬಿಡಿಸಲಾಗದ ಬಿಡಲಾಗದ ಹಿತಕರ ಸಂಬಂಧ
ಅದು ನೋವು ತರುವ ಸಂಬಂಧ ಆಗಿರಬಾರದು
ಹಾಗಿದ್ದರೆ ಅದು ಪ್ರೀತಿಯಲ್ಲ ಬಂಧನ
ಬಂಧನ ಮಧುರವಾಗಿದ್ದರೆ ಮಾತ್ರ ಅದು ಪ್ರೇಮ ಬಂಧನ!
ಇಲ್ಲದೆ ಹೋದರೆ ಅದು ಆತ್ಮ ಬಂಧನ!
ಹಲವು ಸಂಬಂಧಗಳಿಲ್ಲಿ ಭೂಮಿಯಲ್ಲಿ ಆತ್ಮ ಬಂಧನದಲ್ಲೇ ಬದುಕುತ್ತಿವೆ
ಸಮಾಜಕ್ಕಾಗಿ, ಹಿರಿಯರಿಗಾಗಿ, ಮಕ್ಕಳಿಗಾಗಿ, ಕುಟುಂಬಕ್ಕಾಗಿ
ಮತ್ತೆ ಪ್ರೀತಿ? ನಂಬಿಕೆ? ಅರಿವು?
ಅವೆಲ್ಲ ಗಾಳಿಗೆ ತೂರಿ ಆಗಿದೆ!
ಏಕೆ? ಉತ್ತರ ಇಲ್ಲ! ಜೊತೆಯಾಗಿಯೇ ಇದ್ದೇವಲ್ಲ! ಸಮಾಜದಲ್ಲಿ ಮರ್ಯಾದೆಗೆ ಅಷ್ಟು ಸಾಕು! ಅಷ್ಟೇ! ಗಂಡ! ಯಜಮಾನ, ಸಹಧರ್ಮಿಣಿ ಆಕೆ!
ಮತ್ತೆ ಪ್ರೀತಿ, ನಂಬಿಕೆ, ಅಪ್ಪುಗೆ
ಕೇಳಬೇಡಿ, ಅದು ಅವರ ಬದುಕು
ಪರರ ಚಿಂತೆ ನಮಗೇಕೆ ಬೇಕು
ಮಾತನಾಡುವ ನಾವು ನಮ್ಮ ಬಗ್ಗೆ
ನನಗೆ ಅವನು ಅವನಿಗೆ ನಾನು
ಕಷ್ಟದಲ್ಲೂ, ಸುಖದಲ್ಲೂ
ಮತ್ತೆ ಮಾತಿನಲ್ಲೂ, ಮೌನದಲ್ಲೂ
ಅಷ್ಟೇ ಅಲ್ಲ. ಇಂದೂ. ನಾಳೆಯೂ
ಬೇರು, ಮರ ಬಳ್ಳಿ, ಹೂವು, ಕಾಯಿ, ಹಣ್ಣು???
ಎಲ್ಲಾ ಒಂದೇ.. ಪ್ರೀತಿ. ನಂಬಿಕೆ ಅಷ್ಟೇ!
ಮತ್ತೇನಿದೆ ಈ ಜಗದಲ್ಲಿ ಮಣ್ಣು!
@ಹನಿಬಿಂದು@
20.04.2025
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ