ಲಘುಬರಹ-3
ಮೊಬೈಲು ಪುರಾಣ
ಮೊಬೈಲು ಬಗ್ಗೆ ಬರೆಯೋದೇನಿದೆ? ಅದೇನಂತ ಎಲ್ಲರಿಗೂ ಗೊತ್ತು! ಅಲ್ಲವೇ?ಆದರೆ ಕೆಲವೊಂದು ವಿಚಾರಗಳಿವೆ ನೋಡಿ!
ಮೊಬೈಲ್ ಬಂದ ಹೊಸತರಲ್ಲಿ ಯಾರದಾದರೂ ಪ್ಯಾಕೆಟ್ ಒಳಗಿನಿಂದ ಮೊಬೈಲ್ ರಿಂಗಣಿಸಿದರೆ ಸಾಕು, ಜನರೆಲ್ಲ ಅವನ ಕಡೆಗೇ ನೋಡ್ತಾ ಇದ್ರು ಹೆಮ್ಮೆಯಿಂದ! ಅದೂ ಹುಡುಗಿಯರೆಲ್ಲಾ ಕಣ್ ಕಣ್ ಬಿಟ್ಟು ಅವನನ್ನೇ ಎವೆಯಿಕ್ಕದೆ ನೋಡೋರು! ಆದರೆ ಅವನಿಗೋ ತೋರಿಸಿಕೊಳ್ಳೋ ಗೀಳು! ಜೋರಾಗಿ ಎಲ್ಲಾರ್ಗೂ ಕೇಳೋ ತರಹ ತನ್ನ ಕಾರ್ಯಗಳ ಬಗ್ಗೆ ಮಾತಾಡಿ ಫೋನ್ ಕಟ್ ಆದ ಮೇಲೆ ಸುತ್ತ ನೋಡ್ತಾ ಇದ್ದ ಹೆಮ್ಮೆಯಿಂದ!
ಆದ್ರೆ ಈಗ ಹಾಗಲ್ಲ, ನಾಯಿ ಕೈಲೂ ಮೊಬೈಲಿದೆ ಅನ್ನೋ ಹಾಗೆ ಅದರ ಸೌಂಡ್ ಎಷ್ಟೇ ಚೆನ್ನಾಗಿರಲಿ,ಎಷ್ಟೇ ಒಳ್ಳೆ ಹಾಡಾಗಿರಲಿ,ಶಬ್ದದ ತೀವ್ರತೆ ಒಂದು ಡೆಸಿಬಲ್ ಹೆಚ್ಚಾಗಿದ್ರೂ ಜನ ಕೆಕ್ಕರಿಸಿ,'ಪ್ರಪಂಚದಲ್ಲಿ ಇವ ಒಬ್ಬನ್ಹತ್ರ ಮಾತ್ರ ಮೊಬೈಲ್ ಇರೋದಾ?' ಅನ್ನೋ ತರಹ ನೋಡ್ತಾರೆ!! ಅವರ ನೋಟ 'ಇಡೀ ಊರವ್ರಿಗಾ, ಇವನೊಬ್ನಿಗಾ ಫೋನ್ ಬಂದಿರೋದು' ಅನ್ನೋ ತರಹ ಇರುತ್ತೆ! ಇನ್ನು ಜೋರಾಗಿ ಮಾತಾಡಿದ್ರೆ ಮುಗಿದೇ ಹೋಯ್ತು,'ಅಣ್ಣಾ ಸ್ವಲ್ಪ ನಿಧಾನ!' ಅಂತಾರೆ! ಇನ್ನು ಗಂಟೆಗಟ್ಟಲೆ ಮಾತಾಡ್ತಾ ಇದ್ದವನನ್ನು ನೋಡಿದ್ರೆ 'ಪುಂಡಿ, ಕೆಲ್ಸ ಇಲ್ದಿರೋ ಸೋಮಾರಿ' ಅಂತ ಪಟ್ಟ ಕಟ್ಟಿ ಬಿಡ್ತಾರೆ! ಹುಡ್ಗೀರೋ.. ಇಯರ್ ಫೋನ್ ಹಾಕ್ಕೊಂಡು ಪಕ್ಕದಲ್ಲೆ ಕೂತವ್ರಿಗೂ ಕೇಳ್ಬಾರ್ದು ಅಷ್ಟು ಮೆಲ್ಲ ಮಾತಾಡ್ತಿರ್ತಾರೆ!
ಇದೆಲ್ಲ ಮಾತಾಡೋ ವಿಷ್ಯ ಆಯ್ತು. ಇನ್ನು ಸ್ವಲ್ಪ ಮಾಡರ್ನ್ ವಿಷಯಕ್ಕೆ ಬರೋಣ! ಈಗ ಫೋನ್ ಹಿಡ್ಕೊಂಡು ಜೋರು ಜೋರಾಗಿ ಮಾತನಾಡಿ, ವಿಷಯ ಡಿಸ್ಕಸ್ ಮಾಡಿ, ನಿಧಾನವಾಗಿ ಕುಳಿತು ಪರಿಹರಿಸಿಕೊಳ್ಳುವಷ್ಟು ಸಮಯ ಜನರಿಗಿಲ್ಲ! ಅದಕ್ಕೆ ಜನರೆಲ್ಲ ಸಾಮಾಜಿಕ ಜಾಲ ತಾಣಗಳ ಹಿಂದೆ ಬಿದ್ದಿದ್ದಾರೆ! ಅರ್ಕುಟ್ ನಲ್ಲಿ ಫೋಟೋ ಮಾತ್ರ ಕಳುಹಿಸಿ ಅದನ್ನು ನೋಡುತ್ತಿದ್ದ ಜನರ ಕೈಯಲ್ಲೇ ಜಗತ್ತಿದೆ ಈಗ! ಪ್ರಪಂಚವೆಲ್ಲಾ ಎಜುಕೇಟೆಡ್(ದುನಿಯಾ). ಹಾಗಾಗಿ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ವಾಟ್ಸಪ್, ವಿ -ಚಾಟ್, ಟೆಲಿಗ್ರಾಂ,ಹೈಕ್,ಮೆಸೆಂಜರ್, ಟ್ವಿಟರ್,ಇಂಸ್ಟ್ರಾಗ್ರಾಂಗಳಲ್ಲೆ ಜನರ ಮಾತುಕತೆ!
ನೋಡಬೇಕು ಅನಿಸಿದಾಗೆಲ್ಲ ವೀಡಿಯೋ ಕಾಲ್! ಇನ್ನು ಪಕ್ಕದಲ್ಲೆ ಕುಳಿತವರ, ಹತ್ತಿರದ ಮನೆಯವರ ಪರಿಚಯ ಯಾರಿಗೂ ಇಲ್ಲ! ಬೇಡವೂ ಕೂಡಾ..ಬದಲಾಗಿ ಕಾಂಟ್ಯಾಕ್ಟ್ ಎಲ್ಲಾ ಫೋನಲ್ಲೆ! ಫೋನಿಲ್ದೆ ಜಗವಿಲ್ಲ. ವಾರಗಟ್ಟಲೆ ಕಾಯೋ ಚಿಂತೆಯಿಲ್ಲ. ಈಗಂತೂ ಯೂಟ್ಯೂಬಿದೆ. ಪ್ರಪಂಚದ ಯಾವ ಮೂಲೆಗೆ ಹೋದ್ರೂ ನಮ್ಮ ಊರಿನ, ನಮ್ಮ ಭಾಷೆಯ ಕಾರ್ಯಕ್ರಮ,ಯಕ್ಷಗಾನ, ಚಲನಚಿತ್ರ ಹೀಗೆ ನಮಗೆ ಬೇಕಾದ ಆಡಿಯೋ,ವಿಡಿಯೋಗಳು ಅದರಲ್ಲಿವೆ. ಅದಕ್ಕಾಗೇ ಅದು ಅಷ್ಟು ಪ್ರಖ್ಯಾತವಾಗಿದೆ!!
ಆದರೆ ನಮಗೆ ಗೊತ್ತಿಲ್ಲದೆ ನಾವೇನೋ ಸಂಬಂಧಗಳಿಂದ ದೂರಾನೇ ಉಳಿದು ಬಿಡುತ್ತೇವೇನೋ? ಮನೆಗೆ ಬಂದ ಬಂಧು-ಅತಿಥಿಗಳೊಡನೆ ಹಿಂದಿನಂತೆ ಹರಟಲು ಈಗಿನ ಮಕ್ಕಳಿಗೂ ಹಿರಿಯರಿಗೂ ಸಮಯವಿಲ್ಲ! ಇಂದಿನ ತಾಯಂದಿರಿಗೂ, ಅಜ್ಜಿಯರಿಗೂ ಧಾರಾವಾಹಿಗಳ ಪಾತ್ರಗಳ ಚಿಂತೆಯಾದರೆ ತಂದೆಗೆ ರಾಜಕೀಯ,ಫ್ರೆಂಡ್ಸ್,ಪಾರ್ಟಿ,ಬ್ಯುಸಿನೆಸ್,ಮೇಂಟೆನೆಂಸ್ ಚಿಂತೆ! ಮಕ್ಕಳು ಲ್ಯಾಪ್ ಟಾಪ್,ಮೊಬೈಲ್ ಗೇಮ್ಸ್, ಆನ್ ಲೈನ್ ಶಾಪಿಂಗ್, ಸಾಮಾಜಿಕ ಜಾಲ ತಾಣಗಳಲ್ಲಿ ಬ್ಯುಸಿ! ಬರ್ತ್ ಡೇ ಪಾರ್ಟಿ, ಮದುವೆ, ಗೃಹಪ್ರವೇಶ, ಆ್ಯನಿವರ್ಸರಿ ವಿಷ್ ಎಲ್ಲಾ ಅಲ್ಲೆ! ಇನ್ನು ಬೇರೆ ಕೆಲಸ ಮಾಡಲು ಟೈಮೇ ಇಲ್ಲ! ದಿನಕ್ಕೆ ಬಂದ ಸಾವಿರಾರು ಮೆಸೇಜ್ ಗಳಿಗೆ ರಿಪ್ಲೇ ಮಾಡೋದು ಬೇಡವೇ? ಇನ್ನೆಲ್ಲಿ ಮಾತು,ಕತೆ,ಹರಟೆ? ತಂದೆ,ತಾಯಿ ಮಾತನಾಡುವಾಗ ಸಿಟ್ಟು ಬರುತ್ತದೆ. ಯಾರೂ ಬುದ್ಧಿ ಹೇಳ್ಬಾರ್ದು! ನೀನು ಮಾಡಿದ್ದೆ ಸರಿಯೆನಬೇಕು.. ಇಲ್ಲಾ ಅಂದ್ರೆ.. ಇದೆಯಲ್ಲ 4098... ಸಾಯ್ತೇನೆ ಅನ್ನೋ ಟ್ರಿಕ್! ಹೆದರುವ ಪೋಷಕರನ್ನು ಬಗ್ಗಿಸಲು ಅಷ್ಟು ಸಾಕು! ಕಣ್ಣಿನ ಡಾಕ್ಟರಿಗೆ, ಕನ್ನಡಕದ ಅಂಗಡಿಯವರಿಗೆ ಪುರುಸೊತ್ತೇ ಇಲ್ಲ! ಕೆಲಸ, ಉಪಯೋಗ ಕಣ್ಣು ಬೆರಳುಗಳಿಗೆ ಮಾತ್ರ!
ಹಿಂದೊಂದು ಕಾಲವಿತ್ತು,ಅರ್ಜೆಂಟಿನವ ಕಾಲ್ ಮಾಡಿ "ಶೆಟ್ರೆ ಬರ್ಕೊಳ್ಳಿ, ಸಾಮಾನು ಚೀಟಿ ,ಅರ್ಧ ಗಂಟೇಲಿ ಬರ್ತೇನೆ,ಕಟ್ಟಿಡಿ,1ಕೆಜಿ ಸಕ್ಕರೆ,2ಕೆಜಿ ಬೆಲ್ಲ,ಅರ್ಧ ಕೆಜಿ ಚಾಹುಡಿ..." ಅಂತ ಈ ಕಡೆಯವನ ಮಾತಿಗೂ ಕಾಯದೆ ಫೋನಿಟ್ಟು ಬಿಡುವುದು! ಆಗಾಗ ರಾಂಗ್ ಕಾಲ್ ಮಾಡಿ, 'ಇದು ಗೋವಿಂದ ಭಟ್ರಾ, ಇದು ನಾಟಿ ಔಷಧಿ ನಾರಾಯಣ್ ಭಟ್ರಾ?' ಎಂದೆಲ್ಲ ಕೇಳಿ ತಲೆಕೆಡಿಸ್ಕೊಳ್ಳೋ ಕಾಲ ಈಗ ಹೋಗಿದೆ. ಟ್ರೂ ಕಾಲರ್ ಬಂದಿದೆ. ಆ ಕಡೆಯಿಂದ ಕಾಲ್ ಮಾಡಿದ್ದು ಯಾರು, ಅವ ಎಲ್ಲಿದ್ದಾನೆ, ಕರೆ ಸ್ವೀಕರಿಸ ಬೇಕೇ,ಬೇಡವೇ ಅದು ತಿಳಿಸುತ್ತದೆ! ಮುಂದೊಂದು ದಿನ ಕರೆ ಮಾಡುವವರ ಆಧಾರ್ ನಂಬರ್ ಜೊತೆ ಫೋಟೋ ಸಮೇತ, ಅವರಿರುವ ಜಿಪಿಎಸ್ ಮ್ಯಾಪ್ ನೊಂದಿಗೆ ಕಂಡರೂ ಅಚ್ಚರಿಯಿಲ್ಲ! ಆಫೀಸ್ ವರ್ಕ್ ಎಂದು ಬಾರಿಗೆ ಹೋದ ಅಣ್ಣಂದಿರೆಲ್ಲ ಹಾಗೆಯೇ ದೇವಸ್ಥಾನಕ್ಕೆಂದು ಹೊಸ ಸೀರೆ ತರಲು ಹೋದ ಅಕ್ಕಂದಿರೆಲ್ಲ ಸಿಕ್ಕಿ ಹಾಕಿಕೊಳ್ಳುವುದು ಗ್ಯಾರಂಟಿ!
ಫೋನ್ ಮಿಸ್ ಯೂಸ್ ಆಗಬಾರದು ಎಂಬ ನಿಯಮದಿಂದ ನೆಟ್ ಸ್ಪೀಡ್ ಕಟ್ ಆದರೂ ಅದೆಲ್ಲ ಹಳ್ಳಿಯ ಜನರಿಗೆ ಮಾತ್ರ ಅನ್ವಯಿಸುವುದಲ್ಲವೇ? ಹೇಳಿ ಕೇಳಿ ಮನುಷ್ಯ ಸಂಚಾರಿ ಜೀವಿ! ಮೊಬೈಲ್ ಹಿಡ್ಕೊಂಡು ಕೆಲಸಕ್ಕೆಂದು ಸಿಟಿಗೆ ಹೋದರಾಯಿತು! ಮನುಷ್ಯನ ತಲೆಯಲ್ಲಿ ಬಹಳವೇ ಬುದ್ಧಿ ಇದೆ ತಾನೇ? ಏನಿಲ್ಲ ಮೊಬೈಲ್ನೊಳಗೆ? ಗಡಿಯಾರ,ದಿಕ್ಸೂಚಿ,ಅಲಾರಂ,ಕ್ಯಾಮರಾ, ಕ್ಯಾಲೆಂಡರ್,ಭವಿಷ್ಯ, ಟಿ.ವಿ, ರೇಡಿಯೋ, ಆಡಿಯೋ ಪ್ಲೇಯರ್, ಡಿಕ್ಸ್ ನರಿ, ಆಟಗಳು,ಸಂಗೀತ ಸಾಧನಗಳು, ಪದ್ಯ, ಸ್ಕ್ಯಾನರ್, ರೆಕಾರ್ಡರ್,ಮ್ಯಾಪ್, ಬ್ಯಾಂಕ್.... !!! ಎಷ್ಟು ಕಂಪನಿಗಳಿಗೆ ನಷ್ಟ ಲೆಕ್ಕಹಾಕಿ!!!
ಮನೆಯಲ್ಲೆ ಕುಳಿತು ಕಂಪ್ಯೂಟರ್ನಲ್ಲಿ ಮಾಡಬಹುದಾದ ಎಲ್ಲಾ ಕೆಲಸಗಳನ್ನೂ ಫೋನಲ್ಲೆ ಮಾಡಿಕೊಳ್ಳಬಹುದು. ಕಟ್ಟಿಂಗ್ ಶಾಪ್, ವಾಶ್ ರೂಂ ಬಿಟ್ಟರೆ ನೀವು ಮತ್ತೆಲ್ಲೂ ಹೋಗಬೇಕಾಗಿಲ್ಲ! ಕಾಲ ಬದಲಾಗಿದೆ, ಜನ, ಜನರ ಕೈಲಿರುವ ಮೊಬೈಲ್ ಕೂಡಾ!! ನೀವೇನಂತೀರಿ?
@ಪ್ರೇಮ್@