ಬಣ್ಣವೆಂದರೇನು?
ಕನಸ ಕಾಣುವೆನು
ಅಮ್ಮ ದೇವರ ಬಗೆಗೆ
ಮನಸ ಒಳಗೆಲ್ಲ
ಯೋಚನೆ ಅವಳ ಬಗ್ಗೆ..
ಜನ ಮಾತನಾಡುವರು
ವಿವಿಧ ಬಣ್ಣಗಳ ಬಗ್ಗೆ
ಕಾಣದೆನಗೆ ಹೇಳಮ್ಮ
ವಿವರಿಸು ಬಣ್ಣಗಳ ಬಗೆಗೆ..
ಏಸುವಿನ ಮಕ್ಕಳಿಗೆ
ಬಿಳಿಯು ಪ್ರಿಯವಂತೆ
ಕುರಾನಿಗೆ ಪರಿಸರದ
ಹಸಿರ ಒಲವಂತೆ
ಸನ್ಯಾಸಿ,ಸಾಧುಗಳಿಗೆ
ಕೇಸರಿಯೆ ಬೇಕಂತೆ
ಮಹಿಳೆಯರಿಗೆ ಪಾಪ
ಕಪ್ಪಂಗಿ ಬರ್ಕವಂತೆ..
'ಹೇಳಬಾರದು ಮಗು
ಕೇಳಿದ್ದೆಲ್ಲ ನುಂಗಬೇಕು
ಅದೆಲ್ಲ ಅವರವರ ಧರ್ಮ
ಅಡ್ಡಿಪಡಿಸಲಾಗದು ನಾವು'
ಸರಿಯಮ್ಮ ನೀನಂದೆ
ದೇವರು ಒಬ್ಬನೇ
ಬಣ್ಣವಿಲ್ಲ ಅವನಿಗೆ
ಮತ್ತೇಕೆ ಹೀಗೆ..
'ಜಗವೆ ಹೀಗೆ ಮಗು
ಬಣ್ಣ ಬದಲಾಯಿಸುವುದು
ಬೆಳಗ್ಗೆ ಕೆಂಪು ಸಂಜೆ ಕೇಸರಿ
ಮಳೆಗಾಲದಿ ಹಸಿರು
ಬೇಸಿಗೆಯಲಿ ಒಣ ಧೂಳು
ಚಳಿಗಾಲದಿ ಮಂದ
ಪ್ರಕೃತಿಯೇ ಹೀಗೆ
ವಿವರಿಸಲಾರೆ ನಿನಗೆ'
ಬೇಡಮ್ಮ ನಾನು
ನಾನಾಗೆ ಇರುವೆ
ಬಿಳಿ ಕಪ್ಪು ನನಗೆ
ತಿಳಿದಿರುವುದೇ ಸಾಕು!!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ