ಬುಧವಾರ, ಮೇ 2, 2018

284. ಲಘುಬರಹ-1 ಪಾದುಕಾಯಣಂ

ಲಘುಬರಹ

ಪಾದುಕಾಯಣಂ

      ಏನಾದರೂ ಇಲ್ಲದಿದ್ದರೂ "ನಾವು ಶ್ರೀಮಂತರೆನ್ನಲು ಏನೂ ಅಡ್ಡಿಯಿಲ್ಲ.ಆದರೆ 'ಕಾಲಲ್ಲಿ ಚಪ್ಪಲಿ' ಇಲ್ಲದೆ ಹೋದರೆ ಅದು ಸಾಧ್ಯವೇ ಇಲ್ಲ! ಇದು ಎಲ್ಲರ ಆಂಬೋಣ.
ಈಗಿನ ಕಾಲದಲ್ಲಿ ಬರಿಯ ಬೂಟಿಗೆ ಒಂದ್ಹತ್ತು (ಒಂದೆರಡು ರೂಪಾಯಿಯ ಕಾಲ ಹೋಗಿದೆ ಈಗ) ರೂಪಾಯಿ ಕಾಸು ಕೈಯಲ್ಲಿ(ಜೇಬಲ್ಲಿ) ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಕಾಲಲ್ಲಿ ಬೂಟು ಮಾತ್ರ ಇರ್ಲೇ ಬೇಕು!!
    ಅದೇನೋ ಸರಿ, ಆದರೆ ಚಪ್ಪಲಿ ಇಲ್ಲದೆ ನಡೆಯುವುದು ಸಾಧ್ಯವೇ? ಖಂಡಿತಾ ಇಲ್ಲ. ಒಂದು ಹೊತ್ತು ಊಟ ಇಲ್ಲದಿದ್ದರೂ ಪರವಾಗಿಲ್ಲ, ಏಕೆಂದರೆ ಯಾರೂ ಬ್ರಹ್ಮ - ವಿಷ್ಣುವಿನಂತೆ ಹೊಟ್ಟೆಯೊಳಗೆ ಹೊಕ್ಕು ಪರೀಕ್ಷೆ ಮಾಡಲಾರರು! ಆದರೆ ಚಪ್ಪಲಿ ಹೊರಗಿನಿಂದಲೇ ಕಾಣುವಂಥದ್ದಲ್ವೇ?ಈಗಿನ ಕಾಲದಲ್ಲಿ ಟಿಪ್-ಟಾಪಾಗಿ ಡ್ರೆಸ್ ಮಾಡ್ಕೊಂಡು,ಕ್ರಾಪ್ ಬಾಚ್ಕೊಂಡೋ,ಜುಟ್ಟು ಗಡ್ಡ ಬಿಟ್ಕೊಂಡು, ಮೊಬೈಲ್ ಹಿಡ್ಕೊಂಡು ಬೈಕಲ್ಲಿ ಝುಮ್ಮಂತ 'ಹೀರೋ'ತರಹ ಸ್ಟೈಲಲ್ಲಿ ಬ್ಯುಸಿನೆಸ್ ಮ್ಯಾಗ್ನೆಟ್ ತರಹ ಹೋಗ್ತಾ ಇದ್ರೆ,ಕಾಲಿಗೆ ಬೂಟಿರದೆ ಹೋದರೆ ಅವರ ಪರಿಸ್ಥಿತಿ ಹೇಗಿರಬಹುದು ನೀವೇ ಯೋಚಿಸಿ!!
     ನನ್ನ ಗೆಳತಿಯೊಬ್ಬಳ ಕಸಿನ್ ಮನೆಗೊಮ್ಮೆಹೋಗಿದ್ವಿ. ಅಲ್ಲಿ ಸಾಧಾರಣವಾದ ಒಂದು ಕೋಣೆಯೊಳಗೆ ಪೂರ್ತಿ ಚಪ್ಪಲಿಗಳನ್ನೇ ಆರ್ಡರ್ ಆಗಿ,ಕೆಳಗೆ-ಮೇಲೆ ಹೀಗೆ ನಾನಾ ವಿಧಗಳಲ್ಲಿ ಜೋಡಿಸಿ ಇಟ್ಟಿದ್ದರು! ನಾನು ನನ್ನ ಗೆಳತಿಗೆ ಕೇಳಿದೆ,"ಇವರು ಮನೆಯೊಳಗೆ ಚಪ್ಪಲಿ ಅಂಗಡಿ ಇಟ್ಟಿದ್ದಾರಲ್ಲಾ, ಕಸ್ಟಮರ್ಸ್ ಗೆ ಗೊತ್ತಾಗೋದು ಹೇಗೆ?" ಅಂತ. ಅದಕ್ಕವಳು, "ಇಲ್ಲಪ್ಪ, ಇವೆಲ್ಲ ಮನೆಯವರದ್ದೇ ಚಪ್ಪಲಿಗಳು. ಚಿಕ್ಕದಾಗುವ,ದೊಡ್ಡದಾಗುವ,ಮ್ಯಾಚಿಂಗ್, ಫಂಕ್ಷನ್ ವೇರ್,ಪಾರ್ಟಿ ವೇರ್,ಡೈಲಿ ವೇರ್,ರಫ್ ವೇರ್,ಸ್ಮೂತ್ ವೇರ್,ಡಾಕ್ಟರ್ಸ್ ಸಜೆಸ್ಟೆಡ್, ಸ್ಯಾಂಡಲ್ಸ್, ಶೂಸ್,ಇಂಪೋರ್ಟೆಡ್, ಫ್ಯಾಶನ್ ವೇರ್, ಸಮ್ಮರ್ ವೇರ್,ವಿಂಟರ್ ವೇರ್, ಸ್ಪೋರ್ಟ್ಸ್ ವೇರ್ , ಉಪಯೋಗಿಸುವ,ಉಪಯೋಗಿಸದ, ಚಪ್ಪಲಿಗಳು ಕಣೋ"ಎಂದಾಗ ಸುಸ್ತಾಗುವ ಸರದಿ ನನ್ನದಾಗಿತ್ತು!ಏಕೆಂದರೆ ಅಲ್ಲಿರುವ ಚಪ್ಪಲಿಗಳನ್ನು ನೋಡಿದವರಾರೂ "ಇದು ಫೂಟ್ ವೇರ್ ಶಾಪ್ ಅಲ್ಲ" ಎನ್ನುವಂತಿರಲಿಲ್ಲ!!!
     ಒಂದು ಸಲ ನಮ್ಮ ಪಕ್ಕದೂರಿನಲ್ಲಿ ಜಾತ್ರೆಗೆ ಹೋಗಿದ್ದೆ. ಜಾತ್ರೆಯಲ್ಲಿ ವಿವಿಧ ಜೋಕಾಲಿ ಆಡುವುದೆಂದರೆ ಎಲ್ಲಾ ವಯೋಮಾನದ ಜನರಿಗೂ ಅಚ್ಚುಮೆಚ್ಚು! ದುಡ್ಡು ಖರ್ಚಾದರೂ ಪರವಾಗಿಲ್ಲ,ಅದರಲ್ಲಿ ಕುಳಿತು ಮಜಾಪಡೆಯಬೇಕು! ನನ್ನ ಗೆಳತಿಯೊಬ್ಬಳು ತನ್ನ ಹೊಸ ಚಪ್ಪಲಿ ಧರಿಸಿ (ದೇವರ ದರ್ಶನ ಮಾಡಲು) ದೇವಾಲಯದ ಹೊರಗಿಟ್ಟು, ಪೂಜೆ ಮುಗಿಸಿ,ಜೋಕಾಲಿಯಾಡಿ ಮಜಾ ಪಡೆದು ಹಿಂದಿರುಗಿ ಬಂದು ನೋಡುವಾಗ ಆ ಚಪ್ಪಲಿಗಳು ಮಂಗಮಾಯ! ತುಂಬಾ ಹಳೆಯ ಬ್ರಿಟಿಷರ ಕಾಲದವು ಎನ್ನತಕ್ಕಂಥ ಎರಡು ಡಬ್ಬಾ ಗುಜಿರಿ ಚಪ್ಪಲಿಗಳು "ನಾವಿರುವುದೇ ನಿನಗಾಗಿ" ಎಂಬಂತೆ ಅದೇ ಜಾಗದಲ್ಲಿ ವಿರಾಜಮಾನವಾಗಿ ಶೋಭಿಸುತ್ತಿದ್ದವು!ಬೇರೆ ಯಾವುದೇ ಗತಿ ಕಾಣದೆ 'ಸಿಕ್ಕಿದ್ದು ಮಕ್ಕಳ ಪುಣ್ಯ' ಎಂಬಂತೆ ಸಿಕ್ಕಿದ ಚಪ್ಪಲಿಗಳನ್ನು ಹಾಕಿಕೊಂಡು ತಾನು ಜೋಕಾಲಿಯಲ್ಲಿ ಕುಳಿತ ತಪ್ಪಿಗೆ ಆ ದೇವರಿಗೆ ಹಿಡಿ ಶಾಪ ಹಾಕಿ(!) "ಇನ್ನೆಂದೂ ಈ ಜಾತ್ರೆಗೆ ಬರುವುದಿಲ್ಲ" ಎಂದು ಹೋದವಳು ಮತ್ತೆ ಮುಂದಿನ ವರ್ಷ ಜಾತ್ರೆಗೆ ಬರುವಾಗ ಮೂಲೆಯಲ್ಲಿದ್ದ ತನ್ನ ಅಜ್ಜಿಯ ಹಳೇ ಚಪ್ಪಲಿಗಳನ್ನು ಹಾಕಿಕೊಂಡು ಜಾತ್ರೆಗೆ ಹೋದಾಗಲಂತೂ ಮುಖ-ಮುಖ ನೋಡುವ ಸರದಿ ನನ್ನದು!!
    ನನ್ನ ಅತ್ತೆಯ ತಂಗಿಯ ನಾದಿನಿಯ ಮಾವನಿಗೆ ಯಾವುದೇ ದೇವಸ್ಥಾನಕ್ಕೆ ಹೋದರೂ ಮೊದಲು ತಾನು ದೇವರ ಬಳಿ ಕೇಳಬೇಕಾದ 'ವರ'ಗಳನ್ನೆಲ್ಲ ಮರೆತು, (ಜತೆಗಿರುವ ತನ್ನ ವಧುವನ್ನೂ ಮರೆತು),"ದೇವರೇ ನನ್ನ ಪ್ರೀತಿಯ ನಲ್ಮೆಯ, ಅಚ್ಚುಮೆಚ್ಚಾದ ಹೋದ ವರ್ಷವಷ್ಟೆ ೪೯೯.೯೦ ರೂಪಾಯಿಗಳನ್ನು ಕೊಟ್ಟು ಖರೀದಿಸಿದ ಚಪ್ಪಲಿಗಳನ್ನು ಹೊರಗಿಟ್ಟು ಬಂದಿದ್ದೇನೆ. ಯಾರೂ ತೆಗೆಯದಂತೆ ನೋಡಿಕೊಳ್ಳಪ್ಪ" ಎಂದು ದೇವರನ್ನೇ ವಾಚ್ಮೆನ್ ಮಾಡಿ ಪೂಜೆ ಮಾಡಲು (ಭಟ್ರಿಂದ ಮಾಡಿಸಲು) ಹೊರಡುತ್ತಾರೆ.(ಹೊರಗೆ ಬರುವಾಗ ಚಪ್ಪಲಿ ಕಾಣೆಯಾಗಿದ್ದರೆ ದೇವರು ಹೊರಗೆ ಕಾವಲಿರಲಿಲ್ಲ,ಬದಲಾಗಿ ತನ್ನ ಪೂಜೆಯನ್ನು ಸ್ವೀಕರಿಸಲು ಗುಡಿಯ ಒಳಕ್ಕೆ ಬಂದಿದ್ದರೆಂದು ಅರ್ಥ. )ಒಂದುವೇಳೆ ತನ್ನ ಚಪ್ಪಲಿ ಅಲ್ಲಿದ್ದರೆ ಅದು ಅನರ್ಥ.ಅಂದರೆ ದೇವರು ಕಾವಲುಗಾರರಾಗಿದ್ದರು ಎಂದು ನಾನು ಪ್ರತ್ಯೇಕವಾಗಿ ನಿಮಗೇನೂ ಹೇಳಬೇಕಾಗಿಲ್ಲ!!
     ನಮ್ಮ ಪಕ್ಕದ ಮನೆಯ ನಳಿನಿ ಆಂಟಿಯ ಮಾವನ ಮಗಳ ಗಂಡನ ತಂಗಿಗೆ ಒಂದು ಅಭ್ಯಾಸ. ಅದೇನೆಂದರೆ ಈ ದೇವಸ್ಥಾನಗಳಿಗೆಲ್ಲ ಹೋಗುವಾಗ  ಇಂದೋ ನಾಳೆಯೋ(ಜೀವಬಿಟ್ಟು) ಗುಜಿರಿಯವನಲ್ಲಿ 'ಸೀಟು ರಿಸರ್ವ್'ಮಾಡಿರುವ ಸ್ಲಿಪ್ಪರ್ಗಳನ್ನೇ ಹಾಕಿಕೊಂಡುಹೋಗುವುದು. ಬರುವಾಗ ಇದ್ದುದರಲ್ಲಿ ಒಳ್ಳೆಯಯದನ್ನು ಹುಡುಕಿ ಹಾಕಿಕೊಂಡುಬರುವುದು. ಅದು ಏಕೆಂದರೆ ದೇವರ ಬಳಿ ಹೋದದ್ದಕ್ಕೆ ಬಂದ ಲಾಭ ಎನ್ನುತ್ತಾಳೆ ಅವಳು.ಅದೇನೇ ಇರಲಿ ಈ 'ಪಾದುಕೆ' ಮಾತ್ರ ದೇವರಿಗಿಂತಲೂ ಮಿಗಿಲಾದುದು ಎಂದಾಯಿತು!!!
       ಇನ್ನೊಂದು ನಿಮಗೆಲ್ಲ ತಿಳಿದ ವಿಚಾರವೆಂದರೆ ಈ 'ಚಪ್ಪಲಿ' ಕಾಲಿಗೆ ಮಾತ್ರ ಉಪಯೋಗಿಸುವುದಲ್ಲದೆ ಶ್ರೀ ರಾಮಚಂದ್ರನ ಪಾದುಕೆಯನ್ನು ಭರತನು ತನ್ನ ತಲೆಯ ಮೇಲೆ ಹೊತ್ತುಕೊಂಡು ಹೋಗಿ ಅದನ್ನೇ ಆಸ್ಥಾನದಲ್ಲಿಟ್ಟು (ತಾನು) ರಾಜ್ಯಭಾರ ಮಾಡಲಿಲ್ಲವೇ? ಅಂದರೆ ಪಾದುಕೆಗೆ ಸಿಂಹಾಸನಯೋಗವೂ ಇದೆಯೆಂದಾಯಿತು, (ಆದರೆ ನೆನಪಿಡಿ, ನಮ್ಮ ಪಾದುಕೆಗಳಿಗೆ ಆ ಸ್ಥಿತಿ ಬರಲಾರದು!) ಇಲ್ಲಿ ನಾವು ಪಾದುಕೆಯ ಮಹತ್ವವನ್ನು ಅರಿಯ ಬೇಕಾದದ್ದೆ! ಪುರಾಣ ಕಾಲದಿಂದಲೂ ಅದು 'ಪೂಜ್ಯ' ವಸ್ತು ಎಂದಾಯಿತಲ್ಲವೇ?
    ಇನ್ನೆರಡು ಅತಿ ಮುಖ್ಯವಾದ ಕೆಲಸ ಒಟ್ಟಿಗೇ ಚಪ್ಪಲಿಯಿಂದಾಗುತ್ತದೆ!  ಅದೇನೆಂದರೆ ಮಾನ ಉಳಿಸುವ ಮತ್ತು ಮರ್ಯಾದೆ ತೆಗೆಯುವ ಮಹತ್ಕಾರ್ಯ! ಅದು ಹೇಗೆಂದರೆ 'ರೋಡ'ಲ್ಲಿ ಚೆಂದುಳ್ಳಿ ಚೆಲುವೆ ಹೋಗುತ್ತಿದ್ದಾಳೆ ಎಂದಿಟ್ಟುಕೊಳ್ಳಿ. ಅವಳ ಹಿಂದೆ ಹೋಗಿ ರೋಡ್ ರೋಮಿಯೋಗಳು ಚುಡಾಯಿಸಿದರೆ ಅವಳು ಧೈರ್ಯವಂತಳೂ, ಸಂಸ್ಕಾರವಂತಳೂ, (ಸಂಸಾರವ೦ತಳೂ) ಆಗಿದ್ದಿದ್ದರೆ ಕಾಲಲಿಲಿದ್ದದ್ದು ಕೈಗೆ ಬಂದು, ಕೈಯಿಂದ ಅವನ ಕೆನ್ನೆಗೆ ಬಂದು'ಟುಸ್ ಅಂತ 'ಕಿಸ್' ಕೊಟ್ಟು 'ತನ್ನ ಕೆಲಸ ಪೂರ್ತಿಯಾಯ್ತು ಎಂದು ತನ್ನ ಮಾಮೂಲು ಜಾಗ ಸೇರಿಕೊಳ್ಳುತ್ತದೆ! ಇಲ್ಲಿ ಚಪ್ಪಲಿ ಅಣಕಿಸಿದವನ ಮರ್ಯಾದೆ ಕಳೆದು,ತನ್ನ ಒಡತಿಯ ಮಾನ ಉಳಿಸುತ್ತದೆ! ಎಷ್ಟೊಂದು ಉಪಯೋಗ ಮಾರಾಯ್ರೇ! 'ಮಾನ ಮರ್ಯಾದೆ ದುಡ್ಡು ಕೊಟ್ಟರೂ ಸಿಗುತ್ತದೆಯೇ? ಅದು ಈ ಚಪ್ಪಲಿಯಿಂದ ಸಿಗುತ್ತದೆ ಎಂದರೆ ಆಶ್ಚರ್ಯವಲ್ಲವೇ???!
  ಇಷ್ಟೇ ಅಲ್ಲದೆ ಇನ್ನೊಂದು ಕರ್ತವ್ಯವೂ ಈ ಚಪ್ಪಲಿಯ ಪಾಲಿಗಿದೆ! ಅದು ವೀರಪ್ಪನ್ ನಂತೆ ಜನ ಜೀವನಪೂರ್ತಿ ಒಳ್ಳೆಯ (?) ಕೆಲಸವನ್ನೇ ಮಾಡಿದ್ದರೆ ಜನರು 'ಹಾರ' ಹಾಕಿ ಸನ್ಮಾನಿಸುತ್ತಾರೆ! ಯಾವುದರಲ್ಲಿ ಗೊತ್ತೇ? ಮೇಲೆ ಹೇಳಿದ ಅತ್ಯಮುೂಲ್ಯವಾದ ,ಈಗಿನ ಕಾಲದಲ್ಲಿ'ಗಗನಕ್ಕೇರಿದ ಬೆಲೆಯ' ಈ ಚಪ್ಪಲಿಗಳದ್ದು!!! ಇದು ಬಿದ್ದರೆ ತಮ್ಮ ಕೆಲಸದಲ್ಲಿ ಪ್ರಮೋಶನ್ ಸಿಕ್ಕಿದಂತೆ!! ಮತ್ತೆ ಹಲವಾರು ವರ್ಷ ದುಡಿಯದೆ,
ಕಷ್ಟಪಡದೆ,ಕೋಣೆಯೊಳಗೆ ಕುಳಿತು,ಪೊಲೀಸರ ಅತಿಥಿಯಾಗಿ ಮೃಷ್ಟಾನ್ನ(!) ಭೋಜನವನ್ನು ಖರ್ಚಿಲ್ಲದೆ ಸವಿಯಬಹುದು!!!
        ಪಾದುಕೆಯ ಮತ್ತೊಂದು ಉಪಯೋಗ ಮನೆಯಲ್ಲಿರುವ ಈಗತಾನೆ ಹಲ್ಲುಬರುತ್ತಿರುವ ಸಣ್ಣ ನಾಯಿಮರಿಗೆ ಚಕ್ಕುಲಿಯಂತೆ ಅಗಿಯಲು! ಇದು ನಮಗೆ ನಷ್ಟ!ಚಕ್ಕುಲಿಯ ರುಚಿಯನ್ನು ಕೊಡಬಲ್ಲ ಮಹಾನ್ ಶಕ್ತಿಯೂ ಪಾದುಕೆಗೆ ಇದೆ ಎಂದಾಯ್ತಲ್ಲವೇ?
     ಅರ್ಧ ದಾರಿಯಲ್ಲಿ ಚಪ್ಪಲಿ ಕೈಕೊಟ್ಟರೆ ಸ್ವಂತ ಕಾಲ ಪಾದವೇ ಗತಿಯೆಂದ ಅನುಭವ ತಜ್ಞ! ಹಾಗೆಯೇ ತೆಗೆದುಕೊಂಡ ಬಡ್ಡಿ ಸಾಲ ಮರುಪಾವತಿ ಮಾಡದಿದ್ದರೆ ತೆಗೆದುಕೊಂಡವಗೆ ಈ ಪಾದುಕೆಯಿಂದಲೇ ಪೂಜೆ ಕೂಡ ಮಾಡ್ತಾರಂತೆ! ಇಂತಹ ಮಹತ್ವವುಳ್ಳ, ಸಿಂಹಾಸನಾರೂಢಕ್ಕೆ ಯೋಗ್ಯವಾದ, ದೇವರ ಪೂಜೆಯಂತೆ ಮನುಜಗೂ 'ಪೂಜೆ'ಒದಗಿಸುವ, ಮರ್ಯಾದೆ ಉಳಿಸುವ, ಗತ್ತಿನ ಜೀವನ ನಡೆಸಲು ಸಹಕರಿಸುವ ಜೀವನದ ಅತ್ಯಗತ್ಯ ವಸ್ತುಗಳಲ್ಲಿ ಒಂದಾದ, ತರಕಾರಿಯನ್ನು ರಸ್ತೆ ಬದಿ ಮಾರಿದರೂ ಎಸಿ ರೂಮಲ್ಲಿ(ಅಂಗಡಿ,ಮಾಲ್ ನಲ್ಲಿ) ಮಾರಲ್ಪಡುವ, ಸ್ವಾಮಿ ವಿವೇಕಾನಂದರಿಗೂ ಸಂದೇಶ ಕೊಡಲು ಸಹಕರಿಸಿದ, ಜಾತಿ-ಮತ-ಧರ್ಮ-ಬಡವ-ಬಲ್ಲಿದ-ಮಹಿಳೆ-ಪುರುಷ-ಮಕ್ಕಳು-ಮುದುಕರು-ಯುವಕ-ಯುವತಿ-ಫ್ಯಾಶನ್ ಲೋಕ ಹೀಗೆ ಪ್ರಪಂಚದ ಆಯಾ ಪ್ರದೇಶಕ್ಕೆ  ತಕ್ಕಂತೆ ಮಾರ್ಪಾಡಾದ ಈ ಪ್ರಚಂಡ ಪಾದುಕೆಯ ವರ್ಣನೆ ಮಾಡಲು ಕಿಂಚಿತ್ ಮಾನವರಾದ ನಮ್ಮಿಂದ ಸಾಧ್ಯವೇ?...ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ