ಹಸಿರೆಲೆ
ಮರವನು ಹಸಿರಾಗಿರಿಸಿಹ ಅಡಿಗೆಯ ಮನೆಯದು ನಾನೇ
ವೃಕ್ಷಕೆ ಊಟವ ಒದಗಿಸೋ ಪಿತನಂತಹ ಕಾರ್ಯವ ಮಾಡುವೆ ನಾನೇ..
ವಾತಾವರಣದ ಬೆಳಕನು ಹೀರಿ ಪಿಷ್ಠವ ಮಾಡುವವ ನಾನೇ
ಸೂರ್ಯನ ಕಿರಣವ ಹೀರುತ ರುಚಿಕರ ಉಣಿಸನು ಉಣಿಸುವವ ನಾನೇ..
ಕೆಂಪನೆ ಹಳದಿ ಗಿಳಿ ಹಸಿರಿನ ಬಣ್ಣದಲೂ ಕಂಡು ಬರುವೆನು ನಾನು
ಪತ್ರ ಹರಿತ್ತು ಹೆಚ್ಚಾದೊಡೆ ಹಸಿರಾಗಿರುವವ ನಾನು .
ಸಣ್ಣಕೆ ಅಗಲಕೆ ಸಪೂರಕೆ ಉದ್ದಕೆ ವಿಧ ವಿಧ ಆಕಾರ ನನ್ನದು
ಗಿಡಕೂ ಮರಕೂ ಬಳ್ಳಿಗೂ ಪೊದೆಗೂ ಅಂದವ ಕೊಡುವ ಕೆಲಸ ನನ್ನದು..
ಮೊಗ್ಗಿಗೂ ಹೂವಿಗೂ ಮುಳ್ಳಿಗೂ ಕಾಂಡಕೂ ನನ್ನದೆ ಹಾಜರಿ ಪ್ರೀತಿ
ವಸಂತ ಋತುವಲಿ ಚಿಗುರುವ ಅಂದವು ಸರ್ವೆಡೆ ಕೇಳೆಯ ಖ್ಯಾತಿ!
ಅಂದಕೆ ಶೃಂಗಾರಕೆ ತಳಿರ ತೋರಣಕೆ ನಾನೇ ಮೊದಲು ಸಿಗುವೆ..
ಮಾನವ ಮುಚ್ಚಲು ಆದಿಯ ಮನುಜಗೆ ನನ್ನದೆ ಅಲ್ಲವೆ ಅರಿವೆ?
ಹಲ್ಲನು ಉಜ್ಜಲು ಬೆಳಗಿನ ಕೆಲ ತಿಂಡಿಗೂ ನನ್ನುಪಯೋಗ ಬಹಳ
ಅಲಂಕಾರಕೆ ಬಳಸುವೆ ನನ್ನನು ತಂತ್ರಜ್ಞಾನ ಯುಗದಿ ವಿರಳ!
ಬಂಧು ಬಾಂಧವರ ಜೊತೆಯಲಿ ನನ್ನಲಿ ಊಟವ ಮಾಡಲು ರುಚಿಯೇನು?!
ಕಂದು ಬಣ್ಣವ ಬರಿಸಿ ಕಡ್ಡಿಯ ಚುಚ್ಚುತ ಕಾಣಲು ಸೊಗಸೇನು!
ಕಾಡು ಮನುಜಗೆ ನನ್ನ ಸಂಘವದು ಬಹಳವೇ ಮುಖ್ಯ ಅಲ್ವೇನೋ?
ಕಾಡಲಿ ವಾಸಿಸೊ ಸಸ್ಯಾಹಾರಿಗೆ ನಾನಿರದೆ ಬದುಕೇ ಇಲ್ವೇನೋ!
@ಪ್ರೇಮ್@
10.02.2021
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ