ಗರ್ವಿಯಾಗಲೆ ನಾನು?
ಹೊತ್ತು, ಹೆತ್ತು, ತಿಪ್ಪೆ ಬಾಚಿ ಕಪ್ಪೆಯಂತಿದ್ದ ನನ್ನನೆತ್ತಿ ಮುದ್ದಾಡಿ
ನೀ ನನ್ನ ಚಿನ್ನ, ರನ್ನ ಎಂದು ಲಲ್ಲೆಗರೆದ ತಾಯಿಯೆದಿರು
ಗರ್ವಿಯಾಗಲೇ ನಾನು?
ಕ್ಷಣ ಕ್ಷಣಕೂ ಊಟ, ಬಟ್ಟೆ, ತಿಂಡಿ, ಬೇಕು ಬೇಡಗಳ ಅರಿತು
ತನಗೆ ಬೇಕೆಂದುದನೆಲ್ಲಾ ತಂದು ಸುರುವಿ ಹೆಣ್ಣೆಂದು ಹೀಗಳೆಯದೆ ಬೆಳೆಸಿದ
ಅಪ್ಪನೆದುರು ಗರ್ವಿಯಾಗಲೇ ನಾನು?
ಮಣ್ಣಿನ ಮುದ್ದೆಯಂತಿದ್ದ ಏನೂ ಅರಿಯದ ನನಗೆ ತಾಳ್ಮೆಯಿಂದ
ಪ್ರತಿಯೊಂದು ಅಕ್ಷರವನ್ನೂ ತಿದ್ದಿ, ತೀಡಿಸಿ ಕಲಿಸಿ, ಬುದ್ಧಿಯನ್ನೂ ಧಾರೆಯೆರೆದ
ಮೇರು ಪರ್ವತ ಗುರುವಿನೆದುರು ಗರ್ವಿಯಾಗಲೇ ನಾನು?
ಅಮ್ಮನಂತೆ ಬೆಳೆಸಿ, ಅಪ್ಪನಂತೆ ಸಲಹಿ, ಮುದ್ದಲ್ಲಿ ಬೆಳೆಸಿ,
ಪ್ರೀತಿಯ ಮಳೆಯನ್ನೇ ಧಾರೆಯೆರೆದ ಅನುಭವಿ ಅಜ್ಜಿಯ ಪಾದಕಮಲಗಳ
ಮುಂದೆ ಗರ್ವಿಯಾಗಲೇ ನಾನು?
ನಿತ್ಯ ಕಡಿದು ಬರಿದು ಮಾಡಿತಲಿದ್ದರೂ ಒಡಲಾಳದ ಹಸಿರನು
ಸಹನೆಯಿಂದ ಕಾಲ ಕಾಲಕೆ ಮಳೆ ಸುರಿಸಿ ಬೆಳೆ ಕೊಡುವ
ಪ್ರಕೃತಿ ಮಾತೆಯ ಎದುರು ತೃಣ ಸಮಾನದಂತಾಗುವುದಲ್ಲದೆ, ಗರ್ವಿಯಾಗಲೇ ನಾನು?
ಮತ ಧರ್ಮ ಬೇಧ ಭಾವಗಳೇ ಮುಚ್ಚಿ ಹೋದ ಹೃದಯ ಹೊತ್ತು,
ನಾನು, ನನ್ನದು, ನನ್ನವರೆಂಬ ಆಸೆ ಹೊದ್ದು
ಸಂಕುಚಿತ ಭಾವವೇ ಮೈವೆತ್ತಂತೆ ನಿಂತು ಗರ್ವಿಯಾಗಲೇ ನಾನು?
ಬೆಳಕು ಕೊಡುವ ಸೂರ್ಯ, ತಂಪೀಯುವ ಸೋಮ
ಮಳೆ ಸುರಿಸುವ ಮೋಡ, ಬೆಳೆ ಬೆಳೆಯುವ ಭೂಮಿಯೆದುರು
ಮನುಜ ನಾನೇ ಮೇಲೆನುತಲಿ ಗರ್ವಿಯಾಗಲೇ ನಾನು?
@ಪ್ರೇಮ್@
30.09.2021
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ