ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-97
ಇದೀಗ ಪಿತೃ ಪಕ್ಷವಂತೆ. ಗತಿಸಿ ಹೋದ ನಮ್ಮ ಪಿತೃಗಳಿಗೆ ಅವರ ಋಣ ತೀರಿಸುವ ಸಲುವಾಗಿ ಊಟ ಕೊಡುವ ಕಾರ್ಯಕ್ರಮ. ನಮ್ಮ ಸುತ್ತಮುತ್ತ ನಾವು ನೋಡಿದ್ದೇವೆ. ಅದೇನೆಂದರೆ ತಾಯಿ ತಂದೆ ಬದುಕಿದ್ದಾಗ ಅವರಿಗೆ ಸರಿ ಊಟ ತಿಂಡಿ ಕೊಡದೆ ಅವರನ್ನು ಹಸಿವೆಯಿಂದಲೇ ಸಾಯಿಸಿ ಬಳಿಕ ಹದಿಮೂರನೇ ದಿನ ಅವರ ಹೆಸರಿನಲ್ಲಿ ಇವರೇ ತಿಂದವರು, ಪ್ರತಿ ತಿಂಗಳು ತಿಂಗಳಿಗೂ ಸತ್ತವರ ಹೆಸರಿನಲ್ಲಿ ತಾವೇ ಮಾಡಿ, ಸ್ವಲ್ಪ ಬಡಿಸಿ, ಹಿರಿಯರ ಹೆಸರು ಹೇಳಿ, ಕಾಗೆಗೊಂಡಿಷ್ಟು ಇಟ್ಟು ಬಳಿಕ ಎಲ್ಲವನ್ನೂ ತಾವೇ ತಿನ್ನುವುದು ವಾಡಿಕೆ. ಅದರ ಜೊತೆ ಹಿರಿಯರ ಹೆಸರಲ್ಲಿ ಮಾಂಸದ ಜೊತೆ ಮದ್ಯವನ್ನು ಕೂಡಾ ತಂದು ತಾವೇ ಅದನ್ನು ಮಕ್ಕಳ ಎದುರಿಗೇ ಮಹಿಳೆಯರೂ ಸೇರಿ ಕುಡಿದು ಮಕ್ಕಳ ಎದುರಲ್ಲಿ ತಮ್ಮ ಮರ್ಯಾದೆ ತಾವೇ ಕಳೆದುಕೊಳ್ಳುವವರ ನಾವು ನೋಡಿರುತ್ತೇವೆ.
ನಿಜವಾಗಿಯೂ ಹಿರಿಯರಿಗೆ ಬಡಿಸುವ ವಾಡಿಕೆ ಓಕೆ. ಹಿರಿಯರು ಸಾಯುವ ಮೊದಲು ಕುಡಿದು ಗಲಾಟೆ ಮಾಡಿ ನಮಗೆ ಕಾಟ ಕೊಟ್ಟದ್ದು ಸಾಲದೇ? ಸತ್ತ ಮೇಲೂ ಅವರಿಗೆ ನಾವು ಕುಡಿಸಬೇಕೇ? ಅವರು ಯಾರಾದರೂ ನಿಮ್ಮ ಮೈ ಮೇಲೆ ಬಂದು "ನನಗೆ ಊಟ ಮಾತ್ರವಲ್ಲ, ಕುಡಿಯಲೂ ಬಿಯರ್, ಹಾಟ್ ಡ್ರಿಂಕ್ಸ್ ಕೊಡಿ, ಇಲ್ಲಾಂದ್ರೆ ನಾನು ನಿಮ್ಗೆ ಕಾಟ ಕೊಡ್ತೇನೆ .." ಅಂತ ಹೇಳಿದ್ದಾರೆಯೇ? ಅದು ಯಾಕೆ? ಕಲಿತ ಜನರ ಮೆದುಳು ಬೇರೆ ಬೇರೆ ಕೋನಗಳಲ್ಲಿ ಕೆಲಸ ಮಾಡುತ್ತದೆ. ಈ ಬಗ್ಗೆ ಯಾರೂ ಯೋಚಿಸಲೇ ಇಲ್ಲವೇ?
ಈಗ ಸುಮ್ಮನೆ ಇರುವ ನಿಮ್ಮ ಮಕ್ಕಳು ಏನೆಂದು ತಿಳಿದು ಕೊಳ್ಳುತ್ತಾರೆ ಎಂದರೆ ಮಕ್ಕಳನ್ನು ಹೊರಗೆ ಕೂರಿಸಿ ಒಳಗೆ ನಾವು ಹಿರಿಯರು ಕುಡಿಯಬೇಕು ಎಂಬ ಬುದ್ಧಿ ಎಳೆಯ ವಯಸ್ಸಿನಲ್ಲೇ ಅವರಿಗೆ ಬರುತ್ತದೆ ಅಲ್ಲವೇ? ಇನ್ನು ಕೆಲವರು ತಾವು ಕುಡಿಯುವಾಗ ಮಕ್ಕಳಿಗೆ ಕೂಲ್ ಡ್ರಿಂಕ್ಸ್ ತಂದು ಕೊಟ್ಟು ಆ ರೀತಿ ಕುಡಿಯುವ ಅಭ್ಯಾಸ ತಾವೇ ಮಾಡಿ ಬಿಡುತ್ತಾರೆ. ಆಗ
ಮಕ್ಕಳ ಮನಸ್ಸಿನಲ್ಲಿ ಈ ರೀತಿಯ ಭಾವನೆ ಬರುತ್ತದೆ. "ನಾವು ದೊಡ್ಡವರಾದ ಬಳಿಕ ನಾವು ಬಾರ್ನಿಂದ ತಂದು ಕುಡಿಯಬೇಕು. ಮನೆಯಲ್ಲಿ ಇರುವ ಮಕ್ಕಳಿಗೆ ಮಿರಿಂಡ, ಸ್ಪ್ರೈಟ್ ಮೊದಲಾದ ಕೂಲ್ ಡ್ರಿಂಕ್ಸ್ ಕುಡಿಸಬೇಕು!".
ಇನ್ನು ಕೆಲವರು ಇನ್ನೂ ಭಯಾನಕರೇನಿಸಿದವರು! "ಇದು ಬಿಯರ್ ಏನೂ ಆಗಲ್ಲ ಕುಡಿ.ಇದು ವೈನ್ ಹಣ್ಣಿನಿಂದ ಮಾಡಿದ್ದು, ಆರೋಗ್ಯಕ್ಕೆ ಹಾನಿ ಇಲ್ಲ...." ಎಂದು ತಾವು ಕುಡಿಯುವಾಗ ತಮ್ಮ ಮಕ್ಕಳಿಗೆ ತಾವೇ ಸ್ವಲ್ಪ ಸ್ವಲ್ಪ ಕುಡಿಸಿ ಅಭ್ಯಾಸ ಮಾಡಿಸುವವರು! ಮುಂದೆ ತಮ್ಮ ಮಕ್ಕಳು ಕೆಟ್ಟ ದಾರಿ ಹಿಡಿಯಲು ತಾವೇ ಕಾರಣೀಭೂತರಾದ ಜನ! ಆಲ್ಕೋಹಾಲ್ ದೇಹಕ್ಕೆ ಕೆಟ್ಟದು, ನರ ದೌರ್ಬಲ್ಯ ಉಂಟಾಗುತ್ತದೆ, ಮೆದುಳಿಗೆ ಹಾನಿ ಮಾಡುತ್ತದೆ ಎಂದರೆ ಅವರಿಗೆ ಅರ್ಥ ಆಗೋದೇ ಇಲ್ಲ. ಚಟ ಒಮ್ಮೆ ಹಿಡಿದರೆ ಸಾಕು. ಮತ್ತೆ ನಾವು ಬೇಡ ಎಂದರೂ ಅದು ನಮ್ಮನ್ನು ಬಿಡಲ್ಲ. ಆ ಚಟಕ್ಕೆ ದಾಸರಾದ ಜನ ಏನು ಮಾಡಿದರೂ ಬಿಡಲು ಕೇಳರು.
ನಮ್ಮ ಮಕ್ಕಳ ಭವಿಷ್ಯವನ್ನು ನಾವೇ ಕೊಲ್ಲದಿರೋಣ, ಮೊಬೈಲ್ ಕೊಟ್ಟು ಸುಳ್ಳು ಹೇಳಿಸುವುದು, ಅಲ್ಲೇ ಇದ್ದರೂ "ಅಪ್ಪ ದೂರ ಎಲ್ಲೋ ಹೋಗಿದ್ದಾರೆ" ಎಂದು ಹೇಳು ಎಂದು ಹೇಳಿಸುವ ಕೆಟ್ಟ ಅಪ್ಪ ಇಲ್ಲವೇ? ಸಾಲ ಮಾಡಿದವನ ಬಳಿ ಸುಳ್ಳು ಹೇಳುವಾಗ ತನ್ನ ಗುಂಡಿಗೆ ತಾನೇ ಬೀಳುವುದು ಎಂದರೆ ಇದೇ ಅಲ್ಲವೇ?
ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು. ಮೂರು ವರುಷದ ಮಗುವು ಕಲಿತದ್ದು ನೂರು ವರುಷದವರೆಗೆ! ನೂರು ವರುಷದ ವರೆಗಿನ ವಿದ್ಯೆ ಕಲಿಸುವ ಹಿರಿಯರು ನಾವೇ! ನಿರ್ಧರಿಸಬೇಕಾದವರು ಕೂಡಾ ನಾವೇ ಅಲ್ಲವೇ? ನೀವೇನಂತೀರಿ?
@ಪ್ರೇಮ್@
24.07.2021
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ