ಬೀಸುತಿರಲಿ ತಂಗಾಳಿ
ಬದುಕ ನಾವೆಯಲಿ ಬೀಸಿತು
ಹಿತವಾದ ತಂಗಾಳಿ
ಸೆಕೆಯಿಂದ ಬೆವರ ಹನಿ ಹೊದ್ದು
ಕಿತ್ತೆಸೆದ ಭಾವದ ಬೇರಿನ
ಒಳಗಿಂದ ಸ್ಪುರಿಸಿದ ಅದೇನೋ
ತಣ್ಣನೆಯ ಕುಳಿರ್ಗಾಳಿ..
ಪಂಕದ ಗಾಳಿ ಸಾಲದೆನಿಸಿ
ಏಸಿ ಕೂಲರ್ ಗಳ ಬದಿಗೆಸೆದು
ಅಲ್ಲೆಲ್ಲೋ ದೂರದ ಬೆಟ್ಟದ ತುದಿಯಲ್ಲಿ
ಪ್ರಕೃತಿಯ ರಮ್ಯ ಮಡಿಲಲ್ಲಿ
ಝುಳು ಝುಳು ಹರಿವ ತುಂಗೆಯ ದಡದಲ್ಲಿ
ಶಾಂತವಾಗಿ ಕುಳಿತು ಒಂದಷ್ಟು ಹೊತ್ತು
ಮೈ ಮನ ಹಗುರಾಗಿಸಿ ಇಹಪರ ಮರೆತು
ತನ್ನಷ್ಟಕ್ಕೆ ತಾನೇ ಬದಲಾಗಿ
ಕೊಂಚವಾದರೂ ಸುಧಾರಿಸಿ ಬೆಳೆಯಬೇಕು
ಆಲೋಚನೆಗಳ ಬದಲಾಯಿಸಿ
ಸಾಗರದ ಅಲೆಯಂತೆ ಚಿಮ್ಮಿ ದಡಕ್ಕೆ ಹಾರಿ ಬರಬೇಕು
ಮುಗಿಲಿಂದ ಅವಿತು ಕುಳಿತ ತುಂತುರು ಮಳೆ ಹಾನಿಯಾಗಿ
ಭೋರ್ಗರೆದು ಇಳೆಗೆ ಅಪ್ಪಿ
ಮಣ್ಣಿನೊಡನೆ ಮುದ್ದಾಡಿ
ಮಣ್ಣಿನೊಳಗೆ ಒಂದಾಗಿ
ಇಳೆಯೊಡನೆ ಬೆರೆತು ಹೋಗಬೇಕು
ಮತ್ತೊಮ್ಮೆ ಇಳೆಯಲಿ ಹಸಿರಾಗಿ ಹುಟ್ಟಿ
ಕುದಿಯುತಿಹ ಧರೆಯ ತಣ್ಣಗೆ ಇರಿಸಬೇಕು
ತಣ್ಣಗಿನ ಮಂಜು ಹೊದ್ದ
ಹಿಮಾಲಯದ ತಪ್ಪಲಿನ ಬೆಟ್ಟದಲಿ
ಒಂಟಿಯಾಗಿ ನಡೆದು ಕುಣಿದು ಕುಪ್ಪಳಿಸಬೇಕು
ಇನ್ನೊಮ್ಮೆ ಭಾರತ ಮಾತೆಯ ಶಿಖರದ
ಹಿಮ ಮಣಿಯಾಗಿ ಮಿಂಚುವ
ರವಿಕಿರಣವಾಗಿ ಪುಟಿದೇಳಬೇಕು
ಹೀಗೆಲ್ಲಾ ಕನಸು ಕಾಣುತ್ತಾ
ಮನದಲ್ಲೇ ಮಂಡಿಗೆ ಮೆಲ್ಲುತ್ತಾ
ಸೆಕೆಯಲಿ ಬಿಸಿಯಾದ ಭಾವಗಳ
ದೂರ ಬಿಸಾಕಿ ಕುಳಿತಾಗ
ಅದೆಲ್ಲಿಂದ ಬಂತೋ
ಎದೆ ಝಲ್ಲೆನಿಸುವ
ತಂಪು ತಂಪಾದ
ಭವ್ಯತೆಯ ಹೊತ್ತ
ಅಂಜದ ಅಳುಕದ
ನೆಚ್ಚಿನ ಮೆಚ್ಚಿನ
ಇಣುಕಿದರೂ ಬೇಕೇನಿಸುವ
ತಣ್ಣನೆಯ ಕುಳಿರ್ಗಾಳಿ..
ಮೈ ಮನ ತಣ್ಣಗಾಗಿಸಲು
ಯಾರೋ ನನ್ನೆದೆಯ ಬಳಿಗೆ
ಉಡುಗೊರೆಯ ಕಳಿಸಿ ಕೊಟ್ಟಂತೆ
ಅದಾರೋ ನನ್ನ ಮೊರೆಯ ಕೇಳಿ
ಸಾಂತ್ವನದ ಐಸ್ ಕ್ರೀಂ ಕೊಡಿಸಿದಂತೆ
ಅದೆಲ್ಲಿಂದಲೋ ಮಗು ಆಸೆ ಪಟ್ಟ
ದೊಡ್ಡ ಚಾಕೋಲೇಟ್ ಸಿಕ್ಕಂತೆ
ಮತ್ತೆ ಮತ್ತೆ ಕಚಗುಳಿ ಇಡುತ್ತಾ
ಬಂದೇ ಬಂತು
ತಣ್ಣನೆಯ ಸ್ಪರ್ಶದ ಅನುಭವದ
ತಂಪು ಭಾವಗಳ ಬೀಜ ಹೊತ್ತ
ಈಗಷ್ಟೇ ಮೊಳಕೆ ಕಟ್ಟಿ
ಗಿಡವಾಗಲು ತಯಾರಾದ
ಮುದ್ದು ಮುಖದ ಚೆಲುವೆಯಂತೆ
ನವೋಲ್ಲಾಸದ ಹಾಡು ಹೊತ್ತ
ಕವನದ ಪ್ರಾಸ ಪಡೆದ
ದಾಹದಲ್ಲಿ ಉದಕದಂಥ
ತಣ್ಣನೆಯ ಕುಳಿರ್ಗಾಳಿ..
ಬೀಸಿತು ತಂಪು ತಂಗಾಳಿ..
ಮತ್ತೆ ಮತ್ತೆ
ಮಾಸದಿರಲಿ
ಸದಾ ಬೀಸುತಿರಲಿ
ಮರಳುಗಾಡಿನ ಓಯಸಿಸ್ ನಂತೆ
ಮತ್ತೆ ಮತ್ತೆ ಹಿತವಾಗಿ..
ಬೀಸುತಿರಲಿ ಪ್ರೀತಿಯ ತಂಗಾಳಿ..
@ಹನಿಬಿಂದು@
26.10.2023
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ