ಭರವಸೆಯ ಬೆಳಕು
ಯಾರಿಂದಲೂ ಏನನ್ನೂ ನಿರೀಕ್ಷೆ ಇಟ್ಟುಕೊಳ್ಳಬಾರದು
ಪ್ರಪಂಚದಲ್ಲಿ ನಾವು ಒಂಟಿಯಾಗಿ ಬಂದು ಹೋಗುವವರು
ಇದೆಲ್ಲಾ ಗೊತ್ತಿದ್ದೂ ಗೊತ್ತಿದ್ದೂ ನನಗೆ ಬಾಳಿನಲಿ
ನಿನ್ನ ಮೇಲೆ ನಂಬಿಕೆ ಬಂದು ಬಿಟ್ಟಿದೆ ಕಣೋ..
ಅದ್ಯಾವ ಹೊಸ ನಿರೀಕ್ಷೆಗಳೋ ತಿಳಿಯದೇನಗೆ
ನೀ ನನ್ನ ಸದಾ ಪ್ರೀತಿಸುವೆ ಎಂಬ ನಂಬಿಕೆ
ನನ್ನ ಮೇಲೆ ನಿನಗೆ ನಿತ್ಯ ಕಾಳಜಿಯ ಕಾತರ
ದೈಹಿಕವಾಗಿ ಸೋತಾಗ ಮಾನಸಿಕವಾಗಿ ನೊಂದಾಗ
ಕಣ್ಣೀರು ಒರೆಸಲು ಬರುವೆ ಎಂಬ ವಿಶ್ವಾಸ
ಯಾರ ಮೇಲೂ ಇಲ್ಲದ ಆಸೆ ಆಕಾಂಕ್ಷೆಗಳು
ನೋವಲ್ಲೂ ನಗುವ ಹೊಸ ಭರವಸೆಗಳು
ಯಾರಿಂದಲೂ ಸಿಗದ್ದು ನಿನ್ನಲಿ ಸಿಗುವ ಆಸೆ
ನೀ ಬಾಳಲಿ ಬಂದು ಖುಷಿಯ ತರುವಂತೆ..
ಯಾರಿಗೂ ಕೊಡದ ಪ್ರೀತಿ ನಿನಗೆ ದಾನ
ಕಣ್ಣೀರು, ಸಮಯ, ಪ್ರೀತಿ, ಬಹುಮಾನ
ಭಾವನೆಗಳು, ಆಲೋಚನೆಗಳು, ಭಾವಗಳು
ಎಲ್ಲವನ್ನೂ ನಿನಗೆ ಧಾರೆ ಎರೆದು ಬಿಟ್ಟಿರುವೆ
ಅಂದೇ ನೀ ನನ್ನ ಕುತ್ತಿಗೆಗೆ ತಾಳಿ ಬಿಗಿದ ಮರುಕ್ಷಣವೇ
ಮಾತಿಲ್ಲದೆ ಮೌನದಲೇ ನನ್ನ ಬಾಳ ಆರ್ಪಿಸಿರುವೆ
ನೀ ಯಾರು ಏಕೆ ಎಲ್ಲಿ ಏನು ಏನೂ ಕೇಳಲಿಲ್ಲ ನಾ
ದೇವರ ಆಜ್ಞೆಗೆ ತಲೆಬಾಗಿ ನಮಿಸಿ ಸ್ವೀಕರಿಸಿರುವೆ
ನಾನು ನೀನು ಬೇರಿಲ್ಲ ಎಂದು ಅರಿತಿರುವೆ
ಕಷ್ಟದ ಕಡಲಿನಲೂ ನಗೆಯ ಅಳೆಯುಕ್ಕಿಸುತ್ತಿರುವೆ
ಕೆಲಸವೆಂಬ ಕಾಯಕಕೆ ಕೊರಳೊಡ್ಡಿ ಕುಳಿತಿರುವೆ
ಅಲ್ಲೂ ನಿನ್ನ ನೆನಪಿಗೆ ದಾರಿ ಇರಿಸಿರುವೆ
ನಂಬಿಕೆಯ ವಿಷಯ ಬೇರೆಯೇ ಇರಲಿ
ಕೋಟಿ ಪುರುಷರಿಗಿಂತಲೂ ನಿನ್ನ ಮೇಲಿದೆ ಅದು
ಎಲ್ಲಿಂದ ಬಂತೋ ಯಾವ ಸೆಳೆತವೋ
ಇಲ್ಲಿ ಹಣವಲ್ಲ, ಧನವಲ್ಲ ಕಾಳಜಿ ಕೆಲಸ ಮಾಡಿದೆ
ಒಣ ಬದುಕಿಗೆ ನೀ ನೀರ್ ಸುರಿಸಿ ಪೋಷಿಸಿದೆ
ಮತ್ತೆ ಬರಬಹುದು ಬಿಸಿಲ ಧಗೆಯ ಬೇಸಿಗೆ
ವಸಂತ ಬರುವನೆಂದು ಕೋಗಿಲೆ ಕಾಯದೇ
ಶರದೃತುವಿನ ಹನಿ ಬಿಂದುಗಳಿಗೆ ಮನ ಬಯಸದೆ
ಮಾಗಿಯ ಚಳಿಗೆ ಮನ ಬಿಸಿಯಪ್ಪುಗೆ ನೀಡದೆ??
ಸೂರ್ಯ ಬರದೆ ಕಮಲ ಎಂದಾದರೂ ಅರಳುವುದೇ
ರವಿ ಕಿರಣ ಸ್ಪರ್ಷಿಸದೆ ಇಳೆ ನಗುವಳೇ ಬೆಳಕಲಿ?
ಮಿನುಗು ತಾರೆಗೂ ಚಂದಿರನೇ ನಾಯಕನಲ್ಲವೇ?
ಪ್ರೀತಿ ಇಲ್ಲದೆ ಹೂವು ಅರಳಿ ನಗ ಬಹುದೇ ಜಗದಿ?
ದೇವನೊಲುಮೆಯೆ ನಮ್ಮಿಬ್ಬರ ನಡುವಿನ ಭಾಷೆ
ಆಶೀರ್ವಾದವೇ ಉಡುಗೊರೆಯು ಬದುಕಿಗೆ
ಬಾಳ ರಥ ಎಳೆಯುವ ಗಾಲಿ ನೀನಲ್ಲವೇ
ನನ್ನ ದೋಣಿಯ ನಡೆಸೋ ಅಂಬಿಗನು
ಹೃದಯ ಇಲ್ಲದೆ ಬಡಿತ ಹೇಗಾದೀತು??
ಮೆದುಳು ಇಲ್ಲದೆ ಯೋಚನೆ ಹೇಗೆ ಬಂದೀತು
ನೀರೇ ಇಲ್ಲದೆ ಸ್ನಾನ ಹೇಗೆ ನಡೆದೀತು?
ನಿನ್ನುಸಿರ ತುಂತುರಿಲ್ಲದೆ ನೆಲ ಬಿರಿಯದೆ?
ಮೋಸ ವಂಚನೆಯ ಹಾದಿಗೆ ಕಲ್ಲು ಹಾಕಿರುವೆ
ನಗೆಯುಡುಗೆ ತೊಟ್ಟು ದಿನಗಳ ಎಳೆಯುತಿರುವೆ
ಮತ್ತೆ ಶ್ರಾವಣ ಬರುವುದೆಂಬ ನಂಬಿಕೆಯಿಂದ
ಬಟ್ಟೆಯೊಂದ ಹಾಸಿ ಭಿಕ್ಷೆಗೆ ಕಾದಿರುವೆ..
ಯಾರೂ ಕೊಡದ ಮತ್ತೇನೋ ನಿನ್ನಲಿ ಅಪೇಕ್ಷೆ
ಯಾರೂ ತೋರಿಸದ ಊರಿಗೆ ನನ್ನೊಡನೆ ಸಾಗುವೆ
ಎಲ್ಲೂ ಸಿಗದ ಆನಂದ ನಿನ್ನ ಜೊತೆ ಸಿಗುವುದು
ಬದುಕ ಚಿಗುರು ಮೊಳೆತು ಹೆಮ್ಮರವಾಗಿ ಬೆಳೆವುದು
ಮತ್ತದೇ.. ಏನೇನೋ ಒಲವ ಭಾವದ ನಿರೀಕ್ಷೆಗಳು
ಸಿಗುವುದೋ ಬಿಡುವುದೋ ದೈವದ ಪವಾಡವೋ
ಸ್ವಚ್ಚ ಮನಸಿಗೆ ದೇವರ ರಕ್ಷಣೆಯ ಆಶೀರ್ವಾದವೋ
ನಿತ್ಯ ನಲಿವಿಗೆ ಹಿರಿಯರ ಶಾಪಮುಕ್ತ ವರವೋ
ಹುಸಿ ಆಸೆಯ ನಂಬಿಕೆಯ ಸಿಹಿ ಕಹಿ ಮಾತ್ರೆಯೋ
ಕಸಿ ಮಾಡಿಹ ಚಿಗುರಿನ ಹಸಿರಿನ ನೋಟವೋ
ಮಾಟವೋ ಮಂತ್ರವೋ ಯಂತ್ರ ತಂತ್ರವೋ
ಮ್ಯಾಜಿಕ್ ಮಾಯೆಯೋ ಮತ್ತೆ ಒಲವೋ
ಏನಾದರೂ ಸರಿ ಸದಾ ಇರಲೆಂಬ ಬಯಕೆ
ಹೊಸ ಬದುಕಿಗೆ ಹೆಜ್ಜೆ ಇಡುವ ಕೊನರುವಿಕೆ
ಮೂಟೆ ಕಟ್ಟಿ ಬಿಸಾಕಿದ ಕನಸುಗಳ ಹುಡುಕಾಟ
ನಿತ್ಯದ ಜೀವನದ ಸತ್ಯದ ನೋವಿನ ನರಳಾಟ
ಬದುಕ ದಾರಿಯಲಿ ಕೈ ಹಿಡಿದು ಜೊತೆಯಾಗಿ ಸಾಗುವೆ
ಬಾಳ ಪಯಣದಲಿ ಸದಾ ಜೊತೆಯಾಗಿ ನಿಲ್ಲುವೆ
ಒಂಟಿ ಜೀವಕೆ ಜಂಟಿಯಾಗಿ ನಗುವ ಹಂಚುತ
ನಂಟಿನೊಡನೆ ಜೊತೆಗೆ ನಿಲ್ಲುವೆ ಎಂಬ ಭರವಸೆ
@ಹನಿಬಿಂದು@
15.04.2024
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ