ಭಾನುವಾರ, ಫೆಬ್ರವರಿ 16, 2025

ನವಭಾವ

ನವಭಾವ

ಪುಟ್ಟ ಹಕ್ಕಿ ಹಾರಿ ಹಾರಿ ನೂರು ಭಾವ ಮೂಡಿದೆ
ಎದೆಯ ಒಳಗೆ ಹಿಗ್ಗು ಹಿಗ್ಗಿ ಮನವು ಇಂದು ನಲಿದಿದೆ 

ಬಳ್ಳಿ ಬಳಸಿ ಮರವ ಹಿಡಿದು ಎತ್ತರಕ್ಕೆ ಏರಿದೆ
ಲಿಲ್ಲಿಯಂತೆ ಅರಳಿ ಬಿರಿದ ಸುಮವು ತಾನು ನಗುತಿದೆ
ನೂರು ಆಸೆ ಹೊತ್ತ ಮೋಡ ಹೊಸತು ಹನಿಯ ಚೆಲ್ಲಿದೆ
ಗಗನದಿಂದ ಇಳೆಯ ಸ್ಪರ್ಶಕಾಗಿ ಹನಿಯು ಕಾದಿದೆ

ಖುಷಿಯ ಹಣ್ಣು ರಸವ ತುಂಬಿ ಸವಿಯ ಇಲ್ಲಿ ತುಂಬಿದೆ
ಮಸಿಯ ಮರೆತು ತಳವ ಬಿಟ್ಟ ಪಾತ್ರೆ ಇಂದು ಬೆಳಗಿದೆ
ಪ್ರೇಮದಿಂದ ಮಧುವ ಹೀರೆ ಪಕ್ಷಿ ಕಾದು ಕುಳಿತಿದೆ
ರೋಮ ರೋಮಗಳಲು ಹೊಸತು ನಾದ ಹೊಮ್ಮಿ ಬಂದಿದೆ

ಕಾಮ ಕ್ರೋಧ ಮೋಹ ಲೋಭ ಎಲ್ಲ ತಾನು ಮರೆತಿದೆ
ಮದ ಮಾತ್ಸರ್ಯ ಮರುಕ ಬಿಟ್ಟು ಪ್ರೀತಿಯಿಂದ ತಣಿದಿದೆ
ದೂರ ಸಾಗುತ್ತಿದ್ದ ನಾವೆ ದಡಕೆ ಸನಿಹವಾಗಿದೆ
ಸಾರಿ ಸಾರಿ ಸ್ನೇಹಗಾನ ಮೊಳಗಿ ಕರೆಯ ನೀಡಿದೆ
@ಹನಿಬಿಂದು@
17.02.2025

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ