ಹೀಗೊಂದು ಮುಖಪುಟದಲ್ಲಿ ಜಾಹೀರಾತು ನೋಡಿದೆ. ಅದೇನು ಅಂದರೆ ಬೇರೆ ಬೇರೆ ಯೂನಿವರ್ಸಿಟಿಯಲ್ಲಿ ಪದವಿ, ಡಾಕ್ಟರೇಟ್ ಕೊಡುತ್ತೇವೆ, ಅಪ್ಲೈ ಮಾಡಿ ಅಂತ ಬರುತ್ತದಲ್ಲ, ಹಾಗಲ್ಲ, ಸಂಗೀತ, ನೃತ್ಯ, ವಾದ್ಯ ಕಲಿಸುತ್ತೇವೆ ಅಂತ ಬರುತ್ತದಲ್ಲಾ ಹಾಗೆ. ಆನ್ಲೈನ್ ನಲ್ಲಿ ಯಕ್ಷಗಾನ ಕಲಿಸುತ್ತೇವೆ ಅಂತ. ನನ್ನ ಮಗಳಿಗೆ ಮೊದಲಿನಿಂದಲೂ ಯಕ್ಷಗಾನದಲ್ಲಿ ಆಸಕ್ತಿ. ಹಾಗಾಗಿ ನನ್ನ ಗೆಳತಿಯೊಡನೆ ಕೇಳಿದೆ." ಅದೆಲ್ಲ ಸಾಮಾಜಿಕ ಜಾಲ ತಾಣಗಳಲ್ಲಿ ಬರುವುದು ಬೋಗಸ್, ದುಡ್ಡು ಮಾಡ್ಲಿಕ್ಕೆ ಮಾಡ್ತಾರೆ ,ಅದು ಹೇಗೆ ಅನ್ ಲೈನಿನಲ್ಲಿ ಅದನ್ನು ಕಲಿಯಲು ಸಾಧ್ಯ? ಮನೆ ಪಕ್ಕದಲ್ಲಿ ಎಲ್ಲಾದರೂ ನೋಡು" ಅಂದರು.
ಯಕ್ಷಗಾನ ಕಲಿಯಲೆeಬೇಕು ಎಂದು ಆಸೆ ಪಡುತ್ತಿದ್ದ ಮಗಳನ್ನು ಪ್ರತಿದಿನ ಶಾಲೆ ಬಿಟ್ಟು ಹೊರಗೆಲ್ಲೋ ತರಗತಿಗೆ ಕರೆದುಕೊಂಡು ಹೋಗುವಷ್ಟು ಸಮಯ ನನ್ನಲ್ಲಿ ಇಲ್ಲದ ಕಾರಣ, ಮೂಲ್ಕಿಯಲ್ಲಿ ಯಕ್ಷಗಾನ ತರಗತಿ ಅಲ್ಲಲ್ಲಿ ನಡೆಯುತ್ತಿದ್ದರೂ ಸಮಯ, ಪ್ರಯಾಣ, ಹೊರಗೆ ದುಡಿದ ಸುಸ್ತು ನನ್ನನ್ನು ಯಾವ ಹೊರಗಿನ ತರಗತಿಯಿಂದಲೂ ದೂರ ಇಟ್ಟಿತ್ತು. ಡ್ರಾಯಿಂಗ್, ಸಂಗೀತ ಕಾರ್ಯಕ್ರಮವೇ ಅಲ್ಲದೆ ಭರತನಾಟ್ಯ ಕೂಡ ಆನ್ ಲೈನ್ ನಲ್ಲಿ ಸಿಗುವಾಗ ಇದೂ ಯಾಕೆ ಪ್ರಯತ್ನಿಸಬಾರದು ಎಂಬ ಭಂಡ ಧೈರ್ಯ ಮಾಡಿ ಯಾರು ಏನು ಹೇಳಿದರೂ ಕೇಳದೆ, ಜಾಹೀರಾತಿನಿಂದ ಮೊಬೈಲ್ ನಂಬರ್ ಪಡೆದು ನೇರವಾಗಿ ಕರೆ ಮಾಡಿ ಕೇಳಿಯೇ ಬಿಟ್ಟೆ. ಎಲ್ಲವನ್ನೂ ವಿಚಾರಿಸಿದ ಬಳಿಕ 1000/- ಫೀಸ್ ಕಟ್ಟಿ ಆಸೆ ಪಟ್ಟ ಮಗಳನ್ನು ನಿರಾಸೆಗೊಳಿಸದೆ ತರಗತಿಗೆ ಸೇರಿಸಿಯೂ ಬಿಟ್ಟೆ. ಆದರೆ ಮುಂದೆ ಆದದ್ದೇ ಬೇರೆ.
ನಾವೆಲ್ಲಾ ಯಕ್ಷಗಾನ ಗಂಡುಕಲೆ ಅಂತ ತಿಳಿದವರು. ಈಗೀಗ ಅಲ್ಲಲ್ಲಿ ಭಾಗವತಿಕೆ, ಅರ್ಥಧಾರಿ, ವೇಷಧಾರಿ ಅಂತ ಒಬ್ಬೊಬ್ಬರು, ಒಂದೊಂದು ಸಂಘ ಮಹಿಳೆಯರದ್ದು ಕಾಣಿಸುತ್ತಿದೆ ಅಷ್ಟೇ. ಹಾಗಾಗಿ ಇಲ್ಲೂ ಗುರುಗಳು ಯಾವುದಾದರೂ ಸರ್ ಇರಬಹುದು ಅಂದುಕೊಂಡರೆ ಅದು ಸಂಪೂರ್ಣ ತಪ್ಪಾಯಿತು. ಇಲ್ಲಿ ಯಕ್ಷಗಾನ ಕಲಿಸುವುದು ಒಬ್ಬ ಹೆಣ್ಣು ಮಗಳು. ನಾಟ್ಯ ಪ್ರವೀಣೆ. ಹೆಸರು ಕೀರ್ತನಾ ಉದ್ಯಾವರ ಅಂತ.
ಸಾಮಾಜಿಕ ಜಾಲ ತಾಣಗಳ ಮೂಲಕ ಮನೆಯಲ್ಲೇ ಕುಳಿತು ಒಟ್ಟಿಗೆ ತರಗತಿಯಲ್ಲಿ ಕಲಿಯುವ ಹಾಗೆಯೇ, ಅಡಿಯಿಂದ ಮುಡಿಯವರೆಗೆ ನೋಡುತ್ತಾ, ಪ್ರತಿ ತರಗತಿಯಲ್ಲಿಯು ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿ ಹಾವಭಾವಗಳನ್ನು ಗಮನಿಸುತ್ತಾ ಸರ್ವ ಅಭಿನಯಗಳಲ್ಲಿ, ಕಣ್ಣು,ಕೈ, ಕಾಲು, ಚಲನೆ, ನಡಿಗೆ, ನಾಟ್ಯ ಎಲ್ಲವನ್ನೂ ಗಮನಿಸಿ ಅಲ್ಲಲೇ ತಿದ್ದುತ್ತಾ, ಜೊತೆಗೆ ತಿದ್ದಿ ಸರಿ ಪಡಿಸಿ ಇನ್ನೊಮ್ಮೆ ನೃತ್ಯ ಮಾಡಿದ ವಿಡಿಯೋ ಕಳಿಸಲು ತಿಳಿಸಿ ಅದನ್ನು ಕೂಡಾ ವಿಮರ್ಶೆ ಮಾಡುವ ಗುರು ಕೀರ್ತನಾ ಉದ್ಯಾವರ ಅವರ ಅಪಾರ ತಾಳ್ಮೆ ತುಂಬಾ ಹಿಡಿಸಿತು. ಆಧುನಿಕ ತಂತ್ರಜ್ಞಾನವನ್ನು ಹೀಗೂ ಬಳಸಿಕೊಳ್ಳಬಹುದು ಎಂದು ಸಮರ್ಥವಾಗಿ ತೋರಿಸಿ ಕೊಟ್ಟವರು ಕಥೆಗಾರರು ತಂಡದವರು. ಅಬ್ಬಾ.. ಸಣ್ಣ ಮಕ್ಕಳಿಂದ ಹಿಡಿದು, ವಯಸ್ಕ ವಿದ್ಯಾರ್ಥಿ, ಎಷ್ಟೆಂದರೆ ರಿಟೈರ್ಡ್ ಆದವರಿಗೂ ಕೂಡಾ ಮನೆಯಿಂದ ದೂರ ಹೋಗದೆ, ಆಸಕ್ತಿ ಒಂದಿದ್ದರೆ ಸಾಕು , ಮನೆಯಲ್ಲೇ ಒಂದು ಕೋಣೆಯ ಒಳಗೆ ಕುಳಿತು ಅಭ್ಯಾಸ ಮಾಡಿ ಕಲಿಯಲು ಅವಕಾಶ. ಮತ್ತೆ ಬಾಲ್ಯದ ವಿದ್ಯಾರ್ಥಿ ಜೀವನಕ್ಕೆ ಹೋದ ಅನುಭವ.
ಅಕಸ್ಮಾತ್ ಆನ್ ಲೈನ್ ತರಗತಿಗೆ ಸೇರಿಕೊಳ್ಳಲು ಒಂದೊಂದು ದಿನ ಅಸಾಧ್ಯ ಆದರೂ ಅದಕ್ಕೂ ಇಲ್ಲಿ ಪರಿಹಾರ ಇದೆ. ಆಯಾ ದಿನದ ಕಾರ್ಯಕ್ರಮ ರೆಕಾರ್ಡ್ ಆಗಿ ನಮ್ಮ ವಾಟ್ಸ್ ಆ್ಯಪ್ ಗುಂಪಿಗೆ ಬಂದು ಬಿಡುತ್ತದೆ. ತಾಳಗಳ ನೋಟ್ಸ್ ಕೂಡಾ. ಎಲ್ಲವೂ ಶಾಲೆಯಲ್ಲಿ ಕಲಿತ ಹಾಗೆಯೇ ಇಲ್ಲಿ. ರಿವಿಶನ್ ಅಂತೂ ನಿತ್ಯ ಇವೆ. ವಾರಕ್ಕೆ ಒಂದು ತರಗತಿ ಆದ ಕಾರಣ , ಪ್ರತಿ ವಿದ್ಯಾರ್ಥಿಯೂ ಆ ದಿನ ಯಾವಾಗ ಬರುತ್ತದೆ ಎಂದು ಕಾಯುತ್ತಾ ಇರುತ್ತಾರೆ.
ಖಂಡಿತಾ ಇದು ಅತಿಶಯೋಕ್ತಿಯ ಮಾತಲ್ಲ. ನನಗೆ ನೃತ್ಯ ಬಾರದು. ಆದರೆ ಮಗಳು ನಿತ್ಯ ಕಲಿಯುವ ತರಗತಿಯನ್ನು, ನನ್ನ ಕೆಲಸಗಳ ಜೊತೆಗೆ ಮಗಳಿಗೆ ಕಲಿಸುವ ಪರಿಯನ್ನು ನೋಡುತ್ತಾ ಮೂಕ ವಿಸ್ಮಿತಳಾದವಳು ನಾನು. ಪ್ರತಿ ತಿಂಗಳು ನೆನಪಾದಾಗ ಫೀಸ್ ತುಂಬಿಸಿದ್ದು ಮಾತ್ರ ನಾನು. ಕಲಿಯುತ್ತಾ ಇದ್ದದ್ದು ಅವಳು.ಅಚ್ಚುಕಟ್ಟಾದ ಶಿಸ್ತು, ಸಂಯಮದ ಈ ಪಾಠಕ್ಕೆ ಖುಷಿ ಪಟ್ಟೆ. ಮಗಳು ಒಂದಿಷ್ಟು ಕಲಿತಳು ಅಂದುಕೊಂಡಾಗ ಮುಂದೆ ಸಾಗುವ ಸಮಯ ಬಂದಿತು. ಮುಂದಿನ ಪಾಠಕ್ಕೂ , ಕಲಿಕೆಗೂ ಸಿದ್ದಳಾದಳು. ಮುಂದೆ ಯಕ್ಷಗಾನದ ಹಾಡು ಕೂಡಾ ಬೇಕೆನ್ನುತ್ತಾಳೋ ಏನೋ. ಈಗಾಗಲೇ ಅವರ ಬಳಿಯೇ ಭರತ ನಾಟ್ಯಕ್ಕೆ ಸೇರಿ ಕೊಳ್ಳುವೆ, ತುಂಬಾ ಇಷ್ಟದ ಟೀಚರ್ ಅಂತ ಹೇಳಿ ಆಗಿದೆ. ಏನೇ ಆಗಲಿ ಮೋಸ, ವಂಚನೆ ಅಂತೂ ಇಲ್ಲಿ ಇಲ್ಲ. ಕಲಿಕಾರ್ಥಿಗಳಿಗೆ ಉತ್ತಮ ಟ್ರೈನಿಂಗ್. ಯಕ್ಷಗಾನ ಕಲಿಯಬೇಕು ಎನ್ನುವವರು ಪ್ರಯತ್ನಿಸಿ, ಒಮ್ಮೆ ನೋಡಿ. ಮತ್ತೆ ಹೇಳಿ. ಇದು ಜಾಹೀರಾತಲ್ಲ. ಅನಿಸಿಕೆ ಅಷ್ಟೇ. ಇವತ್ತು ಮಗಳಿಗೆ ಸರ್ಟಿಫಿಕೇಟ್ ಬಂದಿದೆ. ಮೊದಲೇ ಬಂದಿತ್ತೋ ಏನೋ. ನನ್ನ ಕೆಲಸದ ಒತ್ತಡದಲ್ಲಿ ನಾನು ವಾಟ್ಸ್ ಆ್ಯಪ್ ನೋಡಿದ್ದು ಇಂದು. ಮಗಳಿಗೆ ಖುಷಿಯೋ ಖುಷಿ.
ಯಕ್ಷಗಾನದಂತಹ ಉತ್ತಮ ಕಲೆಯನ್ನು ಕಲಿಸಿ ಮುಂದಿನ ಜನಾಂಗಕ್ಕೆ ಸುಲಭವಾಗಿ ಪಸರಿಸುತ್ತಿರುವ ಈ ಕುಟುಂಬಕ್ಕೆ, ಅವರ ತಂಡಕ್ಕೆ ಶಹಬ್ಬಾಸ್ ಎನ್ನಲೇ ಬೇಕು ಅಲ್ಲವೇ? ನಿಮ್ಮ ವಿದ್ಯಾರ್ಥಿಗಳ ಸಂಖ್ಯೆ ಸಾವಿರವಾಗಲಿ ಎಂಬುದು ನಮ್ಮ ಶುಭ ಹಾರೈಕೆಗಳು .ನೀವೇನಂತೀರಿ?
@ಹನಿಬಿಂದು@
08.02.2025
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ