ಭಾನುವಾರ, ಮೇ 4, 2025

ಲಹರಿ

ಬದುಕು ಬರಡಾದ ಮೇಲೆ...

ಹೂ ಕಾಯಿ ಹಣ್ಣು ಮೊಗ್ಗು ಎಲೆ ಮಾತ್ರವಲ್ಲ
 ರೆಂಬೆ ಕೊಂಬೆ ಕಾಂಡ ಎಲ್ಲವೂ ಮುರಿದ ಮೇಲೆ
ಮತ್ತೆಲ್ಲಿಯ ಶಕ್ತಿ ಇಹುದು ಮರಕೆ ಬೆಳೆಯಲು!
ತಲೆಯೆತ್ತಿ ಮತ್ತೊಮ್ಮೆ ಮಗದೊಮ್ಮೆ ನಿಲ್ಲಲು!!

ತಾನೇ ತಾನಾಗಿ ತಲೆ ಎತ್ತಿ ಎತ್ತರಕ್ಕೆ ಬೆಳೆದು
ಹಲವರಿಗೆ ನೆರಳು ಮಾತ್ರವಲ್ಲ ಹೂ ಕಾಯಿ
ಹಣ್ಣು ತರಕಾರಿ ಮೊಗ್ಗು ಚಿಗುರೆಲೆ ನೀಡಿ
ಅಷ್ಟೇ ಯಾಕೆ ಅದೆಷ್ಟೋ ಜೀವಿಗಳಿಗೆ ಆಧಾರ!

ಆದರೂ ಮಾನವರಿಗೆ ದುರಾಸೆ ತೀರಿಲ್ಲ
ಅವರವರ ಮಟ್ಟಕ್ಕೆ ಮಾತ್ರ ಯೋಚನೆ
ಪರರ ಚಿಂತೆ ನಮಗಿಂದು  ಏತಕಯ್ಯಾ !
ಮರವಿರಲಿ ಮನವಿರಲಿ ಮರುಕ ಎಲ್ಲಯ್ಯ!!

ನನ್ನ ದೇಶ ನಮ್ಮ ರಾಜ್ಯ ನನ್ನ ಜಿಲ್ಲೆ
ನಮ್ಮ ಊರು ನಮ್ಮ ಮನೆ ನನ್ನ ಕುಟುಂಬ
ನಮ್ಮದೇ ಪರಿವಾರ ಬಂಧು ಬಳಗ
ನಮ್ಮ ಬಾಂಧವರು ಚೆನ್ನಾಗಿದ್ದರೆ ಸಾಕಲ್ಲ!!

ಬೇಕೆನಿಸಿದಾಗ ಬೇಕಾದ್ದು ಸಿಕ್ಕರೆ ಸಾಕು
ಪರರಲ್ಲಿ ಆದರೇನು, ಪರ ಮರವಾದರೇನು
ಗಾಳಿ ಕೊಟ್ಟು ಬದುಕುಳಿಸಿದರೆ ಸಾಕೊಮ್ಮೆ 
ಬದುಕುಳಿದ ಮೇಲೆ ಆ ಮರವೇಕೆ ಇನ್ನೊಮ್ಮೆ ??

ಮತ್ತದೇ ಬೇಡಿಕೆ ಅಗಲ ರಸ್ತೆಯದು ಬೇಕೆಂದು
ತಮ್ಮವರಿಗಾಗಿ ತನಗಾಗಿ ತನ್ನತನಕ್ಕಾಗಿ ಬೆಳೆಯಲಿಂದು
ಕಾಲಕ್ಕೆ ತಕ್ಕ ಹಾಗೆ ಕೋಲ ಕಟ್ಟುವ ಜನ ಇಲ್ಲಿಹುದು
ಉಳಿದ ಜೀವಿಗಳ ಯೋಚನೆ ನಮಗೆಲ್ಲಿಯದು??

ಗಾಳಿ ಬಂದತ್ತ ತೂರಿಕೊಳ್ಳುವ ನಡೆ ನುಡಿ ನಮ್ಮದು
ಸಿರಿವಂತನಾಗಲು ಹಲವು ಮರಗಳ ಕಡಿ ಎನುವುದು
ಮಾರಿ ಗಿಟ್ಟಿಸಿಕೊಳ್ಳುವೆ ಹಣ ಜಾಗ ನಡಿ ಹುಡುಕುವುದು
ನಾಡಿರುವುದು ನಮಗೆ ಕಾಡ ಕಡಿದುರುಳಿಸುವುದು!!

ಕೊಲೆ ದರೋಡೆ ಸುಳಿಗೆಗಳು ಇಂದು ಸಾಮಾನ್ಯ
ಹಿರಿ ಕಿರಿಯರ ಬೆಲೆ ಪ್ರೀತಿ ಒಂದೂ ಇಲ್ಲ ಮಾನ್ಯ
ಇನ್ನು ನಮ್ಮಂತಹ ಮರಗಳ ಬೆಲೆ ಇಲ್ಲಿ ಶೂನ್ಯ!!
ಇನ್ನು ಮಾನವ ನೀನ್ಯಾವ ಲೆಕ್ಕ ಇಲ್ಲದಿರಲು ನಾಣ್ಯ!

ತಾನೇ ಹುಟ್ಟಿ ತಾನೇ ಬೆಳೆದು ನೆರಳು ಕೊಡುವಾಗ
ಅದು ಯಾರಿಗೋ ದಾರಿ ಹೋಕರಿಗೆ ಹೂ ಹಣ್ಣು ನೀಡುವಾಗ
ನಮಗೆ ತರಗೆಲೆಗಳು ರಾಶಿ ಕಸವದು ಇಲ್ಲಿ ಎದುರಲ್ಲಿ ಇರುವಾಗ
ಕಡಿದು ಬಿಡಿ ಬೇಗ ಹೋಗಲಿ ದೂರ ಸಾಗಿ ಎತ್ತಲೋ ಈಗ!

ಮರವದು ಪರೋಪಕಾರಿ ತಾನೇ ಎಂದೆಂದಿಗೂ!
ಕಾಲವದು ಕಲಿಯುಗ ಜಾಗವಿಲ್ಲ ಪರೋಪಕಾರಿಗೆ ಇನ್ನೆಂದೂ
ಕಡಿ ಹೊಡಿ ಕೊಲ್ಲು ಕುಡಿ ಕುಣಿಯುವ ಸಮಯವಿದು!
ಹೆಣ್ಣು ಹೊನ್ನು ಮಣ್ಣಿದ್ದರೆ ಸಾಕು ಬಳಿಯಲಿಂದು!!

ಮರ ಹಳೆಯದು, ಎಂದು ಬೀಳುವುದೊ ತಿಳಿಯದು!
ಹಣವಿಲ್ಲ ಅದರ ಬಳಿ ಗುಣ ಮಾತ್ರ  ನಿತ್ಯ ಸತ್ಯವಿದು!
ಗುಣವಿದ್ದರೇನು ಫಲ ಹಣವಿಲ್ಲದ ಮೇಲೆ ಇಂದು!!!
ತಾನು ಬದುಕಲು ಪರರ ಬಳಸಬೇಕೆನುವ ಸೂತ್ರವಿದು!

ಮರವು ಎಂದೆಂದಿಗೂ ಅಪಾಯಕಾರಿ ಉರುಳಿ ಬಿದ್ದರೆ!
ಮಳೆ ಗಾಳಿಗೆ ಮೈಯೊಡ್ಡಿ ನಿಂತಿಹುದು,  ಬರಡಾಗಿರೆ!
ಯಾರಿಗೆ ಗೊತ್ತು ಯಾವ ಕ್ಷಣದಲ್ಲಿ ಯಾರ ಮೇಲೆ 
ತಿರುಗಿ ಬೀಳುವುದೋ,  ಎಲ್ಲಿ ಸಮಸ್ಯೆಯಾಗುವುದೋ!!

ಎಂದಾದರೂ ಎಲ್ಲಾದರೂ ಬೀಳಲಿ ಹೋಗಲಿ
ನನಗೇನೂ ಅದರ ಜೊತೆ ಸಂಬಂಧವಿಲ್ಲ ಬಾಳಲಿ! 
ಇದ್ದೂ ಇಲ್ಲದೆ ಇಲ್ಲ.  ಸಮಾಜದಲ್ಲಿ ಎಲ್ಲೂ ಏನಿಲ್ಲ
ಕಾರಣ ಮರಕ್ಕೆ ಮದುವೆ , ಊಟ,  ಹೆರಿಗೆ ನೋವಿಲ್ಲ

ಮತ್ತೆ??? ಏನಿಲ್ಲ ಮರವಲ್ಲವೇ ಅದು! ಭಾವನೆಗಳಿಲ್ಲ !
ಅದು ಅಳುವುದಿಲ್ಲ. ನೋವ ಹೇಳಿಕೊಳ್ಳುವುದಿಲ್ಲ!
ಅತ್ತು ಹೇಳಿಕೊಂಡರೂ ಕೇಳುವವರು ಧರೆಯಲಿಲ್ಲ!!
ಮರವದು ಪರೋಪಕಾರಿ, ಲೋಕಕಿದು ಇಂದು ಬೇಕಿಲ್ಲ..!!
@ಹನಿಬಿಂದು@
03.05.2025

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ