ಭಾನುವಾರ, ಮೇ 4, 2025

ಬೇಡದ ಸಾಲುಗಳು

ಬೇಡದ ಸಾಲುಗಳು..

ಈ ಹಾಲಿನಂತಹ ಹಾಳು ಮನಸ್ಸು ಅಳುತ್ತದೆ
ಬೇಡವೆಂದರೂ  ಮರೆಯದಂತಿರಿಸುತ್ತದೆ
ಅದೆಷ್ಟು ಕಾಟ ಕೊಟ್ಟರೂ ಮರೆಯುತ್ತದೆ
ಅದೆಷ್ಟು ನೋವು ಕೊಟ್ಟರೂ ಸಹಿಸುತ್ತದೆ

ಅದೇನು ತೊಂದರೆ ಮಾಡಿದರೂ ಕ್ಷಮಿಸುತ್ತದೆ
ಅದೆಷ್ಟು ಅತ್ತರೂ ಒಳಗಿಂದ ಜವಾಬ್ದಾರಿ ಹೊರುತ್ತದೆ 
ಪ್ರಪಂಚದ ಪ್ರೀತಿ ಕೊಟ್ಟರು ನೋವು ಕೊಟ್ಟರು ಎನುತದೆ 
ಬದುಕಿನ ಸರ್ವ ನೋವು ತಿನ್ನಿಸಿದವರ ನೆನಪಿಸುತ್ತದೆ

ಮತ್ತೇಕೆ ನೆನಪು! ನೋವಾದಾಗ, ಕಷ್ಟ ಬಂದಾಗ
ದುಃಖ ದುಮ್ಮಾನ ಬಂದು ಬಾಳು ಬೇಡವೆನಿಸಿದಾಗ
ಮತ್ತೊಮ್ಮೆ ಮಗದೊಮ್ಮೆ ನೋವು ನಿರಾಸೆ ಕಾಡಿದಾಗ
ಒಂಟಿತನ ಒಪ್ಪಿ ಅಪ್ಪಿ ಮುತ್ತಿಕ್ಕಿ ಮುದ್ದಾಡಿದಾಗ

ನಿತ್ಯ ಅನ್ನಿಸದೇ ಇರದು ಮನದ ಮೂಲೆಯಲಿ
ಅವನು ಕೊಟ್ಟ ನೋವಿಗಿಂತ ಈ ನೋವು ದೊಡ್ಡದೇ!
ಅವನು ನೀಡಿದ ಕಷ್ಟಕ್ಕಿಂತ ಈ ಕಷ್ಟಗಳು ಕಷ್ಟವೇ!
ಛೆ, ಇಲ್ಲವೇ ಇಲ್ಲ, ಪ್ರೀತಿ ನೋವು ಕೊಡದು ಎಂದಿಗೂ
ನೋವು ಕೂಡಾ ಸಾಯದು!  ಮನದೊಂದಿಗೆ ಇಂದಿಗೂ..

ಬದುಕಲು ಅದೆಂತಹ ದೊಡ್ಡ ಚಾಲೆಂಜ್ ನೀಡಿದ್ದು ದೇವರು
ಸೋತು ಗೆಲ್ಲಿಸಿದವರು! ಮನವ ಗಟ್ಟಿಗೊಳಿಸಿದವರು ಮಾನವರು
ಏನೂ ಇಲ್ಲದ ಮಣ್ಣನ್ನು ಹದ ಮಾಡಿದವರು ಪೋಷಕರು
ಬದುಕಿನ ಪಾಠ ಕಲಿಸಿ ಗುರಿ ತಲುಪಿಸಿದ್ದು ಕಠಿಣ ಪರಿಶ್ರಮರು 

ಮತ್ತೊಂದು ಬದುಕು ಕಟ್ಟಿಕೊಳ್ಳಲು ಅನುವು
ಹೊಸದಾದ ಲೋಕಗಳ ನೋಡಲು ಮನವು 
ಅವನಾರು ಅವನ ಕೆಟ್ಟ ಗುಣಗಳ ತೆರೆವು
ದುರ್ಬುದ್ಧಿ, ದುರಭ್ಯಾಸ, ದುರ್ನಡತೆಗಳ ಅರಿವು

ಮತ್ತೆ ಒಂದಾಗಲು ಸಾಧ್ಯವೇ ಒಡೆದ ಕನ್ನಡಿಯ ಪೀಸುಗಳು 
ಪೂರ್ತಿ ಒಡೆದ ಗಾಜಿನ ಕಣ ಕಣಗಳ ಧೂಳು ತುಂಡುಗಳು
ಬತ್ತಿ ಹೋದ ನೀರ ಚಿಲುಮೆಯ ಝರಿಯ ಬುಗ್ಗೆಗಳು
ಉದುರಿ ಹೋದ ನೆತ್ತಿಯ ಕಪ್ಪು ಕಪ್ಪು ಕೂದಲುಗಳು!

ಭಾವುಕತೆ, ಭಾವನೆಗಳು, ಖುಷಿ ಎಲ್ಲಾ ಸತ್ತು ಹೋದ ಬಳಿಕ
ಮತ್ತೆ ಹೇಗೆ ಚಿಗುರೀತು ಸುಟ್ಟು ಹೋದ ಭಾವ ಬಳ್ಳಿ??
ಮತ್ತೊಮ್ಮೆ ಉಸಿರಾಡೀತೆ ಶವದ ಮೂಗಿನ ಹೊಳ್ಳೆಗಳು!
ಸಿಹಿ ಎನ್ನಲಾದೀತೆ ಉಪ್ಪು ಕಾರ ಹಾಕಿದ ಸಾಂಬಾರನ್ನು!

ಬದುಕ ಬಳ್ಳಿಯ ತುಂಬಾ ನೋವಿನ ಎಲೆಗಳನೆ ತುoಬಿಸಿ
ಸಿಡುಕ ಮುಖವನು ಹೊತ್ತು ದಿನ ರಾತ್ರಿ ಕಾಯಿಸಿ
ಕುಡುಕ ಅವತಾರ ತಾಳಿ ಅನುದಿನ ಸರ್ವರ ಭಾಧಿಸಿ
ನಡುಕ ಹುಟ್ಟುವ ಹಾಗೆ ಪ್ರೀತಿ ಬದಲು ದ್ವೇಷ ಮೂಡಿಸಿ

ಇನ್ನೆತ್ತ ಇನ್ಯಾವ ಮನ ಗಮನ ಸುಮನ ಸಹನ ಗಹನ
ತಾಳ್ಮೆ ತಡವರಿಕೆ ಕಾಯುವಿಕೆ ಸಂಕಟ ನೋವಿನ ಮನ
ಓದಿ ಮರೆತ ತರಗತಿಯ  ಪುನಃ ಕಲಿಯಲು ಅವಕಾಶವಿಲ್ಲ
ಮುರಿದ ಮನವ ಮತ್ತೆ  ಒತ್ತಿ ಕಟ್ಟಲು ಎಂದಿಗೂ  ಬದುಕಿಲ್ಲ! 
@ಹನಿಬಿಂದು@
04.05.2025


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ