ಮಂಗಳವಾರ, ಮೇ 26, 2020

1414. ಊರು

ಊರು

ಆ ಊರೇ ವಿಚಿತ್ರ. ನಾಲ್ಕು ಸುತ್ತಲೂ ಕಾಡು, ಎತ್ತರದ ಪರ್ವತ. ಯಾರೂ ಊಹಿಸಲಾರದ ಊರದು. ಬಹಳ ಹಿಂದಿನ ಕಾಲದಲ್ಲಿ ಕಾಡಿನ ಮಧ್ಯೆ ಸಮತಟ್ಟಾದ ಆ ಜಾಗದಲ್ಲಿ ಆನೆಗಳು, ಹುಲ್ಲು ತಿನ್ನುವ ಪ್ರಾಣಿಗಳೇ ವಾಸಿಸುತ್ತಿದ್ದವಂತೆ. ಅಲ್ಲಿಗೆ ಜನರು  ಯಾರೂ ಹೋಗದ ಕಾರಣ, ಊರಿಗೆ ಅಲ್ಲಿನ ಆನೆಗಳು ಕೆಲವೊಮ್ಮೆ ನುಗ್ಗುವ ಕಾರಣ ಜನ ಆ ಊರಿಗೆ "ಆನೆಕಾಡು" ಎಂದೇ ಹೆಸರಿಟ್ಟರು.

  ಆದರೆ ಕಾಲಾನಂತರ ಜನರು ವಾಸಿಸದ ಜಾಗವಾವುದು ಹೇಳಿ? ಒಂದು ಕುಟುಂಬ ಅಲ್ಲಿ ಹೋಗಿ ಬೇರು ಬಿಟ್ಟಿತು. ಅಣ್ಣ ತಮ್ಮಂದಿರಲ್ಲಿ ಜಗಳವಾಗಿ ಮೂರು-ನಾಲ್ಕು ಮನೆಗಳಾದವು. ಅವರ ಮುಂದಿನ ತಲೆಮಾರಿನಲ್ಲಿ ಹತ್ತು-ಹನ್ನೆರಡಾಗಿ ತದನಂತರ ನಲವತ್ತು ಮನೆಗಳಾದವು. ಆದರೆ ಇಂದಿಗೂ ಅಲ್ಲಿಗೆ ಸರಿಯಾದ ರಸ್ತೆಗಳಿಲ್ಲ, ಮೊಬೈಲ್ ನೆಟ್ವರ್ಕ್, ಟವರ್ ಗಳಿಲ್ಲ. ಕುಡಿಯಲು ಕಾಡ ನೀರು. ತಿನ್ನಲು ಮನೆ ಸುತ್ತ ಬೆಳೆದ ಹಣ್ಣು, ತರಕಾರಿ, ಗೆಡ್ಡೆ ಗೆಣಸುಗಳೇ. 

  ಜನರಾದರೂ ತುಂಬಾ ಸ್ವಾಭಿಮಾನಿಗಳು, ಕಷ್ಟ ಸಹಿಷ್ಣುಗಳು, ತೋಟ ಗದ್ದೆಯೆಂದು ತಮ್ಮಷ್ಟಕ್ಕೆ ತಾವು ತುಂಬಾ ಸಂತಸ ಸಹಕಾರದಿ ಬದುಕುವವರು. ತಮ್ಮ ಮಕ್ಕಳನ್ನು ದೂರದ ಒಳ್ಳೆಯ ಶಾಲಾ ಕಾಲೇಜುಗಳಲ್ಲಿ ಓದಿಸಿ ನಗರಗಳಿಗೆ ಕೆಲಸಕ್ಕೆ ಕಳುಹಿಸಿದವರು. ಪ್ರತಿ ಕೂಳಿಗೂ ಕಷ್ಟಪಟ್ಟವರು.
  ದೇವರು ನೊಂದುಕೊಂಡರೋ, ಹೊಟ್ಟೆಕಿಚ್ಚು ಪಟ್ಟರೋ ಗೊತ್ತಿಲ್ಲ, ವರುಣನ ಅಟ್ಟಹಾಸ ಮಲೆನಾಡಿಗೆ ತಟ್ಟಿ, ಅದರೊಡನೆ ಆನೆಕಾಡಿನ ಜನರಿಗೂ ತಟ್ಟಿತು. ಭೂಕಂಪದ ಅನುಭವವಾಗಿ, ಗುಡ್ಡ ಸೀಳಿ ಹಲವಾರು ಜನರ ಮನೆ,ಆಸ್ತಿ ಪಾಸ್ತಿಗೆ ತೊಂದರೆಯುಂಟಾಗಿ ಜನಗಳು ಗಂಜಿ ಕೇಂದ್ರಗಳ ಸೇರುವಂತಾಯ್ತು. ದನ ಕರುಗಳಿಗೂ ಕಷ್ಟವಾಯ್ತು. ಮಳೆ ಕಡಿಮೆಯಾಗಲು ಜನ ತಮ್ಮ ಮನೆಗಳಿಗೆ ತೆರಳಿ ಮತ್ತೆ ಜೀವನ ಪ್ರಾರಂಭಿಸಿರುವರು. ಕಾರಣ ಉತ್ತಮ ಮನ, ದುಡಿದು ಬದುಕುವೆವೆಂಬ ಛಲ..
@ಪ್ರೇಮ್@
27.05.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ