ಶಿಕ್ಷಕರ ಕಕ್ಷೆಯೊಳಗೆ-1
ಮಾತಿನ ತಿದ್ದುಪಡಿ..
ಅದಿನ್ನೂ ನನ್ನ ವೃತ್ತಿಯ ಮೊದಲ ದಿನಗಳು. ಆಗಷ್ಟೆ ಟಿ ಸಿ ಹೆಚ್ ಮಾಡಿ ಬಹಳ ಉತ್ಸಾಹದಿಂದ ನನ್ನ ರಾಜ್ಯಕ್ಕೇ ಹೆಚ್ಚಿನ ಅಂಕಗಳ ಕಂಡು ನಮ್ಮ ಪ್ರಶಿಕ್ಷಕರೇ ತಮ್ಮ ಪರಿಚಯದ ಶಾಲೆಗೆ ಕರೆದಿದ್ದರು. ಸಂತಸದಿಂದ ಹೋಗಿದ್ದೆ ಕೂಡಾ. ಹಾಗೆಯೇ ಶಾಲೆಗೆ ಸೇರಿಸಿಕೊಂಡರು ಕೂಡಾ. ನನಗೆ ಆಗ ಇಪ್ಪತ್ತೊಂದು ವರ್ಷ ವಯಸ್ಸು. ಮಕ್ಕಳನ್ನು ಕಂಟ್ರೋಲ್ ಮಾಡೋದು ಅಂದ್ರೆ ಕಷ್ಟ ಸಾಧ್ಯ. ಟ್ರೈನಿಂಗ್ ಆಗಷ್ಟೆ ಮುಗಿದಿತ್ತು. ಹೊಸ ರೂಮ್. ಅಲ್ಲಿ ಅಡಿಗೆ ಗೊತ್ತಿಲ್ಲದ ನಾನು ಮತ್ತು ಹತ್ತನೇ ತರಗತಿ ಪಾಸಾಗಿ ಆಗಷ್ಟೆ ಕಾಲೇಜು ಸೇರಿದ ನನ್ನ ತಮ್ಮ. ಅನುಭವಗಳ ಪೆಟ್ಟಿಗೆಯ ಕೀಯನ್ನು ನಿಮಗಾಗಿ ಓಪನ್ ಮಾಡುತ್ತಿರುವೆ.
2003ನೇ ಇಸವಿ. ಮೈಸೂರಿನ ದೀಪಾನಗರದ ದೀಪಾಶಾಲೆಯಲ್ಲಿ ನಾನಾಗ ಶಿಕ್ಷಕಿಯಾಗಿದ್ದೆ. ಅದು ನನ್ನ ಮೊದಲ ಶಾಲೆ. ಹಳ್ಳಿಯ ಮಕ್ಕಳು ಕಡಿಮೆ ಫೀಸು, ಉತ್ತಮ ಆಂಗ್ಲ ಮಾಧ್ಯಮದ ಶಿಕ್ಷಣ ಸಿಗುತ್ತಿದ್ದ ಕಾರಣ ಅಲ್ಲಿಗೆ ಹೆಚ್ಚು ಬರುತ್ತಿದ್ದರು. ನನ್ನ ದಕ್ಷಿಣ ಕನ್ನಡದ ತುಳು ದಾಟಿಯ ಶುದ್ಧ ಕನ್ನಡ ಅಲ್ಲಿನ ಮಕ್ಕಳಿಗೆ ಅರ್ಥ ಆಗ್ತಿರ್ಲಿಲ್ಲ. ಅಲ್ಲಿನ ಮಕ್ಕಳ ಈ ಶೈಲಿಯ ಮಾತು ನನಗೆ ಹೊಸದು. ತುಂಬಾ ಫಾಸ್ಟ್, ಒರಟು ಮಾತು ಅಂತ ನಾನಂದು ಕೊಳ್ತಾ ಇದ್ದೆ. ನನ್ನ ಭಾಷಾ ಶೈಲಿ ನೋಡಿ ಅವರು ನನಗೆ 'ಕನ್ನಡ ಮಾತಾಡಿ ಮಿಸ್" ಅಂತಿದ್ರು! ಏಕೆಂದರೆ ಅಲ್ಲಿನ ಮಕ್ಕಳಿಗೆ ನನ್ನ ಕನ್ನಡ ಅರ್ಥವೇ ಆಗುತ್ತಿರಲಿಲ್ಲ! ಹೋಗ್ಲಾ, ಬಾರ್ಲಾ, ತಿನ್ಲಾ ಭಾಷೆ ಅವರದು!
ಮಾತೆತ್ತಿದರೆ ಗೆಳೆಯರಿಗೆ ಮನೆಯ ಭಾಷೆಯಲ್ಲೆ ಬೈತಾ ಇದ್ರು. ನಿನ್ ಮುಖಕ್ಕೆ ಮಂಗ್ ಳಾರ್ತಿ ಎತ್ತ, ನಿನ್ ಬಾಯಿಗ್ ಮಣ್ಣಾಕ, ನಿನ್ ಹೊಟ್ಟೆಗ್ ಬೆಂಕಿ ಹಾಕ... ಹೀಗೆ. ನನಗೆ ಅದನ್ನು ಕೇಳಿ ಬೇಸರವಾಗುತ್ತಿತ್ತು. ಒಬ್ಬರಿಂದ ಮತ್ತೊಬ್ಬರಿಗೆ ಇವು ರವಾನೆಯಾಗುತ್ತಿದ್ದವು. ಪೋಷಕರು ಮನೆಯಲ್ಲಿ ಹೇಳಿದ ವಾಕ್ಯಗಳು ಶಾಲೆಯಲ್ಲಿ ಮಕ್ಕಳ ಬಾಯಿಯಿಂದ ಇತರ ಮಕ್ಕಳಿಗೆ ಪ್ರಯೋಗವಾಗುತ್ತಿದ್ದವು. ಮೈ ಉರಿಯುತ್ತಿದ್ದವು. ಹೇಗಾದರೂ ಈ ಕೆಟ್ಟ ಭಾಷೆಯನ್ನು ಮರೆಸ ಬೇಕೆಂದು ಪಣ ತೊಟ್ಟೆ. ಅವರ ಭಾಷೆ, ಬೈಗುಳಗಳನ್ನು ಬದಲಾಯಿಸತೊಡಗಿದೆ.
ನಾನದನ್ನು ಬದಲಾಯಿಸಿ ಹೀಗೆ ಹೇಳಿ ಅಂತ ಹೇಳಿಕೊಟ್ಟ ವಾಕ್ಯಗಳು..
1. ನಿನ್ ಮುಖಕ್ ಪೌಡರ್ ಹಾಕ.
2. ನಿನ್ ಹೊಟ್ಟೆಗ್ ಪಾಯ್ಸ ಹಾಕ.
3. ನಿನ್ ಮುಖಕೆ ಫೇರ್ ಆಂಡ್ ಲವ್ಲಿ ಹಾಕ.
4. ನಿನ್ ಬಾಯಿಗ್ ಸಕ್ರೆ ಹಾಕ.
5. ನಿನ್ ಹೊಟ್ಟೆಗ್ ಒಬ್ಬಟ್ ಹಾಕ..
ಈ ಘಟನೆ ನನ್ನ ವೃತ್ತಿಯ ಮೊದಲ ಅನುಭವ.ನೆನೆಸಿಕೊಂಡರೆ ಈಗ ನಗು ಬರುತ್ತದೆ.ಆದರೆ ಮಕ್ಕಳ ಕೆಟ್ಟ ಮಾತನ್ನು ಬದಲಾಯಿಸಿದ ಸಂತಸ ಹಾಗೂ ಹೆಮ್ಮೆ ಇಣುಕುತ್ತದೆ. ನಿಮಗೇನನಿಸಿತು?
ಧನ್ಯವಾದಗಳೊಂದಿಗೆ...
@ಪ್ರೇಮ್@
04.11.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ