ಗುರುವಾರ, ಜೂನ್ 18, 2020

1440. ಅಪ್ಪನ ನೆರಳಲ್ಲಿ...



ಅಪ್ಪನ ನೆರಳಲ್ಲಿ

    ಹೌದಲ್ಲವೇ? ಅಪ್ಪನೆಂದರೆ ಅಕಾಶ! ಧರ್ತೀ ಪೇ ಜೋ ರಬ್ ಹೋತಾ ಹೇ,ವೋ ಹೇ ಪಿತಾ... ತನ್ನ ಮಗುವಿನ ಕನಸುಗಳೆಲ್ಲ ರೂಪುಗೊಂಡಿರುವುದು ಪ್ರಜ್ಞಾವಂತ, ಜವಾಬ್ದಾರಿಯುತ, ದುಡಿಯುವ ಅಪ್ಪನ ಮೇಲೆ. ಒಬ್ಬ ಅಪ್ಪ ಪಣ ತೊಟ್ಟರೆ ಮಕ್ಕಳನ್ನು ಏನು ಬೇಕಾದರೂ ಮಾಡಬಲ್ಲ. ಅಪ್ಪನ ಮೆದುಳಿನಲಿ ಅಗಾಧ ಪರಿಶ್ರಮದೊಂದಿಗೆ ದೂರದೃಷ್ಟಿ, ಶಕ್ತಿ, ಆಲೋಚನೆ, ಆಯೋಜನೆಗಳೂ ಇವೆಯಲ್ಲವೇ?

     ಇದೇ ಅಪ್ಪ ತಿರುಗಿ ಬಿದ್ದರೆ ಸಂಸಾರವನ್ನು ಮೂರಾಬಟ್ಟೆ ಮಾಡಬಲ್ಲ, ಕಂಠಪೂರ್ತಿ ದುಡಿದುದನೆಲ್ಲ ಕುಡಿದು, ಹೆಂಡತಿಗೆ ಹೊಡೆದು, ಮಕ್ಕಳನ್ನೂ ಜರಿದು ಬೀದಿಪಾಲು ಮಾಡಬಲ್ಲ! ಹಸಿರು ತೋರಬೇಕಾದ ಜಗವ ಬರಡು ಮಾಡುವ ಶಕ್ತಿಯೂ ಅಪ್ಪನೆನುವ ಜೀವಿಗಿದೆ! ಅಣುವೊಂದು ಹಲವಾರು ಊರಿಗೆ ವಿದ್ಯುತ್ ಒದಗಿಸಿದಂತೆ ಬಾಂಬಾಗಿ ಹಲವಾರು ಊರುಗಳ ಸುಡಬಲ್ಲಂತೆಯೇ  ಅಪ್ಪನೆಂಬ ಪಾತ್ರ. 

  ಅಪ್ಪ ಒಂದು ಕಾಲದಲ್ಲಿ ಗಂಡು ಮಗು! ಗಂಡು ಮಗು ಜನಿಸಿತೆಂದರೇನೇ ಖುಷಿಪಡುವ ನಮ್ಮಲ್ಲಿ ತಂದೆ, ತಾಯಿ, ಅಕ್ಕ, ತಂಗಿ, ತಮ್ಮನಲ್ಲದೇ ಅತ್ತೆಯರಿಗೂ, ಚಿಕ್ಕಮ್ಮ, ದೊಡ್ಡಮ್ಮನವರಿಗೂ ಅವನು ಏನೋ ಸಾಧಿಸಬೇಕೆಂಬ ಹಂಬಲ, ತಮ್ಮ ಸಹಾಯಕ್ಕೆ ಬರಬಹುದೆಂಬ ಆಲೋಚನೆ ಇರುತ್ತದೆ. ಈ ಎಲ್ಲ ಜವಾಬ್ದಾರಿಗಳು ಅವನ ಮೇಲಿರುವಂತೆಯೇ ಜೀವನ ಸಂಗಾತಿಯ ತದನಂತರ ಮಕ್ಕಳ ಆಗಮನವಾಗುತ್ತದೆ. ಅಲ್ಲೂ ಸಂಬಂಧಗಳ, ಆಲೋಚನೆಗಳ, ಜವಾಬ್ದಾರಿಗಳ ಹೆಚ್ಚಳವಾಗುತ್ತದೆ. ಹಲವು ಸಲ ತನ್ನ, ತಂದೆ ತಾಯಿಯ, ಅಕ್ಕ ತಂಗಿಯರ, ಅತ್ತೆಯ ಹೀಗೆ ಎರಡು ಮೂರು ಕುಟುಂಬಗಳ ಜವಾಬ್ದಾರಿ ಬೇರೆ! ಅಪ್ಪ ಹೈರಾಣಾಗುವ ಸಮಯಕ್ಕೆ ಅವನಿಗೆ ಅರ್ಧಾಂಗಿಯಾಗಿ ಜೊತೆಯಾಗಿ ನಿಲ್ಲುವವಳು ಅಮ್ಮ. ಅಪ್ಪ ಸರಿಯಿದ್ದರೆ ಅಮ್ಮನೂ ಸರಿ. ಸಂಸಾರ ಸುಖ ಸಾಗರ. ಅಪ್ಪನೇನಾದರೂ ಎಡವಿದರೆ ಮಡದಿ ಮಕ್ಕಳು ಎಲ್ಲರೂ ಎಡವುವವರೇ. ಅಮ್ಮ ಎಡವಿದರೆ ಅಪ್ಪ ಸರಿಮಾಡಬಲ್ಲ, ಅಪ್ಪನೇ ಎಡವಿದರೆ ಬೇಲಿಯೇ ಎದ್ದು ಹೊಲ ಮೇಯುವಂತೆ! ಇಂದು ಹಲವಾರು ಮಕ್ಕಳು 'ಅಪ್ಪ' ಎಂಬ ಪದಕ್ಕೇ ಹೆದರುವರು, ಅಳುವರು, ನೋಯುವರು, ತವಕಿಸುವರು, ಆಸೆಪಡುವರು ಹಾಗೂ ಗುರಾಯಿಸುವರು. ಕಾರಣ ಅಪ್ಪನ ಗುಣ! ಅಪ್ಪನ ಪ್ರೀತಿ ಯಾರಿಗೆ ತಾನೇ ಬೇಡ ಹೇಳಿ? ಆದರೆ ಹಲವಾರು ಮನೆಗಳ, ಕುಟುಂಬಗಳ ಅಪ್ಪ ಜವಾಬ್ದಾರಿಗೆ ತಲೆಬಾಗಿ ಪ್ರೀತಿಯೆಂಬ ಪದವನ್ನೇ ಮರೆತಿರುವನು. 
     ಬೆಳಗ್ಗೆ ಮಕ್ಕಳು ಏಳುವ ಮೊದಲೇ ಮನೆ ಬಿಟ್ಟರೆ ಮನೆ ಸೇರುವಾಗ ಮಕ್ಕಳೆಲ್ಲಾ ಮಲಗಿರುತ್ತಾರೆ. ನಮಗೂ ಒಬ್ಬ ಅಪ್ಪ ಇದ್ದಾನೆ ಎಂದು ಅರಿವಾಗಲು ವೀಕೆಂಡ್ ಇಲ್ಲವೇ ಮಂತೆಂಡ್ ಬರಬೇಕಿತ್ತು.
  
   ಕೊರೋನಾ ಎಂಬ ಕಣ್ಣಿಗೆ ಕಾಣದ ಜೀವಿ ಹಲವಾರು ಜೀವಗಳ ಬಲಿ ತೆಗೆದುಕೊಂಡರೂ ಹಲವಾರು ಕುಟುಂಬಗಳ ಒಂದುಗೂಡಿಸಿತು. ಅಪ್ಪನ ನಿಜ ಗುಣದ ಪರಿಚಯ ಹಲವಾರು ಕುಟುಂಬಗಳಿಗೆ ಆಯಿತು. ಸದಾ   ದುಡಿಮೆಯೆಂದು ಓಡಾಡುತ್ತಿದ್ದ ಜೀವಕ್ಕೂ ಸ್ವಲ್ಪ ಆರಾಮ ದೊರೆಯಿತು.

     ತನಗೆ ಬಟ್ಟೆಯಿಲ್ಲದಿದ್ದರೂ ಮಕ್ಕಳಿಗೆ ಹೊಸ ಬಟ್ಟೆ ತರುವ, ತಾನು ಚಪ್ಪಲಿಯ ಧರಿಸದಿದ್ದರೂ ಮಕ್ಕಳಿಗೆ ಶೂ ತರುವ,ತಾನು ಉಣ್ಣದಿದ್ದರೂ ಮಡದಿ ಮಕ್ಕಳ ಹೊಟ್ಟೆ ತಣಿಸುವ, ತಾನು ನಡೆದೇ ಹೋದರೂ ಮಕ್ಕಳಿಗೆ ಗಾಡಿ ತರುವ ಅಪ್ಪನ ಹೃದಯದ ಆಳ ಅರಿತವರುಂಟೇ? ಹಾಗೆಯೇ ತಾನು ದುಡಿದುದ ತನ್ನೊಬ್ಬನಿಗೇ ಖರ್ಚು ಮಾಡಿ ಮಡದಿ ಮಕ್ಕಳಿಗೆ ನಿತ್ಯ ನರಕ ದರ್ಶನ ಮಾಡಿಸುವ ಅಪ್ಪನೆಂಬ ಪ್ರಾಣಿಯನು ತಿದ್ದುವವರುಂಟೇ?

 ನಮ್ಮ ಅಪ್ಪ ಹೇಗೇ ಇರಲಿ, ಇದ್ದಿರಲಿ,ನಾವು ಉತ್ತಮ ಜವಾಬ್ದಾರಿಯುತ ಅಪ್ಪನಾಗೋಣ. ನಮ್ಮ ಕುಟುಂಬವ ರಸ್ತೆಯಲಿ ಹಾಕದಿರೋಣ. ಕಾರಣ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ ಇಂದು. ನಮ್ಮ ಬಾಳಿಗೆ ಸಿಕ್ಕ ಭಾಗ್ಯದ ಲಕ್ಷ್ಮಿಯನ್ನು, ಮಕ್ಕಳನ್ನು ಸಂತಸವಾಗಿರುವಂತೆ ನೋಡಿಕೊಳ್ಳುವ ಅಪ್ಪ ನಾವಾಗೋಣ, ಅದಕ್ಕಾಗಿ ಜವಾಬ್ದಾರಿಯರಿತು  ಶ್ರಮಿಸೋಣ. ನೀವೇನಂತೀರಿ?
@ಪ್ರೇಮ್@
13.06.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ