ಬಿರುಕನ್ನು ಸರಿ ಪಡಿಸೋಣವೇ?
ಬಿರುಕಿರದ ಬದುಕಿಹುದೇ? ಎಲ್ಲರ ಮನೆಯ ದೋಸೆಯೂ ತೂತಿನದ್ದೇ ಅಲ್ಲವೇ? ಎಲ್ಲರ ಕುಟುಂಬಗಳಲ್ಲಿ ಪ್ರತಿ ಧಾರಾವಾಹಿಯಲ್ಲಿ ಇರುವಂತಹ ಒಂದಾದರೂ ಕ್ರಿಮಿ, ಹುಳಗಳು ಇದ್ದೇ ಇರುತ್ತವೆ ಅಲ್ಲವೇ? ಅಲ್ಲಿ ಎರಡು ಬಣಗಳು. ಒಂದು ಒಳ್ಳೆಯವರದ್ದು ಮತ್ತೊಂದು ಪಿತೂರಿ ನಡೆಸಿ ಮೋಸ ಮಾಡುವವರದ್ದು. ಅವರು ಯಾವಾಗಲೂ ತಮ್ಮ ಜೋಳಿಗೆಯನ್ನು ತುಂಬಿಸಲು ನೋಡುತ್ತಿರುತ್ತಾರೆ. ಅಂಥವರಿಗೆ ದಿನ ಇಂದು. ದೇವರು ಅವರಿಗೇ ಹೆಚ್ಚು ತಲೆ ಬಾಗುತ್ತಾನೆ ಅನ್ನಿಸುತ್ತದೆ ಕೆಲವೊಮ್ಮೆ.
ಆದರೆ ದೇವರು ಸತ್ಯದ ಕಡೆಗೆ. ನಮ್ಮ ಬದುಕನ್ನು ಒಮ್ಮೆ ಸಿಂಹಾವಲೋಕನ ಮಾಡುತ್ತಾ ಹೋದರೆ ನಾವು ಮಾಡಿದ ಒಳ್ಳೆಯ ಕೆಲಸಗಳಿಗೆ ನಮಗೆ ಖಂಡಿತಾ ಸುಖ ದೊರೆತಿದೆ. ಕೆಟ್ಟ ಕೆಲಸಗಳಿಗೆ ದೇವರ ಶಿಕ್ಷೆಯೂ ಸಿಕ್ಕಿದೆ. ಅಲ್ಲದೇ ನಮ್ಮ ಒಳ್ಳೆಯತನಕ್ಕೆ ದೇವರು ಒಳ್ಳೆಯದೇ ಮಾಡಿರುವನು.
ಸಂಬಂಧಗಳಲ್ಲಿ ಅತಿರೇಕಕ್ಕೆ ಹೋದಾಗ ಗಲಾಟೆ ಆಗುತ್ತದೆ. ಪ್ರತಿಯೊಬ್ಬನ ತಾಳ್ಮೆಗೂ ಒಂದು ಮಿತಿ ಇದೆ. ಆ ಮಿತಿ ಮೀರಿದಾಗ ಕೃಷ್ಣನೂ ಕೊಲ್ಲಲಿಲ್ಲವೇ 100 ತಪ್ಪುಗಳ ಬಳಿಕ? ಆದರೆ ತಪುಗಳು, ಬಿರುಕುಗಳು, ಕೋಪಗಳು, ಲೋಪಗಳು, ಒಡಕುಗಳು, ನೋವು ನಮ್ಮಿಂದ ಆಗದಿರಲಿ, ನಾವದಕ್ಕೆ ಕಾರಣರಾಗುವುದು ಬೇಡ. ನಮ್ಮಿಂದ ಪರರಿಗೆ ತೊಂದರೆ ಆಗಬಾರದು. ನಮ್ಮಿಂದ ಪರರ ಬದುಕಿಗೆ ನೋವು ಉಂಟಾಗ ಬಾರದು!
ನಮ್ಮ ಸಹನೆಯ ಪರೀಕ್ಷೆ ಆಗಿಯೇ ಆಗುತ್ತದೆ. ಮುಂದಿನ ಹಂತಕ್ಕೆ ಹೋಗ ಬೇಕಾದರೆ ಒಂದು ಹಂತದ ಕಠಿಣ ಪರೀಕ್ಷೆಯನ್ನು ಎದುರಿಸಿ ಪಾಸಾಗಲೇ ಬೇಕಿದೆ. ಅದಕ್ಕೆ ಭಯ ಪಡಬಾರದು. ಆದರೆ ಪರೀಕ್ಷೆಯನ್ನು ಬರೆಯುವುದೇ ಜೀವನ ಆಗಬಾರದು. ಪರೀಕ್ಷೆ ಬರೆಯುವುದಕ್ಕೂ ಇತಿ ಮಿತಿಗಳಿವೆ ಅಲ್ಲವೇ? ಬುದ್ಧಿ ತನಗೆ ಬಹಳವೇ ಇದೆ ಎಂದು ಮೆಡಿಕಲ್, ಇಂಜಿನಿಯರಿಂಗ್, ಎಲ್.ಎಲ್.ಬೀ, ಬಿಎಡ್, ಬೀ. ಎ ಪರೀಕ್ಷೆಗಳನ್ನು ಒಟ್ಟಿಗೆ ಬರೆಯಲಾಗದು. ಆದರೆ ಒಂದೊಂದಾಗಿ ಬಿಡಿಸಿದರೆ ಯಾವ ಗಂಟು ಸಿಕ್ಕುಗಳನ್ನೂ ಕೂಡಾ ಬಿಡಿಸಬಹುದು. ಅಂತೆಯೇ ಸಾವಕಾಶವಾಗಿ ಎಲ್ಲಾ ಬಿರುಕುಗಳನ್ನು ನಾವು ಸರಿಪಡಿಸಲು ಪ್ರಯತ್ನಿಸಬೇಕು. ಮನೆಯಲ್ಲೇ ಆಗಲಿ, ಕುಟುಂಬದಲ್ಲೇ ಆಗಲಿ ಬಂದ ಬಿರುಕನ್ನು ಸರಿಪಡಿಸಿ ಬದುಕಬೇಕೇ ಹೊರತು ಮತ್ತೂ ಅದನ್ನು ಕಗ್ಗಂಟು ಮಾಡುವುದಲ್ಲ.
ನೀರ ಮೇಲೆ ಭಾರದ ಹಡಗು ತೇಲುವ ಹಾಗೆ ನಮ್ಮ ಬದುಕು ಕೂಡಾ ಸಂತಸದಿಂದ ತೇಲಿ ಹೋಗ ಬೇಕು. ಕಷ್ಟಗಳು ಸರ್ವೇ ಸಾಮಾನ್ಯ. ಅದು ಮಾನವರಿಗೆ ಬಾರದೆ ಮರಕ್ಕೆ ಬರುತ್ತದೆಯೇ ಎಂಬುದು ಹಳೆಯ ಗಾದೆ. ಈಗ ಮರಗಳಿಗೆ ಬಂದ ಕಷ್ಟದಿಂದಾಗಿ ಮಾನವರ ಬದುಕು ಬೀದಿಗೆ ಬಿದ್ದಿದೆ. ಕಾಡು ಬೆಳೆದರೆ ಹಾಡುತ್ತಾ ಉಣ್ಣಬಹುದು ಎಂಬ ಗಾದೆ ಸತ್ಯವಾಗಿದೆ.
ಸಂಬಂಧ, ಕುಟುಂಬಕ್ಕೆ ಬೆಲೆ ಕೊಡೋಣ, ಮನಸ್ಸುಗಳ ಜೋಡಿಸೋಣ, ಬಿರುಕು ಮೂಡಿಸಲು ಹೋಗದೆ ಇರೋಣ, ಅತಿಯಾಸೆ ದೂರ ಇರಿಸೋಣ, ನಾವು ಬದುಕಿ ಸರ್ವರಿಗೆ ಬದುಕಲು ಬಿಡೋಣ. ನೀವೇನಂತೀರಿ?
@ಪ್ರೇಮ್@
24.07.2021
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ