ಶನಿವಾರ, ಜುಲೈ 24, 2021

ಪ್ರಶಸ್ತಿ ಬೇಕೆ?

ಪ್ರಶಸ್ತಿ ಬೇಕೆ?

ಅವರವರ ಭಾವಗಳು ಅವರಿಗೆ ಮಿಗಿಲು
ಭಾವ ಬಳ್ಳಿಯ ಕೂಸು ತಾನೇ ಮುಗಿಲು
ಭಾವ ತೀವ್ರತೆಯ ಅಳೆಯಲು ಮಾಪನವಿದೆಯೇ
ಕಾವ್ಯ ಕವನ ಸ್ಪರ್ಧೆಗಳಿಗೆ ಅರ್ಥವಿದೆಯೇ?

ಪದ ಬಳಕೆ ಸಂಪತ್ತು ಮನಸ್ಸಿನಾಳದಲಿ
ಸದಾ ಬರೆವ ಕವಿಗದು ಹೃದಯದಲಿ
ಕದ್ದು ಸಾಲುಗಳ ಸೇರಿಸಿ ತಾನೇ ಗೆದ್ದ ಭರದಲಿ
ಸರ್ವೆಡೆ ಹಂಚಿದರು ಕರಪತ್ರವ ಸಂತಸದಲಿ..

ಭಾವ ಬರಿದಾಗದು ಬಹುಮಾನ ಬರದ ಬೇಸರಕೆ
ಕವಿಯು ಬರೆವುದು ತನ್ನ ಮನದ ಸಂತಸಕೆ
ಹಾರ ತುರಾಯಿ ಕುರ್ಚಿಯ ಆಸೆಯಿಂದಲ್ಲ
ಭಾವಗಳು ಸ್ಪುರಿಸೆ ಯಾವುದೂ ಬೇಕಿಲ್ಲ..

ಸಮಾಜ ತಿದ್ದುವ ಪ್ರೀತಿ ಉಕ್ಕಿಸುವ
ನಲಿವ ಹೇಳುವ ನೋವು ಹಂಚುವ
ತನ್ನ ಪದಗಳ ಓದುಗರಿಗೆ ತಲುಪಿಸುವ
ಓದಿ ಚಪ್ಪಾಳೆ ತಟ್ಟಿದೊಡೆ ಸಿಗುವ ಸಂತಸವ

ಕವಿಗೇನು ಬೇಕು ಮತ್ತೆ ಓದುಗ ಮನಗಳ ಹೊರತು
ತನ್ನ ಭಾವವ ಪರರಿಗೆ ಹಂಚಿದೊಡೆ ಒಳಿತು
ಸ್ಪರ್ಧೆ ಬಹುಮಾನಕೆ ಬಾಗದು ಪದ ಸಂಪತ್ತು
ಭಾವ ಬಳ್ಳಿಗೆ ಕವನವಾದ ಗಮ್ಮತ್ತೇ ಕಿಮ್ಮತ್ತು!
@ಪ್ರೇಮ್@
25.07.2021

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ