ಶುಕ್ರವಾರ, ಮಾರ್ಚ್ 10, 2023

ವ್ಯಕ್ತಿ ಪರಿಚಯ - ನಾರಾಯಣ ಕುಂಬ್ರ

ಯಶೋಗಾಥೆ -5 ನಾರಾಯಣ ಕುಂಬ್ರ

            ಸಣ್ಣ ವಯಸ್ಸಿನಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿ ಹಲವಾರು ಗಿನ್ನೆಸ್ ರೆಕಾರ್ಡ್ ಗಳನ್ನೂ ಮಾಡಿದವರ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಅವರಿಗೆ ಬೇಕಾದ ಅವಕಾಶ ಹಾಗೂ ಸಮಯದ ಸದುಪಯೋಗ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಆಗುವ ಸಾಧನೆ ಇದಾಗಿದೆ. ಅದಲ್ಲದೆ ನಮ್ಮ ಮುಂದೆ ಕೆಲವು ಜನರಿದ್ದಾರೆ. ಮನೆಯಲ್ಲಿ ಯಾವುದೇ ಅವಕಾಶಗಳು ಇಲ್ಲದೆ, ಕಡು ಬಡತನದಲ್ಲಿ ಹುಟ್ಟಿ ಬೆಳೆದು ತಾನು ಏನನ್ನಾದರೂ ಸಾಧಿಬೇಕೆಂಬ ಹಠ ತೊಟ್ಟು, ಏಕಲವ್ಯನಂತೆ ತಾನೇ ಒಂದು ಗುರುವನ್ನು ನೋಡಿ, ಅವರಂತೆ ನಾನಾಗಬೇಕು ಎಂಬ ಪ್ರೇರಣೆ ಪಡೆದು, ತನ್ನ ಪ್ರಯತ್ನವನ್ನು ಬಿಡದೆ ಸಾಧನೆ  ಮಾಡಿ ಒಂದು ಸ್ಥಾನವನ್ನು ಈ ಭೂಮಿಯಲ್ಲಿ ತನಗಾಗಿ ಗಟ್ಟಿಯಾಗಿ ಭದ್ರ ಪಡಿಸಿಕೊಂಡು ನೋಡಲು ದೇಹ ಸಣ್ಣದಾದರೂ  ಅವರ ಜೀವನ ಸಾಧನೆಯಲ್ಲಿ "ಏನೋ ಒಂದು ಚೂರು ನಾನೂ ಕೂಡಾ ಸಾಧಿಸಿದೆ, ಇನ್ನಷ್ಟು ಸಾಧಿಸುವುದು ಬಹಳ ಇದೆ" ಎಂದು ನಂಬಿಕೊಂಡ ಸಾಧನೆಗೆ ಬಡತನ, ಸಿರಿತನದ ಹಂಗಿಲ್ಲ ಎಂದು ತೋರಿಸಿದ ಮನಗಳು! ಹೌದು, ಇಂದು ಇಲ್ಲಿ ನಾ ನಿಮಗೆ ಹೇಳಲು ಹೊರಟಿರುವುದು ಒಬ್ಬ ಮಹಾನ್ ಕಷ್ಟಗಳಿಂದ ಮೇಲೆದ್ದು ಬಂದು, ಆ ಕಷ್ಟದಲ್ಲೂ ತನ್ನತನದ ಬೇರನ್ನು ಬಿಟ್ಟು ಕನ್ನಡ ಸಾರಸ್ವತ ಲೋಕದಲ್ಲಿ  ಹೆಸರಾಗಿರುವ  ವಿವೇಕಾನಂದ ಕಾಲೇಜು ನೆಹರು ನಗರ ಪುತ್ತೂರು ಇಲ್ಲಿನ ರಸಾಯನ ಶಾಸ್ತ್ರ ಲ್ಯಾಬ್ ಸಹಾಯಕರಾಗಿರುವ ಶ್ರೀಯುತ ನಾರಾಯಣ ಕುಂಬ್ರ ಅವರ ಬಗ್ಗೆ! 
         ನಾರಾಯಣ ಕುಂಬ್ರ ಅವರ ಬಗ್ಗೆ ಬಲ್ಲವರು ಮತ್ತು ಈ ಲೇಖನ  ಓದಿದ ಮೇಲೆ ನಾನು ಮಾತ್ರ ಅಲ್ಲ, ನೀವೂ ಕೂಡಾ ಅವರ ಬದುಕಿನಿಂದ ಬಹಳ ಪ್ರೇರಿತರಾಗುವಿರಿ. ಕನ್ನಡದ ಮೇರು ಕವಯತ್ರಿ ಸಾರಾ ಅಬೂಬಕ್ಕರ್ ಮೇಡಂ ನೆನಪಾದರು ನನಗೆ ಇವರ ಜೀವನದ ಬಗ್ಗೆ ತಿಳಿಯುತ್ತಾ ಹೋದಂತೆ! ಹೌದು, ಸಾಧನೆ ಎಂದರೆ ಹಾಗೆಯೇ, ಅದು ನಿಲ್ಲದ ಪ್ರಯತ್ನ! ನಮ್ಮ ಬದುಕಿನ ನೆಲೆಗಟ್ಟಿನ ಮಟ್ಟದಲ್ಲಿ ನಿಂತು ನಾವು ಇತರರಿಗಿಂತ ಮೇಲೇರುವುದೇ ಅಸಾಧ್ಯ ಎಂದಿರುವಾಗ "ನಾನು ಏನಾದರೂ ಮಾಡಿ ಖಂಡಿತಾ ಮೇಲೆ ಏರಬಲ್ಲೆ" ಎಂದು ಬದುಕಿನಲ್ಲಿ ಸಾಧಿಸಿ ತೋರಿಸುವುದಕ್ಕಿಂತ ದೊಡ್ಡ ಸಾಧನೆ ಬೇರೆ ಇದೆಯೇ?

               ದಿವಂಗತ ಕುಕ್ಕ ಮತ್ತು ಶ್ರೀಮತಿ ಮಾಣಿಗ ಇವರ ನಾಲ್ವರು ಮಕ್ಕಳಲ್ಲಿ ಒಬ್ಬರಾಗಿ ಜನಿಸಿದವರು ನಾರಾಯಣ. ಕಡು ಬಡತನದ ಮನೆ. ತಂದೆ ಒಬ್ಬರು ಕೂಲಿ ಕೆಲಸಕ್ಕೆ ಹೋಗಿ ದುಡಿದ ದುಡಿತದಲ್ಲಿ ಐದು ಜನರ ಸಾಕಬೇಕಿತ್ತು, ಆರು ಜನರ ಬದುಕು ನಡೆಯಬೇಕು. ಈಗಿನಂತೆ ಸುಲಭವಾಗಿರಲಿಲ್ಲ ಆ ಜೀವನ. ಶಾಲೆಗೆ ಹೋಗಿ ಕಲಿಯುವುದೇ ಕಷ್ಟದ ಮಾತು. ಪುಸ್ತಕ, ಬ್ಯಾಗು, ಪೆನ್ನು, ಪೆನ್ಸಿಲ್, ಸ್ಲೇಟಿಗೂ ದುಡ್ಡಿಲ್ಲ ಮನೆಯಲ್ಲಿ! ಆದರೂ "ನಾನು ಓದಬೇಕು" ಎಂಬ ಹಠ! ಛಲ! ಈ ಛಲಗಾರ ಮನಸ್ಸೇ ಮನುಷ್ಯನನ್ನು ಎತ್ತರಕ್ಕೆ ಒಯ್ಯಲು ಸಾಧ್ಯ ಅಲ್ಲವೇ? 

            ಈಗಿನಂತೆ ಮೊದಲು ಶಾಲೆಗಳಲ್ಲಿ ಉಚಿತ ಪುಸ್ತಕ, ಬಟ್ಟೆ, ಊಟ ಸಿಗುತ್ತಿರಲಿಲ್ಲ. ನಾವೆಲ್ಲಾ ಹಳೆ ಪುಸ್ತಕಗಳನ್ನು ಅರ್ಧ ರೇಟಿಗೆ ಪಡೆದು ಓದಿದವರು ಅಲ್ಲವೇ? ಇಂತಹ ಬಡತನದ ಮನೆಯಲ್ಲೇ ಬೆಳೆದವರು ನಾರಾಯಣರು. ಅವರ ನೆನಪಿನ ಬುತ್ತಿಯನ್ನು ಬಿಚ್ಚುತ್ತಾ ಹೋದಂತೆ ಸಾಧಾರಣ ಐದನೇ  ತರಗತಿ ಕಲಿಯುತ್ತಿರುವ ಸಮಯದಲ್ಲಿ ಕುಯ್ಯಾರು ಗಂಗಾಧರ ರೈಯವರ ಮನೆಯಿಂದ ಹಾಲು ಡೈರಿಗೆ ಕೊಟ್ಟು ಆಮೇಲೆ ಶಾಲೆಗೆ ಹೋಗುತ್ತಿದ್ದರು. ಅವರು ಕೊಟ್ಟ ಕಿಂಚಿತ್ತು ಹಣದಲ್ಲಿ ಅವರಿಗೆ ಬೇಕಾದ ಪುಸ್ತಕ ಪೆನ್ ಹೀಗೆ ತೆಗೆದುಕೊಳ್ಳಲು ಹಣ ಆಗುತ್ತಿತ್ತು. ರೈ ಅವರ ಮಡದಿ ಭಾರತಿ ಅಕ್ಕ ಅವರಿಗೆ ಕಲಿಯಲು  ತುಂಬಾ ಸಹಾಯ ಮಾಡಿದ್ದಾರೆ. ಕಲಿಕೆಯಲ್ಲಿ ಮುಂದಿರುವ ಮಕ್ಕಳು ಎಂದರೆ ಎಲ್ಲರೂ ಪ್ರೋತ್ಸಾಹ ನೀಡುತ್ತಾರೆ ತಾನೇ? ಅಂತೆಯೇ ಶ್ರೀಮತಿ ಭಾರತಿಯವರ ಕಿಂಚಿತ್ ಸಹಾಯ ಇಂದು ನಾಲ್ಕು ಜನರ ನಡುವೆ ಗುರುತಿಸುವ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸದಾ ಉಳಿಯುವ ಒಬ್ಬ ಕವಿಯ ಜೀವನವನ್ನು ರೂಪಿಸಿದೆ. ಭಾರತಿ ಅಕ್ಕನವರ  ಸಹಾಯವನ್ನು ನಾರಾಯಣರು ಎಂದೂ ಮರೆಯಲಾರರು.ತನ್ನ ಏಳಿಗೆಗೆ ಸಹಾಯ ಮಾಡಿದವರ ಎಲ್ಲರ ಸಹಾಯವನ್ನು ನಾರಾಯಣರು ಸದಾ ನೆನಪಿಸಿ ಅವರಿಗೆ ಆಭಾರಿಯಾಗಿದ್ದಾರೆ. ಇದೇ ನಾರಾಯಣ ಕುಂಬ್ರ ಅವರ ದೊಡ್ಡ ಗುಣ. 

             ಶ್ರೀಯುತ ನಾರಾಯಣ ಕುಂಬ್ರ ಅವರು ತಮ್ಮ ಜೀವನದಲ್ಲಿ ತಿರುವು ಪಡೆಯಲು ಕಾರಣರಾದ ವ್ಯಕ್ತಿ ಅವರ ಪ್ರಾಥಮಿಕ  ಶಾಲೆಗೆ ಬಂದ ಪಿ.ಟಿ .ಮಾಸ್ಟ್ರು,  ಅವರ ಹೆಸರು ವಿಶ್ವೇಶ್ವರ ಭಟ್. ನಾರಾಯಣ ಅವರು ಕಲಿಕೆಯಲ್ಲಿ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದ  ವಿದ್ಯಾರ್ಥಿ. ಹಾಗಾಗಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಲವಾರು  ಬಹುಮಾನಗಳು ಇವರಿಗೆ ದೊರೆಯುತ್ತಿತ್ತು. ಉಳಿದ ಮಕ್ಕಳಿಗೆ ಆಟದಲ್ಲಿ ಬಹುಮಾನ ಸಿಗುತ್ತಿದ್ದರೆ  ಇವರಿಗೆ ವಿಶೇಷ ಬಹುಮಾನ ಓದಿಗೆ. ಪಾಠದಲ್ಲಿ, ಓದಿನಲ್ಲಿ ಚುರುಕಾಗಿದ್ದ ಕಾರಣಕ್ಕೆ ಆರನೇ ತರಗತಿಯಲ್ಲಿ ಅವರನ್ನು ಶಾಲೆಯಲ್ಲಿ ಶಿಕ್ಷಣ ಮಂತ್ರಿ ನನ್ನ ಮಾಡಿದ್ದು ಅವರಿನ್ನೂ ಮರೆತಿಲ್ಲ.

              ಶಾಲೆ ಅಥವಾ ಕಾಲೇಜಿನ ಕೆಲಸದಲ್ಲಿಯೇ ತನ್ನ ಜೀವನ ಕಟ್ಟಬೇಕು ಎಂಬ ಕನಸನ್ನು ಹೊತ್ತಿದ್ದ ನಾರಾಯಣ ಕುಂಬ್ರ ಅವರ ಕನಸನ್ನು ನನಸು ಮಾಡಿದ್ದು ಪುತ್ತೂರಿನ  ವಿವೇಕಾನಂದ ಕಾಲೇಜು. ಅದಕ್ಕೆಲ್ಲ ಕಾರಣ ವಿಶ್ವೇಶ್ವರ ಭಟ್ ಸರ್ ಅವರು. ಈಗಲೂ ತನ್ನ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೀತಿಯಿಂದ ಮಾತನಾಡಿಸುವ ಈ ಗುರುಗಳೆಂದರೆ ಎಲ್ಲಾ ಶಿಷ್ಯರಿಗೆ ಅಚ್ಚುಮೆಚ್ಚು. 

            ಬದುಕು ನಿಂತ ನೀರಲ್ಲ. ಏಳು ಬೀಳುಗಳ ಕೊಂಡಿ. ಕುಂಬ್ರರು ತನ್ನ ಹನ್ನೆರಡನೆಯ ವಯಸ್ಸಿನಲ್ಲಿ, ಅಂದರೆ ಏಳನೇ ತರಗತಿಯಲ್ಲಿ ಇರುವಾಗಲೇ ತಮ್ಮ ತಂದೆ ಹಾಗೂ ತಮ್ಮ ತಾಯಿಯವರನ್ನೂ ಕಳೆದುಕೊಂಡರು. ದೊಡ್ಡಪ್ಪನವರ  ಮನೆಯಲ್ಲಿ ಇದ್ದುಕೊಂಡು ಮತ್ತೆ ಶಾಲೆಗೆ ಸೇರಿಕೊಂಡರು. ಓದಲು ಮನಸ್ಸಿತ್ತು, ಶಾಲೆಯೂ ಇತ್ತು. ಆದರೆ ಜೊತೆಗೆ ಬಡತನ ಹಾಗೂ ಹೊಟ್ಟೆ ತುಂಬಿಸಿಕೊಳ್ಳುವ ಜವಾಬ್ದಾರಿಯೂ ಇತ್ತು. ಅಣ್ಣನ ಮದುವೆ ಆಗುವಾಗ ಅವರಿನ್ನೂ ಎಂಟನೇ ತರಗತಿಯಲ್ಲಿ ಇದ್ದರು. ಮುಂದೆ ಅವರಿಗೆ ಓದಲು ಸಾಧ್ಯ ಆಗಲಿಲ್ಲ. ಅಣ್ಣ ಓದಿದ್ದು ಸಾಕು, ಇನ್ನು  ಕೆಲಸಕ್ಕೆಂದು ಇವರನ್ನು ಕರೆದುಕೊಂಡು ಹೋದರು. ಕೈಯಲ್ಲಿ ಒಂದಷ್ಟು ದುಡ್ಡಾದ ಬಳಿಕ ಮರು ವರ್ಷವೇ ಕಲ್ಲಡ್ಕದ ಶ್ರೀರಾಮ ಶಾಲೆಗೆ ಎಂಟನೇ ತರಗತಿಗೆ ಸೇರಿದರು. ರಜಾ ದಿನಗಳಲ್ಲಿ ಕೆಲಸ ಮಾಡಿ, ಮಿಕ್ಕ ದಿನಗಳಲ್ಲಿ ಶಾಲೆಗೆ ಹೋಗುತ್ತಿದ್ದರು. ತನ್ನ ಶಾಲಾ ಫೀಸು, ಪುಸ್ತಕದ ಹಣವನ್ನು ತಾವೇ ಭರಿಸಿಕೊಳ್ಳುತ್ತಿದ್ದರು. ಓದಿನ ಹಣಕ್ಕಾಗಿ ರಜಾ ದಿನಗಳಲ್ಲಿ  ಸಣ್ಣ ಪುಟ್ಟ ಹೋಟೆಲ್ ಗಳಲ್ಲಿ ಗ್ಲಾಸು, ಪಾತ್ರೆ ತೊಳೆಯುತ್ತಿದ್ದರು. ಮುಂದೆ ಹೀಗೆಯೇ ದುಡಿದು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ಒಂಭತ್ತು ಮತ್ತು ಹತ್ತನೇ ತರಗತಿ ಮುಗಿಸಿದರು.

     ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಕಷ್ಟವಾಯ್ತು. ವಿದ್ಯೆಯನ್ನು ಮೊಟಕುಗೊಳಿಸಿ ಎರಡು ವರ್ಷ ಕುಂಬ್ರ ಪದವಿ ಪೂರ್ವ ಕಾಲೇಜಲ್ಲಿ ಗೌರವ ನೆಲೆಯಲ್ಲಿ ಕಚೇರಿ ಸಿಬ್ಬಂದಿಯಾಗಿ ₹900 ತಿಂಗಳಿಗೆ ದುಡಿದರು.  ನಂತರ ಸುದಾನ ಶಾಲೆಗೆ ಅಟೆಂಡರ್ ಆಗಿ ಹತ್ತು ವರ್ಷಗಳ ಕಾಲ  ಕರ್ತವ್ಯ ನಿರ್ವಹಿಸಿದರು. ಇಲ್ಲಿ ಇರುವಾಗಲೇ ಪಿ ಯು ಸಿ ಗೆ ಪ್ರೈವೇಟ್ ಕಟ್ಟಿ ಐದು ಸಬ್ಜೆಕ್ಟ್ ಪಾಸ್ ಮಾಡಿ ಕೊಂಡರು! 

             ಶ್ರೀಯುತ ನಾರಾಯಣ ಅವರ ಪ್ರೀತಿಯ ವಿಷಯ ಕನ್ನಡ.ಕನ್ನಡ ಪಾಠ ಅಂದರೆ ಅವರಿಗೆ ಅಚ್ಚು ಮೆಚ್ಚು. ಆಗ ಕನ್ನಡ ಟೀಚರ್ ಆಗಿದ್ದವರು ಸರೋಜಿನಿ ಮೇಡಂ,
ಲಕ್ಷ್ಮಿ ಮೇಡಂ, ಜಯಶ್ರೀ ನಾಯ್ಕ್ ಮೇಡಂ, ಜಯಾನಂದ ಪೆರಾಜೆ ಸರ್ ಅವರು.  ಸೂರ್ಯ ನಾರಾಯಣ ಕಾರಂತ್, ಶಿವರಾಮ್ ಕಾರಂತ್... ಇವರನ್ನು ಮರೆಯುವಂತಿಲ್ಲ... ಕತ್ತಲೆಯ ಬದುಕಿಗೆ ಬೆಳಕು ಚೆಲ್ಲಿ ಸ್ಫೂರ್ತಿ ತುಂಬಿದವರು ಇವರು.ಸರ್ವ ಗುರುಗಳ ನೆನಪಿಟ್ಟ ವಿದ್ಯಾರ್ಥಿ! 

              ನಾರಾಯಣರವರು  ಮೊದಲ  ಹನಿಗವನ ಏಳನೇ ತರಗತಿಯಲ್ಲಿರುವಾಗಲೇ ಬರೆದಿದ್ದರು.ನಂತರ ಅವರ ಸಾಹಿತ್ಯದ ಒಲವು ಸುದಾನ ಶಾಲೆಗೆ ಸೇರಿದ ಮೇಲೆ ಹೆಚ್ಚಾಯ್ತು.ಅಲ್ಲಿಯ ಪರಿಸರ, ಸಂಸ್ಕಾರ ಸಂಸ್ಕೃತಿಗೆ ನೀಡುವ ಮಹತ್ವ ಅವರನ್ನು ಬರೆಯಲು ಪ್ರೇರಣೆ ನೀಡಿತು.ಖ್ಯಾತ ಅಂಕಣಕಾರರೂ, ವಾಗ್ಮಿಗಳು ಕೂಡಾ ಆದ ಕವಿತಾ ಅಡೂರ್ ಮೇಡಂ, ಅಲ್ಲಿಯ ಸಂಚಾಲಕರು, ಅವರಿಗೆ ಉತ್ತಮ ಸಹಕಾರ ನೀಡಿದರು. ಗಾಳಿಪಟ ಮೇಲೇರಲು ಸಣ್ಣ ದಾರವೊಂದು ಸಾಲದೇ?

            ಶ್ರೀಯುತ ನಾರಾಯಣ ಕುಂಬ್ರ ಎಂಬ ಯುವ ಕವಿಗೆ ಕವಿಗೋಷ್ಠಿಗೆ ಮೊದಲು ವೇದಿಕೆ ನೀಡಿದವರು ದಿವಂಗತ ಚಿದಾನಂದ ಕಾಮತ್ ಕಾಸರಗೋಡು.ಅವರ ಬಾರಿಸು ಕನ್ನಡ ಡಿಂಡಿಮವ ವೇದಿಕೆಯ ಮೂಲಕ ಪ್ರತಿ ತಿಂಗಳು ಪುತ್ತೂರಿನಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿ ಹೊಸ ಕವಿ ಮನಸುಗಳಿಗೆ  ವೇದಿಕೆ ನೀಡುತಿದ್ದರು.  ಅವರು ಅಂತಹ ಅವಕಾಶವನ್ನು ಉಪಯೋಗಿಸುತ್ತಿದ್ದರು ಮಾತ್ರ ಅಲ್ಲದೆ ಆ ಪರಂಪರೆಯನ್ನು ಮುಂದುವರೆಸಿದರು. ತಮ್ಮ ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀಯುತ ನಾರಾಯಣ ಅವರು ಪುತ್ತೂರಿನಲ್ಲಿ ಇರುವ ಹೊಸ ಹೊಸ ಉದಯೋನ್ಮುಖ ಕವಿಗಳಿಗೆ ಅವಕಾಶ ನೀಡಿ, ವೇದಿಕೆ ಕಲ್ಪಿಸಿ ಕೊಟ್ಟರು. 

                  A ಪುತ್ತೂರು ಸಾಹಿತ್ಯ ವೇದಿಕೆ, ಚಂದನ ಸಾಹಿತ್ಯ ವೇದಿಕೆ ಸುಳ್ಯ, ಕಡಲೂರಿನ ಲೇಖಕರು ಬಳಗ ಪುತ್ತೂರು, ನೇತಾಜಿ ಗ್ರಂಥಾಲಯ ಪೆರ್ಲ, ಕವಿ ಹೃದಯದ ಸವಿ ಮಿತ್ರರು,
ಸತ್ಯ ಶಾಂತ ಪ್ರತಿಷ್ಠಾನ ಉಪ್ಪಿನಂಗಡಿ, ವರುಣ್ ಕಲಾ ಸಾಂಸ್ಕೃತಿಕ ಸಂಸ್ಥೆ ಸವಣೂರು, ಕೊಡಗು  ಹೀಗೆ ಹಲವು ವೇದಿಕೆಗಳಲ್ಲಿ ತಮ್ಮ ಕವನಗಳನ್ನು ವಾಚಿಸಿದ ಗರಿಮೆ ಅವರದು. ತನಗೆ ಅವಕಾಶ ಮಾಡಿಕೊಟ್ಟ ಎಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರನ್ನು ಎಂದೂ ಮರೆತಿಲ್ಲ ನಾರಾಯಣ್ ಅವರು. ತಮ್ಮ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ತನಗೆ ಅವಕಾಶ ಕೊಟ್ಟ ಎಲ್ಲರನ್ನೂ ಸನ್ಮಾನಿಸಿದ ಹೆಗ್ಗಳಿಕೆ ಅವರದು. ಹಾಗಾಗಿ "ನಾನು ಅವರಿಗೆಲ್ಲಾ ಅಭಾರಿಯಾಗಿದ್ದೇನೆ" ಎನ್ನುವ ಮಾತನ್ನು ಕೇವಲ ಆಡಿ ತೋರಿಸದೆ ಕೃತಿಯಲ್ಲೂ ತೋರಿಸಿರುವರು. 

                ಶ್ರೀಯುತ ನಾರಾಯಣ ಕುಂಬ್ರ ಅವರನ್ನು ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ  ಕಾವ್ಯಶ್ರೀ ಪ್ರಶಸ್ತಿ, ಸಾಹಿತ್ಯ ರತ್ನ, ಕವಿಚೇತನ ಪ್ರಶಸ್ತಿ. ಅಲ್ಲದೇ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಪಡ್ಡಾಯೂರು ವತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಗೆ ನವರಾತ್ರಿ ಸಂದರ್ಭದಲ್ಲಿ ಸನ್ಮಾನಿಸಿದ್ದಾರೆ.

           ರಾಜ್ಯಮಟ್ಟದ, ಜಿಲ್ಲಾ ಮಟ್ಟದ, ಅಂತರ್ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಕವಿಗೋಷ್ಠಿ ಭಾಗವಹಿಸಿದ ಹೆಮ್ಮೆ. ಕೊರೋನ ಸಂದರ್ಭದಲ್ಲಿ ಕೂಡಾ ಆನ್ಲೈನ್ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಬರವಣಿಗೆಯ ಮೆರುಗು ಹೆಚ್ಚಿಸಿ ಕೊಂಡಿದ್ದಾರೆ. ಕವಿಗೋಷ್ಠಿಗಳಲ್ಲಿ ಹೆಚ್ಚು ಭಾಗವಹಿಸಿ ಹಿರಿಯ ಕಿರಿಯ ಕವಿಗಳಿಂದ ತುಂಬಾ ಅನುಭವದ ಪಾಠ ಕಲಿತುಕೊಂಡಿರುವೆ ಎನ್ನುವ ಇವರು ಎಲ್ಲರೊಂದಿಗೆ ಬೆರೆತು, ಎಲ್ಲರಿಂದ ಕಲಿತು ಬಾಳಬೇಕು ಎನ್ನುವ ಮಹಾದಾಸೆ ಹೊಂದಿರುವ ಕವಿ. 

              ಅಬ್ಬರಿಸಲು ಹೋಗದೆ ಅವಕಾಶ ಸಿಕ್ಕಾಗ ಎಲ್ಲರೂ ಉಪಯೋಗಿಸಿಕೊಳ್ಳಬೇಕು, ಯುವ ಸಮುದಾಯದ ಸಕಾರಾತ್ಮಕ ಚಿಂತನೆ ಸಮಾಜದ ಅಂಕು ಡೊಂಕುಗಳ ತಿದ್ದುವಲ್ಲಿ ಬರವಣಿಗೆಗಳು ಸಹಕಾರಿಯಾಗಲಿ. ಸರ್ವೇ ಜನಾ ಸುಖಿನೋ ಭವಂತು ಎನ್ನುವುದು ಇವರ ಆಶಯ ನುಡಿ.

               ವಿವೇಕಾನಂದ ಕಾಲೇಜಿನಲ್ಲಿ ಅವರು ಬರೆದ ಕವನಗಳನ್ನು ಟೈಪ್ ಮಾಡಿ ಕೊಡುವ ಗೀತಾ ಮೇಡಂ, ನಿವೇದಿತಾ, ಚೈತ್ರಾ, ವೇದಾವತಿ ಮೇಡಂ ಮತ್ತು ತೋಟರ್ ಸರ್ ಹೀಗೆ ಸಹಕರಿಸಿದ ಯಾರನ್ನೂ ಮರೆಯಲಾರರು ಅವರು.  ಅವರು ಪತ್ನಿ  ಶ್ರೀಮತಿ ರೂಪರೊಡನೆ ಪ್ರಸ್ತುತ ಅಳಿಕೆಯಲ್ಲಿ ನೆಲೆಸಿರುವರು. 

       ಸರ್,  ತಮ್ಮ ಲೇಖನಿ ತಟಸ್ಥವಾಗದೆ ಹೀಗೆಯೇ ಮುಂದುವರಿಯಲಿ, ಸಾಹಿತಿಗಳಾಗಿ ನಿಮ್ಮಿಂದ ಇನ್ನಷ್ಟು ಹೊಸ ಕವಿಗಳ ಉದಯವಾಗಲಿ, ನಿಮ್ಮ ಸಹಕಾರ, ನೆನಪು, ಗುರುತಿಸುವಿಕೆ ಸದಾ ಮುಂದುವರೆಯಲಿ, ಆ ದೇವರು ಆನಂದ, ಆರೋಗ್ಯ, ಶಕ್ತಿ ಇನ್ನಷ್ಟು ಕೊಡಲಿ, ನಿಮ್ಮಿಂದ ಕನ್ನಡಕ್ಕೆ ಸೇವೆ ಸದಾ ಹರಿದು ಬರಲಿ ಎಂಬ ಶುಭ ಹಾರೈಕೆಗಳೊಂದಿಗೆ, 
@ಹನಿಬಿಂದು@
10.03.2022

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ